ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr N Someshwara Column: ಈತ ಬ್ಯಾಕ್ಟೀರಿಯಾಗಳನ್ನು ಗಟಗಟನೇ ಕುಡಿದ !

ಬ್ಯಾರಿ ಮಾರ್ಷಲ್ ಕೈಗೊಂಡ ಹತಾಶ ಕ್ರಮಕ್ಕೆ ಕಾರಣವಿದೆ. 20ನೇಯ ಶತಮಾನದಲ್ಲಿ ಯಾವ ಒಂದು ಸೂಕ್ಷ್ಮಜೀವಿಯು ಜಠರದಲ್ಲಿ ಬದುಕಲು ಸಾಧ್ಯವಿಲ್ಲ. ಜಠರವೊಂದು ಬಂಜರುಭೂಮಿ. ಜಠರದಲ್ಲಿರುವ ಜಠರಾಮ್ಲವು ಎಷ್ಟು ಪ್ರಬಲವಾಗಿರುತ್ತದೆ ಎಂದರೆ, ಅದನ್ನು ಕಾರಿನ ಬ್ಯಾಟರಿ ಗಳಲ್ಲಿ ಬಳಸಬಹುದು. ಒಂದು ಕಬ್ಬಿಣದ ಮೊಳೆಯನ್ನು ಜಠರಾಮ್ಲದಲ್ಲಿ ಮುಳುಗಿಸಿದರೆ, ಜಠರಾಮ್ಲವು ಅದನ್ನು ಕರಗಿಸಿಬಿಡುತ್ತದೆ. ಅಂತಹ ಪ್ರಬಲಾತಿ ಪ್ರಬಲ ಪರಿಸರದಲ್ಲಿ ಬ್ಯಾಕ್ಟೀರಿ ಯಗಳು ಬದುಕುತ್ತವೆ ಎಂದರೆ ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು.

ಈತ ಬ್ಯಾಕ್ಟೀರಿಯಾಗಳನ್ನು ಗಟಗಟನೇ ಕುಡಿದ !

-

ಹಿಂದಿರುಗಿ ನೋಡಿದಾಗ

ಮನುಷ್ಯರಿಗೆ ಬರುವ ನಾನಾ ಕಾಯಿಲೆಗಳಲ್ಲಿ ಜಠರ ಮತ್ತು ಕರುಳು ಹುಣ್ಣು ಸಹ ಒಂದು. ಜಠರ ಮತ್ತು ಕರುಳಿನಲ್ಲಿ ಹುಣ್ಣುಗಳು ಏಕಾಗುತ್ತವೆ? ಈ ಸರಳ ಪ್ರಶ್ನೆಗೆ ಉತ್ತರವು ಅಷ್ಟು ಸರಳವಾಗಿ ಇರಲಿಲ್ಲ. ವೈದ್ಯರು ಹರಿ, ವರಿ, ಕರಿ ಮುಖ್ಯ ಕಾರಣಗಳೆಂದರು. ವಿಪರೀತ ಒತ್ತಡದ ಬದುಕು ಮೊದಲ ಕಾರಣ.

ವಿಪರೀತ ಆಲೋಚಿಸುವುದು ಎರಡನೇಯ ಕಾರಣ ಹಾಗೂ ಮೂರನೇಯದು ಕರಿದ ಹಾಗೂ ಮಸಾಲೆ ಪದಾರ್ಥಗಳ ಮಿತಿ ಮೀರಿದ ಸೇವನೆ. ಇವುಗಳ ಜತೆಯಲ್ಲಿ ಧೂಮಪಾನ ಹಾಗೂ ಮದ್ಯಪಾನಗಳು ಉರಿಯುವ ಬೆಂಕಿಗೆ ತುಪ್ಪವನ್ನು ಸುರಿದಂತೆ ವರ್ತಿಸುತ್ತವೆ ಎಂದು ಭಾವಿಸಿದ್ದರು.

ಹಾಗಾಗಿ ವೈದ್ಯರು ಜಠರ-ಕರುಳಿನ ಹುಣ್ಣು ಕಡಿಮೆಯಾಗಬೇಕಾದರೆ, ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿ, ಉಪ್ಪು, ಖಾರ, ಹುಳಿಯಿಲ್ಲದ ಸಪ್ಪೆ ಆಹಾರವನ್ನು ಮಿತವಾಗಿ ಸೇವಿಸಿ ಹಾಗೂ ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿ ಎಂದು ಸಲಹೆಯನ್ನು ನೀಡುತ್ತಿದ್ದರು. ಜತೆಗೆ ಆಮ್ಲಪ್ರತಿರೋಧಕ (ಆಂಟಾಸಿಡ್ಸ್) ಗುಳಿಗೆಗಳನ್ನು ಇಲ್ಲವೇ ಔಷಧಗಳನ್ನು ತಪ್ಪದಂತೆ ಸೇವಿಸಲು ಹೇಳುತ್ತಿದ್ದರು.

ಒತ್ತಡ ಸಿದ್ಧಾಂತ: 1984. ಆಸ್ಟ್ರೇಲಿಯದಲ್ಲಿ ಬ್ಯಾರಿ ಮಾರ್ಷಲ್ (1951-) ಎಂಬ ಯುವ ವೈದ್ಯರಿದ್ದರು. ನಾವು ಯಾರೂ ಊಹಿಸಲಿಕ್ಕೂ ಸಾಧ್ಯವಿಲ್ಲದಂತಹ ಕೆಲಸವನ್ನು ಮಾಡಿ ದರು. ಬ್ಯಾಕ್ಟೀರಿಯಗಳನ್ನು ಪ್ರಯೋಗಾಲಯದಲ್ಲಿ ಬೆಳೆಸುವ ತಂತ್ರಜ್ಞಾನವನ್ನು ಕೃಷಿಕೆ (ಕಲ್ಚರ್) ಎನ್ನುತ್ತಾರೆ. ಅಂತಹ ಪ್ರಬಲ ಬ್ಯಾಕ್ಟೀರಿಯವು ಬೆಳೆಯುತ್ತಿದ್ದ ಕೃಷಿಕೆಯಿದ್ದ ಬಾಟಲಿಯನ್ನು ತೆಗೆದುಕೊಂಡರು.

ಇದನ್ನೂ ಓದಿ: D‌r N Someshwar Column: ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್‌ ಮೆಂಡಲ್

ನೋಡನೋಡುತ್ತಿರುವಂತೆಯೇ ಅದನ್ನು ಗಟಗಟನೆ ಕುಡಿಯಲಾರಂಭಿಸಿದರು. ನೋಡ ನೋಡುತ್ತಿರುವಂತೆ ಇಡೀ ಕೃಷಿಕೆಯ ಬಾಟಲಿ ಖಾಲಿಯಾಯಿತು. ಬ್ಯಾರಿ ಮಾರ್ಷಲ್ ಹತಾಶನಾಗಿದ್ದರು. ಜಗತ್ತಿನ ಎಲ್ಲ ವೈದ್ಯರು ಜಠರ ಮತ್ತು ಕರುಳ ಹುಣ್ಣಿಗೆ ಒತ್ತಡ ಸಿದ್ಧಾಂತವೇ (ಸ್ಟ್ರೆಸ್ ಥಿಯರಿ) ಕಾರಣ ಎಂದು ವಾದಿಸುತ್ತಿರುವುದನ್ನು ನೋಡಿ ಅತೀವ ಬೇಸರಗೊಂಡಿದ್ದರು. ನೀವೆಲ್ಲರೂ ತಪ್ಪು ತಿಳಿದಿದ್ದೀರಿ.

ಜಠರ ಮತ್ತು ಕರುಳ ಹುಣ್ಣಿಗೆ ಹರಿ, ವರಿ, ಕರಿಗಳು ಕಾರಣವಲ್ಲ, ಹೆಲಿಕೋಬ್ಯಾಕ್ಟರ್ ಪೈಲೋರಿ ಎನ್ನುವ ತಂತಿಯಂತೆ ಬಾಗಿರುವ ಸೂಕ್ಷ್ಮ ಜೀವಿಯಾದ ಬ್ಯಾಕ್ಟೀರಿಯವು ಕಾರಣ ಎನ್ನುವುದನ್ನು ನೀವೆಲ್ಲ ಏಕೆ ಒಪ್ಪುತ್ತಿಲ್ಲ ಎಂದು ವಾದಿಸಿದರು.

ಬ್ಯಾರಿ ಮಾರ್ಷಲ್ ಕೈಗೊಂಡ ಹತಾಶ ಕ್ರಮಕ್ಕೆ ಕಾರಣವಿದೆ. 20ನೇಯ ಶತಮಾನದಲ್ಲಿ ಯಾವ ಒಂದು ಸೂಕ್ಷ್ಮಜೀವಿಯು ಜಠರದಲ್ಲಿ ಬದುಕಲು ಸಾಧ್ಯವಿಲ್ಲ. ಜಠರವೊಂದು ಬಂಜರುಭೂಮಿ. ಜಠರದಲ್ಲಿರುವ ಜಠರಾಮ್ಲವು ಎಷ್ಟು ಪ್ರಬಲವಾಗಿರುತ್ತದೆ ಎಂದರೆ, ಅದನ್ನು ಕಾರಿನ ಬ್ಯಾಟರಿಗಳಲ್ಲಿ ಬಳಸಬಹುದು. ಒಂದು ಕಬ್ಬಿಣದ ಮೊಳೆಯನ್ನು ಜಠರಾಮ್ಲದಲ್ಲಿ ಮುಳುಗಿಸಿದರೆ, ಜಠರಾಮ್ಲವು ಅದನ್ನು ಕರಗಿಸಿಬಿಡುತ್ತದೆ. ಅಂತಹ ಪ್ರಬಲಾತಿ ಪ್ರಬಲ ಪರಿಸರದಲ್ಲಿ ಬ್ಯಾಕ್ಟೀರಿಯಗಳು ಬದುಕುತ್ತವೆ ಎಂದರೆ ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು.

ಜಠರ ಛೇದನ: ಜಠರ ಮತ್ತು ಕರುಳು ಸಂಬಂಧಿತ ಅಧ್ಯಯನ ವಿಭಾಗವನ್ನು ಜಠರ-ಕರುಳು ವಿಜ್ಞಾನ (ಗ್ಯಾಸ್ಟ್ರೋಎಂಟೆರಾಲಜಿ) ಎಂದು ಕರೆಯುತ್ತಿದ್ದರು. ಅಂದಿನ ದಿನಗಳಲ್ಲಿ ಉದರಕ್ಕೆ ಸಂಬಂಧಿಸಿದ ಸರ್ವಸಾಮಾನ್ಯ ಸಮಸ್ಯೆ ಎಂದರೆ ಜಠರ ಮತ್ತು ಕರುಳುಹುಣ್ಣು. ರೋಗಿಗಳು ತಮ್ಮ ಉದರವನ್ನು ಗಟ್ಟಿಯಾಗಿ ಹಿಡಿದುಕೊಂಡು, ನೋವನ್ನು ತಡೆಯ ಲಾಗದೆ ಒದ್ದಾಡುತ್ತಾ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಜಠರ ಮತ್ತು ಕರುಳುಹುಣ್ಣಿ ನೊಳಗೆ ರಕ್ತಸ್ರಾವವಾಗುತ್ತಿತ್ತು. ಕೆಲವು ಸಲ ಜಠರಾಮ್ಲವು ಜಠರ ಇಲ್ಲವೇ ಕರುಳನ್ನು ಸುಟ್ಟು ರಂಧ್ರವನ್ನು ಮಾಡಿ, ಹೆಚ್ಚುವರಿ ಆಮ್ಲವು ಉದರದೊಳಗೆ ಸೋರುತ್ತಿತ್ತು. ಈ ಎಲ್ಲ ಅವಘಡಗಳಿಗೂ ಕಾರಣ ಜೀವನಶೈಲಿ ಎಂದು ದೂರುತ್ತಿದ್ದರು. ಜಠರ ಮತ್ತು ಕರುಳು ಹುಣ್ಣನ್ನು ಗುಣಪಡಿಸುವಂತಹ ಚಿಕಿತ್ಸೆಯಿರಲಿಲ್ಲ. ಹಾಗಾಗಿ ವೈದ್ಯರು ಜಠರ ಮತ್ತು ಕರುಳುಹುಣ್ಣು ಉಗ್ರವಾಗದಂತಹ ಶಾಮಕ ಚಿಕಿತ್ಸೆಯನ್ನು ಮಾತ್ರ ಕೊಡುತ್ತಿದ್ದರು. ಜಠರ ಅಥವ ಕರುಳು ತೂತು ಬಿದ್ದು ಬಂದವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರು.

ಜಠರವನ್ನು ಭಾಗಶಃ ಛೇದಿಸಿದರು. ಔಷಧಗಳನ್ನು ಉತ್ಪಾದಿಸುವ ದೊಡ್ಡ ದೊಡ್ಡ ಸಂಸ್ಥೆಗಳು ಆಮ್ಲರೋಧಕ (ಆಸಿಡ್-ಬ್ಲಾಕರ್ಸ್) ಔಷಧಗಳನ್ನು ತಯಾರಿಸಿ ಬಿಲಿಯನ್ ಬಿಲಿಯನ್‌ಗಟ್ಟಲೇ ಹಣವನ್ನು ಮಾಡುತ್ತಿದ್ದರು. ಏಕೆಂದರೆ ಜಠರ-ಕರುಳು ಹುಣ್ಣು ರೋಗಿ ಗಳು ತಮ್ಮ ಜೀವಮಾನ ಪೂರ್ಣ ಈ ಆಮ್ಲ-ರೋಧಕ ಔಷಧಗಳನ್ನು ಸೇವಿಸ ಬೇಕಾಗುತ್ತಿತ್ತು.

ಹೀಗೆ ಜಠರ ಮತ್ತು ಕರುಳ ಹುಣ್ಣಿಗೆ ಒತ್ತಡ ಸಿದ್ಧಾಂತವೇ ಕಾರಣ ಎಂದು ಬಲವಾಗಿ ನಂಬಿದ್ದ ವೈದ್ಯರು ಬ್ಯಾರಿ ಮಾರ್ಷಲ್ ಸೂಚಿಸಿದ ಬ್ಯಾಕ್ಟೀರಿಯ ಸಿದ್ಧಾಂತವನ್ನು ಎಳ್ಳಷ್ಟೂ ಒಪ್ಪಲಿಲ್ಲ. ಹಾಗಾಗಿ ಅಂತಹ ವೈದ್ಯರಿಗೆ ಮನವರಿಕೆಯನ್ನು ಮಾಡಲು, ಯಾರೂ ಊಹಿಸಲಾಗದಂತಹ ದಿಟ್ಟ ಆದರೆ ಅತ್ಯಂತ ಅಪಾಯಕಾರಿ ಪ್ರಯೋಗವನ್ನು ತಮ್ಮ ಮೇಲೆ ತಾವೇ ಮಾಡಿಕೊಂಡರು ಬ್ಯಾರಿ ಮಾರ್ಷಲ್!

ಆಕಸ್ಮಿಕ ಅದೃಷ್ಟ: 1979. ರಾಯಲ್ ಪೆರ್ಥ್ ಆಸ್ಪತ್ರೆ ಡಾ| ರಾಬಿನ್ ವಾರನ್ (1937-2024), ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ರೋಗಶಾಸ್ತ್ರಜ್ಞ (ಪೆಥಾಲಜಿಸ್ಟ್). ಜಠರ ಉರಿಯೂತ (ಗ್ಯಾಸ್ಟ್ರೈಟಿಸ್) ಪೀಡಿತ ರೋಗಿಗಳ ಚಂದ್ರಿಕೆಯ (ಬಯಾಪ್ಸಿ) ಸ್ಲೈಡುಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಅಧ್ಯಯನ ಮಾಡುತ್ತಿದ್ದರು. ಆ ಅಧ್ಯಯನದಲ್ಲಿ ಅವರು ವಿಶೇಷವಾದ ಬೆಳ್ಳಿಯ ಲೇಪನವನ್ನು ಬಳಸಿದ್ದರು. ಜಠರದ ಅಂಚಿನ ಮಕಮಲ್ಲಿನ ಬಟ್ಟೆಯ ಮೇಲೆ ಬಾಗಿದ ತಂತಿಯಂತೆ ಕಾಣುವ ಪುಟ್ಟ-ಪುಟ್ಟ ಬ್ಯಾಕ್ಟೀರಿಯಗಳು ಮಲಗಿ ದ್ದವು. ಎಲ್ಲಿ ಹುಣ್ಣುಗಳಿದ್ದವೋ ಅಲ್ಲಿಯೇ ಈ ಬ್ಯಾಕ್ಟೀರಿಯಗಳು ಹೆಚ್ಚಿನ ಸಂಖ್ಯೆಯಲ್ಲಿ ದ್ದವು.

ಡಾ| ರಾಬಿನ್ ವಾರನ್ ಗಮನಿಸಿದ ಬ್ಯಾಕ್ಟೀರಿಯಗಳ ಸುದ್ದಿಯು ಬ್ಯಾರಿ ಮಾರ್ಷಲ್ ಅವರ ಗಮನಕ್ಕೆ ಬಂದಿತು. ಕೂಡಲೇ ಬ್ಯಾರಿ ಮಾರ್ಷಲ್ ಒಂದು ಹೊಸ ಅಧ್ಯಯನವನ್ನು ಕೈಗೊಂಡರು. ಅದರಲ್ಲಿ ಡಾ| ರಾಬಿನ್ ವಾರನ್ ಅವರನ್ನೂ ಸೇರಿಸಿಕೊಂಡರು.

ಜಠರ ಮತ್ತು ಕರುಳುಹುಣ್ಣಿನ 100 ರೋಗಿಗಳ ಚಂದ್ರಿಕೆಗಳನ್ನು ಅಧ್ಯಯನ ಮಾಡಲು ನಿರ್ಧರಿಸಿದರು. 100 ಜನರನ್ನು ಅಧ್ಯಯನ ಮಾಡಿದರು. ಕರುಳುಹುಣ್ಣು ಇದ್ದ ಬಹು ಪಾಲು ಜನರಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿಯಿದ್ದರೆ, ಪ್ರತಿಯೊಂದು ಜಠರಹುಣ್ಣಿನಲ್ಲಿ ಬ್ಯಾಕ್ಟೀರಿಯಗಳು ತುಂಬಿ ತುಳುಕುತ್ತಿದ್ದವು. ಮಾರ್ಷಲ್ ಮತ್ತು ರಾಬಿನ್ ತಮ್ಮ ಪ್ರಬಂಧ ವನ್ನು ಪ್ರಕಟಿಸಿದರು. ಆದರೆ, ವೈದ್ಯಕೀಯ ಜಗತ್ತು ಈ ಪ್ರಬಂಧವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ತಮ್ಮ ಪಾಡಿಗೆ ತಾವು ಒತ್ತಡ ಸಿದ್ಧಾಂತವನ್ನೇ ನಂಬಿ ಮುಂದುವರೆಯಲಾರಂಭಿಸಿತು. 1983ರಲ್ಲಿ ಬ್ರಸೆಲ್ಸ್ ನಲ್ಲಿ ನಡೆದ ಸಮಾವೇಶದಲ್ಲಿ ಬ್ಯಾರಿ ಮಾರ್ಷಲ್ ತಮ್ಮ ಪ್ರಬಂಧ ವನ್ನು ಮಂಡಿಸಿದಾಗ, ವೈದ್ಯರೆಲ್ಲರೂ ತಣ್ಣಗೆ ಕುಳಿತಿದ್ದರು. ಒಬ್ಬ ವೈದ್ಯನು ಎದ್ದು ನಿಂತು ಬ್ಯಾರಿ.. ಜಠರವೆನ್ನುವುದು ಬಂಜರುಭೂಮಿ. ಆ ಆಮ್ಲದಲ್ಲಿ ಬ್ಯಾಕ್ಟೀರಿಯವು ಬದುಕಿರು ತ್ತದೆ, ಹೊಟ್ಟೆಯ ಹುಣ್ಣನ್ನು ಮಾಡುತ್ತದೆ ಎಂದರೆ, ಅದು ನಂಬಲು ಅನರ್ಹವಾದ ಮಾತು ಎಂದು ಕಿಚಾಯಿಸಿದ.

ಸ್ವಪ್ರಯೋಗ: ಬ್ಯಾರಿ ಮಾರ್ಷಲ್ ಹತಾಶರಾದರು. ಆದರೆ, ಎದೆಗುಂದಲಿಲ್ಲ. ಅವರಿಗೆ ತಮ್ಮ ಸಿದ್ಧಾಂತ ಮತ್ತು ಅಧ್ಯಯನದ ಬಗ್ಗೆ ಎಳ್ಳಷ್ಟು ಸಂಶಯವಿರಲಿಲ್ಲ. ಬ್ಯಾರಿ ತಮ್ಮನ್ನು ತಾವು ಕೌಬಾಯ್ ಜಾತಿಗೆ ಸೇರಿದವರು ಎಂದು ಪರಿಗಣಿಸಿದ್ದರು. ತಮ್ಮ ಅಧ್ಯಯನವು ಸಾಂಪ್ರದಾಯಿಕ ಮಾರ್ಗದಲ್ಲಿ ಹೋದರೆ, ದಶಕಗಳಾದರೂ ಅದು ಮುಗಿಯುವುದಿಲ್ಲ. ಅಲ್ಲಿಯವರೆಗೆ ಅದೆಷ್ಟು ಜನರು ಜಠರ ಮತ್ತು ಕರುಳು ಹುಣ್ಣಿಗಾಗಿ ಶಸ್ತ್ರಚಿಕಿತ್ಸೆಗಾಗಿ ಒಳಗಾಗಿ ತಮ್ಮ ಅರ್ಧ ಜಠರವನ್ನು ಕಳೆದುಕೊಳ್ಳಬೇಕಾಗುತ್ತದೆಯೋ ಎಂದು ಕಳವಳ ಗೊಂಡರು. ಹಾಗಾಗಿ ಅವರು ಆಕ್ಷನ್ ಪ್ಯಾಕಡ್ ಕೌಬಾಯ್ ತರಹ ತ್ವರಿತವಾಗಿ ಆದರೆ ಕ್ರಮಬದ್ಧವಾಗಿ ಮುಂದುವರೆಯಲು ನಿರ್ಧರಿಸಿದರು.

ಕಾಚ್ ನಿಯಮಗಳು: ಬ್ಯಾರಿ ಮಾರ್ಷಲ್ ಮೊತ್ತ ಮೊದಲಿಗೆ ಕಾಚ್ ನಿಯಮಗಳು (ಕಾಚ್ ಪಾಸ್ಚುಲೇಟ್ಸ್) ಎಷ್ಟರ ಮಟ್ಟಿಗೆ ತಮ್ಮ ಸಿದ್ಧಾಂತಕ್ಕೆ ಅನ್ವಯವಾಗುತ್ತವೆ ಎನ್ನುವುದನ್ನು ನಿರೂಪಿಸಬೇಕಾಗಿತ್ತು. ಕಾಚ್ ನಿಯಮಗಳು ನಾಲ್ಕು. ಯಾವುದೇ ಒಂದು ಸೋಂಕಿಗೆ ಅನ್ವಯವಾಗುವಂತಹವು. ಒಂದು ರೋಗಕಾರಕವು ಒಂದು ಕಾಯಿಲೆಗೆ ಕಾರಣ ಎನ್ನುವು ದಾದರೆ, ಅದನ್ನು ನಾಲ್ಕು ಹಂತಗಳಲ್ಲಿ ಖಚಿತಪಡಿಸಬೇಕಿತ್ತು.

೧. ರೋಗಗ್ರಸ್ತ ದೇಹ ಭಾಗದಲ್ಲಿ ರೋಗಕಾರಕವನ್ನು ಪತ್ತೆ ಹಚ್ಚಬೇಕು.

೨. ಆ ರೋಗಕಾರಕವನ್ನು ಶುದ್ಧ ಕೃಷಿಕೆಯಲ್ಲಿ ಬೆಳೆಸಬೇಕು.

೩. ಆ ರೋಗಕಾರಕವನ್ನು ಬಳಸಿಕೊಂಡು ಒಬ್ಬ ಹೊಸ ಆತಿಥೇಯನಲ್ಲಿ ರೋಗವನ್ನು ಉಂಟುಮಾಡಬೇಕು.

೪. ಆ ಹೊಸ ಆತಿಥೇಯನ ಒಡಲಿನಿಂದ ಅದೇ ರೋಗಕಾರಕವನ್ನು ಪ್ರತ್ಯೇಕಿಸಬೇಕು.

ಬ್ಯಾರಿ ಮಾರ್ಷಲ್ ರೋಗಕಾರಕವನ್ನು ಇಲಿ ಹಾಗೂ ಹಂದಿಗಳ ಜಠರ ಮತ್ತು ಕರುಳಿಗೆ ವರ್ಗಾಯಿಸಲು ಪ್ರಯತ್ನಿಸಿದರು. ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ವಾಸ್ತವದಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿಯು ಮನುಷ್ಯರ ಜಠರ ಮತ್ತು ಕರುಳಿನಲ್ಲಿ ಬೆಳೆಯುತ್ತಿದ್ದ ಕಾರಣ, ಕಾಚ್ ನಿಯಮವನ್ನು ನಿರೂಪಿಸಲು ಮತ್ತೊಬ್ಬ ಮನುಷ್ಯನೇ ಬೇಕಾಗುತ್ತಿತ್ತು. ಆದರೆ, ಒಬ್ಬನನ್ನು ತಿಳಿದೂ ತಿಳಿದೂ ರೋಗಗ್ರಸ್ತನಾಗು ಎಂದು ಕೇಳುವುದು ಹೇಗೆ? ಅದು ಅಸಾಧ್ಯ ಹಾಗೂ ಅನೈತಿಕವೆನಿಸಿತು. ಆಗ ಬ್ಯಾರಿ ಮಾರ್ಷಲ್, ತಮ್ಮ ಪ್ರಯೋಗಕ್ಕೆ ತಾವೇ ಗಿನಿ ಪಿಗ್ ಆಗಲು ನಿರ್ಧರಿಸಿದರು.

ಪ್ರಯೋಗ: 1984 ಜುಲೈ ತಿಂಗಳ ಒಂದು ಶುಭ ಮುಂಜಾನೆ. ಬ್ಯಾರಿ ಮಾರ್ಷಲ್ ನೇರವಾಗಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಹೋದರು. ಅಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿಯ ಕೃಷಿಕೆಯಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಓರ್ವ ರೋಗಿಯ ಜಠರಹುಣ್ಣಿನಿಂದ ಬ್ಯಾಕ್ಟೀರಿಯವನ್ನು ಪ್ರತ್ಯೇಕಿಸಿ ಬೆಳೆಸುತ್ತಿದ್ದರು. ಉಗುರುಬೆಚ್ಚಗಿನ ದನದ ಮಾಂಸದ ಸಾರಕ್ಕೆ ಹೆಲಿಕೋಬ್ಯಾಕ್ಟರ್ ಪೈಲೋರಿಯ ಕೃಷಿಕೆಯನ್ನು ಬೆರೆಸಿದರು. ಕಣ್ಣುಮುಚ್ಚಿ ಕೊಂಡು ಗಟಗಟನೆ ಕುಡಿದುಬಿಟ್ಟರು. ಅದಕ್ಕೆ ಅಂತಹ ರುಚಿಯೇನೂ ಇರಲಿಲ್ಲವಂತೆ. ಈಗ ಅವರು ತಮಗೆ ಜಠರ ಮತ್ತು ಕರುಳಿನಲ್ಲಿ ಹುಣ್ಣು ತಲೆದೋರುವುದನ್ನು ಕಾಯ ಬೇಕಾಯಿತು.

ಹುಣ್ಣು ತಲೆದೋರಲು ಎಷ್ಟು ವಾರ/ಎಷ್ಟು ತಿಂಗಳು/ಎಷ್ಟು ವರ್ಷ ಬೇಕಾಗಬಹುದು ಎಂದು ಮನಸ್ಸಿನೊಳಗೆ ಲೆಕ್ಕವನ್ನು ಹಾಕಲಾರಂಭಿಸಿದರು. ಆದರೆ ಅವರ ನಿರೀಕ್ಷೆಗಿಂತ ಅತ್ಯಂತ ಕ್ಷಿಪ್ರವಾಗಿ ರೋಗಲಕ್ಷಣಗಳು ಕಾಣಿಸಿಕೊಂಡವು.

ಮೂರು ದಿನಗಳು: ಬ್ಯಾಕ್ಟೀರಿಯ ಕೃಷಿಕೆಯನ್ನು ಕುಡಿದು ಕೇವಲ ಮೂರು ದಿನಗಳಾಗಿ ದ್ದವು. ಬ್ಯಾರಿ ಮಾರ್ಷಲ್‌ನ ತಾಯಿಯು ಮಗನೇ!.. ನಿನ್ನ ಬಾಯಿಯಿಂದ ಕೊಳೆತ ದುರ್ವಾಸನೆ ಬರುತ್ತಿದೆ ಎಂದು ದೂರಿದರು. ಐದು ದಿನಗಳಾದವು. ಬೆಳಗು ಏಕಾಗುತ್ತದೆ ಯೋ ಎಂದು ಬ್ಯಾರಿ ಮಾರ್ಷಲ್ ಹಲುಬಲಾರಂಭಿಸಿದರು. ಬೆಳಗ್ಗೆ ಏಳುತ್ತಿರುವಂತೆಯೇ ವಿಪರೀತ ವಾಕರಿಕೆ ಮತ್ತು ವಾಂತಿ. ಆಮ್ಲರಹಿತ ಪಾರದರ್ಶಕ ವಾಂತಿಯು ಅವರನ್ನು ನಿತ್ರಾಣಗೊಳಿಸಲಾರಂಭಿಸಿತು. ಮೇಲುಹೊಟ್ಟೆಯು ವಿಪರೀತ ನೋಯಲಾರಂಭಿಸಿತು. ಮಹಾ ಸೋಮಾರಿಯಾದರು. ಜತೆಗೆ ಮಾತು ಮಾತಿಗೂ ಸಿಡುಕಲಾರಂಭಿಸಿದರು. ಅವರ ವರ್ತನೆಯೇ ಬದಲಾಯಿತು. ಹತ್ತು ದಿನಗಳಾದವು. ಬ್ಯಾರಿ ಮಾರ್ಷಲ್ ಆಸ್ಪತ್ರೆಗೆ ಹೋದರು. ಅಲ್ಲಿ ಉದರದರ್ಶಕದ (ಎಂಡೋಸ್ಕೋಪಿ) ಮೂಲಕ ಜಠರದ ಅಧ್ಯಯನ ವನ್ನು ನಡೆಸಿದರು. ಆರೋಗ್ಯಕರವಾಗಿದ್ದ ಬ್ಯಾರಿ ಮಾರ್ಷಲ್ ಅವರ ಜಠರವು ಈಗ ಕೆಂಪಗೆ ಊದಿಕೊಂಡಿತ್ತು. ಅದರ ಜತೆಯಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿ ಗಳ ದಂಡು ತಮ್ಮ ಬಾಗಿದ ಒಡಲನ್ನು ಅಲೆಅಲೆಯಾಗಿ ಬಾಗಿಸಿ ಎಲ್ಲೆಡೆ ಚಲಿಸುತ್ತಿದ್ದವು. ಬ್ಯಾರಿ ಮಾರ್ಷಲ್ ತಮ್ಮ ಜಠರದಲ್ಲಿ ತಾವೇ ತೀವ್ರ ಸ್ವರೂಪದ ಜಠರ ಉರಿಯೂತವನ್ನು (ಅಕ್ಯೂಟ್ ಗ್ಯಾಸ್ಟ್ರೈಟಿಸ್) ಆಹ್ವಾನಿಸಿದ್ದರು. ಈ ತೀವ್ರ ಜಠರ ಉರಿಯೂತವನ್ನು ನಿಗ್ರಹಿಸದೇ ಹಾಗೇ ಬಿಟ್ಟರೆ, ಅದು ಜಠರ ಹುಣ್ಣಿಗೆ ಪರಿವರ್ತನೆಯಾಗುತ್ತಿತ್ತು.

ಬ್ಯಾರಿ ಮಾರ್ಷಲ್ ಅವರ ಪತ್ನಿಯು ತಮ್ಮ ಪತಿಯ ಈ ಅನಾರೋಗ್ಯವನ್ನು ಕಂಡು ಕಳವಳ ಪಡುವ ಮೊದಲೇ ಬ್ಯಾರಿ ಮಾರ್ಷಲ್ ಪ್ರತಿ ಜೈವಿಕ ಔಷಧ (ಆಂಟಿಬಯೋಟಿಕ್) ಮತ್ತು ಬಿಸ್ಮತ್ ಔಷಧವನ್ನು ಕೋರ್ಸ್ ರೂಪದಲ್ಲಿ ಸೇವಿಸಲಾರಂಭಿಸಿದರು. ಕೆಲವೇ ದಿನಗಳಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿ ಸಂಪೂರ್ಣ ನಾಶವಾಯಿತು. ಹೀಗೆ ಬ್ಯಾರಿ ಮಾರ್ಷಲ್ ಹೆಲಿಕೋಬ್ಯಾಕ್ಟರ್ ಪೈಲೋರಿಯ ಕೃಷಿಕೆಯನ್ನು ಕುಡಿದು, ಜಠರ ಉರಿಯೂತ ವನ್ನು ಬರಿಸಿಕೊಂಡು, ಸ್ವಯಂ ಪ್ರತಿಜೈವಿಕ ಔಷಧವನ್ನು ಸೇವಿಸಿ, ಆ ಜಠರ ಉರಿಯೂತ ದಿಂದ ಮುಕ್ತರಾಗಿದ್ದರು.

ಪಟ್ಟಭದ್ರರ ಯುದ್ಧ: ಬ್ಯಾರಿ ಮಾರ್ಷಲ್ ತನ್ನ ದಿಟ್ಟ ಪ್ರಯೋಗದಿಂದ ಜಠರ ಮತ್ತು ಕರುಳುಹುಣ್ಣಿಗೆ ಹೆಲಿಕೋಬ್ಯಾಕ್ಟರ್ ಪೈಲೋರಿಯೇ ಕಾರಣ ಎಂದು ಕಾಚ್ ನಿಯಮಾ ನುಸಾರ ಅನುಮಾನವಿಲ್ಲದ ಹಾಗೆ ನಿರೂಪಿಸಿದ್ದರೂ ವೈದ್ಯಕೀಯ ರಂಗದ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಒಪ್ಪಲಿಲ್ಲ. ಇದಕ್ಕೆ ಹಲವು ಕಾರಣಗಳಿದ್ದವು. ಅದುವರೆಗೂ ಜಠರ ಮತ್ತು ಕರುಳುಹುಣ್ಣಿಗೆ ಪರಿಪೂರ್ಣ ಚಿಕಿತ್ಸೆಯು ಇರಲಿಲ್ಲ.

ಕೇವಲ ಕಾಯಿಲೆಯ ಶಮನಗೊಳಿಸುವ ತಂತ್ರಗಳನ್ನು ಮಾತ್ರ ಅನುಸರಿಸುತ್ತಿದ್ದರು. ಬ್ಯಾರಿ ಮಾರ್ಷಲ್ ಮೊದಲ ಬಾರಿಗೆ ಜಠರ ಮತ್ತು ಕರುಳು ಹುಣ್ಣನ್ನು ಗುಣಪಡಿಸಿದರು.

ಅದುವರೆಗೂ ಜಠರ ಮತ್ತು ಕರುಳು ಹುಣ್ಣಿನ ರೋಗಿಯು ಜೀವಮಾನ ಪೂರ್ಣ ರೋಗಿ ಯಾಗಿ ಉಳಿಯಬೇಕಾಗಿದ್ದು, ತಾನು ಬದುಕಿರುವವರಿಗೂ ಆಮ್ಲರೋಧಕ ಔಷಧವನ್ನು ಸೇವಿಸಬೇಕಾಗಿತ್ತು. ಈಗ ಬ್ಯಾರಿ ಮಾರ್ಷಲ್, ಕೇವಲ 15 ದಿನಗಳಲ್ಲಿ ಹುಣ್ಣನ್ನು ಪೂರ್ಣ ಗುಣಪಡಿಸುತ್ತಿದ್ದರು.

ಅದುವರೆಗೂ, ಜಠರ ಮತ್ತು ಕರುಳುಹುಣ್ಣಿನ ರೋಗಿಯು ತನ್ನ ವೈದ್ಯಕೀಯ ವೆಚ್ಚಕ್ಕಾಗಿ ಜೀವಮಾನ ಪೂರ್ತಿ ಹಣವನ್ನು ಎತ್ತಿಡಬೇಕಾಗಿತ್ತು. ಆದರೆ, ಬ್ಯಾರಿ ಮಾರ್ಷಲ್ ಕೇವಲ 20 ಡಾಲರ್‌ಗಳಲ್ಲಿ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಿದರು.

70ರ ದಶಕದಲ್ಲಿ ಜಠರಛೇದನವು (ಗ್ಯಾಸ್ಟ್ರೆಕ್ಟಮಿ) ಸರ್ವಸಾಮಾನ್ಯವಾಗಿತ್ತು. ಹುಣ್ಣಿನ ಜತೆಯಲ್ಲಿ ಜಠರವನ್ನೂ ಭಾಗಶಃ ಛೇದಿಸುತ್ತಿದ್ದರು. ಹಾಗೆಯೇ ಹುಣ್ಣಿರುವ ಸಣ್ಣಕರುಳಿನ ಮೊದಲ ಭಾಗವಾದ ದ್ವಾದಶಾಂತ್ರವನ್ನು (ಡುಯೋಡಿನಂ) ಛೇದಿಸಿ ಕರುಳನ್ನು ಮರು ಜೋಡಿಸುತ್ತಿದ್ದರು. ಇದೊಂದು ಗಂಭೀರ ಹಾಗೂ ಪ್ರಧಾನ ಶಸ್ತ್ರಚಿಕಿತ್ಸೆಯಾಗಿರುತ್ತಿತ್ತು.

ಕರುಳನ್ನು ಛೇದಿಸಿದ ಮೇಲೂ ಉಳಿದ ಭಾಗದಲ್ಲಿ ಹೊಸ ಹುಣ್ಣು ಹುಟ್ಟಿಕೊಳ್ಳುತ್ತಿದ್ದದ್ದು ಅಪರೂಪವೇನಾಗಿರಲಿಲ್ಲ. ಆಮ್ಲರೋಧಕ ಔಷಧಗಳನ್ನು ತಯಾರಿಸುವುದರ ಮೂಲಕ ಬಿಲಿಯಗಟ್ಟಲೆ ಡಾಲರ್ ಹಣವನ್ನು ಮಾಡುತ್ತಿದ್ದ ಔಷಧ ಕಂಪನಿಗಳು ತಮಗಾಗುವ ನಷ್ಟವನ್ನು ತಡೆಗಟ್ಟಲು, ಬ್ಯಾರಿ ಮಾರ್ಷಲ್ ಸಂಶೋಧನೆಯಲ್ಲಿ ದೋಷಗಳನ್ನು ಹುಡುಕಿ, ವೈದ್ಯರು ಅದನ್ನು ಅನುಮೋದಿಸದಿರಲು ಶತಾಯುಗತಾಯು ಪ್ರಯತ್ನಿಸಿದರು.

ಹಳೆಯ ಜಠರ ಹುಣ್ಣುಗಳು, ಜಠರ ಕ್ಯಾನ್ಸರ್ ಆಗಿ ಪರಿವರ್ತನೆಯಾಗಿ ವ್ಯಕ್ತಿಯ ಸಾವಿಗೆ ಕಾರಣವಾಗುತ್ತಿತ್ತು. ಅದು ಬ್ಯಾರಿ ಮಾರ್ಷಲ್ ಚಿಕಿತ್ಸೆಯ ಕಾರಣ ಸಂಪೂರ್ಣ ನಿಂತೇ ಹೋಯಿತು. ನೊಬೆಲ್ ಪಾರಿತೋಷಕ: ಬ್ಯಾರಿ ಮಾರ್ಷಲ್ ಹಾಗೂ ರಾಬಿನ್ ವಾರನ್ ಜಠರ ಮತ್ತು ಕರುಳು ಹುಣ್ಣಿನ ಚಿಕಿತ್ಸೆ ಸಂಬಂಧಿಸಿದ ಸಂಶೋಧನೆಗಾಗಿ ಅವರಿಗೆ 2005ರ ವೈದ್ಯಕೀಯ ನೊಬೆಲ್ ಪಾರಿತೋಷಕವು ಲಭಿಸಿತು. ಈ ಇಬ್ಬರು ಮಹನೀಯರು ನಡೆಸಿದ ಅಧ್ಯಯನದಿಂದ ಕೋಟಿಗಟ್ಟಲೇ ಜನರು ತಮ್ಮ ಜಠರವನ್ನು ಕೊಯ್ಯಿಸಿಕೊಳ್ಳುವುದು ತಪ್ಪಿತು. ಹಾಗೆಯೇ ಶತಶತ ಕೋಟಿ ರುಪಾಯಿಗಳು ಉಳಿದವು. ಆಸ್ಪತ್ರೆ/ಶಸ್ತ್ರಚಿಕಿತ್ಸೆಯ ನರಕದಿಂದ ಮುಕ್ತರಾದರು.