ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿ ಸಂಸದರಿಂದ ಸಂಸತ್ತಿನಲ್ಲಿ ಧರ್ಮೇಂದ್ರ ಪ್ರಧಾನ್‌ಗೆ ಭವ್ಯ ಸ್ವಾಗತ; ನೀಟ್ ವಿವಾದದ ನಡುವೆ ಎನ್‌ಡಿಎ-ವಿರೋಧ ಪಕ್ಷಗಳ ವಾಗ್ವಾದ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನರಿಗೆ ಸಂಸತ್‌ನಲ್ಲಿ ಎನ್‌ಡಿಎ ನಾಯಕರು ಭವ್ಯ ಸ್ವಾಗತ ಕೋರಿದರು. ಮತ್ತೊಂದೆಡೆ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಇದೇ ವೇಳೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆಗೆ ಸಂಬಂಧಿಸಿದ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿತು.

ಧರ್ಮೇಂದ್ರ ಪ್ರಧಾನರಿಗೆ ಎನ್‌ಡಿಎ ಬೆಂಬಲ

ಧರ್ಮೇಂದ್ರ ಪ್ರಧಾನ್ -

Profile
Sushmitha Jain Jul 27, 2026 4:06 PM

ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್‌ಗೆ (Dharmendra Pradhan) ಸೋಮವಾರ ಸಂಸತ್‌ನಲ್ಲಿ ಎನ್‌ಡಿಎ (NDA) ನಾಯಕರು ಭವ್ಯ ಸ್ವಾಗತ ಕೋರಿದರು. ಅವರ ರಾಜೀನಾಮೆಯ ಬಳಿಕ ಇದೇ ಮೊದಲ ಬಾರಿಗೆ ಸಂಸತ್‌ಗೆ ಆಗಮಿಸಿದ್ದ ಧರ್ಮೇಂದ್ರ ಪ್ರಧಾನರಿಗೆ ಬಿಜೆಪಿ ಹಾಗೂ ಎನ್‌ಡಿಎ ಸಂಸದರು ಐಕ್ಯತೆ ಮತ್ತು ಬೆಂಬಲದ ಸಂದೇಶ ರವಾನಿಸಿದರು.

ಸಂಸತ್‌ನ ಮಕರ ದ್ವಾರದ ಬಳಿ ಧರ್ಮೇಂದ್ರ ಪ್ರಧಾನರ ಆಗಮನಕ್ಕೂ ಮುನ್ನವೇ ಬಿಜೆಪಿ ಸಂಸದರು ಸೇರಿ ಅವರನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದರು. ಅವರು ಸಂಸತ್ ಆವರಣ ಪ್ರವೇಶಿಸುತ್ತಿದ್ದಂತೆ ಪಕ್ಷದ ನಾಯಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಒಳಗೆ ಕರೆದುಕೊಂಡು ಹೋದರು. ಈ ವೇಳೆ ಅವರಿಗೆ ಸಾಂಪ್ರದಾಯಿಕ ಗೌರವ ಸೂಚಕ ಟೋಪಿಯನ್ನು ಧರಿಸಿ ಅಭಿನಂದನೆ ಸಲ್ಲಿಸಿದರು. ಧರ್ಮೇಂದ್ರ ಪ್ರಧಾನರೊಂದಿಗೆ ಪಕ್ಷ ನಿಂತಿದೆ ಎಂಬ ಸಂದೇಶವನ್ನು ಎನ್‌ಡಿಎ ನಾಯಕರು ಈ ಮೂಲಕ ನೀಡಿದರು.

ಇನ್ನೊಂದೆಡೆ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, "ಶಿಕ್ಷಾ ಚೋರಿ" (ಶಿಕ್ಷಣ ಕಳವು) ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರ ವಿರುದ್ಧ ನಡೆದ ಪೊಲೀಸ್ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು. ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ...ಪಕ್ಷದೊಳಗಿನ ಗುಟ್ಟು ಬಿಟ್ಟುಕೊಟ್ಟ ಬಿಜೆಪಿ ನಾಯಕ

ಈ ರಾಜಕೀಯ ಬೆಳವಣಿಗೆಗಳ ನಡುವೆಯೇ, ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆ–2026 ಅನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ.

ಜುಲೈ 25ರಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದ ಧರ್ಮೇಂದ್ರ ಪ್ರಧಾನ, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ ತಡೆಯುವುದು ತಮ್ಮ ನಿರ್ಧಾರದ ಉದ್ದೇಶ ಎಂದು ತಿಳಿಸಿದ್ದರು.

ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು, ರಾಜಕೀಯ ಒತ್ತಡ ಹಾಗೂ ಸಾರ್ವಜನಿಕ ಆಕ್ರೋಶದ ನಡುವೆ ಹಿರಿಯ ಕೇಂದ್ರ ಸಚಿವರೊಬ್ಬರು ರಾಜೀನಾಮೆ ನೀಡಿರುವುದು ಅಪರೂಪದ ಬೆಳವಣಿಗೆಯಾಗಿದೆ. ಪ್ರತಿಭಟನಾಕಾರರು ಮತ್ತು ಕೇಂದ್ರ ಸರ್ಕಾರದ ನಡುವಿನ ಮೂರನೇ ಸುತ್ತಿನ ಮಾತುಕತೆಗೆ ಕೆಲವೇ ಗಂಟೆಗಳ ಮೊದಲು ಅವರ ರಾಜೀನಾಮೆ ಪ್ರಕಟವಾಗಿತ್ತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ನಾಯಕರು, "ಧರ್ಮೇಂದ್ರ ಪ್ರಧಾನರನ್ನು ಸಚಿವ ಸ್ಥಾನದಿಂದ ತೆರವುಗೊಳಿಸುವುದು ನಮ್ಮ ಪ್ರಮುಖ ಹಾಗೂ ರಾಜಿಯಾಗದ ಬೇಡಿಕೆಯಾಗಿತ್ತು" ಎಂದು ಹೇಳಿದ್ದರು. ಧರ್ಮೇಂದ್ರ ಪ್ರಧಾನರ ರಾಜೀನಾಮೆಯ ನಂತರವೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ರಾಜಕೀಯ ವಾಕ್ಸಮರ ಮುಂದುವರಿದಿದ್ದು, ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.