ಯಗಟಿ ರಘು ನಾಡಿಗ್
ಇಲ್ಲಿ ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ... ಈ ಮಾತು ಕೇಳಿ ಬರುವುದು ಎಲ್ಲಿ? ಯಾವ ಕಾರ್ಯಕ್ರಮದಲ್ಲಿ? ಎಂದೊಮ್ಮೆ ಪ್ರಶ್ನಿಸಿದರೆ ನೀವು ಉತ್ತರವನ್ನು ‘ಥಟ್ ಅಂತ ಹೇಳಿ’ಬಿಡುತ್ತೀರಿ. ಹೌದು, ಇದು ನಿಮ್ಮ ಸಾಮರ್ಥ್ಯವೂ ಹೌದು, ನಿಮ್ಮಲ್ಲಿ ಅಂಥ ಶಕ್ತಿಯನ್ನು ತುಂಬಿದ್ದರ ಜತೆಗೆ ಸೋಜಿಗದ ಕಂಗಳೊಂದಿಗೆ, ತವಕದ ಭಾವದೊಂದಿಗೆ ವೀಕ್ಷಿಸುವಂತೆ ಮಾಡಿದ ‘ರಸಪ್ರಶ್ನೆ’ ಕಾರ್ಯಕ್ರಮವೂ ಹೌದು. ಎಸ್, ನಿಮ್ಮ ಗ್ರಹಿಕೆ ಸರಿ. ಬೆಂಗಳೂರು ದೂರದರ್ಶನದ ‘ಚಂದನ’ ವಾಹಿನಿಯಲ್ಲಿ ಬಿತ್ತರಗೊಳ್ಳುತ್ತಿರುವ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ಕುರಿತೇ ಇಲ್ಲಿ ಅಕ್ಷರ ರಂಗೋಲಿಯನ್ನು ಹಾಕಿರುವುದು..
೨೦೦೨ರ ಜನವರಿ ೪ರಂದು ಶುರುವಾದ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ಈಗಲೂ ಬಿತ್ತರಗೊಳ್ಳುತ್ತಿರುವುದು ಹೆಮ್ಮೆಯೇ ಸರಿ. ಕಣ್ಣು ಕೋರೈಸುವ ರಂಗಸಜ್ಜಿಕೆ, ಅನಗತ್ಯವಾದ ಬಣ್ಣದ ಮಾತುಗಳು, ಗಿಮಿಕ್‌ಗಳು, ನಾಟಕೀಯ ನಡೆಗಳು ಇವ್ಯಾವುದರ ಹಂಗಿಲ್ಲದೆ, ಅತ್ಯಂತ ಸರಳ-ಸುಂದರವಾಗಿ ಮೂಡಿರುತ್ತಿರುವ ಈ ಕಾರ್ಯಕ್ರಮ, ಮುಂಬರುವ ೨೦೨೬ರ ಜನವರಿ ೪ಕ್ಕೆ ಬರೋಬ್ಬರಿ ೨೪ ವರ್ಷಗಳನ್ನು ಪೂರೈಸಿ ‘ರಜತ ಮಹೋತ್ಸವ’ಕ್ಕೆ ಅಣಿಯಾಗಲಿರುವುದು ಮತ್ತೊಂದು ಹೆಮ್ಮೆಯ ವಿಷಯ.
ಇಂದು (ಅಕ್ಟೋಬರ್ ೧೧) ತನ್ನ ೫೦೦೦ನೇ ಕಂತಿನ ಪ್ರಸಾರಕ್ಕೆ ಸಜ್ಜಾಗಿದೆ ‘ಥಟ್ ಅಂತ ಹೇಳಿ’ ತಂಡ. ಈ ಕಾರ್ಯಕ್ರಮದ ಅಧ್ವರ್ಯು ಮತ್ತು ‘ಕ್ವಿಜ್ ಮಾಸ್ಟರ್’ ಆಗಿರುವ ಡಾ. ನಾ.ಸೋಮೇಶ್ವರ ಅವರದ್ದೇ ಪ್ರಶ್ನೆಗಳ ಸಂಶೋಧನೆ, ರಚನೆ ಹಾಗೂ ಪ್ರಸ್ತುತಿ ಕೂಡ. ಇವರು ನಮ್ಮ ಅಂಕಣಕಾರರು ಹೌದು ಎಂಬುದು ‘ವಿಶ್ವವಾಣಿ’ ಪತ್ರಿಕೆಯ ಪಾಲಿಗೆ ಖುಷಿಯ ಸಂಗತಿ.
ಒಂದಿಷ್ಟು ಫ್ಲ್ಯಾಷ್‌ಬ್ಯಾಕ್...
‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೊದಲ ೧೦೦ ಕಂತುಗಳ ಪ್ರಶ್ನೆಗಳು ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಥೀಮ್ ಅನ್ನು ಆಧರಿಸಿದ್ದವು. ಒಂದು ಗಂಟೆಯ ಅವಧಿಯ ಈ ಕಾರ್ಯಕ್ರಮ ದಲ್ಲಿ ಮೂವರು ಸ್ಪರ್ಧಿಗಳು ಭಾಗವಹಿಸುವುದಕ್ಕೆ ಅವಕಾಶವಿತ್ತು. ಪ್ರತಿಯೊಬ್ಬ ಸ್ಪರ್ಧಿಗೆ ೧೫ ಪ್ರಶ್ನೆಗಳನ್ನು ಕೇಳಿ, ಅವರು ನೀಡುವ ಸರಿಯುತ್ತರಕ್ಕೆ ಒಂದು ಕನ್ನಡ ಪುಸ್ತಕವನ್ನು ಬಹುಮಾನ ವಾಗಿ ನೀಡಲಾಗುತ್ತಿತ್ತು.
ಆದರೆ, ೧೦೦ನೇ ಸಂಚಿಕೆಗೆ ಮುಖ್ಯ ಅತಿಥಿಯಾಗಿ ಬಂದ ಇನೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಯವರು, ಕಾರ್ಯಕ್ರಮದ ಸ್ವರೂಪದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲು ಸೂಚಿಸಿ, ಜನರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲೆಂದು ಕನಿಷ್ಠ ಮೂವರನ್ನು ಒಟ್ಟಿಗೆ ಕೂರಿಸಿ ಸ್ಪರ್ಧೆ ನಡೆಸುವಂತೆ ಸಲಹೆಯಿತ್ತರು.
ಇದನ್ನೂ ಓದಿ:Yagati Raghu Naadig Column: ಜಿಂಕೆಮರಿಯ ಬೇಟೆಗೆ ಬಲೆ ಬೀಸಿದ ಅಡುಗೆಭಟ್ಟ...
ಜತೆಗೆ, ಪ್ರಶ್ನೆಗಳನ್ನು ಕರ್ನಾಟಕಕ್ಕಷ್ಟೇ ಸೀಮಿತವಾಗಿಸದೆ ಭಾರತ ಮತ್ತು ವಿಶ್ವದ ವಿವಿಧ ಕ್ಷೇತ್ರಗಳನ್ನೂ ತೆಕ್ಕೆಗೆ ತೆಗೆದುಕೊಳ್ಳುವಂತೆ ಹೇಳಿದರು. ಪರಿಣಾಮವಾಗಿ, ಈ ರಸಪ್ರಶ್ನೆ ಕಾರ್ಯ ಕ್ರಮದ ಸ್ವರೂಪ ಬದಲಾಯಿತು.
ಯಾರು-ಯಾವಾಗ, ಏನು-ಎತ್ತ?
ವಾರಕ್ಕೆ ೫ ಸಂಚಿಕೆಯಂತೆ ಸೋಮವಾರದಿಂದ ಶುಕ್ರವಾರದವರೆಗೆ ಬಿತ್ತರವಾಗುವ ೨೫ ನಿಮಿಷಗಳ ಅವಧಿಯ ಈ ಕಾರ್ಯಕ್ರಮದಲ್ಲಿ ೧೫ ವರ್ಷಕ್ಕೆ ಮೇಲ್ಪಟ್ಟ ಯಾರಾದರೂ ಭಾಗವಹಿಸಬಹುದು (ವಿಶೇಷ ಕಾರ್ಯಕ್ರಮಗಳಲ್ಲಿ ಇದಕ್ಕಿಂತ ಚಿಕ್ಕ ವಯೋಮಾನದವರು ಪಾಲ್ಗೊಳ್ಳಬಹುದು). ಪತ್ರ ಅಥವಾ ಇ-ಮೇಲ್ ಮೂಲಕ ಆಯ್ಕೆಗೊಳ್ಳುವ ಸ್ಪರ್ಧಿಗಳು ತಮ್ಮ ಪ್ರಯಾಣ ವೆಚ್ಚವನ್ನು ಸ್ವತಃ ಭರಿಸಬೇಕಾಗುತ್ತದೆ.
ಪ್ರಶ್ನೆಗಳ ಪರಿಯಿದು...
ಮನುಷ್ಯನ ಮಿದುಳಿನ ಎಡ ಅರೆಗೋಳ ಮತ್ತು ಬಲ ಅರೆಗೋಳಗಳೆರಡರ ಸಾಮರ್ಥ್ಯವನ್ನು ಒರೆಗೆ ಹಚ್ಚುವ ರೀತಿಯಲ್ಲಿ ಸ್ಪರ್ಧಿಗಳಿಗೆ ಕೇಳಲಾಗುವ ೧೦ ಪ್ರಶ್ನೆಗಳಲ್ಲಿ ೫ ಕಡ್ಡಾಯವಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದ್ದರೆ, ಉಳಿದವು ಕರ್ನಾಟಕ ಸೇರಿದಂತೆ ಭಾರತ ಮತ್ತು ವಿಶ್ವಕ್ಕೆ ಮೀಸಲು. ಇಲ್ಲಿ ಮೂವರು ಸ್ಪಽಗಳಿಗೆ ಸಮಾನವಾಗಿ ೯ ಪ್ರಶ್ನೆಗಳಿರುತ್ತವೆ. ನಂತರ ಒಬ್ಬೊಬ್ಬ ಸ್ಪರ್ಧಿಗೆ ಐದೈದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲಿಗೆ ಒಟ್ಟು ೨೪ ಪ್ರಶ್ನೆಗಳಾದವು. ಪದಬಂಧಕ್ಕೆ ೩ ಪುಸ್ತಕಗಳನ್ನು ನಿಗದಿಪಡಿಸಲಾಗಿದೆ.
ಹೀಗಾಗಿ, ಪ್ರತಿ ಕಂತಿನಲ್ಲೂ ೨೬ ಪುಸ್ತಕಗಳನ್ನು ಗೆಲ್ಲಲು ಅವಕಾಶವಿರುತ್ತವೆ. ಆಯ್ಕೆಗಳು ಬರುವ ಮೊದಲೇ ಒಂದೊಮ್ಮೆ ಸರಿಯುತ್ತರ ನೀಡಿದರೆ, ಅಂಥವರಿಗೆ ‘ಹೆಚ್ಚುವರಿ ಪುಸ್ತಕಭಾಗ್ಯ’. ಬಹುಮಾನದ ಭಂಡಾರವಿದೆ
ಕನ್ನಡ ಪುಸ್ತಕಗಳನ್ನಷ್ಟೇ ಬಹುಮಾನವಾಗಿ ನೀಡುವುದು ಹಾಗೂ ೧೦ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಗೆದ್ದವರಿಗೆ, ‘ಪ್ರಸಾರಭಾರತಿ ದೂರದರ್ಶನ’ದ ಭಂಡಾರದಿಂದ ಆಯ್ದು ಸಿದ್ಧಪಡಿಸಿದ ಸಂಗೀತ ಅಡಕಮುದ್ರಿಕೆಗಳನ್ನು (ಕಾಂಪ್ಯಾಕ್ಟ್ ಡಿಸ್ಕ್- ಸಿ.ಡಿ.)/ಇತರ ಸಿ.ಡಿ.ಗಳನ್ನು/ ವಿಶೇಷ ಪುಸ್ತಕವನ್ನು ಹೆಚ್ಚುವರಿ ಬಹುಮಾನವಾಗಿ ನೀಡಲಾಗುವುದು.
ಇದನ್ನೂ ಓದಿ: Dr N Someshwara Column: ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ
ಹೀಗಿದೆ ಹೆಗ್ಗಳಿಕೆ
ಬೆಂಗಳೂರು ದೂರದರ್ಶನವು ನಿರ್ಮಿಸಿ ಬಿತ್ತರಿಸುತ್ತಿರುವ ಈ ರಸಪ್ರಶ್ನೆ ಕಾರ್ಯಕ್ರಮವು ಅಖಿಲ ಭಾರತ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದೆ ಎಂಬುದು ನಿಮ್ಮ ಗಮನಕ್ಕೆ. ಕರೋನಾ ಮಹಾ ಮಾರಿ ಅಪ್ಪಳಿಸಿದ ಅವಧಿಯಲ್ಲಿ ಇದಕ್ಕೆ ತಾತ್ಕಾಲಿಕ ನಿಲುಗಡೆ ಒದಗಿತಾದರೂ, ಕೆಲ ದಿನಗಳಲ್ಲೇ ‘ಆನ್-ಲೈನ್’ ಸ್ಪರ್ಧೆಗಳು ಆರಂಭವಾಗಿ ವಿಶ್ವದ ವಿವಿಧೆಡೆಯ ಕನ್ನಡಿಗರು ಭಾಗವಹಿಸು ವಂತಾಯಿತು. ಇಂಥ ಪ್ರಸಾರಕಾರ್ಯ ಭಾರತದ ಯಾವುದೇ ಟೆಲಿವಿಷನ್ ವಾಹಿನಿಯಲ್ಲಿ ನಡೆದಿಲ್ಲ. ಹೀಗಾಗಿ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮವು ೨೦೧೨ರಲ್ಲಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ದಾಖಲೆಯನ್ನು ಮುಡಿಗೇರಿಸಿಕೊಂಡಿತು.
ದಾಖಲೆಗಳ ಸರದಾರ
‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಅನ್ವಯ, ವಿಶ್ವದಲ್ಲಿ ಅತ್ಯಂತ ದೀರ್ಘಾವಧಿಯಿಂದ ಬಿತ್ತರಗೊಳ್ಳುತ್ತಿರುವ ರಸಪ್ರಶ್ನೆ ಕಾರ್ಯಕ್ರಮದ ಹೆಸರು ‘ಇಟ್ಸ್ ಅಕ್ಯಾಡೆಮಿಕ್’. ೧೯೬೧ರಲ್ಲಿ ಪ್ರಸಾರ ಆರಂಭಿಸಿದ ಈ ಕಾರ್ಯಕ್ರಮ ವಾರಕ್ಕೆ ೧ ಕಂತಿನಂತೆ ೬೪ ವರ್ಷಗಳಿಂದ ಅಬಾಧಿತವಾಗಿ ಮುಂದು ವರಿದಿದೆ. ಇದಕ್ಕೆ ಹೋಲಿಸಿದಾಗ, ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಸಾಧನೆ ಒಂದು ಗುಕ್ಕು ಹೆಚ್ಚೇ ಎನ್ನುವಂತಿದೆ. ಏಕೆಂದರೆ ತನ್ನ ೨೪ ವರ್ಷಗಳ ಪ್ರಸಾರಾವಧಿಯಲ್ಲಿ ವಾರಕ್ಕೆ ೫ ಸಂಚಿಕೆಗಳು ಪ್ರಸಾರವಾದ ಹೆಗ್ಗಳಿಕೆ ಈ ಕಾರ್ಯಕ್ರಮದ್ದು. ಇಂದು (ಅಕ್ಟೋಬರ್ ೧೧) ೫೦೦೦ನೇ ಕಂತಿನ ಪ್ರಸಾರ ಮಾಡುವ ಮೂಲಕ ಇದು ವಿಶ್ವದಾಖಲೆಯನ್ನು ಮಾಡಲಿದೆ.
ಸೆರೆವಾಸಿಗಳಿಗೂ ಸ್ಫರ್ಧೆ
ಬೆಂಗಳೂರು ದೂರದರ್ಶನದ ಅಂದಿನ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿಯವರ ನೇತೃತ್ವ ದಲ್ಲಿ ಈ ಅಪರೂಪದ ಉಪಕ್ರಮಕ್ಕೆ ಮುಂದಾಯಿತು ‘ಥಟ್ ಅಂತ ಹೇಳಿ’ ತಂಡ. ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆರೆಮನೆಯಲ್ಲಿ ಜೀವಾವಽ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳನ್ನು ಸ್ಟುಡಿಯೋಗೆ ಕರೆಸಿ, ಊಟೋಪಚಾರ ನೀಡಿ, ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಇದೊಂದು ರಾಷ್ಟ್ರೀಯ ದಾಖಲೆಯಾಗಿದೆ.
ಅಂಧರು, ಏಡ್ಸ್ ಪೀಡಿತರಿಗೂ ಸ್ಪರ್ಧೆ
ಅಂಧರನ್ನೂ ಈ ಸ್ಪರ್ಧೆಗೆ ಆಹ್ವಾನಿಸಿ, ದೃಶ್ಯರೂಪದ ಪ್ರಶ್ನೆಗಳು ಇರುವೆಡೆಯೆಲ್ಲಾ ಧ್ವನಿರೂಪದ ಪ್ರಶ್ನೆಗಳನ್ನು (ಹಾಡು-ಸಂಭಾಷಣೆಗಳ ರೂಪದಲ್ಲಿ) ಕೇಳಲಾಯಿತು. ಎಚ್‌ಐವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ ನೀಡಲು ಹಲವು ಕಾರ್ಯಕ್ರಮ ಗಳನ್ನುನಡೆಸಲಾಗಿದ್ದು ಈ ಪೈಕಿ ಒಂದರಲ್ಲಿ ಏಡ್ಸ್ ರೋಗಿಗಳು ಸ್ವತಃ ಭಾಗವಹಿಸಿ, ಏಡ್ಸ್ ಪೀಡಿತರೊಂದಿಗೆ ಸಹಬಾಳ್ವೆ ಸಾಧ್ಯ ಎಂದು ಹೇಳಿದ್ದುಂಟು.
ವಿಶೇಷಗಳ ಸರಣಿ
ನಿರ್ದಿಷ್ಟ ವಿಷಯವೊಂದನ್ನು ಕಾರ್ಯಕ್ರಮದ ‘ಥೀಮ್’ ಆಗಿ ಇಟ್ಟುಕೊಂಡು ‘ಥಟ್ ಅಂತ ಹೇಳಿ’ ಎಂದು ಪ್ರಶ್ನಿಸಿದ್ದು ಈ ಕಾರ್ಯಕ್ರಮದ ಮತ್ತೊಂದು ಹೆಗ್ಗಳಿಗೆ. ಅಂಥ ಒಂದಿಷ್ಟು ನಿದರ್ಶನಗಳು ಹೀಗಿವೆ:
ವಿಜ್ಞಾನ ಮಾಸಾಚರಣೆಯ ಅಂಗವಾಗಿ ಫೆಬ್ರವರಿ ತಿಂಗಳಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಕ್ವಿಜ್ ಸ್ಪರ್ಧೆ (ಸಹಯೋಗ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು)
ಬದಲಾಗುತ್ತಿರುವ ಪರಿಸರದ ಬಗ್ಗೆ ಜಾಗೃತಿಯನ್ನು ಉಂಟುಮಾಡಲು ಕರ್ನಾಟಕ ಸರಕಾರದ ನೆರವಿನೊಂದಿಗೆ ವಿಶೇಷ ಕಾರ್ಯಕ್ರಮ ಸರಣಿ
ರೇಬಿಸ್ ಕಾಯಿಲೆಯ ಬಗ್ಗೆ ಜಾಗೃತಿಯನ್ನುಂಟು ಮಾಡಲು ವಿಶೇಷ ಕಾರ್ಯಕ್ರಮ ಸರಣಿ.
ಕಾನೂನು ಬಗ್ಗೆ ಜನಜಾಗೃತಿಯನ್ನು ಉಂಟು ಮಾಡಲು ವಿಶೇಷ ಕಾರ್ಯಕ್ರಮ ಸರಣಿ.
ಚುನಾವಣೆಯಲ್ಲಿ ಮತವನ್ನು ಹಾಕಬೇಕಾದ ಅಗತ್ಯವನ್ನು ಕುರಿತು ಜನಜಾಗೃತಿಯ ಸರಣಿ.
ಮಿದುಳಿನ ಆರೋಗ್ಯವನ್ನು ಕುರಿತು ಕ್ವಿಜ್ (ಸಹಕಾರ: ಫ್ರಾನ್ಸ್ ದೇಶದ ಅಂತಾರಾಷ್ಟ್ರೀಯ ಮಿದುಳು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನ ನಿಮ್ಹಾನ್ ಹೊರಾಂಗಣವೂ ಉಂಟು ಹಲವು ಕಾರ್ಯಕ್ರಮಗಳನ್ನು ಸ್ಟುಡಿಯೋದಿಂದ ಹೊರಗೆ ನಡೆಸಲಾಗಿದೆ. ಬೆಂಗಳೂರಿನ ವಿವಿಧ ಬಡಾವಣೆಗಳು ಮತ್ತು ರಸ್ತೆಗಳು, ಮೈಸೂರು, ಭರಚುಕ್ಕಿ ಜಲಪಾತ, ಶಿವಮೊಗ್ಗ, ಜೋಗ್ ಜಲಪಾತ, ಬಿಸಿಲೆ ಅರಣ್ಯ, ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ ಮುಂತಾದವು ಇದರಲ್ಲಿ ಸೇರಿವೆ*
ಗಣ್ಯರ ದಂಡು
ಹಲವು ಸಂದರ್ಭಗಳಲ್ಲಿ ನಾಡಿನ ಹಿರಿಯ ಲೇಖಕರು ಹಾಗೂ ಗಣ್ಯರನ್ನು ಕರೆಯಿಸಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೆ ಭಾಗವಹಿಸಿದ ಕೆಲವು ಗಣ್ಯರೆಂದರೆ: ಜಿ.ವೆಂಕಟಸುಬ್ಬಯ್ಯ
ಮಾಸ್ಟರ್ ಹಿರಣ್ಣಯ್ಯ
ಸುಧಾಮೂರ್ತಿ
ಚಂದ್ರಶೇಖರ ಕಂಬಾರ
ಕೆ.ಎಸ್. ನಿಸಾರ್ ಅಹಮದ್
ಹಂ.ಪ.ನಾಗರಾಜಯ್ಯ (ಹಂಪನಾ)
ಕಮಲಾ ಹಂಪನಾ
ಜಯಂತ ಕಾಯ್ಕಿಣಿ
ಎಚ್.ಎಸ್. ವೆಂಕಟೇಶ ಮೂರ್ತಿ
ಬಿ.ಆರ್.ಲಕ್ಷ್ಮಣರಾವ್
ಡುಂಡಿರಾಜ್
ಜಯಶ್ರೀ
ನಾಗತಿಹಳ್ಳಿ ಚಂದ್ರಶೇಖರ್
ಡಾ.ಸಿ.ಆರ್.ಚಂದ್ರಶೇಖರ್
ಥಟ್ ಅಂತ ನೋಡಿ
ಕರೋನಾ ಕಾಲಘಟ್ಟವನ್ನು ಹೊರತುಪಡಿಸಿ ನಿರಂತರತೆಯನ್ನು ಕಾಯ್ದುಕೊಂಡ ಕಾರ್ಯಕ್ರಮ ವಿದು. ಈ ದಾಖಲೆಯು ಕನ್ನಡದ ವಾಹಿನಿಗಳನ್ನು ಒಳಗೊಂಡಂತೆ ಎಲ್ಲ ಭಾರತೀಯ ವಾಹಿನಿಗಳಿಗೂ ಅನ್ವಯ.
೨೦೦೨ರ ಜನವರಿ ೪ರಿಂದ ಇಂದಿನವರೆಗೆ ೨,೫೦೦ ಗಂಟೆಗಳಿಗೂ ಹೆಚ್ಚಿನ ಅವಧಿಗೆ ಕಾರ್ಯಕ್ರಮ ಬಿತ್ತರವಾಗಿದ್ದು, ಇದುವರೆಗೆ ೭೫,೦೦೦ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ.
ಕಾರ್ಯಕ್ರಮದಲ್ಲಿ ೧೫,೦೦೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ೭೦,೦೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಗಿದೆ.
ಕೆಲ ಕಾಲದವರೆಗೆ ಸಿಂಡಿಕೇಟ್ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದುಂಟು.
ಮಿಕ್ಕಂತೆ ಉಳಿದೆಲ್ಲ ಸಂಚಿಕೆಗಳನ್ನು ಪ್ರಾಯೋಜಕರ ನೆರವಿಲ್ಲದೆ ಬಿತ್ತರಿಸಲಾಗಿದೆ.
ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನವಾಗಿ ನೀಡಲೆಂದು ನವಕರ್ನಾಟಕ, ಅಂಕಿತ, ಸಪ್ನಾ, ಸಾವಣ್ಣ ಬುಕ್ಸ್, ಸ್ನೇಹ ಬುಕ್ ಹೌಸ್, ವಿಕ್ರಂ ಪ್ರಕಾಶನ, ರಾಷ್ಟ್ರೋತ್ಥಾನ ಸಾಹಿತ್ಯ ಮುಂತಾದ ಪ್ರಕಾಶಕರು ತಮ್ಮ ಪ್ರಕಟಣೆ ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
(ಪೂರಕ ಮಾಹಿತಿ: ಡಾ. ನಾ.ಸೋಮೇಶ್ವರ)