ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surabhi Hudigere Column: ಧಾರ್ಮಿಕ ಪ್ರಜ್ಞೆಗೆ ಒದಗಿದ ಆಘಾತ

ಅತ್ಯಾಚಾರಕ್ಕೊಳಗಾದ ಮಗಳ ಬಗ್ಗೆ ಹೇಳಿಕೊಂಡರೆ ಅದು ಸಮಾಜದಲ್ಲಿ ಅನುಭೂತಿಯ ಅಲೆ ಯನ್ನು ಸೃಷ್ಟಿಸುತ್ತದೆ; ಆದರೆ ಅಂಥ ಕಥೆ ಸುಳ್ಳೆಂದು ಸಾಬೀತಾದರೆ, ಅದು ಭ್ರಮನಿರಸನದ ಜತೆಗೆ ಆಕ್ರೋಶ ವನ್ನೂ ಹುಟ್ಟು ಹಾಕುತ್ತದೆ. ಅಸ್ತಿತ್ವದಲ್ಲೇ ಇಲ್ಲದ ಒಂದು ಜೀವಕ್ಕಾಗಿ ಇಡೀ ಹೆಣ್ಣು ಸಂಕುಲವು ಶೋಕಿಸುವಂತೆ ಮಾಡಲಾಯಿತು.

ಧಾರ್ಮಿಕ ಪ್ರಜ್ಞೆಗೆ ಒದಗಿದ ಆಘಾತ

-

Ashok Nayak Ashok Nayak Sep 5, 2025 1:23 PM

ಧರ್ಮಪೀಠ

ಸುರಭಿ ಹೂಡಿಗೆರೆ

ಸುಮಾರು ೨ ತಿಂಗಳಿಂದ ರಾಜ್ಯವು ಗೊಂದಲದಲ್ಲಿ, ಪೈಪೋಟಿಯಂತೆ ಹೊಮ್ಮುತ್ತಿದ್ದ ಪರಸ್ಪರ ಆರೋಪಗಳ ನೆರಳಿನಲ್ಲಿ ಸಿಲುಕಿದೆ. ಧರ್ಮಸ್ಥಳದಲ್ಲಿ ಆದ ಬೆಳವಣಿಗೆಗಳು ಸ್ಪಷ್ಟತೆಯನ್ನು ನೀಡುವ ಬದಲು ಸಾರ್ವಜನಿಕರಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಶ್ರದ್ಧಾಭಕ್ತಿ ಇರುವವರಿಲ್ಲಿ ಕ್ಷೋಭೆಯನ್ನುಂಟು ಮಾಡಿದವು.

ಕಾರಣ, ಹಿಂದಿನಿಂದಲೂ ಧರ್ಮಸ್ಥಳವನ್ನು ‘ವಿಶ್ವಾಸದ ಪ್ರತೀಕ’ ಮತ್ತು ‘ಸೇವಾಧರ್ಮದ ಸಾಕಾರ ರೂಪ’ ಎಂದು ಪರಿಗಣಿಸುತ್ತಿದ್ದವರೇ ಅದನ್ನು ಇದ್ದಕ್ಕಿದ್ದಂತೆ ‘ಅತ್ಯಾಚಾರದ ಕೂಪ’ ವೆಂಬಂತೆ ಬಿಂಬಿಸತೊಡಗಿದ್ದರು. ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಹೂಳ ಲಾಗಿದೆ ಎಂಬ ಆರೋಪಗಳು, ಜನರ ಶ್ರದ್ಧಾಭಕ್ತಿಗಳಿಗೇ ಕೊಳ್ಳಿಯಿಟ್ಟಿದ್ದವು.

ದೇಗುಲಗಳು ಹಾಸುಹೊಕ್ಕಾಗಿರುವ ನಮ್ಮ ಸಂಸ್ಕೃತಿಯಲ್ಲಿ, ‘ದೇಗುಲ ಕ್ಷೇತ್ರಗಳನ್ನು ಈಗಲೂ ನಂಬಬಹುದೇ?’ ಎಂದು ಪ್ರಶ್ನಿಸುವಂತೆ ಜನರನ್ನು ಪ್ರೇರೇಪಿಸಬಲ್ಲ ಶಕ್ತಿಯನ್ನು ಈ ಆರೋಪಗಳು ಹೊಂದಿದ್ದವು. ಇದು ಸಾಲದೆಂಬಂತೆ, ಆಳುಗ ವಲಯದ ವಿವಿಧ ನಾಯಕ ರಿಂದ ಹೊಮ್ಮಿದ ಹೇಳಿಕೆಗಳು ಜನರನ್ನು ಶಾಂತ ಗೊಳಿಸುವ ಬದಲು, ಅವರ ಅಸಮಾಧಾನವನ್ನು ಇನ್ನಷ್ಟು ತೀವ್ರವಾಗಿಸಿದವು.

ಇದನ್ನೂ ಓದಿ: Roopa Gururaj Column: ಐತಿಹ್ಯದ ಹಿನ್ನೆಲೆಯ ಓಣಂ ಹಬ್ಬ

ಕೆಲವು ಚಿತ್ರಗಳು ಮನದಲ್ಲಿ ಅಚ್ಚಳಿಯದೆ ಉಳಿದವು. ತಲೆ ಬುರುಡೆಯನ್ನು ಹಿಡಿದಿದ್ದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನ ಚಹರೆ ಅಂಥ ದೊಂದು ಕ್ಷಣವಾಗಿತ್ತು. ಇದು ಅಧಿಕೃತ ಸ್ಪಷ್ಟೀಕರಣಗಳಿಗಿಂತ ವೇಗವಾಗಿ ಹರಡಿತು, ಮಾಧ್ಯಮಗಳಲ್ಲಿ ಪದೇ ಪದೆ ಬಿತ್ತರಗೊಂಡಿತು.

ಉತ್ಖನನಗಳು ಬಹಳ ಬೇಗ ನಡೆದವು. ಅತ್ಯಾಧುನಿಕ ಸಾಧನಗಳನ್ನು ಬಳಸಿ ಸ್ಥಳಗಳನ್ನು ತೆರವು ಗೊಳಿಸಿ, ‘ಇದನ್ನು ಮಾಡಿದಲ್ಲಿ ಏನೋ ಸಿಗಬಹುದು’ ಎಂಬ ನಂಬಿಕೆಯಿರುವಂತೆ ಅವನ್ನು ಪದೇ ಪದೆ ಅಗೆಯಲಾಯಿತು. ಈ ಚಿತ್ರಗಳು ತಮ್ಮದೇ ಆದ ಛಾಪನ್ನು ಮೂಡಿಸಿದವು. ಯಾವುದೇ ಸಾಕ್ಷ್ಯ ಸಿಗದಿದ್ದರೂ, ಭೂಮಿಯಡಿ ಏನೋ ಇರಬಹುದು ಎಂದು ಜನರನ್ನು ನಂಬಿಸಲಾಯಿತು.

ನಂತರ ವಿರೋಧಾಭಾಸಗಳು ಕಾಣಿಸಿಕೊಂಡವು. ‘ಮೊದಲು ಸಿಕ್ಕಿದ ತಲೆ ಬುರುಡೆಯನ್ನು ಧರ್ಮ ಸ್ಥಳದಿಂದ ಹೊರತೆಗೆಯಲಾಗಿಲ್ಲ’ ಎಂದು ವಿಧಿವಿಜ್ಞಾನ (ಫಾರೆನ್ಸಿಕ್) ವರದಿಗಳು ಸೂಚಿಸಿ ದವು. ಆದರೂ ಆಳುಗರು ಸ್ಪಷ್ಟತೆಯನ್ನು ನೀಡುವ ತೊಂದರೆಯನ್ನು ತೆಗೆದುಕೊಳ್ಳಲಿಲ್ಲ, ಕೇಳಬೇಕಾದ ಪ್ರಶ್ನೆಗಳನ್ನು ಕೇಳುವ ತುರ್ತು ಅವರಲ್ಲಿ ಕಾಣಲಿಲ್ಲ.

ತಲೆಬುರುಡೆ ಎಲ್ಲಿಂದ ಬಂತು? ಅದನ್ನು ಚಿನ್ನಯ್ಯನಿಗೆ ಕೊಟ್ಟವರಾರು? ಅವನು ಒಂದು ರಾಜ್ಯ ದಿಂದ ಇನ್ನೊಂದು ರಾಜ್ಯಕ್ಕೆ ಮತ್ತು ದೆಹಲಿಗೆ ಅಷ್ಟೊಂದು ಸುಲಭವಾಗಿ, ವಿಶ್ವಾಸದಿಂದ ಹೇಗೆ ಹೋಗಿಬರುತ್ತಿದ್ದ? ಎಂಬ ಪ್ರಶ್ನೆಗಳು ಹಾಗೇ ಉಳಿದುಬಿಟ್ಟವು. ಕೊನೆಗೂ ಒಂದಿಷ್ಟು ಬಂಧನ ಗಳಾದರೂ, ಅಲ್ಲಿಯವರೆಗೆ ನಡೆದಿದ್ದ ನಾಟಕವು ಸಾರ್ವಜನಿಕರ ವಿಶ್ವಾಸಕ್ಕೆ ಅದಾಗಲೇ ಘಾಸಿ ಮಾಡಿತ್ತು.

ಒಂದು ಹಂತದಲ್ಲಿ ಚಿನ್ನಯ್ಯ ವಕೀಲರಿಂದ ಸುತ್ತುವರಿದು ನಡೆದುಬರುತ್ತಿದ್ದ, ಇನ್ನೊಮ್ಮೆ ಕಾನೂನು ತಜ್ಞರೊಂದಿಗಿನ ಕೋಟೆಯಲ್ಲಿ ಕಾರಿನಲ್ಲಿ ಬಂದಿಳಿದ. ನಂತರ, ಈ ಕಥೆಯ ಅಸಲಿಯತ್ತು ಬಯಲಾದಾಗ, ಅವನಿಗೆ ಮೂಲಭೂತ ಕಾನೂನಿನ ಪ್ರಾತಿನಿಧ್ಯವೂ ಸಿಗಲಿಲ್ಲ. ಭಯವುಂಟು ಮಾಡಲು ಅವನನ್ನು ಬಳಸಿ ನಂತರ ತ್ಯಜಿಸಲಾಯಿತು. ಅವನೊಂದು ದಾಳವಾಗಿದ್ದ, ಭಯದ ಪ್ರತಿನಿಧಿಯಾಗಿದ್ದ. ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳಲಾಗಿತ್ತು.

ಮತ್ತೊಂದೆಡೆ, ದುಃಖದ ಪ್ರತಿನಿಧಿಯಾಗಿದ್ದ ಸುಜಾತಾ ಭಟ್, “ನನ್ನ ಮಗಳು ಅನನ್ಯಾಳ ಅತ್ಯಾಚಾರ ವಾಗಿದೆ. ಲೈಂಗಿಕವಾಗಿ ದುರ್ಬಳಕೆ ಮಾಡಿ ಅವಳನ್ನು ಹೂಳಲಾಗಿದೆ" ಎಂದು ಆರೋಪಿಸಿದರು. ನಂತರ ಬಂದ ವರದಿಗಳು ಈ ಮಗಳು ಅಸ್ತಿತ್ವದಲ್ಲೇ ಇರದಿರುವ ಸಾಧ್ಯತೆಯನ್ನು ತೋರಿಸಿ ದವು, ಹೆಸರು ಮತ್ತು ಛಾಯಾಚಿತ್ರವನ್ನೂ ಸೃಷ್ಟಿಸಿರಬಹುದು ಎಂಬುದನ್ನು ಸೂಚಿಸಿದವು.

ಅತ್ಯಾಚಾರಕ್ಕೊಳಗಾದ ಮಗಳ ಬಗ್ಗೆ ಹೇಳಿಕೊಂಡರೆ ಅದು ಸಮಾಜದಲ್ಲಿ ಅನುಭೂತಿಯ ಅಲೆ ಯನ್ನು ಸೃಷ್ಟಿಸುತ್ತದೆ; ಆದರೆ ಅಂಥ ಕಥೆ ಸುಳ್ಳೆಂದು ಸಾಬೀತಾದರೆ, ಅದು ಭ್ರಮನಿರಸನದ ಜತೆಗೆ ಆಕ್ರೋಶವನ್ನೂ ಹುಟ್ಟು ಹಾಕುತ್ತದೆ. ಅಸ್ತಿತ್ವದಲ್ಲೇ ಇಲ್ಲದ ಒಂದು ಜೀವಕ್ಕಾಗಿ ಇಡೀ ಹೆಣ್ಣು ಸಂಕುಲವು ಶೋಕಿಸುವಂತೆ ಮಾಡಲಾಯಿತು.

ಮತ್ತೊಮ್ಮೆ ಭೀತಿ ಹರಡುವ ಮೊದಲು, ಇಂಥ ನಿರೂಪಣೆಯನ್ನು ಸರಕಾರ ಪರಿಶೀಲಿಸಲಿಲ್ಲ; ಹೀಗಾಗಿ ಅದು ಹರಡುವುದಕ್ಕೆ ಅನುವಾದಂತಾಯಿತು. ಆನ್‌ಲೈನ್ ವ್ಯವಸ್ಥೆಯೂ ಈ ಗೊಂದಲ ವನ್ನು ಹೆಚ್ಚಿಸಿತು. ಯುಟ್ಯೂಬರ್‌ಗಳು, ಸ್ವಘೋಷಿತ ತನಿಖಾಧಿಕಾರಿಗಳು ಮತ್ತು ಕೃತಕ ಬುದ್ಧಿಮತ್ತೆ ಯನ್ನು ಬಳಸಿ ರೂಪುಗೊಂಡ ಚಿತ್ರಗಳಿಂದ ಈ ವದಂತಿಗಳಿಗೆ ಸತ್ಯದ ಹೊಳಪು ದಕ್ಕಿತು. ತೀರ್ಪು ನೀಡುವ ಖಚಿತತೆಯೊಂದಿಗೇ ಇವರೆಲ್ಲ ಮಾತಾಡಿದರು.

ಇದು ಬೆಳೆಯಲು ಸರಕಾರವು ಅವಕಾಶ ಮಾಡಿಕೊಟ್ಟಿತು, ಯಾವುದೇ ಸಮಯೋಚಿತ ಮಧ್ಯ ಪ್ರವೇಶವಾಗಲಿಲ್ಲ, ಭಯದ ಹರಡುವಿಕೆಯನ್ನು ತಡೆಯಲಿಲ್ಲ. ಮೊದಲೇ ಮಾತನಾಡಬೇಕಿದ್ದ ಮಹಿಳಾ ಆಯೋಗವು ನಿಧಾನವಾಗಿ ಮತ್ತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸಿತು. ವಿಳಂಬವು ನಿರ್ಲಕ್ಷ್ಯವಾಗಿ ಮಾರ್ಪಟ್ಟಿತು, ನಿರ್ಲಕ್ಷ್ಯವು ಮೌನಸಮ್ಮತಿಯಾಯಿತು.

ಈ ಕಥೆಯು ಕರ್ನಾಟಕದಾಚೆಗೂ ಸಾಗಿ, ಕೇರಳದ ರಾಜಕಾರಣಿಗಳೂ ತನಿಖೆಗೆ ಒತ್ತಾಯಿಸಿದರು. ಧರ್ಮಸ್ಥಳವನ್ನು ದೌರ್ಜನ್ಯದ ಕೇಂದ್ರಬಿಂದುವಿನಂತೆ ಬಿಂಬಿಸುವ ವರದಿಗಳನ್ನು, ಬಿಬಿಸಿ ಮತ್ತು ಅಲ್ ಜಜೀರಾ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸಿದವು. ಸಾಮರಸ್ಯ-ಸೇವೆಗೆ ಹೆಸರಾದ ಈ ‘ದೇಗುಲ- ಪಟ್ಟಣ’ವನ್ನು ಅನ್ಯಾಯವಾಗಿ ಅನುಮಾನದ ದೃಷ್ಟಿಯಿಂದ ನೋಡು ವಂತೆ ಮಾಡಲಾಯಿತು.

“ನಿಮ್ಮ ರಾಜ್ಯವು ಸಾಮೂಹಿಕ ಸಮಾಧಿಗಳನ್ನು ಮರೆ ಮಾಚಿದೆಯೇ? ನಿಮ್ಮ ಧರ್ಮವು ಈ ಭಯಾ ನಕ ಅತ್ಯಾಚಾರಗಳಿಗೆ ಸಮ್ಮತಿ ನೀಡಿತ್ತೇ?" ಎಂಬಂಥ ಅವಮಾನಕರ ಪ್ರಶ್ನೆಗಳನ್ನು ವಿದೇಶದಲ್ಲಿ ರುವ ಕನ್ನಡಿಗರು ಕೇಳಿಸಿಕೊಳ್ಳಬೇಕಾಯಿತು. ಆದರೆ ನಮ್ಮ ಆಳುಗರ ಬಳಿ ಯಾವುದೇ ಕಾರ್ಯ ತಂತ್ರವಿರಲಿಲ್ಲ, ಸುಸಂಬದ್ಧ ಸಂವಹನವಿರಲಿಲ್ಲ.

ನಂತರ ಎಸ್‌ಐಟಿ ತನ್ನ ಶೋಧದ ಅಂಶಗಳನ್ನು ವರದಿ ಮಾಡಿದಾಗ, ಈ ಹುರುಳಿಲ್ಲದ ಆರೋಪಗಳ ಮುಖವಾಡ ಬಯಲಾಗತೊಡಗಿತು. ವಿವಿಧೆಡೆ ನಡೆದ ಉತ್ಖನನಗಳಲ್ಲಿ ಏನೂ ಕಾಣಲಿಲ್ಲ. ಆದರೂ ಸ್ಪಷ್ಟೀಕರಣವು ಆಪಾದನೆಯೆದುರು ದುರ್ಬಲವೆನಿಸಿತು. ಮೂಲಭೂತ ಸಂಗತಿಗಳನ್ನು ಪರಿಶೀಲಿಸ ದೆಯೇ ಧಾವಂತದಲ್ಲಿ ಎಸ್‌ಐಟಿಯನ್ನು ಸ್ಥಾಪಿಸಿ ವದಂತಿಗಳಿಗೆ ಇಂಬು ನೀಡಿದ್ದ ಸರಕಾರವು, ಆ ವದಂತಿಗಳ ತಥ್ಯ ಬಯಲಾದಾಗ ಭರವಸೆ ನೀಡುವ ವಿಶ್ವಾಸಾರ್ಹತೆಯನ್ನು ಹೊಂದಿರಲಿಲ್ಲ.

ಮಹಿಳೆಯರಿಗೆ ಈ ಅನುಭವವು ಅಸಹನೀಯವಾಗಿತ್ತು, ಏಕೆಂದರೆ ಒಂದು ಪವಿತ್ರ ಸ್ಥಳವು ನೀಚ ಅಪರಾಧಗಳನ್ನು ಮರೆಮಾಡಿರಬಹುದಾದ ಸಾಧ್ಯತೆಯ ಅಡಿಯಲ್ಲಿ ಅವರು 2 ತಿಂಗಳು ದಿನ ದೂಡಬೇಕಾಯಿತು. ‘ಹಾಗೇನೂ ಇಲ್ಲ’ ಎನ್ನುವುದನ್ನು ತನಿಖೆಗಳು ಈಗ ಸೂಚಿಸಿದರೂ, ಆ ಸಾಧ್ಯತೆಯ ನೆನಪೇ ಒಂದು ಗಾಯವಾಗಿ ಉಳಿದು ಬಿಟ್ಟಿದೆ.

ಎಸ್‌ಐಟಿ ಮುಂದುವರಿದರೂ ಬಹಳಷ್ಟು ದೊಡ್ಡ ಪ್ರಶ್ನೆಗಳು ಉಳಿದಿವೆ. ಚಿನ್ನಯ್ಯನಿಗೆ ತಲೆಬುರುಡೆ ಕೊಟ್ಟವರಾರು? ಅನನ್ಯಾಳನ್ನು ಸೃಷ್ಟಿಸುವಂತೆ ಸುಜಾತಾ ಭಟ್‌ರನ್ನು ಪ್ರೇರೇಪಿಸಿದವರಾರು? ಬಹಿರಂಗಪಡಿಸುವಿಕೆಯ ಸಮಯ ಯಾರ ಕೈಗೊಂಬೆಯಾಗಿತ್ತು? ಪರಿಶೀಲನೆಯಿಲ್ಲದೆ ಈ ಹಕ್ಕು ಗಳಿಗೆ ಸರಕಾರ ಮಾನ್ಯತೆ ನೀಡಿದ್ದೇಕೆ?- ಇವು ಎಸ್‌ಐಟಿಯ ವ್ಯಾಪ್ತಿಯನ್ನು ಮೀರಿದ ಪ್ರಶ್ನೆಗಳಾಗಿವೆ. ಈ ಪ್ರಶ್ನೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿನ ಸ್ವತಂತ್ರ ವಿಚಾರಣೆಯ ಅಗತ್ಯವಿದೆ.

ಈ ಸಮಸ್ಯೆ ಜೀವಂತವಾಗಿ ಉಳಿದಿದೆ, ಅದಕ್ಕಾಗಿಯೇ ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಧರ್ಮಸ್ಥಳದ ಪರವಾಗಿ ನಿಂತಿವೆ. ಸೇವೆ ಮತ್ತು ಸಾಮರಸ್ಯದೊಂದಿಗೆ ದೀರ್ಘಕಾಲಿಕ ಸಂಬಂಧ ಹೊಂದಿರುವ ದೇಗುಲಕ್ಕೆ, ನಿಖರ ಪುರಾವೆಗಳಿಲ್ಲದೆ ‘ಅತ್ಯಾಚಾರ ಕೇಂದ್ರ’ವೆಂದು ಹಣೆ ಪಟ್ಟಿ ಹಚ್ಚುವ ಮತ್ತು ಈ ಭೀತಿಯ ಹಿನ್ನೆಲೆಯಲ್ಲಿ ನಡೆಯುವ ರಾಜಕೀಯದಾಟದಲ್ಲಿ ರಾಜ್ಯದ ಮಹಿಳೆಯರನ್ನು ದಾಳಗಳನ್ನಾಗಿ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ಒತ್ತಿ ಹೇಳು ವುದು ಇದರ ಉದ್ದೇಶವಾಗಿದೆ.

ರಾಜ್ಯವು ಈ ಬಿರುಗಾಳಿಯನ್ನು ಎದುರಿಸಿದೆ, ಆದರೆ ಎದುರಿಸುವುದೇ ನ್ಯಾಯವಲ್ಲ. ಗಾಯಗಳು ಮಾಯಲು ಉತ್ತರದಾಯಿತ್ವದ ಅಗತ್ಯವಿದೆ. ಅನೇಕ ಬಿರುಗಾಳಿಗಳನ್ನು ಮೆಟ್ಟಿ ನಿಂತಿರುವ ಧರ್ಮಸ್ಥಳವು ಇದನ್ನೂ ಮೆಟ್ಟಿ ನಿಲ್ಲುತ್ತದೆ; ಆದರೆ ಗೊಂದಲದ ಸ್ಥಳದಲ್ಲಿ ಸ್ಪಷ್ಟತೆ ಬರುವವರೆಗೆ ಮತ್ತು ಹಿಂಜರಿಕೆಯ ಸ್ಥಳದಲ್ಲಿ ನಾಯಕತ್ವ ಬರುವವರೆಗೆ ಇಲ್ಲಿಯವರೆಗೆ ನಮ್ಮ ಮೇಲೆ ಹರಡಿದ್ದ ಕರಿನೆರಳು ಮಾಯವಾಗುವುದಿಲ್ಲ.

(ಲೇಖಕಿ ಬಿಜೆಪಿಯ ವಕ್ತಾರರು)