ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Mythri Bhat Column: ಅಲಂಕಾರದ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸೀರಿಯಲ್‌ ಕಥೆಗಳು

ಸಾಮಾನ್ಯ ಮಧ್ಯಮ ವರ್ಗದ ಮನೆಯ ಕಥೆಯಲ್ಲಿಯೂ ಇದೇ ಚಿತ್ರಣ. ಅಡುಗೆ ಮಾಡುವಾಗಲೂ, ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುವಾಗಲೂ, ಕಣ್ಣೀರು ಸುರಿಸುವಾಗಲೂ ಅಲಂಕಾರ ದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ವಾಸ್ತವ ಬದುಕಿಗೆ ಎಷ್ಟು ದೂರ ಎಂಬುದನ್ನು ಪ್ರೇಕ್ಷಕರು ಅರಿತಿದ್ದರೂ, ಈ ದೃಶ್ಯಗಳು ಅವರ ಮನಸ್ಸಿನಲ್ಲಿ ಸೌಂದರ್ಯದ ಹೊಸ ಮಾನದಂಡವನ್ನು ನಿರ್ಮಿಸು ತ್ತವೆ.

ಅಲಂಕಾರದ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸೀರಿಯಲ್‌ ಕಥೆಗಳು

-

Profile
Ashok Nayak Jul 23, 2026 9:47 AM

ಡಾ.ಮೈತ್ರಿ ಭಟ್‌, ವಿಟ್ಲ

ಸಂಜೆ ಆರು ಗಂಟೆಯಾದರೆ ಸಾಕು. ಅನೇಕ ಮನೆಗಳಲ್ಲಿ ಟಿವಿಯ ರಿಮೋಟ್ ಒಂದೇ ವಾಹಿನಿಯ ಮೇಲೆ ಕೇಂದ್ರೀಕೃತಗೊಳ್ಳುತ್ತದೆ. ಈ ಮೆಗಾ ಧಾರಾವಾಹಿಗಳು ಅದೇನು ಮೋಡಿ ಮಾಡಿವೆಯೋ. ಆದರೆ ವಿಚಿತ್ರ ಅನ್ನಿಸುವುದು ನಮ್ಮ ಕನ್ನಡ ಧಾರಾವಾಹಿಗಳು ಬಿಂಬಿಸುವ ಚಿತ್ರಣಗಳು. ಪರದೆಯ ಮೇಲೆ ಬರುವ ನಾಯಕಿ ನಿzಯಿಂದ ಎದ್ದರೂ ಮೇಕಪ್ ಕೆಡದು, ಅಡುಗೆ ಮಾಡಿ ದರೂ ಆಭರಣ ಕಳಚದು, ಕಣ್ಣೀರಿಟ್ಟರೂ ಕಣ್ಣಿಗೆ ಹಚ್ಚಿದ ಕಾಜಲ್ ಮಾಸದು.

ಬದುಕಿನ ಪ್ರತಿಕ್ಷಣವೂ ಮದುವೆ ಮಂಟಪದಲ್ಲಿ ಕುಳಿತ ಮದುಮಗಳಂತೆ ಅಲಂಕರಿಸಿ ಕೊಂಡಿರುವ ಈ ಪಾತ್ರಗಳು ಇಂದು ಲಕ್ಷಾಂತರ ಪ್ರೇಕ್ಷಕರ ದಿನನಿತ್ಯದ ಸಂಗಾತಿಗಳಾಗಿವೆ. ಆಶ್ಚರ್ಯವೇನೆಂದರೆ ಈ ಧಾರಾ ವಾಹಿಗಳು ಬದುಕನ್ನು ತೋರಿಸುತ್ತಿವೆಯೇ ಅಥವಾ ನಿಜ ಬದುಕಿನಿಂದ ದೂರ ಸರಿದ ಅಸಾಧ್ಯವಾದ ಒಂದು ಕೃತಕ ಮಾದರಿಯನ್ನು ಬಿಂಬಿಸುತ್ತಿವೆಯೇ? ನೀವೇ ಹೇಳಿ ಮಲಗು ವಾಗ ಯಾರಾದರೂ ಲಿಪ್ಸ್ಟಿಕ್ ಹಚ್ಚುವರೇ? ಅಥವಾ ಮಲ್ಲಿಗೆಯ ಮಾಲೆ ಮುಡಿದು ಮಲಗುವರೇ? ಮಲಗಿದರೂ ಮುಡಿದ ಮಾಲೆಯ ಒಂದು ಹೂವು ಕೂಡಾ ಕದಲದೇ ಇರುವುದೇ? ಧಾರಾವಾಹಿ ಎನ್ನುವುದು ಸಮಾಜದ ಪ್ರತಿಬಿಂಬ ಎಂದು ಹೇಳಲಾಗುತ್ತದೆ. ಆದರೆ ಇಂದಿನ ಅನೇಕ ಧಾರಾವಾಹಿ ಗಳು ಅಲಂಕಾರದ ಪ್ರದರ್ಶನ ವೇದಿಕೆಯಾಗಿ ಬದಲಾಗಿವೆ.

ಇದನ್ನೂ ಓದಿ: Dr Maithri Bhat Column: ಭಾವಗಳ ದೀಪ, ಮೌನದ ಹಾದಿ

ಕಥೆಯ ತೂಕ ಕಡಿಮೆಯಾದಷ್ಟೂ ಸೀರೆಗಳ ಹೊಳಪು ಹೆಚ್ಚುತ್ತಿದೆ. ಪಾತ್ರಗಳ ವ್ಯಕ್ತಿತ್ವಕ್ಕಿಂತ ಅವರ ಆಭರಣಗಳೇ ಹೆಚ್ಚು ಧ್ವನಿಸುತ್ತಿವೆ. ಸಂಭಾಷಣೆಗಿಂತ ಮೇಕಪ್ ಹೆಚ್ಚು ಗಮನ ಸೆಳೆಯುತ್ತಿದೆ. ಪರಿಣಾಮವಾಗಿ ಕಥೆಯ ಜೀವಾಳವೇ ಹಿಂದೆ ಸರಿದು, ಬಾಹ್ಯ ಸೌಂದರ್ಯ, ಆಡಂಬರವೇ ಕೇಂದ್ರ ಸ್ಥಾನ ಪಡೆಯುತ್ತಿದೆ. ಅಲಂಕಾರವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಭಾರತೀಯ ಹೆಣ್ಣುಮಕ್ಕಳು ಹಬ್ಬದ ದಿನಗಳಲ್ಲಿ ಸಿಂಗರಿಸಿಕೊಳ್ಳುವುದು, ಮದುವೆ, ನಾಮಕರಣ, ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ವೇಷಭೂಷಣ ಧರಿಸುವುದು ನಮ್ಮ ಸಂಪ್ರದಾಯದ ಸೊಬಗು.

ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಧಾರಾವಾಹಿಗಳು ಅಲಂಕಾರವನ್ನು ಬದುಕಿನ ಸಹಜತೆಯ ಬದಲು ಬದುಕಿನ ಅನಿವಾರ್ಯ ಗುರುತಾಗಿ ಬಿಂಬಿಸುತ್ತಿವೆ. ಧಾರಾವಾಹಿಗಳಲ್ಲಿ ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವ ತನಕ ಮಹಿಳೆಯರು ಭಾರವಾದ ರೇಷ್ಮೆ ಸೀರೆ, ಚಿನ್ನದ ಆಭರಣ ಗಳು, ಮೇಕಪ್, ವಿಭಿನ್ನ ಕೂದಲ ವಿನ್ಯಾಸದೊಂದಿಗೆ ಕಾಣಿಸಿಕೊಳ್ಳುತ್ತಾರೆ.

ಸಾಮಾನ್ಯ ಮಧ್ಯಮ ವರ್ಗದ ಮನೆಯ ಕಥೆಯಲ್ಲಿಯೂ ಇದೇ ಚಿತ್ರಣ. ಅಡುಗೆ ಮಾಡುವಾಗಲೂ, ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುವಾಗಲೂ, ಕಣ್ಣೀರು ಸುರಿಸುವಾಗಲೂ ಅಲಂಕಾರ ದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ವಾಸ್ತವ ಬದುಕಿಗೆ ಎಷ್ಟು ದೂರ ಎಂಬುದನ್ನು ಪ್ರೇಕ್ಷಕರು ಅರಿತಿದ್ದರೂ, ಈ ದೃಶ್ಯಗಳು ಅವರ ಮನಸ್ಸಿನಲ್ಲಿ ಸೌಂದರ್ಯದ ಹೊಸ ಮಾನದಂಡ ವನ್ನು ನಿರ್ಮಿಸುತ್ತವೆ.

ಇದು ಕೇವಲ ಮನರಂಜನೆಯ ಪ್ರಶ್ನೆಯಲ್ಲ; ಇದು ಮನೋವಿeನದ ಪ್ರಶ್ನೆಯೂ ಹೌದು. ಮಾಧ್ಯಮ ಗಳು ನಿರಂತರವಾಗಿ ಒಂದೇ ರೀತಿಯ ಸೌಂದರ್ಯವನ್ನು ಪ್ರದರ್ಶಿಸಿದಾಗ, ಜನರು ಅದನ್ನೇ ಆದರ್ಶ ವೆಂದು ನಂಬತೊಡಗುತ್ತಾರೆ. ವಿಶೇಷವಾಗಿ ಯುವತಿಯರು ಮತ್ತು ಗೃಹಿಣಿಯರಲ್ಲಿ ನಾನು ಹೀಗಿಲ್ಲ ಎಂಬ ಕೀಳರಿಮೆಯ ಭಾವನೆ ಬೆಳೆಯಬಹುದು. ಅಲಂಕಾರ ಒಂದು ಆಯ್ಕೆಯಾಗಿರ ಬೇಕಾದರೆ ಅದು ಸಾಮಾಜಿಕ ಒತ್ತಡವಾಗಿ ಬದಲಾಗುವುದು ಅಪಾಯಕಾರಿ ಬೆಳವಣಿಗೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಈ ಪ್ರವೃತ್ತಿ ಇನ್ನಷ್ಟು ತೀವ್ರ ವಾಗಿದೆ. ಧಾರಾವಾಹಿಯಲ್ಲಿ ನಾಯಕಿ ಧರಿಸಿದ ಸೀರೆ ಮರುದಿನವೇ ಮಾರುಕಟ್ಟೆಯಲ್ಲಿ ಸೀರಿಯಲ್ ಕಲೆಕ್ಷನ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತದೆ. ಅವಳು ಹಾಕಿದ ಕಿವಿಯೋಲೆ, ಸರ, ಬಳೆ, ಬಿಂದಿ, ಹೇರ್‌ಸ್ಟೈಲ್ ಎಲ್ಲವೂ ಫ್ಯಾಷನ್ ಆಗುತ್ತದೆ. ಜಾಹೀರಾತು ಸಂಸ್ಥೆಗಳು, ವಸೋದ್ಯಮ ಮತ್ತು ಆಭರಣ ಉದ್ಯಮಗಳು ಈ ಮನೋಭಾವವನ್ನು ವ್ಯಾಪಾರ ತಂತ್ರವಾಗಿ ಬಳಸಿಕೊಳ್ಳುತ್ತವೆ. ಒಟ್ಟಿನಲ್ಲಿ ಮನರಂಜನೆ ಮತ್ತು ಮಾರುಕಟ್ಟೆ ಒಂದಾಗಿ ಪ್ರೇಕ್ಷಕರ ಮನಸ್ಸನ್ನು ಪ್ರಭಾವಿಸುತ್ತವೆ.

ಹಾಗೆಂದು ಅಲಂಕರಿಸಿಕೊಳ್ಳುವುದು ತಪ್ಪಲ್ಲ. ತಪ್ಪಾಗಿರುವುದು ಅದರ ಅತಿರೇಕ. ಒಂದು ಪಾತ್ರದ ವ್ಯಕ್ತಿತ್ವವನ್ನು ಚಿಂತನೆ, ಧೈರ್ಯ, ಮೌಲ್ಯ ಮತ್ತು ನಿರ್ಧಾರಗಳು ರೂಪಿಸಬೇಕೇ ಹೊರತು ಧರಿಸಿರುವ ಆಭರಣಗಳ ತೂಕ ಅಲ್ಲ. ದುರದೃಷ್ಟವಶಾತ್ ಅನೇಕ ಧಾರಾವಾಹಿಗಳಲ್ಲಿ ನಾಯಕಿಯ ಒಳ್ಳೆಯತನವನ್ನು ಆಕೆಯ ಉಡುಗೆ ಮೂಲಕ, ಖಳನಾಯಕಿಯ ಕ್ರೌರ್ಯವನ್ನು ಆಕೆಯ ಮೇಕಪ್ ಮೂಲಕ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಪಾತ್ರ ನಿರ್ಮಾಣದ ಸರಳೀಕರಣವೂ ಹೌದು, ಕಲಾತ್ಮಕತೆಯ ಸೋಲೂ ಹೌದು. ಒಂದು ಕಾಲದಲ್ಲಿ ಕನ್ನಡ ಧಾರಾವಾಹಿಗಳು ಮನ ಮುಟ್ಟುವ ಕಥೆಯ ಕಾರಣದಿಂದ ಮನೆಮಾತಾಗಿದ್ದವು.

ಪಾತ್ರಗಳ ನೈಜತೆ, ಸಂಭಾಷಣೆಯ ಆಳ, ಬದುಕಿನ ಅನುಭವಗಳೇ ಅವುಗಳ ಶಕ್ತಿಗಳಾಗಿದ್ದವು. ಪ್ರೇಕ್ಷಕರು ಪಾತ್ರಗಳನ್ನು ಅವರ ಉಡುಗೆಯಿಂದಲ್ಲ, ಅವರ ಗುಣಗಳಿಂದ ನೆನಪಿಟ್ಟುಕೊಳ್ಳು ತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಒಂದು ಧಾರಾವಾಹಿಯ ಕಥೆ ನೆನಪಿಲ್ಲದಿದ್ದರೂ, ನಾಯಕಿ ಧರಿಸಿದ ಸೀರೆ ಅಥವಾ ಆಭರಣದ ವಿನ್ಯಾಸ ನೆನಪಿರುತ್ತದೆ. ಇದು ಮನರಂಜನೆಯ ದಿಕ್ಕು ಬದಲಾಗುತ್ತಿರುವ ಸೂಚನೆ. ಇದರಿಂದ ಮತ್ತೊಂದು ಸಾಮಾಜಿಕ ಸಮಸ್ಯೆಯೂ ಹುಟ್ಟಿಕೊಳ್ಳುತ್ತದೆ.

ಮಧ್ಯಮ ವರ್ಗದ ಕುಟುಂಬಗಳಲ್ಲಿ ಅನಗತ್ಯ ಖರ್ಚಿನ ಪ್ರವೃತ್ತಿ ಹೆಚ್ಚುತ್ತದೆ. ಧಾರಾವಾಹಿಗಳಲ್ಲಿ ಕಾಣುವ ಜೀವನಶೈಲಿಯನ್ನು ಅನುಕರಿಸುವ ಆಸೆಯಿಂದ ಸಾಲ ಮಾಡಿ ಆಭರಣ ಖರೀದಿಸುವುದು, ದುಬಾರಿ ಬಟ್ಟೆಗಳನ್ನು ಕೊಳ್ಳುವುದು, ಪ್ರದರ್ಶನಕ್ಕಾಗಿ ಬದುಕುವುದು ಇಂತಹ ಮನೋಭಾವಗಳು ಬೆಳೆಯಬಹುದು. ಸರಳತೆಯ ಸೌಂದರ್ಯ ಮರೆತು ಪ್ರದರ್ಶನದ ಸೌಂದರ್ಯಕ್ಕೆ ಸಮಾಜ ಒಲಿಯುತ್ತದೆ. ಇದರ ಜೊತೆಗೆ ಮಹಿಳೆಯರ ಶ್ರಮದ ನೈಜ ಚಿತ್ರಣವೂ ಮಸುಕಾಗುತ್ತಿದೆ. ಬೆಳಿಗ್ಗೆ ಯಿಂದ ರಾತ್ರಿ ತನಕ ಕೆಲಸ ಮಾಡುವ ಮಹಿಳೆಯ ಬೆವರು, ಆಯಾಸ, ಹೋರಾಟ, ಆತ್ಮವಿಶ್ವಾಸ, ಸಾಮರ್ಥ್ಯ- ಇವುಗಳಿಗಿಂತ ಅವಳ ಮುಖದ ಮೇಕಪ್ ಮುಖ್ಯವಾಗುವ ಸ್ಥಿತಿ ಸೃಷ್ಟಿಯಾಗುತ್ತಿದೆ.

ಇದು ಮಹಿಳೆಯ ಬದುಕನ್ನು ಮೇಲ್ನೋಟಕ್ಕೆ ಮಾತ್ರ ಸೀಮಿತಗೊಳಿಸುವ ಅಪಾಯವನ್ನು ಹೊಂದಿದೆ. ಆದಾಗ್ಯೂ ಆಶಾದಾಯಕ ಬೆಳವಣಿಗೆಗಳೂ ಇವೆ. ಕೆಲವು ಹೊಸ ಧಾರಾವಾಹಿಗಳು ಸರಳ ಉಡುಗೆ, ನೈಜ ಮನೆಗಳು, ಸಹಜ ಮೇಕಪ್ ಮತ್ತು ವಾಸ್ತವ ಬದುಕಿನ ಪಾತ್ರಗಳ ಮೂಲಕ ವಿಭಿನ್ನ ದಾರಿಯನ್ನು ಹಿಡಿಯುತ್ತಿವೆ.

ಉದ್ಯೋಗದಲ್ಲಿರುವ ಮಹಿಳೆಯರು, ರೈತರು, ಶಿಕ್ಷಕರು, ವೈದ್ಯರು, ಕಾರ್ಮಿಕರು - ಇವರ ಬದುಕನ್ನು ಸಹಜವಾಗಿ ತೋರಿಸುವ ಪ್ರಯತ್ನಗಳು ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆಯುತ್ತಿವೆ. ಪ್ರೇಕ್ಷಕರಿಗೂ ಇಂದು ಹೊಣೆಗಾರಿಕೆಯಿದೆ. ನಾವು ನೋಡುವುದನ್ನೆಲ್ಲ ಬದುಕಿನ ಮಾದರಿಯೆಂದು ಒಪ್ಪಿಕೊಳ್ಳದೆ ಅದು ಕಲ್ಪಿತ ನಿರೂಪಣೆ ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು. ಸೌಂದರ್ಯವು ಚಿನ್ನದ ತೂಕ ದಲ್ಲಲ್ಲ; ವ್ಯಕ್ತಿತ್ವದ ಬೆಳಕಿನಲ್ಲಿ ಇದೆ ಎಂಬ ಮೌಲ್ಯವನ್ನು ಮಕ್ಕಳಿಗೂ ಯುವಜನರಿಗೂ ತಿಳಿಸಬೇಕು.