Dr N Someshwara Column: ಜೀವಮಾನದ ಗುಟ್ಟುಗಳನ್ನು ರಟ್ಟು ಮಾಡುವ ಸತ್ಯಪ್ರೇರಕ ಮಿಶ್ರಣ
ಸ್ಕೊಪಾಲಮಿನ್ ಒಂದು ಶಕ್ತಿಶಾಲಿಯಾದ ಆಲ್ಕಲಾಯ್ಡ್. ಹೆನ್ಬೇನ್, ಬೆಲ್ಲಡೊನ್ನ, ದತ್ತೂರಿ ಮುಂತಾದ ಗಿಡಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಮಾನವನ ಇತಿಹಾಸದಲ್ಲಿ, ಅವನೊಡನೆ ಜತೆಜತೆಯಾಗಿ ಹೆಜ್ಜೆಯನ್ನು ಹಾಕಿರುವ ಸ್ಕೊಪಾಲಮಿನ್ ನಾಟಿ ವೈದ್ಯರಿಗೆ, ಕಳ್ಳಕಾಕರಿಗೆ, ಮಂತ್ರವಾದಿಗಳಿಗೆ ಹಾಗೂ ಆಧುನಿಕ ವೈದ್ಯರಿಗೆ ತನ್ನ ದಶಾವತಾರಗಳನ್ನು ತೋರುತ್ತಾ ಬಂದಿದೆ.


ಹಿಂದಿರುಗಿ ನೋಡಿದಾಗ
ಸೋಲನೇಸಿ ಎಂಬ ಸಸ್ಯ ಕುಟುಂಬದ ಜನಪ್ರಿಯ ಸದಸ್ಯರೆಂದರೆ ನಮ್ಮ ಬದನೆಕಾಯಿ, ಆಲೂಗಡ್ಡೆ, ಟೊಮೇಟೊ, ದಪ್ಪ ಮೆಣಸಿನಕಾಯಿ, ತಂಬಾಕು, ದತ್ತೂರಿ ಹಾಗೂ ಅಶ್ವಗಂಧ. ಇವೆಲ್ಲವೂ ಜನಸಾಮಾನ್ಯರಿಗೆ ಪರಿಚಿತವಾದ ಸಸ್ಯಗಳು. ಬ್ರುಗ್ಮಾನ್ಷಿಯ, ಬೆಲ್ಲಡೊನ್ನ, ಹೆನ್ಬೇನ್, ಮಾಂಡ್ರೇಕ್, ಪೆಟೂನಿಯ ಮುಂತಾದವು ಅಷ್ಟು ಪರಿಚಿತವಲ್ಲ. ಆದರೆ ವೈದ್ಯಕೀಯದ ಪ್ರಾಥಮಿಕ ಅರಿವನ್ನು ಪಡೆದವರಿಗೆ ಈ ಸಸ್ಯಗಳ ಪರಿಚಯವಿರುತ್ತದೆ. ಈ ಸಸ್ಯಗಳಲ್ಲಿ ಪ್ರಧಾನವಾಗಿ ಟ್ರೋಪೇನ್ ಆಲ್ಕಲಾಯ್ಡುಗಳಿರುತ್ತವೆ.
ಅವುಗಳಲ್ಲಿ ಅಟ್ರೋಪಿನ್, ಹೊಯಾಸಮಿನ್, ಸ್ಕೊಪಾಲಮಿನ್ ಮುಖ್ಯವಾದವು. ನಮ್ಮ ನರಮಂಡಲದ ಕೆಲಸ ಕಾರ್ಯಗಳಿಗೆ ಅಗತ್ಯವಾದ ‘ಅಸಿಟೈಲ್ ಕೋಲಿನ್’ ಎಂಬ ನರವಾಹಕವನ್ನು ಪ್ರತಿಬಂಧಿಸಬಲ್ಲಂಥವು. ಹಾಗಾಗಿ ಈ ಸಸ್ಯಗಳಲ್ಲಿರುವ ಆಯ್ದ ರಾಸಾಯನಿಕ ಘಟಕಗಳನ್ನು ರಾಸಾಯನಿಕ ಯುದ್ಧಗಳಲ್ಲಿ ಬಳಸುವುದುಂಟು.
ಹಾಗೆಯೇ ಇವು ವಿಷ ಪದಾರ್ಥಗಳಾಗಿಯೂ ಕುಪ್ರಸಿದ್ಧ. ವಿಷ ಪದಾರ್ಥಗಳು ಎಂದರೆ ಏನು? ನಾಗರಹಾವಿನ ವಿಷವು ಜೀವವನ್ನು ತೆಗೆಯುತ್ತದೆ. ಅದೇ ವಿಷವನ್ನು ಮಿತ ಪ್ರಮಾಣದಲ್ಲಿ ನೀಡಿದರೆ ಹೃದಯದ ಮಕುಟ ಧಮನಿಯಲ್ಲಿ ಅಡಚಿಕೊಂಡಿರುವ ರಕ್ತದ ಹೆಪ್ಪನ್ನು ಕರಗಿಸುತ್ತದೆ. ಜೀವವನ್ನು ಉಳಿಸುತ್ತದೆ. ಹಾಗಾಗಿ ಒಂದು ರಾಸಾಯನಿಕದ ಪ್ರಮಾಣವು ಅದು ವಿಷವೋ ಇಲ್ಲ ಔಷಧವೋ ಎನ್ನುವುದನ್ನು ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಹಲವು ಟ್ರೋಪೇನ್ ಆಲ್ಕಲಾಯ್ಡು ಗಳು ವಿಷವಾಗಿಯೂ ಕೆಲಸ ಮಾಡುವುದರ ಜತೆಯಲ್ಲಿ ಉಪಯುಕ್ತ ಔಷಧಗಳಾಗಿಯೂ ಪ್ರಖ್ಯಾತ ವಾಗಿವೆ.
ಇದನ್ನೂ ಓದಿ: Dr N Someshwara Column: ಬದುಕಿರುವವರನ್ನು ಝೂಂಬಿಗಳನ್ನಾಗಿಸುವ ಡೆವಿಲ್ಸ್ ಬ್ರೆತ್ !
ಜತೆಗೆ ಅನಾದಿ ಕಾಲದಿಂದಲೂ ನಾಟಿ ವೈದ್ಯದಲ್ಲೂ, ಧಾರ್ಮಿಕ ವಿಧಿ ವಿಧಾನಗಳಲ್ಲೂ, ಮಾಟ ಮಂತ್ರಗಳಲ್ಲಿಯೂ ಬಳಕೆಯಲ್ಲಿವೆ. ಅಂಥ ರಾಸಾಯನಿಕಗಳಲ್ಲಿ ಸ್ಕೊಪಾಲಮಿನ್ ಮುಖ್ಯ ವಾದದ್ದು. ಸ್ಕೊಪಾಲಮಿನ್ ಒಂದು ಶಕ್ತಿಶಾಲಿಯಾದ ಆಲ್ಕಲಾಯ್ಡ್. ಹೆನ್ಬೇನ್, ಬೆಲ್ಲಡೊನ್ನ, ದತ್ತೂರಿ ಮುಂತಾದ ಗಿಡಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ.
ಮಾನವನ ಇತಿಹಾಸದಲ್ಲಿ, ಅವನೊಡನೆ ಜತೆಜತೆಯಾಗಿ ಹೆಜ್ಜೆಯನ್ನು ಹಾಕಿರುವ ಸ್ಕೊಪಾಲಮಿನ್ ನಾಟಿ ವೈದ್ಯರಿಗೆ, ಕಳ್ಳಕಾಕರಿಗೆ, ಮಂತ್ರವಾದಿಗಳಿಗೆ ಹಾಗೂ ಆಧುನಿಕ ವೈದ್ಯರಿಗೆ ತನ್ನ ದಶಾವತಾರ ಗಳನ್ನು ತೋರುತ್ತಾ ಬಂದಿದೆ. ಇಂದಿಗೂ ತನ್ನ ಸು/ಕುಖ್ಯಾತಿಯನ್ನು ಉಳಿಸಿಕೊಂಡಿದೆ. ಅದರ ದಶಾವತಾರಗಳಲ್ಲಿ ಕೆಲವು ಅವತಾರಗಳ ಪರಿಚಯವನ್ನು ಮಾಡಿಕೊಳ್ಳೋಣ.
ಮಾಟಗಾತಿಯರ ಲೇಪನ: ಹ್ಯಾರಿ ಪಾಟರ್ ಕಾದಂಬರಿಗಳನ್ನು ಅಥವಾ ಚಲನಚಿತ್ರಗಳನ್ನು ನೋಡಿದವರಿಗೆ ಮಾಟಗಾತಿಯರ ಪರಿಚಯವಿರುತ್ತದೆ. ಯುರೋಪಿಯನ್ ದೇಶದ ಮಾಟಗಾತಿ ಯರು ಉದ್ದ ಕೋಲಿನ ಪೊರಕೆಯ ಮೇಲೆ ಕುಳಿತುಕೊಂಡು ಗಾಳಿಯಲ್ಲಿ ಹಾರುವುದು ಸಾಮಾನ್ಯ. ಮಕ್ಕಳಂತೂ ಹ್ಯಾರಿ ಪಾಟರ್ ಪೊರಕೆಯ ಮೇಲೆ ಕುಳಿತು ಹಾರುವ ರಮ್ಯಲೋಕವನ್ನು, ವಾಸ್ತವ ಎಂದು ಭಾವಿಸಿ ತಾವೂ ಹಾಗೆಯೇ ಹಾರುವಂತಾದರೆ ಎಂದು ಕಲ್ಪಿಸಿಕೊಂಡರೆ ಅದರಲ್ಲಿ ಏನೂ ಆಶ್ಚರ್ಯವಿಲ್ಲ.
ಮಕ್ಕಳು ಮಾತ್ರವಲ್ಲ, ಒಂದು ಕಾಲದ ಯುರೋಪಿನ ಜನಸಾಮಾನ್ಯರೂ ಹೀಗೆ ಪೊರಕೆಯ ಮೇಲೆ ಕುಳಿತು ಗಾಳಿಯಲ್ಲಿ ಹಾರುವುದು ಸಾಧ್ಯ ಎಂದೇ ನಂಬಿದ್ದರು. ಹೀಗೆ ನಂಬಿದರು ಹಾಗೂ ನಂಬಿಸಿದರು ಮಧ್ಯಯುಗದ ಮಾಟಗಾತಿಯರು.
ಮಾಟಗಾತಿಯರಿಗೆ ರಾತ್ರಿಯಲ್ಲಿ ಮಾತ್ರ ಶಕ್ತಿ ಬರುತ್ತದೆಯಂತೆ. ಕೋಲುಪೊರಕೆಯ ಮೇಲೆ ಕುಳಿತು ದೂರ ದೂರದ ಊರುಗಳಿಗೆ ಹೋಗುತ್ತಾರಂತೆ. ಮಾಟಗಾತಿಯರ ಸಮ್ಮೇಳನದಲ್ಲಿ ಭಾಗ ವಹಿಸುತ್ತಾರಂತೆ. ಅವರ ವಿಧಿ ವಿಧಾನಗಳು ವಿಚಿತ್ರ. ಅವರು ರಾತ್ರಿಯ ಹೊತ್ತು ತಮ್ಮ ಉಡುಪನ್ನು ಕಳಚಿ ನಗ್ನವಾಗುತ್ತಿದ್ದರು.
ಒಂದು ವಿಶೇಷವಾದ ‘ಮಾಟಗಾತಿಯರ ಹಾರುವ ಲೇಪನ’ವನ್ನು ಮೈಗೆ ಲೇಪಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ಯೋನಿ ಪ್ರದೇಶದಲ್ಲಿ ಧಾರಾಳವಾಗಿ ಹಚ್ಚಿಕೊಳ್ಳುತ್ತಿದ್ದರು. ಅವರು ಇದನ್ನು ‘ವಿಚೆಸ್ ಫ್ಲೈಯಿಂಗ್ ಆಯಂಟ್ಮೆಂಟ್, ಗ್ರೀನ್ ಆಯಿಂಟ್ಮೆಂಟ್, ಮ್ಯಾಜಿಕ್ ಸ್ಯಾಲ್ವ್, ಲೈಕ್ಯಾಂಥ್ರೋಪಿಕ್ ಆಯಿಂಟ್ಮೆಂಟ್’ ಎಂದೆಲ್ಲ ಕರೆಯುತ್ತಿದ್ದರು. ನಂತರ ಕೋಲು ಪೊರಕೆಯನ್ನು ತಮ್ಮ ತೊಡೆಗಳ ನಡುವೆ ಸಿಕ್ಕಿಸಿಕೊಂಡು ಹಾರುವ ಪ್ರಯತ್ನವನ್ನು ಮಾಡುತ್ತಿದ್ದರು.
ಆದರೆ ಅವರು ಖಂಡಿತ ಹಾರುತ್ತಿರಲಿಲ್ಲ. ಆದರೆ ಹಾರುವ ಲೇಪನದಲ್ಲಿದ್ದ ರಾಸಾಯನಿಕಗಳು, ಅವರಲ್ಲಿ ಹಾರುವ ಭ್ರಮೆಯನ್ನು ಉಂಟುಮಾಡುತ್ತಿದ್ದವು. ಅವರು ಪ್ರಜ್ಞೆಯನ್ನು ಕಳೆದುಕೊಳ್ಳು ತ್ತಿದ್ದರು. ಗಾಳಿಯಲ್ಲಿ ಹಾರುವ ಹಾಗೆ, ದೂರದ ಊರುಗಳಿಗೆ ಹೋಗುವ ಹಾಗೆ, ಶೈತಾನನೊಡನೆ ಸಂಭೋಗ ನಡೆಸಿದ ಹಾಗೆ... ನಾನಾ ರೀತಿಯ ಭ್ರಮೆಗಳಿಗೆ ತುತ್ತಾಗುತ್ತಿದ್ದರು. ಇಡೀ ರಾತ್ರಿಯನ್ನು ಭ್ರಮಾಲೋಕದಲ್ಲಿ ಕಳೆದು ಬೆಳಗ್ಗೆ ಎದ್ದಾಗ ಅವರಿಗೆ ಪ್ರeಯಿರುತ್ತಿರಲಿಲ್ಲ.
ಎಚ್ಚರವಾದ ಕೂಡಲೆ ಹಿಂದಿನ ರಾತ್ರಿ ನಡೆದ ಬಹಳಷ್ಟು ವಿಚಾರಗಳು ನೆನಪಿನಲ್ಲಿ ಇರುತ್ತಿರಲಿಲ್ಲ. ಆದರೆ ಭ್ರಮೆಯಲ್ಲಿ ಹಾರಿದ್ದು ನೆನಪಿನಲ್ಲಿ ಇರುತ್ತದೆ. ಹಾರುವ ಲೇಪನದಲ್ಲಿ ಅಫೀಮು ರಸ (ಪೆಪಾವರಮ್ ಸಾಮ್ನಿಫೆರಂ), ಅಟ್ರೋಪ ಬೆಲ್ಲಡೋನ, ಹೆನ್ಬೇನ್ (ಹೊಯಾಸಿಮಸ್ ನೈಗರ್), ಮಾಂಡ್ರೇಕ್ (ಮ್ಯಾಂಡ್ರಗೋರ ಅಫಿಶಿನೇರಮ್), ದತೂರ (ದತ್ತೂರ ಆಲ್ಬ) ವತ್ಸನಾಭಿ (ಅಕೋನಿ ಟಮ್ ಫೆರಾಕ್ಸ್) ಮುಂತಾದ ಮೂಲಿಕೆಗಳ ಸಾರ ಇದ್ದಿರಬಹುದು ಎನ್ನಲಾಗಿದೆ.
ಇವುಗಳಲ್ಲಿ ಪ್ರಧಾನವಾಗಿ ಸ್ಕೊಪಾಲಮಿನ್ ಹಾಗೂ ಅದರ ಸೋದರ ಸದಸ್ಯರಾದ ಹೊಯಾ ಸಮಿನ್ ಮತ್ತು ಅಟ್ರೋಪಿನ್ ಪ್ರಧಾನವಾಗಿದ್ದು, ಮಾಟಗಾತಿಯರ ಎಲ್ಲ ಭ್ರಮೆಗಳಿಗೆ ಕಾರಣ ವಾಗಿರುತ್ತವೆ.
ವಿಶ್ಲೇಷಣೆ: ಜರ್ಮನಿಯ ರಸಾಯನ ಶಾಸ್ತ್ರಜ್ಞ ಆಲ್ಬರ್ಟ್ ಲೇಡೆನ್ಬರ್ಗ್ (1842-1911) 1881ರಲ್ಲಿ ಸ್ಕೊಪಾಲಮಿನ್ ನನ್ನು ಬದನೆ ಕುಟುಂಬದಿಂದ ಪ್ರತ್ಯೇಕಿಸಿದ. ಇದರ ಬಗ್ಗೆ ಅಧ್ಯಯನಗಳನ್ನು ನಡೆಸಿದ. ಇದು ಅಸಿಟೈಲ್ ಕೋಲಿನ್ ನರ-ರಾಸಾಯನಿಕವನ್ನು ಸ್ಥಗಿತಗೊಳಿಸುವುದನ್ನು ನೋಡಿದ. ಸ್ಕೊಪಾಲಮಿನ್ ದೇಹದಲ್ಲಿ ಉತ್ಪಾದನೆಯಾಗುವ ಜೊಲ್ಲನ್ನು ನಿಯಂತ್ರಿಸಿ ಬಾಯಿಯನ್ನು ಒಣಗಿಸಿತು. ನಾನಾ ರೀತಿಯ ಭ್ರಮೆಗಳನ್ನು ಸೃಜಿಸಿ ಮಾನಸಿಕ ಗೊಂದಲವನ್ನು ಉಂಟು ಮಾಡಿತು.
ನಂತರ ಯಾವುದೂ ನೆನಪಿನಲ್ಲಿ ಉಳಿಯದಂತೆ ಮರೆಯಾಗಿಸಿತು. ಸ್ಕೊಪಾಲಮಿನ್ನಿನ ಹಲವು ಗುಣಲಕ್ಷಣಗಳು ಒಂದೊಂದಾಗಿ ಹೊರಬಂದವು. ಆಗ ವೈದ್ಯರು ಸ್ಕೊಪಾಲಮಿನ್ನನ್ನು ಔಷಧವನ್ನಾಗಿ ಉಪಯೋಗಿಸುವ ಸಾಧ್ಯಾಸಾಧ್ಯತೆಯನ್ನು ಅಧ್ಯಯನ ಮಾಡಿದರು.
? ಅರಿವಳಿಕೆಯನ್ನು ನೀಡಿ, ಶಸ್ತ್ರಚಿಕಿತ್ಸೆಯನ್ನು ಮಾಡಿ, ಅರಿವಳಿಕೆಯ ಪ್ರಭಾವದಿಂದ ಹೊರ ಬರುವಾಗ ಅನೇಕರಿಗೆ ವಾಕರಿಕೆ ಮತ್ತು ವಾಂತಿಯಾಗುತ್ತದೆ. ಸ್ಕೊಪಾಲಮಿನ್ ಅದನ್ನು ನಿಗ್ರಹಿಸು ತ್ತದೆ.
? ಕೆಲವರಿಗೆ ಬಸ್ಸು, ರೈಲು, ಕಾರಿನಲ್ಲಿ ಪ್ರಯಾಣ ಮಾಡುವಾಗ ತಲೆಸುತ್ತು, ವಾಕರಿಕೆ, ವಾಂತಿ ಯಾಗುತ್ತದೆ. ಇದನ್ನು ‘ಚಲನಾಬೇನೆ’ ಅಥವಾ ‘ಮೋಶನ್ ಸಿಕ್ನೆಸ್’ ಎನ್ನುತ್ತಾರೆ. ಇಂಥವರು ಪ್ರಯಾಣದ ಮೊದಲೇ ಸ್ಕೊಪಾಲಮಿನ್ನನ್ನು ಸೇವಿಸಿದರೆ ಅವರ ಚಲನಾಬೇನೆ ನಿಯಂತ್ರಣಕ್ಕೆ ಬರುತ್ತದೆ.
? ಜಠರ, ಕರುಳು, ಮೂತ್ರಪಿಂಡ, ಪಿತ್ತಕೋಶದ ಸೆಡೆತ ಅಥವಾ ಸ್ಪಾಸಮ್ಮನ್ನು ಕಡಿಮೆ ಮಾಡುತ್ತದೆ.
? ಪದೇ ಪದೆ ಮಲವಿಸರ್ಜನೆಯಾಗುವ ‘ಕರುಳು ಕೆರಳಿಕೆಯ ಲಕ್ಷಣಾವಳಿ’ ಅಥವಾ ‘ಇರಿಟಬಲ್ ಬಾವೆಲ್ ಸಿಂಡ್ರೋಮ್’ ನಿಗ್ರಹದಲ್ಲಿ ಉಪಯುಕ್ತವಾಗುತ್ತದೆ.
ಹೀಗೆ ಸ್ಕೊಪಾಲಮಿನ್ನನ್ನು ಹಿತ-ಮಿತ ಪ್ರಮಾಣದಲ್ಲಿ ಬಳಸಿ ನಾನಾ ಸಮಸ್ಯೆಗಳನ್ನು ನಿಯಂತ್ರಿಸ ಬಹುದು ಎನ್ನುವ ವಿಚಾರವು ಬೆಳಕಿಗೆ ಬಂದಿತು. ಹಾಗಾಗಿ ಸ್ಕೊಪಾಲಮಿನ್ ಇಂದಿಗೂ ಬಳಕೆ ಯಲ್ಲಿವೆ.
ಮುಸ್ಸಂಜೆಯ ನಿದ್ರೆ: ಸ್ಕೊಪಾಲಮಿನ್ನಿನ ಇತಿಹಾಸದಲ್ಲಿ ಒಂದು ಪ್ರಮುಖ, ಗಣನೀಯ ಹಾಗೂ ಅತ್ಯಂತ ಪ್ರಭಾವಶಾಲಿ ಉಪಯೋಗವೊಂದನ್ನು ಜರ್ಮನ್ನರು ಕಂಡುಕೊಂಡರು. 1903. ‘ಹೆರಿಗೆ ಎನ್ನುವುದು ಹೆಣ್ಣಿಗೆ ಪುನರ್ಜನ್ಮವನ್ನು ನೀಡಿದಂತೆ’ ಎನ್ನುವ ಮಾತಿದೆ. ಹೆರಿಗೆಯ ನೋವು ಊಹಿಸಲಸದಳ. ಹಾಗಾಗಿ ಜರ್ಮನಿಯ ಫ್ರೀಬರ್ಗ್ ನಗರದ ವೈದ್ಯರು ಮಾರ್ಫಿನ್ ಮತ್ತು ಸ್ಕೊಪಾಲಮಿನ್ ಔಷಧಗಳನ್ನು ಬೆರೆಸಿ ಹೆರಿಗೆಯ ನೋವನ್ನು ಶಮನ ಮಾಡಲು ಪ್ರಯತ್ನಿಸಿದರು.
ಈ ಔಷಧ ಮಿಶ್ರಣವು, ಅರಿವಳಿಕೆಯಂತೆ ಪ್ರಜ್ಞೆಯನ್ನು ಪೂರ್ಣ ಕಳೆಯುತ್ತಿರಲಿಲ್ಲ. ತಾಯಂದಿರು ಎಚ್ಚರವಾಗಿರುತ್ತಿದ್ದರು. ಆದರೆ ನೋವಿನ ಅನುಭವ ಮಾತ್ರ ಆಗುತ್ತಿರಲಿಲ್ಲ. ಹೆರಿಗೆಯಾದ ಮೇಲೆ, ಹೆರಿಗೆ ನೋವನ್ನು ಅನುಭವಿಸಿದ ನೆನಪೇ ಉಳಿಯುತ್ತಿರಲಿಲ್ಲ. ಹಾಗಾಗಿ ವೈದ್ಯರು, ಈ ಅವಸ್ಥೆ ಯನ್ನು ‘ಹಗಲೂ ಅಲ್ಲದ, ರಾತ್ರಿಯೂ ಅಲ್ಲದ ಮುಸ್ಸಂಜೆಗೆ’ ಹೋಲಿಸಿದರು.
ಪೂರ್ಣ ಪ್ರಜ್ಞೆಯು ಇರುತ್ತಿರಲಿಲ್ಲ ಹಾಗೆಯೇ ಪೂರ್ಣ ಪ್ರಜ್ಞಾಹೀನತೆಯು ಇರುತ್ತಿರಲಿಲ್ಲ. ಇವೆರಡರ ನಡುವಿನ ಸ್ಥಿತಿಯಲ್ಲಿ ಇರುತ್ತಿದ್ದರು. ಹಾಗಾಗಿ ಇದನ್ನು ‘ಮುಸ್ಸಂಜೆಯ ನಿದ್ರೆ’ ಅಂದರೆ ‘ಟ್ವಿಲೈಟ್ ಸ್ಲೀಪ್’ ಎಂದು ಕರೆದರು. ಈ ಮಿಶ್ರಣವನ್ನು ಯುರೋಪಿನ ಶ್ರೀಮಂತ ಮಹಿಳೆಯರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. 1910ರಿಂದ 1920ರ ಅವಧಿ. ಅಮೆರಿಕನ್ ಮಹಿಳೆಯರು ಈ ನೋವುರಹಿತ ಹೆರಿಗೆಯನ್ನು ಮುಕ್ತವಾಗಿ ಸ್ವಾಗತಿಸಿದರು. ಆದರೆ ಈ ಮಿಶ್ರಣವನ್ನು ಸ್ವೀಕರಿಸಿದ ಕೆಲವು ಮಹಿಳೆಯರಲ್ಲಿ ಅನಿರೀಕ್ಷಿತ ಲಕ್ಷಣಗಳು ಕಂಡುಬಂದವು.
ಅವರನ್ನು ಭಯಾನಕ ಭ್ರಮೆಗಳು ಕಾಡಿದವು. ಹಠಾತ್ ಆಕ್ರಮಣಶೀಲತೆ ಕಂಡುಬಂದು ಎಲ್ಲರ ಮೇಲೆ ಏರಿ ಹೋಗುವುದರ ಜತೆಯಲ್ಲಿ ಕೆಟ್ಟದಾಗಿ ಬೈಯಲಾರಂಭಿಸಿದರು. ಆ ಮಹಿಳೆಯರನ್ನು ಹಿಡಿದಿಡುವುದೇ ಒಂದು ದೊಡ್ಡ ಸಾಹಸವಾಯಿತು. ಅನೇಕ ಮಹಿಳೆಯರು ತಾವು ಮಗುವಿಗೆ ಜನ್ಮ ನೀಡಿದ್ದನ್ನೇ ಮರೆಯುತ್ತಿದ್ದರು. ಇವುಗಳಲ್ಲಿ ಅತ್ಯಂತ ಆತಂಕವನ್ನು ಉಂಟುಮಾಡಿದ ಲಕ್ಷಣ ವೆಂದರೆ, ಮಹಿಳೆಯರು ತಮ್ಮ ಜೀವಮಾನದ ಮುಚ್ಚಿಟ್ಟ ಗುಟ್ಟುಗಳನ್ನೆಲ್ಲ ರಟ್ಟು ಮಾಡಿ, ಸತ್ಯವನ್ನು ನುಡಿಯಲಾರಂಭಿಸಿದರು.
ಸತ್ಯಪ್ರೇರಕ: ಅಮೆರಿಕದ ಡಾ.ರಾಬರ್ಟ್ ಹೌಸ್ ಎಂಬ ಸ್ತ್ರೀರೋಗ ತಜ್ಞನು, ಮಿಶ್ರಣದ ಪ್ರಭಾವ ದಲ್ಲಿ ಹೆಣ್ಣುಮಕ್ಕಳು ಎಲ್ಲ ರೀತಿಯ ಪ್ರಶ್ನೆಗಳಿಗೆ ಸ್ವಲ್ಪವೂ ಹಿಂಜರಿಯದೆ ಪ್ರಾಮಾಣಿಕ ಉತ್ತರ ವನ್ನು ನೀಡುವುದನ್ನು ಗಮನಿಸಿದ. ಹಾಗಾಗಿ ಕಳ್ಳ ಕಾಕರಿಂದ ಸತ್ಯವನ್ನು ಹೊರ ಹೊಮ್ಮಿಸಲು ಈ ಮಿಶ್ರಣವನ್ನು ಬಳಸಬಹುದೇ ಎಂದು ಯೋಚಿಸಿದ. ಅವರ ಈ ಯೋಚನೆಯು ಅಮೆರಿಕದ ಮಿಲಿಟರಿ ಅಧಿಕಾರಿಗಳನ್ನು ಆಕರ್ಷಿಸಿತು. ಕೂಡಲೇ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ‘ಪ್ರಾಜೆಕ್ಟ್ ಎಂಕೆ ಅಲ್ಟ್ರಾ’ ಎಂಬ ಯೋಜನೆಯನ್ನು ಗುಟ್ಟಿನಲ್ಲಿ ಆರಂಭಿಸಿತು. ಅಂದಿನ ಅಮೆರಿಕ ದಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ ಹೆಚ್ಚಿತ್ತು.
ಶೀತಲ ಸಮರದ ದಿನಗಳು. ಹಾಗಾಗಿ ಗುಮಾನಿಗೆ ಒಳಗಾದ ವ್ಯಕ್ತಿಗೆ ಈ ಸತ್ಯಪ್ರೇರಕ ಔಷಧವನ್ನು (ಟ್ರೂತ್ ಸೀರಮ್) ನೀಡಿ ಅವನ ಗುಟ್ಟುಗಳನ್ನೆಲ್ಲ ರಟ್ಟು ಮಾಡುವ ನಾನಾ ರೀತಿಯ ಚಿತ್ರವಿಚಿತ್ರ ಪ್ರಯೋಗಗಳು ಆರಂಭವಾದವು.
ಆಪರೇಷನ್ ಎಂಕೆ ಅಲ್ಟ್ರಾ ಯೋಜನೆಯನ್ನು 1953ರಲ್ಲಿ ಸಿಐಎ ಅಧಿಕೃತವಾಗಿ ಆರಂಭಿಸಿತು. ಸತ್ಯಪ್ರೇರಕ ಮಿಶ್ರಣದ ಮೂಲಕ ಮನಸ್ಸಿನ ನಿಯಂತ್ರಣ, ನಡವಳಿಕೆಯ ಮಾರ್ಪಾಡು, ಗುಟ್ಟನ್ನು ಹೊರಗೆಡಹುವ ವಿಚಾರಣಾ ತಂತ್ರಗಳು ಹಾಗೂ ಮಿದುಳಿನ ರಾಸಾಯನಿಕ ಸಹಜ ವ್ಯಾಪಾರವನ್ನೇ ಅಲ್ಲೋಲಕಲ್ಲೋಲ ಮಾಡಿ ತಮಗೆ ಬೇಕಾದ ಹಾಗೆ ‘ಬ್ರೇನ್ ವಾಶ್’ ಮಾಡುವ ಮಾರ್ಗಗಳನ್ನು ಅನ್ವೇಷಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.
ಡಾ.ಸಿಡ್ನಿ ಗಾಟ್ಲೀಬ್ (1918-1999) ಎಂಬ ಸಿಐಎ ರಸಾಯನ ತಜ್ಞನು ಈ ಯೋಜನೆಯ ನೇತೃತ್ವ ವನ್ನು ವಹಿಸಿದ. ಆಪರೇಶನ್ ಎಂಕೆ ಅಲ್ಟ್ರಾ ನಿರೀಕ್ಷಿತ ಫಲಿತಾಂಶವನ್ನು ಕೊಡಲು ವಿಫಲ ವಾಯಿತು. ಹಾಗಾಗಿ ಇದನ್ನು 1973ರಲ್ಲಿ ನಿಲ್ಲಿಸಿದರು. 1977ರಲ್ಲಿ ‘ಫ್ರೀಡಮ್ ಆಫ್ ಇನ್ ಫಾರ್ಮೇ ಶನ್ ಆಕ್ಟ್’ ಕಾರಣ, ಸರಕಾರವು 20000 ಪುಟಗಳ ದಾಖಲೆಯನ್ನು ಬಿಡುಗಡೆ ಮಾಡಿತು.
ಈ ಯೋಜನೆಯಲ್ಲಿ ಸ್ಕೊಪಾಲಮಿನ್ ಮತ್ತು ಮಾರ್ಫಿನ್ ಮಿಶ್ರಣವನ್ನು ಮಾತ್ರ ಬಳಸಲಿಲ್ಲ. ನಾವು ಊಹಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ವಿವಿಧ ಔಷಧಗಳ ಮಿಶ್ರಣಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಿದರು. ಆದರೆ ಅವು ಯಾವುವೂ ನಂಬಿಕೆಗೆ ಅರ್ಹವಾಗುವ ರೀತಿಯಲ್ಲಿ ಫಲಿತಾಂಶವನ್ನು ನೀಡಲಿಲ್ಲ.
ಅವುಗಳ ವಿವರವೇ ರೋಚಕ ಹಾಗೂ ಭಯಾನಕ ಕಥೆಗಳಾಗುತ್ತವೆ. ಇವೆಲ್ಲವೂ ಅಮೆರಿಕನ್ ಮಿಲಿಟರಿಯ ಕರಾಳ ಅಧ್ಯಾಯಗಳು. ಅಮೆರಿಕದ ಸ್ತ್ರೀ ರೋಗ ತಜ್ಞರು ಸಹ, ಹೆರಿಗೆ ನೋವನ್ನು ಶಮನ ಮಾಡಲು ಮುಸ್ಸಂಜೆಯ ನಿದ್ರೆಯ ಮಿಶ್ರಣ ಪ್ರಯೋಗವನ್ನು ಶಾಶ್ವತವಾಗಿ ನಿಲ್ಲಿಸಿದರು.
ಬಾಹ್ಯಾಕಾಶ: ನಾವು ಓಡುವ, ನಡೆಯುವ, ಕುಣಿಯುವ, ಕುಪ್ಪಳಿಸುವ ಕೆಲಸಗಳು ಸರಾಗವಾಗಿ ನಡೆಯಲು ನಮ್ಮ ಕಣ್ಣುಗಳು ಹಾಗೂ ಕಿವಿಯ ಮೂರನೆಯ ಭಾಗದಲ್ಲಿರುವ ಸಮತೋಲ ನಾಂಗವು ಸಾಮರಸ್ಯದಿಂದ ಕೆಲಸವನ್ನು ಮಾಡುತ್ತವೆ. ಈ ಚಟುವಟಿಕೆಗಳು ನಡೆಯಲು ದೇಹವು ಸಮತೋಲನದಲ್ಲಿರಬೇಕಾಗುತ್ತದೆ. ವಾಹನದಲ್ಲಿ ಚಲಿಸುವಾಗ, ನಮ್ಮ ಇಡೀ ದೇಹವು ಗಾಳಿಯಲ್ಲಿ ತೇಲಿಹೋದಂಥ ಅನುಭವವಾಗುತ್ತದೆ. ಆಗ ‘ದೇಹವು ಕೆಳಕ್ಕೆ ಬೀಳುತ್ತಿದೆ’ ಎಂದು ನಮ್ಮ ಸಮತೋ ಲನಾಂಗವು ಭಾವಿಸುತ್ತದೆ.
ಬಿದ್ದರೆ ಗಾಯವಾಗಬಹುದು ಅಥವಾ ಜೀವವೇ ಹೋಗಬಹುದು ಎನ್ನುವ ಹಿನ್ನೆಲೆಯಲ್ಲಿ ಮಿದುಳಿಗೆ ಅಪಾಯದ ಕರೆಗಂಟೆಯನ್ನು ತೀವ್ರ ಸ್ವರೂಪದಲ್ಲಿ ನೀಡುತ್ತದೆ. ವ್ಯಕ್ತಿಯು ವಿಶ್ರಾಂತಿ ಯನ್ನು ತೆಗೆದುಕೊಳ್ಳಲೇಬೇಕು ಎಂದು ಮಿದುಳು ಆಗ್ರಹಿಸುತ್ತದೆ.
ಆದರೆ ವ್ಯಕ್ತಿಯು ವಾಹನದಲ್ಲಿ ಚಲಿಸುತ್ತಲೇ ಇರುವ ಕಾರಣ, ಆತನು ಬಲವಂತವಾಗಿ ವಿಶ್ರಾಂತಿ ಯನ್ನು ತೆಗೆದುಕೊಳ್ಳುವಂತೆ ವಾಕರಿಕೆ, ವಾಂತಿ, ತಲೆನೋವು, ತಲೆಸುತ್ತು ಮುಂತಾದ ರೋಗಲಕ್ಷಣ ಗಳನ್ನು ಉಂಟುಮಾಡುತ್ತದೆ. ಬಾಹ್ಯಾಕಾಶದ ಶೂನ್ಯ ಗುರುತ್ವದಲ್ಲಿ (ನಿಖರವಾಗಿ ಸೂಕ್ಷ್ಮಗುರುತ್ವ ಅಥವಾ ಮೈಕ್ರೋ ಗ್ರಾವಿಟಿ) ಕೆಲಸ ಮಾಡಬೇಕಾದ ಶೇ.60-80 ಗಗನಯಾತ್ರಿಗಳು ತೀವ್ರ ಸ್ವರೂಪದ ಚಲನಾಬೇನೆಗೆ ತುತ್ತಾಗುತ್ತಾರೆ.
ಇವರು ಶೂನ್ಯ ಗುರುತ್ವದಲ್ಲಿ ತೇಲುವ ದೃಶ್ಯವನ್ನು ನಾವು ಚಲನಚಿತ್ರಗಳಲ್ಲಿ ನೋಡಿದ್ದೇವೆ. ವಾಸ್ತವದಲ್ಲಿ ಗಗನಯಾತ್ರಿಗಳೇನೂ ಕೆಳಕ್ಕೆ ಬೀಳುತ್ತಿಲ್ಲ. ಆದರೆ ಅವರ ಮಿದುಳು ಹಾಗೆ ಭ್ರಮಿಸು ತ್ತದೆ. ಹಾಗಾಗಿ ಈ ಭಾವನೆಯನ್ನು ನಿವಾರಿಸಲು ಇವರಿಗೆ ಸ್ಕೊಪಾಲಮಿನ್ + ಡೆಕ್ಸ್ಟ್ರೋ ಆಂಫಿಟಮಿನ್ ಮಿಶ್ರಣವನ್ನು ನೀಡುತ್ತಾರೆ. ಇದು 8-12 ಗಂಟೆಗಳ ಕಾಲ ಮಿದುಳಿನ ಆತಂಕವನ್ನು ನಿಗ್ರಹಿಸುತ್ತದೆ. ಹಾಗಾಗಿ ಇವುಗಳ ಪ್ರಯೋಗ ಇಂದಿಗೂ ಅಸ್ತಿತ್ವದಲ್ಲಿದೆ.
ಸ್ಕೊಪಾಲಮಿನ್, ಮಧ್ಯಯುಗದಿಂದ ಮಾಟ ಮಂತ್ರಗಳಿಂದ ಹಿಡಿದು ಇಂದಿನ ಬಾಹ್ಯಾಕಾಶ ಯಾನದವರೆಗೆ ನಾನಾ ರೀತಿಯಲ್ಲಿ ತನ್ನ ದಶಾವತಾರಗಳನ್ನು ತೋರಿದೆ. ಮುಂದಿನ ದಿನ ಗಳಲ್ಲಿಯೂ ಈ ಔಷಧದ ಬಳಕೆ ಮುಂದುವರಿಯಲಿದೆ. (ಸ್ಕೊಪಾಲಮಿನ್, ಅಪರಾಧಕ್ಕೆ ಹೇಗೆ ನೆರವಾಗುತ್ತದೆ ಎನ್ನುವುದನ್ನು ಕಳೆದ ವಾರದ ‘ಡೆವಿಲ್ಸ್ ಬ್ರೆತ್’ ಲೇಖನದಲ್ಲಿ ವಿವರಿಸಿರುವ ಕಾರಣ, ಅದನ್ನು ಪುನರಾವರ್ತಿಸಲಿಲ್ಲ)