N Jayaram Shetty Column: ಮಾತಿನಿಂದಲೇ ಬದುಕು !
ಎರಡು ಕಡೆಯವರು ಗುರ್-ಗುರ್ ಎಂದು ಸ್ವಲ್ಪ ಗರಂ ಆಗುವ ವೇಳೆ, ಶಾಂತಿಪ್ರಿಯರೊಬ್ಬರು ಹೀಗೆ ಹೇಳಬಹುದಲ್ಲವೆ? ‘ಸರಿಯಪ್ಪ ನಾವು ಕೂತು ಮಾತನಾಡುವ’! ಇಲ್ಲೇ ನೋಡಿ, ಸಂವವನ/ಮಾತಿನಲ್ಲಿ ನಾವು ಮಾಡಿಕೊಳ್ಳುವ ಒಂದು ಸಣ್ಣ ಸುಧಾರಣೆ ದೊಡ್ಡ ಪರಿಣಾಮಕ್ಕೆ ನಾಂದಿಯಾಗ ಬಹುದು


ಡಾ. ಎನ್ ಜಯರಾಮ ಶೆಟ್ಟಿ
ನಮ್ಮ ಬದುಕಿನ ಒಂದು ಉದ್ದೇಶವೆಂದರೆ, ಘರ್ಷಣೆ ಇಲ್ಲದೇ, ಜಗಳವಿಲ್ಲದೇ ಬದುಕುವುದು. ಇಂತಹ ಬದುಕಿಗೆ ಮುಖ್ಯವಾಗಿ ಬೇಕಾಗಿರುವುದು ಹಿತವಾದ ಮಾತು!
ನಮ್ಮ ಬದುಕಿನಲ್ಲಿ ನಾವು ಆಡುವ ಮಾತುಗಳಿಗೆ ಬಹಳ ಪ್ರಸ್ತುತತೆ ಮತ್ತು ಶಕ್ತಿಯಿದೆ. ‘ಮಾತು ಮನೆಕೆಡಿಸಿತು, ತೂತು ಒಲೆ ಕೆಡಿಸಿತು’ ಎನ್ನುವ ಹಳ್ಳಿ ಮಾತು ಎಷ್ಟೊಂದು ಅರ್ಥಪೂರ್ಣ ವಾದುದು ನೋಡಿ. ಅಡುಗೆ ಮನೆಯಿಂದ ಮೊದಲ್ಗೊಂಡು ದೇಶ ಆಳುವ ವ್ಯವಸ್ಥೆ ತನಕ ಅಲ್ಲಿಯ ಮಾತುಗಳೇ ಸಾಕು ಸಂಬಂಧಗಳನ್ನು ಹಸನಾಗಿಸಲು ಅಥವಾ ಹದಗೆಡಿಸಲು. ಮನುಷ್ಯ ಮನುಷ್ಯ ರೊಳಗಿನ ಬಾಂಧವ್ಯ, ವ್ಯವಸ್ಥೆಗಳೊಳಗಿನ ಜೋಡಣೆ, ಸೇವಾ ವಿಸ್ತರಣೆ, ವಸ್ತುಗಳ ವಿತರಣೆ, ಸಮಸ್ಯೆ- ವೈಮನಸ್ಸು ನಿವಾರಣೆ ಹಾಗೆ ಇನ್ನೆಷ್ಟೋ ಪ್ರಕ್ರಿಯೆಗಳ ಹಿಂದಿನ ಆಧಾರ ಸ್ತಂಭವೇ ನಾವು ನಡೆಸುವ ಮಾತುಕತೆ. ಇದು ಕೇವಲ ಮಾತಿಗೆ ಸೀಮಿತವಾದುದಲ್ಲ. ಮಾತು-ಕತೆ ಒಂದು ಸಂಬಂಧ ಒಗ್ಗೂಡಿಸುವ ಮಾಂತ್ರಿಕ ಶಕ್ತಿ ಮತ್ತು ಯುಕ್ತಿಯನ್ನುಹೊಂದಿದ್ದಾಗಿದೆ.
ಎರಡು ಕಡೆಯವರು ಗುರ್-ಗುರ್ ಎಂದು ಸ್ವಲ್ಪ ಗರಂ ಆಗುವ ವೇಳೆ, ಶಾಂತಿಪ್ರಿಯರೊಬ್ಬರು ಹೀಗೆ ಹೇಳಬಹುದಲ್ಲವೆ? ‘ಸರಿಯಪ್ಪ ನಾವು ಕೂತು ಮಾತನಾಡುವ’! ಇಲ್ಲೇ ನೋಡಿ, ಸಂವವನ/ಮಾತಿ ನಲ್ಲಿ ನಾವು ಮಾಡಿಕೊಳ್ಳುವ ಒಂದು ಸಣ್ಣ ಸುಧಾರಣೆ ದೊಡ್ಡ ಪರಿಣಾಮಕ್ಕೆ ನಾಂದಿಯಾಗ ಬಹುದು.
ಇದನ್ನೂ ಓದಿ: Shishir Hegde Column: ಅಮೆರಿಕನ್ನರ ಪುಸ್ತಕ ಪ್ರೀತಿ ನಮ್ಮಲ್ಲೇಕಿಲ್ಲ ?
ಮಾತಿನಲ್ಲಿ ಎಡವಿದವರು ತೊಡರುಗಳನ್ನು ಎದುರಿಸಲೇ ಬೇಕು. ಮಾತೇ ಮೃತ್ಯು, ಮಾತೇ ಮಾಣಿ ಕ್ಯ, ಮಾತಿನಿಂದಲೇ ಸಕಲ ಸಂಪದವೆಂದು ಹಿರಿಯರು ಹೇಳಿದ್ದ ಮಾತನ್ನು ನಾವು ಮರೆಯ ಲುಂಟೆ? ನಮ್ಮ ಮಾತನ್ನು ಕೇಳುವವರು ಯಾರು ಎನ್ನುವುದರ ಮೇಲೆ ನಮ್ಮ ಮಾತು ಅವ ಲಂಬಿತ ಮತ್ತು ಶಕ್ತಿಯುತವಾಗಿರುವುದು. ಆಡುವ ಮಾತು ಒಂದೇ ಆದರೂ, ಕೇಳುಗರು ಅದನ್ನು ಸ್ವೀಕರಿಸುವ ರೀತಿಯಲ್ಲೇ ನಮ್ಮ ಮಾತಿನ ಪರಿಣಾಮ ವ್ಯಕ್ತವಾಗುತ್ತದೆ.
‘ಉಪದೇಶೋ ಹಿ ಮೂರ್ಖಾಣಾಂ ಪ್ರಕೋಪಾಯನ ಶಾಂತಯೇ’ ಎನ್ನುವಂತೆ, ನಾವು ಹೇಳುವ ಮಾತು ಎಷ್ಟೇ ಹಿತಕಾರಿಯಾಗಿದ್ದರೂ, ಮೂರ್ಖರು ಅದನ್ನು ಅಂಗೀಕರಿಸದೆ, ಅದರಿಂದಲೇ ಸಿಟ್ಟಿಗೇಳುತ್ತಾರಂತೆ. ನಮ್ಮ ಮಾತು-ಕತೆ ಹೇಗಿದ್ದರೆ ಚೆನ್ನವೆನ್ನುವುದರ ಬಗ್ಗೆ ತಿಳಿದವವರ ಅಂಬೋ ಣವೇನು?
ಮಾತಿನ ಹಿಂದಿನ ಮನಸ್ಸು
ನಮ್ಮ ಮಾತು ‘ಕತೆ’ಯಾಗಿ ಕಾಣಿಸಬೇಕಾದರೆ, ಅದಕ್ಕೊಂದು ಸದುದ್ದೇಶವಿರಲೇಬೇಕು. ಕುಟಿಲತೆ, ಕುಹಕತನ ಒಳಗಿಟ್ಟು ಹೊರಗಿನಿಂದ ಬೇರೆಯಾಗಿರುವುದು ಅಸಾಧ್ಯ. ಪ್ರಕೃತಿಯಲ್ಲಿ ಹೆಚ್ಚಿನ ಪಶು ಪಕ್ಷಿಗಳು ಹುಟ್ಟುವಾಗಲೇ ಪರಿಪೂರ್ಣವಾಗಿವೆ, ಹುಟ್ಟಿದ ಮೇಲಲ್ಲ. ಆದರೆ ಮನುಷ್ಯ ಜೀವಿಗಳು ಹಾಗಲ್ಲ.
ಹುಟ್ಟುವಾಗಲೇ ಪರಿಪೂರ್ಣವಾದವುಗಳಲ್ಲ, ಜೀವಿತಕಾಲದಲ್ಲಿ ವಿಕಸನಗೊಳ್ಳಬೇಕು, ಪರಿ ಪೂರ್ಣತೆಯತ್ತ ವಾಲಬೇಕು. ಬೆಳೆಯಲು, ಬದಲಾಗಲು ನಮಗೆ ಪರಿಸರ, ಸಂಸ್ಕಾರ, ವಿದ್ಯೆಯಿದೆ ಆದರೆ ಮನಸ್ಸಿದೆಯೇ? ಮನಸ್ಸೇ ನಮ್ಮ ಅಧೀನದಲ್ಲಿ ಇಲ್ಲದಿದ್ದರೆ, ಮನಸ್ಸಿನಿಂದ ಹೊರಡುವ ಮಾತುಗಳು, ಎಷ್ಟರಮಟ್ಟಿಗೆ ಹಿಡಿತಕ್ಕೆ ಸಿಕ್ಕಿಯಾವು? ಇತರರಿಗೆ ಗೋಚರಕ್ಕೆ ಬರುವ ಶರೀರ, ಬಟ್ಟೆ ಬರೆ, ವಸ್ತು, ವಾಹನ ಗಳನ್ನು ನಾವು ಶುದ್ಧವಾಗಿಟ್ಟುಕೊಳ್ಳುತ್ತೇವೆ.
ಆದರೆ ಮನಸ್ಸು ಮತ್ತು ಮಾತುಗಳನ್ನು ಅಷ್ಟೇ ಜತನದಿಂದ ಕಾಪಿಡಬೇಕು. ನಮ್ಮ ವ್ಯಕ್ತಿತ್ವದ ಮಾಪನವೇ ನಮ್ಮ ಮಾತು. ಕೇವಲ ಸಾಧನೆ, ಸಂಪಾದನೆಯಷ್ಟೇ ಮುಖ್ಕವೆನ್ನುವವರು ಈ ಮಾತ ನ್ನು ಅಗತ್ಯ ಗಮನಿಸಬೇಕು.
ಸಿಡುಕುತನ, ಸಿನಿಕತನ ಬೇಡ
‘ಸ್ಮಿತವಿರಲಿ ವದನದಲಿ, ಹಿತವಿರಲಿ ವಚನದಲಿ’ ಎನ್ನುವ ಕಗ್ಗವಾಣಿಯನ್ನು ಮೀರಿ ನಾವು ಜೀವಿಸ ಬಹುದೆ? ಸೇವಿಸಬಹುದೆ? ಕೋಪಗೊಂಡಿದ್ದ ಒಬ್ಬ ಸಮುರಾಯಿ (ಸೈನಿಕ) ಧ್ಯಾನದಲ್ಲಿರುವ ಝೆನ್ ಗುರುಗಳಿಗೆ ದಬಾಯಿಸಿ ಕೇಳಿದ್ದ ‘ಹೇಳಿ, ಈಗಲೇ ಹೇಳಿ ಸ್ವರ್ಗ ಮತ್ತು ನರಕದ ಮಧ್ಯೆ ಇರುವ ವ್ಯತ್ಯಾ ಸವೇನು?’ ಗುರುಗಳು ಆತನನ್ನು ದುರುಗುಟ್ಟಿ ಹೇಳುತ್ತಾರೆ, ‘ನಿನಗೇಕೆ ಅದರ ಉಸಾಬರಿ, ನಡೆಯಿ ಲ್ಲಿಂದ’. ಆ ಸೈನಿಕನು ಸಿಟ್ಟಿನಿಂದ ಕತ್ತಿ ಎತ್ತಿ ನಿಂತಾಗ, ಗುರುಗಳು ಹೇಳುತ್ತಾರೆ, ‘ನೋಡಪ್ಪ ಇದುವೇ ನರಕ.’ ತಕ್ಷಣ ತನ್ನ ತಪ್ಪು ಅರಿವಾಗಿ, ಆ ಸೈನಿಕ ಕತ್ತಿ ಕೆಳಗಿಳಿಸಿದ.
ನಸು ನಕ್ಕು ಗುರುಗಳು ಹೇಳುತ್ತಾರೆ, ‘ತಿಳಿಯಿತೇ, ಇದೇ ಸ್ವರ್ಗ’. ಇದೊಂದು ಕತೆ, ವಾಸ್ತವ ಬೇರೆ ಎಂದು ಹೇಳಬೇಡಿ. ಬದುಕಿನಲ್ಲಿ ನಾವು ಅದೆಷ್ಟು ಬಾರಿ ಕತ್ತಿ ಎತ್ತಿಲ್ಲ, ಕತ್ತಿ ಇಳಿಸಿಲ್ಲ? ನಮ್ಮ ಸಂವ ಹನದಲ್ಲೂ ಅಷ್ಟೆ, ಕತ್ತಿ ಎತ್ತದೇ ಅರ್ಥಾತ್ ಘರ್ಷಣೆಗೆ ಒಳಗಾಗದೆ ಮಾತು ಆಡಲು, ಕೆಲಸ ಮಾಡಲು, ಬದುಕಲು ಕಲಿಯೋಣ.
ಬಿತ್ತಿದಂತೆ ಬೆಳೆ ಕಟ್ಟಿದಂತೆ ಕೊನೆ ಒಂದೇ ಸುತ್ತಿನಲ್ಲಿ ಮಾತು ಫಲಿಸದು, ಒಂದೇ ಪಟ್ಟಿನಲ್ಲಿ ಜಟ್ಟಿ ಗೆಲ್ಲನು. ನಮ್ಮ ಮಾತು ನೀರಿನಂತೆ ಹರಿದು, ಒಂದು ಕಡೆ ನೆಲೆಕಾಣಬೇಕು. ಹರಿವಿನ ವಿರುದ್ಧ ಹೋಗಲಾಗದು. ಅಣೆಕಟ್ಟು ಕಟ್ಟಿದರೂ ಬಿಡುವ ನೀರನ್ನು ಬಿಡಲೇ ಬೇಕಲ್ಲವೆ? ಸಂವಹನದಲ್ಲೂ ಈ ಪ್ರಕೃತಿ ನಿಯಮ ಅನ್ವಯವಾಗುತ್ತದೆ. ಮಾಲೀಕ ನೂರಾರು ನೌಕರರ ಆಶೋತ್ತರಗಳನ್ನು ಕೆಲಸ ಒದಗಿಸುವ ಮೂಲಕ ಕಟ್ಟಿ ಹಾಕುತ್ತಾನೆ.
ನೀರನ್ನು ಸಂಗ್ರಹಿಸಿ, ಊರೂರುಗಳಿಗೆ ಕುಡಿಯಲು ಬಿಡುವಂತೆ, ಉದ್ಯೋಗಪತಿ ಸಂಪತ್ತನ್ನು ಸಂಗ್ರ ಹಿಸಿ ಬೆಳೆಯುತ್ತಾನೆ, ಇತರರನ್ನು ಬೆಳೆಸುತ್ತಾನೆ. ಈ ನಿಯಮ ಮೇಲ್ನೋಟಕ್ಕೆ ಕಟುವಾಗಿ ಕಂಡರೂ, ಒಳಗೊಳಗೆ ಅದರಲ್ಲಿ ಕಾರುಣ್ಯವೂ ಜಿನುಗುತ್ತಿರುತ್ತದೆ. ನಮ್ಮ ಮಾತುಕತೆಯಲ್ಲೂ ಕೊಡುವ-ಕೊಳ್ಳುವ, ಗೆಲ್ಲುವ-ಸೋಲುವ ಪ್ರಕ್ರಿಯೆಗಳು ಇರಲೇ ಬೇಕು. ಮಾತಿನಲ್ಲಿಯ ಅಂತರಾಳದ ಒಳ್ಳೆಯ ತನ, ಗಟ್ಟಿತನ ಮತ್ತು ನಿಯತ್ತನ್ನು ನಾವು ಮನವಿಟ್ಟು ಸ್ವೀಕರಿಸಬೇಕು. ನಮ್ಮ ಮಾತನ್ನು ಒಪ್ಪ ದವರು ನಮ್ಮ ವಿರುದ್ಧವಿಲ್ಲ, ಒಪ್ಪುವವರು ನಮ್ಮ ಜೊತೆ ಇರುವ ಭರವಸೆಯೂ ಇರದು. ಎಲ್ಲವೂ ತಾತ್ಕಾಲಿಕ, ಎಲ್ಲವೂ ಸಾಂಧರ್ಭಿಕವೆಂದು ತಿಳಿದು ವ್ಯವಹರಿಸಿದಾಗ ಘರ್ಷಣೆ ಇಲ್ಲವಾಗುತ್ತದೆ, ಬದುಕು ಇನ್ನಷ್ಟು ಸಹ್ಯವಾಗುತ್ತದೆ.