Dr Vijay Darda Column: ದೇಶವನ್ನು ಡ್ರಗ್ಸ್ ನಲ್ಲಿ ಮುಳುಗಿಸಲು ಭಯಾನಕ ಷಡ್ಯಂತ್ರ
ಡ್ರಗ್ಸ್ ಎಂಬುದು ಇಲ್ಲಿ ಎಷ್ಟು ಸಾಮಾನ್ಯ ಸಂಗತಿಯೆಂದರೆ, ನಿರಾಶ್ರಿತರನ್ನು ಕರೆದುಕೊಂಡು ಹೋಗಿ ಸರಕಾರದ ಆಶ್ರಯ ಮನೆಗಳಲ್ಲಿ ಇರಿಸಿದರೆ ಅಲ್ಲೂ ಅವರಿಗೆ ಬೇಕಾದ ರೀತಿಯ ಡ್ರಗ್ಸ್ ಬಹಳ ಸುಲಭ ವಾಗಿ ಸಿಗುತ್ತದೆ. ಪ್ರತಿಯೊಂದು ಮಾದಕ ವಸ್ತುವಿಗೂ ಇಲ್ಲಿ ಕೋಡ್ ವರ್ಡ್‌ಗಳಿವೆ. ಒಂದು ಮಾದಕ ದ್ರವ್ಯಕ್ಕೆ ‘ಗ್ರಾಸ್’ ಎಂದು ಹೆಸರಿಟ್ಟಿದ್ದರೆ, ಇನ್ನೊಂದಕ್ಕೆ ‘ವೀಟ್’ ಎಂದು ಕರೆಯುತ್ತಾರೆ.


ಸಂಗತ
ಪಾಕಿಸ್ತಾನ, ಅಫ್ಘಾನಿಸ್ತಾನ, ಕೆನಡಾ ಮತ್ತು ಮ್ಯಾನ್ಮಾರ್‌ನಲ್ಲಿ ಬೇರು ಬಿಟ್ಟಿರುವ ಡ್ರಗ್ಸ್ ಮಾಫಿಯಾ ವನ್ನು ಮಟ್ಟಹಾಕುವುದೇ ಭಾರತಕ್ಕೆ ದೊಡ್ಡ ಸವಾಲು. ಶತ್ರು ದೇಶಗಳು ನಮ್ಮ ಯುವಕರನ್ನು ಡ್ರಗ್ಸ್‌ನ ದಾಸರಾಗುವಂತೆ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಈ ಮಾದಕ ದ್ರವ್ಯಗಳ ಡೀಲರ್‌ಗಳನ್ನು ಸಂಪೂರ್ಣ ನಿರ್ನಾಮ ಮಾಡದೆ ಬೇರೆ ದಾರಿಯೇ ಇಲ್ಲ.
ಕೆನಡಾದ ವಿವಿಧ ಪ್ರದೇಶಗಳಲ್ಲಿ ಸಂಚರಿಸುವಾಗ ಈ ದೇಶ ಅದ್ಯಾವ ರೀತಿಯಲ್ಲಿ ಡ್ರಗ್ಸ್ ಮಾಫಿಯಾ ದ ಕಪಿಮುಷ್ಟಿಯಲ್ಲಿ ಸಿಲುಕಿದೆ ಎಂದು ಆಶ್ಚರ್ಯವಾಗುತ್ತಿದೆ! ಮರಿಜುವಾನಾ, ಕೊಕೇನ್, ಅಫೀಮಿ ನಿಂದ ಹಿಡಿದು ಹೆರಾಯಿನ್‌ವರೆಗೆ ನಾನಾ ರೀತಿಯ ಅಪಾಯಕಾರಿ ಮಾದಕ ವಸ್ತುಗಳು ಇಲ್ಲಿನ ಮಾರ್ಕೆಟ್‌ಗಳಲ್ಲಿ ಮುಕ್ತವಾಗಿ ಯಾರಿಗೆ ಬೇಕಾದರೂ ಸಿಗುತ್ತವೆ. ಅಂತಹ ಪ್ರದೇಶಗಳಲ್ಲಿ ಸುಮ್ಮನೆ ಒಂದು ಸುತ್ತು ನಡೆದುಕೊಂಡು ಹೋದರೂ ಸಾಕು, ನಿಮಗೆ ಮಾದಕ ಲೋಕದ ನಾನಾ ಮುಖಗಳು ಎದ್ದು ಕಾಣಿಸುತ್ತವೆ.
ಡ್ರಗ್ಸ್ ಎಂಬುದು ಇಲ್ಲಿ ಎಷ್ಟು ಸಾಮಾನ್ಯ ಸಂಗತಿಯೆಂದರೆ, ನಿರಾಶ್ರಿತರನ್ನು ಕರೆದುಕೊಂಡು ಹೋಗಿ ಸರಕಾರದ ಆಶ್ರಯ ಮನೆಗಳಲ್ಲಿ ಇರಿಸಿದರೆ ಅಲ್ಲೂ ಅವರಿಗೆ ಬೇಕಾದ ರೀತಿಯ ಡ್ರಗ್ಸ್ ಬಹಳ ಸುಲಭವಾಗಿ ಸಿಗುತ್ತದೆ. ಪ್ರತಿಯೊಂದು ಮಾದಕ ವಸ್ತುವಿಗೂ ಇಲ್ಲಿ ಕೋಡ್ ವರ್ಡ್ ಗಳಿವೆ. ಒಂದು ಮಾದಕ ದ್ರವ್ಯಕ್ಕೆ ‘ಗ್ರಾಸ್’ ಎಂದು ಹೆಸರಿಟ್ಟಿದ್ದರೆ, ಇನ್ನೊಂದಕ್ಕೆ ‘ವೀಟ್’ ಎಂದು ಕರೆಯುತ್ತಾರೆ.
ಹೀಗೆ ಪ್ರತಿಯೊಂದು ಮಾದಕ ವಸ್ತುವಿಗೂ ಒಂದೊಂದು ಹೆಸರಿದೆ. ಇನ್ನು, ಯುರೋಪಿನ ಕೆಲ ನಗರಗಳಿಗೆ ಹೋದರೆ ಅಲ್ಲಿ ರಾಜಾರೋಷವಾಗಿ ಮೆನು ಕಾರ್ಡ್‌ನಲ್ಲೇ ಮಾದಕ ವಸ್ತುಗಳ ಹೆಸರು ಹಾಕಿ ಮಾರಾಟ ಮಾಡುತ್ತಾರೆ! ಅದನ್ನೆಲ್ಲ ನೋಡಿದಾಗ ನನಗೆ ದೇವಾನಂದ್ ಅವರ ‘ಹರೇ ರಾಮಾ ಹರೇ ಕೃಷ್ಣ ’ ಸಿನಿಮಾದ ‘ದಮ್ ಮಾರೋ ದಮ್’ ಹಾಡು ನೆನಪಾಗುತ್ತದೆ.
ಇದನ್ನೂ ಓದಿ: Dr Viay Darda Column: ಅಂಕಲ್ ಸ್ಯಾಮ್ ಆರ್ಡರ್ ಆಡಿದರೆ ಮುಗೀತ್ !
ಕೆನಡಾ ಹಾಗೂ ಕೆಲ ಯುರೋಪಿಯನ್ ದೇಶಗಳ ಮಾದಕ ಲೋಕದ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ನಮ್ಮದೇ ದೇಶದ ಮಾದಕ ವಸ್ತುಗಳ ಮಾಫಿಯಾದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಇಂಟರ್ನೆಟ್ ಆವೃತ್ತಿಯಲ್ಲಿ ಕಣ್ಣಿಗೆ ಬಿತ್ತು. ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಬಹಳ ದೊಡ್ಡ ಡ್ರಗ್ಸ್ ಜಾಲವೊಂದನ್ನು ಪೊಲೀಸರು ಮಟ್ಟ ಹಾಕಿ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿಕೊಂಡಿದ್ದರು.
ಆ ಮಾದಕ ವಸ್ತುಗಳ ಜಾಲದ ಮುಖ್ಯಸ್ಥ ತನ್ವೀರ್ ಸಿಂಗ್ ಎಂದು ವರದಿಯಲ್ಲಿ ಬರೆದಿತ್ತು. ಅವನು ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಾನಂತೆ. ಇನ್ನೊಬ್ಬ ಕಿಂಗ್‌ಪಿನ್ ಹೆಸರು ಕೂಡ ವರದಿಯಲ್ಲಿತ್ತು. ಅವನು ಕೆನಡಾದ ಜೋಬನ್ ಕೆಲರ್. ಈ ಇಬ್ಬರು ಡ್ರಗ್ಸ್ ದೊರೆಗಳು ಸ್ಥಳೀಯ ಡೀಲರ್ ಗುರಸಾಹೇಬ್ ಸಿಂಗ್ ಎಂಬ ವ್ಯಕ್ತಿಯ ಮೂಲಕ ಭಾರತಕ್ಕೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಿ ಕಳುಹಿಸುತ್ತಿದ್ದಾರಂತೆ. ಮಜಾ ಏನೆಂದರೆ, ಗುರಸಾಹೇಬ್ ಸಿಂಗ್ ಪಂಜಾಬಿನ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಅವನು ಮೊಬೈಲ್ ಫೋನ್ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದಾನೆ.
ತನ್ನ ಸಂಬಂಧಿ ಜಶನ್‌ಪ್ರೀತ್ ಸಿಂಗ್ ಮತ್ತು ಇನ್ನೊಬ್ಬ ಸಹಚರ ಗಗನ್‌ದೀಪ್ ಸಿಂಗ್ ಮೂಲಕ ಅವನ ವ್ಯವಹಾರಗಳು ನಡೆಯುತ್ತವೆಯಂತೆ. ಅದನ್ನು ಓದಿದಾಗ ಸಹಜವಾಗಿಯೇ ನನ್ನಲ್ಲೊಂದು ಪ್ರಶ್ನೆ ಮೂಡಿತು. ನಿಮಗೂ ಈ ಪ್ರಶ್ನೆ ಕಾಡಬಹುದು. ಗುರಸಾಹೇಬ್ ಸಿಂಗ್‌ಗೆ ಜೈಲಿನಲ್ಲಿ ಮೊಬೈಲ್ ಫೋನ್ ಹೇಗೆ ಸಿಗುತ್ತದೆ? ಜೈಲಿನಲ್ಲಿ ಮೊಬೈಲ್ ಬಳಸುವುದು ಕೈದಿಗಳಿಗೆ ನಿಷಿದ್ಧವಲ್ಲವೇ? ಅಂದರೆ, ಜೈಲಿನ ಸಿಬ್ಬಂದಿಯೇ ಇದರಲ್ಲಿ ಶಾಮೀಲಾಗಿ ಡ್ರಗ್ಸ್ ವ್ಯವಹಾರಕ್ಕೆ ನೆರವಾಗುತ್ತಿದ್ದಾರೆ!
ಇಂತಹದ್ದೊಂದು ಹೊಂದಾಣಿಕೆಯಿಲ್ಲದೆ ಕೈದಿಯೊಬ್ಬ ಜೈಲಿನಲ್ಲಿ ಕುಳಿತು ಡ್ರಗ್ಸ್ ಮಾರಾಟದ ಜಾಲವನ್ನು ನಿಭಾಯಿಸುವುದು ಸಾಧ್ಯವೇ ಇಲ್ಲ. ಡ್ರಗ್ಸ್ ದಂಧೆಯಲ್ಲಿ ಎಷ್ಟೊಂದು ದುಡ್ಡಿದೆ ಅಂದರೆ, ಅದನ್ನು ನಡೆಸುವವರು ತಮ್ಮ ರಕ್ಷಣೆಗೋಸ್ಕರ ಸರಕಾರಿ ಅಧಿಕಾರಿಗಳಿಗೆ ಒಂದಷ್ಟು ಕೋಟಿ ಹಣ ನೀಡುವುದಕ್ಕೆ ಖಂಡಿತ ಹಿಂದೆ ಮುಂದೆ ಯೋಚಿಸುವುದಿಲ್ಲ.
ಈ ಹಿಂದೆಯೂ ನಾನು ಪದೇ ಪದೇ ಹೇಳಿದ್ದೇನೆ; ಡ್ರಗ್ಸ್ ದಂಧೆಯೆಂಬುದು ಭಾರತದ ವಿರುದ್ಧ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಷಡ್ಯಂತ್ರ. ಡ್ರಗ್ಸ್ ದಂಧೆಗೂ ಭಯೋತ್ಪಾದನೆಗೂ ತುಂಬಾ ಹತ್ತಿರದ ನಂಟಿದೆ. ಭಾರತದ ಇತಿಹಾಸದಲ್ಲಿ ಆಗಿಹೋದ ಅತ್ಯಂತ ದೂರದೃಷ್ಟಿಯ ಚಿಂತಕ ಚಾಣಕ್ಯ ಈ ಬಗ್ಗೆ ಬಹಳ ಹಿಂದೆಯೇ ಎಚ್ಚರಿಕೆ ನೀಡಿದ್ದ.
ಮಾದಕ ವಸ್ತುಗಳನ್ನು ಸೇವಿಸುವವರು ತಮ್ಮ ಭವಿಷ್ಯವನ್ನು ಮಾತ್ರ ಹಾಳು ಮಾಡಿಕೊಳ್ಳುವುದಿಲ್ಲ, ಅದರ ಜೊತೆಗೆ ಸಮಾಜದ ಭವಿಷ್ಯವನ್ನೂ ಹಾಳುಮಾಡುತ್ತಾರೆ ಎಂದು ಚಾಣಕ್ಯ ಹೇಳಿದ್ದ. ನಮ್ಮ ಶತ್ರುದೇಶಗಳು ಇಂತಹುದೇ ಅವಕಾಶಗಳಿಗಾಗಿ ಕಾಯುತ್ತವೆ. ಭಾರತದ ಯುವಕರು ಡ್ರಗ್ಸ್ ಸೇವಿಸಿ ಹಾಳಾಗಿಹೋಗಲಿ ಎಂದೇ ಅವು ಬಯಸುತ್ತವೆ.
ಪ್ರತಿಭಾವಂತ ಯುವಕರು ಡ್ರಗ್ಸ್‌ಗೆ ದಾಸರಾದರೆ ಅವರ ಭವಿಷ್ಯದ ಜೊತೆಗೆ ದೇಶದ ಭವಿಷ್ಯ ಕೂಡ ಹಾಳಾಗುತ್ತದೆ. ಆದ್ದರಿಂದಲೇ ಹತ್ತು ದಿಕ್ಕುಗಳಿಂದಲೂ ಭಾರತಕ್ಕೆ ಡ್ರಗ್ಸ್ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಳೆದ ವರ್ಷ ದೆಹಲಿಯ ಮಹಿಪಾಲಪುರದಲ್ಲಿ 562 ಕೆ.ಜಿ. ಕೊಕೇನ್ ಹಾಗೂ 40 ಕೆ.ಜಿ. ಹೈಡ್ರೋಫೋನಿಕ್ ಮರಿಜುವಾನಾ ಜಪ್ತಿ ಮಾಡಿಕೊಳ್ಳಲಾಗಿತ್ತು. ದೆಹಲಿಯ ರಮೇಶ್ ನಗರದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ 208 ಕೆ.ಜಿ. ಕೊಕೇನ್ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ರಾಜಕಾರಣಿಯೊಬ್ಬರ ಹೆಸರು ಕೇಳಿಬಂದಿದ್ದರಿಂದ ಅದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಈ ನಡುವೆ ಗುಜರಾತಿನ ಅಂಕಲೇಶ್ವರದಲ್ಲಿ 7000 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿತ್ತು.
ಮಧ್ಯಪ್ರದೇಶದ ಝಾಬುವಾ ಎಂಬ ಗುಡ್ಡಗಾಡು ಪ್ರದೇಶದಲ್ಲಿ 1687 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿಯಾಗಿತ್ತು. ಇನ್ನೂ ಸ್ವಲ್ಪ ಹಿಂದೆ ಹೋದರೆ, ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 21000 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು 2021ರಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಹೀಗೆ ಮಾದಕ ದ್ರವ್ಯಗಳ ಜಪ್ತಿಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇದೂ ಕೂಡ ಡ್ರಗ್ಸ್ ಎಂಬ ಮಹಾಸಾಗರದಲ್ಲಿನ ಸಣ್ಣ ಹನಿಯಷ್ಟೆ.
ಜಾಗತಿಕ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾ ಎಂಬುದು ಪರ್ಯಾಯ ಆರ್ಥಿಕತೆಯ ರೂಪದಲ್ಲಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ನಡೆಯುವ ಡ್ರಗ್ಸ್ ವ್ಯವಹಾರವೇ ಪ್ರತಿ ವರ್ಷ ನೂರಾರು ಸಾವಿರ ಕೋಟಿ ರೂ.ಗಳಷ್ಟಿದೆ. ಈ ಹಿಂದೆ ನಮ್ಮ ದೇಶದಲ್ಲಿ ಚಿತ್ರರಂಗದ ಒಂದಷ್ಟು ಮಜಾಕೋರರು ಹಾಗೂ ‘ಕೆಟ್ಟ ’ ಮಕ್ಕಳು ಮಾತ್ರ ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸುತ್ತಿದ್ದರು. ಆದರೆ ಈಗ ಡ್ರಗ್ಸ್ ಸರ್ವವ್ಯಾಪಿ ಯಾಗಿದೆ. ಎಲ್ಲೆಂದರಲ್ಲಿ ಡ್ರಗ್ಸ್ ಸಿಗುತ್ತಿದೆ. ಮೆಟ್ರೋ ನಗರಗಳಂತಹ ದೆಹಲಿ, ಮುಂಬೈ, ಕೊಲ್ಕತ್ತಾಗಳ ಜೊತೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಂತಹ ರಾಜ್ಯದ ಸಣ್ಣಪುಟ್ಟ ನಗರಗಳಲ್ಲೂ ಡ್ರಗ್ಸ್ ಸಿಗುತ್ತದೆ.
ನಗರಗಳ ಮಾತು ಹಾಗಿರಲಿ, ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳಲ್ಲೂ ಯುವಕರು ಡ್ರಗ್ಸ್‌ಗೆ ದಾಸರಾಗಿದ್ದಾರೆ. ಅದಕ್ಕಿಂತ ಹೆಚ್ಚು ಆತಂಕಕಾರಿ ಸಂಗತಿಯೆಂದರೆ ಈಗ ಡ್ರಗ್ಸ್ ಪೆಡ್ಲರ್‌ಗಳು ಶಾಲೆಗೆ ಹೋಗುವ ಮಕ್ಕಳನ್ನೂ ಬಿಡುತ್ತಿಲ್ಲ. 7, 8ನೇ ಕ್ಲಾಸಿನ ಮಕ್ಕಳಿಗೂ ಡ್ರಗ್ಸ್ ಸೇವಿಸುವ ಚಟ ಹತ್ತಿಸು ತ್ತಿದ್ದಾರೆ. ಈ ಮಕ್ಕಳು ಸ್ವತಃ ಡ್ರಗ್ಸ್ ಸೇವಿಸುವುದರ ಜೊತೆಗೆ ಡ್ರಗ್ಸ್ ಸಾಗಣೆಯ ಕೊಂಡಿಯಾಗಿಯೂ ಬಳಕೆಯಾಗುತ್ತಿದ್ದಾರೆ.
ಒಮ್ಮೆ ಇವರು ಡ್ರಗ್ಸ್‌ಗೆ ದಾಸರಾದರೆ ಇವರನ್ನು ಬಳಸಿಕೊಂಡು ಬೇರೆ ಬೇರೆ ಅಪರಾಧ ಕೃತ್ಯಗಳನ್ನು ಮಾಡಿಸಬಹುದು. ಇವರು ಅಪ್ರಾಪ್ತರಾದ್ದರಿಂದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯ ವಿಲ್ಲ. ಗೋವಾದಲ್ಲಿ ನಡೆಯುತ್ತಿರುವ ಸಂಘಟಿತ ಮಾದಕ ದ್ರವ್ಯ ವ್ಯಾಪಾರ ಈಗ ರಹಸ್ಯವಾಗಿ ಉಳಿದಿಲ್ಲ. ಅದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಶಾನ್ಯದ ರಾಜ್ಯಗಳು ಕೂಡ ಮಾದಕ ದ್ರವ್ಯದ ದಂಧೆಯಿಂದ ತೀವ್ರ ಶೋಷಣೆಗೆ ಒಳಗಾಗಿವೆ.
ಪಂಜಾಬ್‌ನಲ್ಲಂತೂ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಲಿನ ಡ್ರಗ್ಸ್ ದಂಧೆಯ ಬಗ್ಗೆ ಉಡ್ತಾ ಪಂಜಾಬ್ ಎಂಬ ಸಿನಿಮಾ ಕೂಡ ಬಂದಿದೆ. ಈಗ ಜನ್ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಅವರು ಶೀಘ್ರದಲ್ಲೇ ಉಡ್ತಾ ಬಿಹಾರ್ ಎಂಬ ಸಿನಿಮಾ ಮಾಡಬೇಕಾದ ಸಂದರ್ಭ ಬಂದಿದೆ ಎಂದು ಹೇಳುತ್ತಿದ್ದಾರೆ.
ಹಾಗಿದ್ದರೆ ಭಾರತಕ್ಕೆ ಡ್ರಗ್ಸ್ ಹೇಗೆ ಮತ್ತು ಎಲ್ಲಿಂದ ಬರುತ್ತಿದೆ? ನಮ್ಮದೇ ದೇಶದ ಕೆಲ ಗುಡ್ಡಗಾಡು ಪ್ರದೇಶದಲ್ಲಿ ತಕ್ಕಮಟ್ಟಿಗೆ ಗಾಂಜಾ ಬೆಳೆಯುತ್ತಾರೆ. ಆದರೆ ಅಫೀಮು, ಕೊಕೇನ್ ಮತ್ತು ರಾಸಾಯನಿಕದಿಂದ ತಯಾರಿಸುವ ಡ್ರಗ್ಸ್ ಭಾರತಕ್ಕೆ ಬೇರೆ ದೇಶಗಳಿಂದಲೇ ಬರುತ್ತಿವೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅಫೀಮು ಬೆಳೆದು, ಸಂಸ್ಕರಣೆ ಮಾಡಲಾಗುತ್ತದೆ. ಪಾಕಿಸ್ತಾನದ ಸ್ಮಗ್ಲರ್‌ಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಆ ಮಾದಕ ದ್ರವ್ಯಗಳನ್ನು ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿವೆ. ಗಡಿ ಪ್ರದೇಶಗಳಲ್ಲಿ ಡ್ರಗ್ಸ್ ಕಳುಹಿಸಲು ಡ್ರೋನ್‌ಗಳನ್ನು ಬಳಸಲಾಗುತ್ತದೆ.
ರಾಜಸ್ಥಾನ ಮತ್ತು ಪಂಜಾಬ್‌ಗೆ ಪಾಕಿಸ್ತಾನದಿಂದ ಹಾರಿ ಬರುವ ಡ್ರೋನ್‌ಗಳು ಡ್ರಗ್ಸ್ ಪ್ಯಾಕೆಟ್ ಗಳನ್ನು ಎಸೆದು ಹೋಗುತ್ತವೆ. ನಮ್ಮ ಭದ್ರತಾ ಪಡೆಗಳು ಈ ಡ್ರೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸುತ್ತಿವೆ. ಆದರೂ ಅವರ ಕಣ್ಣುತಪ್ಪಿಸಿ ಒಂದಷ್ಟು ಡ್ರಗ್ಸ್ ಬಂದೇ ಬರುತ್ತವೆ.
ಪಾಕಿಸ್ತಾನದಲ್ಲಿರುವ ಡ್ರಗ್ಸ್ ದಂಧೆಕೋರರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೆನಡಾ ದಲ್ಲಂತೂ ಹ್ಯಾಂಡ್ಲರ್‌ಗಳು ಬಹಳ ಮಜಬೂತಾದ ಜಾಲವನ್ನು ಸೃಷ್ಟಿಸಿಕೊಂಡಿದ್ದಾರೆ. ಅಲ್ಲಿಂದ ಪಂಜಾಬ್‌ಗೆ ಅತ್ಯಂತ ವ್ಯವಸ್ಥಿತವಾಗಿ ಡ್ರಗ್ಸ್ ಕಳ್ಳಸಾಗಣೆ ನಡೆಯುತ್ತಿದೆ. ಭಾರತಕ್ಕೆ ಡ್ರಗ್ಸ್ ಬರುವ ಇನ್ನೊಂದು ಪ್ರಮುಖ ಮಾರ್ಗವೆಂದರೆ ನೇಪಾಳದ ಗಡಿ. ಅದನ್ನು ಚೀನಾದ ಡ್ರಗ್ಸ್ ಮಾಫಿಯಾ ದವರು ನಿಯಂತ್ರಿಸುತ್ತಿದ್ದಾರೆ.
ಮ್ಯಾನ್ಮಾರ್‌ನಲ್ಲೂ ಬಂಡುಕೋರ ಗುಂಪುಗಳು ಮಾದಕ ದ್ರವ್ಯ ಕಳ್ಳಸಾಗಣೆ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಕೊಂಡಿವೆ. ಗಡಿಯ ಆಚೆ ಮತ್ತು ಈಚೆ ಎರಡೂ ದೇಶಗಳಲ್ಲಿ ವಾಸಿಸುವ ಜನರು ಸಾಮಾನ್ಯವಾಗಿ ನೋಡಲು ಒಂದೇ ರೀತಿ ಇರುತ್ತಾರೆ. ಸ್ಮಗ್ಲರ್‌ಗಳು ಈ ಸಂಗತಿಯನ್ನೇ ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಅಂತಹ ಜನರನ್ನು ಗುರುತಿಸುವುದು ಪೊಲೀಸರಿಗೂ ಕಷ್ಟ. ಹೀಗಾಗಿ ಡ್ರಗ್ಸ್ ಕಳ್ಳಸಾಗಣೆಯನ್ನು ತಡೆಯಬೇಕು ಅಂದರೆ ಅದಕ್ಕೆ ಅತ್ಯಂತ ಸಮರ್ಥವಾದ ಗುಪ್ತಚರ ವ್ಯವಸ್ಥೆ ಬೇಕಾಗುತ್ತದೆ. ಗುಪ್ತಚರ ಮಾಹಿತಿ ಪಡೆದು, ಸದಾ ಎಚ್ಚರಿಕೆಯಿಂದ ಗಡಿ ಕಾಯುವ ಯೋಧರಿದ್ದರೆ ಹಾಗೂ ಡ್ರಗ್ಸ್ ದಂಧೆಯ ಬಗ್ಗೆ ಸರ್ಕಾರಗಳು ಕೂಡ ಶೂನ್ಯ ಸಹಿಷ್ಣುತೆಯ ನೀತಿಯನ್ನು ಬೆಳೆಸಿಕೊಂಡರೆ ಆಗ ಮಾತ್ರ ಇದನ್ನು ಮಟ್ಟಹಾಕಬಹುದು. ಇಲ್ಲದಿದ್ದರೆ ಈ ದಂಧೆ ನಿಯಂತ್ರಿಸುವುದು ಅಸಾಧ್ಯ.
ಕಹಿಯಾದ ಸತ್ಯ ಏನೆಂದರೆ, ಭಾರತ ಇನ್ನೂ ಗಡಿ ಪ್ರದೇಶಗಳಲ್ಲಿ ಡ್ರಗ್ಸ್ ಕಳ್ಳಸಾಗಣೆ ನಡೆಯದಂತೆ ತಡೆಯುವ ಪರಿಣಾಮಕಾರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ವ್ಯವಸ್ಥೆಯಲ್ಲೇ ಅನೇಕ ದೋಷಗಳಿವೆ. ಹೀಗಾಗಿ ಎಲ್ಲವನ್ನೂ ನಿಯಂತ್ರಿಸುವುದು ಕಷ್ಟ. ಸರ್ಕಾರದ ಅತ್ಯುನ್ನತ ಇಲಾಖೆಯ ಮುಖ್ಯಸ್ಥರಿಗೂ ಹೊಣೆಗಾರಿಕೆ ನಿಗದಿಪಡಿಸಿದರೆ ಏನಾದರೂ ಬದಲಾವಣೆ ಸಾಧ್ಯವಾ ದೀತು.
ನಾನು ಇಷ್ಟೆಲ್ಲಾ ಬರೆದ ಮೇಲೂ ಒಂದು ಪ್ರಮುಖವಾದ ಪ್ರಶ್ನೆ ಹಾಗೇ ಉಳಿಯುತ್ತದೆ: ನಮ್ಮ ಸಂಸತ್ ಸದಸ್ಯರು ಪಾರ್ಲಿಮೆಂಟ್‌ನಲ್ಲಿ ಇದರ ಬಗ್ಗೆ ಏನಾದರೂ ಚರ್ಚೆ ಮಾಡುತ್ತಾರಾ? ಡ್ರಗ್ಸ್ ಬಳಸಿ ಭಾರತವನ್ನು ನಿರ್ವೀರ್ಯಗೊಳಿಸಲು ಯತ್ನಿಸುತ್ತಿರುವ ವಿದೇಶಿ ಮಾಫಿಯಾವನ್ನು ಮಟ್ಟ ಹಾಕಲು ಏನಾದರೂ ಕ್ರಮ ಕೈಗೊಳ್ಳುತ್ತಾರಾ ?