ಅದ್ದೂರಿ ಮದುವೆಗಳು ಬೇಕು
ಬೆಂಗಳೂರಿನಲ್ಲಿರಲಿ ಅಥವಾ ಯಾವುದೇ ಊರಿನಲ್ಲಿರಲಿ ಒಂದು ಮದುವೆ ಎಂದರೆ ಅದು ನೂರಾರು ಜನರಿಗೆ ಉದ್ಯೋಗ ಸೃಷ್ಟಿಗೆ ದಾರಿಯಾಗಿದೆ ಎನ್ನುವುದು ಸುಳ್ಳಲ್ಲ. ಒಂದು ಸಾಧಾರಣ ಕಲ್ಯಾಣ ಮಂದಿರವಾದರೆ ಕಡಿಮೆ ಎಂದರೆ 80ರಿಂದ 100 ಜನರಿಗೆ ಕನಿಷ್ಠ 2-3 ದಿನ ಉದ್ಯೋಗ. ಇನ್ನು ದೊಡ್ಡ ಪ್ರದೇಶವಾದಷ್ಟೂ ಉದ್ಯೋಗ ಸೃಷ್ಟಿ ಜಾಸ್ತಿಯಾಗುತ್ತದೆ.
-
ಗೋಪಿನಾಥ ರಾವ್ ಬಾಪಟ್, ಸಾಗರ
ವಿಶ್ವವಾಣಿ ಪತ್ರಿಕೆಯ ಜನವರಿ 13ರ ‘ಆರಾಮ’ ಪುರವಣಿಯಲ್ಲಿ ‘ಮದುವೆಯೋ ಮನೆಹಾಳೋ...?’ ಎಂಬ ಶೀರ್ಷಿಕೆಯ ಲೇಖನವೊಂದು ಪ್ರಕಟವಾಗಿದೆ. ಮದುವೆಮನೆಯ ಆಡಂಬರದ ಬಗ್ಗೆ ಇದರಲ್ಲಿ ಹೇಳುತ್ತಾ ಹೋಗಿರುವ ಲೇಖಕರು, ‘ಮದುವೆಯನ್ನು ಸರಳವಾಗಿ ನಡೆಸಬಾರದೇ?’ ಎಂದು ಪ್ರಶ್ನಿಸಿದ್ದಾರೆ. ಈ ಆಡಂಬರದ ಮದುವೆಯ ಹಿಂದೆ ಇರುವ ಇನ್ನೊಂದು ಮುಖವನ್ನು ಪರಿಶೀಲಿಸಿ ದರೆ, ಬಹುಶಃ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು ಎನಿಸುತ್ತದೆ.
ಬೆಂಗಳೂರಿನಲ್ಲಿರಲಿ ಅಥವಾ ಯಾವುದೇ ಊರಿನಲ್ಲಿರಲಿ ಒಂದು ಮದುವೆ ಎಂದರೆ ಅದು ನೂರಾರು ಜನರಿಗೆ ಉದ್ಯೋಗ ಸೃಷ್ಟಿಗೆ ದಾರಿಯಾಗಿದೆ ಎನ್ನುವುದು ಸುಳ್ಳಲ್ಲ. ಒಂದು ಸಾಧಾರಣ ಕಲ್ಯಾಣ ಮಂದಿರವಾದರೆ ಕಡಿಮೆ ಎಂದರೆ 80ರಿಂದ 100 ಜನರಿಗೆ ಕನಿಷ್ಠ 2-3 ದಿನ ಉದ್ಯೋಗ. ಇನ್ನು ದೊಡ್ಡ ಪ್ರದೇಶವಾದಷ್ಟೂ ಉದ್ಯೋಗ ಸೃಷ್ಟಿ ಜಾಸ್ತಿಯಾಗುತ್ತದೆ.
ಆಹ್ವಾನ ಪತ್ರಿಕೆ ಮುದ್ರಿಸುವವರಿಂದ ಹಿಡಿದು, ಬಟ್ಟೆ, ಪಾತ್ರೆ, ಗಾಜಿನ ಬಳೆ, ಹಣ್ಣು ಹೂವಿನ ವ್ಯಾಪಾರಿಗಳವರೆಗೆ, ಚಪ್ಪರ ಹಾಕುವವರಿಗೆ, ಅಡುಗೆ ಮಾಡುವವರಿಗೆ ಮತ್ತು ಬಡಿಸುವವರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ: Roopa Gururaj Column: ಬದುಕಿಗೆ ಮರು ಉಡುಗೊರೆ ನೀಡಿದ ಗ್ರೇಸ್ ಗ್ರೋನರ್
ಜತೆಗೆ ಕಸ ಗುಡಿಸುವವರು, ಶೌಚಾಲಯವನ್ನು ಚೊಕ್ಕಗೊಳಿಸುವವರು, ಸ್ವಚ್ಛತೆಯ ಕೆಲಸ ಮಾಡು ವವರಿಗೆ ಕೂಡ ಕೆಲಸಗಳು ಸೃಷ್ಟಿಯಾಗುತ್ತವೆ. ಇವರೆಲ್ಲರ ಜೀವನ ಸಾಗುವುದು ಇಂಥ ಉದ್ಯೋಗ ದಿಂದಲೇ ಎಂಬುದನ್ನು ಮರೆಯಬಾರದು ಮತ್ತು ಮದುವೆ ಅದ್ದೂರಿಯಾದಷ್ಟೂ ಇಂಥವರ ಉದ್ಯೋಗದ ಅವಧಿ ಮತ್ತು ಆದಾಯ ಹೆಚ್ಚಾಗುತ್ತದೆ.
ಇದು ವರ್ಷದ ಕೆಲವೇ ದಿನಗಳು ಸಿಗುವಂಥ ಉದ್ಯೋಗ. ಅದರಲ್ಲಿ ಕೆಲವರು ಈ ಅವಧಿಯಲ್ಲಿ ಬರುವ ಆದಾಯದಿಂದ ತಮ್ಮ ತಿಂಗಳ/ವರ್ಷದ ಬದುಕನ್ನು ಕಟ್ಟಿಕೊಳ್ಳಬೇಕು. ಈ ರೀತಿಯ ಅದ್ದೂರಿ ಮದುವೆಯ ಇನ್ನೊಂದು ಬಹುಮುಖ್ಯ ವಿಚಾರವೆಂದರೆ, ಹೀಗೆ ಹೆಚ್ಚು ಹೆಚ್ಚು ಖರ್ಚು ಮಾಡುವವರು, ಹೆಚ್ಚಿನ ಆದಾಯ ಗಳಿಸಿ ಸಂಗ್ರಹಿಸಿಟ್ಟವರೇ ಎಂಬುದನ್ನು ಮರೆಯಬಾರದು.
ಹಾಗೆ ಸಂಗ್ರಹವಾದ ಹಣ ಹೀಗೆ ಖರ್ಚಾಗದಿದ್ದರೆ, ಯಾವುದಕ್ಕೂ ಉಪಯೋಗಕ್ಕೆ ಬರದೆ, ಅಲ್ಲಿ ಇಲ್ಲಿ ಬಚ್ಚಿಡಲಿಕ್ಕಷ್ಟೇ ಸೀಮಿತವಾಗುತ್ತದೆ. ಅಂಥ ಆದಾಯವು ಕಾನೂನು ರೀತಿಯಲ್ಲಿ ಅಥವಾ ಕಾನೂನಿಗೆ ವಿರುದ್ಧವಾಗಿದ್ದರೂ ಇರಬಹುದು. ಎಲ್ಲಾ ಒಂದೆರಡು ಅಪವಾದಗಳಿರಬಹುದು.
ಆದುದರಿಂದ ಅದ್ದೂರಿ ಮದುವೆಗಳು ನಡೆದಷ್ಟೂ ದುಡಿಯುವ ಕೈಗಳಿಗೆ, ಬಡವರಿಗೆ ಉದ್ಯೋಗ ಸೃಷ್ಟಿಯ ಅವಕಾಶ ಹೆಚ್ಚು ಎನ್ನುವುದು ಬಹುಮುಖ್ಯ ವಿಚಾರವಾಗುತ್ತದೆ. ಇದರೊಂದಿಗೆ ದೇಶದ ಆರ್ಥಿಕತೆ ಬೆಳೆಯಬೇಕಾದರೆ, ಜನರು ಗಳಿಸಿದ ಹಣವನ್ನು ಹೆಚ್ಚು ಹೆಚ್ಚು ಖರ್ಚು ಮಾಡಬೇಕೆನ್ನು ವುದೂ ಒಂದು ಬಹುಮುಖ್ಯ ಅಂಶ ಎನ್ನುವುದನ್ನು ಮರೆಯಬಾರದು.ಆದುದರಿಂದ ಅದ್ದೂರಿ ಮದುವೆಗಳು ನಡೆಯಲು ಪ್ರೋತ್ಸಾಹಿಸಿ.