Ganesh Bhatta Column: ರಥಸಪ್ತಮಿ: ಸೂರ್ಯನ ಮಹತ್ವವನ್ನು ಸಾರುವ ಪರ್ವ
ಸೂರ್ಯನಿಂದಾಗಿಯೇ ಹಗಲು-ರಾತ್ರಿ ಮುಂತಾದ ಕಾಲಗಣನೆಯ ವಿಭಾಗವು. ಸೂರ್ಯನಿಂದಾ ಗಿಯೇ ಈ ಭೂಮಿ. ಇಲ್ಲಿಯ ಸಮಸ್ತರು. ಜಗತ್ತಿನ ಸರ್ವ ಜೀವಿಗಳಿಗೂ ಯಾವುದೇ ಭೇದ-ಭಾವ ವಿಲ್ಲದೇ ಸೂರ್ಯನು ತನ್ನ ಕಿರಣಗಳ ಮೂಲಕ ಪ್ರತಿನಿತ್ಯ ಪ್ರಬೋಧನಗೊಳಿಸುವನು
ತನ್ನಿಮಿತ್ತ
ಗಣೇಶ ಭಟ್ಟ ಮಾಳ್ಕೋಡ
ರಾತ್ರಿಯ ಕಾರಣದಿಂದ ಜಡತ್ವದಿಂದ ಕೂಡಿದ ಈ ಜಗತ್ತನ್ನು ತನ್ನ ಉದಯದ ಮೂಲಕ ನವ ಸ್ಪೂರ್ತಿಯನ್ನು ನೀಡುವವನು ಸೂರ್ಯ. ಸೂರ್ಯನ ಉದಯದಿಂದಲೇ ಜೀವಿಗಳ ಕಾರ್ಯಾ ರಂಭವು. ಈ ಜಗತ್ತಿನಲ್ಲಿರುವ ಸಮಸ್ತ ಜೀವಿಗಳೂ ಸೂರ್ಯಕೇಂದ್ರಿತವಾಗಿಯೇ ಇವೆ.
ಅಷ್ಟೇ ಅಲ್ಲ ಸೂರ್ಯ ಕೇಂದ್ರಿತವಾಗಿಯೇ ಬ್ರಹ್ಮಾಂಡದ ಸಮಸ್ತ ಗ್ರಹ- ಉಪಗ್ರಹ ಗಳೂ ಇವೆ. ಸೂರ್ಯನನ್ನ ಅವಲಂಬಿಸಿಯೇ ಚಂದ್ರ-ನಕ್ಷತ್ರ ಮುಂತಾದ ಸಮಸ್ತ ಸೃಷ್ಟಿ ಪ್ರಕಾಶಿಸಲ್ಪಟ್ಟಿದೆ. ಸೂರ್ಯನಿಂದಾಗಿಯೇ ಹಗಲು-ರಾತ್ರಿ ಮುಂತಾದ ಕಾಲಗಣನೆಯ ವಿಭಾಗವು. ಸೂರ್ಯನಿಂದಾ ಗಿಯೇ ಈ ಭೂಮಿ. ಇಲ್ಲಿಯ ಸಮಸ್ತರು. ಜಗತ್ತಿನ ಸರ್ವ ಜೀವಿಗಳಿಗೂ ಯಾವುದೇ ಭೇದ-ಭಾವ ವಿಲ್ಲದೇ ಸೂರ್ಯನು ತನ್ನ ಕಿರಣಗಳ ಮೂಲಕ ಪ್ರತಿನಿತ್ಯ ಪ್ರಬೋಧನಗೊಳಿಸುವನು.
ಇದನ್ನೂ ಓದಿ: Shashidharaswamy R Hiremath Column: ಹಣ್ಣು ನುಂಗಿ ಬೀಜ ಬಿತ್ತುವ ಚಂಬುಕುಟಿಕ
ಸೂರ್ಯನನ್ನು ನಿಮಿತ್ತಿಕರಿಸಿ ಮಾಡಿದ ಜಪ ತಪ ವ್ರತ ಯಜ್ಞ ಅನುಷ್ಠಾನಗಳಿಂದ ಮನೋ ಕಾಮನೆಗಳು ಶತಶತಮಾನಗಳಿಂದ ಈಡೇರುತ್ತಿವೆ. ಆದಿದೇವ ಭುವನ ಭಾಸ್ಕರನಾದ ಸೂರ್ಯನ ಕುರಿತಾದ ಹಬ್ಬವೇ ರಥಸಪ್ತಮಿ.ಈ ರಥಸಪ್ತಮಿಯು ಸೂರ್ಯನ ಜನ್ಮದಿನ. ಇದನ್ನು ಮನ್ವಾದಿ ಎಂದೂ ಕರೆಯುವರು. ರಥಸಪ್ತಮಿಯು ವೈವಸ್ವತ ಮನ್ವಂತರದ ಆರಂಭದ ದಿನ. ಮೊಟ್ಟ ಮೊದಲು ಸೂರ್ಯನು ತನ್ನ ಸಪ್ತಾಶ್ವಗಳ ರಥವೇರಿ ಉತ್ತರ ಮಾರ್ಗದಲ್ಲಿ ಹೊರಟ ದಿನ.
ಸೂರ್ಯನ ಹಿರಿಮೆ: ಸೂರ್ಯ ಸೃಷ್ಟಿಯ ಕಾರಕ.ಅದಕ್ಕಾಗಿಯೇ ಸೂರ್ಯನಿಗೆ ಆದಿದೇವ ಎಂಬ ಹೆಸರಿನಿಂದ ಕರೆಯುವರು. ಸೂರ್ಯ ಭಗವಂತ ನಿರಂತರ ಕರ್ಮರತನು. ಪ್ರತ್ಯಕ್ಷ ದೇವನಾಗಿ ಭುವನದ ಭಾಸ್ಕರನಾದ ಭಗವಾನ್ ಸೂರ್ಯ ನಾರಾಯಣನನ್ನು ಆರಾಧಿಸುವುದು. ವೇದದಲ್ಲಿ ಸೂರ್ಯನ ಕುರಿತಾಗಿ ಅನೇಕ ಸ್ತುತಿಗಳಿವೆ.
ಸೂರ್ಯ ಆತ್ಮಾ ಜಗತಃ ಸೂರ್ಯನೇ ಜಗತ್ತಿನ ಆತ್ಮ ಎಂದು ಬಣ್ಣಿಸಿವೆ. ರಾಮಾಯಣ-ಮಹಾ ಭಾರತಗಳಲ್ಲೂ ಸೂರ್ಯನ ಕುರಿತಾದ ವರ್ಣನೆಗಳಿವೆ. ಪ್ರಾಚೀನ ಕಾಲದಿಂದಲೂ ಸೂರ್ಯನನ್ನು ಆರಾಧಿಸಿವವರ ಸಂಪ್ರದಾಯದವರು ಇದ್ದರು, ಅವರು ಸೌರರು ಎಂದು ಪ್ರಸಿದ್ಧರಾಗಿದ್ದಾರೆ. ಸೌರ ಸಂಪ್ರದಾಯದವರು ಸೂರ್ಯನನ್ನು ಆದಿದೇವನನ್ನಾಗಿ ನಂಬಿ ಆರಾಧಿಸುವರು. ಭೌಗೋಳಿಕ ವಾಗಿ ಭಾರತದಲ್ಲಿ ಸೂರ್ಯೋಪಾಸನೆ ವ್ಯಾಪಕವಾಗಿತ್ತು. ಮಥುರಾ, ಮುಲ್ತಾನ, ಕಾಶ್ಮೀರ ಹಾಗೂ ಕೋಣಾರ್ಕಗಳು ಸೂರ್ಯೋಪಾಸನೆಯ ಪ್ರಧಾನ ಕೇಂದ್ರಗಳಾಗಿದ್ದವು.
ಪೌರಾಣಿಕ ಹಿನ್ನಲೆಯಲ್ಲಿ ಸೂರ್ಯ: ಪುರಾಣ ಕಾಲದಲ್ಲಿಯೇ ಸೂರ್ಯನನ್ನು ಉಪಾಸಿಸು ತ್ತಿದ್ದರು ಎನ್ನುವುದಕ್ಕೆ ಉಲ್ಲೇಖಗಳು ಲಭಿಸುತ್ತವೆ. ಅತ್ರಿಮುನಿಗಳ ಪತ್ನಿ ಸೂರ್ಯೋಪಾಸನೆ ಮಾಡಿ ದ್ದಳು ಎಂಬ ಉಲ್ಲೇಖ ಕಾಣಬಹುದು.ರಾಜಾ ಅಶ್ವಪತಿಯು ಸೂರ್ಯನನ್ನು ಮೆಚ್ಚಿಸಿ ಸಾವಿತ್ರಿದೇವಿ ಮಗಳಾಗಿ ಪಡೆದ. ಈ ಸಾವಿತ್ರಿದೇವಿಯು ಯಮನನ್ನು ಮೆಚ್ಚಿಸಿ ಪತಿ ಸತ್ಯವಾನ್ ನನ್ನು ಯಮ ನಿಂದ ಕರೆತಂದಾಕೆ.ಅಗ್ನಿ ಪುರಾಣದ ಪ್ರಕಾರ ವಿಷ್ಣುವಿನ ನಾಭಿಕಮಲದಿಂದ ಬ್ರಹ್ಮ ಜನಿಸಿದ. ಬ್ರಹ್ಮನಿಂದ ಮರೀಚಿ ಜನಿಸಿದ. ಮರೀಚಿಯಂದ ಮಹರ್ಷಿ ಕಶ್ಯಪರು ಜನಿಸಿದರು.
ಈ ಮಹರ್ಷಿ ಕಶ್ಯಪರ ಮಗನೇ ಸೂರ್ಯ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಮನು ರಾವಣನ ಮೇಲೆ ವಿಜಯ ಸಾಧಿಸುವ ಉದ್ದೇಶದಿಂದ ಅಗಸ್ತ್ಯಮುನಿಗಳ ಉಪದೇಶದಂತೆ ಸೂರ್ಯನನ್ನು ಉಪಾಸನೆ ಮಾಡಿದ ಹಾಗೂ ರಾವಣನ್ನು ಸಂಹರಿಸಿ ವಿಜಯಿಯಾದ. ಅಗಸ್ತ್ಯರು ಉಪದೇಶಿಸಿದ ಆ ಸೂರ್ಯ ಉಪಾಸನೆಯನ್ನು ಆದಿತ್ಯ ಹೃದಯಸ್ತೋತ್ರ ಎನ್ನುವುದಾಗಿ ಕರೆಯುವರು.
ಸೂರ್ಯನಿಂದ ಹನುಮ ವ್ಯಾಕರಣ ಶಾಸ್ತ್ರವನ್ನು ಅಭ್ಯಸಿಸಿದ. ಸೂರ್ಯನ ಸಂಯೋಗದಿಂದ ಕುಂತಿಯು ಮಹಾವೀರ ವೈಕರ್ತನ(ಕರ್ಣ)ನಿಗೆ ಜನ್ಮ ನೀಡಿದಳು. ವನವಾಸದ ಸಂದರ್ಭದಲ್ಲಿ ಸೂರ್ಯನನ್ನು ಆರಾಧಿಸಿದಾಗ ಯುಧಿಷ್ಠಿರನಿಗೆ ಒಂದು ಪಾತ್ರೆ ಲಭಿಸಿತು. ಆ ಪಾತ್ರೆಯಲ್ಲಿ ದ್ರೌಪದಿ ಯು ಅನ್ನ ಮಾಡುತ್ತಿದ್ದಳು. ಆ ಪಾತ್ರೆಯಲ್ಲಿ ಅನ್ನವು ಅಕ್ಷಯವಾಗುತ್ತಿತ್ತು. ಭಗವಂತ ಕೃಷ್ಣನೂ ಸೂರ್ಯನನ್ನು ಆರಾಧಿಸಿದ್ದನು.
ಕೃಷ್ಣ ಮತ್ತು ಜಾಂಬವತಿಯ ಮಗನಾದ ಸಾಂಬನಿಗೆ ಕುಷ್ಠರೋಗ ಬಂದಾಗ ಸೂರ್ಯನನ್ನು ಆರಾಧಿಸಿಯೇ ಕುಷ್ಠರೋಗವು ದೂರವಾಯಿತು. ರಾಜಾ ಸತ್ರಾಜಿತನು ಸೂರ್ಯನನ್ನು ಆರಾಧಿಸಿದ ಪರಿಣಾಮ ನಿತ್ಯ ಹೇರಳವಾಗಿ ಚಿನ್ನ ನೀಡುವ ಸ್ಯಮಂತಕ ಮಣಿ ಪ್ರಾಪ್ತವಾಯಿತು.
ಮಯೂರ ಕವಿಗೆ ಬಂದ ಕುಷ್ಠರೋಗ ನಿವಾರಣೆಗೆ ಸೂರ್ಯ ಶತಕಮ್ ರಚಿಸಿ ಗುಣಮುಖನಾದ ಎಂದು ಇತಿಹಾಸ ತಿಳಿಸುವುದು.ಪುರಾಣಗಳ ಪ್ರಕಾರ ಒಮ್ಮೆ ಸೂರ್ಯ ಪತ್ನಿ ಸಂಜ್ಞಾ ದೇವಿಯು ಸೂರ್ಯನ ತಾಪ ಸಹಿಸಲು ಸಾಧ್ಯವಾಗದೇ ಉತ್ತರದಿಕ್ಕಿನತ್ತ ಚಲಿಸಿದಳು. ಸೂರ್ಯನೂ ಆ ದಿಕ್ಕಿ ನತ್ತ ಚಲಿಸಿದ.ಉತ್ತರದಿಂದ ದಕ್ಷಿಣಕ್ಕೆ ಹೀಗೆ ಸೂರ್ಯನಿಗೆ ಈ ಚಲನೆ ನಂತರದ ದಿನಗಳಲ್ಲಿ ಅದು ಸಹಜವಾಯಿತು.
ಅದನ್ನೇ ದಕ್ಷಿಣಾಯಣ-ಉತ್ತರಾಯಣ ಎಂದು ಪ್ರಸಿದ್ಧಿ ಪಡೆಯುತು. ಅಶ್ವಿನಿರೂಪ ತಾಳಿದ ಆಕೆ ಯಿಂದ ಅಶ್ವಿನಿಕುಮಾರರನ್ನು ಹಡೆದಳು. ಅವರು ದೇವತೆಗಳ ಚಿಕಿತ್ಸಕರಾಗಿ ಪ್ರಸಿದ್ಧಿ ಹೊಂದಿ ದ್ದಾರೆ. ಭಾರತೀಯ ಸಂಸ್ಕೃತಿಯ ಆರಂಭದ ಕಾಲದಿಂದಲೂ ಸೂರ್ಯನ ಮಹಿಮೆಯರಿತು ಸೂರ್ಯನನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಪ್ರತ್ಯಕ್ಷ ದೇವನಾದ ಸೂರ್ಯನು ಆರೋಗ್ಯದ ದೇವತೆ. ಅದನ್ನೇ ಆರೋಗ್ಯಂ ಭಾಸ್ಕರಾದಿಚ್ಛೇತ್ ಎಂದಿದ್ದಾರೆ.
ಭಗವಂತ ಕೃಷ್ಣನು ಅರ್ಜುನನಿಗೆ ಗೀತೋಪದೇಶ ನೀಡುತ್ತಾ - ‘ಸೂರ್ಯನು ಉದಯಕಾಲದಲ್ಲಿ ಬ್ರಹ್ಮನಾಗಿ, ಮಧ್ಯಾಹ್ನದಲ್ಲಿ ಶಿವನಾಗಿ,ಸಾಯಂಕಾಲದಲ್ಲಿ ವಿಷ್ಣುವಾಗಿ ಕಂಗೊಳಿಸುವನು. ಸೂರ್ಯನ್ನು ಸಂದರ್ಶಿಸುವನು ತ್ರಿಮೂರ್ತಿಗಳ ಅನುಗ್ರಹಕ್ಕೆ ಪಾತ್ರನಾಗುವನು’ ಎಂದು ಹೇಳಿ ದ್ದಾನೆ.
ರಥಸಪ್ತಮಿ ಆಚರಣೆಯ ವಿಧಾನ: ಮಾಘಶುಕ್ಲ ಸಪ್ತಮಿ ರಥಸಪ್ತಮೀ ರಥಸಪ್ತಮೀ,
ಸೂರ್ಯಗ್ರಹಣ ತುಲ್ಯಾತು ಶುಕ್ಲಾ ಮಾಘಸ್ಯ ಸಪ್ತಮೀ |
ಅರುಣೋದಯ ವೇಲಾಯಾಂ ತಸ್ಯಾಂ ಸ್ನಾನಂ
ಮಹಾಫಲಮ್ ||
ಮಾಘ ಶುಕ್ಲ ಸಪ್ತಮಿಯು ರಥಸಪ್ತಮಿ ಎನ್ನುವುದಾಗಿ ಪ್ರಸಿದ್ಧಿ ಹೊಂದಿದೆ. ಸೂರ್ಯಗ್ರಹಣಕ್ಕೆ ಸಮಾನವಾದ ಪುಣ್ಯದಿನ ಈ ದಿನ. ಈ ದಿನ ಸೂರ್ಯೋದಯ ಕಾಲದಲ್ಲಿ ನದಿ, ಸಮುದ್ರ ಸಂಗಮ ಮುಂತಾದ ಸ್ಥಳಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಜನ್ಮ ಜನ್ಮಾಂತರದ ಎಲ್ಲಾ ಪಾಪಗಳು ದೂರವಾಗುವವು.
ಸೂರ್ಯನ ಅನುಗ್ರಹದಿಂದ ಆಯುಷ್ಯ ಆರೋಗ್ಯ ಧನಧಾನ್ಯಾದಿ ಸಂಪತ್ತು ಲಭಿಸುವವು. ಮಾಘ ಮಾಸದ ಮಾಘಸ್ನಾನಕ್ಕೆ ವಿಶೇಷ ಫಲವಿದೆ. ಅದರಲ್ಲೂ ಸಪ್ತಮಿ ಸ್ನಾನಕ್ಕೆ ಹೆಚ್ಚಿನ ಫಲ. ಈ ದಿನ ಮನೆಯ ಮುಂದೆ ಅಥವಾ ತುಳಸಿ ಕಟ್ಟೆ ಎದುರಿನಲ್ಲಿ ರಂಗವಲ್ಲಿಯಿಂದ ಸೂರ್ಯನನ್ನು ಚಿತ್ರಿಸಿ, ಪೂಜಿಸಿ ಪ್ರಾರ್ಥಿಸುವ ಪದ್ಧತಿ ನಡೆದು ಬಂದಿದೆ.
ಸೂರ್ಯ ನಮಸ್ಕಾರ: ಈ ದಿನ ಸೂರ್ಯೋದಯದ ಕಾಲದಲ್ಲಿ ಸೂರ್ಯನ ನೂರೆಂಟು ನಾಮ ಗಳನ್ನು ಉಚ್ಚರಿಸಿ ಸೂರ್ಯ ನಮಸ್ಕಾರ ಮಾಡುವ ಪದ್ದತಿಯಿದೆ.ಯಾಕೆಂದರೆ ‘ನಮಸ್ಕಾರ ಪ್ರಿಯೋ ಭಾನುಃ. ಸೂರ್ಯನಿಗೆ ನಮಸ್ಕಾರ ಇಷ್ಟವಾದುದು. ನೂರೆಂಟು ಸೂರ್ಯ ನಮಸ್ಕಾರ ಮಾಡಿ ತನ್ನ ಮೈಬೆವರಿನಿಂದ ಸೂರ್ಯನಿಗೆ ಅರ್ಘ್ಯಕೊಡುವ ಪದ್ಧತಿ ನಿಜವಾಗಿಯೂ ಕೂಡ ಶ್ರೇಷ್ಠ ಪದ್ಧತಿಯಾಗಿದೆ.
ಅದರಿಂದ ಆ ವ್ಯಕ್ತಿಯಲ್ಲಿ ಆರೋಗ್ಯವೇ ನೆಲಸುವುದು. ಮನುಷ್ಯನ ರಚನೆಗೆ ಕೃತಿಯೆಂದು ಕರೆದರೆ, ಭಗವಂತನ ರಚನೆಗೆ ಪ್ರಕೃತಿ ಎಂದು ಹೆಸರು.ಇಂತಹ ಬ್ರಹ್ಮಾಂಡ ಎನ್ನುವ ಪ್ರಕೃತಿಯಲ್ಲಿ ಜಗತ್ತಿನ ಪ್ರತಿ ಜೀವಿಯ ಕರ್ಮಗಳಿಗೆ ಸಾಕ್ಷಿಯಾಗಿದ್ದುಕೊಂಡು,ಜೀವನ ಕಲ್ಪಿಸುವ ಪ್ರತ್ಯಕ್ಷ ದೇವನಿದ್ದರೆ ಅದು ಸೂರ್ಯ. ರಾಮ-ಕೃಷ್ಣ ಮೊದಲಾದವರೇ ಸೂರ್ಯನನ್ನು ಆರಾಧಿಸಿ ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಂಡರು. ಅಂತೆಯೇ ನಾವೂ ಸಹ ಇಷ್ಟುದಿನ ನಮಗೆಲ್ಲಾ ಆರೋಗ್ಯ, ಮಳೆ-ಬೆಳೆಗಳನ್ನು ಚೆನ್ನಾಗಿ ನೀಡಿದ ಸೂರ್ಯನು ಮುಂದೂ ಹಾಗೆಯೇ ಅನುಗ್ರಹಿಸೆಂದು ಪ್ರಾರ್ಥಿಸುವ ಪರ್ವವೇ ರಥಸಪ್ತಮಿ.
ಲೇಖಕರು, ಸಂಸ್ಕೃತ ಉಪನ್ಯಾಸಕರು