ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: 2026ರ ಐಪಿಎಲ್‌ ಫೈನಲ್‌ ಆಡಲು ಅಹಮದಾಬಾದ್‌ಗೆ ತಡವಾಗಿ ಆಗಮಿಸಿದ ಗುಜರಾತ್‌ ಟೈಟನ್ಸ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31 ರಂದು ನಡೆಯಲಿದೆ. ಈ ಫೈನಲ್‌ ಪಂದ್ಯದ ನಿಮಿತ್ತ ಹವಾಮಾನ ವೈಫರಿತ್ಯದ ಕಾರಣ ಜಟಿ ತಂಡದ ಆಟಗಾರರ ಅಹಮದಾಬಾದ್‌ಗೆ ತಡವಾಗಿ ಆಗಮಿಸಿದ್ದಾರೆ.

RCB vs GT: ಅಹಮದಾಬಾದ್‌ಗೆ ತಡವಾಗಿ ಆಗಮಿಸಿದ ಗುಜರಾತ್‌ ಟೈಟನ್ಸ್‌!

ಗುಜರಾತ್‌ ಟೈಟನ್ಸ್‌ ತಂಡದ ವಿಮಾನ ಪ್ರಯಾಣದಲ್ಲಿ ವ್ಯತ್ಯಯ. -

Profile
Ramesh Kote May 30, 2026 11:36 PM

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ 2026ರ ಟೂರ್ನಿಯ (IPL 2026) ಫೈನಲ್‌ ಮೇ 31ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವೆ (RCB vs GT) ನಡೆಯಲಿದೆ. ಆರ್‌ಸಿಬಿ ಮೊದಲನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ನೇರವಾಗಿ ಪ್ರವೇಶ ಮಾಡಿತ್ತು. ಆದರೆ, ಶುಭಮನ್‌ ಗಿಲ್‌ ಸಾರಥ್ಯದ ಗುಜರಾತ್‌ ಟೈಟನ್ಸ್‌ ತಂಡ, ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಇದೀಗ ಫೈನಲ್‌ಗೂ ಮುನ್ನ ಗುಜರಾತ್‌ ತಂಡಕ್ಕೆ ಒಂದು ಹಿನ್ನಡೆಯಾಗಿದೆ.

ಎರಡನೇ ಕ್ವಾಲಿಫೈಯರ್‌ ಪಂದ್ಯ ನವ ಚಂಡೀಗಢಧ ಮುಲ್ಲಾನ್‌ಪುರದಲ್ಲಿ ನಡೆದಿತ್ತು. ಮೇ 29 ರಂದು ಪಂದ್ಯವನ್ನು ಗೆದ್ದ ಬಳಿಕ ಮೇ 30 ರಂದು ಮಧ್ಯಾಹ್ನದ ಒಳಗಾಗಿ ಗುಜರಾತ್‌ ಟೈಟನ್ಸ್‌ ತಂಡ ಅಹಮದಾಬಾದ್‌ಗೆ ಆಗಮಿಸಬೇಕಾಗಿತ್ತು. ಆದರೆ, ಹವಾಮಾನ ವೈಫರಿತ್ಯದಿಂದಾಗಿ ಜಿಟಿ ತಂಡದ ವಿಮಾನ ಪ್ರಯಾಣದಲ್ಲಿ ಸಮಸ್ಯೆಯಾಗಿದೆ. ಫೈನಲ್‌ ಪಂದ್ಯ ಪ್ರಾರಂಭವಾಗಲು 24 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದೆ. ಆದಾಗ್ಯೂ, ನಾಯಕ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಇನ್ನೂ ಅಹಮದಾಬಾದ್‌ಗೆ ಬಂದಿಲ್ಲ.

IPL 2026 Final: ಎರಡನೇ ಐಪಿಎಲ್‌ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು, ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ವಿವರ!

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ, ಬಿರುಗಾಳಿಯ ಹವಾಮಾನ ಪರಿಸ್ಥಿತಿಯಿಂದಾಗಿ ಗುಜರಾತ್ ತಂಡವು ಇಲ್ಲಿಯವರೆಗೆ ಅಹಮದಾಬಾದ್ ತಲುಪಲು ಸಾಧ್ಯವಾಗಿಲ್ಲ. ಗುಜರಾತ್ ತಂಡವು ಶನಿವಾರ ಮಧ್ಯಾಹ್ನ ಚಾರ್ಟರ್ ವಿಮಾನದ ಮೂಲಕ ಚಂಡೀಗಢದಿಂದ ಹೊರಡಬೇಕಿತ್ತು. ಆದಾಗ್ಯೂ, ವಾಯುವ್ಯ ಪ್ರದೇಶದಲ್ಲಿ ಮಳೆಯಿಂದಾಗಿ ಹಲವಾರು ವಿಮಾನಗಳು ವಿಳಂಬವಾದವು. ವಿಮಾನ ನಿಲ್ದಾಣ ಪ್ರಾಧಿಕಾರವು ಟೇಕ್‌ಆಫ್‌ಗೆ ಅನುಮತಿ ನೀಡಲಿಲ್ಲ. ಪರಿಣಾಮವಾಗಿ, ಗುಜರಾತ್ ಟೈಟನ್ಸ್ ತಂಡ ಮೇ 30 ರಾತ್ರಿ 10:00 ಗಂಟೆಯ ನಂತರ ಅಹಮದಾಬಾದ್‌ನಲ್ಲಿ ಇಳಿಯಲಿದೆ. ಅಂದಹಾಗೆ ಫೈನಲ್‌ ಪಂದ್ಯಕ್ಕೆ ಕೇವಲ ಒಂದು ದಿನ ಮುನ್ನ ತಂಡವೊಂದು ಪ್ರಯಾಣಿಸುತ್ತಿರುವುದು ಇದೇ ಮೊದಲು.

ಗುಜರಾತ್‌ ತಂಡದ ತಯಾರಿಗೆ ಸಮಸ್ಯೆ

ಶುಭಮನ್‌ ಗಿಲ್‌ ನೇತೃತ್ವದ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಅಹಮದಾಬಾದ್‌ಗೆ ತಡವಾಗಿ ಆಗಮಿಸಿರುವುದರಿಂದ ಮತ್ತೊಂದು ಸಮಸ್ಯೆ ಎದುರಾಗಿದೆ. ತಂಡವು ತನ್ನ ಮೂರನೇ ಐಪಿಎಲ್‌ ಫೈನಲ್‌ ಪಂದ್ಯಕ್ಕಾಗಿ ಅಭ್ಯಾಸ ಹಾಗೂ ತಯಾರಿ ನಡೆಸಲು ಸಮಯ ಇಲ್ಲದಂತಾಗಿದೆ. ಇದಲ್ಲದೆ, ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ ಫೈನಲ್‌ಗೆ ತಲುಪಿದ ತಂಡ, ಫೈನಲ್ ಪಂದ್ಯದ ಮುನ್ನಾದಿನ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ಲೇಆಫ್ಸ್‌ ಪಂದ್ಯಗಳನ್ನು ಸಾಮಾನ್ಯವಾಗಿ ಎರಡು ಕ್ರೀಡಾಂಗಣಗಳಲ್ಲಿ ಆಯೋಜಿಸುವ ಬದಲು ಈ ಬಾರಿ ಬಿಸಿಸಿಐ ಮೂರು ವಿಭಿನ್ನ ಮೈದಾನಗಳಲ್ಲಿ ನಡೆಸಲು ನಿರ್ಧರಿಸಿರುವುದೇ ಇದಕ್ಕೆ ಪ್ರಮುಖ ಕಾರಣ.

RCB vs GT: ಗುಜರಾತ್‌ ಟೈಟನ್ಸ್‌ ತಂಡವನ್ನು ಸೋಲಿಸಲು ಆರ್‌ಸಿಬಿ ರೂಪಿಸಬೇಕಾದ ರಣತಂತ್ರಗಳೇನು?

ಮತ್ತೊಂದೆಡೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಿದ್ಧತೆ ಹೆಚ್ಚು ಸ್ಥಿರವಾಗಿತ್ತು. ಕ್ವಾಲಿಫೈಯರ್-1ರಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್ ಪ್ರವೇಶ ಪಡೆದ ಆರ್‌ಸಿಬಿ, ಬುಧವಾರವೇ ಅಹಮದಾಬಾದ್‌ಗೆ ಆಗಮಿಸಿದ್ದು, ಭಾನುವಾರದ ಮಹತ್ವದ ಹಣಾಹಣಿಗೆ ಮುನ್ನ ಎರಡು ತರಬೇತಿ ಸೆಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ತಂಡದ ನಾಯಕ ರಜತ್‌ ಪಾಟಿದಾರ್‌ ಹೆಚ್ಚುವರಿ ವಿಶ್ರಾಂತಿ ಮತ್ತು ಚೇತರಿಕೆಯ ಸಮಯ ತಂಡಕ್ಕೆ ನೆರವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದನ್ನು ಪಂದ್ಯದಲ್ಲಿ ನಿರ್ಣಾಯಕ ಮುನ್ನಡೆ ಎಂದು ಹೇಳಲು ಅವರು ಮುಂದಾಗಲಿಲ್ಲ.

ರಜತ್‌ ಪಾಟಿದಾರ್‌ ಹೇಳಿದ್ದೇನು?

“ಹೌದು, ಏಕೆಂದರೆ ಕ್ವಾಲಿಫೈಯರ್-1 ಪಂದ್ಯದ ಬಳಿಕ ನಮಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಮತ್ತು ದೈಹಿಕವಾಗಿ ಚೇತರಿಸಿಕೊಳ್ಳಲು ಸಮಯ ಸಿಕ್ಕಿತು. ಅದೇ ವೇಳೆ ಗುಜರಾತ್‌ ಟೈಟನ್ಸ್ ತಂಡ, ನೇರವಾಗಿ ಕ್ವಾಲಿಫೈಯರ್-2 ಪಂದ್ಯದಿಂದ ಫೈನಲ್‌ಗೆ ಬರುತ್ತಿದೆ,” ಎಂದು ಹೇಳಿದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌, “ಇದು ಒಂದು ರೀತಿಯ ಸಣ್ಣ ಮುನ್ನಡೆಯಾಗಿರಬಹುದು. ಆದರೆ ಅದನ್ನು ದೊಡ್ಡ ಲಾಭ ಎಂದು ನಾನು ಹೇಳುವುದಿಲ್ಲ. ಏಕೆಂದರೆ ಎರಡೂ ತಂಡಗಳು ಅತ್ಯುತ್ತಮವಾಗಿದ್ದು, ಈ ಟೂರ್ನಿಯಲ್ಲಿ ಅದ್ಭುತ ಕ್ರಿಕೆಟ್ ಆಡಿವೆ,” ಎಂದು ಅವರು ತಿಳಿಸಿದ್ದಾರೆ.