ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಉಕ್ಕಿನ ಮಹಿಳೆಗೆ ನೊಬೆಲ್, ಸೊಕ್ಕಿನ ಮನುಷ್ಯನಿಗೆ ಶಾಸ್ತಿ

ಟ್ರಂಪ್ ಅವರ ನೊಬೆಲ್ ಶಾಂತಿ ಪುರಸ್ಕಾರದ ಹಪಾಹಪಿಯ ವಿಷಯಕ್ಕೆ ಬರುವುದಾದರೆ, ತನ್ನ ಎರಡನೇ ಅಧ್ಯಕ್ಷ ಅವಧಿಯ ಮೊದಲ ಹತ್ತು ತಿಂಗಳ ಅಧಿಕಾರವನ್ನು ಅವರು ಈಗಾಗಲೇ ಪೂರ್ಣ ಗೊಳಿಸಿದ್ದಾರೆ. ಕಳೆದ ಏಳೆಂಟು ತಿಂಗಳುಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟು, ಅದನ್ನು ಪ(ಹೊ)ಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ, ಹಲವಾರು ಯೋಜನೆ ಗಳನ್ನು, ಅಭಿಪ್ರಾಯ ಗಳನ್ನು ಮತ್ತು ಆ ಕುರಿತು ಒಂದು ಅನಧಿಕೃತ ಆಂದೋಲನವನ್ನು ಮಾಡಿಕೊಂಡೇ ಬಂದಿದ್ದರು, ಮತ್ತದು ಈಗ ‘ಗೋರ್ಗಲ್ಲ ಮೇಲೆ ನೀರೆರೆದಂತಾದ’ ಅನುಭವ!

ರವೀ ಸಜಂಗದ್ದೆ

ತಾನು ಎರಡನೇ ಬಾರಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಅಂದರೆ ಕಳೆದ ಹತ್ತು ತಿಂಗಳು ಗಳಿಂದ ವ್ಯಾಪಾರ, ವಹಿವಾಟು, ಐಟಿ ಕ್ಷೇತ್ರದ ಕಂಪನ, ದ್ವಿಪಕ್ಷೀಯ ಸಂಬಂಧ, ತೆರಿಗೆ, ಎಚ್-1ಬಿ ವೀಸಾ ಗೊಂದಲ, ಸಣ್ಣ ದೇಶಗಳ ಮೇಲೆ ಸವಾರಿ ಮತ್ತು ನಿಯಂತ್ರಣ, ಪ್ರಪಂಚದಲ್ಲಿ ನಡೆಯು ತ್ತಿರುವ ಎಲ್ಲ ವಿಚಾರ-ವಿದ್ಯಮಾನಗಳಲ್ಲಿ ಅನಗತ್ಯ ಮೂಗು ತೂರಿಸಿ, ಎಡೆ ಉದ್ವಿಗ್ನತೆ ಸೃಷ್ಟಿಸು ವಲ್ಲಿ ಯಶಸ್ವಿಯಾದ ಮತ್ತು ಅಂಥಾ ಕೆಲವು ತಾನೇ ಸೃಷ್ಟಿಸಿದ ಉದ್ವಿಗ್ನತೆಗಳನ್ನು ಶಮನ ಗೊಳಿಸುವ ತಮ್ಮ ಪ್ರಹಸನಗಳಿಗೆ ೨೦೨೫ರ ನೊಬೆಲ್ ಶಾಂತಿ ಪ್ರಶಸ್ತಿ ದಕ್ಕಲಿದೆ ಎಂದು ಡೊನಾಲ್ಡ್ ಟ್ರಂಪ್ ಬಲವಾಗಿ ನಂಬಿದ್ದರು.‌ ಹಲವಾರು ರೀತಿಯ ಒತ್ತಡ, ಸ್ವ-ಹೊಗಳಿಕೆ, ತಂತ್ರ, ಕುತಂತ್ರ ಅನುಸರಿಸಿಯೂ ಆ ಪ್ರಶಸ್ತಿಯನ್ನು ಈ ಬಾರಿ ಅವರು ಗಿಟ್ಟಿಸಿಕೊಳ್ಳಲಾಗಲಿಲ್ಲ!

ಅಲ್ಲಿಗೆ, ಜೀವನದ ಕೊನೆಯ, ಮಹತ್ವದ ಆಸೆಯನ್ನು ವ್ಯವಹಾರ ಕುದುರಿಸಿ ಗಳಿಸುವ ಟ್ರಂಪ್ ಪ್ರಯತ್ನಕ್ಕೆ ಸೋಲಾದದ್ದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಈ ನೊಬೆಲ್ ಶಾಂತಿ ಪುರಸ್ಕಾರ ಪಡೆಯುವ ಪಯಣದಲ್ಲಿ ಯಶಸ್ವಿಯಾಗದಿದ್ದರೂ ಆ ವಿಚಾರಗಳಲ್ಲಿ ಟ್ರಂಪ್ ಕಳೆದ ಕೆಲವು ತಿಂಗಳುಗಳಿಂದ ಮಾಡಿದ ನಾಟಕಗಳ ವಿವರಗಳು ಒಂಥರಾ ವಿವಿಧ ವಿನೋದಾವಳಿಗಳಾಗಿ ಕಾಣುತ್ತವೆ!

‘ಆಸೆ’ ಮನುಷ್ಯನ ಗುಣಸ್ವಭಾವಗಳಲ್ಲಿ ಪ್ರಮುಖವಾದದ್ದು. ಪ್ರತಿಯೊಬ್ಬರಿಗೂ, ಬದುಕಿನ ಪ್ರತಿಯೊಂದು ಹಂತದಲ್ಲೂ ವಿವಿಧ ಆಸೆಗಳು ಮತ್ತು ಗುರಿಗಳು ಇರುತ್ತವೆ. ಹಲವರು ತಮ್ಮ ಹಲವಾರು ಆಸೆ ಮತ್ತು ಗುರಿಗಳನ್ನು ಸದಾ ಬೆನ್ನಟ್ಟುತ್ತಿರುತ್ತಾರೆ. ಒಳ್ಳೆಯ ಶಿಕ್ಷಣ ಮತ್ತು ಪದವಿಯ ಆಸೆ, ಒಳ್ಳೆಯ ರೂಪ-ಲಾವಣ್ಯದ ಆಸೆ, ಒಳ್ಳೆಯ ಬಾಳ ಸಂಗಾತಿಯ ಆಸೆ, ಒಳ್ಳೆಯ ಮೈಕಟ್ಟಿನ ಆಸೆ, ದುಡ್ಡು ಮಾಡುವ ಆಸೆ, ಪ್ರಚಾರ-ಪ್ರಸಿದ್ಧಿಯ ಆಸೆ, ಕಾರು ಕೊಳ್ಳುವ ಆಸೆ, ಕನಸಿನ ಮನೆಯ ಒಡೆತನದ ಆಸೆ, ಅಧಿಕಾರದ ಆಸೆ, ಜಗತ್ತು ತಿರುಗಾಡುವ ಆಸೆ, ವ್ಯವಹಾರ ವಿಸ್ತರಿಸುವ ಆಸೆ, ಮಕ್ಕಳಾಗದ ದಂಪತಿಗೆ ಮಗು ಬೇಕೆನ್ನುವ ಆಸೆ, ಬಡವರಿಗೆ ಕನಸಿನ ಸೂರಿನ ಆಸೆ, ಆರೋಗ್ಯ ಕಾಪಾಡಿಕೊಳ್ಳುವ ಆಸೆ... ಹೀಗೆ ಮನುಷ್ಯನ ಆಸೆಗಳು ಲೆಕ್ಕವಿಲ್ಲದಷ್ಟು.

ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ, ಪ್ರಭಾವಿತರ ಪಟ್ಟಿಯಲ್ಲಿ, ವ್ಯವಹಾರ ಸೂಚ್ಯಂಕದಲ್ಲಿ ಈಗಾಗಲೇ ಅಗ್ರ ಸಾಲಿನಲ್ಲಿರುವ 80ನೇ ವಯಸ್ಸಿನ ಡೊನಾಲ್ಡ್ ಟ್ರಂಪ್ ಅವರನ್ನೇ ಈ ಆಸೆಗಳು ‌ ಇನ್ನೂ ಬಿಟ್ಟಿಲ್ಲ ಎಂದರೆ ಅಂಥಾ ಆಸೆಗಳು ಮನುಷ್ಯ ಜೀವನದಲ್ಲಿ ಯಾವ ರೀತಿ ಹಾಸು ಹೊಕ್ಕಾ ಗಿವೆ ಎಂಬುದರ ಅರಿವು ಸ್ಪಷ್ಟವಾಗುತ್ತದೆ!

ಇದನ್ನೂ ಓದಿ: ‌Ravi Sajangadde Column: ದೇಶಕ್ಕಾಗಿಯೇ ಬಾಳಿದ ಸಂಘ ದಕ್ಷ ಪ್ರೊಫೆಸರ್

ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ವ್ಯಾವಹಾರಿಕವಾಗಿ, ದೈಹಿಕವಾಗಿ, ಮಾನಸಿಕ ವಾಗಿ, ಅಧಿಕಾರ ಕ್ಷೇತ್ರದಲ್ಲಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನಗಿಷ್ಟವಾದುದನ್ನು ದಕ್ಕಿಸಿಕೊಂಡ ಡೊನಾಲ್ಡ್ ಟ್ರಂಪ್ ಈಗ ತನ್ನ ಮಹದಾಸೆಯಾದ ನೊಬೆಲ್ ಶಾಂತಿ ಪ್ರಶಸ್ತಿ ಸಿಗದೆ ಆ ಅಂತಿಮ (?) ಆಸೆಯನ್ನೂ ಪೂರೈಸಲು ಕನಿಷ್ಠ ಇನ್ನೂ ಒಂದು ವರ್ಷ ಕಾಯಬೇಕಾದ ವಿಷಣ್ಣ ಪರಿಸ್ಥಿತಿ! ‌

ನೊಬೆಲ್ ಶಾಂತಿ ಪುರಸ್ಕಾರ ಅಲ್ಲದೆ ಇನ್ನೂ ಏನಾದರೂ ಆಸೆಗಳು ಟ್ರಂಪ್‌ಗೆ ಉಳಿದಿವೆಯೇ ಎನ್ನುವುದು ನನಗಿರುವ ಸದ್ಯದ ಕೆಟ್ಟ ಕುತೂಹಲ!

ಟ್ರಂಪ್ ಅವರ ನೊಬೆಲ್ ಶಾಂತಿ ಪುರಸ್ಕಾರದ ಹಪಾಹಪಿಯ ವಿಷಯಕ್ಕೆ ಬರುವುದಾದರೆ, ತನ್ನ ಎರಡನೇ ಅಧ್ಯಕ್ಷ ಅವಧಿಯ ಮೊದಲ ಹತ್ತು ತಿಂಗಳ ಅಧಿಕಾರವನ್ನು ಅವರು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಕಳೆದ ಏಳೆಂಟು ತಿಂಗಳುಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟು, ಅದನ್ನು ಪ(ಹೊ)ಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ, ಹಲವಾರು ಯೋಜನೆ ಗಳನ್ನು, ಅಭಿಪ್ರಾಯಗಳನ್ನು ಮತ್ತು ಆ ಕುರಿತು ಒಂದು ಅನಧಿಕೃತ ಆಂದೋಲನವನ್ನು ಮಾಡಿ ಕೊಂಡೇ ಬಂದಿದ್ದರು, ಮತ್ತದು ಈಗ ‘ಗೋರ್ಗಲ್ಲ ಮೇಲೆ ನೀರೆರೆದಂತಾದ’ ಅನುಭವ! ’ಪ್ರಪಂಚ ದಾದ್ಯಂತ ಇರುವ ಪ್ರಕ್ಷುಬ್ಧ ಮತ್ತು ಯುದ್ಧದ ವಾತಾವರಣವನ್ನು ಮಾತುಕತೆಯ ಮೂಲಕ ತಿಳಿಗೊಳಿಸಿ, ನನ್ನ ಪ್ರಯತ್ನದಿಂದ ಶಾಂತಿಯನ್ನು ಸ್ಥಾಪಿಸಲಾಗಿದೆ.

ಕಳೆದ ಕೆಲ ತಿಂಗಳುಗಳಲ್ಲಿ ಕಾಂಬೋಡಿಯಾ-ಥಾಯ್ಲೆಂಡ್ ಮತ್ತು ಸರ್ಬಿಯಾ ಸಂಘರ್ಷ, ಕಾಂಗೋ-ರುವಾಂಡಾ ಬಡಿದಾಟ, ಭಾರತ- ಪಾಕಿಸ್ತಾನ ಯುದ್ಧ, ಇಸ್ರೇಲ್-ಇರಾನ್ ದೀರ್ಘಕಾಲದ ಕದನ, ಈಜಿಪ್ಟ್-ಇಥಿಯೋಪಿಯಾ ಹೊಡೆದಾಟ, ಅರ್ಮೇನಿಯಾ-ಅಝರ್‌ಬೈಜಾನ್ ಸಂಗ್ರಾಮ ಮತ್ತು ಈಗಷ್ಟೇ ನಿಂತ ಇಇಸ್ರೇಲ್-ಹಮಾಸ್ ಹಣಾಹಣಿ-ಹೀಗೆ ವಿಶ್ವದಾದ್ಯಂತ ಏಳು ಯುದ್ಧ‌ ಗಳನ್ನು ಅಮೆರಿಕ ಅಧ್ಯಕ್ಷನಾಗಿ ನಿಲ್ಲಿಸಿ, ಅ ಶಾಂತಿ ನೆಲೆಸುವಂತೆ ಮಾಡಿದ್ದೇನೆ.

ಇಷ್ಟಿದ್ದೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿದ್ದರೆ ಅದು ಅಮೆರಿಕಕ್ಕೆ ಆಗಲಿರುವ ಅವಮಾನ’ ಎಂಬುದಾಗಿ ಮಾಧ್ಯಮದೆದುರು ಮಾತನಾಡಿ ಅನುಕಂಪ ಗಿಟ್ಟಿಸುವ, ಪ್ರಶಸ್ತಿ ಆಯ್ಕೆಯ ಸಂದರ್ಭದ ಕೊನೆಯ ಹಂತದ ಕಸರತ್ತು ಟ್ರಂಪ್‌ಗೆ ಫಲವನ್ನು ಕೊಡಲಿಲ್ಲ. ತನ್ನ ಅನೂಹ್ಯ ತಂತ್ರಗಾರಿಕೆ ಇಲ್ಲಿ ವಿಫಲವಾಗಿರುವುದು ಅವರಿಗೆ ಜಾಗತಿಕವಾಗಿ ಒಂದಷ್ಟು ಮುಜುಗರ ತಂದಿರುವುದು ಸುಳ್ಳಲ್ಲ.

ಭಾರತ-ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಭಾರತ ಅಂತಾರಾ ಷ್ಟ್ರೀಯ ವೇದಿಕೆಗಳಲ್ಲಿ ಸುತಾರಾಂ ಅಲ್ಲಗಳೆದಿರುವುದು ಬೇರೆ ವಿಚಾರ. ಇರಲಿ.

ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ‘ಗಾಜಾ ಶಾಂತಿ ಯೋಜನೆ’ಯ ಮೊದಲ ಹಂತದ ಶಾಂತಿಯ ಷರತ್ತುಗಳ ಜಾರಿಗಾಗಿ ಸಂಘರ್ಷ ನಿರತ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿರುವ ಸುದ್ದಿ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯ ಒಂದೆರಡು ದಿನ ಮೊದಲು ಬಂದಿದ್ದರೂ ‘ಕೊನೆಯ ಓವರಿನ ಎಲ್ಲ ಎಸೆತಗಳಿಗೂ ಸಿಕ್ಸರ್ ಬಾರಿಸಿದರೂ ಸೋತಂತೆ’ ಭಾಸವಾದ ಅನುಭವ ಟ್ರಂಪ್‌ರಿಗೆ!

ಸಾವಿರಾರು ಜನರನ್ನು ಬಲಿ ತೆಗೆದುಕೊಂಡ, ಪ್ಯಾಲೆಸ್ತೀನನ್ನು ವಿನಾಶಕ್ಕೆ ದೂಡಿದ ಈ ಶತಮಾನದ ಭೀಕರ ಗಾಜಾ ಯುದ್ಧ ನಿಜಕ್ಕೂ ಕೊನೆಗೊಂಡು ಅಲ್ಲಿ ನೆಮ್ಮದಿ ನೆಲೆಸಿದರೆ ಅದು ನಿಜಕ್ಕೂ ತುಂಬಾ ನೆಮ್ಮದಿಯ ವಿಚಾರ. ‘ಈ ಯುದ್ಧವನ್ನು ನಾನು ಇಂದು ನಿಲ್ಲಿಸಿದ್ದೇನೆ’ ಎನ್ನುವ ಟ್ರಂಪ್ ಅವರ ಹೇಳಿಕೆಯ ‘ಟೈಮಿಂಗ್’ ಕುರಿತು ಸಂದೇಹಗಳು ಮತ್ತು ಅನೇಕ ಪ್ರಶ್ನೆಗಳು ಇವೆ.

ಹಾಗಿದ್ದೂ ನರೇಂದ್ರ ಮೋದಿಯ ವರಾದಿಯಾಗಿ ವಿಶ್ವದ ಬಹುತೇಕ ನಾಯಕರು ಈ ಶಾಂತಿ ಪ್ರಕ್ರಿಯೆಯನ್ನು ಸ್ವಾಗತಿಸಿದ್ದಾರೆ ಮತ್ತು ಡೊನಾಲ್ಡ್ ಟ್ರಂಪ್ ಅವರ ಪರಿಶ್ರಮವನ್ನು ಹೊಗಳಿ ದ್ದಾರೆ. ಈ ಅಂಶವು ನೊಬೆಲ್ ಶಾಂತಿ ಪ್ರಶಸ್ತಿ ಬರಲು ಅನುವು ಮಾಡಿ ಒಂದಷ್ಟು ಅನುಕೂಲ ಆಗಲಿದೆ ಎಂಬ ಅವರ ನಂಬಿಕೆ ಹುಸಿಯಾಗಿದೆ.

ನೊಬೆಲ್ ಪ್ರಶಸ್ತಿಯು ಸ್ವೀಡನ್ ದೇಶದ ವಿಜ್ಞಾನಿ ಆಲ್ರೆಡ್ ನೊಬೆಲ್ ಅವರ ಸ್ಮರಣಾರ್ಥ ೧೯೦೧ನೇ ಇಸವಿಯಿಂದ ಪ್ರತಿವರ್ಷ ಭೌತಶಾಸ್ತ್ರ, ರಸಾಯನ ಶಾಸ್ತ್ರ, ವೈದ್ಯಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಅರ್ಥಶಾಸ್ತ್ರ ಮತ್ತು ಶಾಂತಿ-ಹೀಗೆ ಒಟ್ಟು ಏಳು ವಿಭಾಗಗಳಲ್ಲಿ ವೈಶಿಷ್ಟ್ಯಪೂರ್ಣ ಮತ್ತು ಅನನ್ಯ ಸಾಧನೆ-ಸಂಶೋಧನೆಗಳಿಗೆ ಕೊಡಲಾಗುತ್ತದೆ.

ನೊಬೆಲ್ ಆಯ್ಕೆ ಸಮಿತಿಯು ಸ್ವತಂತ್ರ ಮತ್ತು ಸ್ವಾಯತ್ತ ವ್ಯವಸ್ಥೆ. ಹಾಗಿದ್ದೂ ಅವರ ಕೆಲವು ನಿಲುವುಗಳು ಮತ್ತು ಈ ಹಿಂದೆ ಪ್ರಶಸ್ತಿಗಾಗಿ ಆಯ್ಕೆ ಮಾಡಲಾದವರನ್ನು ನೋಡಿದಾಗ ಒಂದಷ್ಟು ಟೀಕೆಗಳು ಮತ್ತು ಅಸಮಾಧಾನಗಳು ಕಾಲಕಾಲಕ್ಕೆ ವ್ಯಕ್ತವಾಗಿವೆ.

ಮಹಾತ್ಮ ಗಾಂಧಿಯವರ ಹೆಸರು ಐದು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಆಗಿತ್ತು ಮತ್ತು ಅವರಿಗೆ ಆ ಪ್ರಶಸ್ತಿ ಬರಲೇ ಇಲ್ಲ. ನೊಬೆಲ್ ಪ್ರಶಸ್ತಿಯು ವಿಶ್ವದ ಅತ್ಯುತ್ತಮ ಮತ್ತು ಶ್ರೇಷ್ಠ ಪ್ರಶಸ್ತಿಯಾಗಿ ಕಳೆದ ೧೨೪ ವರ್ಷಗಳಿಂದ ಗುರು ತಿಸಲ್ಪಟ್ಟಿದೆ.

ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ವೆನಿಜುವೆಲಾದ ರಾಜಕಾರಿಣಿ ಮತ್ತು ಕೈಗಾರಿಕಾ ಎಂಜಿನಿಯ ರಿಂಗ್ ಮಾರಿಯಾ ಕೊರಿನಾ ಮಚಾದೊ ಅವರಿಗೆ ಒಲಿದಿದೆ. ಅವರು ವೆನಿಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕು ಗಳಿಗಾಗಿ ನಿರಂತರ ಹೋರಾಡಿದುದಕ್ಕಾಗಿ ಈ ಪ್ರಶಸ್ತಿ ಸಂದಿದೆ.

ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ವಿಶ್ವದಾದ್ಯಂತದ ಅಶಾಂತಿ, ಕದನ, ದಾಳಿ ಮತ್ತು ಅದರಿಂದಾಗುವ ಎಲ್ಲ ಹಾನಿಗಳಿಗೆ ಮೂಲ ಕಾರಣ ಅಮೆರಿಕ! ಪ್ರಪಂಚವನ್ನೇ ಗೆದ್ದು ಮೆರೆಯ ಬೇಕು, ಒಂದು ವೇಳೆ ಅದಾಗದಿದ್ದಲ್ಲಿ ಶತ್ರುವಿನ ಶತ್ರುವನ್ನು ಪೋಷಿಸಿ ಮೇಲುಗೈ ಸಾಧಿಸಬೇಕು ಎನ್ನುವ ಉದ್ದೇಶ ಅಮೆರಿಕದ್ದು.

ಮೊದಲಿಗೆ ನೆರೆಕರೆಯ ಎರಡು ರಾಷ್ಟ್ರಗಳ ನಡುವಿನ ಗುದ್ದಾಟಕ್ಕೆ ಮತ್ತಷ್ಟು ಇಂಬು ಕೊಟ್ಟು, ಶತ್ರುವಿನ ಶತ್ರುವನ್ನು ಹತ್ತಿರ ಮಾಡಿ ಕೊಂಡು ಆರ್ಥಿಕ ನೆರವು ಮತ್ತು ಶಸಾಸ ನೆರವು ನೀಡಿ ಅವೆರಡೂ ದೇಶಗಳು ಪರಸ್ಪರ ಕಾದಾಡುವ ಪರಿಸ್ಥಿತಿ ನಿರ್ಮಿಸುವುದು. ಕೆಲ ದಿನಗಳ ನಂತರ, ಮೂಲದಲ್ಲಿ ಹಾಕಿಕೊಂಡ ಯೋಜನೆಯಾದ ಶತ್ರುವಿನ ನಾಶ ಅಸಾಧ್ಯ ಮತ್ತದು ತುಂಬಾ ದುಬಾರಿ ಎಂದು ಮನವರಿಕೆಯಾದಾಗ, ‘ಶಾಂತಿ ಸ್ಥಾಪನೆ’, ‘ಕದನ ವಿರಾಮ’ ಎನ್ನುವ ಪ್ರಹಸನ, ಮಾತುಕತೆ, ಮಧ್ಯಸ್ಥಿಕೆ ಮೂಲಕ ‘ತಾನು ಪ್ರಪಂಚದಾದ್ಯಂತ ಶಾಂತಿ ಸ್ಥಾಪನೆಯ ಹರಿಕಾರ’ ಎನ್ನುವುದನ್ನು ಬಿಂಬಿಸುತ್ತಾ ಮತ್ತೊಂದಿಷ್ಟು ಮೈಲೇಜ್ ಪಡೆಯುವುದು ಅಮೆರಿಕ ಮಾಡಿಕೊಂಡು ಬಂದ ನಿರಂತರ ಪ್ರಕ್ರಿಯೆ. ಆ ‘ಶಾಂತಿ ಸ್ಥಾಪನೆ’ ಎಂಬ ‘ಹಿಡನ್ ಅಜೆಂಡಾ’ ಹೊಂದಿದ್ದರೂ ಅಮೆರಿಕ ಅಧ್ಯಕ್ಷ ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಲಿಲ್ಲ!

‘ಮಲಗಿರುವ ಮಗುವನ್ನು ಯಾರಿಗೂ ಗೊತ್ತಾಗ ದಂತೆ ಚಿವುಟಿ, ಅದು ಎಚ್ಚರಗೊಂಡು ನೋವಿನಿಂದ ಅಳಲು ಶುರು ಮಾಡಿದಾಗ ಆ ಮಗುವನ್ನು ಪೊರೆಯುವ ಪೋಸು ಕೊಟ್ಟು, ಮಗುವನ್ನು ಸಲಹುವಂತೆ ತಾಯಿ ಗುಣ, ಮನುಷ್ಯತ್ವ ತೋರಿ, ತೊಟ್ಟಿಲು ತೂಗುವ ರೀತಿಯ’ ನಿಖರ ಕಾರ್ಯ ಯೋಜನೆಯನ್ನು ಅಮೆರಿಕ ಪ್ರಪಂಚದಾದ್ಯಂತ ಮಾಡುತ್ತಿದೆ.

ಸಣ್ಣ ರಾಷ್ಟ್ರಗಳ ನೈಸರ್ಗಿಕ ಸಂಪನ್ಮೂಲ ಗಳನ್ನು ತನ್ನ ಕಬ್ಜಾ ಮಾಡಿ, ಅದಕ್ಕೆ ಪ್ರತಿಯಾಗಿ ಯುದ್ಧೋಪಕರಣಗಳನ್ನು, ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ದೇಶವೊಂದರ ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಗೆ ಒಂದು ವೇಳೆ ಆಯ್ಕೆ ಆಗುತ್ತಾರೆ ಎಂದಾದರೆ ಅದಕ್ಕೆ ಎಲ್ಲಿಯ ಪ್ರಾಶಸ್ತ್ಯ ಮತ್ತು ಯಾವ ಮಾನದಂಡ? ಸದ್ಯದ ಮಟ್ಟಿಗೆ, ಟ್ರಂಪ್ ಅವರಿಗೆ ಈ ಪ್ರಶಸ್ತಿ ಕೊಡದೆ ಬೇರೊಬ್ಬರಿಗೆ ಕೊಡುವ ಮೂಲಕ ಅಂತಹಾ ಆರೋಪದಿಂದ ‘ನೊಬೆಲ್ ಶಾಂತಿ ಸಂಸ್ಥೆ’ ಬಚಾವಾಗಿದೆ.

ಅಮೆರಿಕ ಮತ್ತದರ ನೀತಿಗಳಿಗೆ ಎದುರಾಗಿ ಮತ್ತು ಯಥಾವತ್ ಸತ್ಯವನ್ನು ಮಾತನಾಡುವ ವರನ್ನು ಮೂರ್ಖರಂತೆ, ಅವರು ಇಡೀ ಜಗತ್ತಿನ ವಿರುದ್ಧ ಮಾತನಾಡುವವರು ಎಂಬಂತೆ, ಎಲ್ಲರ ವೈರಿ ಗಳಂತೆ ಬಿಂಬಿಸುವುದು ಅಮೆರಿಕದ ಜಾಯಮಾನ!

ಇದು ಶುದ್ಧ ಅಸಂಬದ್ಧ ನಿಲುವು. ಅಮೆರಿಕದ ವಿಭಿನ್ನ ಹಪಾಹಪಿಗಳಿಂದಾಗಿ ಯುದ್ಧದಲ್ಲಿ ಅನ್ಯಾಯವಾಗಿ ಮೃತರಾದ ಸಾವಿರಾರು ಜನರ ಆತ್ಮಗಳು ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ಪರಿಣಾಮ ದೊಡ್ಡ ನಿಟ್ಟುಸಿರು ಬಿಟ್ಟು ಯಾಕೋ ಮಲಗಿದ ಮಗ್ಗುಲು ಬದಲಿಸಿದಂತೆ ಭಾಸ ವಾಯಿತು.

ಅಮೆರಿಕದ ದುರಾಸೆ, ಯುದ್ಧೋನ್ಮಾದ ಇನ್ನಾದರೂ ಕೊನೆಗೊಂಡು ನಿಜಾರ್ಥದಲ್ಲಿ ಜಗದಗಲ ಶಾಂತಿ ನೆಲೆಸಲಿ. ಹಾಗೇನಾದರೂ ಆದರೆ, ಮುಂದಿನ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಅವರಿಗೆ ಅರ್ಹವಾಗಿಯೇ ಸಲ್ಲಲಿ. ಹಾಗಾದೀತೆ? ಡೌಟು!

ಟ್ರಂಪ್‌ಗೆ ಅರ್ಪಣೆ

ಮಾರಿಯಾ ಕೊರಿನಾ ಮಚಾಡೊ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅರ್ಪಿಸಿದ್ದಾರೆ. ಬಳಲುತ್ತಿರುವ ವೆನೆಜುವೆಲಾದ ಜನರೊಂದಿಗೆ ನಿಂತಿದ್ದಕ್ಕಾಗಿ ಟ್ರಂಪ್‌ ಅವರನ್ನು ಮಾರಿಯಾ ಶ್ಲಾಘಿಸಿದ್ದಾರೆ.