ಶಶಾಂಕಣ
ದೀಪೋತ್ಸವ ಸಂದರ್ಭದಲ್ಲಿ ರಂಗಪೂಜೆ ಎಂಬ ಪೂಜೆಯೂ ನಡೆಯುವುದು ಸಾಮಾನ್ಯ. ಅದರ ಪುಣ್ಯವನ್ನು ಹೋಲಿಸುವ ಒಂದು ಮಾತಿನ ವರಸೆ ನಮ್ಮೂರಿ ನಲ್ಲಿದೆ. ಇದೇ ವೇಳೆ, ಅಲ್ಲಲ್ಲಿ ನಡೆಯುವ ಯಕ್ಷಗಾನ ನೋಡುವುದು ಪದ್ಧತಿ. ಯಕ್ಷಗಾನ ನೋಡಿದವರ ಮನದಲ್ಲಿ ಸಾಕಷ್ಟು ರಸಾನುಭವ, ಕ್ಷೋಭೆ ಮೂಡುತ್ತವೆ, ಅದನ್ನು ತೊಳೆದುಹಾಕಲು, ಏಳು ರಂಗಪೂಜೆಯನ್ನು ನೋಡಬೇಕೆಂಬ ನಾಣ್ಣುಡಿಯೇ ನಮ್ಮ ಪ್ರದೇಶದಲ್ಲಿತ್ತು!
ದೀಪಾವಳಿ ಕಳೆದು, ಕಾರ್ತಿಕ ಮಾಸ ಬಂತು ಎಂದರೆ, ಹಲವು ಕಡೆ ದೀಪೋತ್ಸವಗಳ ಸಂಭ್ರಮ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆ ಇದು; ಹಲವು ದೇಗುಲಗಳಲ್ಲಿ, ಕಾರ್ತಿಕ ಮಾಸದ ರಾತ್ರಿಗಳಲ್ಲಿ, ದೀಪ ಹಚ್ಚಿ, ಸಂಭ್ರಮಿಸುವ ಸಡಗರ. ನಮ್ಮ ಹಳ್ಳಿಯಲ್ಲೂ ದೀಪೋತ್ಸವ ನಡೆಯುತ್ತದೆ; ನಮ್ಮ ಹಳ್ಳಿ ಮನೆಯ ಸನಿಹದಲ್ಲೇ ಇರುವ ಮಹಾಲಿಂಗೇಶ್ವರ ದೇಗುಲದಲ್ಲಿ, ಈ ತಿಂಗಳ ಹುಣ್ಣಿಮೆ ನಂತರದ ಚೌತಿಯ ದಿನ ದೀಪೋತ್ಸವ ನಡೆಯುವ ಪದ್ಧತಿ ಇದೆ; ಇದು ಎಷ್ಟು ನೂರು ವರ್ಷಗಳಿಂದ ಆಚರಣೆ ಯಲ್ಲಿದೆ ಎಂಬುದು ಸಂಶೋಧನಾರ್ಹ ವಿಷಯ!
ನೂರಾರು ವರ್ಷಗಳ ಹಿಂದೆ ಆ ದೇಗುಲ ಸ್ಥಾಪನೆಯಾದಾಗಿನಿಂದಲೂ, ಇಂಥದೊಂದು ದೀಪೋತ್ಸವ ನಡೆದುಕೊಂಡು ಬಂದಿರಬೇಕು. ಈ ವರ್ಷ, ಇವತ್ತು ನಡೆಯುತ್ತಿದೆ. ನಮ್ಮೂ ರಿನ ಸುತ್ತಮುತ್ತಲೂ ಹಲವು ದೇಗುಲಗಳಲ್ಲಿ, ಬಸದಿಗಳಲ್ಲಿ ಇಂಥ ದೀಪೋತ್ಸವ ನಡೆಯು ವುದು ಪದ್ಧತಿ.
ಒಂದೊಂದು ದಿನ ಒಂದೊಂದು ಹಳ್ಳಿಯಲ್ಲಿ ಇಂಥ ಬೆಳಕಿನ ಹಬ್ಬದ ಆಚರಣೆ ಎಂದು ಬಹು ಹಿಂದಿನಿಂದಲೇ ನಿಗದಿಪಡಿಸಿಕೊಂಡು ಬಂದಿದ್ದಾರೆ. ದೀಪಾವಳಿ ಕಳೆದ ನಂತರ, ಒಂದು ತಿಂಗಳು ಪೂರ್ತಿ ಬೇರೆ ಬೇರೆ ಊರುಗಳಲ್ಲಿ ನಡೆಯುವ ಇಂಥ ಬೆಳಕಿನ ಹಬ್ಬದ ಜತೆಯಲ್ಲೇ ಪೂಜೆಯ ಸಂಭ್ರಮ, ಸಡಗರವನ್ನು ನೋಡುವುದು ಎಂದರೆ ಅದೊಂದು ಅಪರೂಪದ ಅನುಭವ. ನಮ್ಮ ಹಳ್ಳಿಯ ಹತ್ತಿರದಲ್ಲಿರುವ ಶಂಕರನಾರಾಯಣ ಎಂಬ ಊರಿನಲ್ಲಿನ ದೀಪೋತ್ಸವ ಇನ್ನೂ ಗಡದ್ದು!
ಸುತ್ತಲಿನ ಹಲವು ಊರುಗಳಿಂದ ಆ ದೀಪೋತ್ಸವ ನೋಡಲು ಜನರು ಬರುವುದುಂಟು. ನಮ್ಮ ಹಳ್ಳಿಮನೆಯಿಂದ ಆ ದೀಪೋತ್ಸವ ನಡೆಯುವ ದೇಗುಲಕ್ಕೆ ಸುಮಾರು ೫ ಕಿ.ಮೀ. ದೂರ. ಕೆರೆಯ ಎದುರಿನಲ್ಲಿ ಇರುವ ಆ ದೇಗುಲದ ದೀಪೋತ್ಸವದಲ್ಲಿ ಬೆಳಗಿದ ದೀಪಗಳು ಅಕ್ಷರಶಃ ದ್ವಿಗುಣಗೊಳ್ಳುತ್ತವೆ- ಎದುರಿನ ಕೆರೆಯಲ್ಲಿ ಪ್ರತಿಫಲಿಸುವ ಮೂಲಕ.
ಇದನ್ನೂ ಓದಿ: Shashidhara Halady Column: ಕಾಳಿಂಗ ಮತ್ತು ನಾಗರ ಎರಡನ್ನೂ ಪೂಜಿಸುವ ನಾಡಿದು !
ಆದ್ದರಿಂದ, ಅಲ್ಲಿನ ಆ ಬೆಳಕಿನ ಹಬ್ಬವನ್ನು ನೋಡುವುದೆಂದರೆ ವಿಶಿಷ್ಟ ಅನುಭವ. ಒಂದು ರಾತ್ರಿ ಅಲ್ಲಿನ ದೀಪೋತ್ಸವ ನೋಡಬೇಕೆಂಬ ಆಸೆಯಿಂದ, ‘ನಾನೊಬ್ಬನೇ ಹೋಗಿ ದೀಪ ನೋಡಿಕೊಂಡು ಬರ‍್ತೇನೆ’ ಎಂದು ಮನೆಯವರಿಗೆ ಹೇಳಿ ಹೊರಟೆ. ಆಗ ನಾನು ಹೈಸ್ಕೂಲು ವಿದ್ಯಾರ್ಥಿ. ಆ ವರ್ಷ ಭಾನುವಾರ ‘ದೀಪ’ ಅಂದರೆ ದೀಪೋತ್ಸವ ಬಂದಿತ್ತು.
ಆ ರೀತಿ ಒಬ್ಬನೇ ದೀಪೋತ್ಸವಕ್ಕೆ ಹೊರಟಿದ್ದು ಅದೇ ಮೊದಲು. ಒಂದು ರೀತಿಯಲ್ಲಿ ಇದು ನನ್ನ ಒಂದು ಏಕಾಂಗಿ ಪ್ರವಾಸ. ಆದರೆ ಮಾಮೂಲಿ ಪ್ರವಾಸಕ್ಕಿಂತ ವಿಭಿನ್ನ ಏಕೆಂದರೆ, ಇದನ್ನು ಧಾರ್ಮಿಕ ಪ್ರವಾಸದ ಪಟ್ಟಿಯಲ್ಲಿ ಸೇರಿಸಬಹುದು. ಜತೆಗೆ, ರಾತ್ರಿಯಲ್ಲಿ ಸಾವಿ ರಾರು ದೀಪಗಳನ್ನು ಬೆಳಗುವುದನ್ನು ನೋಡುವ ವಿಶಿಷ್ಟ ಅನುಭವವೆಂದೂ ಹೇಳಬಹುದು.
ಆದರೆ, ಈ ರೀತಿ ರಾತ್ರಿ ಹೊತ್ತಿನಲ್ಲಿ ನಡೆಸುವ ಸೋಲೋಟ್ರಿಪ್‌ಗೆ ನಮ್ಮ ಮನೆಯಲ್ಲಿ ಅನುಮತಿ ಪಡೆಯುವುದು ಸ್ವಲ್ಪ ಕಷ್ಟ. ನಮ್ಮ ಅಮ್ಮನನ್ನಾದರೂ ಒಪ್ಪಿಸ ಬಹುದು; ಆದರೆ ಮನೆಯ ಉಸ್ತುವಾರಿ, ದೇಖರೇಖೆ, ಕುಟುಂಬದ ಸದಸ್ಯರ ಆರೋಗ್ಯ ಕಾಪಾಡುವ ಜವಾಬ್ದಾರಿ, ಯಜಮಾನಿಕೆ ಎಲ್ಲವನ್ನೂ ಹೊತ್ತಿದ್ದ ನಮ್ಮ ಅಮ್ಮಮ್ಮನನ್ನು ಒಪ್ಪಿಸುವುದು ಕಷ್ಟ! ಅವರು ನಮ್ಮೆಲ್ಲರಿಗೂ ಹೆಡ್ ಮೇಡಂ ಆಗಿದ್ದರು ಮತ್ತು ಈ ಹುದ್ದೆಯಲ್ಲಿ ಅಡಕ ಗೊಂಡಿರುವ ವೀಟೋ ಪವರ್ ಅನ್ನು ಚಲಾಯಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ: ನಾನು ಮತ್ತು ನನ್ನ ಮೂವರು ತಂಗಿಯರು ಅವರ ಈ ವೀಟೋ ಪವರ್‌ನ ನೆರಳಿನಲ್ಲೇ ಶಾಲೆಗೆ ಮತ್ತು ಬೇರೆಲ್ಲಾದರೂ ಜಾಗಕ್ಕೆ ಹೋಗಬೇಕಿತ್ತು!
ಆದ್ದರಿಂದ, ರಾತ್ರಿ ಹೊತ್ತು ಈ ರೀತಿ ಏಕಾಂಗಿಯಾಗಿ ಹೊರಡುತ್ತೇನೆ ಎಂದಾಕ್ಷಣ, ಅವರು ಅದರ ಸಾಧಕ ಬಾಧಕಗಳನ್ನು ಗಮನಿಸಿ, ಸುರಕ್ಷತೆಯ ದೃಷ್ಟಿಯಿಂದಲೋ, ಅತಿ ಕಾಳಜಿ ಯ ದೃಷ್ಟಿಯಿಂದಲೋ ಬೇಡ ಎನ್ನುವ ಸಾಧ್ಯತೆಯೇ ಅಧಿಕ!
ಆದರೆ, ಆ ದಿನ ನನ್ನ ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ದೇಗುಲದಲ್ಲಿ ನಡೆಯುವ ಕಾರ್ತಿಕ ದೀಪೋತ್ಸವಕ್ಕೆ ತನ್ನ ಮೊಮ್ಮಗ (ನಾನು) ಹೊರಟಿದ್ದಾನೆ ಎಂದೋ, ಅಂಥ ಸಂದರ್ಭದಲ್ಲಿ ದೇಗುಲದಲ್ಲಿ ನಡೆಯುವ ರಂಗಪೂಜೆಯನ್ನು ನೋಡುವವರಿಗೆ ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದ್ದುದರಿಂದ, ಅದನ್ನು ನೆನಪಿಸಿಕೊಂಡೋ ಏನೋ, ಅವರು ಆ ಸಂಜೆ ನನ್ನ ಮಾತಿಗೆ ಬೆಲೆಕೊಟ್ಟರು ಎನಿಸುತ್ತೆ.
ದೀಪೋತ್ಸವದಲ್ಲಿ ಪಾಲ್ಗೊಳ್ಳುವುದು ಎಂದರೆ ಪುಣ್ಯದ ಕೆಲಸ ಎಂಬ ಭಾವನೆ ನಮ್ಮ ಊರಲ್ಲಿತ್ತು. ದೀಪೋತ್ಸವ ಸಂದರ್ಭದಲ್ಲಿ ರಂಗಪೂಜೆ ಎಂಬ ಪೂಜೆಯೂ ನಡೆಯುವುದು ಸಾಮಾನ್ಯ. ಅದರ ಪುಣ್ಯವನ್ನು ಹೋಲಿಸುವ ಒಂದು ಮಾತಿನ ವರಸೆ ನಮ್ಮೂರಿನಲ್ಲಿದೆ.
ಇದೇ ಸಮಯದಲ್ಲಿ, ಅಲ್ಲಲ್ಲಿ ನಡೆಯುವ ಯಕ್ಷಗಾನ ನೋಡುವುದು ನಮ್ಮೂರಿನವರ ಪದ್ಧತಿ. ಯಕ್ಷಗಾನ ನೋಡಿದವರ ಮನದಲ್ಲಿ ಸಾಕಷ್ಟು ರಸಾನುಭವ, ಕ್ಷೋಭೆ ಮೊದಲಾ ದವು ಮೂಡುತ್ತವೆ, ಅದನ್ನು ತೊಳೆದು ಹಾಕಲು (ಅಂದರೆ, ಯಕ್ಷಗಾನ ನೋಡಿದ ಪಾಪ ವನ್ನು ತೀರಿಸಲು), ಅದರ ಪ್ರಭಾವದಿಂದ ಹೊರಬರಲು ಏಳು ರಂಗಪೂಜೆಯನ್ನು ನೋಡ ಬೇಕೆಂಬ ನಾಣ್ಣುಡಿಯೇ ನಮ್ಮ ಪ್ರದೇಶದಲ್ಲಿ ಚಾಲ್ತಿಯಲ್ಲಿತ್ತು!
ಅದರ ಪ್ರಭಾವ ಇದ್ದರೂ ಇರಬಹುದು, ದೂರದ ಊರಿನಲ್ಲಿ ರಾತ್ರಿ ಹೊತ್ತಿನಲ್ಲಿ ನಡೆಯುವ ದೀಪೋತ್ಸವ ನೋಡಿಕೊಂಡು ಬರಲು ನನಗೆ ಅನುಮತಿ ನೀಡಿದರು. “ಆದರೆ, ದೀಪ ಮುಗಿಯೋದು ಮಧ್ಯರಾತ್ರಿ ಆಗುತ್ತೆ; ಅದು ಮುಗಿದ ನಂತರ ಎಂತ ಮಾಡ್ತೀ? ಎಲ್ಲಿ ತಂಗುತ್ತೀ?" ಎಂದು ಪ್ರಶ್ನಿಸಿದರು.
ಶಂಕರನಾರಾಯಣ ದೇಗುಲದ ಪ್ರಖ್ಯಾತ ದೀಪೋತ್ಸವದ ಎಲ್ಲಾ ಕಾರ್ಯಕ್ರಮ ಮುಗಿಯು ವಾಗ ಮಧ್ಯರಾತ್ರಿ ಕಳೆದಿರುತ್ತದೆ; ನಂತರ, ೫ ಕಿ.ಮೀ. ವಾಪಸು ಬರಲು, ಇಂದಿನಂತೆ ದ್ವಿಚಕ್ರ ವಾಹನ ಸೌಕರ್ಯ ಆಗ ಇರಲಿಲ್ಲ. ನಡೆದು ಬರಲು ಆ ರಾತ್ರಿಯಲ್ಲಿ ಅಸಾಧ್ಯ. ಆದ್ದರಿಂದ, ನಂತರ ಎಲ್ಲಿ ಕಾಲ ಕಳೆಯುತ್ತೀಯಾ ಎಂಬ ಪ್ರಶ್ನೆ ಅದು. ಅವರ ಈ ಅನಿರೀಕ್ಷಿತ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಅದಕ್ಕೊಂದು ಉತ್ತರವನ್ನು ನಾನು ಮುಂಚಿತವಾಗಿ ಯೋಚಿಸಿ, ಸಿದ್ಧಪಡಿಸಿಕೊಳ್ಳಬೇಕಿತ್ತು!
ಕೊನೆಗೆ ನಮ್ಮ ಅಮ್ಮಮ್ಮನೇ ಪರಿಹಾರ ಸೂಚಿಸಿದರು. “ಅದೇ ಊರಿನಲ್ಲಿ ಇರುವ ನಿನ್ನ ಕ್ಲಾಸ್‌ಮೇಟ್ ಮನೆಗೆ ಹೋಗಿ ಮಲ್ಕೋ. ಬೆಳಗ್ಗೆ ಎದ್ದು ಬಾ" ಎಂದರು. ಸರಿ, ಎಂದು ನಮ್ಮ ಮನೆ ಎದುರಿನ ಗದ್ದೆ ಬಯಲಿನ ನಡುವೆ, ಗದ್ದೆಗಳ ಅಂಚಿನುದ್ದಕ್ಕೂ ಸಾಗುವ ದಾರಿಯಲ್ಲಿ ಕಾಲೆಸೆದೆ. ಚಳಿಗಾಲದ ಆರಂಭದ ದಿನಗಳು. ಅದಾಗಲೇ ಸಣ್ಣಗೆ ಇಬ್ಬನಿ ಬಿದ್ದಿದ್ದು, ಭತ್ತದ ಎಲೆಗಳ ಪುಟಾಣಿ ಮುತ್ತಿನ ಹನಿಗಳ ರೀತಿ ಮೇಲೆ ಕುಳಿತಿದ್ದು, ಗದ್ದೆಗಳ ನಡುವಿನ ದಾರಿ ಯಲ್ಲಿ ನಡೆದಾಗ ಕಾಲುಗಳನ್ನು ಹಿತವಾಗಿ ಒದ್ದೆ ಮಾಡಿದವು.
ಗದ್ದೆದಾರಿಯ ನಂತರ, ಒಂದು ಕಿ. ಮೀ. ಕಾಡುದಾರಿಯಲ್ಲಿ ನಡೆದು, ಆ ನಂತರ ಟಾರು ರಸ್ತೆಯುದ್ದಕ್ಕೂ ಸಾಗಿದೆ; ಒಟ್ಟು ಐದು ಕಿ.ಮೀ. ನಡೆದು, ಶಂಕರನಾರಾಯಣ ದೇಗುಲ ತಲುಪಿದಾಗ ಪೂರ್ತಿ ಕತ್ತಲಾಗಿತ್ತು. ಶಂಕರನಾರಾಯಣ ದೇಗುಲದ ವಿಶೇಷ ಏನೆಂದರೆ, ಅದು ಕೆರೆಯ ಮೇಲೆ ನಿರ್ಮಾಣಗೊಂಡ ದೇಗುಲ ಎಂಬ ನಂಬಿಕೆ. ಅಷ್ಟು ಮಾತ್ರವಲ್ಲ, ಬಹು ಹಿಂದೆ ಕೆರೆಯ ಮೇಲೆ ದೇವತೆಗಳೇ ನಿರ್ಮಿಸಿದರು ಎಂದೂ ಹೇಳುತ್ತಿದ್ದರು.
ಜತೆಗೆ, ಗುಡ್ಡದ ಮೇಲೆ ವಾಸವಾಗಿದ್ದ ದೇವರು, ಅಲ್ಲಿನ ಅರ್ಚಕರ ಮನವಿಯ ಮೇರೆಗೆ, ಕೆಳಗೆ ನೆಗೆದು ಈಗ ಇರುವ ಜಾಗದಲ್ಲಿ ನೆಲೆಸಿದನೆಂದೂ, ಆ ಪುರಾತನ ಕಾಲದಲ್ಲಿ ದೇವರು ನೆಗೆದದ್ದರ ಗುರುತಿಗಾಗಿ, ಅಲ್ಲಿರುವ ಕಲ್ಲಿನ ಮೇಲೆ ಈಗಲೂ ಕಾಣಿಸುವ ಹೆಜ್ಜೆಗುರುತನ್ನೂ ಗುರುತಿಸಿಟ್ಟಿದ್ದಾರೆ. ಈಗಲೂ ಆ ಹೆಜ್ಜೆಗುರುತನ್ನು ಭಯ ಭಕ್ತಿಯಿಂದ ತೋರಿಸುತ್ತಾರೆ!
ಈಗ ದೇಗುಲದ ಮುಂಭಾಗದ ಹೆಬ್ಬಾಗಿಲಿಗೆ ಅಂಟಿಕೊಂಡಂತೆ ಕೆರೆಯಿದೆ. ದೀಪೋತ್ಸವದ ಆ ದಿನ, ಅದಾಗಲೇ ಕೆರೆಯ ಸುತ್ತಲೂ ಹಣತೆಗಳನ್ನು ಹಚ್ಚಲಾಗಿದ್ದು, ಅದರ ಪ್ರತಿಬಿಂಬ ಕೆರೆಯ ನೀರಿನಲ್ಲಿ ಸುಂದರವಾಗಿ ಕಾಣುತ್ತಿತ್ತು. ಜನರು ದೀಪೋತ್ಸವಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ಆ ದೊಡ್ಡ ದೇಗುಲದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವವನ್ನು ನೋಡುವುದು ಒಂದು ದೈವಿಕ ಅನುಭವ ಎಂದೇ ಜನ ನಂಬುತ್ತಾರೆ.
ರಾತ್ರಿ ೧೧ ಗಂಟೆಯ ನಂತರ ಪಟಾಕಿ, ಬಿರುಸುಗಳ ಭರಾಟೆ ಆರಂಭವಾಯಿತು. ಆದರೆ ರಾಕೆಟ್ ಹಾರಿಸಲಿಲ್ಲ; ಅದೊಂದನ್ನು ಆ ದೀಪೋತ್ಸವದಲ್ಲಿ ಹಾರಿಸವಂತಿಲ್ಲ ಎಂಬಂಥ ನಿಯಮವನ್ನು ಆ ದೇಗುಲದವರು ಪಾಲಿಸಿಕೊಂಡು ಬಂದಿದ್ದಾರೆ. ಬೇರೆಲ್ಲಾ ಪಟಾಕಿ, ಕದನಿ ಮೊದಲಾದವುಗಳನ್ನು ಸಿಡಿಸಿದರೂ, ಆಗಸದಲ್ಲಿ ಸಾಗುವ ರಾಕೆಟ್ ಹಾರಿಸು ವಂತಿಲ್ಲ ಎಂಬ ನಿಯಮವನ್ನು ಅಲ್ಲಿ ರೂಪಿಸಿದ್ದಕ್ಕೆ, ಕೆಲವೇ ವರ್ಷಗಳ ಹಿಂದೆ ಅಲ್ಲಿ ನಡೆದ ಒಂದಲ್ಲ, ಎರಡು ದುರಂತ ಕಾರಣ. ಕೆಲವು ವರ್ಷಗಳ ಹಿಂದೆ ರಾಕೆಟ್ ಹಾರಿಸಿ ದಾಗ, ರಾಕೆಟ್ ಕಿಡಿ ಬಿದ್ದು ಮನೆಯೊಂದು ಸುಟ್ಟು ಹೋಯಿತು!
ದೇಗುಲದ ಎದುರು ಹಾರಿಸಿದ ರಾಕೆಟ್, ಮೇಲಕ್ಕೆ ಹೋಗಿ, ಒಂದು ಮನೆಯ ಮೇಲೆ ಬಿತ್ತು- ಆ ಮನೆಗೂ, ದೇಗುಲಕ್ಕೂ ನಡುವೆ ವಿಶಾಲವಾದ ಕೆರೆಯಿದ್ದರೂ, ಬೆಂಕಿ ಕಿಡಿ ಹರಡಲು ಎಷ್ಟು ಸಮಯ ಬೇಕು? ಆ ಮನೆ ಹುಲ್ಲಿನ ಮನೆ! ಆಗೆಲ್ಲಾ ಬಡವರು ಹುಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದರು.
ಕ್ಷಣಾರ್ಧದಲ್ಲಿ ಆ ಹುಲ್ಲಿನ ಮನೆ ಸುಟ್ಟು ಹೋಯಿತ; ಎದುರಿನಲ್ಲೇ ನೀರು ತುಂಬಿದ ಕೆರೆ ಇದ್ದರೂ, ಬೆಂಕಿ ನಂದಿಸಲಾಗದೇ ಎಲ್ಲರೂ ಅಸಾಯಕರಾದರು. ಪಾಪ, ಆ ಮನೆಯವರು ಕಷ್ಟದಿಂದ ಪುನಃ ಮನೆ ರಿಪೇರಿ ಮಾಡಿಸಿ, ಪುನಃ ಹುಲ್ಲಿನ ಛಾವಣಿ ಹಾಕಿಸಿ ಮನೆ ನಿರ್ಮಿಸಿ ಕೊಂಡರು. ದೇಗುಲದ ವ್ಯವಸ್ಥಾಪನಾ ಮಂಡಳಿ ಮತ್ತು ಆಚೀಚಿನವರು ಮನೆ ಕಟ್ಟಿ ಕೊಳ್ಳಲು, ಬದುಕು ಕಟ್ಟಿಕೊಳ್ಳಲು ಅವರಿಗೆ ಸಹಾಯ ಮಾಡಿದರು.
ಮರುವರ್ಷ ದೀಪೋತ್ಸವದ ದಿನ, ದೇಗುಲದ ಎದುರು ಎಂದಿನಂತೆ ರಾಕೆಟ್ ಹಾರಿಸಿದರು. ಒಂದು ರಾಕೆಟ್ ಕೆರೆಯನ್ನು ದಾಟಿ, ಆಗಸದಲ್ಲೇ ಸಾಗಿ, ಪುನಃ ಅದೇ ಮನೆಯ ಮೇಲೆ ಬಿತ್ತು! ಆಗಲೂ ಹುಲ್ಲಿನ ಮನೆ! ಪೂರ್ತಿ ಸುಟ್ಟುಹೋಯಿತು. ಆ ಮನೆಯವರು ಅತೀವ ನಷ್ಟಕ್ಕೆ ಒಳಗಾದರು. ಆ ನಂತರ, ಶಂಕರನಾರಾಯಣ ದೀಪೋತ್ಸವದಲ್ಲಿ ರಾಕೆಟ್ ಹಾರಿಸಬಾರದು, ಬೇರೆ ಪಟಾಕಿಗಳನ್ನು ಮಾತ್ರ ಹಾರಿಸಬೇಕು ಎಂಬ ನಿಯಮವನ್ನು ಮಾಡಿಕೊಂಡರು.
ಇದು 1970ರ ದಶಕದ ಕಥೆ. ಎರಡು ಬಾರಿ ಬೆಂಕಿಗೆ ಮನೆಯನ್ನು ಕಳೆದುಕೊಂಡ ಆ ಸಜ್ಜನರು, ನಂತರ ಮಂಗಳೂರು ಹಂಚಿನ ಪುಟ್ಟ ಮನೆ ಕಟ್ಟಿಕೊಂಡರು. ಪಟಾಕಿಗಳ ಭರಾಟೆಯ ಮುಗಿಯುವಾಗ ನಡುರಾತ್ರಿ ಕಳೆದಿತ್ತು; ರಾತ್ರಿ ೧ರ ಹೊತ್ತಿಗೆ ದೀಪೋತ್ಸವ ಮುಗಿಯಿತು. ಎಲ್ಲರೂ ಹೊರಟು ಹೋದರು. ನನ್ನ ಸಹಪಾಠಿಯ ಮನೆಗೆ ಹೋಗಿ, ಅಲ್ಲೇ ತಂಗುವುದು ಎಂಬ ಯೋಚನೆ ನನಗೇಕೋ ಹಿಡಿಸಲಿಲ್ಲ. ಯಾಕೊ ಗೊತ್ತಿಲ್ಲ!
ನಾನು ಆಗ ಸಂಕೋಚದ ಮುದ್ದೆ. ಅವರ ಮನೆಗೆ ಹೋಗಿ ಇರುವುದಕ್ಕೆ ಸಂಕೋಚ ವಾಯಿತು. ಆದ್ದರಿಂದ, ದೇವಾಲಯದ ಆವರಣದಲ್ಲೇ ಮಲಗುವುದು ಎಂದು ನಿರ್ಧರಿಸಿದೆ. ಹಾಗೆಂದೇ, ದೇವಾಲಯದ ಪೌಳಿಯಲ್ಲಿ ಕುಳಿತಿದ್ದೆ. ಜನರೆಲ್ಲಾ ಹೊರಟು ಹೋಗಿದ್ದರು. ನಸುಕತ್ತಲಿನ ವಾತಾವರಣ. ಅಷ್ಟರಲ್ಲಿ ಯಾರೋ ಒಬ್ಬರು ಹತ್ತಿರ ಬಂದು, “ಮನೆಗೆ ಹೋಗೋಲ್ವಾ?" ಎಂದರು.
ದೇಗುಲದ ರಕ್ಷಣೆಯ ಜವಾಬ್ದಾರಿ ಅವರದ್ದಿರಬೇಕು. “ಇಲ್ಲ, ನಮ್ಮ ಮನೆಗೆ ಐದು ಕಿ.ಮೀ. ಆಗುತ್ತದೆ, ಆದ್ದರಿಂದ ಬೆಳಗ್ಗೆ ಬೇಗನೆ ಹೋಗುವೆ" ಎಂದೆ. “ಸರಿ ಇಲ್ಲೇ ಮಲ್ಕೋ, ಹೆಬ್ಬಾಗಿಲಿ ನಲ್ಲಿ" ಎಂದು, ಅವರೂ ಕಣ್ಮರೆಯಾದರು. ಆ ದೇಗುಲಕ್ಕೆ ಅದೇ ಕೆಲವು ವರ್ಷಗಳ ಹಿಂದೆ ಹೊಸದಾಗಿ ಚಂದವಾದ ಹೆಬ್ಬಾಗಿಲನ್ನು ನಿರ್ಮಿಸಲಾಗಿತ್ತು. ಅದನ್ನು ಕಟ್ಟಿಸಿದವರ ಹೆಸರನ್ನೂ ಮುಂಭಾಗದಲ್ಲಿ ಕೆತ್ತಲಾಗಿತ್ತು- ‘ಚಾರ್ಮಕ್ಕಿ ನಾರಾಯಣ ಶೆಟ್ಟರ ಸೇವೆ’ ಎಂದು. ಅವರು ದೇಗುಲಕ್ಕೆ ದಾನದ ರೂಪದಲ್ಲಿ, ಸೊಗಸಾದ ಹೆಬ್ಬಾಗಿಲನ್ನು, ಉಪ್ಪರಿಗೆ ಯನ್ನೂ ಕಟ್ಟಿಸಿದ್ದರು.
ಅಲ್ಲೇ ನೆಲದ ಮೇಲೆ ಮಲಗಿದೆ; ಆ ಕತ್ತಲಲ್ಲಿ ನಿದ್ದೆಯೆಲ್ಲಿ ಬಂದೀತು? ಬೆಳಗಿನ ಜಾವ ಆಗುವುದನ್ನೇ ಕಾಯುತ್ತಿದ್ದು, ಬೆಳಗಿನ ೫ ಗಂಟೆಗೆ ಎದ್ದು, ಒಬ್ಬನೇ ರಸ್ತೆಯ ಮೇಲೆ ನಡೆದು, ನಂತರ ಕಾಡು ದಾರಿ ಮತ್ತು ಗದ್ದೆ ದಾರಿಯನ್ನು ಸವೆಸಿ, ಮನೆ ತಲುಪುವಾಗ ಪೂರ್ತಿ ಬೆಳಗಾಗಿತ್ತು.