Shashidhara Halady Column: ಸದಾ ಓಡುತ್ತಿರುವ ಇದನ್ನು ಕಾಪಾಡಿಕೊಳ್ಳಿ !
ನಮ್ಮ ಆರೋಗ್ಯದ ಕುರಿತು ಎಷ್ಟೇ ಚರ್ಚೆ ಮಾಡಿದರೂ, ಎಷ್ಟೇ ಎಚ್ಚರ ವಹಿಸಿದರೂ, ದೇವರ ಕೃಪೆ ಇದ್ದರೆ ಮಾತ್ರ ಅದು ಚೆನ್ನಾಗಿರುತ್ತದೆ ಎಂಬ ಮಾತಿದೆ. ಅಂದರೆ, ಆರೋಗ್ಯದ ಕುರಿತು ಅಪಾರ ಕಾಳಜಿ ವಹಿಸಿದ್ದ ಕೆಲವರಿಗೆ ಒಮ್ಮೊಮ್ಮೆ ಗಂಭೀರ ಅನಾರೋಗ್ಯ ಕಾಡುವುದುಂಟು! ಆದ್ದರಿಂದಲೇ, ಅದೃಷ್ಟ, ದೇವರ ಕೃಪೆ, ನಮ್ಮ ಜಾಗ್ರತೆ, ವಾತಾವರಣದ ಪ್ರಭಾವ ಎಲ್ಲವೂ ಚೆನ್ನಾಗಿದ್ದಾಗ, ಆರೋಗ್ಯ ಚೆನ್ನಾಗಿರುತ್ತದೆ!


ಶಶಾಂಕಣ
shashidhara.halady@gmail.com
ನಮ್ಮ ಆರೋಗ್ಯದ ಕುರಿತು ಎಷ್ಟೇ ಚರ್ಚೆ ಮಾಡಿದರೂ, ಎಷ್ಟೇ ಎಚ್ಚರ ವಹಿಸಿದರೂ, ದೇವರ ಕೃಪೆ ಇದ್ದರೆ ಮಾತ್ರ ಅದು ಚೆನ್ನಾಗಿರುತ್ತದೆ ಎಂಬ ಮಾತಿದೆ. ಅಂದರೆ, ಆರೋಗ್ಯದ ಕುರಿತು ಅಪಾರ ಕಾಳಜಿ ವಹಿಸಿದ್ದ ಕೆಲವರಿಗೆ ಒಮ್ಮೊಮ್ಮೆ ಗಂಭೀರ ಅನಾರೋಗ್ಯ ಕಾಡುವುದುಂಟು! ಆದ್ದರಿಂದಲೇ, ಅದೃಷ್ಟ, ದೇವರ ಕೃಪೆ, ನಮ್ಮ ಜಾಗ್ರತೆ, ವಾತಾವರಣದ ಪ್ರಭಾವ ಎಲ್ಲವೂ ಚೆನ್ನಾಗಿದ್ದಾಗ, ಆರೋಗ್ಯ ಚೆನ್ನಾಗಿರುತ್ತದೆ!
ಅದೇ ರೀತಿ ನಮ್ಮ ಹೃದಯವೂ. ಹೃದಯದ ಕುರಿತು ಕಳೆದ ನಾಲ್ಕಾರು ವಾರಗಳಿಂದ ಬೆಚ್ಚಿ ಬೀಳಿಸುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಹಲವು ಊರುಗಳಲ್ಲಿ ಎಳವೆಯಲ್ಲೇ ಹೃದಯಾಘಾತವಾಗುವ ವರದಿಗಳು ವಿವರವಾಗಿ, ಅಂಕಿ-ಅಂಶ ಸಹಿತ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ. ವರದಿ ಮಾಡುವ ಉತ್ಸಾಹದ ಭರದಲ್ಲಿ, ಈ ಸುದ್ದಿ ಅವೆಷ್ಟು ಪರಿಣಾಮಕಾರಿ ಯಾಗಿ ಜನರ ಮನ ತಲುಪುತ್ತಿವೆ ಎಂದರೆ, ನಿರಂತರವಾಗಿ ಆ ಸುದ್ದಿಯನ್ನು ನೋಡಿದವರೇ ಬೆದರಿ ಹೋಗುವಷ್ಟು!
ಅದರಲ್ಲೂ, ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಯುವ ವಯಸ್ಸಿನ ಹಲವರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಯಂತೂ ಎಲ್ಲರನ್ನೂ ತಲ್ಲಣಗೊಳಿಸುವಂತಿದೆ. ಸಾಮಾನ್ಯವಾಗಿ ಹೃದಯಾಘಾತವು ವಯಸ್ಸಾದವರನ್ನು ಕಾಡುತ್ತದೆ ಎಂಬ ತಿಳಿವಳಿಕೆ ಇತ್ತು.
ನಿವೃತ್ತಿಯ ಅಂಚಿನಲ್ಲಿರುವವರು, ಇನ್ನೂ ಹಿರಿಯರು ಹೃದಯಾಘಾತಕ್ಕೆ ಒಳಗಾಗುವ ಸುದ್ದಿಗ ಳನ್ನು ಕೇಳುತ್ತಿದ್ದೆವು. ಆದರೆ, ಈಗ ಒಂದೆರಡು ವರ್ಷಗಳ ಅವಧಿಯಲ್ಲಿ, ಯುವ ಪೀಳಿಗೆ, ನಡುವ ಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುತ್ತಿರುವ ಆಘಾತಕಾರಿ ಸುದ್ದಿಗಳು ಹಲವು ಪ್ರದೇಶಗಳಿಂದ ವರದಿಯಾಗುತ್ತಿವೆ.
ಇದನ್ನೂ ಓದಿ: Shashidhara Halady Column: ಬೆಲ್ಲ ಬೆರೆಸಿದ ಸಾಂಬಾರು ಗೊತ್ತೇ ನಿಮಗೆ ?
ಇದೇನು? ಒಮ್ಮೆಗೇ ಯುವ ವಯಸ್ಸಿನವರ ಹೃದಯವು ದುರ್ಬಲವಾಗತೊಡಗಿದೆಯೇ ಎಂಬ ಆತಂಕ ಹಲವರನ್ನು ಕಾಡಿದೆ. ಹಾಸನ ಜಿಲ್ಲೆಯಿಂದ ಕಳೆದ ಒಂದೆರಡು ವಾರಗಳಿಂದ ಅಂಕಿ-ಅಂಶ ಸಹಿತ ವರದಿಯಾಗುತ್ತಿರುವ ಹೃದಯಾಘಾತಗಳ ಸಂಖ್ಯೆ ನಿಜಕ್ಕೂ ದಿಗಿಲು ಹುಟ್ಟಿಸುವಂಥದ್ದು. ಆ ಜಿಲ್ಲೆಯ ವರದಿಗಾರರು ಅಂಕಿ-ಅಂಶಗಳನ್ನು ನಿಖರವಾಗಿ ಪಟ್ಟಿ ಮಾಡಿ, ಮಾಧ್ಯಮಗಳಿಗೆ ನೀಡಿದ್ದರ ಜತೆಯಲ್ಲೇ,
ವರದಿ ಪ್ರಸಾರವಾಗುತ್ತಿರುವ ದಿನಗಳಲ್ಲೇ ಮತ್ತೆ ದಿನಕ್ಕೆ ಎರಡು ಮೂರರಂತೆ ಹೃದಯಾಘಾತಗಳ ವರದಿ ಆ ಜಿಲ್ಲೆಯಿಂದ ಬರುತ್ತಿದೆ. ಹಾಗೆ ನೋಡಿದರೆ, ಹಾಸನ ಮಾತ್ರವಲ್ಲ, ಇತರ ಹಲವು ಜಿಲ್ಲೆ ಗಳಿಂದಲೂ ಇಂಥ ಹೃದಯಾಘಾತದ ವರದಿಗಳು ಬರುತ್ತಿವೆ. ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯುವ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ವರದಿ ಗಳು ಪದೇ ಪದೆ ಬರುತ್ತಿದ್ದು, ಕರಾವಳಿ ಜಿಲ್ಲೆಯ ಕೆಲವು ಪ್ರಾಜ್ಞರು ಮತ್ತು ಪತ್ರಕರ್ತರು ಈ ಕುರಿತು ಸರಕಾರದ ಗಮನ ಸೆಳೆದು, ಎಚ್ಚರಿಕೆಯ ಗಂಟೆಯನ್ನು ಅದಾಗಲೇ ಬಾರಿಸಿದ್ದಾರೆ.
ಜತೆಗೆ, ಸರಕಾರವೂ, ನಡುವಯಸ್ಸಿನವರನ್ನು ಆಘಾತಕ್ಕೆ ತಳ್ಳುತ್ತಿರುವ ಇಂಥ ನೋವಿನ ಘಟನೆಗಳ ಕುರಿತು ಸಂಶೋಧನೆ ನಡೆಸುವ ವ್ಯವಸ್ಥೆಯನ್ನೂ ಮಾಡಿದೆ. ಆದರೂ, ಈಚಿನ ವರ್ಷಗಳಲ್ಲಿ ವರದಿಯಾಗುತ್ತಿರುವ ಇಂಥ ಹೃದಯಾಘಾತಗಳು ಎಂಥವರನ್ನೂ ತಲ್ಲಣಕ್ಕೆ ಒಳಪಡಿಸುತ್ತಿರುವು ದಂತೂ ನಿಜ.
ಇಲ್ಲಿ ಇನ್ನೊಂದು ವಿಚಾರ ಗಮನಸೆಳೆಯುವಂತಿದೆ: ಕೆಲವು ದಶಕಗಳ ಹಿಂದೆ, ಹೃದಯಾಘಾತ ವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಷ್ಟು ಸಮಯ ದೊರಕುತ್ತಿತ್ತು. ಆದರೆ, ಈಚಿನ ಒಂದೆರಡು ವರ್ಷಗಳ ವರದಿಗಳನ್ನು ಗಮನಿಸಿದರೆ, ಯುವ ವಯಸ್ಸಿನ, ನಡುವಯಸ್ಸಿನ ಹಲವರು ಇದ್ದಕ್ಕಿದ್ದಂತೆ ಕುಸಿದು, ಅಲ್ಲೇ ಜೀವ ಕಳೆದುಕೊಳ್ಳುವ ದಾರುಣ ವಿದ್ಯಮಾನ ಕಾಣಿಸು ತ್ತಿದೆ.
ಅಂದರೆ, ಹೃದಯದ ತೊಂದರೆ ಇದೆ ಎಂದು ಗೊತ್ತಾದ ನಂತರ, ಎದೆಭಾಗದಲ್ಲಿ ನೋವು ಕಾಣಿಸಿದ ನಂತರ, ಸುಸ್ತು ಕಾಣಿಸಿದ ನಂತರ, ವೈದ್ಯರ ಬಳಿ ಹೋಗಿ, ಸೂಕ್ತ ಮತ್ತು ತುರ್ತು ಚಿಕಿತ್ಸೆ ಪಡೆಯು ವಷ್ಟು ಸಮಯ ಸಹ ಇಂದು ಹಲವರಿಗೆ ದೊರಕುತ್ತಿಲ್ಲ. ಹೃದಯಾಘಾತವಾದ ಕೆಲವೇ ನಿಮಿಷ ಗಳಲ್ಲಿ ಜೀವ ಹೋಗುತ್ತಿರುವ ದಾರುಣ ಎನ್ನಬಹುದಾದ ವರದಿಗಳನ್ನು ಕಂಡಾಗ, ನಿಜಕ್ಕೂ ತಲ್ಲಣ ಎನಿಸುತ್ತಿದೆ.
ಹಾಸನ ಜಿಲ್ಲೆಯ ವಿಚಾರವನ್ನೇ ಗಮನಿಸಿದರೆ, ಕಳೆದ ವಾರದಲ್ಲಿ ವೈದ್ಯರೊಬ್ಬರು ಸಹ ಕಡಿಮೆ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾದ ವಿಚಾರ ಮಾಧ್ಯಮಗಳಲ್ಲಿ ವರದಿಯಾಯಿತು! ಜನರಿಗೆ ಆರೋಗ್ಯದ ಕುರಿತು ಸಲಹೆ ನೀಡಿ, ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಹೃದಯಾಘಾತಕ್ಕೆ ಬಹುಬೇಗನೆ ಬಲಿಯಾಗಿರುವುದು ಇನ್ನಷ್ಟು ತಲ್ಲಣ ಹುಟ್ಟಿಸಿದೆ. ಏಕೆಂದರೆ, ಹೆಚ್ಚಿನ ವೈದ್ಯರಿಗೆ ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ವೈಜ್ಞಾನಿಕ ಮಾಹಿತಿ ಇರುತ್ತದೆ. ಅವರಿಗೇ ಅಪರೂಪಕ್ಕೆ ಹೀಗಾದಾಗ, ಇನ್ನು ಜನಸಾಮಾನ್ಯರ ಪಾಡೇನು? ಹೃದಯಾಘಾತ, ಹೃದಯದ ಆರೋಗ್ಯ ಇವೆಲ್ಲವನ್ನೂ ವಿವರವಾಗಿ ಚರ್ಚಿಸಲು, ಆ ಕುರಿತು ಸೂಕ್ತ ಮಾಹಿತಿ ಮತ್ತು ಎಚ್ಚರಿಕೆ ನೀಡಲು, ಪರಿಣತ ವೈದ್ಯರಿಂದ ಮಾತ್ರ ಸಾಧ್ಯ. ಈ ವಿಚಾರವನ್ನು ಗಮನದಲ್ಲಿಟ್ಟು ಕೊಂಡೇ,
ಇತ್ತೀಚೆಗೆ ಯುವಜನರಿಗೆ ಹೆಚ್ಚು ಹೃದಯಾಘಾತವಾಗುತ್ತಿರುವ ವಿದ್ಯಮಾನವನ್ನು ಈ ಅಂಕಣ ದಲ್ಲಿ ಚರ್ಚಿಸಲಾಗಿದೆ. ಹೃದಯಾಘಾತ ಏಕೆ ಆಗುತ್ತದೆ ಮತ್ತು ಹೃದಯದ ಆರೋಗ್ಯ ಕಾಪಾಡಿ ಕೊಳ್ಳಲು ಏನು ಮಾಡಬೇಕು ಎಂಬ ವಿಚಾರ ನಮ್ಮ ವೈದ್ಯರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ, ಆರೋಗ್ಯಪೂರ್ಣ ಬದುಕು ನಡೆಸಲು, ಹೃದಯಕ್ಕೆ ಒತ್ತಡ ಬೀಳದಂತೆ ದಿನಚರಿ ರೂಪಿಸಲು, ಸೂಕ್ತ ಸಲಹೆಗಳನ್ನು ಈಗಾಗಲೇ ಅಽಕೃತವಾಗಿಯೇ ನೀಡಿದ್ದಾರೆ.
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಜನಪರ ಕಾಳಜಿಯುಳ್ಳ ಹಲವು ವೈದ್ಯರು ಯುಟ್ಯೂಬ್, ಭಾಷಣ, ಕೈಪಿಡಿಗಳ ಮೂಲಕ ಸೂಕ್ತ ಸಲಹೆಯನ್ನು ಈಗಾಗಲೇ ನೀಡಿದ್ದಾರೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು, ದಿನಕ್ಕೆ ಅರ್ಧ ಗಂಟೆಯಿಂದ ಒಂದು ಗಂಟೆ ನಡಿಗೆ ಅಥವಾ ವ್ಯಾಯಾಮ ಮಾಡುವುದು, ಧೂಮಪಾನವನ್ನು ತ್ಯಜಿಸುವುದು, ಜಿಡ್ಡು ಪದಾರ್ಥಗಳ ಸೇವನೆಯಲ್ಲಿ ಮಿತಿ, ಅತಿಯಾದ ಆಹಾರ ಸೇವನೆಯಿಂದ ದೂರವಿರುವುದು ಇವೇ ಮೊದಲಾದ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.
ಇದನ್ನು ಪಾಲಿಸಿದವರ ಆರೋಗ್ಯ ಚೆನ್ನಾಗಿರುವುದನ್ನು ಸಹ ಗಮನಿಸಲಾಗಿದೆ. ಆದರೆ, ಈಚಿನ ಒಂದೆರಡು ವರ್ಷಗಳಲ್ಲಿ ಯುವ ವಯಸ್ಸಿನವರು ಮತ್ತು ನಡುವಯಸ್ಸಿನವರೇ ಅಧಿಕ ಸಂಖ್ಯೆ ಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದರ ನಿರ್ದಿಷ್ಟ ಕಾರಣವನ್ನು ಇನ್ನೂ ನಿಖರವಾಗಿ ಪತ್ತೆ ಹಚ್ಚಲಾಗಿಲ್ಲ. ಬಹುಶಃ ಈ ಕುರಿತು ಇನ್ನಷ್ಟು ವೈದ್ಯಕೀಯ ಸಂಶೋಧನೆಗಳು ಅಗತ್ಯವಾಗಿರ ಬಹುದು.
ಸರಕಾರದ ಅಂಗಸಂಸ್ಥೆಗಳು ನಿನ್ನೆ ತಾನೆ ಹೇಳಿಕೆ ನೀಡಿ, ಕೋವಿಡ್ ತಡೆಯುವ ಲಸಿಕೆಯಿಂದ ಹೃದಯಾಘಾತವಾಗುವ ಸಂದರ್ಭ ತೀರಾ ಕಡಿಮೆ ಎಂದು ಜನರಲ್ಲಿ ಧೈರ್ಯ ತುಂಬಿವೆ. ಹಾಗಿದ್ದರೆ, ಇತ್ತೀಚೆಗೆ ವರದಿಯಾಗುತ್ತಿರುವ ಹೃದಯಾಘಾತಗಳಿಗೆ ಕಾರಣವೇನು? ಯುವ ವಯಸ್ಸಿನವರು ಅಲ್ಲಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ವರದಿಗಳು ಅಧಿಕ ಸಂಖ್ಯೆಯಲ್ಲಿ ಹೊರ ಬರುತ್ತಿ ರುವ ಈ ದಿನಗಳಲ್ಲಿ, ಜನಸಾಮಾನ್ಯರಲ್ಲಿ ಧೈರ್ಯ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇ ಕಾಗಿದೆ.
ಸರಕಾರದ ಅಂಗಸಂಸ್ಥೆಗಳು, ಅಧಿಕಾರದಲ್ಲಿರುವವರು, ವೈದ್ಯರು ಎಲ್ಲರೂ ಜನರಿಗೆ ಧೈರ್ಯ ನೀಡುತ್ತಾ, ತಲ್ಲಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕಿದೆ, ಸೂರ್ತಿ ತುಂಬುವ ಮಾತುಗಳನ್ನು ಆಡಬೇಕಾಗಿದೆ. ಇಂಥ ಎಚ್ಚರವನ್ನು ಇಟ್ಟುಕೊಂಡೇ, ಕೆಲವು ಸೂಕ್ಷ್ಮ ಎನಿಸುವ ವಿಚಾರಗಳನ್ನು ಈ ಬರಹದಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ. ಕಳೆದ ಕೆಲವು ದಶಕಗಳಿಂದ ಗಮನಿಸುತ್ತಾ ಬಂದಂತೆ, ಎದ್ದು ಕಾಣಿಸುವ ಒಂದು ವಿಚಾರವೆಂದರೆ, ನಮ್ಮ ಜನರಲ್ಲಿ ಅತಿಯಾದ ವಾಹನ ಬಳಕೆ. ಅಂದರೆ, ಸ್ಕೂಟರ್, ಮೋಟಾರ್ ಸೈಕಲ್ ಮತ್ತು ಕಾರುಗಳನ್ನು ಜನರು ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಬಳಸಿ,
ಅದರಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವ ಪ್ರಮುಖ ವಿದ್ಯಮಾನ. 1980ರ ದಶಕ ದಲ್ಲಿ ಈ ಲೇಖಕ ಗಮನಿಸಿದಂತೆ, ಬಹುಪಾಲು ಉದ್ಯೋಗಿಗಳು, ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದರು. ಅದರಿಂದಾಗುವ ಒಂದು ಲಾಭವೆಂದರೆ, ಬಸ್‌ಸ್ಟ್ಯಾಂಡ್‌ಗೋ, ರೈಲ್ವೆ ನಿಲ್ದಾಣಕ್ಕೋ ತುಸು ದೂರ ನಡೆಯಬೇಕಿತ್ತು. ಅಂದರೆ ನೂರು ಅಡಿ, ಇನ್ನೂರು ಅಡಿ ಆಗಾಗ ನಡೆಯುತ್ತಿದ್ದರು; ಮಧ್ಯಾಹ್ನ ಊಟದ ಅವಧಿಯಲ್ಲಿ, ತುಸು ದೂರ ನಡೆದು ಕ್ಯಾಂಟೀನಿಗೋ, ಬೇರೆಲ್ಲೋ ಹೋಗಿ ಊಟ ಮಾಡಿ, ಪುನಃ ನಡೆದು ವಾಪಾಸು ಬರುತ್ತಿದ್ದರು.
ಇಂದಿನ ದಿನಗಳಲ್ಲಿ, ಮನೆಯ ಬಾಗಿಲಿನಿಂದ ಕಚೇರಿ ಬಾಗಿಲಿನ ತನಕ ವಾಹನ ಬಳಕೆ ಸಾಮಾನ್ಯ ವಾಗಿದೆ, ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಒತ್ತಡದ ಕೆಲಸ ಮಾಡುವ ಕೆಲವರು ಗಂಟೆಗೊಮ್ಮೆಯಂತೆ, ಎರಡು ಗಂಟೆಗೊಮ್ಮೆಯಂತೆ ಕಾಫಿ ಮತ್ತು ಚಹಾ ಸೇವನೆ ಮಾಡುವ ಚಟುವಟಿಕೆಯೂ, ದೈಹಿಕ ಆರೋಗ್ಯಕ್ಕೆ ತೊಡಕನ್ನುಂಟುಮಾಡುತ್ತದೆ.
ನಮ್ಮ ದೇಶದಲ್ಲಿ ಸಕ್ಕರೆ ಬೆರೆಸಿದ ಕಾಫಿ, ಚಹಾ ಸಾಮಾನ್ಯ. ಪ್ರತಿ ಬಾರಿ ಕಾಫಿ ಕುಡಿದಾಗಲೂ, ಅರ್ಧ ಚಮಚ ಸಕ್ಕರೆ ಸೇವನೆ. ಈ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು, ನಮ್ಮ ದೇಹವು, ತಾನು ಶೇಖರಿಸಿಟ್ಟಿ ರುವ ವಿಟಮಿನ್‌ಗಳನ್ನು ಖರ್ಚುಮಾಡಬೇಕಂತೆ! ಇದರಿಂದಾಗಿ ನಿಧಾನವಾಗಿ ಅಗತ್ಯ ವಿಟಮಿನ್ ಕೊರತೆ, ಅದರಿಂದ ಒಟ್ಟಾರೆ ಆರೋಗ್ಯಕ್ಕೆ ಕುಂದು.
ಮಹಾತ್ಮಾ ಗಾಂಧಿಯವರು ಸ್ವಾತಂತ್ರ್ಯಪೂರ್ವದಲ್ಲಿ ಸಕ್ಕರೆಯ ವಿರುದ್ಧ ಚಳವಳಿ ನಡೆಸಿದ್ದರು. ಅವರು ನೀಡಿದ ಕಾರಣ, ‘ಸಕ್ಕರೆಯಿಂದ ಹೃದಯದ ಆರೋಗ್ಯ ಕುಂದುತ್ತದೆ!’. ಈಚಿನ ವರ್ಷಗಳಲ್ಲಿ ಆಹಾರದಲ್ಲಿ ಅತಿಯಾಗಿ ಬಳಸುತ್ತಿರುವ ಸಕ್ಕರೆಯಿಂದಲೂ, ಇಂದಿನ ಯುವಜನರ ಆರೋಗ್ಯಕ್ಕೆ ಹಾನಿಯಾಗಿರುವ ಸಾಧ್ಯತೆ ಇದೆ. ಕಳೆದ ಒಂದೆರಡು ದಶಕದಲ್ಲಿ ವಿದ್ಯಾರ್ಥಿಗಳ ಜಂಕ್ ಫುಡ್ ಮತ್ತು ಸಕ್ಕರೆ ಬೆರೆಸಿದ ಆಹಾರ ಸೇವನೆಯ ಪ್ರಮಾಣ ಜಾಸ್ತಿಯಾಗಿದೆ! ಬಿಸ್ಕಿಟ್, ಚಾಕೊಲೇಟ್, ಐಸ್‌ಕ್ರೀಂ, ಬೇಕರಿ ತಿನಿಸುಗಳು ಇವೆಲ್ಲವನ್ನೂ ಪ್ರತಿದಿನವೆಂಬಂತೆ ತಿನ್ನುತ್ತಾ ಬಂದಿರುವ ಒಂದು ತಲೆಮಾರನ್ನು ನಾವಿಂದು ಕಾಣಬಹುದು.
ಅವರು ಇಂದಿನ ಯುವಜ ನತೆಯ ಭಾಗವಾಗಿದ್ದಾರೆ. ಸಕ್ಕರೆ ಬೆರೆಸಿದ ಇಂಥ ತಿನಿಸುಗಳ ನಿರಂತರ ಸೇವನೆಯಿಂದ ಆಗುವ ದುಷ್ಪರಿಣಾಮವನ್ನು ಅಧ್ಯಯನಗಳು ಗುರುತಿಸಬೇಕಾಗಿದೆ.
ಎಣ್ಣೆ, ಮೈದಾ, ಪಾಲಿಶ್ ಮಾಡಿದ ಅಕ್ಕಿಯ ಬಳಕೆ ಈಗ ತೀರಾ ಸಾಮಾನ್ಯ. ಎಣ್ಣೆಯ ಬಳಕೆ ಯಲ್ಲೂ ಇನ್ನೊಂದು ಆಯಾಮವಿದೆ. ಅದೇನೆಂದರೆ ಆರೋಗ್ಯಕ್ಕೆ ಹಾನಿಮಾಡುವುದೆಂದು ಖಚಿತವಾಗಿ ಗುರುತಿಸಲಾಗಿರುವ ಪಾಮ್ ಆಯಿಲ್ ಬಳಕೆ! ಎಲ್ಲಾ ಬೇಕರಿ ತಿನಿಸು, ಬಿಸ್ಕೆಟ್ ಮೊದಲಾದವುಗಳಲ್ಲಿ ಪಾಮ್ ಆಯಿಲ್ ಬಳಕೆಯನ್ನು ಅಧಿಕೃತಗೊಳಿಸಲಾಗಿದ್ದು, ಇದನ್ನು ಹಲವು ವರ್ಷಗಳ ಕಾಲ ತಿನ್ನುತ್ತಾ ಬಂದಿರುವವರ ಆರೋಗ್ಯ ಕುಂದಿರುವ ಸಾಧ್ಯತೆ ಇದ್ದೇ ಇದೆ.
ಈಚಿನ ಒಂದು ದಶಕಗಳಿಂದ ಗಮನಿಸಿದ ಪ್ರಮುಖ ಮತ್ತು ಕಳವಳಕಾರಿ ವಿಚಾರವೆಂದರೆ, ‘ನಿದ್ದೆ ಮಾಡದ ಯುವಜನತೆ!’ ಅಂದರೆ, ಅಗತ್ಯ ಪ್ರಮಾಣ ನಿದ್ದೆಯನ್ನು ಮಾಡದೇ, ಕೆಲಸದ ಒತ್ತಡ ದಲ್ಲೋ, ಮೊಬೈಲ್ ನೋಡುತ್ತಲೋ ಕಾಲ ಕಳೆಯುತ್ತಿರುವ ಒಂದಿಡೀ ತಲೆಮಾರನ್ನು ನಾವಿಂದು ಕಾಣಬಹುದು.
ವಿದ್ಯಾರ್ಥಿಗಳು, ಹೊಸದಾಗಿ ಕೆಲಸಕ್ಕೆ ಸೇರಿರುವವರು, ಜನಸಾಮಾನ್ಯರು- ಇವರಲ್ಲಿ ಹೆಚ್ಚಿನವರು ರಾತ್ರಿ ಮಲಗುವ ಮುನ್ನ ಹಲವು ನಿಮಿಷಗಳ ಕಾಲ ಮೊಬೈಲ್ ನೋಡುತ್ತಾ (ಕೆಲವು ಬಾರಿ ಗಂಟೆಗಟ್ಟಲೆ) ಸಾಮಾಜಿಕ ಜಾಲತಾಣದಲ್ಲಿ ವಿಹರಿಸುತ್ತಿರುವ ವಿದ್ಯಮಾನ. ಇದು ಎಷ್ಟು ಸಾರ್ವತ್ರಿಕವಾಗಿದೆ ಎಂದರೆ, ಈ ಬರಹ ಓದುತ್ತಿರುವ ಮನೆಗಳಲ್ಲಿ ಒಬ್ಬರಾದರೂ ಈ ರೀತಿ ನಿದ್ದೆಗೆಟ್ಟು ಮೊಬೈಲ್ ನೋಡುವ ಪ್ರವೃತ್ತಿಯನ್ನು ಅಂಟಿಸಿಕೊಂಡಿರಬಹುದು!
ಅಂದರೆ, ಅಷ್ಟು ನಿಮಿಷಗಳ ಕಾಲ ಅಂಥವರ ನಿದ್ರೆಯನ್ನು ಕಸಿದುಕೊಂಡಿವೆ ಈ ಸಾಮಾಜಿಕ ಜಾಲತಾಣಗಳು! ದೇಹದ ಆರೋಗ್ಯ ಮತ್ತು ಹೃದಯದ ಆರೋಗ್ಯ ಕಾಪಾಡಲು ಪ್ರತಿದಿನ ಸರಾಸರಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಅಗತ್ಯ ಎಂದು ವೈದ್ಯಕೀಯ ಸಂಶೋಧನೆಗಳು ಸ್ಪಷ್ಟವಾಗಿ ಹೇಳಿವೆ. ಇಂದಿನ ದಿನಚರಿಯಲ್ಲಿ, ಈ ರೀತಿ ವರ್ಷಗಟ್ಟಲೆ ನಿದ್ದೆಗೆಡುವ ಪ್ರವೃತ್ತಿ ಸಾಮಾನ್ಯ ವಾಗಿರುವುದರಿಂದ, ಇದರಿಂದಲೂ ಹೃದ ಯದ ಆರೋಗ್ಯಕ್ಕೆ ಕುಂದುಂಟಾಗಿರಬಹುದು.
ಪ್ರತಿದಿನ 30ರಿಂದ 60 ನಿಮಿಷ ನಡಿಗೆಯೂ ಇಂದಿನ ಯುವಜನತೆಯಿಂದ ದೂರಾಗಿದೆ! ಅಂದರೆ, ಅದಾಗಿ ದೂರಾಗಿದ್ದು ಅಲ್ಲ, ಬದಲಿಗೆ ಇಂದಿನ ಜನರು ಈ ಕನಿಷ್ಠ ವ್ಯಾಯಾಮವನ್ನು ಮಾಡು ತ್ತಿಲ್ಲ, ಮಾಡಲು ಅವರಿಗೆ ಸಮಯ ದೊರಕುತ್ತಿಲ್ಲ! ಇಂಥ ಹಲವಈಚಿನ ಒಂದು ದಶಕಗಳಿಂದ ಗಮನಿಸಿದ ಪ್ರಮುಖ ಮತ್ತು ಕಳವಳಕಾರಿ ವಿಚಾರವೆಂದರೆ, ‘ನಿದ್ದೆ ಮಾಡದ ಯುವಜನತೆ!’ ಅಂದರೆ, ಅಗತ್ಯ ಪ್ರಮಾಣ ನಿದ್ದೆಯನ್ನು ಮಾಡದೇ, ಕೆಲಸದ ಒತ್ತಡದಲ್ಲೋ, ಮೊಬೈಲ್ ನೋಡುತ್ತಲೋ ಕಾಲ ಕಳೆಯುತ್ತಿರುವ ಒಂದಿಡೀ ತಲೆಮಾರನ್ನು ನಾವಿಂದು ಕಾಣಬಹುದು.
ವಿದ್ಯಾರ್ಥಿಗಳು, ಹೊಸದಾಗಿ ಕೆಲಸಕ್ಕೆ ಸೇರಿರುವವರು, ಜನಸಾಮಾನ್ಯರು- ಇವರಲ್ಲಿ ಹೆಚ್ಚಿನವರು ರಾತ್ರಿ ಮಲಗುವ ಮುನ್ನ ಹಲವು ನಿಮಿಷಗಳ ಕಾಲ ಮೊಬೈಲ್ ನೋಡುತ್ತಾ (ಕೆಲವು ಬಾರಿ ಗಂಟೆಗಟ್ಟಲೆ) ಸಾಮಾಜಿಕ ಜಾಲತಾಣದಲ್ಲಿ ವಿಹರಿಸುತ್ತಿರುವ ವಿದ್ಯಮಾನ. ಇದು ಎಷ್ಟು ಸಾರ್ವ ತ್ರಿಕವಾಗಿದೆ ಎಂದರೆ, ಈ ಬರಹ ಓದುತ್ತಿರುವ ಮನೆಗಳಲ್ಲಿ ಒಬ್ಬರಾದರೂ ಈ ರೀತಿ ನಿದ್ದೆಗೆಟ್ಟು ಮೊಬೈಲ್ ನೋಡುವ ಪ್ರವೃತ್ತಿಯನ್ನು ಅಂಟಿಸಿಕೊಂಡಿರಬಹುದು!
ಅಂದರೆ, ಅಷ್ಟು ನಿಮಿಷಗಳ ಕಾಲ ಅಂಥವರ ನಿದ್ರೆಯನ್ನು ಕಸಿದುಕೊಂಡಿವೆ ಈ ಸಾಮಾಜಿಕ ಜಾಲತಾಣಗಳು! ದೇಹದ ಆರೋಗ್ಯ ಮತ್ತು ಹೃದಯದ ಆರೋಗ್ಯ ಕಾಪಾಡಲು ಪ್ರತಿದಿನ ಸರಾಸರಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಅಗತ್ಯ ಎಂದು ವೈದ್ಯಕೀಯ ಸಂಶೋಧನೆಗಳು ಸ್ಪಷ್ಟವಾಗಿ ಹೇಳಿವೆ. ಇಂದಿನ ದಿನಚರಿಯಲ್ಲಿ, ಈ ರೀತಿ ವರ್ಷಗಟ್ಟಲೆ ನಿದ್ದೆಗೆಡುವ ಪ್ರವೃತ್ತಿ ಸಾಮಾನ್ಯ ವಾಗಿರುವುದರಿಂದ, ಇದರಿಂದಲೂ ಹೃದಯದ ಆರೋಗ್ಯಕ್ಕೆ ಕುಂದುಂಟಾಗಿರಬಹುದು. ಪ್ರತಿದಿನ 30 ರಿಂದ 60 ನಿಮಿಷ ನಡಿಗೆಯೂ ಇಂದಿನ ಯುವಜನತೆಯಿಂದ ದೂರಾಗಿದೆ!
ಅಂದರೆ, ಅದಾಗಿ ದೂರಾಗಿದ್ದು ಅಲ್ಲ, ಬದಲಿಗೆ ಇಂದಿನ ಜನರು ಈ ಕನಿಷ್ಠ ವ್ಯಾಯಾಮವನ್ನು ಮಾಡುತ್ತಿಲ್ಲ, ಮಾಡಲು ಅವರಿಗೆ ಸಮಯ ದೊರಕುತ್ತಿಲ್ಲ! ಇಂಥ ಹಲವ ಕಾರಣಗಳಿಂದಾಗಿ, ಹೆಚ್ಚು ಹೃದಯಾಘಾತಗಳು ಆಗುತ್ತಿರುವ ಸಾಧ್ಯತೆ ಇದೆ. ಈ ಕುರಿತು ವೈದ್ಯಕೀಯ ವಲಯವು ಇನ್ನಷ್ಟು ಸಂಶೋಧನೆಗಳನ್ನು ಕೈಗೊಂಡು, ಯುವಜನರಿಗೆ ಸೂಕ್ತ ಸಲಹೆಗಳನ್ನು ನೀಡಬೇಕೆಂಬು ದು ಈ ಅಂಕಣದ ಉದ್ದೇಶವೇ ಹೊರತು ಯಾರೂ ಸ್ವಯಂವೈದ್ಯ ಮಾಡಿಕೊಳ್ಳಬಾರದು ಎಂದೇ ಸಲಹೆ ನೀಡಲಾಗಿದೆ. ಪ್ರತಿದಿನವೆಂಬಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹೃದಯಾ ಘಾತದ ಸುದ್ದಿಗಳನ್ನು ನಿರಂತರವಾಗಿ ನೋಡುತ್ತಿರುವ ಜನಸಾಮಾನ್ಯರು ಧೃತಿಗೆಡದೇ, ಸಮಚಿತ್ತ ದಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ಅಗತ್ಯ. ಈ ಕುರಿತು ನಮ್ಮ ಸರಕಾರವು ಸಹ, ಜನಸಾಮಾನ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ದಿನಗಳು ಇದಾಗಿವೆ.