ಯಕ್ಷ ಸುಂದರನ ಒಡ್ಡೋಲಗ !
ಮಂದಾರ್ತಿಯಲ್ಲಿ ಹೆಸರಾಂತ ಯಕ್ಷಗಾನ ಮೇಳಗಳಿವೆ. ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನಗಳು. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, ‘ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ’ ಎಂದು.


ಅರುಂಧತಿ ಮಧ್ಯಸ್ಥ, ಸಾಲಿಗ್ರಾಮ
ಗಂಡುಕಲೆಯೆಂದೇ ಖ್ಯಾತವಾಗಿರುವ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ. ಈ ಕ್ಷೇತ್ರದಲ್ಲಿ ಇಂದು ಪ್ರಖರವಾಗಿ ಮಿಂಚುತ್ತಿರುವವರರಲ್ಲಿ ಬಡಗಿನ ಪ್ರಧಾನ ವೇಷಧಾರಿ, ‘ಯಕ್ಷಸುಂದರ’ ಪ್ರಸನ್ನ ಶೆಟ್ಟಿ ಗಾರ್ ಮಂದಾರ್ತಿ ಪ್ರಮುಖರು. ಪ್ರಸನ್ನ ಅವರು ಜನಿಸಿದ್ದು 1985ರಲ್ಲಿ. ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ. ತಂದೆ ಗಂಗಾಧರ ಶೆಟ್ಟಿಗಾರ್ ಅವರು ವಿದೇಶದಲ್ಲಿದ್ದ ಕಾರಣ, ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ತಾಯಿ ಸುಲೋಚನಾ ಅವರ ಊರಾದ ಮಂದಾರ್ತಿಗೆ ಆಗಮಿಸಿ, ಸೋದರ ಮಾವನ ಆಸರೆಯಲ್ಲಿ, ತಾಯಿ-ತಮ್ಮ-ತಂಗಿಯೊಂದಿಗೆ ಬಾಡಿಗೆಮನೆಯಲ್ಲಿ ವಾಸಿಸಿದರು.
ಮಂದಾರ್ತಿಯಲ್ಲಿ ಹೆಸರಾಂತ ಯಕ್ಷಗಾನ ಮೇಳಗಳಿವೆ. ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನಗಳು. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, ‘ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ’ ಎಂದು.
ಏಳನೇ ತರಗತಿಯಲ್ಲಿಯೇ ವೇಷ ಹಾಕಲು ಆರಂಭಿಸಿದ್ದ ಇವರಿಗೆ ಮೊದಲ ಗುರು ಮಕ್ಕಳ ಮೇಳ ತಂತ್ರಾಡಿಯ ಹಿರಿಯಣ್ಣ ಶೆಟ್ಟಿಗಾರ್. ಪಿಯುಸಿಯಲ್ಲಿ ಅನುತ್ತೀರ್ಣನಾಗಬೇಕು, ನಂತರ ಯಕ್ಷಗಾನ ಸೇರಬೇಕು ಎಂಬ ಇವರ ಆಸೆ: ಅದು ನೆರವೇರಿತು!
ಇದನ್ನೂ ಓದಿ: Shashidhara Halady Column: ಸದಾ ಓಡುತ್ತಿರುವ ಇದನ್ನು ಕಾಪಾಡಿಕೊಳ್ಳಿ !
ಪಿಯುಸಿಯಲ್ಲಿ ರುವಾಗಲೇ 50ಕ್ಕೂ ಹೆಚ್ಚು ವೇಷ ಮಾಡಿದ್ದ ಇವರು, 2004ರಲ್ಲಿ ಮಂದಾರ್ತಿ ಮೇಳಕ್ಕೆ ಸೇರಿ, ತಮ್ಮ ಯಕ್ಷಪಯಣವ ನ್ನಾರಂಭಿಸಿದರು. ಆಗ, 6 ತಿಂಗಳಿಗೆ ಇವರಿಗಿದ್ದ ಸಂಬಳ 7500ರೂ! ರಾತ್ರಿ ಮೇಳದಲ್ಲಿ ವೇಷ, ಹಗಲಿನಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಾ, ಪಿಯುಸಿ ಮರುಪರೀಕ್ಷೆ ಕಟ್ಟಿ ತೇರ್ಗಡೆ ಹೊಂದಿದರು. 6 ವರ್ಷ ವರ್ಷವೂ ಮಂದಾರ್ತಿ ಮೇಳದಲ್ಲಿ ವೇಷ ಮಾಡಿ, ನಂತರದ 2 ವರ್ಷ ಸಾಲಿಗ್ರಾಮ ಮೇಳದಲ್ಲಿ, ಮತ್ತೆ 1 ವರ್ಷ ಮಂದಾರ್ತಿ ಮೇಳದಲ್ಲಿದ್ದು, ಪುನಃ ಸಾಲಿಗ್ರಾಮ ಮೇಳಕ್ಕೆ ವಾಪಾಸಾದರು. ಅಂದಿನಿಂದ ಇಂದಿನವರೆಗೆ ಒಟ್ಟು 15 ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಧಾನ ವೇಷ: ಪ್ರಧಾನ ವೇಷಧಾರಿಗಳು ಗೈರಾದಾಗ, ಯಜಮಾನರ ಪ್ರೋತ್ಸಾಹದಿಂದ ಕಿರಿಯ ಪ್ರಾಯದಲ್ಲೇ ಪ್ರಧಾನ ವೇಷ ಮಾಡಿ, ಜನಮನ್ನಣೆ ಗಳಿಸಿದರು. 2023-24ರಿಂದ ಮೇಳದ ಪ್ರಧಾನ ವೇಷಧಾರಿಯಾಗಿದ್ದಾರೆ. ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರ ನಿರಂತರ ಬೆಂಬಲ ಇದಕ್ಕೆ ಪ್ರಮುಖ ಕಾರಣ.
‘ಯಕ್ಷಸುಂದರ’ ಎಂಬ ಬಿರುದಿಗೆ ತಕ್ಕಂತೆ ಆಕರ್ಷಕ ನಿಲುವು, ಶಾರೀರತೆ, ವೇಷಕ್ಕೆ ತಕ್ಕ ಭೂಷಣ, ಅಭಿನಯದಲ್ಲಿ ಪ್ರಬುದ್ಧತೆ, ಸುಂದರ ಲಯಬದ್ಧ ಕುಣಿತ, ಪಾತ್ರೋಚಿತ ಮಾತು ಹೀಗೆ ಎಲ್ಲಾ ರೀತಿಯಲ್ಲೂ ಪೂರ್ಣರೆನಿಸಿಕೊಂಡು ಅಭಿಮಾನಿಗಳ ಮನದಲ್ಲಿ ಜಾಗವನ್ನು ದಕ್ಕಿಸಿಕೊಂಡವರು. ಪೌರಾಣಿಕ, ಸಾಮಾಜಿಕ ಎರಡೂ ವಿಧದ ಪ್ರಸಂಗಗಳಿಗೆ ಅಗತ್ಯವಾದ ರೀತಿಯಲ್ಲಿ ಪಾತ್ರವನ್ನು ಕಟ್ಟಿಕೊಡುವ ಇವರ ಶೈಲಿ ಅದ್ಭುತ. ಸಾಲ್ವ, ದುಷ್ಟಬುದ್ಧಿ, ದುಶ್ಯಾಸನ, ಈಶ್ವರ, ಭೀಮ, ಕೃಷ್ಣ ಇವರ ಪ್ರಸಿದ್ಧ ಪೌರಾಣಿಕ ಪಾತ್ರಗಳು.
ಹಿಮ್ಮೇಳದಲ್ಲಿ ಭಾಗವತರಾದ ಚಂದ್ರಕಾಂತ ರಾವ್ ಮೂಡುಬೆಳ್ಳೆಯವರು ಹಾಡುತ್ತಿದ್ದರೆ, ರಂಗದಲ್ಲಿ ಬಡಗಿನ ಖ್ಯಾತ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಪ್ರಸನ್ನರ ಜೋಡಿ ಮಾಡುವ ಮೋಡಿಯನ್ನು ಒಮ್ಮೆಯಾದರೂ ಸವಿಯಲೇಬೇಕು. ೬ ತಿಂಗಳು ಮೇಳದ ತಿರುಗಾಟ ವಾದರೆ, ಉಳಿದ ೬ ತಿಂಗಳಿನಲ್ಲೂ ಬಿಡುವಿಲ್ಲದ ಕಲಾವಿದರು. ಬೇರೆ ಬೇರೆ ಜಿಲ್ಲೆ, ರಾಜ್ಯಗಳಲ್ಲದೆ, ವಿದೇಶಗಳಲ್ಲೂ ಯಕ್ಷಗಾನವನ್ನು ಮಾಡಿ ಜನಮನಗೆದ್ದವರು.
ಇವರಲ್ಲಿರುವ ಕಲಾನಿಷ್ಠೆಯಿಂದಲೇ ‘ವೈಶಂಪಾಯನ ತೀರ’ವೆಂಬ ಚಲನಚಿತ್ರದಲ್ಲಿ ಅಭಿನಯಿ ಸುವ ಅವಕಾಶ ದೊರೆಯಿತು. ಏಪ್ರಿಲ್ 2025ರಲ್ಲಿ ತೆರೆಕಂಡ ‘ವೀರ ಚಂದ್ರಹಾಸ’ವೆಂಬ ಯಕ್ಷಗಾನೀಯ ಚಿತ್ರದಲ್ಲಿ ದುಷ್ಟಬುದ್ಧಿ ಎನ್ನುವ ಖಳನಾಯಕರಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ವೈವಿಧ್ಯಮಯ ಪಾತ್ರಗಳನ್ನು ನೋಡುವ ಕಾತರದಲ್ಲಿದ್ದಾರೆ, ಯಕ್ಷಗಾನ ಪ್ರೇಮಿಗಳು!
ಯಕ್ಷನಂದರನ ಒಡ್ಡೋಲಗ!
ಕಿರಿಯ ವಯಸ್ಸಿನಲ್ಲೇ ಹಿರಿಯ ಮತ್ತು ಪ್ರಮುಖ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಈ ಕಲಾವಿದ, ಯಕ್ಷ ಸುಂದರ ಮತ್ತು ಯಕ್ಷ ನಂದನ ಎಂಬ ಬಿರುದನ್ನು ಗಳಿಸಿದ್ದಾರೆ.