L P Kulkarni Column: ಸ್ಟಿಫನ್ ಹಾಕಿಂಗ್: ವಿಶ್ವ ಉಗಮದ ರಹಸ್ಯ ತಿಳಿಸಿದ್ದ ವಿಜ್ಞಾನಿ
ನರ ಸಂಬಂಧಿ ಕಾಯಿಲೆಗೆ ತುತ್ತಾಗಿ, ಸರಿಯಾಗಿ ಚಲಿಸಲು, ವೀಕ್ಷಿಸಲು, ಕೇಳಲು, ಮಾತನಾ ಡಲು ಆಗದೇ ತನ್ನ ಇಡೀ ಜೀವನವನ್ನೆಲ್ಲಾ ಗಾಲಿ ಕುರ್ಚಿಯ ಮೇಲೆ ಕುಳಿತು ಕಳೆದ, ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾಗಿ, ಪ್ರೊಫೆಸರ್ ಆಗಿ ಜಗದ್ವಿಖ್ಯಾತಿ ಗಳಿಸಿ, ಕೇವಲ 26 ವರ್ಷಕ್ಕೆ ಮರಣ ಹೊಂದುತ್ತಾನೆಂದು ಭಾವಿಸಿದ್ದ, ವೈದ್ಯಲೋಕಕ್ಕೆ ಸವಾಲೆಸೆದು 76 ವರ್ಷ ಸಾರ್ಥಕ ಜೀವನ ನಡೆಸಿದ ಆ ಮಹಾನ್ ಚೇತನವೇ ವಿಜ್ಞಾನಿ ಸ್ಟಿಫನ್ ಹಾಕಿಂಗ್
-
ಎಲ್.ಪಿ.ಕುಲಕರ್ಣಿ, ಬಾದಾಮಿ
ವಿಜ್ಞಾನಿ ಸ್ಟಿಫನ್ ಹಾಕಿಂಗ್‌ರವರು ಹಲವು ದಶಕಗಳ ಕಾಲ ವಿಜ್ಞಾನ ಕ್ಷೇತ್ರದಲ್ಲಿ ಎರಡನೇ ಐನ್‌ಸ್ಟಿನ್ ಎನ್ನಬಹುದಾದ ಮಟ್ಟಿಗೆ ತಮ್ಮ ಬುದ್ಧಿಮತ್ತೆಯಿಂದ ಹೆಸರು ವಾಸಿಯಾದರು. ಇಂದು (ಜನವರಿ 8) ಸ್ಟಿಫನ್ ಹಾಕಿಂಗ್‌ರ ಜನ್ಮಸ್ಮರಣೆ. ತನ್ನಿಮ್ಮಿತ್ತ ಈ ವಿಶೇಷ ಲೇಖನ.
ಈ ವಿಶ್ವ ಹೇಗೆ ಉಗಮವಾಯಿತು? ಎಂಬ ಪ್ರಶ್ನೆಗೆ ಅವರು, ಉಗಮವಾಗಲಿಲ್ಲ, ಅದು ಅಲ್ಲಿಯೇ ಇದೆ ಎಂದು ಚುರುಕಾಗಿ ಉತ್ತರಿಸಿದ್ದರು. ಹಾಗಾದರೆ ವಿಶ್ವದ ಆದಿ ಹೇಗೆ? ಅಂತ್ಯ ಹೇಗೆ?’ ಎಂಬಿತ್ಯಾದಿ ಪ್ರಶ್ನೆಗಳು ಆಗ ದಿನನಿತ್ಯ ಚರ್ಚೆಯಾಗುತ್ತಿದ್ದವು. ‘ದೇವರು ಈ ವಿಶ್ವ ವನ್ನು ಸೃಷ್ಟಿಸಿ ಕಾಪಾಡುತ್ತಿದ್ದಾನೆ ಎನ್ನುವುದಕ್ಕೂ ವಿಶ್ವಕ್ಕೆ ಒಂದು ಆದಿ, ಅಂತ್ಯವಿದೆ ಎನ್ನುವುದಕ್ಕೂ ಸಂಬಂಧವಿಲ್ಲ, ವೃತ್ತಕ್ಕೆ ಆದಿ-ಅಂತ್ಯಗಳಿಲ್ಲ ಎನ್ನುವುದಕ್ಕೂ ಅದರ ರಚನೆಗೂ ಸಂಬಂಧವಿಲ್ಲ. ವೃತ್ತ ರಚಿಸುವಾಗ ಆದಿ ಅಂತ್ಯಗಳಿದ್ದವು, ರಚಿಸಿದ ಮೇಲೆ? ಹಾಗಾದರೆ ವೃತ್ತವನ್ನು ರಚಿಸಿದವರಾರು?’ ಅವರು ಈ ರೀತಿ ತರ್ಕಬದ್ಧವಾದ ಮರು ಪ್ರಶ್ನೆ ಮಾಡುತ್ತ ತಮ್ಮ ಬೆಂಬಲಿಗರು, ವಿದ್ಯಾರ್ಥಿಗಳು, ವಿಮರ್ಶಕರನ್ನು ದಂಗು ಬಡಿಸಿದ್ದರು.
ನರ ಸಂಬಂಧಿ ಕಾಯಿಲೆಗೆ ತುತ್ತಾಗಿ, ಸರಿಯಾಗಿ ಚಲಿಸಲು, ವೀಕ್ಷಿಸಲು, ಕೇಳಲು, ಮಾತನಾ ಡಲು ಆಗದೇ ತನ್ನ ಇಡೀ ಜೀವನವನ್ನೆಲ್ಲಾ ಗಾಲಿ ಕುರ್ಚಿಯ ಮೇಲೆ ಕುಳಿತು ಕಳೆದ, ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾಗಿ, ಪ್ರೊಫೆಸರ್ ಆಗಿ ಜಗದ್ವಿಖ್ಯಾತಿ ಗಳಿಸಿ, ಕೇವಲ 26 ವರ್ಷ ಕ್ಕೆ ಮರಣ ಹೊಂದುತ್ತಾನೆಂದು ಭಾವಿಸಿದ್ದ, ವೈದ್ಯಲೋಕಕ್ಕೆ ಸವಾಲೆಸೆದು 76 ವರ್ಷ ಸಾರ್ಥಕ ಜೀವನ ನಡೆಸಿದ ಆ ಮಹಾನ್ ಚೇತನವೇ ವಿಜ್ಞಾನಿ ಸ್ಟಿಫನ್ ಹಾಕಿಂಗ್.
ಈಗ ಅವರೇನಾದರೂ ಬದುಕಿದ್ದರೆ ತನ್ನ 84ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಸ್ಟಿಫನ್ ಹಾಕಿಂಗ್ 1942ರ ಜನವರಿ 8ರಂದು ಆಕ್ಸ್ ಫರ್ಡ್‌ನಲ್ಲಿ ಜನಿಸಿದರು. ಅಂದು ಇಟಲಿಯ ಪ್ರಖ್ಯಾತ ವಿಜ್ಞಾನಿ ಗೆಲಿಲಿಯೋ ಗೆಲಿಲಿಯೊ ಅವರ 300ನೇ ಪುಣ್ಯತಿಥಿ ಇತ್ತು. ‘ಆ ದಿನ ಹುಟ್ಟಿದ ಸಾವಿರಾರು ಮಕ್ಕಳ ಪೈಕಿ ನಾನೂ ಒಬ್ಬನಾದದ್ದು ಒಂದು ಆಕಸ್ಮಿಕ’ ಎಂದು ಸ್ಟಿಫನ್ ಹೇಳಿಕೊಂಡಿದ್ದುಂಟು.
ಇದನ್ನೂ ಓದಿ: L P Kulkarni Column: ಸೆಲ್ಸಿಯಸ್ ಎಂಬ ಹೆಸರು ಹೇಗೆ ಬಂತು ?
ತಾಯಿ ಇಸೊಬೆಲ್ಲ ಹಾಗೂ ತಂದೆ ಫ್ರಾಂಕ್ ಹಾಕಿಂಗ್‌ರವರ ಮುದ್ದಿನ ಮಗನೇ ಸ್ಟಿಫನ್. ತಂದೆ ಫ್ರಾಂಕ್ ವೈದ್ಯಕೀಯ ಸಂಶೋಧನೆಗಳ ರಾಷ್ಟ್ರೀಯ ಸಂಸ್ಥೆಯಲ್ಲಿ, ಒಂದು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಮಾಣಿಕರಾದ ಫ್ರಾಂಕ್ ತಮಗೆ ಬರುವ ಕನಿಷ್ಟ ಸಂಬಳದಲ್ಲಿಯೇ ಜೀವನ ನಡೆಸುತ್ತಿದ್ದರು.
ಸ್ಟಿಫನ್ ಎಂಟು ವರ್ಷದವರಿದ್ದಾಗ ಅವರು ‘ಅಲ್ಬಾನ’ ಎಂಬ ಒಂದು ಪುಟ್ಟ ಊರಿಗೆ ವಲಸೆ ಬಂದರು. ಅಲ್ಲಿಯೇ ಸ್ಟಿಫನ್ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಮುಂದೆ 1962ರಲ್ಲಿ ಆಕ್ಸ ಫರ್ಡ್ ವಿಶ್ವ ವಿದ್ಯಾಲಯದಿಂದ ಮೂರು ವರ್ಷದ ವಿಜ್ಞಾನ ಪದವಿ ಪಡೆದರು, ನಂತರ ಕಾಸ್ಮಾಲಜಿಯಲ್ಲಿ ಪಿ.ಎಚ್.ಡಿ.ಯನ್ನೂ ಸಹ ಪೂರ್ಣಗೊಳಿಸಿದರು.
ಜೀನ್ ಜೊತೆ ವಿವಾಹವೂ ಆಯಿತು. 1963ರಲ್ಲಿ ನರಕೋಶ ಸಂಬಂಧಿ ಕಾಯಿಲೆಗೆ ತುತ್ತಾದ ಹಾಕಿಂಗ್ ಕ್ರಮೇಣ ಪಾರ್ಶ್ವವಾಯು ಪೀಡಿತರಾಗುತ್ತ ಬಂದರು. ಗುಣಪಡಿಸಲಾಗದ ಈ ಕಾಯಿಲೆಯಿಂದ ಹಾಕಿಂಗ್ ಹೆಚ್ಚು ದಿನ ಬದುಕುವುದೇ ಇಲ್ಲ ಎಂದುಕೊಂಡಿದ್ದ ವೈದ್ಯರಿಗೇ ಅಚ್ಚರಿಯಾಗುವ ಮಟ್ಟಿಗೆ ತಮ್ಮ ಮನೋಬಲದಿಂದ ಹಾಕಿಂಗ್ ಬದುಕುಳಿದರು.
ಹಲವು ದಶಕಗಳ ಕಾಲ ವಿಜ್ಞಾನ ಕ್ಷೇತ್ರಕ್ಕೆ ದುಡಿದರು. ಎರಡನೇ ಐನ್‌ಸ್ಟಿನ್ ಎನ್ನಬಹು ದಾದ ಮಟ್ಟಿಗೆ ಅವರು ತಮ್ಮ ಬುದ್ಧಿಮತ್ತೆಯಿಂದ ಹೆಸರುವಾಸಿಯಾದರು. 1975ರಲ್ಲಿ ದೇಶ ಕಾಲಗಳ ಸ್ಥೂಲ ವ್ಯವಸ್ಥೆ ಎಂಬ ಪುಸ್ತಕವನ್ನೂ ಬರೆದು ಹಾಕಿಂಗ್ ವಿಕಿರಣ ಎಂಬ ವಾದವನ್ನು ಮಂಡಿಸಿದ್ದೂ ಆಯಿತು.
ಕೇವಲ ಮೂವತ್ತೆರಡನೇ ವಯಸ್ಸಿಗೆ ಸರ್ ಬಿರುದಿನೊಂದಿಗೆ ಸರ್ ಸ್ಟಿಫನ್ ಆದರು. 1975 ರಲ್ಲಿ ಅವರ ವಿಜ್ಞಾನ ಸಾಧನೆ ಪರಿಗಣಿಸಿ ಪೋಪ್ ಅವರಿಂದ ಸುವರ್ಣ ಪದಕ ಪಡೆದರು. 1979ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಲ್ಯುಕೇಸಿಯನ್ ಪ್ರೋಫೆಸರ್ ಎಂಬ ಗೌರವ ಪಡೆದರು.
ಭೌತಶಾಸ್ತ್ರದಲ್ಲಿ ಇಷ್ಟೆಲ್ಲಾ ಸಾಧನೆಗೈದರೂ ಕೊನೆಗೂ ಅವರಿಗೆ ನೊಬಲ್ ಪಾರಿತೋಷಕ ದೊರಕದೇ ಹೋಗಿದ್ದು ಬಹಳ ಬೇಸರದ ಸಂಗತಿ. ಡಾಕ್ಟರೇಟ್ ಪದವಿ ಪಡೆದ ನಂತರ 8 ವರ್ಷಗಳ ಕಾಲ ಹಲವು ವಿಜ್ಞಾನ ಸಂಸ್ಥೆಗಳಲ್ಲಿ ಖಗೋಳವಿಜ್ಞಾನ, ಬ್ರಹ್ಮಾಂಡ ಅಧ್ಯಯನ, ನಕ್ಷತ್ರ ನಿಹಾರಿಕೆ ಕುರಿತು ಅಧ್ಯಯನ ನಡೆಸಿದರು, ಸಂಶೋಧನಾ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶಕರಾದರು, ಪ್ರೌಢಪ್ರಬಂಧಗಳನ್ನು ಪ್ರಕಟಿಸಿದರು.
ಹಲವು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ವಿಶ್ವದ ಉಗಮದ ಬಗೆಗೆ ‘ಮಹಾಸ್ಫೋಟ’ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಫ್ರೆಡ್ ಹಾಯ್ಲ್ ಅವರನ್ನು ಎದುರು ಹಾಕಿಕೊಂಡರು. ಹಲವು ವರ್ಷಗಳಿಂದ ಗೆಹ್ ರಿಗ್ಸ್ ಕಾಯಿಲೆ ಎಂದೇ ಹೆಸರಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎಂಬ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿ ವಿದ್ಯುತ್ ಚಾಲಿತ ಗಾಲಿ ಕುರ್ಚಿಯನ್ನೇ ಅವಲಂಬಿಸಿದ್ದರು.
ವಿಪರೀತ ಅಶಕ್ತತೆ ಹೊಂದಿದ್ದರ ಪರಿಣಾಮ ಸರಿಯಾಗಿ ಮಾತನಾಡಲು ಬಾರದ, ಕಣ್ಣು ಸರಿಯಾಗಿ ಕಾಣದ, ಕಿವಿ ಕೇಳದ, ಕೈ ಕಾಲು ಮುಂತಾದ ದೇಹದ ಅವಯವಗಳು ಸರಿ ಯಾದ ಚಲನೆಯಲ್ಲಿರದ, ಆದರೆ ಮೆದುಳು ಮಾತ್ರ ಚುರುಕಾಗಿ ಕಾರ್ಯನಿರ್ವಹಿಸುವ ಜಗತ್ತಿನ ಯಾವುದಾದರೂ ಒಬ್ಬ ವ್ಯಕ್ತಿ, ವಿಜ್ಞಾನಿಯು ಇದುವರೆಗೂ ಇದ್ದರೆ ಅದು ಪ್ರೊ.ಸ್ಟಿಫನ್ ಹಾಕಿಂಗ್ ಮಾತ್ರ, ಜೊತೆಗೆ ಅವರೊಬ್ಬ ಪ್ರೊಫೆಸರ್ ಕೂಡಾ.! ಈ ವಿಶೇಷತೆಯಿಂದಲೇ ಅವರು ಜಗತ್ತಿನಲ್ಲಿ ಪ್ರಸಿದ್ಧ ವಿಜ್ಞಾನಿ ಎನಿಸಿದರು. ಸ್ಟಿಫನ್ 76 ವರ್ಷ ಬದುಕಿ ವೈದ್ಯಲೋಕಕ್ಕೆ ಸವಾಲೆಸದದ್ದು ಒಂದು ಪವಾಡವೇ ಸರಿ.!
ತಾವು ಚಿಕಿತ್ಸೆ ಪಡೆಯುತ್ತಿದ್ದ ಅನುಭವಗಳೇ ಅವರಿಗೆ ಜೀವ ತುಂಬಿದ್ದವು. ತಮ್ಮ ಅನುಭವ ಗಳನ್ನು ನೆನೆಸಿಕೊಳ್ಳುತ್ತಾ ನನ್ನ ಹಾಸಿಗೆಯ ಎದುರಿನ ಹಾಸಿಗೆಯಲ್ಲಿ ಒಬ್ಬ ಸಣ್ಣ ಹುಡುಗ ನಿದ್ದ.
ಅವನಿಗೆ ರಕ್ತದ ಅರ್ಬುದ (ಬ್ಲಡ್ ಕ್ಯಾನ್ಸರ್) ರೋಗವಿತ್ತು. ಅವನು ನೋವಿನಿಂದ ನರಳಿ ಅಸುನೀಗಿದ. ನನ್ನ ಸ್ಥಿತಿ ಅವನದಕ್ಕಿಂತ ಉತ್ತಮವಾಗಿದೆ, ನನಗೆ ಅಂಥಹ ಭಯಂಕರ ನೋವುಗಳಿಲ್ಲ. ನನ್ನ ಸ್ಥಿತಿಯಿಂದ ನನಗೆ ಬೇಸರವಾದಾಗಲೆಲ್ಲಾ ನಾನು ಆ ಹುಡುಗನನ್ನು ನೆನೆಸಿಕೊಳ್ಳುತ್ತೇನೆ ಎಂದಿದ್ದರು. ಇಂತಹ ಸಾಧಕ 14 ಮಾರ್ಚ್ 2018ರಂದು ಅವರೇ ಅಧ್ಯಯನ ಮಾಡುತ್ತಿದ್ದ ಕಪ್ಪುರಂಧ್ರದಲ್ಲಿ ಲೀನವಾದರು.
1974 ಸ್ಟಿಫನ್‌ರಿಗೆ ಆಗ ಕೇವಲ 32 ವರ್ಷ ವಯಸ್ಸು, ಆಗಲೇ ಅವರು ಪ್ರತಿಷ್ಠಿತ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಒಬ್ಬ ಪುಸ್ತಕ ಪ್ರಕಾಶಕರು ಇವರಲ್ಲಿಗೆ ಬಂದು, ನೀವು ಇದುವರೆಗೂ ಕಂಡು ಹಿಡಿದ ಎಲ್ಲ ವಿಚಾರಗಳನ್ನು ಒಳಗೊಂಡಂತಹ ಒಂದು ಪುಸ್ತಕ ಬರೆದು ಕೊಡಿ ಎಂದಿದ್ದರಂತೆ.
ಇದಕ್ಕೆ ಒಪ್ಪಿಗೆ ಸೂಚಿಸಿದ ಹಾಕಿಂಗ್ ಮೂರು ವರ್ಷ ಅಧ್ಯಯನ ಮಾಡಿ ಒಂದು ಪುಸ್ತಕ ಬರೆದು ಕೊಟ್ಟರಂತೆ. ಪುಸ್ತಕವನ್ನು ಕಂಡ ಆ ಸಂಪಾದಕ ಮರುದಿನವೇ ಇವರ ಮನೆಗೆ ಬಂದು ಸ್ಟಿಫನ್, ನೀವು ಪುಸ್ತಕದಲ್ಲಿ ಗಣಿತ ಸೂತ್ರಗಳನ್ನೆಲ್ಲಾ ತುಂಬಿಸಿ ಬರೆದಿದ್ದೀರಿ. ಇದು ವಿಜ್ಞಾನೇತರ ವ್ಯಕ್ತಿಗಳಿಗೆ ಅರ್ಥವಾಗದು.
ಅದು ಬಿಡಿ ನಿಮ್ಮ ಪುಸ್ತಕ ನೋಡಿ ನನಗೇ ಒಂದು ಅರ್ಥವಾಗಲಿಲ್ಲ ಎಂದು ಹೇಳಿದರಂತೆ. ಪುಸ್ತಕ ಮೂವತೈದು ಭಾಷೆಗಳಿಗೆ ಅನುವಾದಗೊಂಡು ಲಂಡನ್‌ನ ಸಂಡೇ ಟೈಮ್ಸ್ ನಿಯತ ಕಾಲಿಕೆಯ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ರಾರಾಜಿಸಿದ್ದು ಈಗ ಇತಿಹಾಸ. ತಮಗಿದ್ದ ಇಂತಹ ಬಹುಅಂಗವೈಕಲ್ಯದ ನಡುವೆಯೂ ಅವರು ಸಾಕಷ್ಟು ಉತ್ಕೃಷ್ಟ ಕೃತಿಗಳನ್ನು ಬರೆದರು ಎಂದರೆ ನಮಗೆಲ್ಲಾ ಆಶ್ಚರ್ಯವೆನಿಸಬಹುದು. ಅವರ ಕೃತಿಗಳೆಂದರೆ ಗ್ರಾಂಡ್ ಡಿಸೈನ್, ಎ ಬ್ರೀಫ್ ಹಿಸ್ಟರಿ ಆಫ್ ಟೈಮ್, ಬ್ಲಾಕ್ ಹೋಲ್ಸ್ ಇತ್ಯಾದಿ.
ಕೃಷ್ಣ ರಂಧ್ರದ ಕುರಿತಾದ ಸಂಶೋಧನೆ ಕೈಗೊಂಡು ಅದರ ಅಸ್ತಿತ್ವದ ಬಗ್ಗೆ ತಿಳಿಸಿದಾಗ ಅನೇಕ ಪತ್ರಿಕೊದ್ಯಮಿಗಳು, ಸಾರ್ವಜನಿಕರು, ಸ್ಟಿಫನ್ ಹಾಕಿಂಗ್‌ರನ್ನೇ ‘ಕೃಷ್ಣ ವಿವರ’ ಎಂದು ಕರೆದರು.
2014ರಲ್ಲಿ ಎ.ಎಲ್.ಎಸ್ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸಲು ಐಸ್ ಬಕೇಟ್ ಚಾಲೆಂಜ್ ಎಂಬ ಆಟದ ಪಂತಾಹ್ವಾನವನ್ನು ಸ್ವೀಕರಿಸಿ ಗಾಲಿ ಕುರ್ಚಿಯ ಮೇಲೆ ಕುಳಿತ ಸ್ಟಿಫನ್ ತನ್ನ ಮೇಲೆ ಮಂಜುಗಟ್ಟಿದ ಆ ಶೈತ್ಯ ನೀರನ್ನು ಬಕೆಟ್‌ಗಟ್ಟಲೇ ಸುರಿಸಿಕೊಂಡು ಬಿಟ್ಟರು, ಕ್ಷಣದಲ್ಲಿಯೇ ಅಲ್ಲಿ ನೆರೆದ ಜನ ದಂಗಾಗಿ ಹೋದರು. ಹೇಳುತ್ತಾ ಹೊರಟರೆ ಸ್ಟೀಫನ್‌ರ ಜೀವನೋತ್ಸಾಹ, ತರ್ಕಬದ್ಧ ಉನ್ನತ ವಿಚಾರಗಳು, ಸಾಧನೆಗಳಿಗೆ ಕೊನೆಯೇ ಇಲ್ಲದಂತಾಗುತ್ತದೆ, ಅವರ ಸಾಧನೆಗಳು ಮಾತ್ರ ಈ ವಿಶ್ವ ಇರುವವರೆಗೂ ಇರುತ್ತವೆ.