ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pro Kabaddi: ಟೈಟಾನ್ಸ್‌ಗೆ ಶರಣಾದ ಬುಲ್ಸ್​; 2ನೇ ಎಲಿಮಿನೇಟರ್‌ನಲ್ಲಿ ಪಾಟ್ನಾ ಸವಾಲು

ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪಾಟ್ನಾ ಪೈರೇಟ್‌ ವಿರುದ್ಧ 48-32 ಅಂಕಗಳ ಅಂತರದಿಂದ ಪರಾಭವಗೊಂಡಿತು. ಅಯಾನ್ ಲೋಹ್‌ಚಾಬ್ ಅವರ 20 ರೈಡಿಂಗ್‌ ಅಂಕ ಪಾಟ್ನಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಮಿನಿ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ಬುಲ್ಸ್​ಗೆ ಸೋಲು

-

Abhilash BC Abhilash BC Oct 26, 2025 10:30 PM

ನವದೆಹಲಿ: ಕೊನೆಯ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬ್ಡಡಿ ಲೀಗ್ 12ನೇ ಆವೃತ್ತಿಯ ಮಿನಿ ಕ್ವಾಲಿಫೈಯರ್‌ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 5 ಅಂಕದ ಅಂತರದ ಸೋಲು ಕಂಡಿತು.

ಉಭಯ ತಂಡಗಳ ಆಟಗಾರರು ಮೊದಲಾರ್ಧದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಅಂತಿಮವಾಗಿ ತೆಲುಗು ಟೈಟಾನ್ಸ್‌ 16-14 ಎರಡು ಅಂಕದ ಮುನ್ನಡೆ ಸಾಧಿಸಿತು. ಮೊದಲಾರ್ಧದಲ್ಲಿ ಬುಲ್ಸ್‌ ತಂಡದ ಮಾಜಿ ನಾಯಕ ಭರತ್‌ ಆಟ ನಡೆಯಲಿಲ್ಲ. ಅವರನ್ನು ದೀಪಕ್ ಶಂಕರ್ ಮತ್ತು ಸತ್ಯಪ್ಪ ಮಟ್ಟಿ ತಡೆದು ನಿಲ್ಲಿಸಿದರು.

ದ್ವಿತೀಯಾರ್ಧದಲ್ಲಿ ಚುರುಕಿನ ಆಟವಾಡಿದ ಬುಲ್ಸ್‌ ಪಂದ್ಯ ಆರಂಭಗೊಂಡ ನಾಲ್ಕೇ ನಿಮಿಷದಲ್ಲಿ ಟೈಟಾನ್ಸ್‌ ತಂಡವನ್ನು ಆಲ್‌ಔಟ್‌ ಮಾಡಿ ಮುನ್ನಡೆ ಸಾಧಿಸಿತು. ಮೊದಲಾರ್ಧದಲ್ಲಿ ಕೇವಲ 2 ಅಂಕ ಮಾತ್ರ ಗಳಿಸಿದ್ದ ತಂಡದ ಸ್ಟಾರ್‌ ರೈಡರ್‌ ಅಲಿರೇಜಾ ಮಿರ್ಜಾಯೀನ್, ಎರಡನೇ ಅವಧಿಯಲ್ಲಿ ಮಿಂಚಿನ ವೇಗದಲ್ಲಿ ಎದುರಾಳಿ ಕೋಟೆಗೆ ನುಗ್ಗಿ ಸರಾಗವಾಗಿ ಅಂಕಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರಿಗೆ ಆಕಾಶ್ ಶಿಂಧೆ ಮತ್ತು ಆಶಿಶ್ ಮಲಿಕ್ ಉತ್ತಮ ಸಾಥ್‌ ನೀಡಿದರು.

ಕೊನೆಯ ಕ್ಷಣದಲ್ಲಿ ಎಡವಿದ ಬುಲ್ಸ್‌

ಮುನ್ನಡೆಯಲ್ಲಿ ಸಾಗುತ್ತಿದ್ದ ಬುಲ್ಸ್‌ ಕೊನೆಯ 5 ನಿಮಿಷದ ಆಟ ಬಾಕಿ ಇರುವಾಗ ಎಡವಿತು. ಆಲೌಟ್‌ ಸಂಕಟಕ್ಕೆ ಸಿಲುಕಿತು. ಇಲ್ಲಿಂದ ಸತತವಾಗಿ ಅಂಕ ಕಳೆದುಕೊಂಡು ಕೊನೆಗೆ ಸೋಲು ಕಂಡಿತು. ಅಂತಿಮವಾ 37-32 ಅಂತರದಿಂದ ಶರಣಾಯಿತು. ಸೋತರೂ ಕೂಡ ಇನ್ನೊಂದು ಅವಕಾಶ ತಂಡದ ಮುಂದಿದೆ. 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ. ಗೆಲುವು ಸಾಧಿಸಿದ ತೆಲುಗು ಟೈಟಾನ್ಸ್‌ ತಂಡ 3ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 2ನೇ ಎಲಿಮಿನೇಟರ್‌ ಗೆದ್ದ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ RO-KO disappoints: ಕಮ್‌ಬ್ಯಾಕ್‌ ಪಂದ್ಯದಲ್ಲಿ ರೋಹಿತ್, ಕೊಹ್ಲಿ ವಿಫಲ; ಧೋನಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಸೂಚನೆ

ಜೈಪುರಕ್ಕೆ ಸೋಲು

ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪಾಟ್ನಾ ಪೈರೇಟ್‌ ವಿರುದ್ಧ 48-32 ಅಂಕಗಳ ಅಂತರದಿಂದ ಪರಾಭವಗೊಂಡಿತು. ಅಯಾನ್ ಲೋಹ್‌ಚಾಬ್ ಅವರ 20 ರೈಡಿಂಗ್‌ ಅಂಕ ಪಾಟ್ನಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ನವದೀಪ್‌ 5 ಟ್ಯಾಕಲ್‌ ಅಂಕ ಗಳಿಸಿದರು. ಸೋಲು ಕಂಡ ಜೈಪುರ ತನ್ನ ಅಭಿಯಾನ ಮುಗಿಸಿತು.