Maya Balachandra Column: ಯುದ್ಧವು ಮೊದಲ ಪರಿಹಾರವಲ್ಲ, ಕೊನೆಯ ಆಯ್ಕೆ
ಒಂದು ರಾಷ್ಟ್ರ ಅಥವಾ ಗುಂಪು ‘ತನ್ನ ಭದ್ರತೆ ಪಾಯದಲ್ಲಿದೆ’ ಅನ್ನುವ ತೀರ್ಮಾನಕ್ಕೆ ಬಂದರೆ, ಆ ಗುಂಪಿನ ಸಾಮೂಹಿಕ ಪ್ರಜ್ಞೆಯಲ್ಲಿ ಯುದ್ಧ ಹುಟ್ಟಿದಂತೆಯೇ. ಇಲ್ಲಿ ಭಯ ಮತ್ತು ಅಸುರಕ್ಷಿತತೆಯ ಮನೋಭಾವ, ಯುದ್ಧದ ಪ್ರಮುಖ ನೆಲೆಗಟ್ಟು. ಈ ಭಯವು ಅನೇಕ ಬಾರಿ ನಿಜವಾದ ಅಪಾಯಕ್ಕಿಂತ ಹೆಚ್ಚಾಗಿ, ಕಲ್ಪನೆಯಲ್ಲಿ ಬೆಳೆಯುತ್ತದೆ.
-
ಮಾಯಾ ಬಾಲಚಂದ್ರ
ಪಾರ್ಕ್‌ನಲ್ಲಿ ಕುಳಿತ ಪ್ರೇಮಿಗಳಿಬ್ಬರು ಮಾತಾಡುವಾಗಲೂ, ಯುದ್ಧದ ಬಗ್ಗೆ ಚರ್ಚೆ ಮಾಡುವಂಥ ಕದನ ಕುತೂಹಲದ ಪರ್ವಕಾಲ ಇದು. ಯುದ್ಧವು, ಒಂದು ಸಮಯ, ಸನ್ನಿವೇಶದಲ್ಲಿ ಆಸ್ಫೋಟಗೊಳ್ಳಬಹುದು. ಜ್ವಾಲಾಮುಖಿಯೊಂದು ಶತಮಾನಗಳ ಕಾಲ ಒಳಗೊಳಗೆ ಕುದಿಯುತ್ತಾ, ಒಮ್ಮೆ ವಿಸ್ಫೋಟಗೊಳ್ಳುವಂತೆ ಇದು ಸಹ.
ಮಾನವನೊಳಗೆ ಆಕ್ರಮಣಶೀಲ ಪ್ರೇರಣೆ (aggressive instinct) ಇದೆ ಎಂದು ಮನೋ ವಿಜ್ಞಾನಿಗಳು ಗುರುತಿಸುತ್ತಾರೆ. ಹಳೆಯ ಅವಮಾನ, ಸೋಲಿನ ನೆನಪುಗಳು ಜನಮಾನಸ ದಲ್ಲಿ ಉಳಿಯುತ್ತವೆ. ಈ collective memory ಮುಂದಿನ ಪೀಳಿಗೆಯಲ್ಲಿ ಪ್ರತೀಕಾರ ಮನೋಭಾವಕ್ಕೆ ಕಾರಣವಾಗಬಹುದು.
ಮನುಷ್ಯ ಸ್ವಭಾವತಃ ಗುಂಪುಗಳಲ್ಲಿ ತನ್ನ ಗುರುತನ್ನು ಕಂಡುಕೊಳ್ಳುತ್ತಾನೆ. ತನ್ನ ಗುಂಪು ‘ಶ್ರೇಷ್ಠ’ ಎಂದು ಭಾವಿಸಿದಾಗ, ಬೇರೆ ಗುಂಪುಗಳನ್ನು ‘ಶತ್ರು’ ಎಂದು ಪರಿಗಣಿಸುವ ಸಾಧ್ಯತೆ ಹೆಚ್ಚು. ಇದು ’Ingroup V/s Outgroup bias’ ಅನ್ನುವ ಮನೋವಿಜ್ಞಾನದ ತತ್ವಕ್ಕೆ ಸಂಬಂಧಿಸಿದ್ದು.
ಹೀಗೆ, ಒಂದು ರಾಷ್ಟ್ರ ಅಥವಾ ಗುಂಪು ‘ತನ್ನ ಭದ್ರತೆ ಪಾಯದಲ್ಲಿದೆ’ ಅನ್ನುವ ತೀರ್ಮಾನಕ್ಕೆ ಬಂದರೆ, ಆ ಗುಂಪಿನ ಸಾಮೂಹಿಕ ಪ್ರಜ್ಞೆಯಲ್ಲಿ ಯುದ್ಧ ಹುಟ್ಟಿದಂತೆಯೇ. ಇಲ್ಲಿ ಭಯ ಮತ್ತು ಅಸುರಕ್ಷಿತತೆಯ ಮನೋಭಾವ, ಯುದ್ಧದ ಪ್ರಮುಖ ನೆಲೆಗಟ್ಟು. ಈ ಭಯವು ಅನೇಕ ಬಾರಿ ನಿಜವಾದ ಅಪಾಯಕ್ಕಿಂತ ಹೆಚ್ಚಾಗಿ, ಕಲ್ಪನೆಯಲ್ಲಿ ಬೆಳೆಯುತ್ತದೆ.
ಪರಿಣಾಮವಾಗಿ ಸಂವಾದ ಮತ್ತು ಸಹಕಾರದ ಬಾಗಿಲು ಮುಚ್ಚಿಕೊಂಡು, ಸಂಘರ್ಷದ ದಾರಿ ತೆರೆಯುತ್ತದೆ. ಇದನ್ನು ‘ಸೆಕ್ಯೂರಿಟಿ ಡೈಲೆಮಾ’ ಎನ್ನಬಹುದು. ಯುದ್ಧವು ಕೇವಲ ಭೂಮಿ ಅಥವಾ ಅಧಿಕಾರಕ್ಕಾಗಿ ನಡೆಯುವ ಹೋರಾಟವಲ್ಲ; ಅದು, ಭಯ, ಅಹಂಕಾರ, ಗುಂಪು ಗುರುತು, ಅನಿಶ್ಚಿತತೆ ಮತ್ತು ಪ್ರತೀಕಾರದಂಥ ಮಾನಸಿಕ ಪ್ರಕ್ರಿಯೆಗಳ ಒಟ್ಟು ಫಲಿತಾಂಶ.
ಇದನ್ನೂ ಓದಿ: Maya Balachandra Column: ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?
ಇವೆಲ್ಲವೂ ನಿರಂತರವಾಗಿ ಸಮೂಹದ ಮಾನಸಿಕತೆಯಲ್ಲಿ ನಡೆಯುವ ತಾಕಲಾಟ. ಸಮಾಜದಲ್ಲಿ ಸಂಗ್ರಹವಾಗುವ ಹತಾಶೆ ಮತ್ತು ಕೋಪವೂ, ಹೊರಗಿನ ಶತ್ರುವಿನ ರೂಪ ದಲ್ಲಿ ವ್ಯಕ್ತವಾಗಬಹುದು.
ಆರ್ಥಿಕ ಅಸಮಾನತೆ, ಸಾಮಾಜಿಕ ಅನ್ಯಾಯ ಅಥವಾ ರಾಜಕೀಯ ವಿಫಲತೆಗಳಿಂದ ಉಂಟಾಗುವ ಅಸಮಾಧಾನವನ್ನು, ಕೆಲವೊಮ್ಮೆ ಹೊರಗಿನ ಶತ್ರುವಿನ ಮೇಲೆ ತಿರುಗಿಸುವ ಮೂಲಕ, ನ್ಯಾಯಸಮ್ಮತ ಎಂದು ಹೊರನೋಟಕ್ಕೆ ಕಾಣುವ ರೂಪವನ್ನು ಯುದ್ಧಕ್ಕೆ ನೀಡಲಾಗುತ್ತದೆ.
ಮನವೇ ಮೊದಲ ಅಂಗಳ
ರಾಷ್ಟ್ರ ರಾಷ್ಟ್ರಗಳ ನಡುವೆ ಕದನ ಪ್ರಾರಂಭವಾಗುವ ಮೊದಲು, ಯುದ್ಧದ ಮನೋ ಭೂಮಿಕೆ, ದೇಶದೊಳಗಿನ ಸಮೂಹದಲ್ಲಿ ಸಿದ್ಧವಾಗಿರುತ್ತದೆ. ಇಂಥ ಸಮೂಹ ಇಡೀ ದೇಶಕ್ಕೊಂದೇ ಆದಾಗ, ಆ ದೇಶ ಇಸ್ರೇಲ್‌ನಂತೆ ಗಟ್ಟಿಯಾಗಿ ನಿಲ್ಲುತ್ತದೆ. ದೇಶದೊಳಗೆ ಎರಡು ಗುಂಪುಗಳಾಗಿ ಬೇರೆ ಬೇರೆ ಮಾನಸಿಕ ಸ್ತರಗಳಲ್ಲಿ ನಿಂತು ಬಿಟ್ಟರೆ, ಹೊರಗಿನ ಶತ್ರು ವನ್ನು ಎದುರಿಸಿರುವುದಕ್ಕಿಂತ, ಒಳಗಿನ ಕಿತ್ತಾಟಗಳೇ ಅಸಹನೀಯ ಎನಿಸಿ ಬಿಡುತ್ತದೆ.
ಈ ಎರಡು ಗುಂಪುಗಳು ಹೊರಗಿನ ದಾಳಿಗೆ ಸ್ಪಂದಿಸುವ ರೀತಿಯನ್ನು ಗಮನಿಸಿದರೆ, ಅದು ಆ ಕ್ಷಣದ ಪ್ರತಿಕ್ರಿಯೆ ಅಲ್ಲ ಎನ್ನುವುದು ಸ್ಪಷ್ಟವಾಗಿಬಿಡುತ್ತದೆ. ಒಂದು ಗುಂಪು extreme nationalism ನತ್ತ ಹೊರಳಿದರೆ, ಇನ್ನೊಂದು ಗುಂಪು ಇದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡಬಹುದು. ಈ ಎರಡು ಗುಂಪುಗಳು ಸಂದರ್ಭ ಬಂದಾಗ ಕಾರ್ಯೋನ್ಮುಖವಾಗಲು ತಲೆತಲಾಂತರಗಳಿಂದಲೇ ಸಿದ್ಧವಾಗಿರುತ್ತವೆ.
ಇದನ್ನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ನೋಡಬಹುದು. ದೇಶಕ್ಕಾಗಿ, ಹೊರಗಿನ ಶತ್ರುಗಳೊಂದಿಗೆ ಹೋರಾಡಲು ನಿಲ್ಲುವ ಗುಂಪಿನ ಸಿದ್ಧತೆ ಒಂದು ರೀತಿಯದ್ದಾದರೆ, ಎರಡನೇ ಗುಂಪಿನ ಸಿದ್ಧತೆ ಇನ್ನೊಂದು ರೀತಿಯದ್ದು. ದೇಶದ ಸುರಕ್ಷತೆ ಗಾಗಿ ಜಾಗ್ರತೆ ವಹಿಸಬೇಕಿರುವುದು ಈ ದಿಕ್ಕಿನಲ್ಲಿಯೇ.
ಅಮಾನವೀಯ ಬಳಕೆ
ಯುದ್ಧದ ಪೂರ್ವಭಾವಿಯಾಗಿ ನಡೆವ ಆಂತರಿಕ ಸಿದ್ಧತೆಗಳಲ್ಲಿ ಮಹಿಳೆಯರನ್ನು, ಅವರ ಅರಿವಿಗೆ ಬಾರದಂತೆ ಅಮಾನವೀಯವಾಗಿ ಬಳಸಿಕೊಳ್ಳುವ ರೀತಿ ಅನೇಕ ಕಡೆಗಳಲ್ಲಿ ನಡೆಯುತ್ತವೆ. ಅದು ಮುಖ್ಯವಾಗಿ ಕಂಡುಬರುವುದು ದೇಶದೊಳಗೆ ಎರಡು ಪ್ರಬಲ ಮತ್ತು ಭಿನ್ನ ಚಿಂತನೆಗಳ ಸಮೂಹಗಳಿರುವಾಗ. ಒಂದು ಸಮೂಹವನ್ನು ಮಣಿಸಲು, ಅದರ ಭಾವನಾತ್ಮಕ ಬೆನ್ನೆಲುಬಾದ ಮಹಿಳೆಯರ ಶಕ್ತಿ, ಘನತೆಗೆ ಧಕ್ಕೆ ತಂದು, ಆ ಸಮೂಹವನ್ನು ಮಾನಸಿಕವಾಗಿ ಕುಗ್ಗಿಸಿಬಿಡುವುದು ಇದರ ಹಿಂದಿನ ಉದ್ದೇಶ.
ನಂತರ, ಆ ಶಕ್ತಿಯನ್ನು ತಮ್ಮ ಗುಂಪಿನ ಸಬಲೀಕರಣಕ್ಕೆ ಬಳಸಿಕೊಳ್ಳುವುದು ಒಂದು ತಂತ್ರ. ಹೆಣ್ಣುಮಕ್ಕಳನ್ನು ತಮ್ಮ ಗುಂಪಿಗಾಗಿ ಉಪಯೋಗಿಸಿಕೊಳ್ಳಲು ಅವರನ್ನು ತಮ್ಮತ್ತ ಸೆಳೆದುಕೊಳ್ಳುವುದು ಮೊದಲ ಹೆಜ್ಜೆ. ಕೆಲವು ಹೆಣ್ಣು ಮಕ್ಕಳು ಅಂಥ ಸೆಳೆತಗಳಿಗೆ ಸುಲಭ ವಾಗಿ ಸಿಕ್ಕಿ ಬಿಡುತ್ತಾರೆ.
ವ್ಹೀಲಿಂಗ್ ಮುಂತಾದ ಅಡ್ವೆಂಚರ್‌ಗಳಿಗೆ, ಚಿತ್ರ-ವಿಚಿತ್ರ ಸ್ಟೈಲ್‌ಗಳಿಗೆ ಬೇಗ ಆಕರ್ಷಿತ ರಾಗಿಬಿಡುವ ಹೆಣ್ಣು ಮಕ್ಕಳಿಗೆ, ಭವಿಷ್ಯದ ಕಲ್ಪನೆಯೇ ಇರುವುದಿಲ್ಲ. ವೈಜ್ಞಾನಿಕ ನೆಲೆ ಯಲ್ಲಿ ನೋಡಿದರೆ, ಹೆಣ್ಣು ಮಕ್ಕಳು ಇಂಥ ಆಕರ್ಷಣೆಗೆ ಒಳಗಾಗುವುದು ಪ್ರಕೃತಿ ಸಹಜ.
ಜೀವಸಂಕುಲದ ಪ್ರತಿ ಹೆಣ್ಣು ಜೀವಿಯು, ತನ್ನ ಪ್ರಭೇದದ ಬಲಿಷ್ಠ ಗಂಡು ಜೀವಿಯನ್ನೇ ಸಂಗಾತಿಯಾಗಿ ಪಡೆಯಲು ಬಯಸುತ್ತದೆ ಗಂಡು ಜಿಂಕೆಗಳು, ತಮ್ಮ ದೊಡ್ಡ ಕೊಂಬನ್ನು ಬಳಸಿ ಪರಸ್ಪರ ಕಾದಾಟ ನಡೆಸುತ್ತವೆ. ಇದು rutting season ಎಂದೇ ಪ್ರಸಿದ್ಧ. ಪ್ರಾಬಲ್ಯ ಸ್ಥಾಪಿಸಿದವರಿಗೇ ಹೆಣ್ಣು ಜಿಂಕೆ ಒಲಿಯುವುದು. ಇದು, ಆನೆ, ನವಿಲುಗಳಾದಿ ಯಾಗಿ, ಕೀಟ ಪ್ರಪಂಚದಲ್ಲಿಯೂ ಕಂಡುಬರುವ ನೈಸರ್ಗಿಕ ಪ್ರಕ್ರಿಯೆ. ತನ್ನ ಕ್ಷೇತ್ರದಲ್ಲಿ ಹುಟ್ಟುವ, ತನ್ನ ಮಗು ಬಲಿಷ್ಠವಾಗಿರಬೇಕು ಎನ್ನುವ ಮನಸ್ಥಿತಿಯೇ ಇಲ್ಲಿ ಕೆಲಸ ಮಾಡುವಂಥದ್ದು.
ಸೃಷ್ಟಿ ಕ್ರಿಯೆ ನಿರಂತರವಾಗಿ, ಪ್ರಬಲವಾಗಿ ಮುಂದುವರಿಯಲು ಇದು ಸೃಷ್ಟಿಯದ್ದೇ ಉಪಾಯ. ಪ್ರಜಾತಿಯ ಬಲಿಷ್ಠ ಲಕ್ಷಣಗಳನ್ನು ಮುಂದಿನ ತಲೆಮಾರಿಗೆ ಸಾಗಿಸುವ ವ್ಯವಸ್ಥೆ ಇದು.
ಪ್ರಕೃತಿಯ ನಿಯಮ
ಈ ಸ್ಪರ್ಧೆಯ ಹಿಂದೆ, ‘ಬಲಿಷ್ಠನಿಗೆ ಮುಂದಿನ ತಲೆಮಾರನ್ನು ರೂಪಿಸುವ ಅವಕಾಶ’ ಎನ್ನುವ ಪ್ರಕೃತಿಯ ಸರಳ ನಿಯಮವಿದೆ. ಇದೇ ನಿಯಮ ಮಾನವರಲ್ಲಿ ಸಂಕೀರ್ಣವಾಗಿದೆ. ಮನುಷ್ಯರು ಕೇವಲ ದೈಹಿಕ ಪ್ರಾಬಲ್ಯ ಮೆರೆದರೆ ಸಾಲದು. ಅದಕ್ಕಿಂತ ಹೆಚ್ಚಾಗಿ, ಸಂಗಾತಿ ಯೊಂದಿಗೆ ಬದ್ಧತೆ, ಜವಾಬ್ದಾರಿಯ ನಿರ್ವಹಣೆ, ಸಂದರ್ಭಗಳನ್ನು ಎದುರಿಸುವ ಕ್ಷಮತೆ, ಭಾವನಾತ್ಮಕ ಸ್ಪಂದನೆ ಎಲ್ಲವೂ ಮುಖ್ಯವಾಗುತ್ತವೆ. ಭಾರತೀಯ ಪರಂಪರೆಯಲ್ಲಿ ‘ಧೀರತೆ’ಗೆ ಇರುವ ವ್ಯಾಖ್ಯಾನ, ಇಂದಿನ ಯುವ ಪೀಳಿಗೆ ಅರ್ಥೈಸುವ ‘ಧೀರತೆ’ಗಿಂತ ತೀರಾ ಭಿನ್ನ. ಮನಸ್ಸನ್ನು ಸ್ಥಿರಗೊಳಿಸಿದವನೇ ನಿಜವಾದ ಧೀರ ಎನ್ನುವುದರ ಬಗ್ಗೆ ತಿಳಿವಳಿಕೆ ಇಲ್ಲದ ಹೆಣ್ಣು ಮಕ್ಕಳು, ತಮ್ಮ ಭವಿಷ್ಯವನ್ನು ಕರಾಳವಾಗಿಸಿಕೊಳ್ಳುತ್ತಿದ್ದಾರೆ.
ಆಕರ್ಷಣೆ ಸಹಜವಾದರೂ ಅದನ್ನು ಜ್ಞಾನ ಮತ್ತು ಸಮತೋಲನದಿಂದ ನಿಯಂತ್ರಿಸು ವುದು ಮಾನವ ಸಂಸ್ಕೃತಿಯ ಮುಖ್ಯ ಲಕ್ಷಣ. ಮಾನವನೊಳಗಿನ ಮೂಲಭೂತ ಜೀವ ಶಾಸ್ತ್ರೀಯ ಪ್ರವೃತ್ತಿ, ಸಾವಿರಾರು ವರ್ಷಗಳ ಸಂಸ್ಕಾರದಿಂದ ಸಾಂಸ್ಕೃತಿಕ ರೂಪ ತಾಳಿದೆ. ಪ್ರಾಣಿಗಳಲ್ಲಿ ಈ ಕ್ರಿಯೆ ಪ್ರಕೃತಿಯ ನಿಯಮದೊಳಗೆ ಸೀಮಿತವಾಗಿರುತ್ತದೆ.
ದೀರ್ಘಕಾಲದ ವೈಷಮ್ಯಕ್ಕೆ ಅಲ್ಲಿ ಜಾಗವಿಲ್ಲ. ಆದರೆ ಮಾನವರಲ್ಲಿ ಇಂಥ ಮೂಲಭೂತ ಪ್ರವೃತ್ತಿಯು ದುರುಪಯೋಗಕ್ಕೊಳಗಾಗುತ್ತಿದೆ. ಇದು, ಸಂಘರ್ಷ, ಯುದ್ಧ ಸಿದ್ಧತೆಯ ಭಾಗ ವಾಗಿರುವುದನ್ನು ನಾವು ಕಾಣಬಹುದು. ಈ ಮೂಲ ಪ್ರವೃತ್ತಿಯು, ಪ್ರಾಣಿ ಪ್ರಪಂಚ ದಲ್ಲಿ ಬದುಕಿನ ಚಕ್ರವನ್ನು ಮುಂದುವರಿಸಲು ನಡೆಯುತ್ತದೆ. ಮಾನವ ಸಮಾಜದಲ್ಲಿ, ಅದೇ ಮೂಲ ಪ್ರವೃತ್ತಿಯು, ಮೌಲ್ಯಗಳು ಮತ್ತು ವಿವೇಕದ ಹಿಡಿತದಲ್ಲಿದ್ದಾಗ ಮಾತ್ರ ನಾಗರಿಕತೆ ಯ ಸೌಂದರ್ಯ ಉಳಿಯುತ್ತದೆ.
ಅವಮಾನಕ್ಕೆ ಒಳಗಾಗುವುದು ಹೆಣ್ಣೇ
ಸಂಘರ್ಷಗಳಿಗೆ ಸಿದ್ಧವಾಗುವಾಗ, ಹೆಣ್ಣನ್ನು ಬಳಸಿಕೊಳ್ಳುವುದು ಒಂದು ದೌರ್ಭಾಗ್ಯ ವಾದರೆ, ದಾಳಿ-ದಬ್ಬಾಳಿಕೆಗಳಾಗುವಾಗ, ಕದನ-ಸಾಮಾಜಿಕ ಪರಿವರ್ತನೆಗಳಾಗುವ ಎಲ್ಲಾ ಹೆಚ್ಚಿನ ಸಂದರ್ಭಗಳಲ್ಲಿ, ಹಿಂಸೆ, ಅವಮಾನಕ್ಕೆ ಒಳಗಾಗುವುದು ಸಹ ಹೆಣ್ಣೇ. ಇಂಥ ಸಂದರ್ಭಗಳಲ್ಲಿ ಹೆಣ್ಣು ಅನುಭವಿಸುವ ಮಾನಸಿಕ ಒತ್ತಡ ಮತ್ತು ದೌರ್ಜನ್ಯವು ಮಾನವ ಇತಿಹಾಸದ ಬಹಳ ಗಂಭೀರವಾದ ಸಾಮಾಜಿಕ ಸಮಸ್ಯೆ. ಜಗತ್ತಿನ ಇತಿಹಾಸದಲ್ಲಿ, ಅನೇಕ ಯುದ್ಧಗಳಲ್ಲಿ ಮಹಿಳೆಯರ ಮೇಲೆ ವಿವಿಧ ರೀತಿಯ ಹಿಂಸೆ ನಡೆದಿರುವ ದಾಖಲೆಗಳಿವೆ. ಎಷ್ಟೋ ಬಾರಿ ಇದು ಯುದ್ಧ ತಂತ್ರದ ಭಾಗವಾಗಿಯೂ ಬಳಸಲ್ಪಟ್ಟಿದೆ.
ಲೈಂಗಿಕ ಹಿಂಸೆ, ಬಲವಂತದ ಸ್ಥಳಾಂತರ, ಒತ್ತಾಯಪೂರ್ವಕ ಮದುವೆ, ಮಾನವ ಕಳ್ಳಸಾಗಣೆ, ಸೇವೆಗೆ ಬಲವಂತವಾಗಿ ಉಪಯೋಗಿಸಿಕೊಳ್ಳುವುದು, ಶರಣಾರ್ಥಿ ಶಿಬಿರದಲ್ಲಿ ಶೋಷಣೆ ಇವೆಲ್ಲವೂ ಮಹಿಳೆಯರಿಗೆ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕ ಆರೋಗ್ಯದ ಮೇಲೆಯೂ ದೀರ್ಘಕಾಲದ ಗಾಯಗಳನ್ನು ಮೂಡಿಸಿಬಿಡುತ್ತವೆ.
ಇದರ ಪರಿಣಾಮವಾಗಿ ನಿರಂತರ ಭಯ, ಆತಂಕ, ದುಃಖ, ಖಿನ್ನತೆ, ಅಪನಂಬಿಕೆ, ಸಾಮಾ ಜಿಕ ಅವಮಾನ, ಆಘಾತ (trauma)ಗಳಿಗೆ ಶೋಷಿತ ಮಹಿಳೆಯರು ತಮ್ಮನ್ನು ಒಡ್ಡಿಕೊಳ್ಳ ಬೇಕಾಗುತ್ತದೆ. ಯುದ್ಧ ಮುಗಿದು ಬೇರೆಲ್ಲ ಸ್ಥಿತಿಗತಿಗಳು ಕ್ರಮೇಣ ಮೊದಲಿನಂತೆ ಆಗತೊಡಗಿದರೂ, ಶೋಷಿತ ಮಹಿಳೆಯರು ಮನಸ್ಸಿಗಾದ ಗಾಯಗಳಿಂದ ಬಳಲುತ್ತಾರೆ.
ಮಹಿಳೆಯರು ಕುಟುಂಬದ ಕೇಂದ್ರವಾಗಿರುವುದರಿಂದ ಅವರ ಮೇಲೆ ನಡೆಯುವ ಹಿಂಸೆ ಸಮಾಜದ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಅಸ್ಥಿರತೆ, ಭೀತಿ, ಕುಟುಂಬ ವ್ಯವಸ್ಥೆಯ ಕುಸಿತ ಎಲ್ಲವೂ ಅವರನ್ನು ಇನ್ನಷ್ಟು ಕುಗ್ಗಿಸಿ, ಸಮಾಜದ ಹಿನ್ನಡೆಗೆ ಕಾರಣ ವಾಗುತ್ತದೆ. ಈ ರೀತಿಯ ಹಿಂಸೆ ಮಾನವ ಹಕ್ಕುಗಳ ಉಲ್ಲಂಘನೆಯೇ.
‘ಯುನೈಟೆಡ್ ನೇಷ’ ಮತ್ತು ‘ಇಂಟರ್ ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್’ ಮುಂತಾದ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು, ಮಹಿಳೆಯರಿಗೆ ಸಹಾಯ ಮತ್ತು ರಕ್ಷಣೆಯನ್ನು ಒದಗಿಸಲು ಕೆಲಸ ಮಾಡುತ್ತಿವೆ.
ಸಮಾಜವನ್ನು ರೂಪಿಸುವ ಪಾತ್ರ
ಮಾನವ ವಿಕಾಸದ ಹಾದಿಯಲ್ಲಿ ಯುದ್ಧಗಳು ಸಮಾಜವನ್ನು ರೂಪುಗೊಳಿಸುವಲ್ಲಿ ಪಾತ್ರ ವಹಿಸುತ್ತಾ ಬಂದಿವೆ. ಆದಿಮಾನವ ಸಮಾಜದಲ್ಲಿ ಯುದ್ಧಗಳು ಇಂದಿನಂತೆ ಸಂಘಟಿತ ವಾಗಿರಲಿಲ್ಲ. ಆಹಾರ, ನೀರು, ನೆಲ ಮತ್ತು ಬದುಕು ಉಳಿಸಿಕೊಳ್ಳುವ ಹೋರಾಟವೇ ಅಂದಿನ ಯುದ್ಧಕ್ಕೆ ಪ್ರಮುಖ ಕಾರಣವಾಗಿರುತ್ತಿತ್ತು. ಸಣ್ಣ ಗುಂಪುಗಳು (tribes) ಪರಸ್ಪರ ಸಂಘರ್ಷಕ್ಕೆ ಇಳಿಯುತ್ತಿದ್ದವು. ಇದು ಪ್ರಾಣಿಗಳಲ್ಲಿರುವ ಸ್ವಾಭಾವಿಕ ರಕ್ಷಣಾ ಪ್ರವೃತ್ತಿಯ ವಿಸ್ತರಣೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ, ಕೃಷಿ ಪ್ರಾರಂಭವಾದ ನಂತರ, ಮಾನವ ಸಮಾಜ ಗಟ್ಟಿಗೊಂಡಿತು. ಭೂಮಿ ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕಿಗಾಗಿ ಯುದ್ಧಗಳು ಹೆಚ್ಚಾದವು.
ಆ ಕಾಲದಲ್ಲಿ, ರಾಜ್ಯಗಳು, ಸಾಮ್ರಾಜ್ಯಗಳು ರೂಪುಗೊಂಡವು. ಮೆಸಪಟೋಮಿಯ, ಈಜಿಪ್ಟ್, ಚೀನಾ ಮುಂತಾದ ಪ್ರಾಚೀನ ನಾಗರಿಕತೆಗಳು ಯುದ್ಧಗಳ ಮೂಲಕ ತಮ್ಮ ಗಡಿ ಗಳನ್ನು ವಿಸ್ತರಿಸಿದವು. ಇವೆಲ್ಲ ಮುಂದುವರಿದಂತೆ, ಇತಿಹಾಸದಲ್ಲಿ ಸಾಮ್ರಾಜ್ಯ ವಿಸ್ತರಣೆ ಗಾಗಿ ನಡೆದ ಹಲವಾರು ಯುದ್ಧಗಳನ್ನು ನಾವು ಕಾಣಬಹುದು.
ಇವು ಕೇವಲ ರಾಜಕೀಯ ಬದಲಾವಣೆಗಳನ್ನು ಮಾತ್ರ ತರಲಿಲ್ಲ, ಜತೆಗೆ ಸಂಸ್ಕೃತಿ, ಭಾಷೆ, ವ್ಯವಹಾರ, ವ್ಯಾಪಾರವನ್ನು ಕೂಡ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಹರಡಿಸಿದವು. ಮಧ್ಯಯುಗದಲ್ಲಿ ಯುದ್ಧಗಳು ಧರ್ಮದ ಹೆಸರಿನಲ್ಲಿ ನಡೆದವು *(crusades)*. ಇಂದಿನ ಕಲೋನಿಯಲ್ಸ ಸ್ಪರ್ಧೆ ಮತ್ತು ತಾಂತ್ರಿಕ ಅಭಿವೃದ್ಧಿಗಳು, ಯುದ್ಧಗಳನ್ನು ಇನ್ನಷ್ಟು ಭೀಕರಗೊಳಿಸಿವೆ.
ಒಂದೆಡೆ ಯುದ್ಧಗಳು ವಿನಾಶವನ್ನು ಉಂಟುಮಾಡಿದರೆ, ಮತ್ತೊಂದೆಡೆ ಸಮಾಜದ ರಾಜಕೀಯ ವ್ಯವಸ್ಥೆ, ತಂತ್ರಜ್ಞಾನ ಮತ್ತು ಮಾನವ ಚಿಂತನೆಗೆ ಬದಲಾವಣೆಗಳನ್ನು ತಂದಿವೆ.
ಸತ್ವಪರೀಕ್ಷೆಯ ವೇದಿಕೆ
ಭಾರತೀಯ ಪರಂಪರೆಯಲ್ಲಿ, ಯುದ್ಧವು ಸಮಾಜದ ನೈತಿಕ ಅಸ್ತಿತ್ವವನ್ನು ಪರೀಕ್ಷಿಸುವ ವೇದಿಕೆ. ಕುರುಕ್ಷೇತ್ರ ಯುದ್ಧದಿಂದ ಕಳಿಂಗ ಯುದ್ಧದವರೆಗೆ ನಡೆದ ಯುದ್ಧಗಳು ನಮ್ಮ ಸಂಸ್ಕೃತಿಯ ಒಳ ಜಗತ್ತನ್ನು ಬಿಚ್ಚಿಟ್ಟಿವೆ. ಯುದ್ಧವು ಅನಿವಾರ್ಯವಾದಾಗ ಮಾತ್ರ ನಡೆಯಬೇಕು ಎಂಬ ಸ್ಪಷ್ಟ ಸಂದೇಶವಿದೆ ಮಹಾಭಾರತದಲ್ಲಿ. ಅರ್ಜುನನ ಮನಸ್ಸಿನಲ್ಲಿ ಹುಟ್ಟಿದ ಸಂದೇಹವು, ಯುದ್ಧದ ನೈತಿಕತೆ ಬಗ್ಗೆ ಇಂದಿಗೂ ಪ್ರಸ್ತುತವಾದ ಪ್ರಶ್ನೆ. ಅದಕ್ಕೆ ಕೃಷ್ಣ ನೀಡಿದ ಉಪದೇಶ (ಭಗವದ್ಗೀತೆ), ಯುದ್ಧವನ್ನು ಕರ್ತವ್ಯದ ಚೌಕಟ್ಟಿನಲ್ಲಿ ಅರ್ಥೈಸುತ್ತದೆ.
ನ್ಯಾಯಕ್ಕಾಗಿ ಹೋರಾಟ ಮಾಡಿದರೂ, ಹಿಂಸೆ ನ್ಯಾಯವಾಗುತ್ತದೆಯೇ? ಎನ್ನುವ ಗೊಂದಲಕ್ಕೆ, “ಸ್ವಾರ್ಥಕ್ಕಾಗಿ ಅಲ್ಲದ, ಸಮತೋಲನಕ್ಕಾಗಿ ನಡೆಯುವ ‘ನಿಷ್ಕಾಮ ಕರ್ಮ’ ಕರ್ತವ್ಯ ಆಗುತ್ತದೆ" ಎನ್ನುವ ಸಮಾಧಾನ ಸಿಗುತ್ತದೆ. ‘ಹಿಂಸೆ ನ್ಯಾಯವಾಗಲಾರದು’ ಎನ್ನುವ ನಿಲುವು ತಾಳಿ, ಅಹಿಂಸಾವಾದಿಗಳಾಗಿ ಕುಳಿತು ಬಿಟ್ಟರೆ, ಅನ್ಯಾಯವೇ ವಿಜೃಂಭಿಸಿ, ಮತ್ತಷ್ಟು ಹಿಂಸೆಗೆ ದಾರಿ ಮಾಡಿ ಕೊಟ್ಟುಬಿಡುತ್ತದೆ. ಕುರುಕ್ಷೇತ್ರ ಕಲಿಸಿದ ಪಾಠ “ಯುದ್ಧವು ಕೊನೆಯ ಆಯ್ಕೆಯಾಗಿರಬೇಕು, ಮೊದಲ ಪರಿಹಾರವಲ್ಲ..."