L P Kulkarni Column: ಸೆಲ್ಸಿಯಸ್ ಎಂಬ ಹೆಸರು ಹೇಗೆ ಬಂತು ?
ನಮ್ಮ ಮಕ್ಕಳಿಗೆ ನಾವು ದಿನನಿತ್ಯ ಬಳಸುವ ಮೊಬೈಲಿನಂತಹ ಹತ್ತು ಹಲವು ವೈಜ್ಞಾನಿಕ ಉಪಕರಣ ಗಳ ಬಗ್ಗೆ ತಿಳಿಸಿಕೊಡುವುದಷ್ಟೇ ಅಲ್ಲ ಅದರ ಸಂಶೋಧನೆಯ ಹಿಂದಿರುವ ಸಾಧಕರ ಜೀವನಗಾಥೆ ಗಳನ್ನು ಹೇಳಬೇಕು. ಅವರ ಪರಿಶ್ರಮದ ಬಗ್ಗೆ ತಿಳಿಸಿ ಕೊಡಬೇಕು. ಇದರಿಂದ ಪ್ರೇರಣೆ ಗೊಂಡು ಆ ಮಗು ಮುಂದೊಂದು ದಿನ ವಿಜ್ಞಾನಿಯಾಗಬಹುದು.
-
ತನ್ನಿಮಿತ್ತ
ಎಲ್.ಪಿ.ಕುಲಕರ್ಣಿ, ಬಾದಾಮಿ
1742ರಲ್ಲಿ ಸೆಲ್ಸಿಯಸ್ 1710ರಲ್ಲಿ ಸ್ಥಾಪನೆಯಾದ ಅತ್ಯಂತ ಹಳೆಯ, ಉಪ್ಸಲಾದಲ್ಲಿರುವ ರಾಯಲ್ ಸೊಸೈಟಿ ಆಫ್ ಸೈನ್ಸಸ್‌ಗೆ ಒಂದು ಪ್ರಬಂಧದಲ್ಲಿ ಸೆಲ್ಸಿಯಸ್ ತಾಪಮಾಪಕ ವನ್ನು ಪ್ರಸ್ತಾಪಿಸುತ್ತಾನೆ. ಅವನ ಥರ್ಮಾಮೀಟರ್ ಅನ್ನು ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್ ಹಾಗೂ ನೀರಿನ ಘನೀಕರಿಸುವ ಬಿಂದು 0 ಡಿಗ್ರಿ ಸೆಲ್ಸಿಯಸ್ ಮೌಲ್ಯ ದೊಂದಿಗೆ ಮಾಪನಾಂಕ ಮಾಡಲಾಗಿರುತ್ತದೆ.
ನಮಗಿಂದು ಟಿ.ವಿ, ಮೊಬೈಲ್, ವಾಷಿಂಗ್ ಮಷಿನ್, ಎಸಿ, ಕಾರು, ವಿಮಾನ ಅಷ್ಟೇ ಅಲ್ಲ ರಾಕೆಟ್, ಮಿಸೈಲ್....ಮುಂತಾದ ಸಂಗತಿಗಳ ಬಗ್ಗೆ ಗೊತ್ತು. ಆದರೆ, ಅವುಗಳನ್ನು ಸಂಶೋಧಿಸಲು ತಮ್ಮ ಇಡೀ ಜೀವಿತಾವಧಿಯನ್ನು ಅಧ್ಯಯನ, ಅಧ್ಯಾಪನಗಳಿಗಾಗೇ ಮುಡಿಪಾಗಿಟ್ಟ ವಿಜ್ಞಾನಿಗಳ ಬಗ್ಗೆ ಕೇಳಿದರೆ ನಮಗೆ ಗೊತ್ತಿಲ್ಲ. ಟಿವಿ ಗೊತ್ತು; ಆದರೆ, ಅದರ ಸಂಶೋಧಕ ಯಾರೆಂದು ಕೇಳಿದರೆ ತಡವರಿಸುತ್ತೇವೆ. ಅದು ಹೋಗಲಿ, ನಮಗಿಂದು ಚಿರಪರಿಚಿತವಾಗಿರುವ ಮೊಬೈಲ್ ಗೊತ್ತು, ಅದರ ಬಳಕೆಯೂ ಗೊತ್ತು. ಆದರೆ, ಅದರ ಸಂಶೋಧಕ ಯಾರೆಂದು ಕೇಳಿದರೆ ಉತ್ತರ ಹುಡುಕಲು ಅದೇ ಮೊಬೈಲಿನಲ್ಲಿ ಗೂಗಲಿಸುತ್ತೇವೆ.
ನಮ್ಮ ಮಕ್ಕಳಿಗೆ ನಾವು ದಿನನಿತ್ಯ ಬಳಸುವ ಮೊಬೈಲಿನಂತಹ ಹತ್ತು ಹಲವು ವೈಜ್ಞಾನಿಕ ಉಪಕರಣಗಳ ಬಗ್ಗೆ ತಿಳಿಸಿಕೊಡುವುದಷ್ಟೇ ಅಲ್ಲ ಅದರ ಸಂಶೋಧನೆಯ ಹಿಂದಿರುವ ಸಾಧಕರ ಜೀವನಗಾಥೆಗಳನ್ನು ಹೇಳಬೇಕು. ಅವರ ಪರಿಶ್ರಮದ ಬಗ್ಗೆ ತಿಳಿಸಿಕೊಡಬೇಕು. ಇದರಿಂದ ಪ್ರೇರಣೆ ಗೊಂಡು ಆ ಮಗು ಮುಂದೊಂದು ದಿನ ವಿಜ್ಞಾನಿಯಾಗಬಹುದು.
ಅದು ಬಿಟ್ಟು ನಾವಿಂದು ಕೇವಲ ಮನರಂಜನಾ ಕ್ಷೇತ್ರದ ಸಾಧಕರನ್ನೇ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದೇವೆ. ಏನೂ ಅರಿಯದ ಆ ಕಂದಮ್ಮಗಳು ತನ್ನ ನೆಚ್ಚಿನ ಮನರಂಜನಾ ನಾಯಕನ ಸಿಗರೇಟು ಸೇದುವ, ಮದ್ಯಪಾನ ಮಾಡುವ, ಫೈಟ್ ಮಾಡುವ ಮುಂತಾದ ಅವಗುಣಗಳನ್ನೇ ಅನುಕರಣೆ ಮಾಡಿ ಮುಂದೊಂದು ದಿನ ಕುಟುಂಬಕ್ಕೆ, ಸಮಾಜಕ್ಕೆ ಕಂಟಕಪ್ರಾಯ ವ್ಯಕ್ತಿಯಾಗಿ ಬೆಳೆಯುತ್ತದೆ.
ಇದನ್ನೂ ಓದಿ: L P Kulkarni Column: ಮಾನವನ ಮೆದುಳಿನ ಕೋಶದ ಪ್ರಭಾವ
ಈ ಕುರಿತು ಪಾಲಕರು,ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತನೂ ಯೋಚಿಸ ಬೇಕಾದ ತುರ್ತು ಬಂದೊದಗಿದೆ. ಏಳನೇ ತರಗತಿ ಮಕ್ಕಳಿಗೆ ಅಂದು ಶಿಕ್ಷಕರು ಉಷ್ಣ, ತಾಪಮಾಪಕ ಗಳ ಬಗ್ಗೆ ಪಾಠ ಮಾಡುತ್ತಿದ್ದರು. ಘರ್ಷಣೆಯಿಂದ ಶಾಖ ಉತ್ಪತ್ತಿಯಾಗುತ್ತದೆ. ಆದರೆ, ಅದರ ಮಟ್ಟ ಎಷ್ಟಿರುತ್ತದೆ? ಎಂದು ತಿಳಿಸಿಕೊಡುವುದೇ ತಾಪಮಾಪಕಗಳ ಕೆಲಸ. ಅದಕ್ಕಾಗಿ ಶಿಕ್ಷಕರು ಸಾಮಾನ್ಯ ವಾಗಿ ಬಳಸುವ ಸೆಲ್ಸಿಯಸ್ ತಾಪಮಾಪಕವನ್ನು(ಉಷ್ಣತಾಮಾಪಕ) ಮಕ್ಕಳಿಗೆ ತೋರಿಸುತ್ತಾ; ಗಾಜಿನ ಈ ಬಿರಡೆಯ ಮೇಲೆ ಸಂಖ್ಯೆಗಳ ಮಾರ್ಕ್ ಮಾಡಲಾಗಿರುತ್ತದೆ.
ಒಳಗಡೆ ಇರುವ ಗಾಜಿನ ಚಿಕ್ಕದಾದ ನಾಳದ ಕೆಳಗಡೆ ಸಿಲ್ವರ್ ಬಣ್ಣದಂತೆ ಕಾಣುವ ಪಾದರಸವನ್ನು ತುಂಬಲಾಗಿರುತ್ತದೆ. ಉಷ್ಣತೆ ಹೆಚ್ಚಾದಂತೆ ನಳಿಕೆಯಲ್ಲಿ ಪಾದರಸ ಮೇಲಕ್ಕೇರುತ್ತದೆ. ಇದರಿಂದ ನಾವು ನಮ್ಮ ಸುತ್ತಲಿನ ತಾಪ ಎಷ್ಟು ಎಂಬುದನ್ನು ತಿಳಿಯಬಹುದು. ಇದನ್ನು ಸೆಲ್ಸಿಯಸ್ ಅಥವಾ ಡಿಗ್ರಿ ಸೆಲ್ಸಿಯಸ್ ನಲ್ಲಿ ಹೇಳಲಾಗುತ್ತದೆ ಎಂದು ಹೇಳುತ್ತಿದ್ದಂತೆ ತರಗತಿಯ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ತುಂಟ ರಾಜು-‘ಸರ್, ಈ ಸೆಲ್ಸಿಯಸ್ ಎಂಬ ಪದ ಇದಕ್ಕೇಕೆ ಬಂತು?’ ಎಂದು ಕೇಳಿದ.
ಆಗ ಶಿಕ್ಷಕರು, ‘ನೋಡು ರಾಜು; ಬಹುಪಾಲು ವೈಜ್ಞಾನಿಕ ಉಪಕರಣಗಳಲ್ಲಿ ಅಲ್ಲಿನ ಪರಿಮಾಣಗಳ ಮಾನಗಳನ್ನು ಕಂಡುಹಿಡಿದ ವಿಜ್ಞಾನಿಗಳ ಹೆಸರನ್ನು, ಅವರ ಆ ಸಂಶೋಧನೆಯ ದ್ಯೋತಕವಾಗಿ ಅವರನ್ನು ಗೌರವಿಸಲು ಇಡಲಾಗುತ್ತದೆ. ಇಲ್ಲಿಯೂ ತಾಪಮಾಪಕದಲ್ಲಿ ಸೆಲ್ಸಿಯಸ್ ಎಂಬುದು ಖ್ಯಾತ ವಿಜ್ಞಾನಿ ಆಂಡರ್ಸ್ ಸೆಲ್ಸಿಯಸ್ ಅವರ ಹೆಸರೇ ಆಗಿದೆ’ ಎಂದು ಹೇಳಿದರು.
ಆಗ ಮತ್ತೊಬ್ಬ ವಿದ್ಯಾರ್ಥಿನಿ ವರ್ಷಾ,‘ಸರ್, ಹಾಗಾದರೆ ನೀವು ವಿಜ್ಞಾನಿ ಸೆಲ್ಸಿಯಸ್‌ನ ಬಗ್ಗೆ ತಿಳಿಸಿ ಕೊಡುವಿರಾ’ ಎಂದಳು. ಅದಕ್ಕೆ ಶಿಕ್ಷಕರು ಸೆಲ್ಸಿಯಸ್ ಬಗ್ಗೆ ದೀರ್ಘ ವಿವರಣೆ ನೀಡಿದರು. ‘ವಿಜ್ಞಾನಿ ಗಳೆಂದರೇ ಹಾಗೆ. ಅವರು ತಮ್ಮ ಅಂತರ್ದೃಷ್ಟಿ, ಕ್ರಿಯಾಶೀಲತೆ, ಏಕಾಗ್ರತೆ ಮುಂತಾದ ಕೌಶಲಗಳ ಮೂಲಕ ಮನುಕುಲಕ್ಕೆ ಒಳಿತಾಗುವುದನ್ನು ಸಂಶೋಧಿಸುತ್ತಾರೆ.
ಅಂತಹ ಮಹಾನ್ ವ್ಯಕ್ತಿಗಳ ಸಾಲಿಗೆ ಈ ನಮ್ಮ ಆಂಡರ್ಸ್ ಸೆಲ್ಸಿಯಸ್ ಸೇರುತ್ತಾನೆ. ಖಗೋಳ ಶಾಸ್ತ್ರ ಪ್ರಾಧ್ಯಾಪಕ ನಿಲ್ಸ್ ಸೆಲ್ಸಿಯಸ್ ಅವರ ಮಗನಾಗಿ, ಸಸ್ಯಶಾಸ್ತ್ರಜ್ಞ ಓಲೋಫ್ ಸೆಲ್ಸಿಯಸ್ ಅವರ ಸೋದರಳಿಯ ಮತ್ತು ಗಣಿತಜ್ಞ ಮ್ಯಾಗ್ನಸ್ ಸೆಲ್ಸಿಯಸ್ ಮತ್ತು ಖಗೋಳಶಾಸ್ತ್ರಜ್ಞ ಆಂಡರ್ಸ್ ಸ್ಪೋಲ್ ಅವರ ಮೊಮ್ಮಗನಾಗಿ ಈ ನಮ್ಮ ಆಂಡರ್ಸ್ ಸೆಲ್ಸಿಯಸ್ ಸ್ವಿಡನ್ನಿನ ಉಪ್ಸಲಾ ದಲ್ಲಿ ೨೭ನೇ ನವೆಂಬರ್ 1704ರಲ್ಲಿ ಜನಿಸುತ್ತಾನೆ.
ಸೆಲ್ಸಿಯಸ್‌ನ ಕುಟುಂಬವು ಹಾಲ್ಸಿಂಗ್‌ಲ್ಯಾಂಡ್ ಪ್ರಾಂತ್ಯದ ಓವನಾಕರ್‌ನಿಂದ ಬಂದದ್ದು. ಅವನ ಕುಟುಂಬ ವಾಸವಾಗಿರುತ್ತಿದ್ದ ಎಸ್ಟೇಟ್ ಡೋಮಾದಲ್ಲಿತ್ತು. ಇದನ್ನು ಹೋಜೆನ್ ಅಥವಾ ಹೋಗೆನ್ ಎಂದೂ ಕರೆಯುತ್ತಾರೆ. ಸೆಲ್ಸಿಯಸ್ ಎಂಬ ಹೆಸರು ಎಸ್ಟೇಟ್ ಹೆಸರಿನ ಲ್ಯಾಟಿನ್ ರೂಪಾಂತರ ವಾಗಿದೆ. ಲ್ಯಾಟಿನ್ ಭಾಷೆಯಲ್ಲಿ ಸೆಲ್ಸಸ್ ಪದದ ಅರ್ಥ ‘ದಿಬ್ಬ’ ಎಂದಾಗುತ್ತದೆ’ ಎಂದು ಶಿಕ್ಷಕರು ತಿಳಿಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ ಸೆಲ್ಸಿಯಸ್ ಚಿಕ್ಕವಯಸ್ಸಿನಿಂದಲೂ ಗಣಿತ ದಲ್ಲಿ ಚತುರನಾಗಿದ್ದನು. ಹೀಗಾಗಿ ಶಾಲೆ, ಮನೆಗಳಲ್ಲಿ ಶಿಕ್ಷಕರಿಗೆ, ಪಾಲಕರಿಗೆ ಅಚ್ಚುಮೆಚ್ಚಾಗಿದ್ದ. ಮುಂದೆ ಆಂಡರ್ಸ್ ಸೆಲ್ಸಿಯಸ್ ಉಪ್ಸಲಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಾನೆ, ಅಲ್ಲಿ ಅವನ ತಂದೆ ಶಿಕ್ಷಕರಾಗಿದ್ದರು.
1730ರಲ್ಲಿ ಸೆಲ್ಸಿಯಸ್ ಅಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕನಾಗಿ ಸೇರಿಕೊಳ್ಳುತ್ತಾನೆ. ವಿಶೇಷ ವೆಂದರೆ ಪ್ರಸಿದ್ಧ ಸ್ವೀಡಿಷ್ ನಾಟಕಕಾರ, ಕವಿ ಮತ್ತು ನಟ ಜೋಹಾನ್ ಸೆಲ್ಸಿಯಸ್ ಕೂಡ ಸೆಲ್ಸಿಯಸ್‌ನ ಚಿಕ್ಕಪ್ಪನಾಗಿದ್ದ. ಇವರ ಇಡೀ ಕುಟುಂಬದ ಸದಸ್ಯರೆ ಒಂದಿಂದು ಕ್ಷೇತ್ರದಲ್ಲಿ ಸಾಧಕರೇ ಆಗಿದ್ದುದರಿಂದ ಆಂಡರ್ಸ್ ಸೆಲ್ಸಿಯಸ್ ಕೂಡ ಗಣಿತ ಹಾಗೂ ಖಗೋಳಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ.
ಖಗೋಳಶಾಸ್ತ್ರದಲ್ಲಿ ಅಪಾರ ಆಸಕ್ತಿಯಿದ್ದ ಸೆಲ್ಸಿಯಸ್ 1730ರಲ್ಲಿ, ನೋವಾ ಮೆಥಡಸ್ ಡಿಸ್ಟೆಂಟಿಯಮ್ ಸೋಲಿಸ್ ಎ ಟೆರ್ರಾ ಡಿಟರ್ಮಿನಾಂಡಿ (ಭೂಮಿಯಿಂದ ಸೂರ್ಯನಿಗೆ ಇರುವ ಅಂತರವನ್ನು ನಿರ್ಧರಿಸುವ ಹೊಸ ವಿಧಾನ) ವನ್ನು ಪ್ರಕಟಿಸುತ್ತಾನೆ. ಅವನ ಈ ಸಂಶೋಧನೆಯು ಅರೋರಾ ವಿದ್ಯಮಾನಗಳ ಅಧ್ಯಯನವನ್ನು ಸಹ ಒಳಗೊಂಡಿತ್ತಂತೆ. ಈ ಹೊಸ ವಿಧಾನವನ್ನು ಅವನು ತನ್ನ ಸಹಾಯಕ ಓಲೋ- ಹಿಯೋಟರ್‌ನೊಂದಿಗೆ ನಡೆಸುತ್ತಾನೆ.
ಅರೋರಾ ಬೋರಿಯಾಲಿಸ್ ಮತ್ತು ಭೂಮಿಯ ಕಾಂತಕ್ಷೇತ್ರದಲ್ಲಿನ ಬದಲಾವಣೆಗಳ ನಡುವಿನ ಸಂಪರ್ಕವನ್ನು ಸೂಚಿಸಿದ ಮೊದಲ ವ್ಯಕ್ತಿ ಎಂಬ ಖ್ಯಾತಿ ಸೆಲ್ಸಿಯಸ್‌ನದಾಗುತ್ತದೆ. 1733ರಲ್ಲಿ ನ್ಯೂರೆಂಬರ್ಗ್‌ನಲ್ಲಿ, ತಾನು ಸ್ವತಃ ಮತ್ತು ಇತರರು ಮಾಡಿದ ಅರೋರಾ ಬೋರಿಯಾಲಿಸ್‌ನ 316 ಅವಲೋಕನಗಳ ಸಂಗ್ರಹವನ್ನು ಪ್ರಕಟಿಸುತ್ತಾನೆ. ಇದು ಪ್ರಾಜ್ಞರ ಮನಗೆಲ್ಲುತ್ತದೆ.
1730ರ ದಶಕದ ಆರಂಭದಲ್ಲಿ ಸೆಲ್ಸಿಯಸ್ ಆಗಾಗ್ಗೆ ಪ್ರಯಾಣಿಸುತ್ತಿದ್ದನು. ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಸೇರಿದಂತೆ, ಅವನು ಬಹುಪಾಲು ಯುರೋಪಿನ ವೀಕ್ಷಣಾಲಯಗಳಿಗೆ ಭೇಟಿ ನೀಡುತ್ತಾನೆ. ಪ್ಯಾರಿಸ್‌ನ ಲ್ಯಾಪ್ ಲ್ಯಾಂಡ್‌ನಲ್ಲಿ ಮೆರಿಡಿಯನ್ ಚಾಪದ ಅಳತೆಯನ್ನು ಪ್ರತಿಪಾದಿಸುತ್ತಾನೆ. 1736ರಲ್ಲಿ, ಫ್ರೆಂಚ್ ಗಣಿತಜ್ಞ ಪಿಯರೆ ಲೂಯಿಸ್ ಮೌಪರ್ಟುಯಿಸ್ (1698-1759) ನೇತೃತ್ವದಲ್ಲಿ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಆ ಉದ್ದೇಶಕ್ಕಾಗಿ ಆಯೋಜಿಸಿದ್ದ ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಾನೆ.
ಇದನ್ನು ಧ್ರುವದ ಹತ್ತಿರ ಮೆರಿಡಿಯನ್ ಉದ್ದಕ್ಕೂ ಒಂದು ಡಿಗ್ರಿಯ ಉದ್ದವನ್ನು ಅಳೆಯುವುದು ಉದ್ದೇಶವಾಗಿತ್ತು. ಭೂಮಿಯ ಆಕಾರವು ಧ್ರುವಗಳಲ್ಲಿ ಚಪ್ಪಟೆಯಾದ ದೀರ್ಘವೃತ್ತಾಕಾರದಲ್ಲಿದೆ ಎಂಬ ಐಸಾಕ್ ನ್ಯೂಟನ್ ಅವರ ನಂಬಿಕೆಯನ್ನು ಸೆಲ್ಸಿಯಸ್‌ರ ಅಧ್ಯಯನ ಪ್ರವಾಸಗಳು ದೃಢಪಡಿಸಿದವು.
ನಿರಂತರ ಖಗೋಳಶಾಸ್ತ್ರದ ಅಧ್ಯಯನದ ಫಲವಾಗಿ ತಾನು ಇದುವರೆಗೂ ವಿದೇಶಗಳಿಂದ ತಂದಿದ್ದ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಒಟ್ಟಿಗೆ ಒಂದೆಡೆ ಜೋಡಿಸಿ ಇಡುವ ಉದ್ದೇಶ ಹೊಂದಿರುತ್ತಾನೆ. ಇದಕ್ಕಾಗಿ ಸೆಲ್ಸಿಯಸ್, 1741ರಲ್ಲಿ ಉಪ್ಸಲಾ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸುತ್ತಾನೆ.
ಇದು ಖಗೋಳಶಾಸ್ತ್ರದಲ್ಲಿ ಆಸಕ್ತಿ ಉಳ್ಳವರಿಗೆ ಸಹಾಯವಾಗುತ್ತದೆ. ಸುಮ್ಮನಿರದ ಸೆಲ್ಸಿಯಸ್, ಗ್ರಹಣಗಳು ಹಾಗೂ ವಿವಿಧ ಖಗೋಳ ವಸ್ತುಗಳ ವೀಕ್ಷಣೆಗಳನ್ನು ಮಾಡುತ್ತಾನೆ. ತನ್ನದೇ ಆದ ಫೋಟೊಮೆಟ್ರಿಕ್ ವ್ಯವಸ್ಥೆಯನ್ನು ಬಳಸಿಕೊಂಡು ಸುಮಾರು 300 ನಕ್ಷತ್ರಗಳಿಗೆ ಎಚ್ಚರಿಕೆಯಿಂದ ನಿರ್ಧರಿಸಿದ ಪರಿಮಾಣಗಳ ಕ್ಯಾಟಲಾಗ್‌ಗಳನ್ನು ಪ್ರಕಟಿಸುತ್ತಾನೆ.
1742ರಲ್ಲಿ ಸೆಲ್ಸಿಯಸ್ 1710ರಲ್ಲಿ ಸ್ಥಾಪನೆಯಾದ ಅತ್ಯಂತ ಹಳೆಯ, ಉಪ್ಸಲಾದಲ್ಲಿರುವ ರಾಯಲ್ ಸೊಸೈಟಿ ಆಫ್ ಸೈನ್ಸಸ್‌ಗೆ ಒಂದು ಪ್ರಬಂಧದಲ್ಲಿ ಸೆಲ್ಸಿಯಸ್ ತಾಪಮಾಪಕವನ್ನು ಪ್ರಸ್ತಾಪಿಸು ತ್ತಾನೆ. ಅವನ ಥರ್ಮಾಮೀಟರ್ ಅನ್ನು ನೀರಿನ ಕುದಿಯುವ ಬಿಂದುವಿಗೆ ೦ ಮತ್ತು ಘನೀಕರಿಸುವ ಬಿಂದುವಿಗೆ 100 ಮೌಲ್ಯದೊಂದಿಗೆ ಮಾಪನಾಂಕ ಮಾಡಲಾಗಿರುತ್ತದೆ.
1745ರಲ್ಲಿ, ಸೆಲ್ಸಿಯಸ್ ಮರಣದ ಒಂದು ವರ್ಷದ ನಂತರ, ಹೆಚ್ಚು ಪ್ರಾಯೋಗಿಕ ಅಳತೆಯನ್ನು ಸುಲಭಗೊಳಿಸಲು ಕಾರ್ಲ್ ಲಿನ್ನಿಯಸ್‌ನು ಈ ಸೆಲ್ಸಿಯಸ್ ಮಾಪಕವನ್ನು ಹಿಮ್ಮುಖಗೊಳಿಸುತ್ತಾನೆ. 1725ರಲ್ಲಿ ಸೆಲ್ಸಿಯಸ್, ಉಪ್ಸಲಾದಲ್ಲಿ ರಾಯಲ್ ಸೊಸೈಟಿ ಆಫ್ ಸೈನ್ಸಸ್‌ನ ಕಾರ್ಯದರ್ಶಿ ಯಾಗಿದ್ದನು.
1744ರಲ್ಲಿ ಕ್ಷಯರೋಗದಿಂದ ನರಳಿ ತನ್ನ ಕೊನೆಯ ಉಸಿರು ಇರುವವರೆಗೂ ಅದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಾನೆ. ಇಂತಹ ಮೇಧಾವಿ ಕೇವಲ ನಾಲ್ಕು ದಶಕಗಳ ಕಾಲ ಬದುಕಿ ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ಕೊಟ್ಟು 27ನೇ ಏಪ್ರಿಲ್ 1744ರಲ್ಲಿ ಕಾಲನ ಕರೆಗೆ ಓಗೊಡುತ್ತಾನೆ.
(ನವೆಂಬರ್ 27 ಆಂಡರ್ಸ್ ಸೆಲ್ಸಿಯಸ್‌ನ ಜನ್ಮದಿನ. )