ʻಕಾಲಿಗೆ ಟ್ರೀಟ್‌ಮೆಂಟ್ ತೆಗೆದುಕೊಳ್ಳೋಕೆ ಟೈಮಿಲ್ಲ, ಡೇಟಿಂಗ್ ಯಾವಾಗ ಮಾಡಲಿ?ʼ; ವದಂತಿ ಹಬ್ಬಿಸಿದವರಿಗೆ ಮೃಣಾಲ್ ಠಾಕೂರ್ ತಿರುಗೇಟು!
ನಟಿ ಮೃಣಾಲ್ ಠಾಕೂರ್ ಅವರು ತಮಿಳು ನಟ ಧನುಷ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮಗೆ ಕಾಲಿನ ಲಿಗಮೆಂಟ್ ಹರಿದಿದ್ದು, ಚಿಕಿತ್ಸೆ ಪಡೆಯಲೂ ಸಮಯವಿಲ್ಲದಿರುವಾಗ ಡೇಟಿಂಗ್ ಮಾಡಲು ಎಲ್ಲಿಂದ ಟೈಮ್ ಸಿಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
-
ಬಹುಭಾಷಾ ನಟಿ ಮೃಣಾಲ್ ಠಾಕೂರ್ ಅವರು ಈಚೆಗೆ ಡೇಟಿಂಗ್ ವಿಚಾರಕ್ಕೆ ಭಾರಿ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ತಮಿಳು ನಟ ಧನುಷ್ ಅವರೊಂದಿಗೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ವದಂತಿಯಂತೂ ಭಾರಿ ಟ್ರೆಂಡಿಂಗ್‌ನಲ್ಲಿತ್ತು. ಇದರ ಬಗ್ಗೆ ಈ ಹಿಂದೆ ಮೃಣಾಲ್ ಠಾಕೂರ್ ಅಲ್ಲಗಳೆದಿದ್ದರು. ಇದೀಗ ಈ ಡೇಟಿಂಗ್ ಗಾಸಿಪ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತಮಗೆ ಇಂಥದ್ದಕ್ಕೆಲ್ಲಾ ಟೈಮೇ ಇಲ್ಲ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
ನನಗೆ ಡೇಟಿಂಗ್ ಮಾಡಲು ಸಮಯವಿಲ್ಲ
"ನನ್ನ ವೈಯಕ್ತಿಕ ಜೀವನದ ಸುದ್ದಿಯು ಹೆಡ್‌ಲೈನ್ ಆಗೋದು ನನಗಿಷ್ಟವಿಲ್ಲ. ನಾನು ಪರದೆಯ ಮೇಲೆ ಮಾಡುವ ಕೆಲಸದಿಂದ ಗುರುತಿಸಿಕೊಳ್ಳಲು ಬಯಸುತ್ತೇನೆ ವಿನಃ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಕಾರಣಕ್ಕಾಗಿ ಅಲ್ಲ. ನಿಜ ಹೇಳಬೇಕೆಂದರೆ ನನಗೆ ಡೇಟಿಂಗ್ ಮಾಡಲು ಸಮಯವೇ ಇಲ್ಲ" ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ.
Star Fashion 2026: ಸುತ್ತುಕೊಂಡಂತಿರುವ ಮೃಣಾಲ್ ಠಾಕೂರ್ ಧರಿಸಿದ ಡ್ರೇಪ್ಡ್ ಮಿನಿ ಡ್ರೆಸ್
ಟ್ರೀಟ್‌ಮೆಂಟ್‌ಗೆ ಟೈಮ್ ಸಿಕ್ತಿಲ್ಲ!
"ನನ್ನ ಕಾಲಿನ ಲಿಗಮೆಂಟ್ ಹರಿದಿದೆ (Ligament tear). ಅದು ಎಕ್ಸ್-ರೇ ಮಾಡಿಸಿದ ಮೇಲೆ ನನಗೆ ಗೊತ್ತಾಯಿತು. ಅದಕ್ಕೀಗ ನಾನು ಚಿಕಿತ್ಸೆ ಪಡೆಯಬೇಕಿದೆ. ಆದರೆ ಆ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದಕ್ಕೂ ನನಗೀಗ ಸಮಯ ಸಿಗುತ್ತಿಲ್ಲ. ಇನ್ನು ವೈಯಕ್ತಿಕ ಜೀವನದ ಮಾತು ಎಲ್ಲಿಂದ ಬಂತು" ಎಂದು ಅವರು ಪ್ರಶ್ನಿಸಿದ್ದಾರೆ.
ಜನರು ಇದನ್ನೆಲ್ಲಾ ನಾನೇ ಮಾಡುತ್ತಿರುವೆ ಎಂದುಕೊಳ್ಳುತ್ತಾರೆ
"ನಾನು ಯಾರನ್ನೂ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಸಿನಿಮಾ ಬಿಡುಗಡೆಯ ಸಮಯದಲ್ಲಿ ಇಂತಹ ವದಂತಿಗಳು ಹರಡಿದರೆ ನನ್ನ ಕೆಲಸ ಮರೆಯಾಗುತ್ತದೆ. ಜನರು ಇದೆಲ್ಲಾ ನನ್ನ ಪಿಆರ್ ತಂಡ ಮಾಡುತ್ತಿರುವ ಕೆಲಸ ಎಂದು ಭಾವಿಸುತ್ತಾರೆ. ಆದರೆ ಇಂತಹ ವದಂತಿಗಳಿಂದ ನನ್ನನ್ನು ರಕ್ಷಿಸಿಕೊಳ್ಳಲು ನಾನೇ ಈಗ ಪ್ರತ್ಯೇಕ ತಂಡವನ್ನು ನೇಮಿಸಿಕೊಳ್ಳಬೇಕಾಗಿದೆ" ಎಂದು ಮೃಣಾಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೃಣಾಲ್ ಠಾಕೂರ್ ಸಂದರ್ಶನ
“I want to be known for the work that I do. I don't want to be known for who is she dating.
— Whynot Cinemas (@whynotcinemass_) April 15, 2026
Trust me I don't have time to date. I have a ligament tear and after the X-ray, I haven't had time to go treat my leg.”
- Actress #MrunalThakur | #DACOIT pic.twitter.com/oo5cVyxtOV
"ನನ್ನ ಸ್ನೇಹಿತರು ನನಗೆ ಒಂದು ಹೂವು ನೀಡಿದರೂ, ಅದನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೇನೆ. ಹೀಗಿರುವಾಗ ನನಗೆ ಪ್ರೀತಿಯಾದರೆ, ಅದನ್ನು ನಾನು ಹೇಳುವುದಿಲ್ಲವೇ" ಎನ್ನುತ್ತಾರೆ ಮೃಣಾಲ್ ಠಾಕೂರ್. ಅಂದಹಾಗೆ, ಈ ವರ್ಷದ ಆರಂಭದಲ್ಲಿ ಮೃಣಾಲ್ ನಟನೆಯ 'ದೋ ದೀವಾನೆ ಶಹರ್ ಮೇ' ಚಿತ್ರ ಬಿಡುಗಡೆ ಆಗಿತ್ತು. ಆ ಸಮಯದಲ್ಲಿ, ಮೃಣಾಲ್ ಮತ್ತು ಧನುಷ್ ಕೆಲವು ತಿಂಗಳುಗಳಿಂದ ಡೇಟಿಂಗ್ ಮಾಡುತ್ತಿದ್ದು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಅಲ್ಲದೆ, ಕಳೆದ ವರ್ಷ 'ಸನ್ ಆಫ್ ಸರ್ದಾರ್ 2' ಚಿತ್ರದ ಪ್ರೀಮಿಯರ್‌ನಲ್ಲಿ ಮೃಣಾಲ್ - ಧನುಷ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದು ಈ ವದಂತಿಗಳಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು.