Dr D C Nanjunda Column: ಭಾರತದಲ್ಲಿ ಹೊಸ ಮಾದರಿಯ ಆರ್ಥಿಕ ಕ್ರಾಂತಿ !
ಭಾರತದ ಡಿಜಿಟಲ್ ಆರ್ಥಿಕತೆ 2025 ರೊಳಗೆ 1 ಟ್ರಿಲಿಯನ್ ಡಾಲರ್ ಮೌಲ್ಯ ತಲುಪಬಹುದು ಎಂಬ ಅಂದಾಜುಗಳಿವೆ. ಈ ಡಿಜಿಟಲ್ ವಿಸ್ತರಣೆ ಆರೆಂಜ್ ಆರ್ಥಿಕತೆಗೆ ಬಲವಾದ ನೆಲೆಯನ್ನು ಒದಗಿಸುತ್ತದೆ. ಭಾರತವು ಪ್ರತಿ ವರ್ಷ ಸುಮಾರು 1800 ರಿಂದ 2000 ಚಲನಚಿತ್ರಗಳನ್ನು ವಿವಿಧ ಭಾಷೆಗಳಲ್ಲಿ ನಿರ್ಮಿಸುತ್ತದೆ.
-
ಪ್ರಸ್ತುತ
ಡಾ.ಡಿ.ಸಿ.ನಂಜುಂಡ
ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ‘ಆರೆಂಜ್ ಆರ್ಥಿಕತೆ’ ಎಂಬ ಪರಿಕಲ್ಪನೆ ಮಹತ್ವ ಪಡೆದು ಕೊಂಡಿದೆ. ಸೃಜನಶೀಲತೆ, ಸಂಸ್ಕೃತಿ, ಕಲಾ, ಮಾಧ್ಯಮ, ವಿನ್ಯಾಸ, ಬೌದ್ಧಿಕ ಸ್ವತ್ತು ಮತ್ತು ಡಿಜಿಟಲ್ ವಿಷಯ ನಿರ್ಮಾಣದ ಮೂಲಕ ಆದಾಯ ಸೃಷ್ಟಿಯಾಗುವ ಆರ್ಥಿಕ ವ್ಯವಸ್ಥೆಯೇ ಆರೆಂಜ್ ಆರ್ಥಿಕತೆ.
ಸರಳವಾಗಿ ಹೇಳುವುದಾದರೆ, ಆಲೋಚನೆ ಮತ್ತು ಸೃಜನಶೀಲತೆ ಹಣಕ್ಕೆ ರೂಪಾಂತರಗೊಳ್ಳುವ ಆರ್ಥಿಕತೆಯೇ ಆರೆಂಜ್ ಆರ್ಥಿಕತೆ ಅಥವಾ ಸೃಜನಶೀಲ ಆರ್ಥಿಕತೆ. ವಿಶ್ವ ಬ್ಯಾಂಕ್ ಮತ್ತು ಇಂಟರ್-ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿಗಳ ಪ್ರಕಾರ, ಸೃಜನಾತ್ಮಕ ಕೈಗಾರಿಕೆಗಳು ಜಾಗತಿಕ ಜಿಡಿಪಿಯಲ್ಲಿ ಸುಮಾರು 3%ರಿಂದ 6%ವರೆಗೆ ಕೊಡುಗೆ ನೀಡುತ್ತವೆ. ಅಲ್ಲದೆ ವಿಶ್ವದಾದ್ಯಂತ 30 ಮಿಲಿಯನ್ʼಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಒದಗಿಸುತ್ತವೆ.
ಭಾರತದಂತಹ ಸಂಸ್ಕೃತಿ ವೈವಿಧ್ಯತೆ ಮತ್ತು ಯುವಜನಸಂಖ್ಯೆ ಹೊಂದಿದ ದೇಶಕ್ಕೆ ಈ ಕ್ಷೇತ್ರವು ಭವಿಷ್ಯದ ಪ್ರಮುಖ ಆರ್ಥಿಕ ಚಾಲಕವಾಗಬಹುದು ಎನ್ನಲಾಗಿದೆ. ಭಾರತದಲ್ಲಿ ಸುಮಾರು 140 ಕೋಟಿ ಜನರಿದ್ದಾರೆ. ಇದರಲ್ಲಿಯೇ 65% ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಯುವಜನಸಂಖ್ಯೆ ಹೊಂದಿದ ದೇಶಗಳಲ್ಲಿ ಭಾರತವನ್ನು ಮುಂಚೂಣಿ ಯಲ್ಲಿ ತಂದು ನಿಲ್ಲಿಸುತ್ತದೆ.
ಭಾರತದ ಆರೆಂಜ್ ಆರ್ಥಿಕತೆ ದೇಶದ ಒಟ್ಟು ಜಿಡಿಪಿಗೆ ಸುಮಾರು 34% ಕೊಡುಗೆ ನೀಡುತ್ತದೆ ಎನ್ನುವ ಅಂದಾಜಿದೆ. ಇದರ ಒಟ್ಟು ಮೌಲ್ಯವು ಅಂದಾಜು 100120 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 810 ಲಕ್ಷ ಕೋಟಿ ರು.) ಆಗಿದೆ. ಭಾರತದ ಮೀಡಿಯಾ ಮತ್ತು ಮನರಂಜನೆ ಕ್ಷೇತ್ರ ಮಾತ್ರವೇ 2.3ರಿಂದ 2.5 ಲಕ್ಷ ಕೋಟಿ ರು. ಮೌಲ್ಯ ಹೊಂದಿದೆ.
ಇದನ್ನೂ ಓದಿ: Dr D C Nanjunda Column: ಅಮೆರಿಕ ಪ್ರತಿಭೆಯನ್ನು ಕೇಳಿದರೆ, ಚೀನಾ ಕೌಶಲವನ್ನು ಕೇಳುತ್ತದೆ !
ಗೇಮಿಂಗ್ ಕ್ಷೇತ್ರ 3 ಬಿಲಿಯನ್ ಡಾಲರ್‌ಗಿಂತ ಹೆಚ್ಚು, ಕಂಟೆಂಟ್ ರಚನೆ ಕ್ಷೇತ್ರ ಸುಮಾರು 45 ಬಿಲಿಯನ್ ಡಾಲರ್ ಮತ್ತು ವಿವಿಧ ರೀತಿಯ ಬೌದ್ಧಿಕ ಸ್ವತ್ತಿನ ಉದ್ಯಮ 100 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಈ ಕ್ಷೇತ್ರಗಳು ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ.
ಮುಖ್ಯವಾಗಿ ಭಾರತದಲ್ಲಿ ಸುಮಾರು 850 ಮಿಲಿಯನ್ ಕ್ಕಿಂತ ಹೆಚ್ಚು ಇಂಟರ್ನೆಟ್ ಬಳಕೆದಾರರು ಇದ್ದಾರೆ. ಭಾರತವು ಜಗತ್ತಿನಲ್ಲಿ ಅತಿ ಕಡಿಮೆ ದರದ ಮೊಬೈಲ್ ಡೇಟಾ ಹೊಂದಿದ ದೇಶಗಳಲ್ಲಿ ಒಂದು. ಕಡಿಮೆ ದರದ ಡೇಟಾ ಸೌಲಭ್ಯದಿಂದ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಓಟಿಟಿ ವೇದಿಕೆಗಳು ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.
ಭಾರತದ ಡಿಜಿಟಲ್ ಆರ್ಥಿಕತೆ 2025 ರೊಳಗೆ 1 ಟ್ರಿಲಿಯನ್ ಡಾಲರ್ ಮೌಲ್ಯ ತಲುಪಬಹುದು ಎಂಬ ಅಂದಾಜುಗಳಿವೆ. ಈ ಡಿಜಿಟಲ್ ವಿಸ್ತರಣೆ ಆರೆಂಜ್ ಆರ್ಥಿಕತೆಗೆ ಬಲವಾದ ನೆಲೆಯನ್ನು ಒದಗಿಸುತ್ತದೆ. ಭಾರತವು ಪ್ರತಿ ವರ್ಷ ಸುಮಾರು 1800 ರಿಂದ 2000 ಚಲನಚಿತ್ರಗಳನ್ನು ವಿವಿಧ ಭಾಷೆಗಳಲ್ಲಿ ನಿರ್ಮಿಸುತ್ತದೆ.
ಇದು ಜಗತ್ತಿನಲ್ಲಿ ಅತಿ ಹೆಚ್ಚು ಚಿತ್ರಗಳನ್ನು ಉತ್ಪಾದಿಸುವ ದೇಶಗಳಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ ನಿಲ್ಲಿಸುತ್ತದೆ. ಭಾರತದ ಮೀಡಿಯಾ ಮತ್ತು ಎಂಟರ್‌ಟೇನ್‌ಮೆಂಟ್ ಕ್ಷೇತ್ರದ ಮೌಲ್ಯ ಸುಮಾರು 2 ಲಕ್ಷ ಕೋಟಿ ರುಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಓಟಿಟಿ ವೇದಿಕೆಗಳ ಬಳಕೆ ಸಹ ವೇಗವಾಗಿ ಹೆಚ್ಚುತ್ತಿದ್ದು, ಭಾರತದಲ್ಲಿ 10 ಕೋಟಿಗಿಂತ ಹೆಚ್ಚು ಓಟಿಟಿ ಚಂದಾದಾರರು ಇದ್ದಾರೆ. ಪ್ರಾದೇಶಿಕ ಚಿತ್ರಗಳು ಮತ್ತು ವೆಬ್ ಸರಣಿಗಳು ಜಾಗತಿಕ ಮಟ್ಟ ದಲ್ಲಿ ಜನಪ್ರಿಯವಾಗುತ್ತಿವೆ. ಇದು ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪರಿಚಯಿಸುವು ದರ ಜೊತೆಗೆ ವಿದೇಶಿ ವಿನಿಮಯ ಆದಾಯವನ್ನು ಹೆಚ್ಚಿಸುತ್ತದೆ.
ಭಾರತದ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. 2023ರ ಅಂದಾಜುಗಳ ಪ್ರಕಾರ, ಭಾರತದಲ್ಲಿ 50 ಕೋಟಿಗಿಂತ ಹೆಚ್ಚು ಗೇಮಿಂಗ್ ಬಳಕೆದಾರರು ಇದ್ದಾರೆ. ಭಾರತೀಯ ಗೇಮಿಂಗ್ ಉದ್ಯಮದ ಮೌಲ್ಯ 3 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಆಗಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಇದು ದ್ವಿಗುಣಗೊಳ್ಳುವ ಸಾಧ್ಯತೆಯಿದೆ.
Animation, VFX, Gaming, Comics ಕ್ಷೇತ್ರದಲ್ಲಿ ಭಾರತ ಜಾಗತಿಕ ಔಟ್ ಸೋರ್ಸಿಂಗ್ ಕೇಂದ್ರ ವಾಗುತ್ತಿದೆ. ಈ ಕ್ಷೇತ್ರದಲ್ಲಿ ಲಕ್ಷಾಂತರ ಯುವಕರು ಉದ್ಯೋಗ ಪಡೆಯುತ್ತಿದ್ದಾರೆ. ಸರ್ಕಾರವೂ ಅನಿಮೇಷನ್ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಸಾವಿರಾರು ಭಾರತೀಯ ಕ್ರಿಯೇಟರ್‌ಗಳು ತಿಂಗಳಿಗೆ ಲಕ್ಷಾಂತರ ರುಪಾಯಿ ಆದಾಯ ಗಳಿಸುತ್ತಿದ್ದಾರೆ.
ಭಾರತದಲ್ಲಿ 40 ಕೋಟಿಗಿಂತ ಹೆಚ್ಚು ಯೂಟ್ಯೂಬ್ ಬಳಕೆದಾರರು ಇದ್ದಾರೆ. ಭಾರತದ ಸಂಗೀತ ಸ್ಟ್ರೀಮಿಂಗ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಸ್ಪೋಟಿಫೈ, ಗಾನಾ, ಜಿಯೋಸಾವನ್ ಮುಂತಾದ ವೇದಿಕೆಗಳಲ್ಲಿ ಕೋಟ್ಯಂತರ ಜನರು ಸಂಗೀತವನ್ನು ಕೇಳುತ್ತಿದ್ದಾರೆ. ಇನ್ ಫ್ಲೂಯೆನ್ಸರ್ (ಸೆಲೆಬ್ರಿಟಿಗಳು) ಆರ್ಥಿಕತೆ ಭಾರತದಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ.
ಭಾರತದ ಹಸ್ತಕಲೆ ಕ್ಷೇತ್ರದಲ್ಲಿ ಸುಮಾರು 70 ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ. ಭಾರತೀಯ ಹಸ್ತಕಲೆಗಳ ರಫ್ತು ಮೌಲ್ಯ ವರ್ಷಕ್ಕೆ 4 ಬಿಲಿಯನ್ ಡಾಲರ್ʼಗಿಂತ ಹೆಚ್ಚು ಇದೆ. ಜಿಯೋ ಟ್ಯಾಗ್ ಪಡೆದ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಪಡೆಯುತ್ತಿವೆ.
ಡಿಜಿಟಲ್ ಮಾರುಕಟ್ಟೆ ವೇದಿಕೆಗಳ ಮೂಲಕ ಗ್ರಾಮೀಣ ಕಲಾವಿದರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರೆಯುತ್ತಿದೆ.
ಭಾರತದ ಫ್ಯಾಷನ್ ಉದ್ಯಮದ ಮೌಲ್ಯ ಸುಮಾರು 100 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಕ್ರಿಯಾತ್ಮಕ ಫ್ಯಾಷನ್ ಮತ್ತು ಹಸ್ತಕಲಾ ಆಧಾರಿತ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ. D2C (Direct-to Consumer) ಬ್ರ್ಯಾಂಡ್‌ಗಳು ವೇಗವಾಗಿ ಬೆಳೆಯು ತ್ತಿದ್ದು, ಸಾವಿರಾರು ಯುವ ಉದ್ಯಮಿಗಳು ತಮ್ಮ ಸ್ವಂತ ಬ್ರ್ಯಾಂಡ್ ಗಳನ್ನು ಆರಂಭಿಸಿದ್ದಾರೆ.
ಭಾರತದಲ್ಲಿ ಆರೆಂಜ್ ಆರ್ಥಿಕತೆ ಬೆಳೆಯಲು ಹಲವಾರು ನಗರಗಳು ಉತ್ತಮ ಸಾಮರ್ಥ್ಯ ಹೊಂದಿವೆ. ಮುಂಬೈ ಚಿತ್ರರಂಗ ಮತ್ತು ಮನರಂಜನೆಯ ಮುಖ್ಯ ಕೇಂದ್ರವಾಗಿದ್ದು, ಬಾಲಿವುಡ್ ಮತ್ತು ಪ್ರಮುಖ ಮೀಡಿಯಾ ಸಂಸ್ಥೆಗಳ ಮೂಲಕ ಜಾಗತಿಕ ವಿಷಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕರ್ನಾಟಕದ ಬೆಂಗಳೂರು ಗೇಮಿಂಗ್, ಅನಿಮೇಷನ್ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ತಂತ್ರಜ್ಞಾನ ಆಧಾರಿತ ಸೃಜನಾತ್ಮಕ ಉದ್ಯಮಗಳಿಗೆ ಅನುಕೂಲಕರ ವಾಗಿದೆ. ಹೈದರಾಬಾದ್ ಚಲನಚಿತ್ರ ನಿರ್ಮಾಣದ ಪ್ರಮುಖ ಕೇಂದ್ರವಾಗಿದೆ. ಚೆನ್ನೈ ಪ್ರಾದೇಶಿಕ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದಲ್ಲಿ ಬಲವಾಗಿದ್ದು, ಡಿಜಿಟಲ್ ವಿಷಯ ನಿರ್ಮಾಣದಲ್ಲೂ ಬೆಳೆಯುತ್ತಿದೆ.
ದೆಹಲಿ ಫ್ಯಾಷನ್, ವಿನ್ಯಾಸ ಮತ್ತು ಬೌದ್ಧಿಕ ಸ್ವತ್ತಿನ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಕೋಲ್ಕತ್ತಾ ಸಾಹಿತ್ಯ, ರಂಗಭೂಮಿ ಮತ್ತು ಕಲಾ ಪರಂಪರೆಯ ಮೂಲಕ ಸಾಂಸ್ಕೃತಿಕ ಆರ್ಥಿಕತೆ ಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಜಯಪುರ ಮತ್ತು ಅಹಮದಾಬಾದ್ ಹಸ್ತಕಲೆ, ವಿನ್ಯಾಸ ಮತ್ತು ಉಪಉತ್ಪನ್ನಗಳ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಅವಕಾಶಗಳನ್ನು ಹೊಂದಿವೆ. ಕೊಚ್ಚಿ, ಪುಣೆ ಮತ್ತು ಇತರ ಎರಡನೇ ದರ್ಜೆಯ ನಗರಗಳು ಕೂಡ ಸಾಂಸ್ಕೃತಿಕ ಉತ್ಸವಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್ ಪರಿಸರದಿಂದ ಹೊಸ ಅವಕಾಶಗಳನ್ನು ನಿರ್ಮಿಸುತ್ತಿವೆ.
ಸಂಸ್ಕೃತಿ, ಡಿಜಿಟಲ್ ಮೂಲಸೌಕರ್ಯ ಮತ್ತು ಉದ್ಯಮಶೀಲತೆ ಒಂದಾಗುವ ನಗರಗಳೇ ಭಾರತ ದಲ್ಲಿ ಆರೆಂಜ್ ಆರ್ಥಿಕತೆಯ ಪ್ರಮುಖ ಕೇಂದ್ರಗಳಾಗುವ ಸಾಧ್ಯತೆ ಹೊಂದಿವೆ. ಭಾರತದಲ್ಲಿ ಆರೆಂಜ್ ಆರ್ಥಿಕತೆ ಬೆಳೆಸಲು ಕೇಂದ್ರ ಸರ್ಕಾರ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯ ಮೂಲಕ ಸೃಜನಾತ್ಮಕ ಉದ್ಯಮಿಗಳಿಗೆ ತೆರಿಗೆ ಸವಲತ್ತು ಮತ್ತು ಹಣಕಾಸು ನೆರವು ನೀಡಲಾಗುತ್ತಿದೆ. ಡಿಜಿಟಲ್ ಇಂಡಿಯಾ ಅಭಿಯಾನವು ಇಂಟರ್ನೆಟ್ ಮೂಲಸೌಕರ್ಯವನ್ನು ವಿಸ್ತರಿಸಿ ಡಿಜಿಟಲ್ ವಿಷಯ ನಿರ್ಮಾಣಕ್ಕೆ ಉತ್ತೇಜನ ನೀಡುತ್ತದೆ.
ಅನಿಮೇಷನ್, ಆನ್‌ಲೈನ್ ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಸೃಜನಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುತ್ತದೆ. ಸ್ಕಿಲ್ ಇಂಡಿಯಾ ಮಿಷನ್ ಮಾಧ್ಯಮ, ವಿನ್ಯಾಸ ಮತ್ತು ಶಿಲ್ಪಕಲೆ ಕ್ಷೇತ್ರಗಳಲ್ಲಿ ತರಬೇತಿ ಒದಗಿಸುತ್ತಿದೆ.
ರಾಷ್ಟ್ರೀಯ ಕ್ರಿಯಾತ್ಮಕ ಅಭಿವೃದ್ಧಿ ಕಾರ್ಯಕ್ರಮ ಕಾರ್ಮಿಕರಿಗೆ ತರಬೇತಿ, ಮಾರುಕಟ್ಟೆ ಮತ್ತು ಆರ್ಥಿಕ ಬೆಂಬಲ ನೀಡುತ್ತದೆ. ಜೊತೆಗೆ, ಚಲನಚಿತ್ರ ಅಭಿವೃದ್ಧಿ ಮಂಡಳಿ ಭಾರತವನ್ನು ಚಲನಚಿತ್ರ ನಿರ್ಮಾಣದ ಕೇಂದ್ರವಾಗಿ ರೂಪಿಸಲು ಸಹಾಯ ಮಾಡುತ್ತದೆ. ಇವುಗಳ ಸಮೂಹ ಪರಿಣಾಮ ದಿಂದ ಭಾರತದಲ್ಲಿ ಸೃಜನಶೀಲ ಆರ್ಥಿಕತೆಗೆ ಬಲ ದೊರೆಯುತ್ತಿದೆ.
ಭಾರತವು ತನ್ನ ಸಂಸ್ಕೃತಿ ವೈವಿಧ್ಯತೆ, ಯುವಜನಸಂಖ್ಯೆ ಮತ್ತು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಮೂಲಸೌಕರ್ಯದಿಂದ ಆರೆಂಜ್ ಆರ್ಥಿಕತೆಯಲ್ಲಿ ಅಪಾರ ಅವಕಾಶಗಳನ್ನು ಹೊಂದಿದೆ. ಭಾರತದ ಜನಸಂಖ್ಯೆಯ ಬಹುಪಾಲು ಯುವಕರಾಗಿದ್ದು, ಸೃಜನಾತ್ಮಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.
35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹೊಸ ಆಲೋಚನೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಡಿಜಿಟಲ್ ಉದ್ಯಮಗಳಿಗೆ ಭಾರೀ ಅವಕಾಶಗಳಿವೆ. ಆರೆಂಜ್ ಆರ್ಥಿಕತೆ ಭಾರತದಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎನ್ನಲಾಗಿದೆ.
ವಿಶೇಷವಾಗಿ ಸ್ವಯಂ ಉದ್ಯೋಗ ಮತ್ತು ಸ್ಟಾರ್ಟ್ ಅಪ್‌ಗಳಿಗೆ ಈ ಕ್ಷೇತ್ರ ಉತ್ತಮ ಅವಕಾಶ ಒದಗಿಸುತ್ತದೆ. ಭಾರತದ ಸ್ಟಾರ್ಟ್‌ಅಪ್ ಪರಿಸರದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಯುನಿಕಾರ್ನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಕ್ರಿಯೇಟಿವ್ ಟೆಕ್, ಗೇಮಿಂಗ್, ಮೀಡಿಯಾ ಮತ್ತು ಡಿಜಿಟಲ್ ವಿಷಯ ಕ್ಷೇತ್ರಗಳಲ್ಲಿ ಹೊಸ ಕಂಪನಿಗಳು ವೇಗವಾಗಿ ಬೆಂಗಳೂರಿನಲ್ಲಿ ಬೆಳೆಯುತ್ತಿವೆ.
ಆದಾಗ್ಯೂ, ಇಲ್ಲಿ ಕೆಲವು ಸವಾಲುಗಳಿವೆ. ಪೈರಸಿ ಸಮಸ್ಯೆಯಿಂದ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗುತ್ತಿದೆ. ಬೌದ್ಧಿಕ ಸ್ವತ್ತು ರಕ್ಷಣೆ ಕಾಯ್ದೆ ಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಸಣ್ಣ ಸೃಜನಶೀಲರಿಗೆ ಹಣಕಾಸು ಮತ್ತು ತಾಂತ್ರಿಕ ತರಬೇತಿ ಒದಗಿಸುವುದು ಮುಖ್ಯವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಸ್ವತ್ತುಗಳ ಬೆಳವಣಿಗೆ ಸೃಜನಾತ್ಮಕ ಕ್ಷೇತ್ರಗಳಿಗೆ ಹೆಚ್ಚಿನ ಪ್ರೊತ್ಸಾಹ ಬೇಕಿದೆ.
ಭಾರತದ ಯುವಜನರ ಸೃಜನಶೀಲತೆ ಮತ್ತು ಡಿಜಿಟಲ್ ಸಾಮರ್ಥ್ಯವನ್ನು ಸರಿಯಾಗಿ ಬಳಸಿ ಕೊಂಡರೆ, ಭಾರತ ಆರೆಂಜ್ ಆರ್ಥಿಕತೆಯಲ್ಲಿ ಜಾಗತಿಕ ನಾಯಕತ್ವ ಸಾಧಿಸಬಹುದು. ಆರೆಂಜ್ ಆರ್ಥಿಕತೆ ಭಾರತಕ್ಕೆ ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಲ್ಲ; ಇದು ಸಂಸ್ಕೃತಿ, ಸೃಜನಶೀಲತೆ ಮತ್ತು ತಂತ್ರಜ್ಞಾನಗಳ ಸಂಯೋಜನೆಯ ಮೂಲಕ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದೆ.
ಸರಿಯಾದ ನೀತಿಗಳು, ಬಲವಾದ ಡಿಜಿಟಲ್ ಮೂಲಸೌಕರ್ಯ ಮತ್ತು ಯುವಜನರ ಸಕ್ರಿಯ ಭಾಗವಹಿಸುವಿಕೆಯಿಂದ ಭಾರತವು ಈ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮ ಬಹುದು. ಚೀನಾವನ್ನು ಹಿಂದಿಕ್ಕಬಹುದು.