ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಜಿಂಕೆಮರಿಯ ಬೇಟೆಗೆ ಬಲೆ ಬೀಸಿದ ಅಡುಗೆಭಟ್ಟ...

ವಿಕೃತವಾಗಿ ನಕ್ಕ ನಳಪಾಕ, ‘ಚಿಂತೆ ಬೇಡ ಧಣೀ, ಹಣ್ಣು ಮಾಗಿದೆ. ಇಂದು ರಾತ್ರಿ ತೊಟ್ಟು ಕಳಚಿ ಕೊಂಡು ರೆಂಬೆಯಿಂದ ಅದಾಗೇ ಬೀಳುತ್ತೆ. ಪಾದಪೂಜೆಗೆಂದು ಬೇರೊಂದು ಊರಿಗೆ ಹೋಗಿರುವ ಸ್ವಾಮೀಜಿಯ ಜತೆಗೆ, ಮ್ಯಾನೇಜರ್, ಮಿಕ್ಕ ಸಿಬ್ಬಂದಿಯೂ ತೆರಳಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಊಟದ ನಂತರ ಕೊಂಚ ಓದಿ ಮಲಗಿ ಬಿಡುತ್ತಾರೆ. ಹೇಳೋರು ಕೇಳೋರು ಯಾರೂ ಇರೋಲ್ಲ. ಆಗ ನಿಮ್ಮ ಕೆಲಸವನ್ನು ಪೂರೈಸಿಕೊಳ್ಳೋರಂತೆ...’ ಎಂದು ಹೇಳಿ ಎರಡೂ ಕೈಗಳನ್ನು ಶಕುನಿಯಂತೆ ಉಜ್ಜಿಕೊಂಡ.

ಜಿಂಕೆಮರಿಯ ಬೇಟೆಗೆ ಬಲೆ ಬೀಸಿದ ಅಡುಗೆಭಟ್ಟ...

-

ರಸದೌತಣ (ಭಾಗ-20)

naadigru@gmail.com

ತನ್ನ ಡಿಸ್ಟಿಲರಿ ಸಾಮ್ರಾಜ್ಯದ ರಕ್ಷಣೆಗೆಂದು ರಾಜಕೀಯವನ್ನು ‘ಉಪವೃತ್ತಿ’ಯನ್ನಾಗಿಸಿಕೊಂಡಿದ್ದ ‘ಮದ್ಯದೊರೆ’ಗೆ ಸಮಾಜಸೇವಾ ಸಂಸ್ಥೆಯೊಂದಿಗೆ ಯಾವ ಸಂಬಂಧವಿಲ್ಲದಿದ್ದರೂ ವಾಮಮಾರ್ಗ ದಲ್ಲಿ ಅದರೊಳಗೆ ತೂರಿಕೊಳ್ಳಲು ಹವಣಿಸಿದ್ದು, ಕಥನಕ್ಕೆ ಕಿವಿಯಾಗಿದ್ದ ಶಿಷ್ಯರಲ್ಲಿ ಒಂದೆಡೆ ಅಚ್ಚರಿಯನ್ನೂ, ಮತ್ತೊಂದೆಡೆ ಹೇವರಿಕೆಯನ್ನೂ ಉಂಟು ಮಾಡಿತ್ತು. ಸಂಸ್ಥೆಯ ಆವರಣದಲ್ಲಿ ನಕಾರಾತ್ಮಕ ಛಾಯೆ ತುಂಬಿಕೊಂಡಿದೆ ಎಂದು ಮ್ಯಾನೇಜರ್ ಶುರುವಿನಲ್ಲಿ ಅವಧೂತರಲ್ಲಿ ಅಲವತ್ತುಕೊಂಡಿದ್ದಾಗ, “ಅಲ್ಲೊಂದು ಕಳ್ಳಬೆಕ್ಕು ಸೇರಿಕೊಂಡಿದೆ, ಅದನ್ನು ತೊಲಗಿಸಿದರೆ ವಾತಾವರಣ ತಿಳಿಯಾಗುತ್ತದೆ" ಎಂದು ಅವಧೂತರು ಒಗಟಿನಂತೆ ಉತ್ತರಿಸಿದ್ದು ಶಿಷ್ಯರಿಗೆ ಈಗ ನೆನಪಾಯಿತು.

ಆ ನೆನಕೆಯಲ್ಲೇ ಶಿಷ್ಯರೊಬ್ಬರು, “ಗುರುಗಳೇ, ನಮಗೆ ಒಗ್ಗದ ದ್ರವ್ಯವೊಂದು ದೇಹದೊಳಗೆ ಪ್ರವೇಶಿಸಿದಾಗ, ಅದನ್ನು ಅಲ್ಲಿಂದ ಹೊರದಬ್ಬಲು ಪ್ರತಿಕಾಯ ವ್ಯವಸ್ಥೆಯು ಇನ್ನಿಲ್ಲದಂತೆ ಹೋರಾಡುತ್ತದೆ ಎಂದು ಶಾಲೆಯಲ್ಲಿ ಓದಿದ್ದೆವು. ಆದರೆ, ಸಂಸ್ಥೆಗೆ ಹೊರಗಿನವರಾಗಿದ್ದ ಈ ‘ಲಿಕ್ಕರ್ ಕಿಂಗ್’ ಕಳ್ಳಬೆಕ್ಕಿನಂತೆ ಸುಲಭವಾಗಿ ಒಳಗೆ ತೂರಿಕೊಂಡಿದ್ದಾರೂ ಹೇಗೆ? ಅದಕ್ಕೆ ಯಾರಿಂದಲೂ ಸಣ್ಣ ಮಟ್ಟಿಗಿನ ಪ್ರತಿರೋಧವೂ ವ್ಯಕ್ತವಾಗಲಿಲ್ಲವೇ?" ಎಂದು ಕೇಳಿದರು.

ಇದನ್ನೂ ಓದಿ: Yagati Raghu Naadig Column: ಉಕ್ಕೇರಿದ ಉಪಾಯ, ಮತ್ತೇರಿದ ಮದನ, ಕಿಕ್ಕೇರಿದ ಕಥನ

ವಿಷಾದದ ನಗೆ ನಕ್ಕ ಅವಧೂತರು, “ಯಾರು ಯಾಕೆ ಪ್ರತಿರೋಧಿಸ್ತಾರಪ್ಪಾ? ‘ಕಾಮಿನಿ-ಕಾಂಚಾಣ’ ವೆಂಬ ಪ್ರಲೋಭನೆಗಳಿಗಿರುವ ‘ಪ್ರಭಾವ-ಪ್ರಕಾಶ’ ಅದೆಷ್ಟರ ಮಟ್ಟಿಗೆ ಕಣ್ಣು ಕೋರೈಸುವಂತೆ ಇರುತ್ತದೆಯೆಂದರೆ, ಅದರ ಎದುರು ಎಲ್ಲ ನೀತಿ-ನಿಜಾಯತಿಗಳೂ ಹೊಳಪು ಕಳೆದುಕೊಂಡು ಬಿಡುತ್ತವೆ. ಇಲ್ಲೂ ಅದೇ ಆಗಿದ್ದು. ಸಂಸ್ಥೆಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದ ‘ಹಿರಿ-ಮರಿ’ ರಾಜಕಾರಣಿಗಳಿಬ್ಬರ ಉನ್ನತ ರಾಜಕೀಯ ಬಯಕೆಗಳನ್ನು ಅರಿತ ಕಳ್ಳಬೆಕ್ಕು, ಅದಕ್ಕೆ ಬೇಕಾದ ದುಡ್ಡುಕಾಸನ್ನು ತಾನು ಹೊಂದಿಸುವುದಾಗಿಯೂ, ಅದಕ್ಕೆ ಪ್ರತಿಯಾಗಿ ಅಭಿವೃದ್ಧಿ ಸಮಿತಿಯ ಮೇಲುಸ್ತುವಾರಿಯನ್ನು ತನ್ನ ಸುಪರ್ದಿಗೆ ಬಿಡಬೇಕೆಂದೂ ಅವರಿಬ್ಬರಿಗೆ ಗಾಳ ಹಾಕಿತು. ‘ಹೋಲಿಕೆಯಲ್ಲಿ, ಲಿಕ್ಕರ್ ವ್ಯಾಪಾರವೇ ಬೃಹತ್ ಶಾಮಿಯಾನಾದಷ್ಟು ವ್ಯಾಪಕವಾಗಿರುವಾಗ, ಪುಟಗೋಸಿ ಗಾತ್ರದ ಈ ಸಮಿತಿಯ ಮೇಲುಸ್ತುವಾರಿಗೆ ಈ ಲಿಕ್ಕರ್ ಕಿಂಗ್ ಹಾತೊರೆಯುತ್ತಿರುವು ದೇಕೆ?’ ಎಂಬ ಸಂದೇಹ ‘ಹಿರಿ-ಮರಿ’ ಪುಢಾರಿಗಳ ಬುರುಡೆಯಲ್ಲೊಮ್ಮೆ ಇಣುಕಿತಾದರೂ, ‘ಅಪ್ಪನಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷಗಿರಿಯೂ, ಮಗನಿಗೆ ಯಾವುದೋ ಮಂತ್ರಿಗಿರಿಯೂ ದಕ್ಕುವುದಕ್ಕೆ ಲಿಕ್ಕರ್ ಕಿಂಗ್ ದುಡ್ಡಿನ ಕಂತೆಯ ರತ್ನಗಂಬಳಿ ಹಾಸುವುದಾದರೆ ಅದನ್ಯಾಕೆ ತಪ್ಪಿಸಿಕೊಳ್ಳಬೇಕು? ಸ್ವತಃ ಭಾಗ್ಯಲಕ್ಷ್ಮಿಯೇ ಬಾಗಿಲು ಬಡಿಯುತ್ತಿರುವಾಗಲೂ ಅದನ್ನು ತೆರೆಯದವನು ಮೂರ್ಖ ನಾಗುತ್ತಾನೆ’ ಎಂಬ ಗ್ರಹಿಕೆಯಲ್ಲಿ ಅಪ್ಪ-ಮಗ ಈ ಡೀಲ್‌ಗೆ ಒಪ್ಪಿಬಿಟ್ಟರು! ಇಷ್ಟಾಗಿಯೂ ‘ಮಠದ ಸ್ವಾಮೀಜಿ ಏನಾದರೂ ಅಪಸ್ವರ ಎತ್ತಿದರೆ?’ ಎಂಬ ಶಂಕೆಯೂ ಅವರಿಬ್ಬರ ಮನದಲ್ಲೊಮ್ಮೆ ಸುಳಿಯಿತು. ಆದರೆ, ‘ಲಿಕ್ಕರ್ ಕಿಂಗ್ ಯಾವುದೇ ಮಾರ್ಗದಲ್ಲಿ ಹಣ ಗಳಿಸುತ್ತಿರಲಿ, ಸಂಸ್ಥೆಗೆ ಮತ್ತು ಮಠಕ್ಕೆ ಹಣದ ಹೊಳೆ ಹರಿದರೆ ಸಾಕು’ ಎಂಬ ನಿರೀಕ್ಷೆಯಲ್ಲಿ ‘ಸರ್ವಸಂಗಪರಿತ್ಯಾಗಿ’ ಸ್ವಾಮೀಜಿ ಯೂ ಈ ಪ್ರಸ್ತಾವನೆಗೆ ಠಸ್ಸೆ ಒತ್ತಿಬಿಟ್ಟರು. ಅದ್ಯಾರೋ ಪುಣ್ಯಾತ್ಮರು ಸಮಾಜೋದ್ಧಾರದ ಸದಾಶಯದೊಂದಿಗೆ ಕಟ್ಟಿದ್ದ ಆ ಸಂಸ್ಥೆಯ ಆವರಣಕ್ಕೆ ಅಮಲುಕಾರಕ ಮದ್ಯದ ಕೆಟ್ಟಘಮಲು ರಾಚುವುದಕ್ಕೆ ಸ್ವಾಮೀಜಿಯೇ ಪೂರ್ಣಕುಂಭ ಸ್ವಾಗತ ನೀಡಿಬಿಟ್ಟರು, ತನ್ಮೂಲಕ ತಮ್ಮ ಕಾವಿ ಯನ್ನು ಮತ್ತೊಮ್ಮೆ ಸಡಿಲಿಸಿಬಿಟ್ಟರು" ಎನ್ನುತ್ತಾ ಮೌನವಾದರು.

ಅವಧೂತರಿಗೆ ಬೇಸರವಾಗಿರುವುದು ಶಿಷ್ಯರಿಗೆ ಗೊತ್ತಾಯಿತು. ಬಡಮಕ್ಕಳಿಗೆ ಉಚಿತ ಊಟ-ವಸತಿ-ಶಿಕ್ಷಣ ನೀಡುವ ಸದಾಶಯದೊಂದಿಗೆ ರೂಪುಗೊಂಡ ನಾಡಿನ ಒಂದಷ್ಟು ಸ್ಥಾಪಿತ ವ್ಯವಸ್ಥೆಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತೂರಿಕೊಂಡಿದ್ದರ ಪರಿಣಾಮ ಅವು ಮೂಲ ಆಶಯವನ್ನೇ ಕಳೆದು ಕೊಂಡು ‘ದುಡ್ಡು ಮಾಡುವ’ ಯಂತ್ರಗಳಾಗಿ ಬಿಟ್ಟಿರುವ ಕಹಿವಾಸ್ತವವು ಶಿಷ್ಯರ ಮನದಲ್ಲೊಮ್ಮೆ ಹಾದುಹೋಯಿತು. ಆದರೆ, ಶಾರದೆಯ ಕಥನದಲ್ಲಿ ಒಂದು ಗುಕ್ಕು ಜಾಸ್ತಿ ಎನ್ನುವಂತೆ, ‘ಕಾಮಿನಿ’ಯನ್ನು ದಕ್ಕಿಸಿಕೊಳ್ಳಲು ಕಳ್ಳಬೆಕ್ಕು ಸುರಿದ ‘ಕಾಂಚಾಣ’ವು ಸಂಸ್ಥೆಯ ಆವರಣವನ್ನೂ ಸ್ಮಶಾನ ಸದೃಶ ವಾಗಿಸಿಬಿಟ್ಟಿತು ಎಂಬುದು ಶಿಷ್ಯರಿಗೆ ಮನದಟ್ಟಾಯಿತು.

“ತನ್ನ ಬಯಕೆಗೆ ಹಸಿರು ನಿಶಾನೆ ದಕ್ಕಿದ್ದಕ್ಕೆ ಕಳ್ಳಬೆಕ್ಕಿಗೆ ಖುಷಿಯಾಯಿತು"- ತುಲನಾತ್ಮಕ ವಿಶ್ಲೇಷಣೆ ಯಲ್ಲಿ ತೊಡಗಿದ್ದ ಶಿಷ್ಯರನ್ನು ಹೀಗೆ ಎಚ್ಚರಿಸಿದ ಅವಧೂತರು ಮುಂದುವರಿದು, “ಲಿಕ್ಕರ್ ವ್ಯವಹಾರದಲ್ಲಿ ಭಾರಿ ಕುಳವೇ ಆಗಿದ್ದ ಕಳ್ಳಬೆಕ್ಕು, ಕಂಪನಿಯ ತರಹೇವಾರಿ ಉತ್ಪನ್ನಗಳ ರೂಪದರ್ಶಿಗಳಾಗಿ ಬಂದಿದ್ದ ಹುಡುಗಿಯರಲ್ಲಿ ಕೆಲವರ ಅಸಹಾಯಕತೆಯನ್ನು ಬಳಸಿಕೊಂಡು ಬಲೆಬೀಸಿ ಅದಾಗಲೇ ಒಡನಾಡಿತ್ತು. ಇಷ್ಟಾಗಿಯೂ, ಶಾರದೆಯ ಲಾವಣ್ಯವನ್ನು ಕಂಡು ‘ಇವಳನ್ನು ಹೇಗಾದರೂ ದಕ್ಕಿಸಿಕೊಳ್ಳಲೇಬೇಕು’ ಎಂಬ ಹಠಕ್ಕೆ ಬಿದ್ದಿತ್ತು. ಎಲ್ಲ ತೆರನಾದ ಉಚಿತ ಸೌಕರ್ಯಗಳನ್ನೂ ನೀಡುತ್ತಿರುವುದರಿಂದ, ಆಕೆಯ ಸೌಂದರ್ಯವನ್ನು ಇಡಿಯಾಗಿ ಸವಿಯುವ ಹಕ್ಕು ತನಗಿದೆ ಎಂಬ ‘ವಿತಂಡ ಗ್ರಹಿಕೆ’ಯನ್ನು ಕಳ್ಳಬೆಕ್ಕು ಮನದಲ್ಲಿ ಗಟ್ಟಿಯಾಗಿಸಿಕೊಳ್ಳಲು ಶುರುಮಾಡಿತು. ಆದರೆ, ಕಳ್ಳಬೆಕ್ಕು ವಾಡಿಕೆಯಂತೆ ಹಾಕುವ ಕಾಳುಗಳಿಗೆ ಬೀಳುವ ಪಾರಿವಾಳ ವಾಗಿರಲಿಲ್ಲ ಸಂಸ್ಕಾರವಂತೆ ಶಾರದೆ, ಅವಳು ‘ಹೋಮಕುಂಡದ ಅಗ್ನಿಯಿಂದ ಎದ್ದ ಬೆಳಕು’. ಹೀಗಾಗಿ, ಕಳ್ಳವೇಷ ಧರಿಸಲು ಕಳ್ಳಬೆಕ್ಕು ತಂತ್ರ ಹೂಡಿತು. ಸಂಸ್ಥೆಯ ಅಭಿವೃದ್ಧಿ ಸಮಿತಿಯ ಮೇಲುಸ್ತುವಾರಿ ಎಂಬ ಹಣೆಪಟ್ಟಿಯಡಿ ಒಂದು ಸುಸಜ್ಜಿತ ಕುಟೀರವೂ ಕಳ್ಳಬೆಕ್ಕಿಗೆ ದಕ್ಕಿತು. ಅಲ್ಲೊಂದು ದೊಡ್ಡ ಗಾತ್ರದ ದೇವರ ಫೊಟೋವನ್ನು ಸಜ್ಜುಗೊಳಿಸಿ ಪೂರಕ ವಾತಾವರಣವನ್ನು ಸೃಷ್ಟಿಸಿಕೊಂಡ ಕಳ್ಳಬೆಕ್ಕು, ವಾರಕ್ಕೊಮ್ಮೆ ಅಲ್ಲಿಗೆ ಬಂದಾಗಲೆಲ್ಲಾ ಪೂಜಾ ಕಾರ್ಯವನ್ನು ಹಮ್ಮಿಕೊಳ್ಳುತ್ತಿತ್ತು. ಇದರ ಹಿಂದಿನ ಸಂಚನ್ನು ಅರಿಯದ ಮಠದ ಸ್ವಾಮೀಜಿ, ಹೀಗೆ ಹಮ್ಮಿಕೊಂಡ ಪೂಜೆಯಲ್ಲಿ ಕಳ್ಳಬೆಕ್ಕಿಗೆ ನೆರವಾಗುವಂತೆ ಶಾರದೆ ಸೇರಿದಂತೆ ಮಿಕ್ಕ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಸೂಚಿಸುತ್ತಿದ್ದರು. ಈ ಸೂಚನೆ ಜಾರಿಯಾಗಿದ್ದೇ ಆಗಿದ್ದು, ಕಳ್ಳಬೆಕ್ಕಿನ ಪಾಲಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು. ಹಾಗೆ ನೋಡಿದರೆ, ನಾನು ಕೆಲ ದಿನಗಳ ಹಿಂದೆಯೇ ಹೇಳಿದಂತೆ, ಉಚಿತ ಊಟ-ವಸತಿ-ವಿದ್ಯಾಭ್ಯಾಸ ಪಡೆಯುತ್ತಿದ್ದುದಕ್ಕೆ ಪ್ರತಿಯಾಗಿ ‘ಸೇವೆ’ಯ ಹೆಸರಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಸ್ಥೆಯ ಆವರಣದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಬೇಕಾದುದು ಅಲಿಖಿತ ನಿಯಮವಾಗಿತ್ತು. ಗಿಡಗಳಿಗೆ ನೀರುಣಿಸುವುದು, ಪೂಜೆಗೆ ಹೂವು-ಪತ್ರೆ ಕೊಯ್ದುತರುವುದು, ಹಸುವಿನ ಹಾಲು ಕರೆಯುವುದು, ಗೋಶಾಲೆಯನ್ನು ಚೊಕ್ಕ ಮಾಡುವುದು ಮುಂತಾದ ಕೆಲಸಗಳು ಅದರಲ್ಲಿ ಸೇರಿದ್ದವು. ಅಂತೆಯೇ, ಹೊಸದಾಗಿ ಸಜ್ಜುಗೊಂಡ ಕಳ್ಳಬೆಕ್ಕಿನ ಕುಟೀರದಲ್ಲೂ ಹೀಗೆ ಪೂಜೆ ನಡೆಯುವಾಗೆಲ್ಲಾ ವಿದ್ಯಾರ್ಥಿನಿಯರಿಗೆ, ವಿಶೇಷವಾಗಿ ಶಾರದೆಗೆ ‘ಬುಲಾವ್’ ಬರುತ್ತಿತ್ತು. ಕೆಲವೇ ದಿನಗಳ ಹಿಂದೆ ತಾನು ಕಾರ್ಯಕ್ರಮದಲ್ಲಿ ಹಾಡಿದ ಗೀತೆಯನ್ನು ಮೆಚ್ಚಿಕೊಂಡು, ಸಂಸ್ಥೆಯ ಕಚೇರಿಗೆ ಕರೆಸಿಕೊಂಡು ಗರಿಗರಿ ನೋಟು ನೀಡಲು ಮುಂದೆ ಬಂದಿದ್ದ ಈ ‘ಹೊಸಧಣಿ’ಯನ್ನು ತಾನು ತಪ್ಪಾಗಿ ಭಾವಿಸಿ ಬಿಟ್ಟಿದ್ದೆನಾ? ಎಂದು ಶಾರದೆಯೂ ಕೆಲ ಕಾಲದವರೆಗೆ ತಪ್ಪಿತಸ್ಥ ಭಾವನೆಯ ಜೋಕಾಲಿಯಲ್ಲಿ ವೃಥಾ ಜೀಕಿದ್ದುಂಟು!

ಸಾಲದೆಂಬಂತೆ ಕಳ್ಳಬೆಕ್ಕು ಕೂಡ ತನ್ನ ಸಂಚಿನ ಭಾಗವಾಗಿ ಶಾರದೆಯೊಂದಿಗೆ ಶಿಷ್ಟರೀತಿಯಲ್ಲೇ ನಡೆದುಕೊಳ್ಳುತ್ತಿತ್ತು. ಹೀಗಾಗಿ ಕಳ್ಳಬೆಕ್ಕು ಕರೆದಾಗೆಲ್ಲಾ, ‘ಇದು ಕೆಲಕಾಲದವರೆಗಷ್ಟೇ ಜಿಂಕೆಯ ಚರ್ಮವನ್ನು ಹೊದ್ದಿರುವ ಮಾರ್ಜಾಲ’ ಎಂದರಿಯದ ಶಾರದೆ ಹಿಂಜರಿಕೆ ಬಿಟ್ಟು, ಹೇಳಿದ ಕೆಲಸ ಗಳನ್ನು ಮಾಡಿಕೊಟ್ಟು ಬರುತ್ತಿದ್ದಳು, ಬೆರೆತು ಮಾತನಾಡುತ್ತಿದ್ದಳು" ಎಂದು ಹೇಳಿ ಅರೆಕ್ಷಣ ಮಾತು ನಿಲ್ಲಿಸಿದರು.

“ಆದರೆ ಗುರುಗಳೇ, ಅಲೌಕಿಕ ಜ್ಞಾನಿಗಳಾಗಿದ್ದ ಮಠದ ಸ್ವಾಮೀಜಿಗಳಿಗಾಗಲೀ, ಲೌಕಿಕ ವ್ಯವಹಾರಜ್ಞಾನವಿದ್ದ ಸಂಸ್ಥೆಯ ಮ್ಯಾನೇಜರ್‌ಗಾಗಲೀ ಈ ಯಾವ ಸಂಚೂ ಅರಿವಾಗಲೇ ಇಲ್ಲವೇ? ಕುಟೀರವನ್ನು ಸೇರಿಕೊಂಡಿರುವುದು ಛದ್ಮವೇಷ ಧರಿಸಿದ ಕಳ್ಳಬೆಕ್ಕು ಎಂಬ ಲವಲೇಶ ಸಂದೇಹವೂ ಅವರಿಗೆ ಬರಲಿಲ್ಲವೇ?" ಎಂದು ಶಿಷ್ಯರೊಬ್ಬರು ಪ್ರಶ್ನಿಸಿದರು.

ಅದಕ್ಕೆ ಅವಧೂತರು, “ಸಂಸ್ಥೆಗೆ-ಮಠಕ್ಕೆ ದಂಡಿಯಾಗಿ ಹಣ ಬಂದು ಬೀಳುತ್ತಿರುವಾಗ ಲೌಕಿಕ-ಅಲೌಕಿಕ ಜ್ಞಾನಗಳೆಲ್ಲಾ ಯಾರಿಗೆ ಬೇಕಯ್ಯಾ?! ಅವರಿಬ್ಬರೂ ತಂತಮ್ಮ ಜ್ಞಾನಭಂಡಾರವನ್ನು ಮೂಟೆಕಟ್ಟಿ ಯಾವುದೋ ಕಾಲವಾಗಿತ್ತು. ಸ್ವಾಮೀಜಿಯ ಕಾವಿಬಟ್ಟೆಯನ್ನೂ, ಮ್ಯಾನೇಜರ್‌ರ ಸಫಾರಿ ದಿರಿಸನ್ನೂ ಒಗೆದು ಒಣಗಲು ಹಾಕುತ್ತಿದ್ದ ಹಗ್ಗಕ್ಕೆ ಆ ಮೂಟೆಯನ್ನೂ ತೂಗಿ ಹಾಕಲಾಗಿತ್ತು. ಹೀಗೆ ದೊಡ್ಡವರೆನಿಸಿ ಕೊಂಡವರೇ ದಾರಿಬಿಟ್ಟ ಮೇಲೆ ನಳಪಾಕನಂಥ ಅಡುಗೆ ಭಟ್ಟನಿಗೆ ಎಲ್ಲಿಯ ಅಂಕುಶ? ತನ್ನ ಉಪಾಯವು ನಿಧಾನವಾಗಿ ಹಳಿಗೆ ಬರುತ್ತಿರುವುದನ್ನು ಮನಗಂಡ ಆತ ಅಖಾಡವನ್ನು ಪ್ರವೇಶಿಸಿಬಿಟ್ಟ. ಕಳ್ಳಬೆಕ್ಕಿಗೆ ಕೊಟ್ಟ ಮಾತಿನಂತೆ, ತಾನು ಹೂಡಿದ್ದ ಸಂಚಿನ ನೆರವೇರಿಕೆಗೆ ತನ್ನ ವೃತ್ತಿಯನ್ನೇ ಬಳಸಿಕೊಂಡುಬಿಟ್ಟ. ಅದೊಂದು ಸಂಜೆ ತನ್ನ ಕುಟೀರದಲ್ಲಿ ಹಮ್ಮಿಕೊಂಡಿದ್ದ ವಾರದ ಪೂಜೆಯ ವೇಳೆ ನಳಪಾಕನನ್ನು ಭೇಟಿಯಾದ ಕಳ್ಳಬೆಕ್ಕು, ‘ನಾನಿಲ್ಲಿ ಬಂದು ಸಾಕಷ್ಟು ದಿನವಾದವು, ಶಾರದೆ ಎಂಬ ಹಣ್ಣನ್ನು ನನ್ನ ಬುಟ್ಟಿಗೆ ಕೆಡವುತ್ತೇನೆ ಎಂದು ಹೇಳಿದ್ದೆಯಲ್ಲಾ? ಯಾವಾಗ ಕೆಡವುತ್ತೀಯ?’ ಎಂದು ನಾಚಿಕೆ ಬಿಟ್ಟು ಕೇಳಿತು. ವಿಕೃತವಾಗಿ ನಕ್ಕ ನಳಪಾಕ, ‘ಚಿಂತೆ ಬೇಡ ಧಣೀ, ಹಣ್ಣು ಮಾಗಿದೆ. ಇಂದು ರಾತ್ರಿ ತೊಟ್ಟು ಕಳಚಿಕೊಂಡು ರೆಂಬೆಯಿಂದ ಅದಾಗೇ ಬೀಳುತ್ತೆ. ಪಾದಪೂಜೆಗೆಂದು ಬೇರೊಂದು ಊರಿಗೆ ಹೋಗಿರುವ ಸ್ವಾಮೀಜಿಯ ಜತೆಗೆ, ಮ್ಯಾನೇಜರ್, ಮಿಕ್ಕ ಸಿಬ್ಬಂದಿಯೂ ತೆರಳಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಊಟದ ನಂತರ ಕೊಂಚ ಓದಿ ಮಲಗಿ ಬಿಡುತ್ತಾರೆ. ಹೇಳೋರು ಕೇಳೋರು ಯಾರೂ ಇರೋಲ್ಲ. ಆಗ ನಿಮ್ಮ ಕೆಲಸವನ್ನು ಪೂರೈಸಿಕೊಳ್ಳೋರಂತೆ...’ ಎಂದು ಹೇಳಿ ಎರಡೂ ಕೈಗಳನ್ನು ಶಕುನಿಯಂತೆ ಉಜ್ಜಿಕೊಂಡ. ಆ ಇಶಾರೆಯನ್ನು ಗ್ರಹಿಸಿ ಅವನ ಕೈಗೆ ನೋಟಿನ ಕಂತೆ ತುರುಕಿದ ಕಳ್ಳಬೆಕ್ಕು, ‘ಅದು ಸರಿ, ಅವಳು ನಿಜಕ್ಕೂ ಬರ‍್ತಾಳಾ?’ ಎಂದು ಕೇಳಿತು. ‘ನಿಮಗ್ಯಾಕೆ ಅದರ ಚಿಂತೆ, ಅದನ್ನ ನನಗೆ ಬಿಡಿ’ ಎಂದು ಹೇಳಿ ನಳಪಾಕ ಅಲ್ಲಿಂದ ತೆರಳಿದ. ಸಂಜೆಯ ಪೂಜೆಯಲ್ಲಿ ಪ್ರಸಾದವಾಗಿ ವಿತರಿಸಲು ಕಡಲೇಕಾಳು ಉಸಲಿಯನ್ನು ತಯಾರಿಸಿ ಪರಾತದಲ್ಲಿ ತುಂಬಿಸಿ ತಂದಿಟ್ಟ ನಳಪಾಕ, ಪ್ರತ್ಯೇಕ ಡಬ್ಬಿಯಲ್ಲಿದ್ದ ಉಸಲಿಯನ್ನು ಕಳ್ಳಬೆಕ್ಕಿಗೆ ನೀಡಿ, ‘ಇದನ್ನು ಶಾರದೆಗೆ ಮಾತ್ರ ನೀಡಿ, ನಂತರ ಅವಳು ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತೆ ನಿಮ್ಮ ಹಿಂದೆಯೇ ಕೋಣೆಗೆ ಬರ‍್ತಾಳೆ’ ಎಂದು ಹಲ್ಲು ಕಿಸಿದ. ‘ನಾಮ್-ಕೆ-ವಾಸ್ತೆ’ ಪೂಜೆಯ ನಂತರ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಪ್ರಸಾದ ನೀಡಿ, ‘ನಿಮ್ಮ ನಿಮ್ಮ ಕೋಣೆಯಲ್ಲಿ ಸೇವಿಸಿ’ ಎಂದು ಸೂಚಿಸಲಾಯಿತು. ಅಂತೆಯೇ ಶಾರದೆಗೂ ಒಂದು ದೊನ್ನೆಯ ತುಂಬಾ ‘ನಿಗದಿತ’ ಉಸಲಿ ದಕ್ಕಿತು. ಶಾರದೆ ತನ್ನ ಕೋಣೆಗೆ ಬಂದಳು. ಆದರೆ ಆಕೆ ಸಂಸ್ಕಾರವಂತೆ, ತನಗೆ ತಿನ್ನುವುದಕ್ಕೆ ಏನೇ ಸಿಕ್ಕರೂ ಹತ್ತಿರದಲ್ಲೇ ಸುಳಿದಾಡುವ ನಾಯಿಗೆ ಚೂರು ತಿನ್ನಿಸಿ ನಂತರ ತಾನು ಮೆಲ್ಲುವುದು ಆಕೆಯ ಅಭ್ಯಾಸ. ಅಂತೆಯೇ, ಅರ್ಧಹಿಡಿ ಉಸಲಿಯನ್ನು ನಾಯಿಗೂ ಹಾಕಿದಳು, ನೋಡನೋಡುತ್ತಲೇ ವಿಪರೀತವಾಗಿ ಬೆವರ ತೊಡಗಿದಳು" ಎಂದರು.

ಆಗ ಶಿಷ್ಯರೊಬ್ಬರು, “ಅದೇಕೆ ಗುರುಗಳೇ?" ಎಂದು ಪ್ರಶ್ನಿಸಿದರು.

ಅದಕ್ಕೆ ಅವಧೂತರು, “ಉಸಲಿಯನ್ನು ತಿಂದ ನಾಯಿ ಕೆಲ ಕ್ಷಣದಲ್ಲೇ ವಿಚಿತ್ರವಾಗಿ ಆಡುತ್ತಾ ಪ್ರಜ್ಞೆ ತಪ್ಪಿತು. ದುರುಳ ನಳಪಾಕ ಉಸಲಿಯಲ್ಲಿ ಮತ್ತು ಬರಿಸುವ ಔಷಧಿಯನ್ನು ಬೆರೆಸಿಬಿಟ್ಟಿದ್ದ..." ಎನ್ನುತ್ತಾ ನಿಟ್ಟುಸಿರುಬಿಟ್ಟರು.

(ಮುಂದುವರಿಯುವುದು)