Ranjith H Ashwath Column: ಚದುರಿದ ಕಮಲದ ದಳವನ್ನು ಕೂಡಿಸೋರ್ಯಾರು ?
ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿದ ಕರ್ನಾಟಕ ಬಿಜೆಪಿಯ ತಾಳ-ಮೇಳ ಒಂದಾಗಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ವಿಧಾನಸಭಾ ಚುನಾವಣಾ ಸಮಯದಲ್ಲಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೆ ಹೊರತು ಯಾವುದೇ ಪರಿಣಾಮ ಬೀರಲಿಲ್ಲ. ಇದರ ಬಳಿಕ ರಾಧಮೋಹನ್ ದಾಸ್ ಅಗರ್ವಾಲ್ ಉಸ್ತುವಾರಿ ವಹಿಸಿಕೊಂಡರೂ, ಅವರು ಬಂದು ಹೋಗಿದ್ದು ಸಂಘಟನೆ ಹಾಗೂ ಪಕ್ಷದಲ್ಲಿ ಎದ್ದಿರುವ ಗೊಂದಲಕ್ಕೆ ಪರಿಹಾರ ನೀಡಲಿಲ್ಲ.
-
ಅಶ್ವತ್ಥಕಟ್ಟೆ
ನಾಳೆಯ ಕೆಲಸ ಇಂದೇ ಮಾಡಬೇಕು ಎನ್ನುವುದು ಸಾಮಾನ್ಯರ ಮಾತು. ಆದರೆ ರಾಜಕೀಯದಲ್ಲಿ ಮುಂದಿನ ವರ್ಷದ ಕೆಲಸಕ್ಕೆ ಇಂದಿನಿಂದಲೇ ಶುರು ಮಾಡಬೇಕು. ನಾಳೆ ಯಾವ ಕಾಯಿಯನ್ನು ನಡೆಸಬೇಕು ಎನ್ನುವುದಕ್ಕಿಂತ ಆ ಕಾಯಿಯನ್ನು ನಡೆಸಿದಾಗ ಎದುರಾಳಿಯ ನಡೆ ಏನಾಗಿರಲಿದೆ ಎನ್ನುವುದು ಆಲೋಚಿಸಿ ತನ್ನ ನಡೆಯನ್ನು ನಿರ್ಧರಿಸುವುದು ಜಾಣ ನಡೆ.
ಕಳೆದ ಎರಡು ದಶಕಗಳಿಂದ ರಾಷ್ಟ್ರ ಬಿಜೆಪಿ ಘಟಕ ರಾಷ್ಟ್ರ ಮಟ್ಟದಲ್ಲಿ ಈ ನಡೆಯನ್ನು ನಿರ್ಧರಿಸುವುದರಲ್ಲಿ ಬಹುದೂರ ಸಾಗಿದೆ. ಆದರೆ ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾ ಗಿದ್ದ ಕರ್ನಾಟಕದಲ್ಲಿ ಮಾತ್ರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆಯೇ ಎನ್ನುವ ಅನುಮಾನ ಹುಟ್ಟುವಂತೆ ಮಾಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಶುರುವಾಗಿರುವ ಈ ಭಿನ್ನ ನಡೆ ನಾಲ್ಕು ವರ್ಷ ಕಳೆದ ಬಳಿಕವೂ ಸರಿಹಾದಿಗೆ ಬಂದಿಲ್ಲ ಎನ್ನುವುದು ವಿಪರ್ಯಾಸ.
ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿದ ಕರ್ನಾಟಕ ಬಿಜೆಪಿಯ ತಾಳ-ಮೇಳ ಒಂದಾಗಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ವಿಧಾನಸಭಾ ಚುನಾವಣಾ ಸಮಯದಲ್ಲಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೆ ಹೊರತು ಯಾವುದೇ ಪರಿಣಾಮ ಬೀರಲಿಲ್ಲ. ಇದರ ಬಳಿಕ ರಾಧಮೋಹನ್ ದಾಸ್ ಅಗರ್ವಾಲ್ ಉಸ್ತುವಾರಿ ವಹಿಸಿಕೊಂಡರೂ, ಅವರು ಬಂದು ಹೋಗಿದ್ದು ಸಂಘಟನೆ ಹಾಗೂ ಪಕ್ಷದಲ್ಲಿ ಎದ್ದಿರುವ ಗೊಂದಲಕ್ಕೆ ಪರಿಹಾರ ನೀಡಲಿಲ್ಲ. ಈ ಇಬ್ಬರ ಬೆಂಗಳೂರು ಭೇಟಿ ಬಂದ ಪುಟ್ಟ-ಹೋದ ಪುಟ್ಟ ಎನ್ನುವುದರ ಹೊರತಾದ ಪರಿಣಾಮ ಬೀರಲಿಲ್ಲ. ಈ ಇಬ್ಬರ ಬಳಿಕ ಇದೀಗ ಹರೀಶ್ ದ್ವಿವೇದಿ ನೂತನ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: Ranjith H Ashwath Column: ಮೇಲ್ಮನೆಯ ಫಲಿತಾಂಶದ ಲಾಭ-ನಷ್ಟ !
ನೇಮಕವಾದ ಬಳಿಕ ಕಳೆದ ವಾರ ಬೆಂಗಳೂರಿಗೆ ಆಗಮಿಸಿ ಕೋರ್ ಕಮಿಟಿ ಹಾಗೂ ಪದಾಧಿಕಾರಿ ಗಳೊಂದಿಗೆ ‘ಪರಿಚಯ ಸಭೆ’ಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಪಕ್ಷದ ಸಂಘಟನೆಗೆ ಬೂಸ್ಟ್ ನೀಡಬೇಕು ಎನ್ನುವ ಸಿದ್ಧ ಸಲಹೆಗಳನ್ನು ನೀಡಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ವಿಧಾನಪರಿಷತ್ ಚುನಾವಣೆಯಲ್ಲಿನ ಗೆಲುವು, ಕಾಂಗ್ರೆಸ್ ಪಕ್ಷ ಹಾಗೂ ಸರಕಾರದಲ್ಲಿ ಆಗುತ್ತಿರುವ ಗೊಂದಲ, ಗೋಜಲಿನ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ ಪ್ರತ್ಯೇಕವಾಗಿ ವಿಜಯೇಂದ್ರ ಸೇರಿದಂತೆ ಭೇಟಿಯಾಗಿರುವ ಬಹುತೇಕ ನಾಯಕರು ರಾಜ್ಯ ಬಿಜೆಪಿಯಲ್ಲಿರುವ ಗೊಂದಲಗಳನ್ನು ಸರಿಪಡಿಸಿಕೊಂಡರೆ ಮುಂದಿನ ಚುನಾವಣೆಯಲ್ಲಿ ನಮಗೊಂದು ‘ಛಾನ್ಸ್’ ಇದೆ ಎನ್ನುವ ಮಾತನ್ನು ದ್ವಿವೇದಿ ಅವರಿಗೆ ಮುಟ್ಟಿಸಿದ್ದಾರೆ.
ಹಾಗೆ ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರಿಗೆ ಈ ಛಾನ್ಸ್ ಇರುವುದು ಸುಳ್ಳೇನಲ್ಲ. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ರಾಜ್ಯ ಬಿಜೆಪಿಯ ಬಳಿ ಒಗ್ಗಟ್ಟಿದೆಯೇ? ಎಲ್ಲ ನಾಯಕರು ಇದ್ದಕ್ಕೆ ಸಿದ್ಧರಾಗಿದ್ದಾರೆಯೇ? ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ. ವಿಧಾನಪರಿಷತ್ ಚುನಾವಣೆ ಯಲ್ಲಿನ ಗೆಲುವನ್ನು ಬಹಿರಂಗವಾಗಿ ಬಿಜೆಪಿ ಗೆಲುವು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಂದ ಜಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ನಾಯಕರೊಂದಿಗಿನ ಸಮನ್ವಯತೆಗೆ ಸಿಕ್ಕ ಜಯವೆಂದು ಬಿಂಬಿಸುತ್ತಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ನಾಯಕರ ಬಳಿ ‘ಆಫ್ ದಿ ರೆಕಾರ್ಡ್’ ಮಾತನಾಡಿದರೆ, ವಿಧಾನಪರಿಷತ್ ಚುನಾವಣೆ ಯ ಫಲಿತಾಂಶ ಸ್ವತಃ ಬಿಜೆಪಿ ನಾಯಕರೂ ಊಹಿಸಿರಲಿಲ್ಲ.
ರಾಜ್ಯ ಬಿಜೆಪಿಯ ಪ್ರಮುಖರ ಪ್ರಕಾರ, ಚುನಾವಣೆಗೆ ಒಂದೆರಡು ತಿಂಗಳಿದ್ದಾಗಲೂ ಸುಶೀಲ್ ನಮೋಶಿ ಹೊರತಾಗಿಯೂ ಇನ್ನುಳಿದವರ ಗೆಲುವು ತೀರಾ ಕಷ್ಟ ಎನ್ನುವ ಬಗ್ಗೆ ಬಿಜೆಪಿಯ ಕೋರ್ ಕಮಿಟಿಯಲ್ಲಿಯೇ ಚರ್ಚೆಗಳು ನಡೆದಿದ್ದವು. ಇನ್ನು ಕೊನೆಕ್ಷಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಂ.ಪಿ.ರಂಗನಾಥ್ ‘ಲಕ್ಕಿ’ ಗೆಲುವು. ರಂಗನಾಥ್ ಗೆಲುವಿಗೆ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿ ಜೆಡಿಎಸ್ನ ಕೆಲ ನಾಯಕರು ವರ್ಕ್ ಮಾಡಿದ್ದರೇ ಹೊರತು, ಬಿಜೆಪಿಯಿಂದ ‘ಬಹು’ದೊಡ್ಡ ಮಟ್ಟದಲ್ಲಿ ರಣತಂತ್ರಗಳೇನು ನಡೆದಿರಲಿಲ್ಲ. ಆದರೆ ಪುಟ್ಟಣ್ಣನವರ ನಿರ್ಲಕ್ಷ್ಯ ಹಾಗೂ ರಾಜ್ಯ ಕಾಂಗ್ರೆಸ್ನಲ್ಲಿ ವಿಧಾನಪರಿಷತ್ ಚುನಾವಣೆಗೂ ಮುನ್ನ ನಡೆದ ಸ್ಟಿಂಗ್ ಗದ್ದಲದ ಕಾರಣಕ್ಕೆ ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಯಿಂದ ಅಂತರ ಕಾಯ್ದುಕೊಂಡರು ಎನ್ನಲಾಗಿದೆ.
ಪುಟ್ಟಣ್ಣ ಅವರ ವಿರುದ್ಧ ಎಂ.ಪಿ. ರಂಗನಾಥ್ ಗೆಲುವು ‘ಲಕ್ಕಿ’ ಎನ್ನುವ ರೀತಿಯಲ್ಲಿಯೇ ಇನ್ನುಳಿದ ಎರಡು ಸ್ಥಾನದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಕಾಂಗ್ರೆಸ್ನೊಳಗಿರುವ ಅಸಮಾಧಾ ನದ ಕಾರಣಕ್ಕೆ ಮತಗಳು ಬಿಜೆಪಿಯತ್ತ ವಾಲಿವೆ. ಎನ್ಡಿಎ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡು ವುದಕ್ಕೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ತಗೆದುಕೊಂಡಿರುವ ಮತಕ್ಕಿಂತ ಹೆಚ್ಚಾಗಿ ಅಸಿಂಧು ಗೊಂಡಿರುವ ಮತಗಳು ಪ್ರಮುಖ ಪಾತ್ರವಹಿಸಿವೆ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಗುಸು-ಗುಸು.
ನಾಲ್ಕು ಕ್ಷೇತ್ರದಿಂದ ಒಟ್ಟು ಸುಮಾರು 34 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧುಗೊಂಡಿವೆ. ಉದಾಹರಣೆಗೆ, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ವಿರುದ್ಧ ಸೋತಿರುವ ಮೋಹನ್ ಲಿಂಬಿಕಾಯಿ ಅವರ ಸೋಲಿನ ಅಂತರ 6738 ಮತಗಳು. ಆದರೆ, ತಿರಸ್ಕೃತಗೊಂಡ ಮತಗಳ ಸಂಖ್ಯೆ 7902. ಅಂದರೆ, ಸೋಲು-ಗೆಲುವಿನ ಅಂತರಕ್ಕಿಂತಲೂ ತಿರಸ್ಕೃತಗೊಂಡ ಮತಗಳ ಸಂಖ್ಯೆಯೇ ಹೆಚ್ಚಾಗಿದೆ.
ಒಂದು ವೇಳೆ ಈ ತಿರಸ್ಕೃತಗೊಂಡ ಮತಗಳು ಸಾವಿರ ಆಸುಪಾಸಿನಲ್ಲಿ ನಿಂತಿದ್ದರೆ ಫಲಿತಾಂಶದಲ್ಲಿ ಏನಾದರೂ ಆಗಬಹುದಾಗಿತ್ತು. ಪ್ರಜ್ಞಾವಂತ, ಪದವೀಧರರ ಮತದಾರರು ತಮ್ಮ ಅರಿವಿಗೆ ಬಾರದೇ, ಮತ ಅಸಿಂಧುವಾಗುವಂತೆ ಮಾಡಿದರೇ ಅಥವಾ ಪ್ರಜ್ಞಾಪೂರ್ವಕವಾಗಿಯೇ ಮತ ಅಸಿಂಧುವಾಗುವಂತೆ ನೋಡಿಕೊಂಡರೇ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.
ವಿಧಾನಪರಿಷತ್ ಚುನಾವಣೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ತಂಡ ಕೊಂಚ ರಿಲ್ಯಾಕ್ಸ್ ಆಗಿದೆ. ಕಾರ್ಯಕರ್ತರು ಗೆಲುವಿನ ಖುಷಿಯಲ್ಲಿದ್ದಾರೆ. ಈ ಗೆಲುವನ್ನು ತಮ್ಮ ನಾಯಕತ್ವದ ಗೆಲುವು ಎನ್ನುವ ಸಂದೇಶವನ್ನು ದೆಹಲಿ ಅಂಗಳಕ್ಕೆ ರವಾನಿಸುವ ಕೆಲಸವನ್ನು ಮಾಡಿದ್ದಾರೆ. ಈ ಗೆಲುವಿನ ಅಲೆಯಲ್ಲಿರುವಾಗಲೇ, ಹಿರಿಯೂರು ಉಪಚುನಾವಣೆಯ ಚರ್ಚೆಗಳು ಮುನ್ನಲೆಗೆ ಬಂದಿದೆ. ಸಚಿವ ಡಿ.ಸುಧಾಕರ್ ನಿಧನದಿಂದ ತೆರವಾಗಿರುವುದರಿಂದ ಒಂದೆರಡು ತಿಂಗಳಲ್ಲಿ ಹಿರಿಯೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ.
ಸದ್ಯ ಅನುಕಂಪದ ಅಲೆ ಹಾಗೂ ಆಡಳಿತದಲ್ಲಿ ಕಾಂಗ್ರೆಸ್ ಇರುವುದರಿಂದ ನಾವೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ವಿಧಾನಪರಿಷತ್ ಚುನಾವಣೆಯ ಫಲಿತಾಂಶದಲ್ಲಿ ಕ್ಲೀನ್ ಸ್ವೀಪ್ ಆಗಿರುವುದರಿಂದ ಉಪಚುನಾವಣೆಯಲ್ಲಿ ಗೆಲುವಿನ ‘ಕಿರಣ’ ವೊಂದು ಮೈತ್ರಿ ಪಕ್ಷದಲ್ಲಿ ಕಾಣಿಸುತ್ತಿದೆ. ಆದರೆ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸ ಬೇಕಾದರೆ ಬಿಜೆಪಿ-ಜೆಡಿಎಸ್ ಒಂದಾಗುವುದು ಒಂದು ಕಡೆಯಾದರೆ, ಬಿಜೆಪಿಯಲ್ಲಿರುವ ಭಿನ್ನರಾಗಗಳು ಒಂದಾಗಿಸುವ ಅನಿವಾರ್ಯತೆ ಎದುರಾಗಿದೆ.
ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕಲು ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದು, ಜೆಡಿಎಸ್ ನಾಯಕರು ದೆಹಲಿ ಮಟ್ಟದಲ್ಲಿ ಕಸರತ್ತು ನಡೆಸಿದ್ದಾರೆ. ಬಿಜೆಪಿ 50 ರಿಂದ 60 ಸಾವಿರ ಮತಬ್ಯಾಂಕ್ ಹೊಂದಿದ್ದರೂ, ದೆಹಲಿಯಲ್ಲಾಗುವ ತೀರ್ಮಾನದ ಮೇಲೆ ನಮ್ಮ ನಡೆ ತೀರ್ಮಾನಿಸೋಣ ಎನ್ನುವ ಆಲೋಚನೆಯಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ.
ಇನ್ನೊಂದೆಡೆ ಹಿರಿಯೂರು ಉಪಚುನಾವಣೆಗೆ ಕಾಂಗ್ರೆಸ್ ‘ಅನುಕಂಪ’ದ ಅಲೆಯನ್ನು ಸೆಳೆಯುವ ಆಲೋಚನೆಯಲ್ಲಿ ಸುಧಾಕರ್ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಪೂರ್ಣಿಮ ಅವರ ಪರ ಒಲವಿದ್ದರೂ, ಗೊಲ್ಲ ಸಮುದಾಯದ ವಿಷಯದಲ್ಲಿ ರುವ ಗದ್ದಲದ ಕಾರಣಕ್ಕೆ ಕಣಕ್ಕೆ ಧುಮುಕಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಸ್ಪಷ್ಟತೆಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಆಡಳಿತ ಪಕ್ಷದಲ್ಲಿರುವ ಈ ಗೊಂದಲವನ್ನು ‘ಬಳಸಿಕೊಂಡು’ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದರೆ, ಆಡಳಿತ ವಿರೋಧಿ ಅಲೆಯೆಂದು ಬಿಂಬಿಸಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ವಿಷಯವನ್ನು ಮುಂದಿಟ್ಟುಕೊಂಡು ಲಾಭ ಪಡೆಯುವ, ಅಲ್ಲಿಂದ 2028ರ ವಿಧಾನಸಭೆಗೆ ವೇದಿಕೆ ಸಿದ್ಧಪಡಿಸಿಕೊಳ್ಳುವ ಆಲೋಚನೆ ರಾಜ್ಯ ಬಿಜೆಪಿಯ ‘ಥಿಂಕ್ ಟ್ಯಾಂಕ್’ನಲ್ಲಿದೆ.
ಸ್ಟಿಂಗ್ ಗದ್ದಲ, ದೈನಂದಿನ ವಸ್ತುಗಳ ನಿರಂತರ ದರ ಏರಿಕೆ, ಕ್ಷೇತ್ರಗಳ ಅಭಿವೃದ್ಧಿಗೆ ಸಿಗದ ಅನುದಾನ, ಗ್ಯಾರಂಟಿ ಯೋಜನೆಗಳಿಂದ ಎದುರಾಗಿರುವ ಆರ್ಥಿಕ ಸಮಸ್ಯೆ ಸೇರಿ ಆಡಳಿತ ಪಕ್ಷದಲ್ಲಿರುವ ಸರಣಿ ಸಮಸ್ಯೆಗಳನ್ನು ಬಳಸಿಕೊಂಡು ಪ್ರತಿಪಕ್ಷವಾಗಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದರೆ ಸಹಜವಾಗಿಯೇ ಪಕ್ಷಕ್ಕೆ ಲಾಭವಾಗುತ್ತದೆ.
ಇನ್ನು ಖಾಲಿಯಿರುವ ಎರಡು ಸಚಿವ ಸ್ಥಾನ ಭರ್ತಿ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸೇರಿದಂತೆ ಹತ್ತಾರು ವಿಷಯಗಳಲ್ಲಿ ಕಾಂಗ್ರೆಸ್ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಕಂಡರೂ, ನಾಯಕರ ನಡುವಿನ ಆಂತರಿಕ ತಿಕ್ಕಾಟ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ಸಾವಿರಾರು ಕಾರ್ಯಕರ್ತರಿಗೆ ಯಾವುದೇ ‘ಜವಾಬ್ದಾರಿ’ ನೀಡಿಲ್ಲ ಎನ್ನುವ ಅಂಶ ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ.
ಈ ಎಲ್ಲಕ್ಕಿಂತ ಮುಖ್ಯವಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಅಹಿಂದ’ ಮತ ಬ್ಯಾಂಕ್ನಲ್ಲಿರುವ ‘ಹಿಂದ’ ಮತಗಳನ್ನು ಸೆಳೆದರೆ ಹಲವು ಕ್ಷೇತ್ರದಲ್ಲಿ ಲಾಭವಾಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ನಡುವೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ನಡುವಿನ ನಿತ್ಯ ತಿಕ್ಕಾಟದಲ್ಲಿ ‘ಲಾಭ’ ಪಡೆಯಲು ಬಿಜೆಪಿಗೆ ಅವಕಾಶವಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಆಡಳಿತ ಪಕ್ಷ, ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಈ ಎಲ್ಲ ಸ್ಥಿತ್ಯಂತರದ ಲಾಭ ಪಡೆಯಬೇಕಾಗಿದ್ದ ಬಿಜೆಪಿ ಗುಂಪುಗಾರಿಕೆಗೆ ಇತಿಶ್ರೀ ಹಾಡಿಲ್ಲ.
ರಾಜ್ಯ ನಾಯಕರಲ್ಲಿ ಮೂಡಿರುವ ಈ ಗೊಂದಲಗಳನ್ನು ಪಕ್ಷದ ವರಿಷ್ಠರು ಕೂತು ಬಗೆಹರಿಸಿದ್ದರೆ, ಈ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಭಿನ್ನರಾಗ ಶುರುವಾದ ದಿನದಿಂದ ಈ ವಿಷಯದಲ್ಲಿ ದೆಹಲಿ ನಾಯಕರ ‘ಮೌನ’ ಹಾಗೂ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಸರಣಿ ದೂರುಗಳು ಹೋದರೆ ‘ನೋಡೋಣ’ ಎನ್ನುವ ಮಾತನ್ನು ಹೇಳಿ ಸಾಗಿಹಾಕುತ್ತಿರುವುದು ಈ ಸಮಸ್ಯೆ ಮತ್ತಷ್ಟು ಬಿಗಡಲಾಯಿಸಲು ಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿನ ಗೊಂದಲ ಇಷ್ಟಕ್ಕೆ ಸೀಮಿತವಾಗದೇ ಕಳೆದ ಆರು ತಿಂಗಳುಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಸುದ್ದಿ ಓಡಾಡುತ್ತಿದೆ.
ಈ ಸುದ್ದಿಗೆ ಪೂರಕವಾಗಿ ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆ ಅಧಿಕೃತ ಪತ್ರವನ್ನು ಬಿಜೆಪಿ ವರಿಷ್ಠರು ನೀಡಿಲ್ಲ. ಈ ಗೊಂದಲಕ್ಕೆ ತುಪ್ಪ ಸುರಿಯುವಂತೆ ದೆಹಲಿ ಹೋಗಿಬರುವ ನಾಯಕರೆಲ್ಲ, ‘ಶೀಘ್ರವೇ ರಾಜ್ಯಾಧ್ಯಕ್ಷರ ಬದಲಾವಣೆ’ ಎಂದರೆ, ವಿಜಯೇಂದ್ರ ಕಡೆಯವರು ‘ಬದಲಾವಣೆ ಇಲ್ಲವೆಂದು ವರಿಷ್ಠರು ಭರವಸೆ ನೀಡಿದ್ದಾರೆ. ಇಂದು ಅಥವಾ ನಾಳೆ ಈ ಬಗ್ಗೆ ಅಧಿಕೃತ ಘೋಷಣೆಯೂ ಆಗಲಿದೆ’ ಎನ್ನುವ ಮಾತುಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಎರಡೂ ಬಣದ ಈ ಮಾತಿನಿಂದ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿರುವುದು ಸುಳ್ಳಲ್ಲ.
ರಾಜ್ಯ ಬಿಜೆಪಿಯಲ್ಲಿನ ಸ್ಥಿತಿಯ ಲಾಭ ಸಿಗುತ್ತಿರುವುದು ಮಾತ್ರ ಕಾಂಗ್ರೆಸಿಗರಿಗೆ ಎಂದರೆ ತಪ್ಪಾಗುವು ದಿಲ್ಲ. ಆದ್ದರಿಂದ 2028ಕ್ಕೆ ಮತ್ತೊಮ್ಮೆ ಕಮಲವನ್ನು ರಾಜ್ಯವನ್ನು ಅರಳಿಸಬೇಕು ಎನ್ನುವ ಆಲೋಚನೆ ಯಲ್ಲಿರುವ ಬಿಜೆಪಿ ವರಿಷ್ಠರನ್ನು ಇನ್ನಾದರೂ ರಾಜ್ಯ ಬಿಜೆಪಿಯ ಪ್ರಮುಖರನ್ನು ಕೂರಿಸಿಕೊಂಡು ‘ಮಿಸ್ಸಿಂಗ್ ಲಿಂಕ್’ನ್ನು ಜೋಡಿಸುವ ಕೆಲಸಕ್ಕೆ ಕೈಹಾಕಬೇಕಿದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಕೊನೆಕ್ಷಣದಲ್ಲಿ ಸರಿಪಡಿಸಲು ಹೋದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.