Dr N Someshwara Column: ವೈದ್ಯಕೀಯ ಜಗತ್ತಿನ ಮಹಾನ್ ದುರಂತ: ಈಥರ್ ವಾರ್ !
ಯಾವುದೇ ಪ್ರಯತ್ನವಿಲ್ಲದೆ ಅವನಿಂದ ನಗುವಿನ ಹೊಳೆ ಹರಿಯಲಾರಂಭಿಸಿತು. ಶಾರೀರಿಕ ನೋವೆಲ್ಲ ಮಾಯವಾಯಿತು. ಕೊನೆಗೆ ಬ್ರಿಸ್ಟಲ್ ನಗರದ ‘ನ್ಯುಮಾಟಿಕ್ ಇನ್‌ಸ್ಟಿಟ್ಯೂಷನ್’ ಎಂಬಲ್ಲಿ ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಎಲ್ಲರಿಗೂ ಹೊಸ ಅನಿಲವನ್ನು ಸೇವಿಸಲು ಹೇಳಿದ. ಎಲ್ಲರೂ ಹುಚ್ಚೆದ್ದು ಕುಣಿಯಲಾರಂಬಿಸಿದರು. ಅವರಿಗೆ ವಿನಾಕಾರಣ ಸಂತೋಷವಾಗಿ, ಮುಕ್ತಮನಸ್ಸಿನಿಂದ ನಗಲಾರಂಭಿಸಿದರು.
-
ಹಿಂದಿರುಗಿ ನೋಡಿದಾಗ
ಹಲ್ಲು ನೋವು!
ಅನುಭವಿಸಿದವರಿಗೇ ಗೊತ್ತು ಹಲ್ಲು ನೋವು ಎಷ್ಟು ಉಗ್ರವಾಗಿರುತ್ತದೆಯೆಂದು! ಇಂದು ದಂತ ವೈದ್ಯರ ಬಳಿ ಹೋಗುತ್ತೇವೆ. ದಂತ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇವೆ. ವೈದ್ಯರು ಅರಿವಳಿಕೆಯ ಇಂಜೆಕ್ಷನ್ನನ್ನು ಕೊಡುತ್ತಾರೆ. ನೋವು ‘ಪವಾಡ ಸದೃಶವಾಗಿ’ ಮಾಯವಾಗುತ್ತದೆ. ಹಲ್ಲನ್ನು ಯಾವುದೇ ನೋವಿಲ್ಲದೆ ಕೀಳಿಸಿಕೊಳ್ಳುತ್ತೇವೆ. ಆರಾಮವಾಗಿ ಮನೆಗೆ ಬಂದುಬಿಡುತ್ತೇವೆ. ಎಷ್ಟು ಸುಲಭ ಅಲ್ಲವೆ!
ಹಲ್ಲುನೋವಿನ ಅನುಭವವು ನಮ್ಮ ಅನುಭವಕ್ಕೆ ಬರದಿರುವಂತೆ ಮಾಡಿದ್ದು ಅರಿವಳಿಕೆ!
ಅರಿವಳಿಕೆಯನ್ನು ಕಂಡುಹಿಡಿಯುವವರೆಗೆ ಹಲ್ಲು ನೋವಿನಿಂದ ಹಿಡಿದು ಅಂಗಛೇದನವರೆಗಿನ ಶಸ್ತ್ರಚಿಕಿತ್ಸೆ ಎಂದರೆ ನರಕ ಸದೃಶವಾಗಿತ್ತು. ಶಸಚಿಕಿತ್ಸಾ ಕೊಠಡಿ ಅಥವಾ ಆಪರೇಷನ್ ಥಿಯೇಟರ್ ಎಂದರೆ ಕಸಾಯಿ ಖಾನೆಗಿಂತಲೂ ಕಡೆಯಾಗಿತ್ತು. ರೋಗಿಗಳನ್ನು ಆಪರೇಷನ್ ಟೇಬಲ್ಲಿಗೆ ಬಿಗಿಯುವ ಚರ್ಮದ ಪಟ್ಟಿಗಳು, ಚಾಕು, ಚೂರಿ, ಮಚ್ಚು, ಗರಗಸಗಳಂಥ ಭಯಾನಕ ಉಪಕರಣ ಗಳು. ಆಪರೇಷನ್ ಮಾಡುವಾಗ, ರೋಗಿಯು ಕದಲದಂತೆ ಹಿಡಿದುಕೊಳ್ಳುವ ಯಮದೂತರ ಹಾಗೆ ಕಾಣುತ್ತಿದ್ದ ದಾಂಡಿಗರು ಹೀಗೆ. ಆಪರೇಷನ್ ಮಾಡುವಾಗ ರೋಗಿಯ ಕಿರುಚಾಟವು ಮುಗಿಲನ್ನು ಮುಟ್ಟುತ್ತಿತ್ತು.
ರಾಬರ್ಟ್ ಲಿಸ್ಟನ್ (1794-1847) ಎಂಬ ಸ್ಕಾಟಿಶ್ ವೈದ್ಯನು 25-30 ಸೆಕಂಡುಗಳ ಒಳಗೆ ಕಾಲನ್ನು ತುಂಡರಿಸುತ್ತಿದ್ದನು. ತನಗೇನಾಗುತ್ತಿದೆ ಎನ್ನುವುದು ರೋಗಿಗೆ ತಿಳಿಯುವ ಮೊದಲೇ ಶಸ್ತ್ರ ಚಿಕಿತ್ಸೆಯು ಮುಗಿದು ಹೋಗುತ್ತಿತ್ತು. 1835-1840ರ ನಡುವೆ ಈತನು 66 ಅಂಗಛೇದನವನ್ನು ಮಾಡಿದ. ಅವರಲ್ಲಿ 10 ಜನರು ಮಾತ್ರ ಜೀವವನ್ನು ಬಿಟ್ಟರು. ಉಳಿದವರು ಬದುಕುಳಿದರು ಎಂದು ‘ರಾಯಲ್ ಕಾಲೇಜ್ ಆಫ್ ಸರ್ಜನ್ಸ್’ ದಾಖಲೆಯನ್ನು ನೀಡುತ್ತದೆ. ಆದರೆ ಎಲ್ಲ ಶಸ್ತ್ರವೈದ್ಯರು ಇಷ್ಟು ತ್ವರಿತವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾರದವರಾಗಿದ್ದರು. ಹಾಗಾಗಿ ರೋಗಿಗಳಿಗೆ ನರಕಯಾತನೆ ತಪ್ಪುತ್ತಿರಲಿಲ್ಲ.
ಅಜ್ಞಾತ ಅನಿಲ
ವೈದ್ಯವಿಜ್ಞಾನವು ಇಂಥ ದುರ್ಭರ ಸ್ಥಿತಿಯಲ್ಲಿದ್ದಾಗ, ಅದಕ್ಕೊಂದು ಮಹಾನ್ ತಿರುವನ್ನು ನೀಡಿ, ರೋಗಿಗಳ ಬದುಕನ್ನು ಸಹನೀಯವಾಗಿ ಮಾಡಿದ್ದು, ಆಸ್ಪತ್ರೆಯ ಸಂಶೋಧನಾ ಕೊಠಡಿಯೂ ಅಲ್ಲ, ಪ್ರಯೋಗಾಲಯವೂ ಅಲ್ಲ, ಹಬ್ಬದ ವಾತಾವರಣವಿದ್ದ ಒಂದು ಮನರಂಜನಾ ಪ್ರದರ್ಶನ ವೆಂದರೆ ಅದು ಆಶ್ಚರ್ಯವಾಗುತ್ತದೆ!
ಇದನ್ನೂ ಓದಿ: Dr N Someshwara Column: ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ !
ಜೋಸೆಫ್ ಪ್ರೀಸ್ಟ್ಲೆ (1733-1804) ಎಂಬ ಇಂಗ್ಲಿಷ್ ರಸಾಯನ ಶಾಸ್ತ್ರಜ್ಞರು ಒಂದು ಹೊಸ ಅನಿಲ ವನ್ನು ಕಂಡುಹಿಡಿದಿದ್ದರು. ಆದರೆ ಅದರ ಬಗ್ಗೆ ಅವರು ಹೆಚ್ಚಿನ ಅಧ್ಯಯನವನ್ನು ಮಾಡಲಿಲ್ಲ. ಹಂಫ್ರಿ ಡೇವಿ (1778-1829) ಎಂಬ ಪ್ರತಿಭಾವಂತ ಯುವ ರಸಾಯನ ಶಾಸ್ತ್ರಜ್ಞನು 1977-1800ರ ಮಧ್ಯದಲ್ಲಿ ಜೋಸೆಫ್ ಪ್ರೀಸ್ಟ್ಲೆ ಕಂಡುಹಿಡಿದಿದ್ದ ಅನಿಲವನ್ನು ತಾನೇ ಸೇವಿಸಿದ. ಅದು ಅವನಿಗೆ ವರ್ಣಿಸಲಾಗದ ಆನಂದವನ್ನು ತಂದಿತು.
ಯಾವುದೇ ಪ್ರಯತ್ನವಿಲ್ಲದೆ ಅವನಿಂದ ನಗುವಿನ ಹೊಳೆ ಹರಿಯಲಾರಂಭಿಸಿತು. ಶಾರೀರಿಕ ನೋವೆ ಲ್ಲ ಮಾಯವಾಯಿತು. ಕೊನೆಗೆ ಬ್ರಿಸ್ಟಲ್ ನಗರದ ‘ನ್ಯುಮಾಟಿಕ್ ಇನ್‌ಸ್ಟಿಟ್ಯೂಷನ್’ ಎಂಬಲ್ಲಿ ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಎಲ್ಲರಿಗೂ ಹೊಸ ಅನಿಲವನ್ನು ಸೇವಿಸಲು ಹೇಳಿದ. ಎಲ್ಲರೂ ಹುಚ್ಚೆದ್ದು ಕುಣಿಯಲಾರಂಬಿಸಿದರು. ಅವರಿಗೆ ವಿನಾಕಾರಣ ಸಂತೋಷವಾಗಿ, ಮುಕ್ತಮನಸ್ಸಿನಿಂದ ನಗಲಾರಂಭಿಸಿದರು.
ಕುಣಿಯುವಾಗ ಕೆಳಕ್ಕೆ ಬಿದ್ದರೂ, ಅದನ್ನು ಲೆಕ್ಕಿಸದೆ ಎದ್ದು ಓಡಲಾರಂಭಿಸಿದರು. ಇದನ್ನು ನೋಡಿದ ಹಂಫ್ರಿ ಡೇವಿ ಈ ಅನಿಲವನ್ನು ಶಸಚಿಕಿತ್ಸೆಗಳಲ್ಲಿ ಬಳಸಿ ರೋಗಿಗಳ ನೋವನ್ನು ಕಡಿಮೆ ಮಾಡಬಹುದಲ್ಲ ಎಂದು ಅಂದುಕೊಂಡ. ಪ್ರೀಸ್ಟ್ಲೆ ಕಂಡು ಹಿಡಿದ ಈ ಹೊಸ ಅನಿಲವು ವಿಪರೀತ ನಗುವನ್ನು ತರಿಸುತ್ತಿದ್ದ ಕಾರಣ, ಇದನ್ನು ‘ಲಾಫಿಂಗ್ ಗ್ಯಾಸ್’- ‘ನಗೆಯ ಅನಿಲ’ ಎಂದು ಹೆಸರನ್ನು ನೀಡಿದ. ಈತನೇ ಈ ಅಜ್ಞಾತ ಅನಿಲಕ್ಕೆ ನೈಟ್ರಸ್ ಆಕ್ಸೈಡ್ ಎಂಬ ವೈಜ್ಞಾನಿಕ ನಾಮಧೇಯವನ್ನೂ ನೀಡಿದ. ನಗೆಯ ಅನಿಲವು ಯುರೋಪಿನಲ್ಲಿ ಜನಪ್ರಿಯವಾಯಿತು. ನಗೆಯ ಪಾರ್ಟಿಗಳನ್ನು ಆಯೋಜಿಸಲಾರಂಭಿಸಿದರು. ಸಾರ್ವಜನಿಕ ಪ್ರದರ್ಶನಗಳು ಏರ್ಪಟ್ಟವು. ಆ ಪ್ರದರ್ಶನಗಳಲ್ಲಿ ಜನರನ್ನು ವೇದಿಕೆಗೆ ಕರೆಯಿಸಿ, ಅವರಿಗೆ ನೈಟ್ರಸ್ ಆಕ್ಸೈಡ್ ಅನಿಲವನ್ನು ಉಸಿರಾಡಲು ನೀಡು ತ್ತಿದ್ದರು. ಅವರು ತಲೆತಿರುಗಿ ನಗುವುದು, ಕುಣಿಯುವುದು, ವಿಚಿತ್ರವಾಗಿ ವರ್ತಿಸುವುದು ಇವೆಲ್ಲವೂ ಜನರಿಗೆ ಒಂದು ದೊಡ್ಡ ಮನರಂಜನೆಯಾಯಿತು.
ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ, ಇದೊಂದು ವಿಜ್ಞಾನ ಪ್ರದರ್ಶನ ಮತ್ತು ಪಾರ್ಟಿ ಟ್ರಿಕ್ ಎರಡರ ಮಧ್ಯದಲ್ಲಿದ್ದ ಒಂದು ಆಕರ್ಷಕ ಆಟವಾಗಿ ಪರಿಣಮಿಸಿತು. ವೇದಿಕೆಯ ಮೇಲಿನ ಜನರು ಅಟ್ಟಹಾಸದ ನಗುವಿನೊಡನೆ, ಊಹಿಸಲಿಕ್ಕೂ ಸಾಧ್ಯವಾಗದ ಹಾಗೆ ಆಡುತ್ತಿದ್ದ ಮಂಗಾಟಗಳನ್ನು ನೋಡಿ ಸಭೆಯಲ್ಲಿ ಕೂತಿದ್ದವರು ಹೊಟ್ಟೆ ಹಿಡಿದು ನಗುತ್ತಿದ್ದರು. ಆದರೆ ಆ ನಗುವಿನ ಮಂದಿರ ದಲ್ಲೇ ವೈದ್ಯಕೀಯ ಇತಿಹಾಸದ ಮಹತ್ವದ ಬಾಗಿಲೊಂದು ತೆರೆದುಕೊಳ್ಳಲಿದೆ ಎಂಬುದನ್ನು ಯಾರೂ ಊಹಿಸಲಿಲ್ಲ.
1844, ಡಿಸೆಂಬರ್ 10. ಅಮೆರಿಕದ ಹಾರ್ಟ್ʼಫೋರ್ಡ್ ನಗರ. ಅಲ್ಲಿ ಹೋರೇಸ್ ವೆಲ್ಸ್ (1815-1848) ಎಂಬ ದಂತವೈದ್ಯನೊಬ್ಬನಿದ್ದ. ಕುತೂಹಲಭರಿತ ಮನಸ್ಸು, ಗಮನಿಸುವ ಕಣ್ಣು, ವೈದ್ಯಕೀಯ ನೋವನ್ನು ಕಡಿಮೆ ಮಾಡಬೇಕೆಂಬ ಒಳಬಯಕೆ- ಇವು ಅವನೊಳಗಿದ್ದವು. ಒಂದು ದಿನ ಅವನು ಗಾರ್ಡ್ನರ್ ಕ್ವಿನ್ಸಿ ಕೊಲ್ಟನ್ ಎಂಬ ವ್ಯಕ್ತಿಯು ನಡೆಸುತ್ತಿದ್ದ ನೈಟ್ರಸ್ ಆಕ್ಸೈಡ್ ಸಾರ್ವಜನಿಕ ಪ್ರದರ್ಶನವನ್ನು ನೋಡಲು ಹೋದ. ಸಭಾಂಗಣದಲ್ಲಿ ಗ್ಯಾಸ್ ಉಸಿರಾಡಿದ ಜನರು ನಗುತ್ತಾ, ಕುಣಿಯುತ್ತ, ಲಾಗ ಹಾಕುತ್ತಾ, ಹಾಸ್ಯಾಸ್ಪದವಾಗಿ ವರ್ತಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಯಾಮು ಯೆಲ್ ಕೂಲಿ ಎಂಬ ಯುವಕ, ಅನಿಲದ ಪ್ರಭಾವಕ್ಕೆ ಸಿಲುಕಿ, ಹಾರಿ ಕುಣಿದು ಕುಪ್ಪಳಿಸುವಾಗ, ತನ್ನ ಕಾಲಿಗೆ ಗಂಭೀರವಾಗಿ ಗಾಯವನ್ನು ಮಾಡಿಕೊಂಡ.
ವಿಚಿತ್ರವೆಂದರೆ ತನಗೆ ಅಷ್ಟು ದೊಡ್ಡ ಗಾಯವಾಗಿದೆ ಎಂಬುದರ ಪರಿವೆಯೇ ಅವನಿಗೆ ಇರಲಿಲ್ಲ. ಆ ಕ್ಷಣದಲ್ಲಿ ಅವನಿಗೆ ಕಿಂಚಿತ್ತೂ ನೋವಿನ ಅನುಭವವೇ ಆಗಲಿಲ್ಲ. ಪ್ರದರ್ಶನವೆಲ್ಲ ಮುಗಿದ ನಂತರ, ಅವನು ತನಗಾದ ಗಾಯವನ್ನು ನೋಡಿಕೊಂಡ. ಗಾಯದ ನೋವಿನ ಅನುಭವವಾಯಿತು. ಕಾಲನ್ನು ಹಿಡಿದುಕೊಂಡು ರೋದಿಸಲಾರಂಭಿಸಿದ. ಇತರರು ‘ಇದು ಕೂಡ ಲಾಫಿಂಗ್ ಗ್ಯಾಸಿನ ಮನರಂಜನೆಯ ಒಂದು ಭಾಗ’ ಎಂದುಕೊಂಡು ನೋಡುತ್ತಿದ್ದರು.
ಆದರೆ ಹೋರೇಸ್ ವೆಲ್ಸ್ ಅವರ ಮನಸ್ಸಿನಲ್ಲಿ ಭಿನ್ನ ವಿಚಾರವೊಂದು ಮಿಂಚಿನಂತೆ ಹೊಳೆಯಿತು. ‘ಕೂಲಿಗೆ ಗಂಭೀರವಾದ ಗಾಯವಾದರೂ, ಅವನಿಗೆ ನೋವಿನ ಅನುಭವವು ಸ್ವಲ್ಪವೂ ಆಗಲಿಲ್ಲ. ಹಾಗಿದ್ದ ಮೇಲೆ, ಈ ಅನಿಲವನ್ನು ಬಳಸಿದರೆ, ಹಲ್ಲನ್ನು ತೆಗೆಯುವಾಗ ನೋವೇ ಆಗಲಾರದಲ್ಲ’ ಎಂದು ತರ್ಕಿಸಿದ!
ಇದನ್ನು ‘ಯುರೇಕಾ ಕ್ಷಣ’ ಎಂದು ಕರೆಯುತ್ತಾರೆ. ಅರ್ಕಿಮಿಡೀಸ್ ಸ್ನಾನದ ತೊಟ್ಟಿಯಲ್ಲಿ ನಿಯಮ ವೊಂದನ್ನು ಕಂಡಂತೆ, ಮರದಿಂದ ಬಿದ್ದ ಸೇಬಿನಲ್ಲಿ ನ್ಯೂಟನ್ ಗುರುತ್ವಾಕರ್ಷಣ ಶಕ್ತಿಯನ್ನು ಕಂಡಂತೆ, ವೈದ್ಯಕೀಯ ಲೋಕದಲ್ಲಿ ಕ್ರಾಂತಿಯನ್ನು ಉಂಟುಮಾಡಬಲ್ಲ ವಿಚಾರವೊಂದನ್ನು ಜನರ ನಗುವಿನೊಳಗೆ ವೆಲ್ಸ್ ಕಂಡುಕೊಂಡರು.
ಮರುದಿನವೇ (ಡಿಸೆಂಬರ್, 11) ತಮ್ಮ ವಿಚಾರವನ್ನು ಒರೆಗೆ ಹಚ್ಚಲು ಅವರು ನಿರ್ಧರಿಸಿದರು. ಇತರರ ಮೇಲೆ ಪ್ರಯೋಗ ಮಾಡುವ ಬದಲು, ತಮ್ಮ ಮೇಲೇ ಪ್ರಯೋಗ ಮಾಡಿಕೊಳ್ಳುವ ದಿಟ್ಟ ನಿರ್ಧಾರವನ್ನು ಕೈಗೊಂಡರು. ವೆಲ್ಸ್ ತಮ್ಮ ಸಹುದ್ಯೋಗಿ ದಂತವೈದ್ಯರನ್ನು ಕರೆಯಿಸಿದರು. ಅವರ ಮುಂದೆಯೇ ನೈಟ್ರಸ್ ಆಕ್ಸೈಡನ್ನು ಸೇವಿಸಿದರು. ತಮ್ಮ ಹುಳುಕು ಹಲ್ಲೊಂದನ್ನು ತೆಗೆಯುವಂತೆ ಕೇಳಿಕೊಂಡರು. ಆ ದಂತವೈದ್ಯರು ಹಲ್ಲನ್ನು ತೆಗೆದರು. ವೆಲ್ಸ್ ಆರಾಮವಾಗಿ ದಂತಕುಚಿಯಲ್ಲಿ ಕುಳಿತಿದ್ದರು. ಹಲ್ಲನ್ನು ತೆಗೆದಾದ ಮೇಲೆ “ಏನು ಮಾರಾಯ!
ಸ್ವಲ್ಪವೂ ನೋವಾಗದಂತೆ ಹಲ್ಲನ್ನು ತೆಗೆದುಬಿಟ್ಟೆಯಲ್ಲ!" ಎಂದು ನಗೆಯಾಡಿದರು. ಜತೆಗೆ “ನೋವಿಲ್ಲದೆ ಹಲ್ಲನ್ನು ತೆಗೆಯುವ ನವಮನ್ವಂತರವು ಆರಂಭವಾಗಲಿದೆ" ಎಂದು ಉಲ್ಲಾಸದಿಂದ ಸಹೋದ್ಯೋಗಿಯ ಬಳಿ ಭವಿಷ್ಯ ನುಡಿದರು. ಇದೊಂದು ವೈಯಕ್ತಿಕ ಅನುಭವ ಮಾತ್ರವಾಗಿರದೆ, ಮಾನವಕುಲದ ನೋವಿನ ಇತಿಹಾಸದಲ್ಲಿ ಬರೆದ ಹೊಸ ಅಧ್ಯಾಯದ ಮುನ್ನುಡಿಯಾಗಿತ್ತು. ವೆಲ್ಸ್ ತಮ್ಮ ದಂತವೈದ್ಯಕೀಯ ವೃತ್ತಿಯಲ್ಲಿ ನೈಟ್ರಸ್ ಆಕ್ಸೈಡ್ ಬಳಸಿ ಹಲ್ಲು ತೆಗೆಯಲು ಆರಂಭಿಸಿದರು.
ಅವರ ಬಳಿಗೆ ಬರುವ ರೋಗಿಗಳಿಗೆ ನೋವಿನ ಅನುಭವವಾಗುತ್ತಿರಲಿಲ್ಲ ಅಥವಾ ಅತ್ಯಂತ ಕಡಿಮೆ ಪ್ರಮಾಣದ ನೋವಾಗುತ್ತಿತ್ತು. ಇದು ಎಷ್ಟು ದೊಡ್ಡ ಬದಲಾವಣೆಯನ್ನು ತಂದಿತು ಎಂದರೆ, ಹಲ್ಲನ್ನು ತೆಗೆಸಿಕೊಳ್ಳುವುದು ಒಂದು ಶಿಕ್ಷೆಯಲ್ಲ; ಅದೊಂದು ‘ಮಧುರಾತಿಮಧುರ ಭಾವ’ (ಲಾಫಿಂಗ್ ಗ್ಯಾಸ್ ಆನಂದವನ್ನೂ ಕೊಡುತ್ತಿತ್ತಲ್ಲವೆ!) ಎಂದು ಜನರು ಭಾವಿಸುತ್ತಿದ್ದರು. ಹೀಗೆ ಮನುಕುಲಕ್ಕೆ ಮೊತ್ತ ಮೊದಲ ಅರಿವಳಿಕೆಯು ದೊರೆಯಿತು.
ವೆಲ್ಸ್, ನೈಟ್ರಸ್ ಆಕ್ಸೈಡ್ ಅರಿವಳಿಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದರು. ಆಗ ಅವರಿಗೆ ತಮ್ಮ ಸಂಶೋಧನೆಯು ಜಗತ್ತಿಗೆಲ್ಲ ತಿಳಿಯಬೇಕು, ತಮ್ಮ ಹೆಸರು ಪ್ರಖ್ಯಾತವಾಗಬೇಕು, ತಮಗೆ ಕೈ ತುಂಬಾ ಹಣಬರಬೇಕು ಎಂದು ಮಾನವ ಸಹಜ ಆಸೆಯಿತ್ತು. ಹಾಗಾಗಿ ಅಂದಿನ ದಿನಗಳಲ್ಲಿ ‘ವೈದ್ಯ ವಿಜ್ಞಾನದ ಕಾಶಿ’ ಎನಿಸಿದ ‘ಹಾರ್ವರ್ಡ್ ಮೆಡಿಕಲ್ ಸ್ಕೂಲ್’ಗೆ ಬಂದರು. ಅಲ್ಲಿ ಎಲ್ಲ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮುಂದೆ ‘ನಗೆಯ ಅನಿಲವು ನೋವಿಲ್ಲದೆ ಹಲ್ಲನ್ನು ಕೀಳಲು ಹೇಗೆ ನೆರವಾಗುತ್ತದೆ’ ಎನ್ನುವುದನ್ನು ನಿದರ್ಶಿಸುವ ಅದಮ್ಯ ಉತ್ಸಾಹವನ್ನು ತೋರಿದರು.
ಹಾಗಾಗಿ ವೆಲ್ಸ್ 1845ರ ಜನವರಿ ತಿಂಗಳಿನಲ್ಲಿ ತಮ್ಮ ಮಾಜಿ ಶಿಷ್ಯ ಹಾಗೂ ಮಾಜಿ ಪಾಲುದಾರ ನಾಗಿದ್ದ ಟಿ.ಜಿ.ಮಾರ್ಟನ್ ಎನ್ನುವವನ ಜತೆಯಲ್ಲಿ ಬಾಸ್ಟನ್ನಿಗೆ ತೆರಳಿದರು. ವೇದಿಕೆ ಸಿದ್ಧವಾಯಿತು. ಜಾನ್ ಕಾಲಿನ್ಸ್ ವಾರನ್ ಎಂಬ ಶಸ್ತ್ರವೈದ್ಯರು, ವಿದ್ಯಾರ್ಥಿಯೊಬ್ಬನ ಹುಳುಕುಹಲ್ಲನ್ನು ತೆಗೆಯಲು ಸಿದ್ಧವಾದರು.
ವೆಲ್ಸ್, ನೈಟ್ರಸ್ ಆಕ್ಸೈಡ್ ಅನಿಲವಿದ್ದ ಚೀಲವನ್ನು ವೈದ್ಯ ವಿದ್ಯಾರ್ಥಿಯ ಮುಖಕ್ಕೆ ಹಿಡಿದರು. ಶಸ್ತ್ರವೈದ್ಯರು ಹುಡುಗನ ಹಲ್ಲನ್ನು ಹಿಡಿದೆಳೆಯುತ್ತಿದ್ದಂತೆಯೇ ಆ ಹುಡುಗನು ‘ನೋವೂ...’ ಎಂದು ಕೂಗಿಕೊಂಡ. ಬಹುಶಃ ವೆಲ್ಸ್, ಬಹಳ ಬೇಗ ಅವನ ಮುಖದಿಂದ ಅನಿಲದ ಚೀಲವನ್ನು ಹೊರತೆಗೆದಿದ್ದರೆಂದು ಕಾಣುತ್ತದೆ.
ಹುಡುಗರೆಲ್ಲ ಒಮ್ಮೆಲೆ ದೊಂಬಿಯೆದ್ದು ‘ಮೋಸ, ಅನ್ಯಾಯ... ಹಿಡಿಯಿರಿ ಆ ವಂಚಕನನ್ನ’ ಎಂದು ಕೂಗಲಾರಂಭಿಸಿದರು. ವೆಲ್ಸ್, ಸಭಾಂಗಣವನ್ನು ಬಿಟ್ಟು ಪರಾರಿಯಾದರು. ಅವರು ತಮ್ಮ ಸೋಲಿ ನಿಂದ ಧೃತಿಗೆಟ್ಟರು. ಆಳವಾದ ಖಿನ್ನತೆಗೆ ಬಲಿಯಾದರು. ಕೊನೆಗೆ ದಂತ ವೈದ್ಯಕೀಯ ವೃತ್ತಿಯನ್ನೇ ಬಿಟ್ಟುಬಿಟ್ಟರು!
ವಿಲಿಯಂ ಮಾರ್ಟನ್
ವೆಲ್ಸ್ ಅವರ ಶಿಷ್ಯನಾಗಿದ್ದ ಮಾರ್ಟನ್‌ಗೆ ‘ನೋವುರಹಿತ ದಂತ ಉತ್ಪಾಟನ’ ಎಂಬ ಪರಿಕಲ್ಪನೆಯು ತುಂಬಾ ಹಿಡಿಸಿತ್ತು. ಹಾಗಾಗಿ ವೆಲ್ಸ್ ಬಳಸಿದ ನೈಟ್ರಸ್ ಆಕ್ಸೈಡಿಗಿಂತ ಪ್ರಬಲವಾದ ರಾಸಾಯನಿಕ ವನ್ನು ಏಕೆ ಬಳಸಬಾರದು ಎಂದು ಯೋಚಿಸಿದರು. ಕೂಡಲೇ ತಮ್ಮ ಗುರುಗಳಾಗಿದ್ದ ಚಾರ್ಲ್ಸ್ ಜಾಕ್ಸನ್ ಅವರ ಬಳಿ ತಮ್ಮ ಮನಸ್ಸಿನೊಳಗಿದ್ದ ವಿಷಯವನ್ನು ಪ್ರಸ್ತಾಪಿಸಿದರು. ಆಗ ಅವರು ‘ಸಲ್ಯೂರಿಕ್ ಈಥರ್’ ಬಳಸುವಂತೆ ಸೂಚಿಸಿದರು. ಹಾಗೆಯೇ ಮಾರ್ಟನ್ ಬಳಸಲಾರಂಭಿಸಿದರು. ಇದು ನೈಟ್ರಸ್ ಆಕ್ಸೈಡಿಗಿಂತಲೂ ಪರಿಣಾಮಕಾರಿಯಾಗಿ ನೋವನ್ನು ಕಡಿಮೆ ಮಾಡುತ್ತಿತ್ತು.
ಮಾರ್ಟನ್, ಒಬ್ಬ ವೈದ್ಯನಿಗಿಂತ ಹೆಚ್ಚು ವ್ಯಾಪಾರಿಯ ಮನೋಭಾವದವರಾಗಿದ್ದರು. ಹಾಗಾಗಿ ತಾವು ‘ಲೆಥಿಯಾನ್’ ಎಂಬ ಹೊಸ ರಾಸಾಯನಿಕವನ್ನು ಕಂಡುಹಿಡಿದಿರುವುದಾಗಿಯೂ, ಅದರ ಏಕಸ್ವಾಮ್ಯ (ಪೇಟೆಂಟ್) ತಮಗೇ ಸಿಗಬೇಕೆಂದೂ ವಾದಿಸಿದರು. ಆದರೆ ವೈದ್ಯ ಸಮುದಾಯವು ಮಾರ್ಟನ್‌ರ ಮಾತನ್ನು ನಂಬಲಿಲ್ಲ. ಸಾಮ, ದಾನ, ಭೇದ, ದಂಡ ಎಂಬ ಉಪಾಯಗಳ ನಂತರ, ಮಾರ್ಟನ್ ಸಲ್ಯೂರಿಕ್ ಈಥರ್ ಅನ್ನು ಮಾತ್ರ ಬಳಸುತ್ತಿದ್ದಾರೆ ಎಂದು ತಿಳಿಯಿತು. ಇದು ವಿಜ್ಞಾನ ಲೋಕಕ್ಕೆ ನೂರಾರು ವರ್ಷಗಳಿಂದ ಪರಿಚಿತವಾದ ರಾಸಾಯನಿಕವಾಗಿದ್ದ ಕಾರಣ ಇದಕ್ಕೆ ಏಕಸ್ವಾಮ್ಯ ದೊರೆಯಲಿಲ್ಲ.
ಚಾರ್ಲ್ಸ್ ಜಾಕ್ಸನ್
ಚಾರ್ಲ್ಸ್ ಜಾಕ್ಸನ್ ಅತ್ಯಂತ ಪ್ರತಿಭಾವಂತ ವೈದ್ಯ ಹಾಗೂ ವಿಜ್ಞಾನಿಯಾಗಿದ್ದರು. ಆದರೆ ಇವರು ಮಹಾನ್ ವ್ಯಾಜ್ಯಾಸಕ್ತರೂ, ಖಟ್ಲೆಪ್ರಿಯರೂ ಆಗಿದ್ದರು. ಹಾಗಾಗಿ ಇವರು ಸಲ್ಯೂರಸ್ ಈಥರ್ ಉತ್ತಮ ಅರಿವಳಿಕೆ ಎಂಬ ವಿಚಾರವನ್ನು ತಾವು ಮಾರ್ಟನ್‌ಗೆ ಹೇಳಿದ ಕಾರಣ, ಅದರ ಕೀರ್ತಿ ಮತ್ತು ಹಣ ತಮಗೇ ಸಲ್ಲಬೇಕೆಂದು ವಾದಿಸಿದರು. ಮಾರ್ಟನ್, ಒಬ್ಬ ‘ಟೆಕ್ನಿಷಿಯನ್’ ಮಾತ್ರ; ಅವನಿಗೆ ಸಂಶೋಧನೆಯ ಲವಲೇಶ ತಿಳಿವೂ ಇಲ್ಲವೆಂದು ಸಾರ್ವಜನಿಕವಾಗಿ ವಾದಿಸಲಾ ರಂಭಿಸಿದರು.
ಈಥರ್ ವಾರ್
ಅರಿವಳಿಕೆಯನ್ನು ನಿಜವಾಗಿ ಯಾರು ಕಂಡುಹಿಡಿದರು ಎನ್ನುವ ಬಗ್ಗೆ ಹೋರೆಸ್ ವೆಲ್ಸ್, ಟಿಜಿ ಮಾರ್ಟನ್ ಮತ್ತು ಚಾರ್ಲ್ಸ್ ಜಾಕ್ಸನ್ ಅವರ ನಡುವೆ ಒಂದು ದೊಡ್ಡ ‘ಯುದ್ಧ’ವೇ ನಡೆಯಿತು. ಇದು ವೈದ್ಯಕೀಯ ರಂಗದಲ್ಲಿ ‘ಈಥರ್ ವಾರ್’ ಎಂದು ಕುಖ್ಯಾತವಾಗಿದೆ. ಕೊನೆಗೆ ಈ ಪ್ರಕರಣವು ಅಮೆರಿಕದ ಕಾಂಗ್ರೆಸ್ ಬಳಿಗೆ ಹೋಯಿತು. ಅವರು ಅರಿವಳಿಕೆಯನ್ನು ಕಂಡುಹಿಡಿದವರಿಗೆ 100000 ಡಾಲರುಗಳ ಬಹುಮಾನವನ್ನು ಘೋಷಿಸಿದರು.
ಹೋರೇಸ್ ವೆಲ್ಸ್, ನ್ಯೂಯಾರ್ಕ್ ನಗರಕ್ಕೆ ಹೋದರು. ಅಲ್ಲಿ ‘ಕ್ಲೋರೋಫಾರಂ’ ಎನ್ನುವ ರಾಸಾ ಯನಿಕವನ್ನು ಅರಿವಳಿಕೆಯಾಗಿ ಬಳಸುವ ಬಗ್ಗೆ ತಮ್ಮ ಮೇಲೆ ಪ್ರಯೋಗಗಳನ್ನು ಕೈಗೊಂಡರು. ಕೊನೆಗೆ ಕ್ಲೋರೊಫಾರಮ್ಮಿಗೆ ದಾಸರಾದರು. ಆ ಮತ್ತಿನಲ್ಲಿ ಒಂದು ದಿನ ಇಬ್ಬರ್ ಮಹಿಳೆಯರ ಮೇಲೆ ಆಸಿಡ್ ಎರಚಿದರು. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಬೆಳಗಾಯಿತು. ಜೈಲಿನಲ್ಲಿದ್ದ ವೆಲ್ಸ್ ಪಶ್ಚಾತ್ತಾಪ ಪಡಲಾರಂಭಿಸಿದರು.
ಕೂಡಲೇ, ಕೊನೆಯ ಬಾರಿಗೆ ಕ್ಲೋರೋಫಾರಮ್ ಸೇವಿಸಿದರು. ಚೂರಿಯಿಂದ ತನ್ನ ತೊಡೆಯಲ್ಲಿ ರುವ ಪ್ರಧಾನ ರಕ್ತನಾಳವಾದ ‘-ಮೋರಲ್ ಆರ್ಟರಿ’ಯನ್ನು ಛೇದಿಸಿಕೊಂಡರು. ನೋವಿಲ್ಲದೆ ತಮ್ಮ ಅಂತಿಮ ಪ್ರಯಾಣವನ್ನು ಆರಂಭಿಸಿದರು.
ಮಾರ್ಟನ್, ಹೇಗಾದರೂ ಮಾಡಿ ಈ ಈಥರ್ ವಾರಿನಲ್ಲಿ ತಾವು ಗೆಲ್ಲಲೇ ಬೇಕು ಎಂದು ನಿರ್ಧರಿಸಿ ದ್ದರು. ಹಾಗಾಗಿ ತಮ್ಮ ಬಳಿ ಇದ್ದ ಅಷ್ಟೂ ಹಣವನ್ನು ಸೆನೆಟರುಗಳ ‘ಕೃಪೆ’ಯನ್ನು ಗಳಿಸಲು ಖರ್ಚು ಮಾಡಿದರು. ಮಾರ್ಟನ್, ಯಾವುದೋ ಒಂದು ಪತ್ರಿಕೆಯಲ್ಲಿ, ‘ಜಾಕ್ಸನ್ನನ್ನು ಅಂತಿಮ ವಿಜಯಿ’ ಎಂದು ಘೋಷಿಸಲಾಗಿದೆ ಎನ್ನುವ ಸುದ್ಧಿಯನ್ನು ಓದಿದರು. ಕೂಡಲೇ ಅವರಿಗೆ ಲಕ್ವ ಹೊಡೆಯಿತು. ಒಂದೇ ಒಂದು ಬಿಡಿಗಾಸಿಲ್ಲದೆ ಅವರು ಸದ್ದಿಲ್ಲದ ಹಾಗೆ ಸತ್ತು ಹೋದರು.
ಜಾಕ್ಸನ್, ತಾವೇ ಈಥರ್ ಅರಿವಳಿಕೆಯನ್ನು ಕಂಡುಹಿಡಿದದ್ದು ಎಂದು ದಶಕಗಳ ಕಾಲ ಪ್ರಚಾರ ಮಾಡುತ್ತಾ ಮಾಡುತ್ತಾ ಮತಿವಿಭ್ರಮಣೆಗೆ ಒಳಗಾದರು. ಒಂದು ದಿನ ಮಾರ್ಟನ್‌ರ ಸಮಾಽ ಕಲ್ಲಿನ ಮೇಲೆ ಅರಿವಳಿಕೆಯನ್ನು ಕಂಡುಹಿಡಿದವರು’ ಎಂಬ ಉಲ್ಲೇಖವನ್ನು ನೋಡಿ, ಶಾಶ್ವತ ಮತಿವಿಭ್ರಮಣೆಗೆ ಒಳಗಾಗಿ ಹುಚ್ಚಾಸ್ಪತ್ರೆಯನ್ನು ಸೇರಿದರು.
100000 ಡಾಲರುಗಳ ಬಹುಮಾನ ಯಾರಿಗೂ ದೊರೆಯಲಿಲ್ಲ. ಹೋರೆಸ್ ವೆಲ್ಸ್ ಮರಣಿಸಿದ ಕೆಲವು ದಿನಗಳಲ್ಲಿ, ಪ್ಯಾರಿಸ್ ಮೆಡಿಕಲ್ ಸೊಸೈಟಿಯು, ಅರಿವಳಿಕೆಯನ್ನು ಕಂಡುಹಿಡಿದು, ಅದನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯಲ್ಲಿ ಬಳಸಿದ್ದು ಹೋರೆಸ್ ವೆಲ್ಸ್ ಎಂದು ಅಧಿಕೃತವಾಗಿ ಘೋಷಿಸಿತು. ಹೀಗೆ ಈಥರ್ ಯುದ್ಧವು ಕೊನೆಗೊಂಡಿತು.