ಜನಪಥ
ರಾಘವ ಶರ್ಮ ನಿಡ್ಲೆ
ಆರ್‌ಜೆಡಿ-ಕಾಂಗ್ರೆಸ್ ನಡುವಿನ ಟಿಕೆಟ್ ಹಂಚಿಕೆ ಕಿತ್ತಾಟವು ಮಹಾಮೈತ್ರಿ ಬಿರುಕನ್ನು ಹೆಚ್ಚಿಸಿದೆ. 2020ರ ರಾಜ್ಯ ಚುನಾವಣೆಯಲ್ಲಿ ಆರ್‌ಜೆಡಿಯ ಅಧಿಕಾರದ ಹಾದಿಗೆ ಕಾಂಗ್ರೆಸ್ ಕಳಪೆ ಫಲಿತಾಂಶವೇ ಅಡ್ಡಿಯಾಗಿದ್ದರಿಂದ ಲಾಲು ಮತ್ತು ಪುತ್ರ ತೇಜಸ್ವಿಗೆ ಈಗಲೂ ಕಾಂಗ್ರೆಸ್‌ನದ್ದೇ ಚಿಂತೆ ಆಗಿ ಬಿಟ್ಟಿದೆ. ರಾಹುಲ್ ನಾಯಕತ್ವ ನೋಡಿ ಬಿಹಾರ ಜನ ಮತ ಹಾಕುತ್ತಾರೆ ಎಂಬ ವಿಶ್ವಾಸ ತೇಜಸ್ವಿ ಯಾದವ್‌ಗಾಗಲೀ ಅಥವಾ ಅಪ್ಪ ಲಾಲು ಪ್ರಸಾದ್ ಯಾದವ್‌ಗಾಗಲೀ ಇಲ್ಲ.
ಅದು 1940ರ ಕಾಲಘಟ್ಟ. ಅವಿಭಜಿತ ಬಿಹಾರದ ರಾಮ್‌ಗಢದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಆಯೋಜಿಸಲಾಗಿತ್ತು. ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಹೋರಾಟಕ್ಕೆ ಸಂಬಂಧಿಸಿ, ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಯವರ ಸಾಥಿಯಾಗಿದ್ದ ಮೌಲಾನ ಅಬುಲ್ ಕಲಾಂ ಆಜಾದ್ ನೇತೃತ್ವದಲ್ಲಿ ನಡೆಸಲಾದ ಐತಿಹಾಸಿಕ ಸಭೆ ಅದಾಗಿತ್ತು.
ಸ್ವಾತಂತ್ರ್ಯದ ಗುರಿ ಹೊಂದಿ, ನಾವು ನಡೆಯಬೇಕಾದ ಹಾದಿಯ ಬಗ್ಗೆ ಮಹಾತ್ಮ ಗಾಂಧಿ ಅವರೂ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಇದಾಗಿ 85 ವರ್ಷಗಳು ಕಳೆದಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಎಂಟೂವರೆ ದಶಕಗಳ ನಂತರ ಮತ್ತೊಮ್ಮೆ ಬಿಹಾರದಲ್ಲಿ, ಈ ಸೆಪ್ಟೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ, ಸೋನಿಯಾ ಗಾಂಧಿ ಮಾರ್ಗದರ್ಶನ ದೊಂದಿಗೆ ಸಿಡಬ್ಲ್ಯುಸಿ ಸಭೆ ನಡೆಸಿತು.
ಹಾಗಂತ, ಸ್ವಾತಂತ್ರ್ಯ ಸಂಗ್ರಾಮಕ್ಕೂ ಇದಕ್ಕೂ ಸಂಬಂಧವಿಲ್ಲ. ತನ್ನ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಮತ್ತು ಬಿಹಾರ ವಿಧಾನಸಭೆ ಚುನಾವಣೆಗೆ ಪೂರ್ವತಯಾರಿಗಾಗಿ ಕಾಂಗ್ರೆಸ್ ನಡೆಸಿದ ಸಭೆಯಾಗಿತ್ತು. ರಾಜ್ಯದಲ್ಲಿ ಬಲಹೀನಗೊಂಡ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಲು ರಾಜಧಾನಿ ಪಟನಾದ ಸದಾಖತ್ ಆಶ್ರಮದಲ್ಲಿ ಸಭೆ ನಡೆಸಲಾಯಿತು.
ಇದನ್ನೂ ಓದಿ: Raghava Sharma Nidle Column: ನ್ಯಾಯಮೂರ್ತಿಗಳ ಮೇಲಿನ ದಾಳಿ ಹೊಸತೇನಲ್ಲ. ಆದರೆ...
ಪಕ್ಷದ ಉನ್ನತಮಟ್ಟದ ಸಭೆಯನ್ನು ಪಟನಾದಲ್ಲಿ ನಡೆಸಿದ್ದರಿಂದ ರಾಜಕೀಯವಾಗಿ ಮತ್ತು ಐತಿಹಾಸಿಕವಾಗಿಯೂ ಅದಕ್ಕೆ ಮಹತ್ವ ಬಂದಿತ್ತು. 1940ರ ಸಭೆ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸಿದ್ದರೆ, ೨೦೨೫ರ ಸಭೆಯನ್ನು ‘ಭ್ರಷ್ಟ ಬಿಜೆಪಿಯಿಂದ ಮುಕ್ತಿ ಹೊಂದಲು ದೇಶ ನಡೆಸುತ್ತಿರುವ ಎರಡನೇ ಸ್ವಾತಂತ್ರ್ಯ ಹೋರಾಟ’ ಎಂಬುದಾಗಿ ಕಾಂಗ್ರೆಸ್ ಬಿಂಬಿಸಿತು.
1940 ಮತ್ತು 2025ರ ನಡುವಿನ ಮುಖ್ಯ ವ್ಯತ್ಯಾಸ ಏನೆಂದರೆ- ಅಂದು ಕಾಂಗ್ರೆಸ್‌ನಲ್ಲಿ ದೃಢ, ಸಮರ್ಥ ಮತ್ತು ಜನಸಮೂಹ ಸ್ವೀಕರಿಸುವ ನಾಯಕರ ದಂಡೇ ಇತ್ತು. ಇಂದು, ಚುನಾವಣೆ ಮೇಲೆ ಚುನಾವಣೆ ಸೋತರೂ ಒಂದೇ ಕುಟುಂಬಕ್ಕೇ ಅಂಟಿಕೊಂಡ ಹಾಗೂ ಜನಪ್ರಿಯತೆ ಗಳಿಸಲು ಹೆಣ ಗಾಡುತ್ತಿರುವ ನಾಯಕ ಮತ್ತು ನಾಯಕರಿದ್ದಾರೆ ಅಷ್ಟೇ.
ಇರಲಿ. ಮೊನ್ನೆ ಪಟನಾದಲ್ಲಿ ನಡೆದ ಸಭೆಯ ಹಿಂದೆ ಮತ್ತೊಂದು ಕಾರಣವೂ ಇದೆ. ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ಇಂಥದ್ದೇ ಮಾದರಿಯ ಸಿಡಬ್ಲ್ಯುಸಿ ಸಭೆಯನ್ನು ಹೈದರಾಬಾದಿ ನಲ್ಲಿ ಏರ್ಪಡಿಸಲಾಗಿತ್ತು. ನಂತರ ಸೋನಿಯಾ ಗಾಂಧಿ ಅವರು ಬೃಹತ್ ರಾಲಿ ನಡೆಸಿ, ಅಲ್ಲಿ ತಕ್ಕಮಟ್ಟಿಗೆ ಹವಾ ಎಬ್ಬಿಸುವುದರಲ್ಲಿ ಯಶಸ್ವಿಯಾಗಿದ್ದರು.
ಬಿಹಾರದಲ್ಲೂ ಇಂಥದ್ದೇನಾದರೂ ಮ್ಯಾಜಿಕ್ ಆಗಬಹುದಾ ಎಂಬ ಸಣ್ಣ ಆಸೆ ಕಾಂಗ್ರೆಸ್ಸಿಗರದ್ದು. ಆದರೆ, ತೆಲಂಗಾಣವೇ ಬೇರೆ, ಬಿಹಾರವೇ ಬೇರೆ. ೩೫ ವರ್ಷಗಳಿಂದ (1990ರಿಂದ) ಅಲ್ಲಿ ಮಕಾಡೆ ಮಲಗಿರುವ ಕಾಂಗ್ರೆಸ್‌ಗೆ ಆರ್‌ಜೆಡಿ ಪ್ರಭಾವಳಿಯ ಕಾರಣದಿಂದಲೂ ತಲೆ ಎತ್ತಲು ಸಾಧ್ಯವಾಗು ತ್ತಿಲ್ಲ.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ಹೊಸ ದಿಕ್ಕು ತೋರಿಸಬಲ್ಲ ನಾಯಕತ್ವ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಮೇಲಾಗಿ, ಸೀಟು ಹಂಚಿಕೆ ಸಂಬಂಧ ಆರ್‌ಜೆಡಿ-ಕಾಂಗ್ರೆಸ್ ನಡುವಿನ ಒಳಮುನಿಸುಗಳು ಬೀದಿರಂಪವಾಗುತ್ತಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಗೆ ಹಾನಿ ಮಾಡಲೂಬಹುದು.
ಇಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಈ ಬಾರಿ 61 ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ. ಆರ್‌ಜೆಡಿ ಜತೆ ಕೊನೆವರೆಗೆ ಗುದ್ದಾಡಿದರೂ, ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ 7 ಸೀಟು ಕಡಿಮೆ ಸಿಕ್ಕಿದೆ. 2020ರ ಚುನಾವಣೆಯಲ್ಲಿ 70 ಸೀಟುಗಳಲ್ಲಿ ಸ್ಪರ್ಧಿಸಿದ್ದ ‘ಹಸ್ತ’ಪಟುಗಳು ೧೯ರಲ್ಲಿ ಮಾತ್ರ ಗೆದ್ದಿದ್ದರು. ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ನಂತರದಲ್ಲಿ ನಿತೀಶ್ ಕುಮಾರ್ ರಾಜಕೀಯ ಅಧಿಪತ್ಯ ಆರಂಭವಾದಲ್ಲಿಂದ ಕಾಂಗ್ರೆಸ್‌ನ ರಾಜಕೀಯ ವರ್ಚಸ್ಸು ಪಾತಾಳಕ್ಕಿಳಿಯುತ್ತಾ ಬಂತು.
ಪ್ರಾದೇಶಿಕ ಪಕ್ಷಗಳನ್ನೇ ಅವಲಂಬಿಸಿ ತನ್ನ ಸೀಟುಗಳನ್ನು ವೃದ್ಧಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಅದು ಸಿಲುಕಿತು. ಈಗಲೂ ಒಬ್ಬನೇ ಒಬ್ಬ ಪ್ರಭಾವಿ, ಜನಸಮೂಹ ಒಪ್ಪಿಕೊಳ್ಳುವ ರಾಜ್ಯ ನಾಯಕ ನನ್ನು ರೂಪಿಸಲು ದಿಲ್ಲಿ ಹೈಕಮಾಂಡಿಗೆ ಸಾಧ್ಯವಾಗಿಲ್ಲ. ಹಾಗಂತ, ಈ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನದ್ದು ಒಂದೇ ಕಥೆ. 1990ರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಂದಿನ ಯುವ ನಾಯಕರಾದ ಲಾಲು ಯಾದವ್ ಮತ್ತು ನಿತೀಶ್ ಕುಮಾರ್ ಸೇರಿ ವಿವಿಧ ನಾಯಕರ ಹೋರಾಟ ನಡೆಸಿದ ಪರಿಣಾಮ ಕಾಂಗ್ರೆಸ್ ಬರೀ 79 ಸೀಟುಗಳಲ್ಲಷ್ಟೇ ಗೆದ್ದು ವಿಪಕ್ಷ ಸ್ಥಾನದಲ್ಲಿ ಕೂರುವಂತಾ ಗಿತ್ತು. ೫ ವರ್ಷಗಳ ನಂತರ ಲಾಲು ಏಕಚಕ್ರಾಧಿಪತ್ಯದ ಪರಿಣಾಮ 1995ರ ಚುನಾವಣೆಯಲ್ಲಿ ಕಾಂಗ್ರೆಸ್ ಸೀಟುಗಳ ಸಂಖ್ಯೆ 29ಕ್ಕಿಳಿಯಿತು.
ಈ ಸಂಖ್ಯೆ ಬಿಜೆಪಿಗಿಂತಲೂ ಕಡಿಮೆಯಾಗಿದ್ದರಿಂದ ವಿಪಕ್ಷ ಸ್ಥಾನವೂ ಕಾಂಗ್ರೆಸ್‌ನಿಂದ ಕೈ ಜಾರಿ ಹೋಗಿತ್ತು. 2000ದ ವರ್ಷದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 23 ಸ್ಥಾನಕ್ಕೆ ತಗ್ಗಿದ ಕಾಂಗ್ರೆಸ್, 2005ರಲ್ಲಿ ಬರೀ ೯ ಸೀಟು ಪಡೆದು ‘ಒಂದಂಕಿ ಪಾರ್ಟಿ’ ಎಂಬ ಕುಖ್ಯಾತಿಗೆ ಗುರಿಯಾಗಿ ನಗೆಪಾಟಲಿಗೀಡಾಯಿತು.
೨೦೦೫ರಲ್ಲಿ ಜೆಡಿಯು-ಬಿಜೆಪಿಯ ಎನ್‌ಡಿಎ ಮೈತ್ರಿಕೂಟವು ಲಾಲು ಚಕ್ರಾಧಿಪತ್ಯಕ್ಕೆ ಕಡಿವಾಣ ಹಾಕಿತ್ತು. ೨೦೧೦ರಲ್ಲಿ ೪ ಸೀಟಿಗೆ ಕುಸಿದ ಕಾಂಗ್ರೆಸ್, ಬಿಹಾರದಲ್ಲಿ ಯಾರಿಗೂ ಬೇಡವಾದ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿತು. ಆದರೆ, ೨೦೧೫ರ {ಲಿತಾಂಶ ಕಾಂಗ್ರೆಸ್‌ಗೆ ಜೀವಕಳೆ ತುಂಬಿ, ಹೊಸ ಹುರುಪು ಮೂಡಿಸಿತ್ತು.
೨೦೧೪ರ ಲೋಕಸಭೆ ಚುನಾವಣೆಗೆ ಮೋದಿ ನಾಯಕತ್ವವಿದ್ದುದರಿಂದ ಎನ್‌ಡಿಎಯಿಂದ ಹೊರಬಂದಿದ್ದ ನಿತೀಶ್ ಕುಮಾರ್, ೨೦೧೫ರ ರಾಜ್ಯ ಚುನಾವಣೆಗೆ ಆರ್‌ಜೆಡಿ ಜತೆ ಸೇರಿ ಮಹಾಮೈತ್ರಿ ರೂಪಿಸಿದ್ದರು. ಆಗ ನಿತೀಶ್-ಲಾಲು ಇಬ್ಬರ ವರ್ಚಸ್ಸನ್ನೂ ತನ್ನ ಏಳಿಗೆಗೆ ಬಳಸಿಕೊಂಡ ಕಾಂಗ್ರೆಸ್, ೪೧ ಸೀಟುಗಳಲ್ಲಿ ಸ್ಪರ್ಧಿಸಿ, ೨೭ನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ, ಎರಡೇ ವರ್ಷದಲ್ಲಿ ‘ಲಾಲು ಸಹವಾಸ ಸಾಕಪ್ಪಾ’ ಎಂದು ಹೈರಾಣಾಗಿದ್ದ ನಿತೀಶ್ ಕುಮಾರ್, ಎನ್‌ಡಿಎ ಸೇರಿಕೊಂಡಿದ್ದ ರಿಂದ ಕಾಂಗ್ರೆಸ್ ಮತ್ತೆ ಅಧಿಕಾರ ಕಳೆದುಕೊಂಡು ಮೂಲೆಗೆ ಸೇರಿತ್ತು.
2017ರಲ್ಲಿ ಬದಲಾದ ರಾಜಕೀಯ ಸನ್ನಿವೇಶ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತೆ ಜಯಭೇರಿ ಬಾರಿಸಿದ್ದರಿಂದ ‘ರಾಜಕೀಯ ಲವಲವಿಕೆ’ ಕಳೆದುಕೊಂಡ ಕಾಂಗ್ರೆಸ್, 2020ರ ರಾಜ್ಯ ಚುನಾವಣೆಯಲ್ಲಿ ತನ್ನ ಹೀನಾಯ ಫಲಿತಾಂಶದಿಂದಾಗಿ, ಅಧಿಕಾರಕ್ಕೇರುವ ಆರ್‌ಜೆಡಿ ಆಸೆಗೂ ತಣ್ಣೀರೆರಚಿ ಬಿಟ್ಟಿತು.
ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಕಾಂಗ್ರೆಸ್‌ನ ಕಳಪೆ ಪ್ರದರ್ಶನದಿಂದಾಗಿ 122ರ ಮ್ಯಾಜಿಕ್ ನಂಬರ್ ತಲುಪಲು ಬೆರಳೆಣಿಕೆ ಸೀಟುಗಳು ಕಡಿಮೆಯಾದವು. ಇದರಿಂದಾಗಿ ಆರ್‌ಜೆಡಿ ಮುಖಂಡರು, ಕಾರ್ಯಕರ್ತರು ನಿತ್ಯವೂ ಕೈ ನಾಯಕರಿಗೆ ಶಾಪ ಹಾಕುವಂತಾಯಿತು.
ಈ ಸಲದ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ದೇಶಾದ್ಯಂತ ‘ವೋಟ್ ಚೋರಿ’ ಅಭಿಯಾನ ತೀವ್ರಗೊಳಿಸಿ, ಬಿಹಾರದಲ್ಲೂ ಗದ್ದಲ ಎಬ್ಬಿಸಿದ್ದಾರೆ. ಹಾಗಂತ, ಇದು ಮತಗಳಾಗಿ ಪರಿವರ್ತನೆ ಯಾಗುವ ಲಕ್ಷಣ ಕಾಣುತ್ತಿಲ್ಲ. ಈ ಹಿಂದೆ ಅಂಬಾನಿ-ಅದಾನಿ ಹೆಸರನ್ನು ಪ್ರಧಾನಿ ಮೋದಿಗೆ ಜೋಡಿಸಿ, ‘ಬಿಜೆಪಿಯು ಜನವಿರೋಽ ಮತ್ತು ಉದ್ಯಮಿಗಳ ಪರ’ ಎಂದು ಬಿಂಬಿಸಿದರೂ, ರಾಹುಲ್ ಗಾಂಧಿ ಪ್ರೇರಿತ ಈ ನಿರೂಪಣೆಯನ್ನು ಜನ ಒಪ್ಪಲಿಲ್ಲ ಮತ್ತು ಆರೋಪಗಳ ಬಗ್ಗೆ ತಲೆಕೆಡಿಸಿ ಕೊಳ್ಳಲೂ ಇಲ್ಲ.
ವೋಟ್ ಚೋರಿ ಅಭಿಯಾನವೂ ಅದೇ ಮಾದರಿಯಲ್ಲಿ ನಡೆಯುತ್ತಿದ್ದರೂ, ಬಿಹಾರ ಕಾಂಗ್ರೆಸ್ ಮತ್ತು ಮಹಾಮೈತ್ರಿ ಬೆಂಬಲಿಗರಷ್ಟೇ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರಶಾಂತ್ ಕಿಶೋರ್ ನಾಯಕತ್ವದ ಜನ ಸುರಾಜ್ ಪಕ್ಷವು ಎನ್‌ಡಿಎ ಮತ್ತು ಮಹಾಮೈತ್ರಿಯನ್ನು ಹಲವು ವಿಷ ಯಗಳಲ್ಲಿ ಪ್ರಶ್ನಿಸುತ್ತಿದ್ದರೂ, ರಾಹುಲ್ ಗಾಂಧಿಯವರ ವೋಟ್ ಚೋರಿ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಹಾಗಿದ್ದರೂ, ಚುನಾವಣೆ ಪೂರ್ವದಲ್ಲಿ ರಾಹುಲ್ ಗಾಂಧಿಯವರ ಆಕ್ರಮಣಶೀಲತೆಯ ಪ್ರದರ್ಶನ ಸಣ್ಣ ಕುತೂಹಲ ಮೂಡಿಸಿದೆ. ರಾಹುಲ್‌ರ ಈ ಉತ್ಸಾಹದಿಂದಲೇ ಕಳೆದ ಬಾರಿ ನೀಡಿದಷ್ಟೇ ಸೀಟುಗಳನ್ನು ಈ ಸಲವೂ ನೀಡಬೇಕು ಎಂದು ಆರ್‌ಜೆಡಿ ಬಳಿ ಕಾಂಗ್ರೆಸ್ ಹಠಹಿಡಿದಿತ್ತು. ಆದರೆ, ರಾಹುಲ್ ನಾಯಕತ್ವ ನೋಡಿ ಬಿಹಾರ ಜನ ಮತ ಹಾಕುತ್ತಾರೆ ಎಂಬ ವಿಶ್ವಾಸ ತೇಜಸ್ವಿ ಯಾದವ್‌ಗಾಗಲೀ ಅಥವಾ ಅಪ್ಪ ಲಾಲು ಪ್ರಸಾದ್ ಯಾದವ್‌ಗಾಗಲೀ ಇಲ್ಲ.
ಮತ್ತೊಂದೆಡೆ, ತೇಜಸ್ವಿ ಯಾದವ್‌ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವ ಆರ್‌ಜೆಡಿ ನಿರ್ಧಾರಕ್ಕೆ ಬೆಂಬಲ ಸೂಚಿಸಬೇಕು ಎಂಬುದನ್ನೂ ಕಾಂಗ್ರೆಸ್ ಮನಃಪೂರ್ವಕವಾಗಿ ಹೇಳುತ್ತಿಲ್ಲ. ಒಂದಿಬ್ಬರು ನಾಯಕರು ತೇಜಸ್ವಿ ನಾಯಕತ್ವದ ಬಗ್ಗೆ ಮಾತನಾಡಿದ್ದರೂ, ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಹೀಗಾಗಿ, ಒಂದರ್ಥದಲ್ಲಿ ಇದು ಅಪನಂಬಿಕೆಯ ಮಹಾಮೈತ್ರಿಯಾಗಿ ಹೊರಹೊಮ್ಮಿದೆ. ಈ ಅವಿಶ್ವಾಸಗಳೇ ಮಹಾಮೈತ್ರಿಯೊಳಗಿನ ಬಿರುಕನ್ನು ದೊಡ್ಡದಾಗಿಸುತ್ತಿದೆ. ಮೇಲಾಗಿ, ಕಾಂಗ್ರೆಸ್ ಹಲವೆಡೆ ಟಿಕೆಟ್ ಅನ್ನು ಮಾರಾಟ ಮಾಡಿದೆ ಎಂಬ ಗಂಭೀರ ಆಪಾದನೆಗಳು ಕೇಳಿಬಂದಿದ್ದು, ಕೆಲ ಕಾಂಗ್ರೆಸ್ ಮುಖಂಡರು ಹತಾಶ ಕೈ ಕಾರ್ಯಕರ್ತರಿಂದ ಧರ್ಮದೇಟು ತಿಂದ ವಿಡಿಯೋಗಳೂ ವೈರಲ್ ಆಗಿವೆ.
ಹೆಸರಿಗೆ ಇದು ಬಿಹಾರದಿಂದ ಎನ್‌ಡಿಎಯನ್ನು ಬಡಿದಟ್ಟಿಸುವ ಮಹಾಘಟಬಂಧನ. ಆದರೆ, ಮಿತ್ರಪಕ್ಷಗಳೇ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಆಡಳಿತಾರೂಢ ಮೈತ್ರಿಕೂಟಕ್ಕೀಗ ಹೊಸ ಅಸ್ತ್ರ ಸಿಕ್ಕಂತಾಗಿದೆ.
ವೈಶಾಲಿ ಕ್ಷೇತ್ರದಲ್ಲಿ ಆರ್‌ಜೆಡಿಯಿಂದ ಜೆಡಿಯು ಮಾಜಿ ನಾಯಕ ಅಜಯ್ ಕುಶ್ವಾಹ ಕಣದಲ್ಲಿದ್ದರೆ, ಕಾಂಗ್ರೆಸ್ ಸಂಜೀವ್ ಸಿಂಗ್‌ಗೆ ಟಿಕೆಟ್ ನೀಡಿದೆ. ಲಾಲ್‌ಗಂಜ್ ಸ್ಥಾನದಿಂದ ಕಾಂಗ್ರೆಸ್‌ನ ಆದಿತ್ಯ ಕುಮಾರ್ ಮತ್ತು ಆರ್‌ಜೆಡಿಯ ಶಿವಾನಿ ಶುಕ್ಲಾ (ಮಾಜಿ ಶಾಸಕ ಮುನ್ನಾ ಶುಕ್ಲಾ ಪುತ್ರಿ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ರಾಜಪಕರ್ ಮತ್ತು ಬಚ್ವಾರಾ ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಮುಖಾಮುಖಿಯಾಗಿವೆ.
ಬಚ್ವಾರಾದಿಂದ ಪ್ರಕಾಶ್ ದಾಸ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಸಿಪಿಐಯಿಂದ ಮಾಜಿ ಶಾಸಕ ಅವಧೇಶ್ ರೈ ಸ್ಪರ್ಧೆಯಲ್ಲಿದ್ದಾರೆ. ರೋಸೆರಾ ಕ್ಷೇತ್ರದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಬಿ.ಕೆ. ರವಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಸಿಪಿಐನಿಂದ ಲಕ್ಷ್ಮಣ್ ಪಾಸ್ವಾನ್ ಕಣದಲ್ಲಿದ್ದಾರೆ. ಬಿಹಾರ್ ಶರೀಫ್ ನಲ್ಲಿ ಕಾಂಗ್ರೆಸ್‌ನ ಉಮೈರ್ ಖಾನ್ ಮತ್ತು ಸಿಪಿಐನ ಶಿವಪ್ರಸಾದ್ ಯಾದವ್ ಮುಖಾಮುಖಿ ಯಾಗುತ್ತಿದ್ದಾರೆ.
ಹೀಗಾಗಿ, ಇಲ್ಲಿ ಮಹಾಮೈತ್ರಿ ಅಭ್ಯರ್ಥಿಗಳ ಮಧ್ಯೆಯೇ ಮತಗಳ ವಿಭಜನೆಯಾದರೆ ಇದರ ಲಾಭ ಎನ್‌ಡಿಎಗೆ ಆದರೂ ಅಚ್ಚರಿ ಇಲ್ಲ. ಬಿಹಾರ ಫಲಿತಾಂಶ ಎಂದಿಗೂ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿ. ಇಲ್ಲಿ ಏನೇ ಪಲ್ಲಟಗಳಾದರೂ ದಿಲ್ಲಿ ದೊರೆಗಳಲ್ಲಿ ನಡುಕ ಶುರುವಾಗುತ್ತದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ರಾಷ್ಟ್ರ ರಾಜಕಾರಣದ ಬಂಡಿಯನ್ನು ಅಡೆತಡೆಗಳಿಲ್ಲದೆ ಮುನ್ನಡೆಸಲು ಬಿಹಾರದಲ್ಲಿ ಅಧಿಕಾರ ಮರುಸ್ಥಾಪಿಸುವುದು ಅತ್ಯಗತ್ಯ.
ಅದೇ ರೀತಿ, ಆರ್ ಜೆಡಿ ಸೇರಿದಂತೆ ದೇಶದ ಇತರೆ ಪ್ರಾದೇಶಿಕ ವಿಪಕ್ಷಗಳ ವಿಶ್ವಾಸ ಗಳಿಸಲು ಕಾಂಗ್ರೆಸ್ಸಿಗೂ ಇದು ನಿರ್ಣಾಯಕ.
(ಲೇಖಕರು ಹಿರಿಯ ಪತ್ರಕರ್ತರು)