Thimmanna Bhagwath Column: ಮಗಳಿಗೆ ಆಸ್ತಿ ಹಕ್ಕು ಓಕೆ, ತಾಯಿ-ಹೆಂಡತಿಯರ ಹಕ್ಕು ಕಡಿಮೆಯೇಕೆ ?
ಇದು, ಪ್ರಾಚೀನ ಹಿಂದೂ ಶಾಸ ಮತ್ತು ಹಿಂದೂ ಕಾನೂನುಗಳಿಗೆ ಮೂಲವೆನಿಸಿದ ಮನು ಸ್ಮೃತಿಯಲ್ಲಿ, ಸ್ತ್ರೀಯರಿಗೆ ಆಸ್ತಿ ನೀಡಿಕೆ ಕುರಿತು ಇರುವ ಒಂದು ಉಕ್ತಿ. ಆದರೂ ಸ್ತ್ರೀಧನ, ಸೀ ಮಿತ ಆಸ್ತಿ ಮತ್ತು ತಾಯಿಯ ಆಸ್ತಿಯಲ್ಲಿ ಪಾಲು ಎಂಬ ಕೆಲವೇ ಅಪವಾದಗಳನ್ನು ಬಿಟ್ಟರೆ ಆಸ್ತಿಯ ಹಕ್ಕಿನ ವಿಷಯದಲ್ಲಿ ಮನುಸ್ಮೃತಿ ಸೇರಿದಂತೆ ಬಹುತೇಕ ಪ್ರಾಚೀನ ಸ್ಮೃತಿಗಳಲ್ಲಿ ಗಂಡುಮಕ್ಕಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು

ಅಂಕಣಕಾರ ತಿಮ್ಮಣ್ಣ ಭಾಗ್ವತ್

ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
1937ರ ಹಿಂದೂ ಮಹಿಳೆಯರ ಆಸ್ತಿ ಕಾಯಿದೆಯಲ್ಲಿ ಹಿಂದೂ ವಾರಸುದಾರ ಪದ್ಧತಿ ಯನ್ನು ಕ್ರೋಡೀಕರಿಸಲಾಯಿತಾದರೂ ಸಮಾನತೆ ಇನ್ನೂ ದೂರವಿತ್ತು. ಸಂವಿಧಾನದ 14 ಹಾಗೂ 15ನೇ ವಿಧಿಗಳು ಒದಗಿಸುವ ಸಮಾನತೆಯ ಹಿನ್ನೆಲೆಯಲ್ಲಿ ಮತ್ತು ಪ್ರಗತಿಪರ ಚಿಂತನೆಗೆ ಅನುಗುಣವಾಗಿ 1956ರಲ್ಲಿ ಸಮಗ್ರ ಹಿಂದೂ ಉತ್ತರಾಧಿಕಾರ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಆ ಕಾಯಿದೆಯನ್ವಯ ಹಿಂದೂ ಅವಿಭಕ್ತ ಕುಟುಂಬದ ಸದಸ್ಯ ನೊಬ್ಬ ತೀರಿಕೊಂಡಾಗ ಗಂಡುಮಕ್ಕಳ ಜತೆಗೆ ಅವನ ವಿಧವೆ, ತಾಯಿ ಮತ್ತು ಹೆಣ್ಣುಮಕ್ಕಳ ನ್ನು ಕೂಡಾ ಪ್ರಥಮ ಶ್ರೇಣಿಯ ವಾರಸುದಾರರೆಂದು ಪರಿಗಣಿಸುವ ಮೂಲಕ ಅವರಿಗೆ ಸಮಾನ ಆಸ್ತಿ ಹಕ್ಕು ಸಿಗುವ ಅವಕಾಶ ಕಲ್ಪಿಸಲಾಯಿತು.
“ಯ ಥೈವಾತ್ಮಾ ತಥಾ ಪುತ್ರಃ ಪುತ್ರೇಣ ದುಹಿತಾ ಸಮಾ| ತಸ್ಯಾಮಾತ್ಮನಿ ತಿಷ್ಠಂತ್ಯಾಂ ಕಥಮನ್ಯೋ ಧನಂ ಹರೇತ್||" (ಮನುಸ್ಮೃತಿ- ಅಧ್ಯಾಯ 9, 130ನೇ ಶ್ಲೋಕ)- ಮಗನೆಂದರೆ ತಾನೇ ಇದ್ದಂತೆ ಮತ್ತು ಮಗಳು ಮಗನಿಗೆ ಸಮಾನಳು. ಅವಳು ಸ್ವತಃ ಇರುವಾಗ ಆಸ್ತಿ ಯನ್ನು ಬೇರೆಯವರು ಹೇಗೆ ತೆಗೆದುಕೊಳ್ಳುತ್ತಾರೆ?" ಎಂಬುದು ಇದರ ಅರ್ಥ.
ಇದು, ಪ್ರಾಚೀನ ಹಿಂದೂ ಶಾಸ ಮತ್ತು ಹಿಂದೂ ಕಾನೂನುಗಳಿಗೆ ಮೂಲವೆನಿಸಿದ ಮನು ಸ್ಮೃತಿಯಲ್ಲಿ, ಸ್ತ್ರೀಯರಿಗೆ ಆಸ್ತಿ ನೀಡಿಕೆ ಕುರಿತು ಇರುವ ಒಂದು ಉಕ್ತಿ. ಆದರೂ ಸ್ತ್ರೀಧನ, ಸೀಮಿತ ಆಸ್ತಿ ಮತ್ತು ತಾಯಿಯ ಆಸ್ತಿಯಲ್ಲಿ ಪಾಲು ಎಂಬ ಕೆಲವೇ ಅಪವಾದಗಳನ್ನು ಬಿಟ್ಟರೆ ಆಸ್ತಿಯ ಹಕ್ಕಿನ ವಿಷಯದಲ್ಲಿ ಮನುಸ್ಮೃತಿ ಸೇರಿದಂತೆ ಬಹುತೇಕ ಪ್ರಾಚೀನ ಸ್ಮೃತಿಗಳಲ್ಲಿ ಗಂಡುಮಕ್ಕಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು.
ಯಾಕೆಂದರೆ ಅವರು ಮಾತಾ-ಪಿತೃಗಳ ಸದ್ಗತಿಗಾಗಿ ಪಿಂಡ ಮತ್ತು ತಿಲೋದಕಗಳನ್ನು ಕೊಡುತ್ತಾರೆ ಎಂಬುದು. ನಂತರದ ಅವಧಿಯಲ್ಲಿ ಮಿಥಾಕ್ಷರ ಮತ್ತು ದಾಯಬಾಗವೆಂಬ ಎರಡು ಸ್ಕೂಲ್ ಗಳಲ್ಲದೆ ( school of law), ಅಳಿಯಸಂತಾನ, ಮುರಮ ಕ್ಕುಟ್ಟಾಯಂ ಮುಂತಾದ ಅನೇಕ ಪದ್ಧತಿಗಳು ಜಾರಿಯಲ್ಲಿದ್ದವು. ದಾಯಭಾಗ ಮತ್ತು ಕೆಲವು ಮಿಥಾಕ್ಷರ ಪಂಗಡಗಳಲ್ಲಿ ಸಪಿಂಡರು ಎಂಬುದರ ಅರ್ಥವ್ಯಾಪ್ತಿಯಲ್ಲಿ ಸ್ತ್ರೀಯರನ್ನೂ ಸೇರಿಸಿ, ಮೃತನ ಹೆಂಡತಿ, ಮಗಳು ಮತ್ತು ತಾಯಿಯರನ್ನು ವಾರಸುದಾರರು ಎಂದು ಪರಿಗಣಿಸ ಲಾಗುತ್ತಿತ್ತು.
1937ರ ಹಿಂದೂ ಮಹಿಳೆಯರ ಆಸ್ತಿ ಕಾಯಿದೆಯಲ್ಲಿ ಹಿಂದೂ ವಾರಸುದಾರ ಪದ್ಧತಿ ಯನ್ನು ಕ್ರೋಡೀಕರಿಸಲಾಯಿತಾದರೂ ಸಮಾನತೆ ಇನ್ನೂ ದೂರವಿತ್ತು. ಸಂವಿಧಾನದ 14 ಹಾಗೂ 15ನೇ ವಿಧಿಗಳು ಒದಗಿಸುವ ಸಮಾನತೆಯ ಹಿನ್ನೆಲೆಯಲ್ಲಿ ಮತ್ತು ಪ್ರಗತಿಪರ ಚಿಂತನೆಗೆ ಅನುಗುಣವಾಗಿ 1956ರಲ್ಲಿ ಸಮಗ್ರ ಹಿಂದೂ ಉತ್ತರಾಧಿಕಾರ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಆ ಕಾಯಿದೆಯನ್ವಯ ಹಿಂದೂ ಅವಿಭಕ್ತ ಕುಟುಂಬದ ಸದಸ್ಯ ನೊಬ್ಬ ತೀರಿಕೊಂಡಾಗ ಗಂಡುಮಕ್ಕಳ ಜತೆಗೆ ಅವನ ವಿಧವೆ, ತಾಯಿ ಮತ್ತು ಹೆಣ್ಣು ಮಕ್ಕಳನ್ನು ಕೂಡಾ ಪ್ರಥಮ ಶ್ರೇಣಿಯ ವಾರಸುದಾರರೆಂದು ಪರಿಗಣಿಸುವ ಮೂಲಕ ಅವರಿಗೆ ಸಮಾನ ಆಸ್ತಿ ಹಕ್ಕು ಸಿಗುವ ಅವಕಾಶ ಕಲ್ಪಿಸಲಾಯಿತು.
ಆದರೆ ಹುಟ್ಟಿನಿಂದ ಹಿಸ್ಸೆದಾರರಾಗುವ ಹಕ್ಕು ಗಂಡುಮಕ್ಕಳಿಗೆ ಮಾತ್ರ ಸಿಗುತ್ತಿತ್ತು. ಕರ್ನಾ ಟಕ ಹಿಂದೂ ಉತ್ತರಾಽಕಾರ ಕಾಯಿದೆ 1990 ಮತ್ತು 2005ರ ಕೇಂದ್ರ ತಿದ್ದುಪಡಿ ಕಾಯಿದೆ ಜಾರಿಗೆ ಬಂದ ನಂತರ ಹಿಂದೂ ಅವಿಭಕ್ತ ಕುಟುಂಬದ ಸದಸ್ಯನೊಬ್ಬನ ಮಗಳು ತನ್ನ ಜನ್ಮದಿಂದಲೇ ಆ ಕುಟುಂಬದ ಸದಸ್ಯಳಾಗಲು ಮತ್ತು ಅಂಥ ಕುಟುಂಬದ ಆಸ್ತಿಗೆ ಸಮಾನ ಹಿಸ್ಸೆದಾರಳಾಗಲು (coparcener) ಗಂಡುಮಕ್ಕಳಿಗೆ ಇರುವ ಎಲ್ಲಾ ಹಕ್ಕುಗಳನ್ನು ಪಡೆಯು ತ್ತಾಳೆ.
ತಮ್ಮ ತಂದೆಯ ಅವಿಭಕ್ತ ಕುಟುಂಬದ ವಾಸದ ಮನೆಯೂ ಸೇರಿದಂತೆ ಎಲ್ಲಾ ಆಸ್ತಿಗಳಲ್ಲಿ ಸಮಾನ ಪಾಲು ಪಡೆಯುವುದರ ಜತೆಗೆ ಅಂಥ ಆಸ್ತಿಗಳ ವಿಭಜನೆ ಕೇಳುವ ಅಧಿಕಾರವನ್ನು ಕೂಡಾ ಅವಳು ಹುಟ್ಟಿನಿಂದಲೇ ಪಡೆಯುತ್ತಾಳೆ. ಮಗಳೊಬ್ಬಳು ಎಲ್ಲರಿಗಿಂತ ಹಿರಿಯ ಳಾಗಿದ್ದರೆ ಹಿಂದೂ ಅವಿಭಕ್ತ ಕುಟುಂಬದ ಮ್ಯಾನೇಜರ್ ಕೂಡಾ ಆಗಬಹುದು. ಮಗ ನಾದವನು ತನ್ನ ತಂದೆ, ತಾತ, ಮುತ್ತಾತರು ತೀರಿಸದೇ ಉಳಿಸಿದ ಸಾಲವನ್ನು ತೀರಿಸ ಬೇಕಾಗಿದ್ದ ಧಾರ್ಮಿಕ ಋಣಪರಿಹಾರದ ಬಾಧ್ಯತೆಯನ್ನು ( pious obligation) ರದ್ದು ಪಡಿಸಲಾಗಿದೆ.
2005ರ ಕಾಯಿದೆಯಡಿ ಲಭ್ಯವಾಗುವ ಹಕ್ಕುಗಳು ಅನ್ವಯವಾಗುವ ದಿನಾಂಕದ ಕುರಿತು ಸುದೀರ್ಘ ಕಾನೂನು ಹೋರಾಟ ನಡೆಯಿತು. ವಿವಿಧ ಉಚ್ಚ ನ್ಯಾಯಾಲಯಗಳು ವ್ಯತಿ ರಿಕ್ತ ನಿರ್ಣಯಗಳನ್ನು ನೀಡಿದವು. ಅಂತಿಮವಾಗಿ ಮಾನ್ಯ ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠವು, ವಿನೀತಾ ಶರ್ಮಾ ವರ್ಸಸ್ ರಾಕೇಶ ಶರ್ಮಾ ಪ್ರಕರಣದಲ್ಲಿ ಈ ಕುರಿತ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಿ ಸದರಿ ತಿದ್ದುಪಡಿ ಕಾಯಿದೆಯ ನಿಬಂಧನೆಗಳು ತಿದ್ದುಪಡಿ ಯಾದ ಮೊದಲು ಅಥವಾ ನಂತರ ಹುಟ್ಟಿದ ಎಲ್ಲಾ ಹೆಣ್ಣುಮಕ್ಕಳಿಗೂ ಅನ್ವಯ ವಾಗುತ್ತವೆ ಎಂದು ಆದೇಶ ನೀಡಿದೆ.
ಈ ಹಕ್ಕು ಹುಟ್ಟಿನಿಂದಲೇ ಬರುವ ಹಿಸ್ಸೆದಾರ ಹಕ್ಕಾದ್ದರಿಂದ ತಿದ್ದುಪಡಿ ಕಾಯಿದೆ ಜಾರಿ ಯಾದ ದಿನಾಂಕದಂದು (9ನೇ ಸೆಪ್ಟೆಂಬರ್ 2005) ಅವರ ತಂದೆ ಅಥವಾ ಯಾವ ಹಿಸ್ಸೆ ದಾರರಿಂದ ಅವರು ಹಕ್ಕನ್ನು ಪಡೆಯುತ್ತಾರೋ ಅವರು ಜೀವಂತ ಇರಬೇಕೆಂಬ ಅವಶ್ಯ ಕತೆಯಿಲ್ಲ. ಅಲ್ಲದೆ ಈ ಕಾಯಿದೆಯಡಿ ಲಭ್ಯವಿರುವ ವರ್ಗಾವಣೆ, ವಿಭಜನೆ ಮತ್ತು ಉಯಿ ಲಿನ ಮೂಲಕ ಇತ್ಯರ್ಥಗೊಳಿಸುವ ಹಕ್ಕುಗಳನ್ನೂ ಅವರು ಚಲಾಯಿಸಬಹುದು. ಈ ತಿದ್ದುಪಡಿ ಕಾಯಿದೆಗಿಂತ ಮೊದಲು ನೋಂದಾಯಿತ ಹಿಸ್ಸಾ ದಸ್ತಾವೇಜು ಅಥವಾ ಕೋರ್ಟ್ ಮೂಲಕ ಆಸ್ತಿ ವಿಭಜನೆಯನ್ನು ಮಾಡಿದ್ದರೆ ಮಾತ್ರ ಅದು ಊರ್ಜಿತವೇ ಹೊರತು ಮೌಖಿಕ ವಿಭಜನೆ ಅಥವಾ ಇನ್ಯಾವುದೇ ರೀತಿಯ ಇತ್ಯರ್ಥಗಳನ್ನು ಪರಿಗಣಿಸ ಲಾಗುವುದಿಲ್ಲ.
ಆದರೆ ನಮ್ಮ ರಾಜ್ಯದಲ್ಲಿ 1990ರ ಕರ್ನಾಟಕ ತಿದ್ದುಪಡಿ ಕಾಯಿದೆ ಜಾರಿಗೆ ಬಂದ ದಿನಾಂಕ ಅಂದರೆ 30.07.94ರ ಮೊದಲು ವಿವಾಹವಾದ ಹೆಣ್ಣು ಮಕ್ಕಳಿಗೆ 1956ರ ಕಾಯಿದೆಯ 6ನೇ ಕಲಮಿನ ಪ್ರಕಾರ ವಾರಸುದಾರ ಹಕ್ಕು ಸಿಗುತ್ತದೆಯೇ ಹೊರತು, ತಿದ್ದುಪಡಿ ಕಾಯಿದೆ ಗಳಲ್ಲಿ ಇರುವ ಹಿಸ್ಸೆದಾರ ಹಕ್ಕು ಸಿಗುವದಿಲ್ಲ (6 ಎ-ಡಿ- ಕರ್ನಾಟಕ ತಿದ್ದುಪಡಿ ಕಾಯಿದೆ). ಸಮಾನತೆ ಹುಟ್ಟುಹಾಕಿದ ಕೆಲವು ವಿವಾದಗಳು: 2005ರ ತಿದ್ದುಪಡಿ ಕಾಯಿದೆ ಮತ್ತು ವಿನೀತಾ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಆಸ್ತಿಹಕ್ಕಿನ ವಿಷಯದಲ್ಲಿ ಲಿಂಗ ಸಮಾನತೆ ಒದಗಿಸುವಲ್ಲಿ ಯಶಸ್ವಿಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಸ್ವಾಗತಾರ್ಹ ಕೂಡಾ. ಆದರೆ ಈ ಕುರಿತು ಕೆಲವು ವ್ಯತಿರಿಕ್ತ ವಾದಗಳಿವೆ.
ತಂದೆಯ ವಾಸ್ತವ್ಯದ ಮನೆಯನ್ನು ಪಾಲು ಮಾಡುವ ಹಕ್ಕು: 1956ರ ಕಾಯಿದೆಯ 23ನೇ ಕಲಮಿನ ಪ್ರಕಾರ ಯಾವುದೇ ಅವಿಭಕ್ತ ಕುಟುಂಬದ ಪುರುಷ ಸದಸ್ಯರು ಇಚ್ಛಿಸದೆ ಇದ್ದಲ್ಲಿ ಅಂಥ ಕುಟುಂಬದ ವಾಸ್ತವ್ಯದ ಮನೆಯ ವಿಭಜನೆಯನ್ನು ಕೇಳುವ ಹಕ್ಕು ಹೆಣ್ಣು ಮಕ್ಕಳಿಗಾಗಲೀ ಇತರ ಮಹಿಳಾ ಸದಸ್ಯರಿಗಾಗಲೀ ಇರಲಿಲ್ಲ. ಆದರೆ 2005ರ ಕಾಯಿದೆ ಸದರಿ 23ನೇ ಕಲಮನ್ನು ರದ್ದು ಮಾಡಿರುವುದರಿಂದ, ತನ್ನ ಅಣ್ಣ-ತಮ್ಮಂದಿರು ಮತ್ತು ತಂದೆ ಒಟ್ಟಿಗೆ ಇರುತ್ತೇವೆ ಎಂದರೂ ಅವರ ವಾಸ್ತವ್ಯದ ಮನೆಯ ಮತ್ತು ಆಸ್ತಿಯ ವಿಭಜನೆ ಯನ್ನು ಕೇಳುವ ಹಕ್ಕು ಮಗಳಿಗೆ ಬರುತ್ತದೆ. ಹೆಣ್ಣುಮಕ್ಕಳು ವಿವಾಹದ ನಂತರ ತಮ್ಮ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರೂ ತಂದೆಯು ಇರುವಾಗಲೇ ಅವನ ಕುಟುಂಬದ ಆಸ್ತಿಯ ವಿಭಜನೆಗೆ ಕಾರಣವಾಗುವ ಮೂಲಕ ತಂದೆ-ತಾಯಿಯರಿಗೆ ಮಾನಸಿಕವಾಗಿ ನೋವು ತರಬಹುದಾದ ಸಾಧ್ಯತೆ ಇದೆ.
ಹುಟ್ಟಿನಿಂದ ಹೆಣ್ಣುಮಕ್ಕಳಿಗೆ ಬರುವ ಹಿಸ್ಸೆದಾರಿಕೆ ಹಕ್ಕು ವಿವಾಹವಾದ ಮೇಲೂ ಮುಂದುವರಿಯುತ್ತದಾದರೂ ಅವಿಭಕ್ತ ಕುಟುಂಬದ ಸದಸ್ಯತ್ವ ವಿವಾಹದ ನಂತರ ರದ್ದಾಗುತ್ತದೆ. ಅವಿಭಕ್ತ ಕುಟುಂಬದ ಸದಸ್ಯತ್ವ ಇಲ್ಲದೆ ಕೇವಲ ಹಿಸ್ಸೆದಾರ ಹಕ್ಕನ್ನು ಮುಂದುವರಿಸುವುದು ಹಿಂದೂ ಅವಿಭಕ್ತ ಕುಟುಂಬ ವ್ಯವಸ್ಥೆಯ ಮೂಲ ರಚನೆ ಹಾಗು ತತ್ವಗಳಿಗೆ ವಿರುದ್ಧ ಎಂಬ ವಾದವಿದೆ. ಅನೇಕ ಸಂದರ್ಭಗಳಲ್ಲಿ ಹೆಣ್ಣುಮಕ್ಕಳಿಗೆ ಮನಸ್ಸಿರ ದಿದ್ದರೂ ಅವರ ಗಂಡನ ಮನೆಯವರ ಒತ್ತಾಯದಿಂದ ಆಸ್ತಿ ವಿಭಜನೆ ಕೇಳುವ ಮೂಲಕ ಹೆಣ್ಣು ಮಕ್ಕಳು ತವರಿನ ಬಾಂಧವ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ತಾಯಿ ಮತ್ತು ವಿಧವೆಯರ ಹಕ್ಕು: ಈ ಕಾಯಿದೆಯನ್ವಯ ಹೆಣ್ಣುಮಕ್ಕಳಿಗೆ ಹಿಸ್ಸೆದಾರ ಹಕ್ಕು ದೊರಕಿತಾದರೂ, ಹೆಂಡತಿ ಮತ್ತು ತಾಯಿ ವಾರಸುದಾರರಾಗಿಯೇ ಮುಂದುವರಿ ಯುತ್ತಾರೆ. ತನಗಿರುವ ಹಿಸ್ಸೆದಾರ ಹಕ್ಕನ್ನು ತಂದೆ ಜೀವಂತ ಇರುವಾಗಲೇ ಮಗಳು ಚಲಾ ಯಿಸಿದರೆ, ಆತನ ತಾಯಿ ಮತ್ತು ಹೆಂಡತಿಯರ ಹಕ್ಕಿನಲ್ಲಿ ಕಡಿಮೆಯಾಗುತ್ತದೆ. ಗಂಡನ ಆಸ್ತಿಯಲ್ಲಿ ಆತ ಜೀವಂತ ಇರುವವರೆಗೆ ಹೆಂಡತಿಗೆ ಯಾವ ಹಕ್ಕೂ ಇರುವದಿಲ್ಲ. ಗಂಡನ ಮರಣಾನಂತರ ಮಕ್ಕಳ ಜತೆಗೆ ಒಂದು ಹಕ್ಕು ಮಾತ್ರ ದೊರಕುತ್ತದೆ.
ವಿಚ್ಛೇದನ ಸಂದರ್ಭದಲ್ಲಿ ದೊರಕುವ ಜೀವನಾಂಶ ಹಕ್ಕಿಗೆ ಸಂಬಂಧಿಸಿದಂತೆ ಆತನ ಆಸ್ತಿಯ ಮೇಲೆ ಸಾಂದರ್ಭಿಕ ಬೋಜಾ ಇರುವುದಾದರೂ ಬಹುತೇಕ ಸಂದರ್ಭಗಳಲ್ಲಿ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಮಗನ ಆಸ್ತಿಯಲ್ಲಿಯೂ ವಾರಸುದಾರ ಹಕ್ಕು ಮಾತ್ರ ದೊರಕುತ್ತದೆ. ಹೆಂಡತಿ, ತಾಯಿಯರೂ ಮಹಿಳೆಯರಲ್ಲವೇ? ಅವರಿಗೂ ಸಮಾನತೆ ಬೇಡವೇ? ಎಂಬ ವಾದವಿದೆ.
ಮಹಿಳೆಯರ ವಾರಸುದಾರಿಕೆ: ಹಿಂದೂ ಮಹಿಳೆಯೊಬ್ಬಳು ವಿಲ್ ಬರೆಯದೇ ನಿಧನ ಳಾದಾಗ ಅವಳ ಆಸ್ತಿಗೆ ಮಕ್ಕಳು ಮತ್ತು ಗಂಡ ನೇರ ವಾರಸುದಾರರಾಗುತ್ತಾರೆ. ಗಂಡ ತೀರಿಕೊಂಡಿದ್ದರೆ ಮತ್ತು ಸಂತಾನವಿಲ್ಲದಿದ್ದರೆ ಆಕೆಯ ಸ್ವಯಾರ್ಜಿತ ಮತ್ತು ಗಂಡನ ಮನೆಯಿಂದ ಬಂದ ಆಸ್ತಿ ಗಂಡನ ವಾರಸುದಾರರಿಗೆ ಹೋಗುತ್ತದೆ ಹೊರತು ಆಕೆಯ ತಂದೆ-ತಾಯಿಯರಿಗಲ್ಲ. ತಂದೆಯ ಮನೆಯಿಂದ ಬಂದ ಆಸ್ತಿ ಮಾತ್ರ ತಂದೆಯ ವಾರಸು ದಾರರಿಗೆ ಹೋಗುತ್ತದೆ. ಆದರೆ ಗಂಡುಮಕ್ಕಳ ಆಸ್ತಿಗೆ ಆತನ ತಾಯಿ ಪ್ರಥಮ ಶ್ರೇಣಿಯ ವಾರಸುದಾರಳಾಗುತ್ತಾಳೆ. ಈ ದೃಷ್ಟಿಯಲ್ಲಿ ಅಸಮಾನತೆ ಇನ್ನೂ ಇದೆ ಎಂಬ ವಾದ ಕೂಡಾ ಒಪ್ಪತಕ್ಕದ್ದೇ.
ತಾಯಿಗೆ ಮಗನ ವಾರಸುದಾರ ಹಕ್ಕು: ಹಿಂದೂ ಪುರುಷನೊಬ್ಬ ತೀರಿಕೊಂಡಾಗ ಆತನ ಆಸ್ತಿಯಲ್ಲಿ ಆತನ ತಾಯಿಗೆ ಕೂಡಾ ಒಂದು ಪಾಲು ದೊರಕುತ್ತದೆ. ಒಂದುವೇಳೆ ತಂದೆಯ ಆಸ್ತಿ ವಿಭಜನೆಯಾಗಿ ಎಲ್ಲಾ ಮಕ್ಕಳಿಗೆ ಮತ್ತು ತಾಯಿಗೆ ಪ್ರತ್ಯೇಕ ಪಾಲನ್ನು ನೀಡಿದ್ದರೂ ಮಗ ತೀರಿಕೊಂಡಾಗ ಆತನ ಆಸ್ತಿಯಲ್ಲಿ ತಾಯಿ ಪ್ರಥಮ ಶ್ರೇಣಿಯ ವಾರಸುದಾರ ಳಾಗುತ್ತಾಳೆ. ಮುಂದೆ ಆ ತಾಯಿ ತೀರಿಕೊಂಡಾಗ ಅಂಥ ತೀರಿಕೊಂಡ ಮಗನ ಆಸ್ತಿಯ ಪೈಕಿ ಆಕೆ ಪಡೆದುಕೊಂಡ ಪಾಲಿನಲ್ಲಿ ಪುನಃ ಆಕೆಯ ಎಲ್ಲಾ ಮಕ್ಕಳಿಗೆ ಪಾಲು ಸಿಗುತ್ತದೆ. ಆಗ ಆ ಆಸ್ತಿಯಲ್ಲಿ ಅಂಥ ಮಗನ ವಿಧವೆ ಮತ್ತು ಆಕೆಯ ಮಕ್ಕಳಿಗೆ ಸೇರಿ ಕೇವಲ ಒಂದು ಅಂಶದ ಪಾಲು ಮಾತ್ರ ಸಿಗುತ್ತದೆ. ಇದು ಆಕೆಗೆ ಅನ್ಯಾಯ ಮಾಡಿದಂತೆ ಎಂಬ ವಾದದಲ್ಲಿ ಹುರುಳಿದೆ.
ಪಿತೃ ಮತ್ತು ದೇವ ಕಾರ್ಯಗಳು: ಹಿಂದೂ ಅವಿಭಕ್ತ ಕುಟುಂಬಗಳಲ್ಲಿ ಅನೇಕ ದೇವ ಮತ್ತು ಪಿತೃ ಕಾರ್ಯಗಳು ಸಂಪ್ರದಾಯದಂತೆ ನಡೆಯಬೇಕಾಗುತ್ತದೆ. ಸಮಾಜ ಮತ್ತು ದೇವಾಲಯಗಳಲ್ಲಿ ನಡೆಯುವ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಕೂಡಾ ಕುಟುಂಬದ ವತಿಯಿಂದ ಪಾಲ್ಗೊ್ಳಬೇಕಾಗುತ್ತದೆ. ವಿವಾಹವಾದ ಹೆಣ್ಣು ಮಕ್ಕಳು ಗಂಡನ ಮನೆಗೆ ಸೇರುವುದರಿಂದ ಅಂಥ ಕಾರ್ಯಗಳಿಗೆ ತಗಲುವ ಖರ್ಚು ಮತ್ತು ಆ ಜವಾಬ್ದಾರಿಗಳನ್ನು ಪೂರ್ತಿಯಾಗಿ ಗಂಡುಮಕ್ಕಳೇ ನೋಡಿಕೊಳ್ಳಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕಲ್ಪಿಸುವ ಕಾಯಿದೆಗಳು ಈ ಕುರಿತು ಏನನ್ನೂ ಹೇಳದಿರುವುದು ಸರಿಯಲ್ಲ ಎಂಬುದು ಒಪ್ಪತಕ್ಕ ವಾದ.
ವಾದಗಳೇನೇ ಇರಲಿ. ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಹಕ್ಕು ಒದಗುವುದು ಸಮಂಜಸ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆ ಎಂಬುದು ನಿಸ್ಸಂಶಯ. ಆದರೆ ಈ ಹಕ್ಕುಗಳ ಕುರಿತು ಗ್ರಾಮೀಣ ಮತ್ತು ಅಶಿಕ್ಷಿತ ಮಹಿಳೆಯರಿಗೆ ಸೂಕ್ತ ಮಾಹಿತಿಯನ್ನು ಮತ್ತು ಈ ಕಾಯಿದೆಯ ಜ್ಞಾನವನ್ನು ಒದಗಿಸುವ ಅವಶ್ಯಕತೆಯಿದೆ. ಇಲ್ಲವಾದಲ್ಲಿ ಕಾಯಿ ದೆಗಳು ಪುಸ್ತಕಗಳಲ್ಲಿ ಮಾತ್ರ ಉಳಿದು ಅವುಗಳ ಫಲ ಮಹಿಳೆಯರಿಗೆ ದೊರಕುವು ದಿಲ್ಲ.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)