ಸಂಕಷ್ಟಗಳ ಸರಮಾಲೆ
ದೇಶದಲ್ಲಿ ಮೂರು ಸ್ತರದ ಹಣಕಾಸು ಸಂಸ್ಥೆಗಳು ಕೆಲಸ ಮಾಡು ತ್ತಿದ್ದರೂ, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಸಾಲಕ್ಕಾಗಿ ಇಂದಿಗೂ ಗ್ರಾಮೀಣ ಪ್ರದೇಶದ ಮಧ್ಯವರ್ತಿಗಳ ಕಡೆಗೆ ಕೈಚಾಚುತ್ತಿರು ವುದು ಖೇದನೀಯ. ಸರಕಾರಿ ವ್ಯವಸ್ಥೆಯಲ್ಲಿ ಸಾಲ ವಿತರಣೆ ಯನ್ನು ಸರಳ ಹಾಗೂ ಕ್ಷಿಪ್ರಗೊಳಿಸ ಬೇಕಾಗಿದೆ.


ಪ್ರತಿಸ್ಪಂದನ
ಹೊಸೂರು ರತ್ನಾಕರ ಶೆಟ್ಟಿ, ಹಿಡಿಯಡ್ಕ
‘ನೆಲದ ಸಿರಿ’ ಅಂಕಣದಲ್ಲಿ (ಆ.4) ಪ್ರಕಟವಾದ ಆದರ್ಶ್ ಶೆಟ್ಟಿಯವರ ‘ರೈತರನ್ನು ಕಾಡುತ್ತಿದೆ ಹಲವು ಸಂಕಷ್ಟಗಳು’ ಎಂಬ ಬರಹವು ಬಹಳ ಚೆನ್ನಾಗಿ ಮೂಡಿ ಬಂದಿದೆ. ಸಂಕಷ್ಟಗಳ ನಡುವೆ ಹುಟ್ಟಿ, ಸಂಕಷ್ಟಗಳ ನಡುವೆಯೇ ಬೆಳೆದು ದಯನೀಯ ಬದುಕು ಸಾಗಿಸುವುದೇ ಭಾಗ್ಯವಿಧಾತನು ರೈತರಿಗೆ ನೀಡಿರುವ ವರವೆನಿಸುತ್ತಿದೆ.
ಭಾರತದ ಒಟ್ಟು ಜನಸಂಖ್ಯೆಯ ಬಹುಭಾಗವು ಕೃಷಿ ಕಾರ್ಮಿಕರು ಮತ್ತು ರೈತರನ್ನೇ ಒಳಗೊಂಡಿ ದ್ದರೂ, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಸಂಘಟನಾ ಶಕ್ತಿ ಇವರಿಗಿಲ್ಲ. ಅದೇ ಸರಕಾರಿ ಉದ್ಯೋಗಿಗಳು, ಕಾರ್ಮಿಕರು ಒಟ್ಟು ಜನಸಂಖ್ಯೆ ಯಲ್ಲಿ ಸಣ್ಣ ಭಾಗವಾಗಿದ್ದರೂ, ಮುಷ್ಕರ, ಸಂಘಟಿತ ಹೋರಾಟಗಳ ಮೂಲಕ ತಮ್ಮ ಬೇಡಿಕೆ ಗಳನ್ನು ಈಡೇರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ರೈತರ ಗೋಳನ್ನು ಕೇಳುವವರೇ ಇಲ್ಲ.
ನಮ್ಮ ಒಂದಿಷ್ಟು ಚುನಾಯಿತ ಪ್ರತಿನಿಧಿಗಳು ‘ನಾವು ರೈತ ಕುಟುಂಬದವರು’ ಎಂದು ಬಡಬಡಾ ಯಿಸುವುದನ್ನು ಬಿಟ್ಟರೆ, ಮತ್ತೇನೂ ಫಲಪ್ರದ ಕೆಲಸವನ್ನು ಮಾಡಿಲ್ಲವೆನ್ನುವುದು ವಾಸ್ತವ. ರೈತರು ಎದುರಿಸುತ್ತಿರುವ ಕೆಲವು ಮುಖ್ಯ ಸಮಸ್ಯೆಗಳತ್ತ ನೋಡೋಣ ಬನ್ನಿ: ಮಾರುಕಟ್ಟೆ ವ್ಯವಸ್ಥೆ: ರೈತರ ಸರ್ವಸಮಸ್ಯೆಗಳ ಕೇಂದ್ರಬಿಂದುವೇ ಮಾರುಕಟ್ಟೆ. ಕಷ್ಟಪಟ್ಟು ಬೆಳೆ ಬೆಳೆದ ರೈತರು ಅದನ್ನು ಹೊತ್ತು ಮಾರುಕಟ್ಟೆಯನ್ನು ತಲುಪಿದಾಗ, ಅಲ್ಲಿ ಮಧ್ಯವರ್ತಿಗಳ ಕೈಗೆ ಸಿಲುಕಿ ಅವರು ನಿರ್ಧರಿಸಿದ ಬೆಲೆಗೆ ಬೆಳೆಯನ್ನು ಅನಿವಾರ್ಯವಾಗಿ ಮಾರಬೇಕಾಗುತ್ತದೆ.
ಇದನ್ನೂ ಓದಿ: Ramesh Kote Column: ಕರುಣ್, ಇನ್ನೊಂದು ಅವಕಾಶ ಕೇಳಬೇಡಿ !
ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಆಶಾಕಿರಣವಾಗಬಲ್ಲವಾದರೂ, ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪಗಳಿಂದಾಗಿ ರೈತರ ವಿಶ್ವಾಸ ಗಳಿಸಲು ಅವು ವಿಫಲವಾಗುತ್ತಿವೆ. ಕೃಷಿ ಉತ್ಪನ್ನಗಳಿಗೆ ಬಲಾಢ್ಯ ವಾಣಿಜ್ಯ ಕಂಪನಿಗಳು ನೀಡುವಂಥ ಸ್ಪರ್ಶಬೇಕಾಗಿದೆ. ತೀರಾ ಕಳಪೆ ವಸ್ತುಗಳನ್ನೂ ‘ಮಾರುಕಟ್ಟೆ ತಂತ್ರ’ದ ಮೂಲಕ ಆಕರ್ಷಕ ಬೆಲೆಗೆ ಮಾರಬಲ್ಲ ಚಾಕಚಕ್ಯತೆ ಈ ಕಂಪನಿಗಳಿಗಿದೆ.
ಅಲ್ಲದೆ ಕೃಷಿ ವಲಯದಲ್ಲಿ ಅಗಾಧ ಪ್ರಮಾಣದ ಬಂಡವಾಳವನ್ನು ಹೂಡಬೇಕಾಗಿದೆ; ಮೂಲ ಸೌಕರ್ಯ ಒದಗಿಸುವುದಾಗಲಿ, ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವುದಾಗಲಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪೂರಕ ಉದ್ಯೋಗ ಕಲ್ಪಿಸುವುದಾಗಲಿ ಹೀಗೆ ಹಲವು ಬಾಬತ್ತುಗಳಲ್ಲಿ ಬೃಹತ್ ಹೂಡಿಕೆಯ ಅವಶ್ಯಕತೆಗಳಿವೆ.
ಹಾಗಾಗಿ ರೈತರು ಕಾರ್ಪೊರೇಟ್ ವಲಯದೊಂದಿಗೆ ಕೈಜೋಡಿಸಿದರೆ, ಸಮಗ್ರ ಹಾಗೂ ಗಮನಾರ್ಹ ಸಾಧನೆ ಮಾಡಬಹುದು. ಈ ಉದ್ದೇಶದೊಂದಿಗೆ ಕೇಂದ್ರ ಸರಕಾರವು 2019ರಲ್ಲಿ ಜಾರಿಗೆ ತಂದ ಕೃಷಿ ಸುಧಾರಣಾ ಕಾನೂನುಗಳು ಅನುಷ್ಠಾನವಾಗದಂತೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ನೋಡಿ ಕೊಂಡಿರುವುದು ವಿಪರ್ಯಾಸವೇ ಸರಿ.
ಸಕಾಲಿಕ ಆರ್ಥಿಕ ನೆರವು: ದೇಶದಲ್ಲಿ ಮೂರು ಸ್ತರದ ಹಣಕಾಸು ಸಂಸ್ಥೆಗಳು ಕೆಲಸ ಮಾಡು ತ್ತಿದ್ದರೂ, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಸಾಲಕ್ಕಾಗಿ ಇಂದಿಗೂ ಗ್ರಾಮೀಣ ಪ್ರದೇಶದ ಮಧ್ಯವರ್ತಿಗಳ ಕಡೆಗೆ ಕೈಚಾಚುತ್ತಿರುವುದು ಖೇದನೀಯ. ಸರಕಾರಿ ವ್ಯವಸ್ಥೆಯಲ್ಲಿ ಸಾಲ ವಿತರಣೆ ಯನ್ನು ಸರಳ ಹಾಗೂ ಕ್ಷಿಪ್ರಗೊಳಿಸಬೇಕಾಗಿದೆ.
ವಾಸ್ತವವಾಗಿ ಬೀಜ ಬಿತ್ತನೆ ಮತ್ತು ಕಟಾವು ಮಾಡಿದ ನಂತರ ರೈತರು ಹಣಕ್ಕಾಗಿ ಕಾಯುವ ಸ್ಥಿತಿ ಯಲ್ಲಿರುವುದಿಲ್ಲ. ಅವರ ಈ ಅಸಹಾಯಕತೆಯೇ ಮಧ್ಯವರ್ತಿಗಳ ಪಾಲಿಗೆ ವರವಾಗುತ್ತಿದೆ.
ಶೇಖರಣಾ ವ್ಯವಸ್ಥೆ: ರೈತರು ಬೆಳೆದ ಹಲವು ಉತ್ಪನ್ನಗಳ ಪೈಕಿ ವಿಶೇಷವಾಗಿ ಹಣ್ಣು-ಹಂಪಲು, ತರಕಾರಿಗಳ ಬಹುಪಾಲು ಸೂಕ್ತ ಶೇಖರಣಾ ವ್ಯವಸ್ಥೆಯಿಲ್ಲದೆ ಹಾಳಾಗುತ್ತಿವೆ. ಹೀಗಾಗಿ, ರಾಜ್ಯದ ವಿವಿಧೆಡೆ ಶೈತ್ಯಾಗಾರಗಳನ್ನು ಸಜ್ಜುಗೊಳಿಸಬೇಕಾದ ಅಗತ್ಯವಿದೆ. ಮಾತ್ರವಲ್ಲದೆ, ಆಯಾ ಪ್ರದೇಶ ದಲ್ಲಿ ಬೆಳೆಯಬಹುದಾದ ಮುಖ್ಯ ಬೆಳೆಗಳ ಕುರಿತು ನಮ್ಮ ಕೃಷಿಇಲಾಖೆಯು ಕಾಲಕಾಲಕ್ಕೆ ತಾಂತ್ರಿಕ ಮಾಹಿತಿ ನೀಡುವುದರ ಜತೆಗೆ ಅಂಥ ಕೃಷಿ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ದೊರಕುವಂತಾಗುವ ನಿಟ್ಟಿನಲ್ಲಿ ರೈತರಿಗೆ ಹೆಗಲಾಗಿ ನಿಲ್ಲಬೇಕಿದೆ.
ಸಾಮಾಜಿಕ ಹೊಣೆಗಾರಿಕೆ: ಬೃಹತ್ ವಾಣಿಜ್ಯ ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ಸಮಾಜಕ್ಕೆ ಕೊಡಮಾಡುವುದುಂಟು. ಇದಕ್ಕೆ ‘ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ’ (CSR- Corporate Social Responsibility) ಎನ್ನಲಾಗುತ್ತದೆ. ಕಂಪನಿಗಳು ಹೀಗೆ ನೀಡುವ ನೆರವು, ಸಣ್ಣ ಮತ್ತು ಅತಿ ಸಣ್ಣ ರೈತರು ಕೈಗೊಳ್ಳುವ ಕ್ರಾಂತಿಕಾರಕ ಕೃಷಿ ಚಟುವಟಿಕೆಗಳಿಗೆ ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ವಿನಿಯೋಗವಾಗುವಂತಾಗಬೇಕು.
‘ರೈತರು ಪ್ರಗತಿ ಕಾಣದೆ ದೇಶದ ಪ್ರಗತಿ ಅಸಾಧ್ಯ’ ಎಂಬ ಸತ್ಯವನ್ನು ನಾವೆಲ್ಲರೂ ನೆನಪಿನಲ್ಲಿಟ್ಟು ಕೊಳ್ಳಬೇಕು. ವೇದಿಕೆಗಳ ಮೇಲೆ ನಿಂತು “ಭಾರತವು ಹಳ್ಳಿಗಳ ದೇಶ. ರೈತನೇ ಈ ದೇಶದ ಬೆನ್ನೆಲುಬು ಮತ್ತು ಅನ್ನದಾತ. ಹಳ್ಳಿಗಳ ಮತ್ತು ರೈತರ ಉದ್ಧಾರವಾಗದೆ ಭಾರತದ ಉದ್ಧಾರವಾಗದು" ಎಂದು ತೌಡು ಕುಟ್ಟುವವರು ಅಥವಾ ರೈತರ ಕಲ್ಯಾಣದ ಮತ್ತು ಕೃಷಿ ಕ್ಷೇತ್ರದ ಅಭ್ಯುದಯದ ಕುರಿತು ಹುಸಿ ಭರವಸೆಗಳನ್ನು ನೀಡುವವರು, ಈ ನಿಟ್ಟಿನಲ್ಲಿ ನಿಜಾರ್ಥದಲ್ಲಿ ತೊಡಗಿಸಿಕೊಳ್ಳಬೇಕಿದೆ.
ಕಾರಣ, ‘ಅನ್ನದಾತ’ ಎಂದು ಅವರಿವರಿಂದ ಬಾಯಿತುಂಬಾ ಕರೆಸಿಕೊಳ್ಳುವ ರೈತನ ಹೊಟ್ಟೆಯು ಬೆನ್ನಿಗೆ ಅಂಟಿಕೊಂಡು ಯಾವುದೋ ಕಾಲವಾಗಿದೆ. ಕೃಷಿಕ ಮತ್ತು ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಪಟ್ಟವರು ಇನ್ನಾದರೂ ಸ್ಪಂದಿಸಬೇಕಿದೆ. ಆಗ ಮಾತ್ರವೇ ರೈತ ನೆಮ್ಮದಿಯ ನಿಟ್ಟುಸಿರು ಬಿಟ್ಟಾನು...
(ಲೇಖಕರು ಹವ್ಯಾಸಿ ಬರಹಗಾರರು)