Harish Kera Column: ಚಿಪ್ಸ್ ತಿನ್ನುವ ಮಂಗ, ಚಿಲ್ಲರೆ ಹೆಕ್ಕುವ ಆನೆ
ಅಲ್ಲಿ ಲಕ್ಷಾಂತರ ಹುಳಗಳಿದ್ದರೂ ಒಂದೊಂದು ಗಂಡಿನ ಮಿನುಗುವ ಲಯವೂ ಒಂದೊಂದು ಥರ. ಯಾವುದೋ ಒಂದು ನಿರ್ದಿಷ್ಟ ಹೆಣ್ಣು, ಇನ್ಯಾವುದೋ ಒಂದು ನಿರ್ದಿಷ್ಟ ಗಂಡಿಗೆ ಇಷ್ಟ ಆಗಬೇಕು. ಆ ಸಂದೇಶವೂ ಅವುಗಳ ಬೆಳಕಿನ ಮೂಲಕವೇ. ನಂತರ ಅವು ಕೂಡಿ ಮೊಟ್ಟೆ ಇಟ್ಟು ಮರಿ ಮಾಡಬೇಕು. ಆದರೆ ನಮ್ಮ ವಿದ್ಯುತ್ತಿನ ಪ್ರಬಲ ಬೆಳಕು ಅದನ್ನು ಕಾಣಲು ಬಿಡುವುದೇ ಇಲ್ಲ.
-
ಕಾಡುದಾರಿ
ಪಶ್ಚಿಮ ಘಟ್ಟದ ಕಾಡೊಂದರ ಅಂಚಿನಲ್ಲಿ ತೋಟ ಮಾಡಿ ಮನೆ ಕಟ್ಟಿಕೊಂಡು ಬಹಳ ವರ್ಷ ಗಳಿಂದ ವಾಸವಾಗಿರುವ ಆ ಹಿರಿಯರು ಹೇಳುತ್ತಿದ್ದರು- ನಾನು ಸಣ್ಣವನಿದ್ದಾಗ ರಾತ್ರಿಗಳಲ್ಲಿ ಸಿಕ್ಕಾಪಟ್ಟೆ ಮಿಣುಕು ಹುಳಗಳನ್ನು ನೋಡುತ್ತಿದ್ದೆ. ಸಂಜೆ ಮಳೆ ಬಂದು ನಿಂತರೆ ರಾತ್ರಿಯಿಡೀ ಆಕಾಶಕ್ಕೆ ಸಣ್ಣ ಬಲ್ಬುಗಳ ದೀಪಮಾಲೆ ಕಟ್ಟಿದಂತೆ ಇರೋದು. ಅಂಗುಲ ಜಾಗ ಬಿಡದಂತೆ ಮಿನುಗುತ್ತಿದ್ದವು. ಈಗ ವಿರಳವಾಗಿವೆ. ಅವರು ಹೇಳುವಂತೆ ಅದಕ್ಕೆ ಕಾರಣ, ಕರೆಂಟ್ ದೀಪಗಳು ಬಂದದ್ದು. ಪರಿಶೀಲಿಸಿ ನೋಡಿದರೆ, ಅವರು ಹೇಳಿದ್ದು ನಿಜ. ಕತ್ತಲಿನಲ್ಲಿ ಮಿನುಗುವ ಬೆಳಕಿನ ಮೂಲಕ ಅವು ಒಂದಕ್ಕೊಂದು ಪ್ರೇಮ ಸಂದೇಶ ಕಳಿಸುತ್ತವೆ.
ಅಲ್ಲಿ ಲಕ್ಷಾಂತರ ಹುಳಗಳಿದ್ದರೂ ಒಂದೊಂದು ಗಂಡಿನ ಮಿನುಗುವ ಲಯವೂ ಒಂದೊಂದು ಥರ. ಯಾವುದೋ ಒಂದು ನಿರ್ದಿಷ್ಟ ಹೆಣ್ಣು, ಇನ್ಯಾವುದೋ ಒಂದು ನಿರ್ದಿಷ್ಟ ಗಂಡಿಗೆ ಇಷ್ಟ ಆಗಬೇಕು. ಆ ಸಂದೇಶವೂ ಅವುಗಳ ಬೆಳಕಿನ ಮೂಲಕವೇ. ನಂತರ ಅವು ಕೂಡಿ ಮೊಟ್ಟೆ ಇಟ್ಟು ಮರಿ ಮಾಡಬೇಕು. ಆದರೆ ನಮ್ಮ ವಿದ್ಯುತ್ತಿನ ಪ್ರಬಲ ಬೆಳಕು ಅದನ್ನು ಕಾಣಲು ಬಿಡುವುದೇ ಇಲ್ಲ.
ಬೆಳಕಿನ ಮೂಲಕ ಸಂದೇಶ ಕಳಿಸುವುದು ಸಾಧ್ಯವಾಗದೇ ಹೋದಾಗ ಅವು ಅಳಿಯುತ್ತವೆ. ಅಥವಾ ಕತ್ತಲನ್ನು ಅರಸಿಕೊಂಡು ಇನ್ನಷ್ಟು ಕಾಡಿನೊಳಗೆ ಹೋಗುತ್ತವೆ. ಹೀಗಾಗಿ ಈಗ ದಟ್ಟ ಕಾಡಿನಲ್ಲಷ್ಟೇ ಇವುಗಳನ್ನು ನೋಡಬಹುದು ಹೊರತು ಮನುಷ್ಯ ವಸತಿ ಇರುವ ಕಡೆಯಲ್ಲಲ್ಲ. ತೀವ್ರ ನಗರೀಕರಣದ ಮೊದಲು ಇವುಗಳನ್ನು ಬೆಂಗಳೂರಿನ ಹಸಿರು ಇದ್ದೆಡೆಗಳಲ್ಲೂ ಕಾಣಬಹುದಿತ್ತಂತೆ. ಅಂದರೆ, ಮಿಂಚುಹುಳಗಳ ವರ್ತನೆ, ಅವುಗಳ ಅಭ್ಯಾಸ, ಅವುಗಳ ಜೈವಿಕ ಚಕ್ರ ಕೂಡ ಮನುಷ್ಯರನ್ನು ಅನುಸರಿಸಿ ಬದಲಾಗಿದೆ, ಆಗುತ್ತಿದೆ.
ಇದನ್ನೂ ಓದಿ: Harish Kera Column: ಆಧುನಿಕತೆಯ ಸಂತೆಯಲ್ಲಿ ಹಸಿರಿನ ಸಂತ
ಮೊದಲು ಮಲೆನಾಡು, ಬಯಲು ಸೀಮೆ ಮೊದಲಾದೆಡೆ ಮನೆಗಳು ಇದ್ದಲ್ಲಿ ಕಾಗೆಗಳು ಇರುತ್ತಿದ್ದವು. ಪಿತೃಶ್ರಾದ್ಧದ ಊಟವಿಟ್ಟು ‘ಕಾ, ಕಾ’ ಎಂದು ಕರೆದಾಗ ಕಾಗೆಗಳು ಹಾಜರಾಗುತ್ತಿದ್ದುದನ್ನು ಕಾಣಬಹುದಾಗಿತ್ತು. ಈಗ ಅವು ಕರೆದರೂ ಬರೋಲ್ಲ. ಕರೆದರೆ ಬರಲು ಅಲ್ಲಿ ಅವು ಇರಬೇಕಲ್ಲ. ಆದರೆ, ಜನ ಸಾಮೂಹಿಕವಾಗಿ ಪಿತೃಶ್ರಾದ್ಧ ಮಾಡುವ ಕೆಲವು ತೀರ್ಥಕ್ಷೇತ್ರಗಳಲ್ಲಿ ಕಾಗೆಗಳ ಸಂಖ್ಯೆ ಸಾಕಷ್ಟಿದೆ. ಕಾರಣ ಅಲ್ಲಿ ಅವುಗಳಿಗೆ ಆಹಾರ ಸಿಗುತ್ತದೆ. ಅಂದರೆ, ವಿರಳ ಜನವಸತಿಗಳ ಕಡೆಯಿಂದ ಕಾಗೆಗಳು ಹೆಚ್ಚು ಆಹಾರ ಸಿಗುವ ಕಡೆಗಳಿಗೆ ವಲಸೆ ಹೋಗಿವೆ. ಬಯಲುಸೀಮೆಯ ಗುಡ್ಡಬೆಟ್ಟಗಳ ಮೇಲಿರುವ ದೇವಾಲಯಗಳ ಬಳಿ ಹೇರಳವಾಗಿರುವ ಕೋತಿಗಳು ಈ ಮೊದಲೇ ಮನುಷ್ಯರ ಆಹಾರಕ್ಕೆ ಬಳಕೆಯಾಗಿದ್ದವು. ಆದರೆ ಈಗ ಮಲೆನಾಡಿನ ಮಂಗಗಳೂ ಹಾಗಾಗುತ್ತಿವೆ.
ಚಾರ್ಮಾಡಿ, ಆಗುಂಬೆ ಮುಂತಾದ ಕಡೆ ಘಾಟಿ ರಸ್ತೆಗಳ ಬದಿಯಲ್ಲಿ ವಾಸಿಸುವ ಮಂಗಗಳು, ಮನುಷ್ಯ ನೀಡುವ ಆಹಾರಕ್ಕೆ ಒಗ್ಗಿಹೋಗಿವೆ. ಆರಾಮಾಗಿ ಚಿಪ್ಸ್ ಪ್ಯಾಕೆಟ್ ಹರಿದು ತಿಂದು, ಕೋಕ್ ಬಾಟಲಿಯ ಮುಚ್ಚಳ ತೆರೆದು ಕುಡಿದು ಟ್ರಂಪ್ ಥರ ಮುಖ ಮಾಡುತ್ತವೆ. ಇನ್ನು ಮಲೆನಾಡಿನಲ್ಲಿ ಅಡಿಕೆ ತೋಟಗಳಿಗೆ ದಾಳಿಯಿಡುವ ಕೋತಿಗಳು, ಮನುಷ್ಯನನ್ನು ಕಂಡರೆ ಹೆದರುವುದಿಲ್ಲ. ಆದರೆ ಅವನ ಕೈಯಲ್ಲಿ ಕೋವಿ ಇದ್ದರೆ ಪರಾರಿಯಾಗುತ್ತವೆ ಅಥವಾ ಅಡಗಿ ಕೂರುತ್ತವೆ. ಮನುಷ್ಯನಿಗೆ ಯಾವಾಗ ಹೆದರಿಸಬೇಕು, ಯಾವಾಗ ಹೆದರಬೇಕು ಎಂಬುದೆಲ್ಲ ಅವುಗಳಿಗೆ ಈಗ ಕರತಲಾಮಲಕ. ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿ ಯುದ್ಧದ ಮುಂಚೂಣಿ ಪ್ರದೇಶದಲ್ಲಿ ತಜ್ಞರು ಒಂದು ಹಕ್ಕಿ ಗೂಡನ್ನು ಪತ್ತೆ ಹಚ್ಚಿದರು.
ಆ ಹಕ್ಕಿ ಅದನ್ನು ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಬಳಸಿ ನಿರ್ಮಿಸಿಕೊಂಡಿತ್ತು. ಅವು ಫೈಬರ್ ಆಪ್ಟಿಕ್ ಮೂಲಕ ನಿಯಂತ್ರಿಸಲ್ಪಡುವ ಎಫ್ಪಿವಿ ಡ್ರೋನ್‌ಗಳಲ್ಲಿ ಬಳಸಲಾಗುತ್ತಿದ್ದ ಕೇಬಲ್. ಸಾಮಾನ್ಯವಾಗಿ ಈ ಹಕ್ಕಿ ಹುಲ್ಲು, ಕೂದಲು ಅಥವಾ ಪ್ರಾಣಿಗಳ ತುಪ್ಪಳದ ಬಳಸಿ ಗೂಡು ಕಟ್ಟಬೇಕು. ಆದರೆ ಅದಕ್ಕೆ ಸಿಗುತ್ತಿಲ್ಲ. ಹೇರಳವಾಗಿ ಸಿಕ್ಕಿರುವುದು ಯುದ್ಧದ ಅವಶೇಷಗಳಲ್ಲಿ ಉಳಿದಿರುವ ಕೇಬಲ್. ರಷ್ಯಾ- ಉಕ್ರೇನ್ ಘೋರ ಯುದ್ಧದ ನಡುವೆ, ‘ಕ್ಷುದ್ರ’ ಎಂದು ನರಮಾನವ ಕರೆಯಬಹುದಾದ ಅಪ್ಪಟ ಪ್ರಾಕೃತಿಕ ಜೀವಿಯೊಂದು ಕಂಡುಕೊಂಡ ಬದುಕಿನ ದಾರಿ ಇದು. ತುಂಬ ದೂರ ಹೋಗುವುದು ಬೇಡ.
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ರಾಶಿ ರಾಶಿ ಪಾರಿವಾಳಗಳಿದ್ದವು. ಅಲ್ಲಿನ ಒಂದು ಸ್ಮಾರಕದ ಬಳಿ ಜನ ಅವುಗಳಿಗೆ ಕಾಳು ಹಾಕುತ್ತಿದ್ದರು. ಅವು ಅಲ್ಲಿಯೇ ವಾಸಿಸಿ, ಅಲ್ಲೇ ಮರಿ ಮಾಡಿ, ತಲೆಮಾರು ಗಳನ್ನು ಬೆಳೆಸಿದ್ದವು. ಇತ್ತೀಚೆಗೆ ಸರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ ಎಂದು ರೂಲ್ ಮಾಡಿತು. ಜನ ಕಾಳು ಹಾಕುವುದನ್ನು ನಿಲ್ಲಿಸಿದರು. ಈಗ ಪಾರಿವಾಳಗಳು ಅಲ್ಲಿ ಕಾಣಿಸುತ್ತಿಲ್ಲ. ಹಾಗಾದರೆ ಅವೆಲ್ಲ ಎಲ್ಲಿ ಹೋದವು.
ಎಲ್ಲವೂ ಲಾಲ್‌ಬಾಗ್ ಸುತ್ತಮುತ್ತಲಿನ ಬಹುಮಹಡಿ ಮನೆಗಳು, ಮೆಟ್ರೋ ಹಾಗೂ ಫ್ಲೈಓವರ್‌ನ ಕೆಳಬದಿ, ಪಾಕ್ ಗಳು, ಗ್ರೌಂಡ್‌ಗಳ ಬಳಿ ಸಂಸಾರ ಮಾಡಿಕೊಂಡಿವೆ. ಯಾಕೆಂದರೆ ಜನ ಇಲ್ಲಿ ಕಾಳು ಹಾಕುತ್ತಾರೆ. ಹಿಮಾಲಯದ ಒಂದು ಉದಾಹರಣೆ ನೋಡಿ. ಹಿಮಾಲಯನ್ ಮೊನಾಲ್ ಎಂಬುದು ಬಹು ಸುಂದರವಾದ, ನಮ್ಮ ನವಿಲಿನಂತೆಯೇ ಹಲವು ಬಣ್ಣಗಳಿಂದ ಕೂಡಿ, ನೋಡಿದವರನ್ನು ಕಾಮನಬಿಲ್ಲಿನಂತೆ ಸೆಳೆಯುವ ಹಕ್ಕಿ.
ಇಲ್ಲಿನ ಸೂಚಿಪರ್ಣ ವೃಕ್ಷಗಳ ಕಾಡುಗಳಲ್ಲಿ, ಬುಗ್ಯಾಲ್ ಎಂದು ಕರೆಯಲಾಗುವ ಹುಲ್ಲುಗಾವಲು ಗಳಲ್ಲಿ, ಕಲ್ಲುಬಂಡೆಗಳ ನಡುವೆ ಇವುಗಳ ವಾಸ. ಇತ್ತೀಚೆಗೆ ಎಚ್‌ಎನ್‌ಬಿ ಘರ್ವಾಲ್ ಯೂನಿವರ್ಸಿಟಿಯ ಒಂದು ತಜ್ಞರ ತಂಡ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶ ಅಂದರೆ, ಇವುಗಳ ಕೂಗಿನ ಫ್ರೀಕ್ವೆನ್ಸಿ ಹೆಚ್ಚಾಗಿದೆ. ಇವು ಮೊದಲಿಗಿಂತ ಹೆಚ್ಚು ಶಕ್ತಿ ಹಾಕಿ, ದೊಡ್ಡದಾಗಿ ಕೂಗುತ್ತಿವೆ. ಕಾರಣ, ಮನುಷ್ಯ ಉಂಟುಮಾಡುತ್ತಿರುವ ಗದ್ದಲಗಳು, ಟ್ರಾಫಿಕ್ ಸದ್ದು, ನಿರಂತರ ನಿರ್ಮಾಣ ಕಾರ್ಯಗಳು, ಧಾವಿಸುವ ಎಸ್‌ಯುವಿಗಳು, ಪ್ರವಾಸೋದ್ಯಮ ಇತ್ಯಾದಿ.
ಮಲೆನಾಡಿನಲ್ಲಿ ತೋಟಗಳಿಗೆ, ಕಾಫಿ ಎಸ್ಟೇಟ್ ಗಳಿಗೆ ನುಗ್ಗುವ ಆನೆಗಳನ್ನು ನೋಡಿ. ಇವುಗಳನ್ನು ತಡೆಯಲು ಕಂದಕ, ಬೇಲಿ ಎಲ್ಲ ಆಯ್ತು. ವಿದ್ಯುತ್ ಬೇಲಿಗಳನ್ನೂ ಹಾಕಲಾಯ್ತು. ಅವು ನಿಧಾನವಾಗಿ, ಶಾಕ್ ಹೊಡೆಯದಂತೆ ಆ ಕಲ್ಲು ಕಂಬಗಳನ್ನು ನೆಲಕ್ಕೊರಗಿಸಿ, ಬೇಲಿಯನ್ನು ಮುರಿದು ಒಳನುಗ್ಗುವ ಕಲೆಯನ್ನು ಕಲಿತವು. ಜಪಾನ್‌ನಲ್ಲಿ ಒಂದು ಜಾತಿಯ ಕಾಗೆಯಿದೆ. ಅವು ಒಂದು ಬಗೆಯ ಬೀಜಗಳನ್ನು ಒಡೆದು ಒಳಗಿನ ತಿರುಳನ್ನು ತಿನ್ನಬೇಕು. ಮೊದಲು ಈ ಬೀಜಗಳನ್ನು ಎತ್ತರದಿಂದ ಕಲ್ಲಿನ ಮೇಲೆಸೆದು, ಒಡೆದು, ನಂತರ ತಿನ್ನುತ್ತಿದ್ದವು. ಈಗ ಅವು ಬೀಜಗಳನ್ನು ತಂದು ಟ್ರಾಫಿಕ್ ತುಂಬಿದ ರಸ್ತೆ ಮೇಲೆ ಎಸೆಯುತ್ತವೆ.
ವಾಹನಗಳು ಅವುಗಳ ಮೇಲೆ ಹಾದು ಬೀಜಗಳು ಒಡೆದುಹೋದ ಬಳಿಕ ಆರಿಸಿಕೊಂಡು ತಿನ್ನುತ್ತವೆ. ಆದರೆ ವಾಹನಗಳು ಚಲಿಸುತ್ತಿರುತ್ತವಲ್ಲ? ಹೀಗಾಗಿ ಅವು ನಿಲ್ಲುವ ಟ್ರಾಫಿಕ್ ಸಿಗ್ನಲ್ ಬಳಿ ಬೀಜ ಹಾಕಿದರೆ ಹೆಚ್ಚು ಅನುಕೂಲ ಎಂಬುದನ್ನೂ ಅವು ಕಲಿತುಕೊಂಡಿವೆ. ವಾಹನಗಳು ನಿಂತಾಗ ಕಾಗೆಗಳು ಕೆಳಗೆ ಬಂದು ಸುಲಭವಾಗಿ ಬೀಜ ಆರಿಸುತ್ತವೆ. ಊಟಿ, ಕೊಡೈಕೆನಾಲ್ ಮೊದಲಾದ ನೀಲಗಿರಿ ಅರಣ್ಯಗಳ ತಪ್ಪಲಲ್ಲಿರುವ ಹಿಲ್ ಸ್ಟೇಶನ್‌ಗಳಲ್ಲಿ, ಹಿಮಾಲಯದ ಬೆಟ್ಟದೂರುಗಳಲ್ಲೂ, ಇನ್ನೊಂದು ಸಮಸ್ಯೆ ನಿಧಾನವಾಗಿ ಗರಿಗೆದರುತ್ತಿದೆ. ಅಲ್ಲಿ ಕರಡಿಗಳು ರಾತ್ರಿ ಆಹಾರ ಅರಸಿಕೊಂಡು ಊರಿಗೆ ಬಂದುಬಿಡುತ್ತಿವೆ. ಇವುಗಳ ಆಹಾರವಾದ ಜೇನು, ಕಂದಮೂಲಗಳನ್ನು ಇಲ್ಲಿನವರು ಮಾರಾಟಕ್ಕಾಗಿ ತೆಗೆಯುತ್ತಾರೆ.
ಕರಡಿಗಳು ಊಟ ಅರಸಿ ಊರಿಗೆ ಬಂದುಬಿಡುತ್ತವೆ. ರಾತ್ರಿ ಹೊತ್ತಿನಲ್ಲಿ, ಪಟ್ಟಣದ ವೆಜ್- ನಾನ್ ವೆಜ್ ಕಸವನ್ನೆಲ್ಲ ಡಂಪ್ ಮಾಡಿರುವ ಡಸ್ಟ್‌ಬಿನ್‌ಗಳ ಕಡೆಗೆ ಬರುತ್ತವೆ. ತಮಗೆ ಬೇಕಾದ ಆಹಾರ ಇಲ್ಲಿಯೇ ಸಿಗುತ್ತದೆ ಎಂಬುದು ಅವುಗಳಿಗೆ ಹೇಗೋ ಗೊತ್ತಾಗಿಬಿಟ್ಟಿದೆ. ದಿಡೀರನೆ ಮನುಷ್ಯರು ಎದುರಾದರೆ ಕಕ್ಕಾಬಿಕ್ಕಿಯಾಗಿ ದಾಳಿ ನಡೆಸಿದ ಉದಾಹರಣೆಗಳು ಉಂಟು. ಹಾಗಂತ ಕಸದ ತಿಪ್ಪೆಯನ್ನೆಲ್ಲ ಕ್ಲೀನ್ ಮಾಡಿದರೆ? ಅಕ್ಕಪಕ್ಕದ ಮನೆಗಳ ಬಳಿ ಸುಳಿದಾಡುತ್ತವೆ. ಈ ಬದಲಾವಣೆ ಗಳಿಂದ ಏನಾಗುತ್ತದೆ? ಇವು ಈ ಜೀವಿಗಳು ಒಂದು ದಿನಕ್ಕಾಗಿ ಸೃಷ್ಟಿಸಿಕೊಳ್ಳುವ ತಾತ್ಕಾಲಿಕ ಪರಿಹಾರಗಳಲ್ಲ. ಇವು ಸಹಜ ವಿಕಸನವೂ ಅಲ್ಲ.
ತಮ್ಮ ಬದುಕಿನಲ್ಲಿ ಮನುಷ್ಯನ ಹಸ್ತಕ್ಷೇಪದ ನಡುವೆ ಹೇಗೋ ಬಾಳಿ ಬದುಕಲೇಬೇಕಾದಾಗ, ಅನಿವಾರ್ಯವಾಗಿ ಮಾಡಿಕೊಳ್ಳುವ ಬದಲಾವಣೆಗಳು. ಈ ಅಭ್ಯಾಸಗಳು ತಲೆಮಾರಿನಿಂದ ತಲೆಮಾರಿಗೆ ದಾಟುತ್ತವೆ. ಮುಂದೆ ಇವೇ ಈ ಜೀವಿಗಳ ಜೀನ್ ಗಳಲ್ಲೂ ಸೇರಿಕೊಳ್ಳುತ್ತವೆ. ಸಹಜ ವಿಕಾಸದ ಬದಲು, ಈ ತಿರುಚಿದ ವಿಕಾಸವೇ ಮುನ್ನೆಲೆಗೆ ಬರುತ್ತದೆ.
ಕಾಡುಪ್ರಾಣಿಗಳನ್ನು ಮನುಷ್ಯರು ಊರಿಗೆ ತಂದು ಪಳಗಿಸಿಕೊಂಡು ಸಾಕುವುದು ಹೊಸದಲ್ಲ, ಸಾವಿರಾರು ವರ್ಷಗಳಿಂದ ನಡೆದು ಬಂದಿದೆ. ಆದರೆ ಮನುಷ್ಯನ ಅಕ್ಕಪಕ್ಕದಲ್ಲಿ ವಾಸಿಸುವ, ಅನಿವಾರ್ಯವಾಗಿ ವಾಸಿಸ ಬೇಕಾಗಿ ಬಂದ ಕಾಡುಪ್ರಾಣಿಗಳಲ್ಲೂ ಈ ಬಗೆಯ ಬದಲಾವಣೆಗಳು ಆಗುತ್ತಿರುವುದು ಪ್ರಾಣಿತಜ್ಞರು, ಪರಿಸರ ಪ್ರಿಯರು ಚಿಂತಿಸುವಂತೆ ಮಾಡಿದೆ.
ಇದರಿಂದ ಆಗುವ ದೀರ್ಘಕಾಲದ ವಿಕಾಸದ ಬಗ್ಗೆ ಚಿಂತಿಸಲಾರಂಭಿಸಿದ್ದಾರೆ. ನಾವು ಸಾಕಿದ, ಅಂದರೆ ಡೊಮೆಸ್ಟಿಕೇಟ್ ಮಾಡಿದ ನಾಯಿ, ಬೆಕ್ಕು ಮತ್ತು ಸಾಕು ಮೊಲಗಳಂತಹ ಪಳಗಿದ ಪ್ರಾಣಿಗಳಲ್ಲಿ ಮೊದಲಿನ ಆಕ್ರಮಣಕಾರಿ ಸ್ವಭಾವ ಹೋಗಿ ಸೌಮ್ಯ ಸ್ವಭಾವ ಬಂದಿರುವ ಜೊತೆಗೆ, ಕೆಲವು ಸಾಮಾನ್ಯ ದೈಹಿಕ ಲಕ್ಷಣಗಳೂ ಕಂಡುಬರುತ್ತವೆ ಎಂಬುದನ್ನು ಚಾಲ್ಸ ಡಾರ್ವಿನ್ ಮೊದಲಿಗೆ ಗಮನಿಸಿದ್ದರು. ಕಾಡು ಪೂರ್ವಜರಿಗೆ ಹೋಲಿಸಿದರೆ ಇವುಗಳ ಕಿವಿಗಳು ಹೆಚ್ಚು ಜೋತುಬಿದ್ದಿರಬಹುದು. ಬಾಲಗಳು ಸುರುಳಿಯಾಗಿರಬಹುದು.
ದವಡೆ ಮತ್ತು ಹಲ್ಲುಗಳು ಚಿಕ್ಕದಾಗಿರುವುದು, ದೇಹದ ಮೇಲೆ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳು ವುದು ಮತ್ತು ಹೆಚ್ಚು ಬಾರಿ ಸಂತಾನೋತ್ಪತ್ತಿ ಮಾಡುವುದು ಕೂಡ ಸಾಮಾನ್ಯ. ಈ ವಿದ್ಯಮಾನ ವನ್ನು ‘ಡೊಮೆಸ್ಟಿಕೇಷನ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಸಿದ್ಧ ಉದಾಹರಣೆ 1959ರಲ್ಲಿ ಸೋವಿಯತ್ ಜೀವಶಾಸ್ತ್ರಜ್ಞ ದಿಮಿತ್ರಿ ಬೆಲ್ಯಯೆವ್ ಮತ್ತು ಲ್ಯುಡ್ಮಿಲಾ ಟ್ರುಟ್ ನಡೆಸಿದ ಪ್ರಯೋಗ. ಸೈಬೀರಿಯಾದ ತುಪ್ಪಳದ ಫಾರ್ಮ್‌ನಲ್ಲಿದ್ದ ಕಾಡು ಸಿಲ್ವರ್ ನರಿಗಳಲ್ಲಿ ಹೆಚ್ಚು ಶಾಂತ ಮತ್ತು ಮನುಷ್ಯ ಸ್ನೇಹಿ ನರಿಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನೇ ಮುಂದಿನ ಪೀಳಿಗೆಗೆ ಸಂತಾನೋತ್ಪತ್ತಿ ಮಾಡಿಸಲಾಯಿತು.
ಕೆಲವೇ ಪೀಳಿಗೆಗಳಲ್ಲಿ ಈ ನರಿಗಳ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂತು. ಅವು ಹೆಚ್ಚು ವಿಧೇಯ ಮತ್ತು ಸ್ನೇಹಪರವಾದವು. ಆಶ್ಚರ್ಯವೆಂದರೆ ಅವುಗಳ ದೈಹಿಕ ರೂಪದಲ್ಲೂ ಬದಲಾವಣೆ ಗಳಾದವು- ಚಿಕ್ಕ ಮೂತಿ, ಜೋತುಬಿದ್ದ ಕಿವಿಗಳು, ಬಿಳಿ ಮಚ್ಚೆಗಳು ಮತ್ತು ಸುರುಳಿ ಯಾಗಿ ಅಲುಗಾಡುವ ಬಾಲ ಕಾಣಿಸಿಕೊಂಡವು. ಇದಕ್ಕೆ ನಿಖರ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಒಂದು ಜನಪ್ರಿಯ ವೈಜ್ಞಾನಿಕ ಸಿದ್ಧಾಂತದ ಪ್ರಕಾರ, ಪ್ರಾಣಿಗಳನ್ನು ಹೆಚ್ಚು ಶಾಂತ ಸ್ವಭಾವಕ್ಕಾಗಿ ಆಯ್ಕೆ ಮಾಡುವಾಗ, ಮನುಷ್ಯರು ಅರಿವಿಲ್ಲದೆಯೇ ಕಡಿಮೆ ಅಭಿವೃದ್ಧಿಯಾದ ಅಡ್ರಿನಲ್ ಗ್ರಂಥಿಗಳನ್ನು ಹೊಂದಿರುವ ಪ್ರಾಣಿಗಳನ್ನು ಆಯ್ಕೆ ಮಾಡಿರಬಹುದು.
ಅಡ್ರಿನಲ್ ಗ್ರಂಥಿಗಳು ‘ಭಯ ಮತ್ತು ಹೋರಾಟ ಅಥವಾ ಪಲಾಯನ’ ಪ್ರತಿಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭ್ರೂಣದಲ್ಲಿ ಅಡ್ರಿನಲ್ ಗ್ರಂಥಿಗಳನ್ನು ರೂಪಿಸುವ ಕೆಲವು ಸ್ಟೆಮ್ ಸೆಲ್‌ಗಳೇ ಮುಂದೆ ದೇಹದ ವರ್ಣಕ ಕೋಶಗಳು, ತಲೆಬುರುಡೆ, ದವಡೆ, ಹಲ್ಲು ಮತ್ತು ಕಿವಿಗಳ ಕೆಲವು ಭಾಗಗಳ ಬೆಳವಣಿಗೆಯಲ್ಲೂ ಪಾತ್ರ ವಹಿಸುತ್ತವೆ. ಹೀಗಾಗಿ, ಪ್ರಾಣಿಗಳನ್ನು ಪಳಗಿಸುವ ಸಂದರ್ಭ ದಲ್ಲಿ ಕಂಡುಬರುವ ಹಲವು ದೈಹಿಕ ಬದಲಾವಣೆಗಳು ಶಾಂತ ಸ್ವಭಾವಕ್ಕಾಗಿ ನಡೆದ ಆಯ್ಕೆಯ ಅನಿರೀಕ್ಷಿತ ಪರಿಣಾಮವಾಗಿರಬಹುದು.
ಸಾಕಿದ ಆನೆಗಳಲ್ಲೂ ಇದನ್ನು ಕಾಣಬಹುದು. ಮನುಷ್ಯ ಅವುಗಳ ಸಹಜ ವರ್ತನೆಯನ್ನೇ ಇಲ್ಲವಾಗಿಸಿ ದ್ದಾನೆ. ಅವು ದಿನಕ್ಕೆ ಹತ್ತಾರು ಕಿಲೋಮೀಟರ್ ನಡೆಯಬೇಕು. ಮರಗಳನ್ನು ಮುರಿದು, ಸೊಪ್ಪು ಹುಲ್ಲು ತಿನ್ನಬೇಕು. ಕೆರೆಗಳಲ್ಲಿ ಮಿಂದು ಮೈಗೆ ಮಣ್ಣು ಮೆತ್ತಿಕೊಂಡು, ತಿಂದ ಹಣ್ಣಿನ ಬೀಜಗಳು ಹತ್ತಾರು ಮೈಲು ದೂರದಲ್ಲಿ ಲದ್ದಿಯೊಂದಿಗೆ ಬಿದ್ದು ಕುಡಿಯೊಡೆಯುವಂತೆ ಮಾಡಬೇಕು. ಎದುರಾಳಿಗಳನ್ನು ಎದುರಿಸಿ ಹೋರಾಡಬೇಕು. ಆದರೆ ನಾವು ಸಾಕಿದ ಆನೆಗಳು ಮನುಷ್ಯ ಎಸೆದ ಚಿಲ್ಲರೆ ಹೆಕ್ಕಿ ಮಾವುತನಿಗೆ ಕೊಡುತ್ತ ದೈನೇಸಿಯಾಗಿ ಬದುಕುತ್ತಿವೆ.