ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ

ಕರ್ನಾಟಕದ ಹೆಮ್ಮೆಯ ಈ ಪ್ರತಿಷ್ಠಿತ ಅರಣ್ಯ ತಾಣಗಳು ಕೇವಲ ಪ್ರವಾಸಿ ಆಕರ್ಷಣೆಗಳಲ್ಲ; ಅವು ಸಂರಕ್ಷಣೆ, ಸಂಶೋಧನೆ, ಸ್ಥಳೀಯ ಉದ್ಯೋಗ ಮತ್ತು ರಾಜ್ಯದ ಪರಿಸರ-ಆರ್ಥಿಕತೆಯ ಅವಿಭಾಜ್ಯ ಅಂಗಗಳೂ ಹೌದು. ಕರ್ನಾಟಕ ಅರಣ್ಯ ಪ್ರವಾಸೋದ್ಯಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿರುವ ಸಂದರ್ಭದಲ್ಲಿ, ಇಲ್ಲಿನ ನೀತಿಗಳಲ್ಲಿ ಈ ರೀತಿಯ ಮೌಢ್ಯ ಏಕೆ? ಎಂಬ ಪ್ರಶ್ನೆಯು ಕೂಲಿ ಕಾರ್ಮಿಕರಿಂದ ಹಿಡಿದು ಪ್ರವಾಸೋದ್ಯಮ ಉದ್ಯಮಿಗಳವರೆಗೂ ಕಾಡುತ್ತಿದೆ.

ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ

-

Ashok Nayak
Ashok Nayak Feb 11, 2026 8:59 AM

ಅಭಿಮತ

ಲಯನ್‌ ಕೆ. ರಾಧಾಕೃಷ್ಣ ಹೊಳ್ಳ

ಬೇಸಗೆಯ ಸಮಯದಲ್ಲಿ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಚಟುವಟಿಕೆಗಳಿಂದ ಕಾಡ್ಗಿಚ್ಚು, ವನ್ಯಜೀವಿಗಳಿಗೆ ಅಪಾಯ ಉಂಟಾಗಬಹುದು ಎಂಬ ಕಾರಣ ನೀಡಿ ರಾಜ್ಯದ ಬಹುತೇಕ ಕಾಡು-ಮೇಡುಗಳಲ್ಲಿ ನಿರ್ಬಂಧ ಹೇರಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮಕ್ಕೆ ತರ್ಕವಿದೆ.

ಆದರೆ ವಿಚಿತ್ರವೆಂದರೆ, ಬೇಸಗೆಗೂ ಮುನ್ನವೇ, ಡಿಸೆಂಬರ್ ತಿಂಗಳಿಂದಲೇ ಆರಂಭವಾಗುವ ಪ್ರವಾಸಿಗರ ಸೀಸನ್‌ನಲ್ಲೇ, ಪ್ರವಾಸಿಗರ ಅತಿ ಪ್ರಿಯ ತಾಣಗಳಾದ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸುರಕ್ಷಿತ, ನಿಯಂತ್ರಿತ ಮತ್ತು ಮೇಲ್ವಿ ಚಾರಣೆಯಲ್ಲಿರುವ ಅರಣ್ಯ ಸಫಾರಿಗಳನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದು ಎಷ್ಟರ ಮಟ್ಟಿಗೆ ವೈಜ್ಞಾನಿಕ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

‘ಬೆಕ್ಕಿಗೆ ಚೆಲ್ಲಾಟವಾದರೆ, ಇಲಿಗೆ ಪ್ರಾಣಸಂಕಟ’ ಎಂಬ ಮಾತಿನಂತೆ, ಈ ನಿರ್ಧಾರವು ಪ್ರವಾಸೋ ದ್ಯಮವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಗಳಿಗೆ ಸಂಕಷ್ಟವನ್ನು ತಂದಿದೆ. ಆದರೆ ವ್ಯವಸ್ಥೆಗೆ ‘ಇದು ಸುಲಭ ಪರಿಹಾರ’ ಎಂಬ ಭಾವನೆ ಮೂಡಿಸುತ್ತದೆ.

ಕರ್ನಾಟಕದ ಹೆಮ್ಮೆಯ ಈ ಪ್ರತಿಷ್ಠಿತ ಅರಣ್ಯ ತಾಣಗಳು ಕೇವಲ ಪ್ರವಾಸಿ ಆಕರ್ಷಣೆಗಳಲ್ಲ; ಅವು ಸಂರಕ್ಷಣೆ, ಸಂಶೋಧನೆ, ಸ್ಥಳೀಯ ಉದ್ಯೋಗ ಮತ್ತು ರಾಜ್ಯದ ಪರಿಸರ-ಆರ್ಥಿಕತೆಯ ಅವಿಭಾಜ್ಯ ಅಂಗಗಳೂ ಹೌದು. ಕರ್ನಾಟಕ ಅರಣ್ಯ ಪ್ರವಾಸೋದ್ಯಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಇಲ್ಲಿನ ನೀತಿಗಳಲ್ಲಿ ಈ ರೀತಿಯ ಮೌಢ್ಯ ಏಕೆ? ಎಂಬ ಪ್ರಶ್ನೆಯು ಕೂಲಿ ಕಾರ್ಮಿಕರಿಂದ ಹಿಡಿದು ಪ್ರವಾಸೋದ್ಯಮ ಉದ್ಯಮಿಗಳವರೆಗೂ ಕಾಡುತ್ತಿದೆ.

ಇದನ್ನೂ ಓದಿ: Tigers in Safari: ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಅಂತಾರಾಷ್ಟ್ರೀಯ ಪ್ರವಾಸಿಗರ ಕೈಪಿಡಿಯಲ್ಲಿ ರಂಜಿತವಾದ ಸಫಾರಿಗೆ ಇತಿಹಾಸ ಇಲ್ಲವೇ? ಬಂಡಿಪುರವು 1931ರಲ್ಲಿ ವೇಣುಗೋಪಾಲ ವನ್ಯಜೀವಿ ಉದ್ಯಾನವಾಗಿ ಆರಂಭವಾಗಿ, 1974ರಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿತವಾಯಿತು. 1970ರ ದಶಕದಿಂದಲೇ ಇಲ್ಲಿ ಪರಿಸರ ಸ್ನೇಹಿ, ನಿಯಂತ್ರಿತ ಸಫಾರಿ ವ್ಯವಸ್ಥೆ ರೂಪುಗೊಂಡಿದೆ.

ನಾಗರಹೊಳೆಯು 1955ರಲ್ಲಿ ವನ್ಯಜೀವಿ ಅಭಯಾರಣ್ಯವಾಗಿ ಆರಂಭಗೊಂಡು, 1983ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಹೆಸರು ಮಾಡಿತು ಮತ್ತು 1970-80ರ ದಶಕದಿಂದ ವ್ಯವಸ್ಥಿತ ಸಫಾರಿ ಮೂಲಸೌಕರ್ಯವು ಬೆಳೆಯಿತು.

ಕರ್ನಾಟಕ ಅರಣ್ಯ ಇಲಾಖೆಯು ಬಸ್ ಸಫಾರಿಗಳನ್ನು ನಡೆಸುತ್ತಿದ್ದರೆ, ಒಜ್ಝಛಿ ಔಟbಜಛಿo Zb ಛಿoಟ್ಟಠಿo ಜೀಪ್ ಸಫಾರಿಗಳನ್ನು ನಡೆಸುತ್ತಿದೆ. ಇವೆಲ್ಲವೂ ನಿರ್ವಹಿಸಲ್ಪಡುತ್ತಿರುವುದು ಕಟ್ಟು ನಿಟ್ಟಿನ ಮಾರ್ಗಸೂಚಿ, ಮೇಲ್ವಿಚಾರಣೆ ಮತ್ತು ಜವಾಬ್ದಾರಿಯುತ ವ್ಯವಸ್ಥೆಯಡಿ. ಹೀಗಿರುವಾಗ, ಇಲ್ಲಿ ಮೂಡುವ ಪ್ರಶ್ನೆಗಳೆಂದರೆ- ಅರಣ್ಯಗಳು, ಸಫಾರಿಗಳು, ಕಡಲತೀರಗಳು, ಸಾಹಸ ಕ್ರೀಡಾ ಪ್ರದೇಶಗಳು ಎಲ್ಲವೂ ಮಾನವ ಮತ್ತು ಪ್ರಾಣಿ ಸಮುದಾಯಗಳ ಸಹ-ಅಸ್ತಿತ್ವದಲ್ಲಿ ಬೆಳೆಯುತ್ತಿರುವಾಗ, ಸಂಪೂರ್ಣ ನಿರ್ಬಂಧವೇ ಇಲ್ಲಿ ಪರಿಹಾರವೇ? ಅಥವಾ ಅಪಾಯವನ್ನು ಕಡಿತಗೊಳಿಸುವ ವೈಜ್ಞಾನಿಕ ನಿರ್ವಹಣೆ ಸಾಧ್ಯವೇ? ಎಂಬುದು.

ವೈಜ್ಞಾನಿಕ ಮತ್ತು ಸಮತೋಲನದ ಪರ್ಯಾಯ ದಾರಿಗಳ ಕಡೆಗೆ ನೋಡುವುದಾದರೆ, ‘ಸೀಸನಲ್ ಕ್ಯಾಂಪಿಂಗ್’ಗೆ ಅಂದರೆ ದಿನಕ್ಕೆ ನಿರ್ದಿಷ್ಟ ಸಂಖ್ಯೆಯ ವಾಹನಗಳು ಮತ್ತು ಪ್ರವಾಸಿಗರಿಗೆ ಮಾತ್ರ ಅವಕಾಶ ಕೊಡಲಿ. ‘ಟೈಮ್-ಸ್ಲಾಟ್ ಸಫಾರಿ’ ಅಂದರೆ ಮಧ್ಯಾಹ್ನದ ಗರಿಷ್ಠ ಅಪಾಯದ ಸಮಯ ದಲ್ಲಿ ಸಫಾರಿಗಳಿಗೆ ವಿರಾಮ ನೀಡಲಿ.

ಬೆಂಕಿಯ ಅಪಾಯ ಹೆಚ್ಚಿರುವ ದಿನಗಳಲ್ಲಿ ಮಾತ್ರ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಲಿ. ಚಾಲಕರು ಮತ್ತು ಗೈಡ್‌ಗಳಿಗೆ ಅಗ್ನಿ ಸುರಕ್ಷತೆಗೆ ಸಂಬಂಽಸಿ ಕಡ್ಡಾಯ ತರಬೇತಿಯನ್ನು ನೀಡು ವಂತಾಗಲಿ ಮತ್ತು ನಿಯಮಗಳ ಉಲ್ಲಂಘನೆಗೆ ದಂಡವನ್ನು ವಿಧಿಸುವಂತಾಗಲಿ.

‘ಸ್ಥಳೀಯ ಪಾಲುದಾರಿಕೆ’ ಪರಿಕಲ್ಪನೆ ಅಡಿಯಲ್ಲಿ ಗ್ರಾಮಸ್ಥರನ್ನು ‘ವಾಚ್-ಆಂಡ್-ವಾರ್ಡ್’, ‘ಫಾರ್-ಲೈನ್’ ನಿರ್ವಹಣೆಯಲ್ಲಿ ಸೇರಿಸಿಕೊಳ್ಳುವಂತಾಗಲಿ. ಪ್ರವಾಸಿಗರನ್ನು ಸೆಳೆಯುವ ಇಂಥ ಮಂತ್ರವು ವಿಧಾನಸೌಧಕ್ಕೆ ಅದೇಕೆ ಕೇಳಿಸುತ್ತಿಲ್ಲವೋ ಗೊತ್ತಿಲ್ಲ.

ರಾಜ್ಯದ ಹೆಮ್ಮೆಯ ಅರಣ್ಯ ತಾಣಗಳನ್ನು ಪ್ರವಾಸಿಗರಿಂದ ಸಂಪೂರ್ಣವಾಗಿ ದೂರ ಇಡುವು‌ ದರಿಂದ ಸಂರಕ್ಷಣೆ ಸಾಧ್ಯವಿಲ್ಲ. ನಿಯಂತ್ರಿತ ಪ್ರವೇಶ, ವಿಜ್ಞಾನಾಧಾರಿತ ನಿರ್ಧಾರಗಳು ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವೇ ಈ ಸಮಸ್ಯೆಗೆ ಇರುವ ದೀರ್ಘಕಾಲೀನ ಪರಿಹಾರ. ಸುರಕ್ಷಿತ ಸಫಾರಿಗಳನ್ನು ನಿಲ್ಲಿಸುವುದು ಇಲ್ಲಿ ಉತ್ತರವಲ್ಲ, ಸುರಕ್ಷಿತವಾಗಿ, ಜವಾಬ್ದಾರಿಯಿಂದ ನಡೆಸುವುದೇ ಇದಕ್ಕೆ ಉತ್ತರ.

(ಲೇಖಕರು ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ)