ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sandpaper scandal: ʻ2021ರ ಹೇಳಿಕೆಗೆ ಬದ್ಧʼ-ಖವಾಜಾ ಆರೋಪಗಳಿಗೆ ಮಿಚೆಲ್‌ ಸ್ಟಾರ್ಕ್‌ ತಿರುಗೇಟು!

2018ರ ಚೆಂಡು ವಿರೂಪಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ 2021ರಲ್ಲಿ ತಾನು ನೀಡಿದ್ದ ಹೇಳಿಕೆಗೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಬದ್ಧರಾಗಿದ್ದಾರೆ. ಸ್ಯಾಂಡ್‌ಪೇಪರ್ ಬಳಕೆಯ ಬಗ್ಗೆ ತಮಗೆ ಮೊದಲೇ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಉಸ್ಮಾನ್ ಖವಾಜಾ ಇತ್ತೀಚೆಗೆ ಬಹಿರಂಗಪಡಿಸಿರುವ ವಿಚಾರಗಳ ಬೆನ್ನಲ್ಲೂ ತಮ್ಮ ಹೇಳಿಕೆಯನ್ನು ಬದಲಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಚೆಂಡು ವಿರೂಪ ಪ್ರಕರಣದ ಬಗ್ಗೆ ಮಿಚೆಲ್‌ ಸ್ಟಾರ್ಕ್‌ ಪ್ರತಿಕ್ರಿಯೆ!

ಚೆಂಡು ವಿರೂಪ ಪ್ರಕರಣದ ಬಗ್ಗೆ ಮಿಚೆಲ್‌ ಸ್ಟಾರ್ಕ್‌ ಪ್ರತಿಕ್ರಿಯೆ. -

Profile
Ramesh Kote Nov 10, 2026 7:20 PM

ನವದೆಹಲಿ: ಕಳೆದ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆದಿದ್ದ ಚೆಂಡು ವಿರೂಪ (sandpaper scandal) ವಿವಾದಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ತಮ್ಮ ಹಿಂದಿನ ಹೇಳಿಕೆಗೆ ಬದ್ಧರಾಗಿದ್ದಾರೆ. ಮೈದಾನಕ್ಕೆ ಸ್ಯಾಂಡ್‌ಪೇಪರ್ ತೆಗೆದುಕೊಂಡು ಹೋಗಿರುವ ಬಗ್ಗೆ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗಕ್ಕೆ ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಆರೋಪಗಳು ಕೇಳಿಬರುತ್ತಿದ್ದರೂ ತಮ್ಮ ನಿಲುವನ್ನು ಬದಲಾಯಿಸುವುದಿಲ್ಲ ಎಂದು ಸ್ಟಾರ್ಕ್ ಹೇಳಿದ್ದಾರೆ.

2021ರಲ್ಲಿ ತಾವು ಪ್ಯಾಟ್ ಕಮಿನ್ಸ್, ಜಾಶ್ ಹೇಜಲ್‌ವುಡ್ ಮತ್ತು ನೇಥನ್ ಲಯನ್ ನೀಡಿದ್ದ ಹೇಳಿಕೆಗೆ ತಮ್ಮ ಈಗಿನ ಅಭಿಪ್ರಾಯವೂ ಹೊಂದಿಕೆಯಾಗುತ್ತದೆ ಎಂದು ಸ್ಟಾರ್ಕ್ ಪುನರುಚ್ಚರಿಸಿದ್ದಾರೆ. ಉಸ್ಮಾನ್ ಖವಾಜಾ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ತಾವು ಹೆಚ್ಚು ಗಮನ ಹರಿಸಿಲ್ಲ ಎಂದಿರುವ ಅವರು, ಇತರ ಬೌಲರ್‌ಗಳ ಪರವಾಗಿ ಮಾತನಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

“ನಿಜ ಹೇಳಬೇಕೆಂದರೆ, ಈ ವಿಚಾರದ ಬಗ್ಗೆ ನಾನು ಹೆಚ್ಚು ಗಮನ ಹರಿಸಿಲ್ಲ. ಎಂಟು ವರ್ಷಗಳ ಹಿಂದಿನ ಘಟನೆ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಆ ಸಮಯದಲ್ಲಿ ಈ ವಿಚಾರವಾಗಿ ನಮ್ಮನ್ನು ಸಾಕಷ್ಟು ವಿಚಾರಣೆಗೆ ಒಳಪಡಿಸಲಾಗಿತ್ತು. ನನ್ನ ನಿಲುವಿಗೆ ಬಂದರೆ, ನನ್ನ ಅಭಿಪ್ರಾಯ ಬದಲಾಗಿಲ್ಲ. 2021ರಲ್ಲಿ ನಾವು ಏನು ಹೇಳಿದ್ದೆವೋ, ಅದರ ಬಗ್ಗೆ ಯಾವುದೇ ಬದಲಾವಣೆಯಾಗಿಲ್ಲ,” ಎಂದು ಸ್ಟಾರ್ಕ್ ಹೇಳಿದ್ದಾರೆ.

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

ಆಸ್ಟ್ರೇಲಿಯಾದ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಋತುವಿನ ಪ್ರಸಾರವನ್ನು ಪರಿಚಯಿಸುವ ಸಂದರ್ಭದಲ್ಲಿ ಕಯೋ ಸ್ಪೋರ್ಟ್ಸ್ ಮತ್ತು ಫಾಕ್ಸ್ ಕ್ರಿಕೆಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಕೇಪ್‌ಟೌನ್‌ನಲ್ಲಿ ದೊಡ್ಡ ಪರದೆಯ ಮೇಲೆ ನೋಡಿದ್ದೆವು: ಸ್ಟಾರ್ಕ್

ಉಸ್ಮಾನ್ ಖವಾಜಾ ಇತ್ತೀಚೆಗೆ ಪ್ರಕಟಿಸಿರುವ ಆತ್ಮಕಥನದಿಂದ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಮಾತ್ರವಲ್ಲದೆ, ಅದಕ್ಕೂ ಹಿಂದಿನ ಪೋರ್ಟ್ ಎಲಿಜಬೆತ್ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡ ಸ್ಯಾಂಡ್‌ಪೇಪರ್ ಬಳಸಿತ್ತು ಎಂದು ಖವಾಜಾ ಆರೋಪಿಸಿದ್ದಾರೆ. ಆದರೆ, ಈ ಘಟನೆ ಬಗ್ಗೆ ತಮಗೆ ಮೊದಲ ಬಾರಿಗೆ ತಿಳಿದಿದ್ದು ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ಎಂದು ಸ್ಟಾರ್ಕ್ ಸ್ಪಷ್ಟಪಡಿಸಿದ್ದಾರೆ.

“2021ರಲ್ಲಿ ನಾವು ನೀಡಿದ ಹೇಳಿಕೆಯಲ್ಲಿಯೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದೇವೆ. ಮೈದಾನಕ್ಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಕೇಪ್‌ಟೌನ್‌ನಲ್ಲಿ ದೊಡ್ಡ ಪರದೆಯ ಮೇಲೆ ಅದನ್ನು ನೋಡಿದ್ದೆವು,” ಎಂದು ಸ್ಟಾರ್ಕ್ ಹೇಳಿದ್ದಾರೆ.

ಖವಾಜಾ ಅವರ ಆತ್ಮಕಥನವನ್ನು ಓದುವ ಸಾಧ್ಯತೆ ಕಡಿಮೆ ಎಂದು ತಿಳಿಸಿರುವ ಸ್ಟಾರ್ಕ್, ವಿವಾದ ಮತ್ತೆ ಚರ್ಚೆಗೆ ಬಂದ ನಂತರ ತಮ್ಮ ಮಾಜಿ ಸಹ ಆಟಗಾರನೊಂದಿಗೆ ಮಾತನಾಡಿಲ್ಲ ಎಂದಿದ್ದಾರೆ. ಈ ವಿಚಾರವಾಗಿ ಖವಾಜಾ ಅವರೊಂದಿಗೆ ಚರ್ಚೆ ನಡೆಸುತ್ತೀರಾ ಎಂಬ ಪ್ರಶ್ನೆಗೆ, “ಅದು ಅವರಿಗೆ ಬಿಟ್ಟ ವಿಚಾರ,” ಎಂದು ಉತ್ತರಿಸಿದ್ದಾರೆ.

ʻಸ್ಮಿತ್‌, ವಾರ್ನರ್‌ ಮಾತ್ರವಲ್ಲ, ಎಲ್ಲರೂ ತಪ್ಪು ಮಾಡಿದ್ದಾರೆʼ: ಚೆಂಡು ವಿರೂಪ ಪ್ರಕರಣದ ಬಗ್ಗೆ ಬಾಂಬ್‌ ಸಿಡಿಸಿದ ಉಸ್ಮಾನ್‌ ಖವಾಜ!

ಅಲಿಸಾ ಹೀಲಿ ಕೂಡ ಪ್ರತಿಕ್ರಿಯೆ

ಈ ಬೆಳವಣಿಗೆಗೆ ಸ್ಟಾರ್ಕ್ ಅವರ ಪತ್ನಿ ಹಾಗೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಅಲಿಸಾ ಹೀಲಿ ಕೂಡ ಪ್ರತಿಕ್ರಿಯಿಸಿದ್ದಾರೆ. 2018ರ ವಿವಾದದಲ್ಲಿ ಭಾಗಿಯಾಗಿದ್ದ ಆಟಗಾರನ ಪತ್ನಿಯಾಗಿರುವುದರ ಜೊತೆಗೆ ಪ್ರಸಾರಕರಾಗಿಯೂ ಕಾರ್ಯನಿರ್ವಹಿಸುವುದು ಸವಾಲಿನ ಸಂಗತಿ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೂ ಖವಾಜಾ ಅವರೊಂದಿಗೆ ಕಾಮೆಂಟರಿ ಬಾಕ್ಸ್ ಹಂಚಿಕೊಳ್ಳಲು ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿರುವುದು ನಿರಾಶಾದಾಯಕ ಎಂದು ಸ್ಟಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಶುಕ್ರವಾರ ಪರ್ತ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಆಸ್ಟ್ರೇಲಿಯಾದ ತವರಿನ ಕ್ರಿಕೆಟ್ ಋತುವಿನ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.