ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಕಮ್ಯುನಿಸ್ಟ್‌ ಪ್ರೇರಿತ ಸಮಾಸನಪ್ರೀತ ವಿರಕ್ತರ ಮುಜುಗರ ಸಂಕೀರ್ಣತೆ..!

ಕೆಲವು ಕಡೆ ಶಿವಪುರಾಣದ ವಾಯವೀಯ ಸಂಹಿತೆಯಿಂದ ಉಲ್ಲೇಖಿಸಿದ್ದಾರೆ ಎಂಬ ಕಾರಣ ದಿಂದ ಎಲ್ಲಿ ಆಕರವನ್ನು ಹೇಳಿಲ್ಲವೋ ಅಲ್ಲಿಯೂ ವಾಯವೀಯ ಸಂಹಿತೆಯೇ ಆಕರ ವೆಂದು ಹೇಳಲು ಸಾಧ್ಯವೆ? ತಮ್ಮ ವಚನಗಳಲ್ಲಿ ಬಸವಣ್ಣನವರು ಬಹುಮಟ್ಟಿನ ಶ್ಲೋಕಗಳ ಆಕರಗಳನ್ನು ಹೇಳಿಲ್ಲ.

ಕಮ್ಯುನಿಸ್ಟ್‌ ಪ್ರೇರಿತ ಸಮಾಸನಪ್ರೀತ ವಿರಕ್ತರ ಮುಜುಗರ ಸಂಕೀರ್ಣತೆ..!

-

Ashok Nayak
Ashok Nayak Nov 16, 2025 11:58 AM

ಬಸವ ಮಂಟಪ (ಭಾಗ-2)

ರವಿ ಹಂಜ್

ಶ್ರೀ ಸ್ವಾಮಿಗಳು ಗುರುತಿಸಿದಂತೆ ಇದೇ ಪಾಠಾಂತರವು ಜ್ಯೋತಿರ್ನಾಥನ ಶೈವ ರತ್ನಾಕರ ದಲ್ಲಿ ಕಂಡುಬರುತ್ತದೆ. ಅಲ್ಲಿ ಅದರ ಆಕರವನ್ನು ಲಿಂಗಪುರಾಣವೆಂದು ಹೇಳಿದೆ. ಅದೇ ಜ್ಯೋತಿರ್ನಾಥನು ಅದೇ ಗ್ರಂಥದಲ್ಲಿ ಇನ್ನೊಂದೆಡೆ ಅದೇ ಶ್ಲೋಕವನ್ನು ವಾತುಲಾಗ ಮದ್ದು ಎಂದು ಗುರುತಿಸಿzನೆ ಎಂದು ಶ್ರೀ ಸ್ವಾಮಿಗಳೇ ಹೇಳಿದ್ದಾರೆ.

ಅದೇ ಶ್ಲೋಕ ಇನ್ನೂ ಅನೇಕ ಕಡೆ ಬಂದಿದ್ದರೂ ಅದನ್ನು ಸಿದ್ಧಾಂತ ಶಿಖಾಮಣಿಯ ದ್ದೊಂದು ಯಾರೂ ಗುರುತಿಸಿಲ್ಲ ಎಂಬುದು ಒಂದು ಅಂಶವಾದರೂ, ಕೆಲವರು ವಾತುಲಾ ಗಮದ್ದೊಂದೂ, ಮತ್ತೆ ಕೆಲವರು ಶಿವಪುರಾಣದ್ದೆಂದೂ, ಮಿಕ್ಕ ಕೆಲವರು ಕಾಮಿಕಾಗ ಮದ್ದೆಂದೂ, ಸ್ಕಾಂದಪುರಾಣದ್ದೆಂದೂ, ಸುಪ್ರಭೇದಾಗಮದ್ದೆಂದೂ ಅದರ ಆಕರವನ್ನು ವಿವಿಧ ರೀತಿಯಲ್ಲಿ ಹೇಳಿರುವುದು ಇನ್ನೊಂದು ಗಣನೀಯ ಅಂಶ.

ಇದರಿಂದ ಶ್ಲೋಕವನ್ನು ಬಳಸಿಕೊಂಡಿರುವವರು ಮೂಲವನ್ನು ನೋಡಿ ಉದಾಹರಿಸಿರು ವರೋ ಅಥವಾ ಒಬ್ಬರು ಮಾಡಿರುವ ಉಖವನ್ನು ನೋಡಿ ಮತ್ತೊಬ್ಬರು ತೆಗೆದುಕೊಂಡಿರು ವರೋ ಎಂಬ ಸಂದೇಹ ಬರುತ್ತದೆ. ಶ್ರೀ ಸ್ವಾಮಿಗಳು ಇವೆಲ್ಲ ಆಕರಗಳಲ್ಲಿ ಒಂದನ್ನು ಅಂದರೆ ವಾಯವೀಯ ಸಂಹಿತೆಯನ್ನು ಆಯ್ದು ಅದರಿಂದಲೇ ಈ ಶ್ಲೋಕವನ್ನು ತೆಗೆದು ಕೊಂಡಿದ್ದಾರೆ ಎಂದು ಹೇಳುತ್ತಾರೆ.

ಅದಕ್ಕೆ ಅವರು ಕೊಡುವ ಕಾರಣವೆಂದರೆ ಬಸವಣ್ಣನವರು ಕೆಲವು ವಚನಗಳಲ್ಲಿ ಶಿವಪುರಾಣ ಮತ್ತು ತದಂತರ್ಗತ ವಾಯವೀಯ ಸಂಹಿತೆಯಿಂದ ಶ್ಲೋಕಗಳನ್ನು ಉಲ್ಲೇಖಿಸಿದ್ದಾರೆ ಎಂಬುದು. ಪ್ರಸ್ತುತ ಸಂದರ್ಭದಲ್ಲಂತೂ ಬಸವಣ್ಣನವರು ಆಕರವನ್ನು ಹೇಳಿಲ್ಲ.

ಕೆಲವು ಕಡೆ ಶಿವಪುರಾಣದ ವಾಯವೀಯ ಸಂಹಿತೆಯಿಂದ ಉಲ್ಲೇಖಿಸಿದ್ದಾರೆ ಎಂಬ ಕಾರಣ ದಿಂದ ಎಲ್ಲಿ ಆಕರವನ್ನು ಹೇಳಿಲ್ಲವೋ ಅಲ್ಲಿಯೂ ವಾಯವೀಯ ಸಂಹಿತೆಯೇ ಆಕರ ವೆಂದು ಹೇಳಲು ಸಾಧ್ಯವೆ? ತಮ್ಮ ವಚನಗಳಲ್ಲಿ ಬಸವಣ್ಣನವರು ಬಹುಮಟ್ಟಿನ ಶ್ಲೋಕ ಗಳ ಆಕರಗಳನ್ನು ಹೇಳಿಲ್ಲ. ಪ್ರಸ್ತುತ ಶ್ಲೋಕವನ್ನು ಅವರು ಸಿದ್ಧಾಂತ ಶಿಖಾಮಣಿಯಿಂದ ತೆಗೆದುಕೊಂಡಿಲ್ಲ ಎಂದು ಖಚಿತವಾಗಿ ಹೇಗೆ ಹೇಳುವುದು?" ಎಂದು ತಾರ್ಕಿಕವಾಗಿ ಇಮ್ಮಡಿಯವರ ವಾದವನ್ನು ನೂರ್ಮಡಿ ದೂರಕ್ಕೆಸೆಯುತ್ತಾರೆ.

ಹಾಗೆಯೇ ತಮ್ಮ ತರ್ಕಬದ್ಧ ವಾದವನ್ನು, “... ಶ್ರೀ ಸಿದ್ಧಾಂತ ಶಿಖಾಮಣಿಯ ಕಾಲದ ಬಗ್ಗೆ ಚರ್ಚೆಯಲ್ಲಿ ಅದೊಂದೇ ಶ್ಲೋಕವನ್ನು ಆಧಾರವಾಗಿ ಕೆಲವರು ಇಟ್ಟುಕೊಂಡಿರಬಹುದು. ಆದರೆ ನಾನು ಸಿದ್ಧಾಂತ ಶಿಖಾಮಣಿಯ ಇನ್ನೂ ಕೆಲವು ಶ್ಲೋಕಗಳನ್ನು ಚನ್ನಬಸವಣ್ಣ ನವರ ವಚನಗಳಲ್ಲಿ ಗುರುತಿಸಿದ್ದೇನೆ. ಈ ಮೂರೂ ಶ್ಲೋಕಗಳು ಒಂದಾದ ಮೇಲೆ ಒಂದರಂತೆ ಚನ್ನಬಸವಣ್ಣನವರ ಒಂದು ವಚನದ ಆರಂಭದಲ್ಲಿ ಬಂದಿವೆ.

ಶ್ರೀ ಸ್ವಾಮಿಗಳು ಈ ಮೂರೂ ಶ್ಲೋಕಗಳಿಗೆ ಶಿವತತ್ವರತ್ನಾಕರ ಎಂದು ಆಧಾರಗ್ರಂಥ ವನ್ನೂ, ಮೂಲವೆಂದು ಪುರಾಣಗಳು, ಶೈವಸಿದ್ಧಾಂತದೀಪಿಕೆಗಳನ್ನು ಗುರುತಿಸಿದ್ದಾರೆ. ಶಿವತತ್ವ ರತ್ನಾಕರದಲ್ಲಿ ಅವು ೯ನೇ ಕಲ, ೮ನೇ ತರಂಗದ 87, 88 ಮತ್ತು 89ನೇ ಶ್ಲೋಕ ಗಳಾಗಿ ಬಂದಿವೆ.

ಅವುಗಳ ಮೂಲ ಆಕರವನ್ನು ಶ್ರೀ ಸ್ವಾಮಿಗಳು ಪುರಾಣಗಳು, ಶೈವಸಿದ್ಧಾಂತ ದೀಪಿಕೆ ಯೆಂದು ಯಾವ ಆಧಾರದ ಮೇಲೆ ಗುರುತಿಸಿದರೋ ತಿಳಿಯದು. ಏನೇ ಇರಲಿ ಈ ಮೂರು ಶ್ಲೋಕಗಳು ಶ್ರೀ ಸಿದ್ಧಾಂತ ಶಿಖಾಮಣಿಯ ಮಹೇಶ್ವರಸ್ಥಲಾಂತರ್ಗತ ಆಹ್ವಾನ ನಿರಸನ ಸ್ಥಲಕ್ಕೆ ಸಂಬಂಧಿಸಿದವುಗಳು.

ಚನ್ನಬಸವಣ್ಣನವರ ವಚನದಲ್ಲಿಯೂ ಇದೇ ಸಂದರ್ಭದಲ್ಲಿ ಬಂದಿವೆಯೆಂಬುದು ವಚನದ ಅಂತಿಮಭಾಗದಿಂದ ಸ್ಪಷ್ಟ... ಶ್ರುತಿಸಿದ್ಧವಾದ ಈ ವೀರಶೈವಶಾಸವು ಷಟ್ಸ್ಥಲ-ಅಷ್ಟಾವರಣ-ಪಂಚಾಚಾರಗಳ ವ್ಯಾಪ್ತಿಯನ್ನೊಳಗೊಂಡಂತೆ ಪರಿಪೂರ್ಣವಾಗಿ ಶೈವಾ ಗಮಗಳ ಉತ್ತರ ಭಾಗಗಳಲ್ಲಿ ನಿರೂಪಿತವಾಗಿ, ಜೇಡರ ದಾಸಿಮಯ್ಯ ಮುಂತಾದವರ ವಚನಗಳ ಮೂಲಕ ಸಮಗ್ರ ಸ್ವರೂಪವನ್ನು ತಾಳಿ, ಬಸವಾದಿ ಶರಣರಿಗೆ ಬಳುವಳಿಯಾಗಿ ಬಂದಿತ್ತು. ಅದನ್ನು ಅನುಭವಕ್ಕೆ ತಂದುಕೊಂಡು ತಮ್ಮ ವಚನಗಳ ಮೂಲಕ ಸುಲಭ ವಾಗಿ ತಿಳಿಯುವಂತೆ ಬೋಧಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು.

ಅವರಿಂದ ಏಕೋತ್ತರಶತಸ್ಥಲ ಸಿದ್ಧಾಂತ ’ಉದಿತ’ವಾಯಿತು ಎಂದು ಹೇಳಿರುವುದು ಅವರಿಂದಲೇ ಹುಟ್ಟಿತು ಎಂಬರ್ಥದಲ್ಲಲ್ಲ, ಪ್ರಚಾರಕ್ಕೆ ಬಂತು, ಪ್ರವರ್ಧಮಾನಕ್ಕೆ ಬಂತು ಎಂಬ ಅರ್ಥದಲ್ಲಿ ಹೇಳಲಾಗಿದೆ. ಅಲ್ಲಮಪ್ರಭು, ಬಸವಣ್ಣ ಮತ್ತು ಚನ್ನಬಸವಣ್ಣ ನವರನ್ನು ಜಂಗಮ-ಗುರು-ಲಿಂಗ ಸ್ವರೂಪರೆಂದು ಗೌರವಿಸಿರುವುದು ಅವರ ಆಧ್ಯಾತ್ಮಿಕ ಸಾಧನೆಗಾಗಿ, ಅವರು ಮಾಡಿದ ಸಮಾಜೋ-ಧಾರ್ಮಿಕ ಸುಧಾರಣೆಗಳಿಗಾಗಿ ಮತ್ತು ವೀರ ಶೈವ ಮತಕ್ಕೆ ಪ್ರಚಾರ ಮತ್ತು ವಿಸ್ತಾರಗಳನ್ನು ತಂದುಕೊಟ್ಟಿದ್ದಕ್ಕಾಗಿ.

ಚನ್ನಬಸವಣ್ಣನವರನ್ನು ಕುರಿತು ಬಸವಣ್ಣನವರು ಹೇಳಿದ ಈ ಮಾತನ್ನು ಗಮನಿಸಿ: ‘ಗುರುವಿಂಗೆ ನೀನೇ ಕರ್ತ, ಲಿಂಗಕ್ಕೆ ನೀನೇ ಕರ್ತ, ಜಂಗಮಕ್ಕೆ ನೀನೇ ಕರ್ತ, ಪ್ರಸಾದಕ್ಕೆ ನೀನೇ ಕರ್ತ, ಉಪದೇಶಕ್ಕೆ ನೀನೇ ಕರ್ತ, ಕೂಡಲಸಂಗಮದೇವರು ಸಾಕ್ಷಿಯಾಗಿ ನಗೆಯೂ ನೀನೇ ಕರ್ತನಾದ ಕಾರಣ, ನಾನು ಬೇಕೆನಲಮ್ಮೆ, ಬೇಡೆನಲಮ್ಮೆ, ಕಾಣಾ ಚನ್ನಬಸವಣ್ಣಾ’. ಹೀಗೆಯೇ ಬಸವಣ್ಣನವರು ಪ್ರಭುದೇವರ ಬಗ್ಗೆಯೂ ಹೇಳಿದ್ದಾರೆ.

ಬಸವಣ್ಣನವರ ಬಗೆಗಂತೂ ಎಲ್ಲಾ ವಚನಕಾರರೂ ಇದೇ ರೀತಿಯಲ್ಲಿ ಗೌರವದಿಂದ ಹೇಳಿದ್ದಾರೆ. ಅದೇ ರೀತಿ ಅಂದಿನ ಕಾಲದಲ್ಲಿ ಅಂಥ ಹಾರ್ದಿಕ ಗೌರವ ಪ್ರದರ್ಶನ ಬಸವಾದಿ ಶರಣರಿಗೆ ಸಲ್ಲುತ್ತಾ ಬಂದಿತ್ತು. ಈಗಲೂ ಸಲ್ಲುತ್ತಾ ಬರುತ್ತಿದೆ. ಜಕ್ಕಣಾರ್ಯನೂ ಅದನ್ನೇ ಮಾಡಿದ್ದಾನೆ. ಅದೆಲ್ಲವನ್ನೂ ಶಬ್ದಶಃ ಅರ್ಥದಲ್ಲಿ ತೆಗೆದುಕೊಳ್ಳುವಂತಿಲ್ಲ (ಈಗ ಯಾರಾ ದರೂ ಗೌರವಾಭಿಮಾನದಿಂದ ಯಾರನ್ನಾದರೂ ’ಅಪ್ಪಾಜಿ, ಅಣ್ಣಾ, ಅಮ್ಮಾ, ಅಕ್ಕ’ ಎಂದು ಸಂಬೋಧಿಸುವುದನ್ನು ಯಥಾರ್ಥವಾಗಿ ಪರಿಗ್ರಹಿಸಿ ಇವರು ಇವನ ತಂದೆ, ಅಣ್ಣ, ತಾಯಿ, ಸೋದರಿ ಆಗಿದ್ದರು ಎನ್ನಲಾಗುವುದೇ?).

ಅವೆ ಅರ್ಥವಾದಗಳು, ಗುರು-ಲಿಂಗ-ಜಂಗಮ ಮುಂತಾದವುಗಳಿಗೆ ಅವರು ಹೇಗೆ ಕರ್ತೃ ಗಳಲ್ಲವೋ ಹಾಗೆಯೇ ಏಕೋತ್ತರಶತಸ್ಥಲಗಳಿಗೆ ಅವರು ಕರ್ತೃಗಳಲ್ಲ. ಆದ್ದರಿಂದ ಶೈವಾಗಮಗಳು, ಶೈವಪುರಾಣಗಳು, ಉಪನಿಷತ್ತುಗಳ ಮೂಲದಿಂದ ವೀರಶೈವ ಪರವಾದ ವಿಷಯಗಳನ್ನು ಸಂಗ್ರಹಿಸಿ ಅದಕ್ಕೆ ನೂರೊಂದು ಸ್ಥಲಗಳ ವ್ಯವಸ್ಥೆಯನ್ನು ಕೊಟ್ಟು ಮೊಟ್ಟಮೊದಲಿಗೆ ವಿವರಿಸಿದ ಕೀರ್ತಿ ಶಿವಯೋಗಿ ಶಿವಾಚಾರ್ಯರಿಗೆ ಸಲ್ಲಬೇಕು.

ಮುಂದೆ ನೂರೊಂದು ಸ್ಥಲಗಳ ಬಗ್ಗೆ ಹೇಳಿರುವರೆಲ್ಲರೂ, ಹೆಸರಿಸಲಿ, ಹೆಸರಿಸದಿರಲಿ, ಶ್ರೀ ಸಿದ್ಧಾಂತ ಶಿಖಾಮಣಿಗೇ ಋಣಿ. ಯಾರೂ ಸಿದ್ಧಾಂತ ಶಿಖಾಮಣಿಯ ಹೆಸರೆತ್ತುವುದಿಲ್ಲ ಎಂಬುದು ಶ್ರೀ ಸ್ವಾಮಿಗಳು ಮತ್ತೆ ಮತ್ತೆ ಒತ್ತಿ ಹೇಳುವ ಮಾತು, ತತ್ಪೂರ್ವದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯೆಂಬ ಗ್ರಂಥವೇ ಇರಲಿಲ್ಲ ಎಂಬ ಮಾತಿಗೆ ಆಧಾರವಲ್ಲ.

ಉಲ್ಲೇಖ ಮಾಡುವವರು ಹೆಸರೆತ್ತಿ ಉಲ್ಲೇಖಿಸುವುದಕ್ಕಿಂತ ಹೆಸರೆತ್ತದೆ ಉಲ್ಲೇಖಿಸುವ ಸಂದರ್ಭಗಳೇ ಹೆಚ್ಚು. ನಿಜಗುಣ ಶಿವಯೋಗಿಗಳು ಶರಣರ‍್ಯಾರನ್ನೂ ಸ್ಮರಿಸುವುದಿಲ್ಲ ಎಂದ ಮಾತ್ರಕ್ಕೆ ಶರಣರು ಯಾರೂ ಇರಲಿಲ್ಲವೇ? ಇದೇ ರೀತಿಯ ಪ್ರಶ್ನೆಯನ್ನು ಶ್ರೀ ಸಿದ್ಧಾಂತ ಶಿಖಾಮಣಿಯ ಬಗ್ಗೆಯೂ ಕೇಳಬೇಕಾಗುತ್ತದೆ" ಎಂದು ತರ್ಕಬದ್ಧವಾಗಿ ಮಂಡಿಸುತ್ತಾರೆ.

ಶ್ರೀ ಸಿದ್ಧಾಂತ ಶಿಖಾಮಣಿಯು ಶೈವಾಗಮಗಳಲ್ಲಿ ಮತ್ತು ಶೈವಪುರಾಣಗಳಲ್ಲಿ ಬಂದ ವೀರಶೈವ ಪರವಾದ ಭಾಗಗಳ ಸಾರಸಂಗ್ರಹ. ಅದನ್ನು ಗ್ರಂಥಕರ್ತೃಗಳಾದ ಶಿವಯೋಗಿ ಶಿವಾಚಾರ್ಯರು ಮುಚ್ಚಿಟ್ಟುಕೊಳ್ಳದೆ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ ಎನ್ನುತ್ತಾ, “ಕಾಮಿಕದಿಂದ ವಾತುಲಾಗಮದವರೆಗೂ ಇರುವ (ಇಪ್ಪತ್ತೆಂಟು) ಶೈವತಂತ್ರಗಳನ್ನು ಮತ್ತು ಎಲ್ಲಾ ಶೈವಪುರಾಣಗಳನ್ನು ಆದರಪೂರ್ವಕವಾಗಿ ಪರಿಶೀಲಿಸಿ.... ಆ ಎಲ್ಲಾ ಆಗಮಗಳಲ್ಲಿ ಮತ್ತು ಪುರಾಣಗಳಲ್ಲಿ ಹಿಂದೆ ಪರಮಾತ್ಮನು ಪಾರ್ವತಿಗೆ ಮತ್ತು ಷಣ್ಮುಖನಿಗೆ ಹೇಳಿದ, ಆ ಸಂಪ್ರದಾಯದಲ್ಲಿ ನಿಷ್ಣಾತನಾಗಿದ್ದ ಮಹಾತ್ಮಾ ರೇಣುಕ ಗಣೇಶ್ವರನಿಂದ ಮತ್ತೆ ಭೂಮಿ ಯಲ್ಲಿ ಅಗಸ್ತ್ಯನಿಗೆ ಬೋಧಿಸಲ್ಪಟ್ಟ, ನೂರೊಂದು ಸ್ಥಲಗಳಿಂದ ಕೂಡಿದ ವೀರಶೈವ ಮಹಾತಂತ್ರವನ್ನು ಜ್ಞಾನಿಗಳಲ್ಲಿ ಶ್ರೇಷ್ಠರಾದ ಶಿವಯೋಗಿ ಶಿವಾಚಾರ್ಯರು ಲೋಕದ ಜನರ ಅನುಗ್ರಹಕ್ಕಾಗಿ ಹೇಳಿದರು" ಎಂಬರ್ಥದ ಸಿದ್ಧಾಂತ ಶಿಖಾಮಣಿಯ ಮೂಲ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸುತ್ತ, “ಹೀಗೆ ಗ್ರಂಥಕರ್ತೃಗಳೇ ಹೇಳಿಕೊಂಡಿರುವು ದರಿಂದ, ಶೈವಾಗಮಗಳಿಂದ ಮತ್ತು ಶೈವಪುರಾಣಗಳಿಂದ ಎಷ್ಟೋ ಶ್ಲೋಕಗಳು ಯಥಾ ವತ್ತಾಗಿ ಬಂದಿವೆ. ಕೆಲವು ಸ್ವಲ್ಪ ಪಾಠಾಂತರದೊಂದಿಗೆ ಬಂದಿವೆ.

ಇನ್ನೂ ಅನೇಕ ಶ್ಲೋಕಗಳ ಭಾವಾನುವಾದಗಳು ಬಂದಿವೆ. ಶ್ರೀ ಸ್ವಾಮಿಗಳು ಸುಮಾರು 356ಸಿದ್ಧಾಂತ ಶಿಖಾಮಣಿ ಶ್ಲೋಕಗಳಿಗೆ ಆಕರಗಳನ್ನು ಗುರುತಿಸಿದ್ದೇವೆಂದು ಹೇಳಿದ್ದಾರೆ. ಅವರ ಗ್ರಂಥದ ‘ಅನುಬಂಧ-೧’ ಅನ್ನು (ಪು.145-166) ನೋಡಿದರೆ ಅದರಲ್ಲಿ ಅವರು ಗುರುತಿಸಿರುವುದರ ವಿವರ ಗೊತ್ತಾಗುತ್ತದೆ. ಶರಣರ ಕಾಲಕ್ಕಿಂತ ಅರ್ವಾಚೀನವಾದ ಶಿವತತ್ತ್ವ ರತ್ನಾಕರ, ವೀರಶೈವ ಸದಾಚಾರ ಸಂಗ್ರಹ, ಅನಾದಿ ವೀರಶೈವ ಸಂಗ್ರಹ, ಕ್ರಿಯಾಸಾರ, ವೀರಶೈವ ಆಚಾರಕೌಸ್ತುಭ, ಲಿಂಗಧಾರಣ ಚಂದ್ರಿಕಾ, ವೀರಶೈವ ಚಿಂತಾಮಣಿ ಮುಂತಾದವುಗಳಲ್ಲಿನ ಉಲ್ಲೇಖಗಳ ಆಧಾರದ ಮೇಲೆ, ಅವುಗಳ ಮೂಲವನ್ನು ಯಾವು ದೋ ಆಗಮದ್ದೆಂದು, ಯಾವುದೋ ಪುರಾಣದ್ದೆಂದು ಗುರುತಿಸಿದ್ದಾರೆ.

ಎಷ್ಟೋ ಮೂಲ ಆಗಮಗಳು, ಪುರಾಣ ಭಾಗಗಳು ಈಗ ದೊರೆಯದಿರುವುದರಿಂದ ಅವರು ಇಷ್ಟು ಮಾಡಿರುವುದು ಪ್ರಶಂಸನೀಯವೇ ಆದರೂ ಉಲ್ಲೇಖಿಸಿರುವವರು ಎಷ್ಟರ ಮಟ್ಟಿಗೆ ಸರಿಯಾದ ಮೂಲವನ್ನು ಗುರುತಿಸಿದ್ದಾರೋ, ಒಬ್ಬರನ್ನು ಅನುಸರಿಸಿ ಇನ್ನೊಬ್ಬರು ಉಲ್ಲೇಖಿಸುವುದರಲ್ಲಿ ಎಷ್ಟು ವ್ಯತ್ಯಾಸಗಳಾಗಿವೆಯೋ, ತಪ್ಪುಗಳಾಗಿವೆಯೋ ಎಂಬ ಸಂದೇಹವಂತೂ ಇದ್ದೇ ಇದೆ" ಎನ್ನುತ್ತಾರೆ.

ಶ್ರೀ ಸಿದ್ಧಾಂತ ಶಿಖಾಮಣಿ ಶರಣರ ಕಾಲಕ್ಕಿಂತ ನಂತರದ್ದು ಎಂದು ಸಾಧಿಸಲು ವ್ಯಾಖ್ಯಾನ ಕಾರರು ಹರಿಯಬಿಟ್ಟ ಕಲ್ಪನೆಯೊಂದನ್ನು ಆಧರಿಸಿದ್ದಾರೆ. ಗ್ರಂಥಕಾರರಾದ ಶಿವಯೋಗಿ ಶಿವಾಚಾರ್ಯರು ಸಿದ್ಧರಾಮೇಶ್ವರರ ವಂಶದವರು ಎಂದು ಗ್ರಂಥಕ್ಕೆ ಕನ್ನಡ ವ್ಯಾಖ್ಯಾನ ವೊಂದನ್ನು ರಚಿಸಿದ ಸೋಸಲೆ ರೇವಣಾರಾಧ್ಯರು ಮತ್ತು ಅವರನ್ನು ಅನುಸರಿಸಿ ಸಂಸ್ಕೃತ ವ್ಯಾಖ್ಯಾನಕಾರರಾದ ಮರಿತೋಂಟದಾರ್ಯರು ಹೇಳಿದ್ದಾರೆ.

ಗ್ರಂಥಕಾರರು ಸಿದ್ಧರಾಮೇಶ್ವರ ವಂಶಸ್ಥರಲ್ಲ ಎಂದು ಸಾಧಿಸಲು, ಶ್ರೀ ಸ್ವಾಮಿಗಳು ಹೇಳಿದಂತೆ, ನಾವೆ ನಾನಾರೀತಿಯ ಯಾವ ವಿವರಣೆಯನ್ನೂ ಕೊಟ್ಟಿಲ್ಲ. ಕೇವಲ ಅಸಂಬದ್ಧವೆಂದು ಕಂಡುಬಂದ ವ್ಯಾಖ್ಯಾನಕಾರರ ಕಲ್ಪನೆಗಳನ್ನು ನಿವಾರಿಸಿ ಸತ್ಯವಾದ ಚಿತ್ರವನ್ನು ಮುಂದಿಟ್ಟಿದ್ದೇವೆ. ಶಿವಯೋಗಿ ಶಿವಾಚಾರ್ಯರ ವಂಶಾವಳಿ ಶ್ರೀ ಸಿದ್ಧಾಂತ ಶಿಖಾಮಣಿಯ ಈ ಶ್ಲೋಕಗಳಲ್ಲಿದೆ:

ಕಶ್ಚಿದಾಚಾರಸಿದ್ದಾನಾಮ್ ಅಗ್ರಣೀಃ ಶಿವಯೋಗಿನಾಮ್ |

ಶಿವಯೋಗೀತಿ ವಿಖ್ಯಾತಃ ಶಿವಜ್ಞಾನಮಹೋದಧಿಃ |

ತಸ್ಯ ವಂಶೇ ಸಮುತ್ಪನ್ನೋ ಮುಕ್ತಾಮಣಿರಿವಾಮಲಃ |

ಮುದ್ದದೇವಾಭಿಧಾಚಾರ್ಯೋ ಮೂರ್ಧನ್ಯಃ

ಶಿವಯೋಗಿನಾಮ್ ||

ತಸ್ಯಾಸೀನ್ನಂದನಃ ಶಾಂತಃ ಸಿದ್ದನಾಥಾಭಿಧಃ ಶುಚಿಃ |

ಶಿವಸಿದ್ಧಾಂತನಿರ್ಣೆತಾ ಶಿವಾಚಾರ್ಯಃ ಶಿವಾತ್ಮಕಃ ||

ತಸ್ಯ ವೀರಶಿವಾಚಾರ್ಯಶಿಖಾರತ್ನಸ್ಯ ನಂದನಃ |

ಅಭವಚ್ಛಿವಯೋಗೀತಿ ಸಿಂಧೋರಿನ ಸುಧಾಕರಃ ||

ಅರ್ಥಾತ್, “ಆಚಾರದಲ್ಲಿ ನಿಷ್ಣಾತರಾದ ಶಿವಯೋಗಿಗಳಲ್ಲಿ ಅಗ್ರೇಸರನಾದ ಮತ್ತು ಶಿವಜ್ಞಾನದ ಸಮುದ್ರವೇ ಆದ ಒಬ್ಬನು ಶಿವಯೋಗಿಯೆಂದು ಪ್ರಸಿದ್ಧನಾಗಿದ್ದನು. ಅವನ ವಂಶದಲ್ಲಿ ಪರಿಶುದ್ಧ ಮುತ್ತಿನಂತೆ ಉತ್ಪನ್ನನಾದ, ಶಿವಯೋಗಿಗಳಲ್ಲಿ ಶ್ರೇಷ್ಠನಾದ, ಮುದ್ದದೇವನೆಂಬ ಹೆಸರಿನ ಆಚಾರ್ಯನು ಇದ್ದನು.

ಅವನ ಮಗನೇ ಶಾಂತನಾದ, ಪರಿಶುದ್ಧನಾದ ಸಿದ್ದನಾಥನೆಂಬ ಹೆಸರಿನ ಶಿವಸ್ವರೂಪಿ ಯಾದ ಮತ್ತು ಶಿವಸಿದ್ಧಾಂತದ ನಿರ್ಣೇತೃವಾದ ಶಿವಾಚಾರ್ಯನು. ಸಮುದ್ರಕ್ಕೆ ಚಂದ್ರ ನಿದ್ದಂತೆ ವೀರಶೈವ ಶಿರೋಮಣಿಯಾದ ಆತನಿಗೆ ಶಿವಯೋಗಿಯೆಂಬ ಮಗನಿದ್ದನು".

ಇಲ್ಲಿರುವ ಪರಂಪರೆ ಹೀಗಿದೆ: ಶಿವಯೋಗಿ-ಮುದ್ದದೇವ -ಸಿದ್ಧನಾದ-ಶಿವಯೋಗಿ. ಇವರಲ್ಲಿ ನಾಲ್ಕನೆಯವರಾದ ಶಿವಯೋಗಿಯೇ ಶ್ರೀ ಸಿದ್ಧಾಂತ ಶಿಖಾಮಣಿಯ ಕರ್ತೃ. ಮೊದಲನೆಯ ಶಿವಯೋಗಿಯನ್ನೇ ವ್ಯಾಖ್ಯಾನಕಾರರು ‘ರೇವಣಸಿದ್ದೇಶ್ವರ ದೃಷ್ಟಿಗರ್ಭಸಂಜಾತರಾದ ಸಿದ್ದರಾಮೇಶ್ವರರು’ ಎಂದು ಗುರುತಿಸಿದ್ದಾರೆ.

ಹೀಗೆ ಮೊದಲನೆಯ ಶಿವಯೋಗಿಯನ್ನು ಸಿದ್ದರಾಮೇಶ್ವರರೆಂದು ಗುರುತಿಸಿದ ಅವರು ಪರಂಪರೆಯಲ್ಲಿ ಮೂರನೆಯವರಾದ ಸಿದ್ದನಾಥರನ್ನು ಕುರಿತು ‘ಸಿದ್ದನಾಥಾಭಿಧಃ’ ಎಂಬ ಶಬ್ದಕ್ಕೆ ‘ಸಿದ್ದರಾಮರ ಹೆಸರನ್ನು ಹೊತ್ತ ಸಿದ್ದನಾಥರು’ ಎಂದು ಅರ್ಥಮಾಡಿದ್ದಾರೆ. ನಾನು ಇಲ್ಲಿ ಪ್ರಶ್ನೆಯೆತ್ತಿರುವುದು ಮೊದಲನೆಯ ಶಿವಯೋಗಿಯನ್ನು ಸಿದ್ಧರಾಮೇಶ್ವರ ಎಂದು ಕರೆದಿರುವುದರ ಬಗ್ಗೆ. ಶಿವಯೋಗಿ ಎಂದರೆ ಸಿದ್ಧರಾಮೇಶ್ವರ ಎಂದು ತೆಗೆದುಕೊಳ್ಳಲು ಆಧಾರವೇನು? ಅವರು ನಿಜವಾಗಿ ಸಿದ್ದರಾಮರೇ ಆಗಿದ್ದಿದ್ದರೆ ಗ್ರಂಥಕಾರರು ‘ಶಿವಯೋಗೀತಿ ವಿಖ್ಯಾತಃ ಶಿವeನಮಹೋದಧಿಃ’ ಎಂದು ಹೇಳುವುದಕ್ಕೆ ಬದಲಾಗಿ ‘ಸಿದ್ಧರಾಮ ಇತಿ ಖ್ಯಾತಃ ಶಿವಜ್ಞಾನಮಹೋದಧಿ?’ ಎಂದು ಹೇಳಲು ಭಾಷೆಯಾಗಲಿ ಛಂದಸ್ಸಾಗಲಿ ಅಡ್ಡ ಬರುತ್ತಿರಲಿಲ್ಲ ಎಂದು ನನ್ನ ‘ಸಿದ್ಧಾಂತ ಶಿಖಾಮಣಿ: ಮೂರು ಉಪನ್ಯಾಸಗಳು’ (ಪು. ೩) ಎಂಬ ಪುಸ್ತಕದಲ್ಲಿ ಹೇಳಿದ್ದೇನೆ.

ಶ್ರೀ ಸ್ವಾಮಿಗಳು ಭಾವಿಸಿದಂತೆ ನಾನು ‘ಸಿದ್ಧನಾಥ ಎಂಬ ಪದಕ್ಕೆ ಬದಲಾಗಿ ಸಿದ್ಧರಾಮ ಎನ್ನಲು ಯಾವ ಅಡ್ಡಿಯೂ ಇರಲಿಲ್ಲ’ ಎಂದು ಹೇಳಿಲ್ಲ. ‘ಸಿದ್ದರಾಮ ನೈಷ್ಠಿಕ ಬ್ರಹ್ಮಚಾರಿ ಯಾಗಿದ್ದರಲ್ಲ’ ಎಂಬ ವಿದ್ವಾಂಸರೊಬ್ಬರ ಮಾತಿಗೆ ಉತ್ತರವಾಗಿ ಶ್ರೀ ಸ್ವಾಮಿಗಳು ಹೇಳುವ ಈ ಮಾತು ಗಮನಾರ್ಹ: “ಶಿವಯೋಗಿಯು ಶರಣ ಸಿದ್ದರಾಮನ ಔರಸಪುತ್ರನೇ ಆಗಬೇ ಕೆಂದೇನೂ ಇಲ್ಲ. ‘ವಂಶ’ವೆಂದರೆ ಅವರ ಸೋದರ ವರ್ಗವು ಸೇರುವುದಿಲ್ಲವೆ! ಸಿದ್ಧರಾಮ ನಿಗೆ ‘ಬೊಮ್ಮಣ್ಣ’ನೆಂಬ ಅಣ್ಣನಿದ್ದನೆಂದು ತಿಳಿದುಬರುತ್ತದೆ.

ಈ ಬೊಮ್ಮಣ್ಣನ ವಂಶದಲ್ಲಿಯೇ ಶಿವಯೋಗಿಗಳು ಏಕೆ ಜನಿಸಿರಬಾರದು?". ಇದೊಂದು ಕಲ್ಪನೆಯ ಸರಪಣಿ ಎನ್ನದೆ ಗತಿಯಿಲ್ಲ. ಕಡೆಗೆ ಶ್ರೀ ಸ್ವಾಮಿಗಳು “ಈ ವಿಷಯದಲ್ಲಿ ‘ಇದಮಿತ್ಥಂ’ ಎಂದು ಹೇಳುವಂತಿಲ್ಲ" ಎಂದು ಹೇಳುತ್ತಾರೆ. ಹೋಗಲಿ ಬಿಡಿ. ಮೊದಲ ಶಿವಯೋಗಿಯು ಸಿದ್ದರಾಮೇಶ್ವರರೂ ಅಲ್ಲ, ಗ್ರಂಥಕರ್ತೃ ಶಿವಯೋಗಿಯು ಸಿದ್ಧರಾಮೇ ಶ್ವರ ಸಂಪ್ರದಾಯದವರೂ ಅಲ್ಲ.

ಸಂಸ್ಕೃತದಲ್ಲಿ ‘ವಂಶ’ ಶಬ್ದಕ್ಕೆ ಪುತ್ರಪರಂಪರೆಯೆಂದೇ ಅರ್ಥ ಎಂದು ಶಾಸವಾಕ್ಯಗಳನ್ನು ಉದಾಹರಿಸಿ ಸಮರ್ಥಿಸಲು ಪ್ರಯತ್ನಿಸಿರುವ ಶ್ರೀ ಸ್ವಾಮಿಗಳಿಗೆ ‘ಸಂಖ್ಯಾ ವಂಶೇನ’ ಎಂಬ ಪಾಣಿನಿ ಸೂತ್ರದ ಮೇಲಿನ ಭಟ್ಟೋಜಿ ದೀಕ್ಷಿತರ ವೃತ್ತಿಯಲ್ಲಿ ‘ವಂಶೋ ದ್ವಿಧಾ ವಿದ್ಯಯಾ ಜನ್ಮನಾ ಚ’ ಎಂದು ಹೇಳಿರುವುದಕ್ಕೆ ‘ಬಾಲಮನೋರಮಾ’ ವ್ಯಾಖ್ಯಾನದಲ್ಲಿ “ತತ್ರ ಜನ್ಮನಾ ವಂಶಃ ಪುತ್ರಾದಿಪರಂಪರೇತಿ ಪ್ರಸಿದ್ಧಮೇವ, ವಿದ್ಯಯಾ ತು ವಂಶಃ ಗುರುಪರಂಪರಾ" (ಇಲ್ಲಿ ಜನ್ಮದಿಂದ ವಂಶವೆಂದರೆ ಪುತ್ರ ಪರಂಪರೆಯೆಂದು ಪ್ರಸಿದ್ಧ, ವಿದ್ಯೆಯಿಂದ ವಂಶ ವೆಂದರೆ ಗುರುಪರಂಪರೆ) ಎಂದು ಹೇಳಿರುವುದನ್ನು ಜ್ಞಾಪಿಸಿಕೊಡಬೇಕಾಗುತ್ತದೆ.

ಗುರುಪರಂಪರೆಯನ್ನು ತೆಗೆದುಕೊಂಡರೆ ‘ನಂದನಃ’, ‘ಪುತ್ರ’ ಎಂದರೆ ‘ಕರಸಂಜಾತಃ’ ಎಂದೇ ಅರ್ಥ. ಹಾಗಾಗಿ ಎಲ್ಲಾ ಸ್ವಾಮಿಗಳು ಹಿಂದಿನ ಸ್ವಾಮಿಗಳ ‘ಕರಸಂಜಾತರೇ’ ಆಗಿದ್ದಾರೆ ಎಂದು ಇಮ್ಮಡಿ ಶಿವಬಸವ ಸ್ವಾಮಿಗಳ ನಿಲುವನ್ನು ಈರ್ಷ್ಯೆಯ ಒಲವೆಂದು ಸಾಬೀತು ಮಾಡಿದ್ದಾರೆ.

ಶ್ರೀ ಎಂ. ಶಿವಕುಮಾರ ಸ್ವಾಮಿಗಳ ರೀತಿಯಲ್ಲಿಯೇ ಹಿಪ್ಪರಗಿ ಹಿರೇಮಠ ಹಾಗೂ ಎಡೂರು ಕಾಡಸಿದ್ದೇಶ್ವರ ಮಠದ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ. ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿ ಗಳು, ’ಸಿದ್ದಾಂತ ಶಿಖಾಮಣಿ ಹಾಗೂ ಶ್ರೀಕರ ಭಾಷ್ಯ: ನಿಜದ ನಿಲುವು ಗ್ರಂಥದ ತಪ್ಪು ಹೆಜ್ಜೆ ಗಳು’ ಎಂಬ ವಿದ್ವತ್‌ಪೂರ್ಣ ಲೇಖನದಲ್ಲಿ ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ನಿಜದ ನಿಲುವು ಬರೆಯುವಾಗ ಎಷ್ಟು ಕಡೆ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದಾರೆಂಬುದನ್ನು ಪಟ್ಟಿ ಮಾಡಿದ್ದಾರೆ.

ಒಟ್ಟಾರೆ, ಪಂಚಪೀಠಾಧೀಶರ ಅರ್ಧ ಅಡಿ ಎತ್ತರದ ಪೀಠವು ಕೆಲವು ಕಮ್ಯುನಿಸ್ಟ್ ಪ್ರೇರಿತ ಸಮಾಸನಪ್ರೀತ ವಿರಕ್ತರಲ್ಲಿ ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆಯನ್ನು ಹುಟ್ಟುಹಾಕಿ ಬೆಳೆಸಲಾರಂಭಿಸಿತು.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)