ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ

ಇಂಥ ಪ್ರತಿಕ್ರಿಯೆಗಳು ಬರಹಗಾರರ ಮೇಲೆ, ಸಾರ್ವಜನಿಕರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದೇ ಸಂದರ್ಭ ದಲ್ಲಿ, ಓದುಗರಿಗೆ ಪ್ರತಿವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಲೇಖಕರಿಗೆ ಸ್ಪಷ್ಟೀಕರಣ ನೀಡಲು ಸಮಾನ ಅವಕಾಶವನ್ನು ಒದಗಿಸುವ ಕನ್ನಡದ ದೈನಿಕಗಳಲ್ಲಿ ‘ವಿಶ್ವವಾಣಿ’ ಪತ್ರಿಕೆ ಪ್ರಮುಖ ವೇದಿಕೆಯಾಗಿರುವುದು ಅಭಿನಂದನೀಯ.

K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ

-

Ashok Nayak
Ashok Nayak Mar 21, 2026 8:32 AM

ಸೃಷ್ಟೀಕರಣ

ಕೆ.ವಿ.ಚಂದ್ರಮೌಳಿ

ಇಂಧನ ಸುಧಾರಣೆಗಳ ಬುನಾದಿ: ಯುಪಿಎ ಕಾಲದ ನೀತಿಗಳ ವಾಸ್ತವ ವಿಶ್ಲೇಷಣೆ’ ಶೀರ್ಷಿಕೆ ಯ ನನ್ನ ಲೇಖನದ ಬಗ್ಗೆ (ಮಾ.16) ಸಾಮಗ ದತ್ತಾತ್ರಿ ಅವರು ನೀಡಿದ ಪ್ರತಿಕ್ರಿಯೆಯನ್ನು (ಮಾ.17) ನಾನು ಗೌರವದಿಂದ ಓದಿದ್ದೇನೆ. ಸಾರ್ವಜನಿಕ ಚರ್ಚೆಯಲ್ಲಿ ಭಿನ್ನಾಭಿಪ್ರಾಯ ಗಳು ಸಹಜ.

ಇಂಥ ಪ್ರತಿಕ್ರಿಯೆಗಳು ಬರಹಗಾರರ ಮೇಲೆ, ಸಾರ್ವಜನಿಕರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದೇ ಸಂದರ್ಭ ದಲ್ಲಿ, ಓದುಗರಿಗೆ ಪ್ರತಿವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಲೇಖಕರಿಗೆ ಸ್ಪಷ್ಟೀಕರಣ ನೀಡಲು ಸಮಾನ ಅವಕಾಶವನ್ನು ಒದಗಿಸುವ ಕನ್ನಡದ ದೈನಿಕಗಳಲ್ಲಿ ‘ವಿಶ್ವವಾಣಿ’ ಪತ್ರಿಕೆ ಪ್ರಮುಖ ವೇದಿಕೆಯಾಗಿರುವುದು ಅಭಿನಂದನೀಯ.

ಮೊದಲು, ನನ್ನ ವಿಶ್ಲೇಷಣೆ ‘ಸುದೂರ ನಿಂತು ಮಾಡಿದ್ದು’ ಎಂಬ ದತ್ತಾತ್ರಿಯವರ ಅಭಿಪ್ರಾಯದ ಬಗ್ಗೆ: ನನ್ನ ಲೇಖನವು ಊಹೆಗಳ ಮೇಲೆ ಆಧಾರಿತವಲ್ಲ; ಅದು ಲಭ್ಯ ವಿರುವ ಅಂಕಿ-ಅಂಶಗಳು, ಬಜೆಟ್ ದಾಖಲೆಗಳು ಮತ್ತು ಆರ್ಥಿಕ ಪ್ರವೃತ್ತಿಗಳ ವಿಶ್ಲೇಷಣೆಯ ಮೇಲೆ ನಿಂತಿದೆ.

ಅದು ವಿಚಾರವನ್ನು ಸಮಗ್ರವಾಗಿ, ದೀರ್ಘಾವಧಿಯ ಪರಿಣಾಮಗಳೊಂದಿಗೆ ನೋಡುವ ಪ್ರಯತ್ನವೇ ಹೊರತು, ಮೇಲ್ಮಟ್ಟದ ವಿಮರ್ಶೆಯಲ್ಲ. ಈ ಸಂದರ್ಭದಲ್ಲಿ, ದತ್ತಾತ್ರಿಯ ವರೊಂದಿಗೆ ನನ್ನ ಭಿನ್ನಾಭಿಪ್ರಾಯ ಇದ್ದರೂ, ಅವರ ಅಭಿಪ್ರಾಯಗಳನ್ನು ಗೌರವಿಸುತ್ತಾ, We may agree to disagree ಎಂಬ ಮನೋಭಾವವೇ ಆರೋಗ್ಯಕರ ಸಾರ್ವಜನಿಕ ಚರ್ಚೆ ಯ ಲಕ್ಷಣವೆಂದು ನಾನು ನಂಬುತ್ತೇನೆ.

ಇದನ್ನೂ ಓದಿ: Dr Vijay Darda Column: ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ತೆರಿಗೆ ಏರಿಕೆ ಮತ್ತು ಜಾಗತಿಕ ಬೆಲೆ ಇಳಿಕೆ

2014 ರಿಂದ 2020ರವರೆಗಿನ ಅವಧಿಯಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವು ನಿರಂತರವಾಗಿ ಏರಿಕೆಯಾಗಿದೆ. ಇದು ವಿರೋಧಾ ಭಾಸವಲ್ಲದೆ ಮತ್ತೇನು? ಅಂಕಿ-ಅಂಶಗಳು ಸ್ಪಷ್ಟವಾಗಿ ತೋರಿಸುವಂತೆ ಜಾಗತಿಕ ಬೆಲೆಗಳು ಸುಮಾರು ಶೇ.50-60ರಷ್ಟು ಇಳಿದಿದ್ದರೂ, ತೆರಿಗೆಗಳು 3 ರಿಂದ 8 ಪಟ್ಟು ಹೆಚ್ಚಳ ಕಂಡಿವೆ. ಹೀಗಾಗಿ, ಗ್ರಾಹಕರಿಗೆ ಸಿಗಬೇಕಾದ ಲಾಭವನ್ನು ತೆರಿಗೆಗಳ ಮೂಲಕ ಸರಕಾರವೇ ತನ್ನತ್ತ ಕೇಂದ್ರೀಕರಿಸಿದೆ.

ತೈಲ ಬಾಂಡ್‌ಗಳು: ಹೊರೆ ಮತ್ತು ವ್ಯಾಪ್ತಿ ತೈಲ ಬಾಂಡ್‌ಗಳನ್ನು ತೆರಿಗೆ ಏರಿಕೆಯ ಪ್ರಮುಖ ಕಾರಣವೆಂದು ದತ್ತಾತ್ರಿ ಅವರು ಉಲ್ಲೇಖಿಸುತ್ತಾರೆ. ಯುಪಿಎ ಕಾಲದಲ್ಲಿ ಸುಮಾರು 1.48 ಲಕ್ಷ ಕೋಟಿ ರು. ಮೌಲ್ಯದ ತೈಲ ಬಾಂಡ್‌ಗಳನ್ನು ಹೊರತಂದಿದ್ದು ಸತ್ಯ. ಬಡ್ಡಿ ಸೇರಿ ಒಟ್ಟು ಬಾಧ್ಯತೆ ಹೆಚ್ಚಾಗಿದೆ ಎಂಬುದೂ ಸತ್ಯ. ಆದರೆ, ಈ ಮರುಪಾವತಿ ಒಂದು ವರ್ಷದ ಹೊರೆ ಅಲ್ಲ; ಅದು ಹಲವು ವರ್ಷಗಳಲ್ಲಿ ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ. ಇದನ್ನು ಇಂಧನ ತೆರಿಗೆಗಳಿಂದ ಬಂದ ಆದಾಯದೊಂದಿಗೆ ಹೋಲಿಸಿದರೆ ಚಿತ್ರ ಇನ್ನಷ್ಟು ಸ್ಪಷ್ಟವಾಗುತ್ತದೆ.

2014-2021ರ ಅವಧಿಯ ಅಂಕಿ-ಅಂಶಗಳನ್ನು ಕೂಲಂಕಷವಾಗಿ ಅವಲೋಕಿಸಿದಾಗ, ತೆರಿಗೆ ಸಂಗ್ರಹಣೆಯ ಏರಿಕೆಯು ತೈಲ ಬಾಂಡ್‌ಗಳ ಮರುಪಾವತಿ ಅಗತ್ಯಕ್ಕಿಂತ ಬಹಳ ಹೆಚ್ಚಾಗಿ ರುವುದು ಸ್ಪಷ್ಟವಾಗುತ್ತದೆ. ಹೀಗಾಗಿ, ತೈಲ ಬಾಂಡ್‌ಗಳನ್ನು ಏಕೈಕ ಅಥವಾ ಪ್ರಮುಖ ಕಾರಣವೆಂದು ತೋರಿಸುವುದು ವಾಸ್ತವ ಚಿತ್ರಣವನ್ನು ಸರಳೀಕರಿಸುವಂತಾಗಿದೆ.

ನೀತಿ ಆಯ್ಕೆ: ಅನಿವಾರ್ಯತೆ ಅಲ್ಲ ಯುಪಿಎ ಕಾಲದಲ್ಲಿ, ಜಾಗತಿಕ ಬೆಲೆ ಏರಿಕೆಯ ಸಂದರ್ಭದಲ್ಲಿ ಸಬ್ಸಿಡಿ ಮೂಲಕ ಗ್ರಾಹಕರಿಗೆ ತಾತ್ಕಾಲಿಕ ರಕ್ಷಣೆಯನ್ನು ಒದಗಿಸ ಲಾಯಿತು. ಇದು ಒಂದು ಸಾಮಾಜಿಕ-ಆರ್ಥಿಕ ನೀತಿ ಆಯ್ಕೆ. ನಂತರದ ಅವಧಿಯಲ್ಲಿ, ಜಾಗತಿಕ ಬೆಲೆ ಇಳಿದಾಗ, ಅದೇ ಲಾಭವನ್ನು ಗ್ರಾಹಕರಿಗೆ ಹಂಚಿಕೊಳ್ಳುವ ಅವಕಾಶವಿತ್ತು.

ಆದರೆ, ತೆರಿಗೆಗಳ ಮೂಲಕ ಅದನ್ನು ಸರಕಾರದ ಆದಾಯವಾಗಿ ಪರಿವರ್ತಿಸಲಾಯಿತು. ಇದನ್ನು ಅನಿವಾರ್ಯತೆ ಎಂದು ವರ್ಣಿಸುವುದಕ್ಕಿಂತ, ಸ್ಪಷ್ಟವಾದ ರಾಜಸ್ವ ಕೇಂದ್ರೀಕೃತ ನೀತಿ ಆಯ್ಕೆ ಎಂದು ನೋಡುವುದು ಹೆಚ್ಚು ಸೂಕ್ತ.

ಗಮನಿಸಬೇಕಾದ ಅಂಶ

ಇಂಧನದ ಬೆಲೆ ಇಳಿಕೆಯ ಲಾಭವನ್ನು ಹಂಚಿಕೊಂಡಿದ್ದರೆ, ಸಾರಿಗೆ ವೆಚ್ಚ ಕಡಿಮೆ ಯಾಗುತ್ತಿತ್ತು ಮತ್ತು ಸಾಮಾನ್ಯ ಜನರ ಖರೀದಿ ಶಕ್ತಿ ಹೆಚ್ಚುತ್ತಿತ್ತು. ಈ ಸಾಧ್ಯತೆಗಳನ್ನು ಕಡೆಗಣಿಸಿರುವುದು ಚರ್ಚೆಗೆ ಅರ್ಹವಾದ ಅಂಶ. ಸಾಮಗ ದತ್ತಾತ್ರಿಯವರ ಅಭಿಪ್ರಾಯ ಗಳನ್ನು ನಾನು ಗೌರವಿಸುತ್ತೇನೆ. ಆದರೆ, ನನ್ನ ವಿಶ್ಲೇಷಣೆ ಇರುವುದು ದೂರದ ಊಹೆಗಳ ಮೇಲೆ ಅಲ್ಲ; ಬದಲಿಗೆ ಅದು ಅಂಕಿ-ಅಂಶಗಳ ಆಧಾರದ ಮೇಲೆ, ಸಮಗ್ರ ದೃಷ್ಟಿಯಿಂದ ಮಾಡಿದ ಪರಿಶೀಲನೆ. ವಿಚಾರವನ್ನು ಬಹುಮುಖವಾಗಿ ನೋಡುವ ಪ್ರಯತ್ನವನ್ನು ‘ಸುದೂರ ನಿಲುವು’ ಎಂದು ಅರ್ಥೈಸುವುದು ಅಲ್ಪೀಕರಣವಾಗಬಹುದು.

ಸಾರಾಂಶವಾಗಿ ಹೇಳುವುದಾದರೆ, ತೈಲ ಬಾಂಡ್ʼಗಳು ಒಂದು ಹಿನ್ನೆಲೆ ಅಂಶವಾಗಿರ ಬಹುದು; ಆದರೆ ಇಂಧನ ತೆರಿಗೆ ಏರಿಕೆ ಅನಿವಾರ್ಯತೆಯ ಫಲವಲ್ಲ - ಅದು ಸರಕಾರದ ಸ್ಪಷ್ಟವಾದ ನೀತಿ ಆಯ್ಕೆ.

(ಲೇಖಕರು ಬಾಯ್ಲರ್ ಕಾರ್ಯಾಚರಣೆಗಳ ನಿವೃತ್ತ

ಉಪ ನಿರ್ದೇಶಕರು)

(ಈ ಸಂವಾದವನ್ನು ಇಲ್ಲಿಗೆ

ಮುಕ್ತಾಯಗೊಳಿಸಲಾಗಿದೆ)