ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಬಿರುಬೇಸಗೆಯ ದಿನಗಳಲ್ಲಿ ಹೊಮ್ಮುತ್ತದೆ ತಾರಕ ಸ್ವರ !

ನಮ್ಮ ಹಳ್ಳಿಯ ಜನರು ಅದೊಂದು ಹಕ್ಕಿಗೆ ಹೆಸರಿಟ್ಟ ಪರಿ ಮಾತ್ರ ಬೆರಗು ಹುಟ್ಟಿಸುವಂಥದ್ದು! ಆ ಹಕ್ಕಿಯ ಹೆಸರಿನ ಹಿಂದೆ ಪುಟ್ಟ ಕಥೆಯಿದೆ, ಜತೆಗೆ ರೈತಾಪಿ ಜನರು ತಲೆ ತಲಾಂತರದಿಂದ ಅನುಭವಿಸು ತ್ತಾ ಬಂದಿರುವ ಕಷ್ಟ, ವೇದನೆಗಳ ವ್ಯಥೆಯಿದೆ. ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಮನೆಯ ಮುಂದಿನ ಹಾಡಿಯ ಮರಗಳ ಸಂದಿಯಲ್ಲಿ ಕುಳಿತ ಒಂದು ಹಕ್ಕಿ ‘ಹೋರಿ ಸತ್ತುಹೋಯಿತೋ’ ಎಂದು ಕೂಗುತ್ತದೆ.

ಬಿರುಬೇಸಗೆಯ ದಿನಗಳಲ್ಲಿ ಹೊಮ್ಮುತ್ತದೆ ತಾರಕ ಸ್ವರ !

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Aug 29, 2025 8:14 AM

ಶಶಾಂಕಣ

ನಮ್ಮ ಹಳ್ಳಿಯ ಸುತ್ತಮುತ್ತ ಕಾಣ ಸಿಗುವ ಹಕ್ಕಿಗಳು ಹಲವು. ಅವುಗಳ ಕೂಗನ್ನು ಅನುಸರಿಸಿ, ಅವುಗಳ ನಡವಳಿಕೆಯನ್ನು ಅನುಸರಿಸಿ ಕೆಲವು ಹಕ್ಕಿಗಳಿಗೆ ನಮ್ಮವರು ನಿರ್ದಿಷ್ಟ ಹೆಸರನ್ನು ಇಟ್ಟು ಕರೆದರೂ, ಇನ್ನು ಕೆಲವಕ್ಕೆ ಅಸ್ಪಷ್ಟ ಹೆಸರು. ಇನ್ನು ಕೆಲವಕ್ಕೆ ಇಲ್ಲವೇ ಇಲ್ಲ!

ನಮ್ಮ ಹಳ್ಳಿಯಲ್ಲಿ ‘ಪಿಕಳಾರ’ ಎಂದು ನಾಲ್ಕಾರು ಪ್ರಭೇದದ ಹಕ್ಕಿಗಳನ್ನು ಕರೆದಿದ್ದನ್ನು ಕಂಡಿರುವೆ. ‘ಇದೆಂಥ ಹಕ್ಕಿ’ ಎಂದು ಕೇಳಿದರೆ, ‘ನಂಗೊತ್ತಿಲ್ಲ, ಎಲ್ಲಾ ಹಕ್ಕಿಗಳಿಗೆ ಹೆಸರಿಡುವುದಕ್ಕೆ ಆಗುತ್ತಾ?’ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ. ಗೆರೆ ಹಕ್ಕಿ, ಕೊಕ್ಕಾನಕ್ಕಿ, ಗುಮ್ಮ ಎಂದು ಅವುಗಳ ನೋಟ ವನ್ನನುಸರಿಸಿ ಹೆಸರಿಸಿರುವುದೂ ಉಂಟು. ಇವುಗಳ ನಡುವೆ ಮಳೆಕೋಂಗಿಲ, ಚಪ್ಪು ಕೋಂಗಿಲ ಎಂಬ ತೀರಾ ಸ್ಪಷ್ಟವಾಗಿ ಅವುಗಳನ್ನು ವಿವರಿಸುವ ಹೆಸರುಗಳೂ ಇವೆ!

ಇನ್ನು ಕೆಲವು ಹಕ್ಕಿಗಳ, ಪ್ರಾಣಿಗಳ ಹೆಸರು ಕ್ರಮೇಣ ಜನಮಾನಸದಿಂದ ಮರೆತೇ ಹೋಗಿರಬಹುದು. ಹಿಂದಿನ ತಲೆಮಾರಿನ ನೆನಪಿನಲ್ಲಿರುವಷ್ಟು ಹಕ್ಕಿಗಳ ಹೆಸರನ್ನು ಇಂದಿನವರು ಗುರುತಿಸಲಾರರು! ಬೇಕಾದರೆ, ನಿಮ್ಮ ಹಳ್ಳಿಯಲ್ಲಿ ಪರೀಕ್ಷೆ ಮಾಡಿ ನೋಡಿ. ಅದರಲ್ಲೂ, ವಿದ್ಯಾಭ್ಯಾಸ ಕಲಿತು, ನಗರದತ್ತ ವಲಸೆ ಬಂದಿರುವವರಿಗಂತೂ, ತಮ್ಮ ಹುಟ್ಟೂರಿನ ಹಕ್ಕಿ, ಕೀಟ, ಸಸ್ಯ, ಮರ, ಗಿಡಗಳ ಪರಿಚಯ ಬಹುಮಟ್ಟಿಗೆ ಮರೆತೇ ಹೋಗಿದೆ. ಇದೊಂದು ರೀತಿಯಲ್ಲಿ ನಮ್ಮದೇ ಪರಿಸರವನ್ನು ನಾವು ಮರೆತಂತೆ. ಇದು ಕಟುಸತ್ಯ!

ಇದನ್ನೂ ಓದಿ: Shashidhara Halady Column: ಮಕ್ಕಳೇ ಮಣ್ಣು ಹೊತ್ತ ಆಟದ ಮೈದಾನ !

ನಮ್ಮ ಹಳ್ಳಿಯ ಜನರು ಅದೊಂದು ಹಕ್ಕಿಗೆ ಹೆಸರಿಟ್ಟ ಪರಿ ಮಾತ್ರ ಬೆರಗು ಹುಟ್ಟಿಸುವಂಥದ್ದು! ಆ ಹಕ್ಕಿಯ ಹೆಸರಿನ ಹಿಂದೆ ಪುಟ್ಟ ಕಥೆಯಿದೆ, ಜತೆಗೆ ರೈತಾಪಿ ಜನರು ತಲೆ ತಲಾಂತರದಿಂದ ಅನುಭವಿಸುತ್ತಾ ಬಂದಿರುವ ಕಷ್ಟ, ವೇದನೆಗಳ ವ್ಯಥೆಯಿದೆ. ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಮನೆಯ ಮುಂದಿನ ಹಾಡಿಯ ಮರಗಳ ಸಂದಿಯಲ್ಲಿ ಕುಳಿತ ಒಂದು ಹಕ್ಕಿ ‘ಹೋರಿ ಸತ್ತುಹೋಯಿತೋ’ ಎಂದು ಕೂಗುತ್ತದೆ.

ಕೂ.. ಕೂ.. ಕೂ.. ಕೂ.. ಎಂದು ನಾಲ್ಕಾರು ಏರಿಳಿತ ಇರುವ ಆ ಹಕ್ಕಿಯ ಕೂಗನ್ನು ‘ಹೋರಿ ಸತ್ ಹೋಯ್ತೋ, ಹಣ ಕೊಟ್ ಆಯ್ತೋ’ ಎಂದು ಅರ್ಥೈಸುತ್ತಾರೆ ನಮ್ಮ ಹಳ್ಳಿಯವರು. ಬೇರಾವುದೇ ಸಮಯ ದಲ್ಲಿ ಕೇಳಿಬರದ ಆ ಹಕ್ಕಿಯ ಕೂಗು, ಬೇಸಗೆಯ ಸಮಯದಲ್ಲಿ ಮಾತ್ರ ಕೇಳಿಬರುತ್ತದೆ.

ಅದು ಸ್ಥಳೀಯವಾಗಿ ವಲಸೆ ಹೋಗಿರುವುದರ ಜತೆಯಲ್ಲೆ, ಬೇಸಗೆಯಲ್ಲಿ ಮಾತ್ರ ಕೂಗುವುದರಿಂದ, ಈ ಬರಗು. ಬಿರು ಬೇಸಗೆಯ ದಿನಗಳಲ್ಲಿ, ಮುಂದಿನ ಕೃಷಿಗಾಗಿ ಗದ್ದೆಗಳನ್ನು ಹಸನು ಮಾಡಬೇಕಾದ ಸಮಯದಲ್ಲಿ ಕೂಗಲು ಆರಂಭಿಸುವ ಈ ಹಕ್ಕಿಯ ಕೂಗನ್ನು ಕೇಳಿ ವಿಸ್ಮಿತರಾದ ನಮ್ಮ ಜನಪದರು, ಅದಕ್ಕೊಂದು ಕಾರಣ ಹುಡುಕಿ ಕಥೆ ಕಟ್ಟಿದ್ದಾರೆ.

ಬಡ ರೈತ, ಕೃಷಿ ಕಾರ್ಮಿಕನೂ ಹೌದು. ತನ್ನ ಗದ್ದೆಗಳನ್ನು ಹೂಟಿ ಮಾಡಲು ಒಂದು ಜತೆ ಹೋರಿ ಗಳನ್ನು ಖರೀದಿಸಲು ಹೊರಟ. ಕಾಡಿನ ದಾರಿ ದಾಟಿ ಪಕ್ಕದ ಹಳ್ಳಿಗೆ ಹೋದ. ಅಲ್ಲಿನ ಸ್ಥಿತಿವಂತ ರೈತನೊಬ್ಬನ ಬಳಿ ಒಂದು ಜತೆ ಉಳುಮೆ ಮಾಡುವ ಹೋರಿಗಳಿದ್ದವು. ತನ್ನ ಅಗತ್ಯಕ್ಕೆ ತಕ್ಕಂತೆ ಕಂಡಿತು. ಅದರ ಬೆಲೆ ತಿಳಿದು, ಇದು ತನಗೆ ಸೂಕ್ತ, ಈ ಹೋರಿಗಳನ್ನು ಬಳಸಿ, ಗದ್ದೆ ಉಳುಮೆ ಮಾಡಿ, ಮುಂದಿನ ಸಾಲಿನ ಭತ್ತದ ಬೆಳೆ ತೆಗೆಯಬಹುದು ಎಂದು ನಿರ್ಧರಿಸಿದ. ಆದರೆ, ಖರೀದಿಸಲು ಸಾಕಷ್ಟು ಹಣ ಬೇಕಲ್ಲ!

Screenshot_3 R

ಮನೆಗೆ ವಾಪಸು ಬಂದ ರೈತ, ತನ್ನೂರಿನ ಕೆಲವರ ಬಳಿ ಸ್ವಲ್ಪ ಸಾಲ ಮಾಡಿ, ಕಷ್ಟಪಟ್ಟು ಹಣ ಹೊಂದಿಸಿ, ಪಕ್ಕದ ಹಳ್ಳಿಗೆ ಹೋದ; ಆ ಸ್ಥಿತಿವಂತ ರೈತನಿಗೆ ಹೋರಿಯ ಬೆಲೆಯನ್ನು ಪಾವತಿಸಿದ. ಉಳುಮೆಯ ಕೆಲಸಕ್ಕೆ ಇನ್ನೂ ಕೆಲವು ವಾರಗಳಿವೆ.

ಬೇಸಾಯ ಶುರುವಾಗುವ ಸಮಯಕ್ಕೆ ಸರಿಯಾಗಿ ಹೋರಿಗಳನ್ನು ಹೊಡೆದು ತಂದರಾಯಿತು, ಅಷ್ಟರಲ್ಲಿ ಅವಕ್ಕಾಗಿ ಒಂದು ಪುಟ್ಟ ಕೊಟ್ಟಿಗೆ ಕಟ್ಟುವ ಎಂದು ಒಂದೆರಡು ವಾರ ಹೋರಿಗಳನ್ನು ಅಲ್ಲೇ ಬಿಡುತ್ತಾನೆ. ಮನೆಗೆ ಬಂದು, ತಾನೇ ಒಂದು ಕೊಟ್ಟಿಗೆ ಕಟ್ಟಿದ. ಅಷ್ಟರಲ್ಲಿ ಕೆಲವು ವಾರ ಕಳೆದವು. ಬಿಸಿಲು ಏರತೊಡಗಿತು.

ಗದ್ದೆಗಳನ್ನು ಉಳುಮೆ ಮಾಡಲು ಸಕಾಲ ಎಂದು ಯೋಚಿಸಿದ. ಇನ್ನೇನು ಹೂಟಿ ಶುರುಮಾಡ ಬೇಕು, ಹೋರಿಗಳನ್ನು ಹೊಡೆದು ಕೊಂಡು ಬರೋಣ ಎಂದು ಪಕ್ಕದ ಹಳ್ಳಿಗೆ ಹೋಗಿ ನೋಡಿದರೆ, ಅಲ್ಲಿ ಎದೆ ಒಡೆಯುವಂಥ ಸುದ್ದಿ ಕೇಳಿಬಂತು.

“ನೀನು ಖರೀದಿಸಿದ ಹೋರಿಗಳು ಕಾಯಿಲೆ ಬಂದು ಸತ್ತುಹೋದವು" ಎಂದು ಹೋರಿಗಳನ್ನು ಮಾರಿದಾತ ಹೇಳಿದ. ಆತನು ತುಸು ಸ್ಥಿತವಂತ, ಬಲಾಢ್ಯ, ಸಾಮಾಜಿಕ ಸ್ತರದಲ್ಲಿ ಉನ್ನತ ವರ್ಗ ದವನು. ಬಡ ರೈತನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ಬೇಸರವೂ ಆಯಿತು.

“ಆಯಿತು ಅಯ್ಯಾ, ಎಂತ ಮಾಡುವುದು. ನನ್ನ ಹಣ ವಾಪಸು ಕೊಡಿ" ಎಂದು ಕೇಳಿದ. ಅದಕ್ಕೆ ಆ ಬಲಾಢ್ಯ ರೈತನು ಸುಲಭದಲ್ಲಿ ಒಪ್ಪುವನೇ? “ನೀನು ಕೊಟ್ಟ ಹಣ ಎಲ್ಲಾ ಖರ್ಚಾಯ್ತು, ಜತೆಗೆ ನೀನು ಖರೀದಿಸಿದ ಹೋರಿಗಳು ಸತ್ತು ಹೋದವು. ಅವಕ್ಕೆ ಕಾಯಿಲೆ ಬಂತು, ಸತ್ತವು. ಅದಕ್ಕೆ ನಾನೇನು ಮಾಡಲು ಸಾಧ್ಯ. ನಿನ್ನ ಮಾಲೀಕತ್ವದ ಹೋರಿಗಳು ಸತ್ತು ಹೋದ ನಂತರ, ಈಗ ಹಣ ವಾಪಸು ಕೊಡು ಎಂದರೆ ನಾನೆಲ್ಲಿಂದ ತರಲಿ?" ಎಂದು ದಬಾಯಿಸಿದ ಆ ಸ್ಥಿತಿವಂತ, ಜಮೀನು ದಾರ ರೈತ.

ತಾನು ಸಾಲ ಸೋಲ ಮಾಡಿ ಹಣ ಕೊಟ್ಟರೂ, ಖರೀದಿಸಿದ ಹೋರಿ ಸಿಗದೇ ರೈತ ಹತಾಶನಾದ. ಮನೆಯತ್ತ ಕಾಡುದಾರಿಯಲ್ಲಿ ಹೊರಟ ಆ ಬಡ ರೈತ, ಮನೆಗೆ ವಾಪಸಾಗಲು ಮನಸ್ಸಾಗದೇ, ಕಾಡಿನಲ್ಲೇ ಅಲೆದಾಡುತ್ತಾ ಕೆಲವು ದಿನ ಕಳೆದ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ. ಆದರೆ, ಆತನ ಆತ್ಮಕ್ಕೆ ಶಾಂತಿ ದೊರಕಲಿಲ್ಲ, ಮರದ ತುದಿಯಲ್ಲಿ ಕುಳಿತು “ಹೋರಿ ಸತ್ ಹೋಯ್ತೋ, ಹಣ ಕೊಟ್ ಆಯ್ತೋ" ಎಂದು ಕೂಗುತ್ತಾ ಹಕ್ಕಿಯ ರೂಪ ತಾಳಿದ.

ಪ್ರತಿ ವರ್ಷ ಬೇಸಗೆ ಬಂದ ಕೂಡಲೆ, ಆ ಬಡ ರೈತನ ಆತ್ಮವು ಹಕ್ಕಿಯ ರೂಪ ತಾಳಿ, ಮರದ ತುದಿ ಯಲ್ಲಿ ಕುಳಿತು ‘ಕೂ ಕೂ ಕು ಕೂ’ ‘ಹೋರಿ ಸತ್‌ಹೋಯ್ತೋ, ಹಣ ಕೊಟ್ಟಾಯ್ತೋ’ ಎಂದು ಕೂಗುತ್ತಾ ಇರುತ್ತದಂತೆ. ಇದು ನಮ್ಮ ಹಳ್ಳಿಯ ಜನಪದರ ಕಥೆ. ವಿಚಿತ್ರ ಧ್ವನಿಯಲ್ಲಿ, ಮನುಷ್ಯನ ದನಿಯನ್ನು ಹೋಲುವಂತೆ ಕೂಗುವ ಆ ಹಕ್ಕಿಗೆ, ಕೃಷಿ ಕೆಲಸದ ಕಷ್ಟ, ವ್ಯಥೆಯ ಕಥೆಯನ್ನು ಜೋಡಿಸಿದ ಈ ಕಥನ ಕುತೂಹಲಕಾರಿ.

ಪಕ್ಷಿಶಾಸ್ತ್ರೀಯವಾಗಿ ಗುರುತಿಸಿದರೆ, ಆ ಹಕ್ಕಿಯನ್ನು ಇಂಡಿಯನ್ ಕುಕೂ (ಕುಕುಲಸ್ ಮೈಕ್ರೋ ಪ್ಟೆರಸ್) ಎಂದು ತಜ್ಞರು ಕರೆದಿದ್ದಾರೆ. ಇದು ನಮ್ಮ ದೇಶದ ದಕ್ಷಿಣ ಭಾಗ, ಹಿಮಾಲಯದ ಶ್ರೇಣಿ ಮತ್ತು ಆಗ್ನೇಯ ಏಷ್ಯಾದಲ್ಲಿ ಕಾಣಸಿಗುತ್ತದೆ. ಈ ಹಕ್ಕಿಯ ಕುರಿತು ನನಗೆ ಇನ್ನಷ್ಟು ಕೌತುಕ ವಾಗಿದ್ದು, ದೂರದ ಕೇದಾರನಾಥ ಶಿಖರದ ಬುಡದಲ್ಲಿರುವ ಗೌರಿಕುಂಡದಲ್ಲಿ ನಾವು ತಂಗಿದ್ದಾಗ (ಮೇ ತಿಂಗಳು), ಅಲ್ಲಿನ ಕಾಡಿನಲ್ಲೂ “ಹೋರಿ ಸತ್ ಹೋಯ್ತೋ" ಹಕ್ಕಿ ಕೂಗುತ್ತಿದ್ದುದನ್ನು ಕೇಳಿಸಿ ಕೊಂಡಾಗ. ಹಕ್ಕಿಗಳಿಗೆ ಹೆಸರಿಡುವಾಗ ನಮ್ಮ ಹಳ್ಳಿಯವರು ತುಸು ಹೆದರಿಕೆ ಹುಟ್ಟಿಸುವ ಹೆಸರನ್ನು ಇಟ್ಟಿದ್ದೂ ಇದೆ. ಮಕ್ಕಳಿಗೆ ಮಾತ್ರವಲ್ಲ, ಅಳ್ಳೆದೆಯ ದೊಡ್ಡವರೂ ಭಯ ಪಡುವ ಹೆಸರಿನ ಹಕ್ಕಿಗಳು ನಮ್ಮ ಹಳ್ಳಿಯಲ್ಲಿವೆ!

ಗುಮ್ಮ ಎಂಬುದು ಸಾಧಾರಣ ದಿಗಿಲು ಹುಟ್ಟಿಸುವ ಹೆಸರು. ಭೂತ ಹಕ್ಕಿ, ಜಕಣಿ ಹಕ್ಕಿ ಎಂಬೆರಡು ಪ್ರಭೇದದ ಹಕ್ಕಿಗಳು ನಮ್ಮೂರಿನ ಕಾಳರಾತ್ರಿಯಲ್ಲಿ ನಿಜಕ್ಕೂ ದಿಗಿಲು ಹುಟ್ಟಿಸುವಂತೆ ಕೂಗುವ ಗೂಬೆಗಳು. ವಿದ್ಯುತ್ ಸಂಪರ್ಕ ಇಲ್ಲದ ಆಗಿನ ದಿನಗಳಲ್ಲಿ, ಮನೆಯ ಮುಂಭಾಗದ ಮರದ ತುದಿ ಯಲ್ಲಿ ಕುಳಿತು ‘ಭೂತ ಹಕ್ಕಿ’ ಕೂಗಿತು ಎಂದರೆ, ಆ ಸುತ್ತಲಿನ ಯಾವುದಾದರೂ ಮನೆಯಲ್ಲಿ ಸದ್ಯದಲ್ಲೆ ಏನಾದರೂ ಕೆಟ್ಟ ಸುದ್ದಿ ಹುಟ್ಟುತ್ತದೆ ಎಂದೇ ನಂಬಿಕೆ.

ಮಾಮೂಲಿ ಗುಮ್ಮ ಅಥವಾ ಮೀನು ಗೂಬೆ (ಬ್ರೌನ್ ಫಿಶ್ ಔಲ್), ‘ಊಂ ಹೂಂ ಊಂ’ ಎಂದು ಕೂಗುವುದು, ನಮ್ಮ ಹಳ್ಳಿಮನೆಯಲ್ಲಿ ಸಾಕಷ್ಟು ಪರಿಚಿತ. ಬೆಳದಿಂಗಳ ರಾತ್ರಿ ಬಂತೆಂದರೆ, ಎರಡು ಮೂರು ಗುಮ್ಮಗಳು ‘ಊಂ ಹೂಂ ಊಂ’ ಎಂದು ಆಗಾಗ ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಇರುವುದನ್ನು ಹಲವು ಬಾರಿ ಕಂಡದ್ದುಂಟು.

ಆದರೆ ಭೂತಹಕ್ಕಿ ತುಸು ವಿಭಿನ್ನ, ನಿಗೂಢ. ಎತ್ತರ ಮರದ ತುದಿಯಲ್ಲಿ ಕುಳಿತು, ತಡರಾತ್ರಿ ಅಥವಾ ಬೆಳಗಿನ ಜಾವ ‘ಊಂ ಹೂಂ’ ಎಂದು ಎರಡೇ ಬಾರಿ ಆಳವಾದ ಧ್ವನಿಯಲ್ಲಿ ಅದು ಕೂಗಿತು ಎಂದರೆ, ಕೆಲವರ ಎದೆಯಲ್ಲಾದರೂ ಸಣ್ಣಗೆ ನಡುಕ ಹುಟ್ಟೀತು. ಇದು ಕೂಗುವುದು ಸ್ವಲ್ಪ ವಿರಳ. ಆದರೆ ಆ ದನಿಯ ಆಳ, ಏರು ಸ್ವರ, ತೀಕ್ಷ್ಣತೆಯು ಮಕ್ಕಳನ್ನು ಹೆದರಿಸಲು ಸಾಕು.

ಮನುಷ್ಯರ ಧ್ವನಿಯನ್ನು ಹೋಲುವ ಅದರ ಕೂಗನ್ನು ಕೇಳಿದ ನಮ್ಮ ಹಿಂದಿನ ತಲೆಮಾರಿನವರು, ಭೂತವೇ ಹಕ್ಕಿಯ ರೂಪ ಪಡೆದಿರಬೇಕು ಎಂದು ಊಹಿಸಿ, ಆ ಹೆಸರಿಟ್ಟಿರಬಹುದು. ನಮ್ಮ ದೇಶ ದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಗ್ರೇಟ್ ಹಾರ್ನ್‌ಡ್ ಔಲ್ ಹಕ್ಕಿಯೇ, ಈ ಭೂತಹಕ್ಕಿ ಎಂದು ಸಲೀಂ ಅಲಿಯವರು, ತಮ್ಮ ಹಕ್ಕಿ ಪುಸ್ತಕದಲ್ಲಿ ಬರೆದಿದ್ದಾರೆ. ‘ಜಕಣಿ ಹಕ್ಕಿ’ ಎಂಬ ಹೆಸರಿನ, ನಮ್ಮ ಹಳ್ಳಿಯ ಸರಹದ್ದಿನ ಕಾಡುಗಳಲ್ಲಿರುವ ಹಕ್ಕಿಯ ವಿಚಾರ ಮಾತ್ರ ಇನ್ನಷ್ಟು ನಿಗೂಢ.

ಕಾಡಿನ ಪಕ್ಕದಲ್ಲಿರುವ ಮನೆಗಳವರು ಈ ಹಕ್ಕಿಯ ಕೂಗನ್ನು ವರ್ಷಕ್ಕೆ ಒಂದು ಬಾರಿ ಕೇಳಿಸಿ ಕೊಂಡರೆ, ಅದೇ ವಿಶೇಷ. ಅಷ್ಟು ವಿರಳ ಈ ಹಕ್ಕಿ. ಆದರೆ ಕತ್ತಲೆಯ ರಾತ್ರಿಯಲ್ಲಿ ಅದರ ಕೂಗನ್ನು ಕೇಳಿಸಿಕೊಂಡರೆ, ಒಮ್ಮೆಗೇ ಬೆಚ್ಚಿ ಬೀಳದೇ ಇರುವವರೇ ಇಲ್ಲವೆನ್ನಬಹುದು. ನಮ್ಮ ಹಳ್ಳಿ ಮನೆಯಿಂದ ಒಂದು ಕಿ.ಮೀ. ದೂರದಲ್ಲಿರುವ ಹರನಗುಡ್ಡೆ ಎಂಬ ವಿಶಾಲ ಬಯಲು ಪ್ರದೇಶದ ಅಂಚಿನಲ್ಲಿ ದಟ್ಟವಾದ ಕಾಡು ಇದೆ; ಆ ಕಾಡಿನ ನಡುವೆ ಸಾಗಿ ಬರುವ ದಾರಿ ಇದೆ.

ಸಂಜೆ 7 ಗಂಟೆಯ ಸಮಯದಲ್ಲಿ ಒಮ್ಮೆ ಅದರ ಕೂಗನ್ನು ನಾನು ಕೇಳಿಸಿಕೊಂಡಿದ್ದೆ. “ರಾತ್ರಿಯ ಹೊತ್ತು ದಟ್ಟ ಕಾಡಿನ ನಡುವ ಅಲೆಯುವ ಮುದುಕಿಯೊಬ್ಬಳು, ತಾರಕ ಸ್ಥಾಯಿಯಲ್ಲಿ, ದೀರ್ಘ ವಾಗಿ, ಕರ್ಕಶವಾಗಿ ಕೂಗಿದಂತಿರುತ್ತದೆ, ಆ ಹಕ್ಕಿಯ ಕೂಗು!" (ಈ ವರ್ಣನೆಯು ಸಲೀಂ ಅಲಿಯ ವರ ವಿವರಣೆಯನ್ನು ಅನುಸರಿಸಿದ್ದು). ಆ ಕರ್ಕಶ ದನಿಯನ್ನು ಕಾಡಿನ ನಡುವೆ ಕೇಳಿ ಬೆಚ್ಚಿ ಬಿದ್ದ ನಾನು, ಲಗುಬಗೆಯಿಂದ ಮನೆಗೆ ಬಂದು ಅಮ್ಮಮ್ಮನನ್ನು ಅದೇನೆಂದು ಕೇಳಿದೆ.

“ನಿನಗೆ ಹೆದರಿಕೆ ಆಯಿತಾ, ಹೆದರಬೇಡ. ಅದು ಜಕಣಿ ಹಕ್ಕಿ. ನಮ್ಮ ತವರುಮನೆ ಅಬ್ಲಿ ಕಟ್ಟೆಯಲ್ಲಿ ಒಂದೊಂದು ರಾತ್ರಿ ಅದು ಕೂಗಿದ್ದು ಕೇಳಿ, ಮಕ್ಕಳೆಲ್ಲಾ ಹೆದರಿಕೊಳ್ಳುತ್ತಿದ್ದರು" ಎಂದು ಅಮ್ಮಮ್ಮ ತಮ್ಮ ಬಾಲ್ಯದ ನೆನಪಿನ ಸುರುಳಿ ಬಿಚ್ಚಿದರು. ಕಾಳರಾತ್ರಿಯಲ್ಲಿ ಮರದ ಮೇಲೆ ಕುಳಿತು, ಮುದುಕಿಯ ದನಿಯನ್ನು ಹೋಲುವಂಥ ಕರ್ಕಶ ದನಿಯಲ್ಲಿ ಕೂಗುವ ಈ ಹಕ್ಕಿ ಯಾವುದು ಎಂದು ಪತ್ತೆ ಮಾಡಲು ಸಲೀಂ ಅಲಿಯವರ ‘ದ ಇಂಡಿಯನ್ ಹಿಲ್ ಬರ್ಡ್ಸ್’ ಎಂಬ ಅಪರೂಪದ ಪುಸ್ತಕದ ಮೊರೆಹೋಗಬೇಕಾಯಿತು. ನಮ್ಮ ಸಹ್ಯಾದ್ರಿ ಕಾಡುಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನ ಅರಣ್ಯದಲ್ಲಿ ವಾಸಿಸುವ, ಕೀರಲು ಕರ್ಕಶ ದನಿಯ ಈ ಹಕ್ಕಿಯನ್ನು ಅವರು ‘ಫಾರೆಸ್ಟ್ ಈಗಲ್ ಔಲ್’ ಎಂದು ಗುರುತಿಸಿದ್ದಾರೆ.

‘ಹೋರಿ ಸತ್ತು ಹೋಯ್ತೋ’ ಹಕ್ಕಿ, ಭೂತ ಹಕ್ಕಿ, ಜಕಣಿ ಹಕ್ಕಿಯ ಕುರಿತು ನಮ್ಮ ಜನ ಪದರು ಹೆಸರಿಸಿ ರುವ ಪ್ರಕ್ರಿಯೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಇಷ್ಟು ಹೇಳಿದೆನೇ ಹೊರತು, ಈ ಹೆಸರು ಗಳ ಹಿಂದೆ ಇರುವ ಮೂಢನಂಬಿಕೆಗಳನ್ನು ನಾನು ನಂಬುವುದಿಲ್ಲ. ಇಂಥ ಹಲವು ಹಕ್ಕಿ, ಕೀಟಗಳು ನಮ್ಮ ಹಳ್ಳಿಯ ಕಾಡು, ಬೆಟ್ಟ, ಹಕ್ಕಲು, ಹಾಡಿಗಳಲ್ಲಿವೆ.

ಇಂಥ ಜೀವಿಗಳು ನಮ್ಮ ಇಕಾಲಜಿಯ ಸರಪಣಿಯ ವಿಶಿಷ್ಟ ಕೊಂಡಿಗಳು. ಹಕ್ಕಿಗಳ, ಇತರ ಜೀವಿಗಳ ಜೀವನ ಕ್ರಮವನ್ನು ಪರಿಚಯ ಮಾಡಿಕೊಳ್ಳುವುದರ ಮೂಲಕ, ನಮ್ಮ ಸುತ್ತಲಿನ ಪರಿಸರದ ವ್ಯಾಪಾರವನ್ನು ಅರ್ಥಮಾಡಿಕೊಳ್ಳಬಹುದು, ಆ ಮೂಲಕ ಪರಿಸರ ಕಾಳಜಿಯನ್ನೂ ಬೆಳೆಸಿ ಕೊಳ್ಳಬಹುದು.