ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Kumaraswamy Viraktamatha Column: ಮಾತೃಭಾಷೆ ಎಂಬ ಚಂದದ ಸೇತುವೆ

ಭಾಷೆಯೆಂಬುದು ಪರಸ್ಪರ ಸಂವಹನಕ್ಕೆ ಸೃಷ್ಟಿಯಾಗಿರುವ ಒಂದು ಮಾಧ್ಯಮ. ಅದು ಸೃಷ್ಟಿ ಯಾದದ್ದು ಮಾನವನ ಅಸ್ತಿತ್ವ ಬಂದ ಮೇಲೆಯೇ. ಜನರು ತಮ್ಮ ದಿನನಿತ್ಯದ ಕಾರ್ಯ ಚಟು ವಟಿಕೆಗಳ ಸುಗಮ ನಿರ್ವಹಣೆಗಾಗಿ ಭಾಷೆಯನ್ನು ರಚಿಸಿದರು. ವಿಶ್ವದಲ್ಲಿ 7 ಸಾವಿರಕ್ಕೂ ಅಧಿಕ ಭಾಷೆಗಳಿವೆ; ಈ ಪೈಕಿ ಮಾತೃಭಾಷೆಯಾಗಿ ಅಧಿಕವಾಗಿ ಬಳಸಲ್ಪಡು ವಂಥದ್ದು ಇಂಗ್ಲಿಷ್ ಎಂದು ನಾವು ಊಹಿಸಿದರೆ ಅದು ತಪ್ಪು

ಮಾತೃಭಾಷೆ ಎಂಬ ಚಂದದ ಸೇತುವೆ

ಅಂಕಣಕಾರ ಕುಮಾರಸ್ವಾಮಿ ವಿರಕ್ತಮಠ

Profile Ashok Nayak Feb 26, 2025 5:24 AM

ವಿಶ್ವ ಮಾತೃಭಾಷೆಯ ದಿನದಂದೇ ಬೆಳಗಾವಿಯಲ್ಲೊಂದು ಕ್ಷುಲ್ಲಕ ಘಟನೆ ನಡೆದಿದ್ದು ವಿಷಾದನೀಯ. ಸರಕಾರಿ ಸಾರಿಗೆ ಬಸ್ಸಿನ ನಿರ್ವಾಹಕರೊಬ್ಬರು, ‘ಕನ್ನಡದಲ್ಲಿ ಮಾತನಾಡಿ, ನನಗೆ ನಿಮ್ಮ ಭಾಷೆ ಅರ್ಥವಾಗುವುದಿಲ್ಲ’ ಎಂದಿದ್ದಕ್ಕೆ ಅನ್ಯಭಾಷಿಕರು ಅವರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ ವಿಚಾರ. ಇದನ್ನು ಪ್ರತಿಯೊಬ್ಬ ಕನ್ನಡಿಗರೂ ಖಂಡಿಸಲೇ ಬೇಕು. ಮನುಷ್ಯ ಭಾವನಾತ್ಮಕ ಜೀವಿ ಯೂ ಹೌದು, ಸಾಮಾಜಿಕ ಜೀವಿಯೂ ಹೌದು. ಬಾಲ್ಯದಿಂದ ಆರಂಭಗೊಂಡು ವೃದ್ಧಾಪ್ಯ ದವರೆಗೂ, ಆತನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಕುಟುಂಬದ ಪಾತ್ರ ಎಷ್ಟು ಮುಖ್ಯವೋ, ಸಮಾಜದಲ್ಲಿ ಆತನ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರ ಪಾತ್ರವೂ ಅಷ್ಟೇ ಮುಖ್ಯ.

ಅವರೆಲ್ಲರೂ ಆತನ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುವಂಥವರೇ. ಆತ ತನ್ನ ಮನದಲ್ಲಿ ಉದಿಸುವ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಂವ ಹನಾ ಮಾಧ್ಯಮವೊಂದು ಬೇಕೇ ಬೇಕಲ್ಲವೇ? ಹೀಗೆ ಪರಸ್ಪರರ ಮಾತುಗಳು ಬೆಸೆದು ಕೊಳ್ಳಲು ಸೇತುವೆಯಾಗಿರುವಂಥದ್ದೇ ಭಾಷೆ.

ಇದನ್ನೂ ಓದಿ: Thimmanna Bhagwath Column: ಮಗಳಿಗೆ ಆಸ್ತಿ ಹಕ್ಕು ಓಕೆ, ತಾಯಿ-ಹೆಂಡತಿಯರ ಹಕ್ಕು ಕಡಿಮೆಯೇಕೆ ?

ಭಾಷೆಯೆಂಬುದು ಪರಸ್ಪರ ಸಂವಹನಕ್ಕೆ ಸೃಷ್ಟಿಯಾಗಿರುವ ಒಂದು ಮಾಧ್ಯಮ. ಅದು ಸೃಷ್ಟಿಯಾದದ್ದು ಮಾನವನ ಅಸ್ತಿತ್ವ ಬಂದ ಮೇಲೆಯೇ. ಜನರು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳ ಸುಗಮ ನಿರ್ವಹಣೆಗಾಗಿ ಭಾಷೆಯನ್ನು ರಚಿಸಿದರು. ವಿಶ್ವದಲ್ಲಿ 7 ಸಾವಿರಕ್ಕೂ ಅಧಿಕ ಭಾಷೆಗಳಿವೆ; ಈ ಪೈಕಿ ಮಾತೃಭಾಷೆಯಾಗಿ ಅಧಿಕವಾಗಿ ಬಳಸಲ್ಪಡು ವಂಥದ್ದು ಇಂಗ್ಲಿಷ್ ಎಂದು ನಾವು ಊಹಿಸಿದರೆ ಅದು ತಪ್ಪು.

ಏಕೆಂದರೆ ಜಗತ್ತಿನ 885 ಮಿಲಿಯನ್ ಜನರು ತಮ್ಮ ಮಾತೃಭಾಷೆಯಾಗಿ ಚೀನಾದ ಮ್ಯಾಂಡರಿನ್ ಭಾಷೆಯನ್ನು ಬಳಸುತ್ತಾರೆ. ನಂತರದ ಸ್ಥಾನವನ್ನು ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಗಳು ಪಡೆದುಕೊಂಡಿವೆ. ಮಿಕ್ಕಂತೆ, 615 ಮಿಲಿಯನ್ ಜನರು ನಮ್ಮ ದೇಶದ ಹಿಂದಿಯನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ.

ನಮ್ಮ ಸಂವಹನಕ್ಕಾಗಿ ನಾವು ಎಷ್ಟೇ ಭಾಷೆಗಳನ್ನು ಕಲಿತರೂ, ನಮ್ಮ ಭಾವನೆಗಳು ಮತ್ತು ಆಲೋಚನೆಗಳು ರೂಪುಗೊಳ್ಳುವುದು ಮಾತೃಭಾಷೆಯಲ್ಲೇ. ಮನಸ್ಸಿನಲ್ಲಿ ಹುಟ್ಟುವ ಚಂದದ ಭಾವನೆಗಳು ಅನುಭೂತಿಯಾಗಿ ಮೈಗೂಡುವುದು ತಾಯ್ನುಡಿಯ ನೆರವಿನಿಂದ ಮಾತ್ರ.

ಮಗುವು ಹುಟ್ಟಿದಾರಭ್ಯ ತನ್ನ ತಾಯಿ-ತಂದೆ, ಕುಟುಂಬದ ಮಿಕ್ಕ ಸದಸ್ಯರು ಮತ್ತು ನಿಕಟ ವರ್ತಿಗಳೊಂದಿಗೆ ಬೆಳೆಯುತ್ತಾ ಹೋದಂತೆ, ಆ ವಲಯದಲ್ಲಿ ಬಳಸುವ ಮತ್ತು ರೂಢಿಸಿ ಕೊಳ್ಳುವ ಭಾಷೆ ಮಾತೃಭಾಷೆಯಾಗಿರುತ್ತದೆ. ಒಟ್ಟಾರೆ ಹೇಳುವುದಾದರೆ, ವ್ಯಕ್ತ ಯೊಬ್ಬನ ವಿಕಸನಕ್ಕೆ ಮಾತೃಭಾಷೆಯೇ ಮೂಲವಾಗಿರುತ್ತದೆ.

ನಾವು ಬಾಲ್ಯಾವಸ್ಥೆಯಲ್ಲಿ ಎಲ್ಲವನ್ನೂ ಕಲಿಯುವುದು ಮಾತೃಭಾಷೆಯ ನೆರವಿನಿಂದಲೇ. ಮಾತೃಭಾಷೆಯಲ್ಲಿ ಸರಳವಾಗಿ ವ್ಯಕ್ತಪಡಿಸುವ ಭಾವನೆಗಳನ್ನು ಅಷ್ಟೇ ಸರಳವಾಗಿ ಮತ್ತೊಂದು/ಪರಕೀಯ ಭಾಷೆಯಲ್ಲಿ ತೋರ್ಪಡಿಸಲಾಗುವುದಿಲ್ಲ. ಜೀವನದ ಸುಖ-ದುಃಖ ಗಳು, ನೋವು-ನಲಿವುಗಳು ಮೂಡಿಬರುವುದು ನಮ್ಮ ತಾಯ್ನುಡಿಯಲ್ಲಿಯೇ.

ಇಂದು ಪ್ರಪಂಚದಲ್ಲಿ 7 ಸಾವಿರಕ್ಕೂ ಅಧಿಕ ಭಾಷೆಗಳಿದ್ದರೂ, ಅವುಗಳ ಪೈಕಿ ಅರ್ಧ ದಷ್ಟು ಅವಸಾನದ ಅಂಚಿನಲ್ಲಿವೆ ಎನ್ನುತ್ತದೆ ಸಂಶೋಧನೆಯೊಂದು. ವಿವಿಧ ಭಾಷೆಗಳ ಪೈಪೋಟಿಯ ಮಧ್ಯೆ ಮಾತೃಭಾಷೆಗೆ ಧಕ್ಕೆ ಉಂಟಾಗುತ್ತಿದೆ. ಬಹಳಷ್ಟು ಜನರು ಜಾಗತಿಕ ಮಟ್ಟದ ಭಾಷೆಗಳ ವ್ಯಾಮೋಹಕ್ಕೆ ಸಿಲುಕಿ ಮಾತೃಭಾಷೆ/ ಪ್ರಾದೇಶಿಕ ಭಾಷೆಯನ್ನು ಕೀಳಾಗಿ ಕಾಣುತ್ತಾರೆ, ಮಾತೃಭಾಷೆಯ ಮಹತ್ವವನ್ನು ಅರಿಯದೆಯೇ ಅದನ್ನು ನಿರ್ಲಕ್ಷಿಸು ತ್ತಿದ್ದಾರೆ.

ಮಾತೃಭಾಷೆ/ಪ್ರಾದೇಶಿಕ ಭಾಷೆಗಳನ್ನು ಉಳಿಸುವುದು ಹೇಗೆ ಎಂಬುದರ ಕುರಿತು ಜಗತ್ತಿನ ಎಲ್ಲ ದೇಶಗಳು ಚಿಂತನೆ ನಡೆಸಬೇಕಾದ ತುರ್ತು ಅಗತ್ಯ ಎದುರಾಗಿದೆ. ಮಾತೃಭಾಷೆಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಬಹಳ ಮಹತ್ವದ್ದಾಗಿದೆ. ಜಾಗತೀ ಕರಣದ ಹಿನ್ನೆಲೆಯಲ್ಲಿ ಬಹುತೇಕರು ಇಂಗ್ಲಿಷ್ ಭಾಷೆಯ ಮೋಹಕ್ಕೆ ಸಿಲುಕಿದ್ದಾರೆ. ನಾವು ಬೆಳೆಯುತ್ತಾ, ಕುಣಿಯುತ್ತಾ, ಆಡುತ್ತಾ, ನಲಿಯುತ್ತಾ ಮೈಗೂಡಿಸಿಕೊಂಡ ಮಾತೃಭಾಷೆ ಯನ್ನು ನಿರ್ಲಕ್ಷಿಸುತ್ತಿದ್ದೇವೆ.

ಮಾತೃಭಾಷೆಯ ಮೂಲಕ ನಾವು ಪಡೆದುಕೊಂಡ ಅರಿವು ಮತ್ತು ಕಲಿತುಕೊಂಡ ಸಂಸ್ಕೃತಿ, ಸಂಸ್ಕಾರ, ಜೀವನಶೈಲಿ, ಕೌಶಲಗಳು ನಮ್ಮ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಿ ರುತ್ತವೆ. ಅವುಗಳನ್ನು ನಾವು ನಮ್ಮ ಬದುಕಿನ ಕೊನೆಯವರೆಗೂ ಮರೆಯಲು ಸಾಧ್ಯವಿಲ್ಲ. ಮುಂದಿನ ಪೀಳಿಗೆಗೆ ಅವನ್ನು ವರ್ಗಾಯಿಸುವಲ್ಲಿ ಮಾತೃಭಾಷೆಯು ವಹಿಸುವ ಪಾತ್ರ ದೊಡ್ಡದು.

ವಿಜ್ಞಾನ ಮತ್ತು ತಂತ್ರಜ್ಞಾನಗಳ ಜ್ಞಾನಭಂಡಾರದ ಬಹುಭಾಗವು ಇಂದು ಇಂಗ್ಲಿಷ್‌ನಲ್ಲೇ ಹುದುಗಿಹೋಗಿದೆ. ಉದ್ಯೋಗ ಸಂಬಂಧಿತ ಶಿಕ್ಷಣವು ಬಹಳಷ್ಟು ಮಟ್ಟಿಗೆ ಇಂಗ್ಲಿಷ್‌ನಲ್ಲೇ ನಡೆಯುತ್ತಿದೆ. ಉದ್ಯೋಗಕ್ಕಾಗಿ ಇಂಗ್ಲಿಷ್ ಬೇಕೇ ಬೇಕೆಂಬ ಗ್ರಹಿಕೆ ಜನರಲ್ಲಿ ಮನೆಮಾಡಿದೆ ಮತ್ತು ಬಹುತೇಕ ಉದ್ಯೋಗದಾತರು ಕೂಡ ಅದು ಕಡ್ಡಾಯ ಎಂಬ ಅಲಿಖಿತ ನಿಯಮ ವನ್ನು ಮುಂದುಮಾಡಿಬಿಟ್ಟಿದ್ದಾರೆ.

ಇಂಗ್ಲಿಷ್ ಇಲ್ಲದಿದ್ದರೆ ಜೀವನವೇ ಇಲ್ಲ ಎಂಬ ಪರಿಸ್ಥಿತಿಯಿಂದು ನಿರ್ಮಾಣವಾಗಿರುವು ದರಿಂದ, ಹೆಚ್ಚೆಚ್ಚು ಜನರು ಇಂಗ್ಲಿಷ್ ಕಡೆಗೆ ವಾಲುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಬಹುತೇಕ ಮಕ್ಕಳಿಗೆ ತಮ್ಮ ಮಾತೃಭಾಷೆ ಯಾವುದು ಎಂಬುದರ ಕಲ್ಪನೆಯೂ ಇರುವು ದಿಲ್ಲ. ಪೂರ್ವ ಪ್ರಾಥಮಿಕ ಹಂತದಲ್ಲೇ ಮಗುವನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿಬಿಡುವ ಗೀಳು ಜನರಲ್ಲಿ ವ್ಯಾಪಕವಾಗುತ್ತಿದೆ. ಮನೆಯಲ್ಲಿರುವಾಗಲೂ ತಮ್ಮ ಮಗುವು ಇಂಗ್ಲಿಷ್ ಭಾಷೆಯನ್ನು ಮರೆತುಬಿಡಬಾರದು ಎಂಬ ಕಾರಣಕ್ಕೆ ಬಹುತೇಕರು ಅದನ್ನೇ ತಮ್ಮ ‘ಬಾಡಿಗೆ ಮಾತೃಭಾಷೆ’ಯನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ.

ಮಗುವಿನ ಆರಂಭಿಕ ವಿಷಯ ಕಲಿಕೆಯು ಮಾತೃಭಾಷೆಯಲ್ಲೇ ಇರಬೇಕು ಎಂದು ಬಹಳ ಷ್ಟು ಭಾಷಾತಜ್ಞರು ಮತ್ತು ಸಮಾಜ ಶಾಸ್ತ್ರಜ್ಞರು ಹೇಳುತ್ತಾರಾದರೂ, ಮಕ್ಕಳ ಪೋಷಕರು ಅದನ್ನು ಸುತರಾಂ ಒಪ್ಪುತ್ತಿಲ್ಲ. ಜಗತ್ತಿನ ಸಾಕಷ್ಟು ರಾಷ್ಟ್ರಗಳು ಮಾತೃ ಭಾಷೆಯಲ್ಲೇ ಶಿಕ್ಷಣವನ್ನು ನೀಡುತ್ತಿವೆ ಎಂಬುದನ್ನು ಇಂಥವರು ಮರೆತುಬಿಡುತ್ತಾರೆ.

ಚೀನಾ ಮತ್ತು ಜಪಾನ್ ದೇಶಗಳೇ ಇದಕ್ಕೆ ದೊಡ್ಡ ಉದಾಹರಣೆ. ಈ ಕಾರಣದಿಂದಲೇ ಅವು ಅಭಿವೃದ್ಧಿ ಪಥದತ್ತ ಸಾಗಿವೆ. ವರದಿಯೊಂದರ ಪ್ರಕಾರ, ಭಾರತದಲ್ಲಿ 122 ಪ್ರಮುಖ ಭಾಷೆಗಳಿವೆ ಮತ್ತು 1590ಕ್ಕೂ ಹೆಚ್ಚು ಉಪಭಾಷೆಗಳಿವೆ. ನಮ್ಮಲ್ಲಿ ಕೂಡ ಬಹಳಷ್ಟು ಭಾಷೆಗಳು ಅವಸಾನದ ಅಂಚಿಗೆ ತಲುಪಿವೆ. ಈ ಪೈಕಿ ಕೆಲವು ಭಾಷೆಗಳಿಗೆ ಲಿಪಿಯಿದ್ದರೆ, ಮತ್ತೆ ಕೆಲವಕ್ಕೆ ಇಲ್ಲ. ಈ ಎಲ್ಲ ಭಾಷೆಗಳನ್ನು ಉಳಿಸಿ ಬೆಳೆಸುವ ಹೊಣೆಯನ್ನು ಸರಕಾರ ಮಾತ್ರವೇ ಹೊರಬೇಕು ಎಂದು ನಿರೀಕ್ಷಿಸುವುದು ತರವಲ್ಲ. ಜನರೂ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕಿದೆ.

ಮಾತೃಭಾಷೆಯಲ್ಲೇ ಶಿಕ್ಷಣ ನೀಡುವಂತಾಗುವ ನಿಟ್ಟಿನಲ್ಲಿ ಸರಕಾರವು ಸಂಬಂಧ ಪಟ್ಟವರನ್ನು ಪ್ರೋತ್ಸಾಹಿಸಬೇಕಿದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ನೀಡುವುದು ಈ ಕ್ರಮಗಳಲ್ಲಿ ಒಂದಾಗಬೇಕು. ವ್ಯಕ್ತಿಯೊಬ್ಬ ಮಾತೃಭಾಷೆಯಲ್ಲಿ ಹಿಡಿತವನ್ನು ಸಾಧಿಸಿದಾಗ ಮಾತ್ರವೇ ಮಿಕ್ಕ ಭಾಷೆಗಳನ್ನೂ ಸುಲಭವಾಗಿ ಕಲಿಯುವುದಕ್ಕೆ ಬಲ ಸಿಕ್ಕಂತಾಗುತ್ತದೆ.

ಆದ್ದರಿಂದ, ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಬೇಕು, ಮಾತೃ ಭಾಷೆಯಲ್ಲೇ ಅವರೊಂದಿಗೆ ಮಾತಾಡುವ, ಕಥೆ-ಕವನ ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದಾಗಿ ಮಾತೃಭಾಷೆಯ ಅಳಿವಿಗೆ ಬಹುಮಟ್ಟಿಗೆ ಲಗಾಮು ಬೀಳುತ್ತದೆ. ಕವಿಗಳು, ಲೇಖಕರು ತಂತಮ್ಮ ಮಾತೃಭಾಷೆಯಲ್ಲಿ ರಚಿಸುವ ಸಾಹಿತ್ಯವು ಪರಿಣಾಮಕಾರಿಯಾಗಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ. ಅದು ಮಾತೃಭಾಷೆಯ ತಾಕತ್ತು ಮತ್ತು ಗಮ್ಮತ್ತು.

ನಮ್ಮ ದೇಶದಲ್ಲಿ ನೆಲ, ಜಲ ಮತ್ತು ಭಾಷೆಗಾಗಿ ಸಾಕಷ್ಟು ಹೋರಾಟಗಳು ನಡೆಯುತ್ತವೆ. ಆದರೆ ಅದು ದೇಶದ ಏಕತೆಗೆ ಎಂದೂ ಧಕ್ಕೆಯನ್ನು ತಂದಿಲ್ಲ. ಇನ್ನೊಂದು ಭಾಷೆಯ ಹೇರಿಕೆಯನ್ನು ಯಾರೂ ಅಷ್ಟು ಸುಲಭವಾಗಿ ಒಪ್ಪಿಕೊಂಡಿಲ್ಲ. ಕರ್ನಾಟಕದಲ್ಲಿ ಕನ್ನಡ ವೇ ಸಾರ್ವಭೌಮ. ಸರಕಾರದ ಸಂವಹನಾ ವ್ಯವಹಾರಗಳು ಸೇರಿದಂತೆ ಜನ ಸಾಮಾನ್ಯರ ದೈನಿಕ ಚಟುವಟಿಕೆಗಳು ಕನ್ನಡದಲ್ಲೇ ನಡೆಯುವಂತಾಗಬೇಕು.

ಬೇರೆ ಭಾಷೆಯವರು ಬಂದು ಇಲ್ಲಿ ನೆಲೆಯೂರಿದರೆ ಅವರಿಗೆ ನಾವು ಕನ್ನಡವನ್ನು ಕಲಿಸ ಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರೆಂದರೆ ಕೆಲವರು ತಾತ್ಸಾರದ ಮನೋಭಾವ ವನ್ನು ತೋರುವುದಿದೆ, ಇದನ್ನು ತೊಡೆಯಬೇಕಿದೆ. ಕನ್ನಡ ಭಾಷೆಯು ಇನ್ನೂ ಸಮರ್ಥ ವಾಗಿ ಉಳಿದುಕೊಂಡಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವೇ; ಹೀಗಾಗಿ ಅಲ್ಲಿನ ಕನ್ನಡ ಶಾಲೆಗಳನ್ನು ಬಲಪಡಿಸಬೇಕಾಗಿದೆ.

ಹಾಗೆಂದ ಮಾತ್ರಕ್ಕೆ ನಾವು ಇತರ ಭಾಷೆಗಳನ್ನು ನಿರ್ಲಕ್ಷಿಸಬೇಕು ಎಂದಲ್ಲ; ಪಠ್ಯಕ್ರಮ ದಲ್ಲಿ ಅವನ್ನು ಒಂದು ವಿಷಯವಾಗಿ ಪರಿಣಾಮಕಾರಿಯಾಗಿ ಕಲಿಸಬೇಕು. ಮಾತೃಭಾಷೆ ಯು ತಾಯಿ ಕಲಿಸುವ ಮೊದಲ ಭಾಷೆ, ಅದು ಹೃದಯದ ಭಾಷೆ. ಮಾತೃಭಾಷೆಯ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ.

(ಲೇಖಕರು ಹವ್ಯಾಸಿ ಬರಹಗಾರರು)