ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ಅಗಸ್ತ್ಯ ಮಹರ್ಷಿ ಗಣಪತಿಯನ್ನು ಆರಾ‌ಧಿಸುತ್ತಿದ್ದರು. ಆದ್ದರಿಂದಲೇ ಮುತ್ತುಸ್ವಾಮಿ ದೀಕ್ಷಿತರು ಗಣಪತಿ ಯನ್ನು ‘ಕುಂಭಸಂಭವ ಮುನಿಯಿಂದ ಪೂಜಿಸಲ್ಪಟ್ಟವನು’ ಎಂದು ಸ್ತುತಿಸಿದ್ದಾರೆ. ಅಗಸ್ತ್ಯರ ಗಣೇಶಭಕ್ತಿ ಎಷ್ಟಿತ್ತೆಂದರೆ ರಾಮಾಯಣದಲ್ಲಿ ವನವಾಸ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಒಂದೆರಡು ದಿನ ಅಗಸ್ತ್ಯರ ಆಶ್ರಮದಲ್ಲಿ ತಂಗಿದ್ದಾಗ ರಾಮನಿಗೂ ಗಣೇಶಾರಾಧನೆಯ ಮಹತ್ತವನ್ನು ಅಗಸ್ತ್ಯರು ತಿಳಿಸಿದ್ದರು. ಅದೇ ರೀತಿ ‘ಆದಿತ್ಯಹೃದಯಮ್’ ಸ್ತೋತ್ರವನ್ನೂ ಅಗಸ್ತ್ಯರೇ ರಚಿಸಿ ಶ್ರೀರಾಮನಿಗೆ ಬೋಧನೆ ಮಾಡಿದರು.

ಅಗಸ್ತ್ಯ ಮಹರ್ಷಿಯ ಹಿರಿಮೆ ಸಾರುವ ಕಥೆಗಳೆಲ್ಲ ಅದ್ಭುತವೇ !

ತಿಳಿರು ತೋರಣ

ಅಗಸ್ತ್ಯ ಮಹರ್ಷಿಯ ಉಲ್ಲೇಖ ಬರುವ ಅತಿಪ್ರಖ್ಯಾತ ಗಣೇಶಸ್ತುತಿಯಿಂದಲೇ ಆರಂಭಿಸೋಣ. ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ‘ವಾತಾಪಿ ಗಣಪತಿಂ ಭಜೇಧಿಹಂ...’ ಕೃತಿಯ ಎರಡನೇ ಚರಣದಲ್ಲಿ ‘ಪುರಾ ಕುಂಭಸಂಭವ ಮುನಿವರ ಪ್ರಪೂಜಿತಂ...’ ಎಂದು ಬರುತ್ತದಲ್ಲ, ಕುಂಭಸಂಭವ ಮುನಿ ಎಂದರೆ ಬೇರೆ ಯಾರೂ ಅಲ್ಲ, ಅಗಸ್ತ್ಯ ಮಹರ್ಷಿ! ಕುಂಭಸಂಭವ ಎಂದರೇನು? ಅಗಸ್ತ್ಯರಿಗೆ ಆ ಹೆಸರು ಹೇಗೆ ಬಂತು? ಅದಕ್ಕೊಂದು ಪುರಾಣಕಥೆ ಇದೆ. ಓದುವಾಗ ನಮಗೆ ಸ್ವಲ್ಪ ಮುಜುಗರ ಎನಿಸಬಹುದಾದರೂ ಪುರಾಣಕಥೆ ಎಂಬ ಗೌರವಭಾವದಿಂದಲೇ ಓದಿದರೆ, ಪುರಾಣದ ಪ್ರತಿ ಯೊಂದು ಘಟನೆಯೂ ನಿರ್ದಿಷ್ಟವಾದೊಂದು ಉದ್ದೇಶದಿಂದಲೇ ಸಂಭವಿಸಿರುತ್ತದೆ ಎಂದು ಅರ್ಥಮಾಡಿಕೊಂಡರೆ ಒಳ್ಳೆಯದು.

ಕಥೆ ಹೀಗಿದೆ: ಮಿತ್ರಾ-ವರುಣರೆಂಬ ಋಷಿದ್ವಯರು ಒಮ್ಮೆ ಭವ್ಯವಾದ ಯಜ್ಞವೊಂದನ್ನು ಮಾಡಿದರು. ಎಲ್ಲ ದೇವತೆಗಳೂ ಅಲ್ಲಿ ಬಂದು ಸೇರಿದ್ದರು. ಅಪ್ಸರೆಯರಲ್ಲಿ ಅತಿ ಲಾವಣ್ಯವತಿ ಯಾದ ಊರ್ವಶಿಯೂ ಬಂದಿದ್ದಳು. ದೀಕ್ಷಾಬದ್ಧರಾದ ಮಿತ್ರಾ-ವರುಣರು ಊರ್ವಶಿಯನ್ನು ನೋಡಿದರು.

ಅವಳನ್ನು ಕಂಡೊಡನೆ ಅವರಿಬ್ಬರ ಮನಸ್ಸು ವಿಚಲಿತವಾಯಿತು. ಕಠೋರವಾದ ನಿಷ್ಠೆಯಿಂದ ಆಚರಿಸಿದ್ದ ಅವರಿಬ್ಬರ ಬ್ರಹ್ಮಚರ್ಯ ಸಡಿಲಗೊಂಡಿತು. ಅವರಿಬ್ಬರಿಗೂ ವೀರ್ಯಸ್ಖಲನವಾಗಿ ಅದು ಅಲ್ಲೇ ಇದ್ದ ಒಂದು ಕುಂಭದಲ್ಲಿ ಬಿತ್ತು. ಇದೇನೋ ದೈವಪ್ರೇರಣೆಯಿಂದಲೇ ನಡೆದಿದ್ದೆಂಬ ನಂಬಿಕೆಯಿಂದ ಊರ್ವಶಿಯು ಆ ಕುಂಭವನ್ನೇ ಗರ್ಭದಂತೆ ವಿಶೇಷ ರೀತಿಯಲ್ಲಿ ಪೋಷಿಸಿದಳು.

ಮುಂದೆ ಅದೇ ಕುಂಭದಿಂದ ಎರಡು ಕಾಂತಿಯುಕ್ತ ಶಿಶುಗಳು ಹುಟ್ಟಿಬಂದವು. ಮೊದಲ ಶಿಶುವೇ ಅಗಸ್ತ್ಯ, ಎರಡನೆಯವನು ವಸಿಷ್ಠ. ಈ ಕಾರಣದಿಂದಲೇ ಇಬ್ಬರಿಗೂ ಮೈತ್ರಾವರುಣಿ, ಕುಂಭ ಸಂಭವ, ಕುಂಭಯೋನಿಜ ಮುಂತಾದ ಅನ್ವರ್ಥನಾಮಗಳು. ಅಗಸ್ತ ಮಹರ್ಷಿ ಗಣಪತಿಯನ್ನು ಆರಾಧಿಸುತ್ತಿದ್ದರು.

ಇದನ್ನೂ ಓದಿ: Srivathsa Joshi Column: ಏಳನೇ ತರಗತಿ ಬೀಳ್ಕೊಡುಗೆಯ ಗ್ರೂಪ್‌ ಫೋಟೊ ತಂದ ಹಿಗ್ಗು

ಆದ್ದರಿಂದಲೇ ಮುತ್ತುಸ್ವಾಮಿ ದೀಕ್ಷಿತರು ಗಣಪತಿಯನ್ನು ‘ಕುಂಭಸಂಭವ ಮುನಿಯಿಂದ ಪೂಜಿಸಲ್ಪಟ್ಟವನು’ ಎಂದು ಸ್ತುತಿಸಿದ್ದಾರೆ. ಅಗಸ್ತ್ಯರ ಗಣೇಶಭಕ್ತಿ ಎಷ್ಟಿತ್ತೆಂದರೆ ರಾಮಾಯಣದಲ್ಲಿ ವನವಾಸ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಒಂದೆರಡು ದಿನ ಅಗಸ್ತ್ಯರ ಆಶ್ರಮದಲ್ಲಿ ತಂಗಿದ್ದಾಗ ರಾಮನಿಗೂ ಗಣೇಶಾರಾಧನೆಯ ಮಹತ್ವವನ್ನು ಅಗಸ್ತ್ಯರು ತಿಳಿಸಿದ್ದರು. ಅದೇರೀತಿ ಸೂರ್ಯಾ ರಾಧನೆಯ ‘ಆದಿತ್ಯಹೃದಯಮ್’ ಸ್ತೋತ್ರವನ್ನೂ ಅಗಸ್ತ್ಯರೇ ರಚಿಸಿ ಶ್ರೀರಾಮನಿಗೆ ಬೋಧನೆ ಮಾಡಿದರು.

ಅರ್ಜುನನಿಗೆ ಕೌರವರೊಡನೆ ಸಮರಸನ್ನದ್ಧತೆಗೆಂದು ಶ್ರೀಕೃಷ್ಣ ಹೇಗೆ ಉಪದೇಶಿಸಿದ್ದನೋ ಹಾಗೆ ಶ್ರೀರಾಮನಿಗೆ ರಾವಣನನ್ನು ಎದುರಿಸುವುದಕ್ಕೆ ಧೈರ್ಯ ತುಂಬಿ ಮಾನಸಿಕವಾಗಿ ಸಿದ್ಧಗೊಳಿಸಿದ್ದು ಅಗಸ್ತ ಮಹರ್ಷಿ ಮಾಡಿದ ಉಪದೇಶ. ಶತ್ರುವನ್ನು ಜಯಿಸುವುದಕ್ಕೆ ಬೇಕಾದ ಸ್ಥೈರ್ಯ ಮತ್ತು ಪರಬ್ರಹ್ಮ ತತ್ತ್ವದ ಬೋಧನೆ. ಜತೆಯಲ್ಲೇ ಒಂದಿಷ್ಟು ದಿವ್ಯ ಶಸಾಸಗಳು. ಇದರಲ್ಲಿ ಭಗವಂತ ಕೊಟ್ಟವನಲ್ಲ, ಪಡೆದುಕೊಂಡವನು.

muni R

‘ವಾತಾಪಿ ಗಣಪತಿಂ ಭಜೇ...’ ಕೃತಿಯಲ್ಲಿರುವ ವಾತಾಪಿ ಅಂದರೆ ನಮ್ಮ ಈಗಿನ ಕರ್ನಾಟಕದ ಬಾದಾಮಿ. ಚಾಲುಕ್ಯ ವಂಶದವರು ಆಳುತ್ತಿದ್ದಾಗ ಅವರ ರಾಜಧಾನಿಯಾಗಿದ್ದ ಪಟ್ಟಣ. ಎರಡನೇ ಪುಲಿಕೇಶಿಯ ದಿಗ್ವಿಜಯದಿಂದಾಗಿ ಹಗೆ ಬೆಳೆಸಿಕೊಂಡಿದ್ದ ಪಲ್ಲವ ವಂಶದ ನರಸಿಂಹ ವರ್ಮನು ಚಾಲುಕ್ಯರ ಮೇಲೆ ದಂಡೆತ್ತಿ ಹೋಗಿ ಬಾದಾಮಿಯನ್ನು ಧ್ವಂಸ ಮಾಡಿದನು; ಇದರ ನೆನಪಿಗಾಗಿ ಬಾದಾಮಿಯ ಗುಹೆಗಳ ದೇವಾಲಯದಲ್ಲಿದ್ದ ಗಣಪತಿಯ ಮೂಲವಿಗ್ರಹವನ್ನು ಹೊತ್ತೊಯ್ದನು; ಪಲ್ಲವರ ಸೇನಾಧಿಕಾರಿಯಾಗಿದ್ದ ಪರಂಜ್ಯೋತಿ ಎನ್ನುವವನು ತನ್ನ ಊರಾದ ಈಗಿನ ತಮಿಳು ನಾಡಿನ ತಿರುಚೆಂಕಾಂಟಗುಡಿಯಲ್ಲಿ ಆ ಗಣಪತಿಯ ವಿಗ್ರಹವನ್ನು ಸ್ಥಾಪಿಸಿದನು; ಅದೇ ‘ವಾತಾಪಿ ಗಣಪತಿ’ ಎಂದು ಪ್ರಖ್ಯಾತವಾಯಿತು; ತಿರುವಾರೂರಿನ ತ್ಯಾಗರಾಜ ದೇವಾಲಯದ ಪ್ರಾಕಾರದಲ್ಲೂ ಅಂಥದೇ ಗಣಪತಿ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಯಿತು; ಅದು ಕೂಡ ವಾತಾಪಿ ಗಣಪತಿ ಎಂದೇ ಹೆಸರಾಯ್ತು; ಮುತ್ತುಸ್ವಾಮಿ ದೀಕ್ಷಿತರು ಅಲ್ಲಿರುವ ಹದಿನಾರು ಬೇರೆಬೇರೆ ಗಣಪತಿಯರ ಬಗ್ಗೆ ಕೀರ್ತನೆ ರಚಿಸುತ್ತ ಹದಿನಾರರಲ್ಲೊಂದಾದ ವಾತಾಪಿ ಗಣಪತಿಯನ್ನೂ ಸ್ತುತಿಸಿ ಕೀರ್ತನೆ ರಚಿಸಿದರು; ಅದೇ ‘ವಾತಾಪಿ ಗಣಪತಿಂ ಭಜೇಧಿಹಂ’ ಕೃತಿ- ಎಂದು ಪ್ರತೀತಿ. ಈ ಉಪಕಥೆಗೂ ಅಗಸ್ತ್ಯ ಮಹರ್ಷಿಗೂ ಏನೇನೂ ಸಂಬಂಧವಿಲ್ಲ. ಆದರೆ ವಾತಾಪಿ ಎಂಬ ಹೆಸರಿನ ರಾಕ್ಷಸನ ಕಥೆಗೂ ಅಗಸ್ತ ಮಹರ್ಷಿಗೂ ನೇರಾನೇರ ಸಂಬಂಧ ವಿದೆ. ಅದೇ ‘ವಾತಾಪಿ-ಇಲ್ವಲ’ ಎಂಬ ಸೋದರರಿಬ್ಬರ ಕಥೆ.

ಇಲ್ವಲನೂ ವಾತಾಪಿಯೂ ತಮಗೆ ಇಂದ್ರನಂಥ ಮಗನು ಹುಟ್ಟಬೇಕೆಂಬ ಆಸೆಯಿಂದ ತಮ್ಮನ್ನು ಅನುಗ್ರಹಿಸುವಂತೆ ಬ್ರಾಹ್ಮಣರನ್ನು ಬೇಡುತ್ತಿದ್ದರು. ಆ ಇಷ್ಟಾರ್ಥವು ಕೈಗೂಡದಿದ್ದ ಕಾರಣ ಬ್ರಾಹ್ಮಣರನ್ನು ಪೀಡಿಸತೊಡಗಿದರು. ಅದೂ ಹೇಗೆಂದರೆ ಬ್ರಾಹ್ಮಣರನ್ನು ಊಟಕ್ಕೆ ಕರೆಯುವುದು; ಅವರಿಗೆ ಗೊತ್ತೇ ಆಗದಂತೆ ಅಡುಗೆಯಲ್ಲಿ ಮಾಂಸ ಬೆರೆಸುವುದು; ಯಾವುದೋ ಒಂದು ಪ್ರಾಣಿಯ ಮಾಂಸ ಅಲ್ಲ, ವಾತಾಪಿಗೆ ಬೇರೆಬೇರೆ ಪ್ರಾಣಿಗಳ ರೂಪ ಧರಿಸಿ ಸತ್ತು ಬದುಕುವ ಸಾಮರ್ಥ್ಯ ಇದ್ದುದರಿಂದ ಇಲ್ವಲನು ವಾತಾಪಿಯನ್ನು ಮೇಕೆಯನ್ನಾಗಿಸಿ ಕೊಂದು ಆ ಮಾಂಸವನ್ನು ಅಡುಗೆ ಮಾಡಿ ಬ್ರಾಹ್ಮಣರಿಗೆ ಬಡಿಸುತ್ತಿದ್ದನು; ಅವರ ಊಟ ಆದ ಬಳಿಕ ‘ವಾತಾಪಿ! ಹೊರಗೆ ಬಾ!’ ಎಂದು ಕರೆಯುತ್ತಿದ್ದನು; ಇಲ್ವಲನ ಕರೆಗೆ ಓಗೊಟ್ಟ ವಾತಾಪಿಯು ಬ್ರಾಹ್ಮಣರ ಹೊಟ್ಟೆ ಸೀಳಿಕೊಂಡು ಹೊರಬರುತ್ತಿದ್ದನು.

ಹೀಗೆ ಅನೇಕ ಮಂದಿ ಬ್ರಾಹ್ಮಣರು ಸತ್ತರು. ಒಮ್ಮೆ ಅಗಸ್ತ್ಯ ಮಹರ್ಷಿ ಧನಾಪೇಕ್ಷೆಯಿಂದ ಇಲ್ವಲನಲ್ಲಿಗೆ ಹೋಗಿದ್ದಾಗ ಇಲ್ವಲನು ಹಿಂದಿನ ಹಾಗೆಯೇ ಮಾಡಿದನು. ಅಷ್ಟಾಗಿ, ಅಗಸ್ತ್ಯ ಮಹರ್ಷಿಗೇಕೆ ಧನಾಪೇಕ್ಷೆ ಆದದ್ದು? ಅವರಲ್ಲ, ಪತ್ನಿ ಲೋಪಾಮುದ್ರೆ ವಿಲಾಸಜೀವನ ನಡೆಸಲು ಅಪೇಕ್ಷಿಸಿದ್ದು!

ಹೆಂಡತಿಯ ಇಚ್ಛೆಗಳನ್ನು ಪೂರೈಸುವ ಬಡಪಾಯಿ ಗಂಡನಾಗಿ ಅಗಸ್ತ ರೂ ಹಣ ಸಂಗ್ರಹಿಸಲು ಮುಂದಾಗಬೇಕಾಯಿತು. ಮೊದಲಿಗೆ ಶ್ರುತರ್ವರಾಯ, ಬೃಧ್ನಾಶ್ವರಾಜ ಮತ್ತು ತ್ರಸದಸ್ಯುರಾಜರ ಬಳಿಗೆ ಹೋಗಿ ಆ ರಾಜ್ಯಗಳ ಆಯವ್ಯಯಗಳು ಸಮಾನವಾಗಿದ್ದುದರಿಂದ ಧನಿಕ ದಾನವನಾದ ಇಲ್ವಲನ ಬಳಿಗೆ ಹೋಗಿದ್ದರು.

ಇಲ್ವಲ ಯಥಾಪ್ರಕಾರ ವಾತಾಪಿಯನ್ನು ಮೇಕೆಯನ್ನಾಗಿಸಿ ಕೊಂದು, ಮಾಂಸವನ್ನು ಅಡುಗೆಯಲ್ಲಿ ಬೆರೆಸಿ ಅಗಸ್ತ್ಯರಿಗೆ ಬಡಿಸಿದನು. ಅಗಸ್ತ ಮಹರ್ಷಿಗೆ ದಿವ್ಯದೃಷ್ಟಿ ಇದ್ದುದರಿಂದ ಈ ಸೋದರರ ಗುಟ್ಟು ಗೊತ್ತಾಯ್ತು. ಊಟ ಮುಗಿಸಿದ ಕೂಡಲೇ ಹೊಟ್ಟೆಯ ಮೇಲೆ ಕೈ ಸವರುತ್ತ ‘ವಾತಾಪಿ ಜೀರ್ಣೋ ಭವ!’ ಎಂದರು.

ವಾತಾಪಿಯು ಅಗಸ್ತ್ಯರ ಹೊಟ್ಟೆ ಸೀಳಿ ಬರುವುದು ಸಾಧ್ಯವಾಗಲಿಲ್ಲ. ಒಳಗೇ ಜೀರ್ಣನಾದನು. ಇಲ್ವಲನು ಹೆದರಿ ಅಗಸ್ತ್ಯ ಮಹರ್ಷಿಯ ಮೊರೆಹೊಕ್ಕು ಅಂದಿನಿಂದ ಬ್ರಾಹ್ಮಣದ್ವೇಷವನ್ನು ಬಿಟ್ಟನು. ಈ ಘಟನೆ ನಡೆದದ್ದು ಈಗಿನ ಬೆಂಗಳೂರಿನ ನೆಲಮಂಗಲದಲ್ಲಿ ಎನ್ನುತ್ತಿದೆ ಪುರಾಣ ಭಾರತ ಕೋಶದ ಒಂದು ವಿವರಣೆ!

ಅಗಸ್ತ್ಯ ಮಹರ್ಷಿಯು ವಾತಾಪಿಯನ್ನು ಜೀರ್ಣಿಸಿಕೊಂಡಿದ್ದು ಒಂದು ಕಥೆಯಾದರೆ ಇಡೀ ವಾರಿಧಿ ಯನ್ನು (ಸಮುದ್ರವನ್ನು) ಆಪೋಶನ ತೆಗೆದುಕೊಂಡು ಬರಿದಾಗಿಸಿದ್ದು ಇನ್ನೊಂದು ಕಥೆ. ಕಾಲ ಕೇಯ ಎಂಬ ರಕ್ಕಸರಿದ್ದರು. ಇವರು ಕಶ್ಯಪಮುನಿಯಿಂದ ಕಾಲಾ ಎಂಬುವಳಲ್ಲಿ ಜನಿಸಿದವರು. ವೃತ್ರಾಸುರನ ಒತ್ತಾಸೆಯಿಂದ ದೇವತೆಗಳನ್ನು ಬಹಳವಾಗಿ ಪೀಡಿಸುತ್ತಿದ್ದರು. ಹಗಲೆಲ್ಲ ಸಮುದ್ರ ಮಧ್ಯದಲ್ಲಿ ಅಡಗಿಕೊಂಡಿದ್ದು ರಾತ್ರಿಯಾದ ಕೂಡಲೇ ಹೊರಬಂದು ಆಶ್ರಮದಲ್ಲಿದ್ದ ಋಷಿಗಳನ್ನು ತಿನ್ನುತ್ತಿದ್ದರು.

ಇವರ ಹಾವಳಿಯಿಂದ ಲೋಕದಲ್ಲಿ ಯಜ್ಞಾದಿಗಳು ನಡೆಯುತ್ತಿರಲಿಲ್ಲ. ಆಗ ದೇವತೆಗಳು ಇಂದ್ರನ ಮೂಲಕ ಬ್ರಹ್ಮನ ಮೊರೆಹೊಕ್ಕರು. ಬ್ರಹ್ಮನು ಅಗಸ್ತ್ಯ ಮಹರ್ಷಿಯ ಬಳಿ ಸಹಾಯ ಕೇಳುವಂತೆ ದೇವತೆಗಳಿಗೆ ತಿಳಿಸಿದನು. ದೇವತೆಗಳ ಕೋರಿಕೆಯನ್ನು ಮನ್ನಿಸಿ ಅಗಸ್ತ್ಯ ಮಹರ್ಷಿ ಇಡೀ ಸಮುದ್ರದ ನೀರನ್ನೆಲ್ಲ ಕುಡಿದು ಬಿಟ್ಟರು! ಕಾಲಕೇಯರು ಹೊರಬಿದ್ದರು. ಅವರನ್ನು ಕೊಲ್ಲುವುದು ದೇವತೆಗಳಿಗೆ ಸಾಧ್ಯವಾಯಿತು.

ಅಗಸ್ತ್ಯರು ಹಾಗೆ ಸಮುದ್ರವನ್ನು ಹೀರಿಕೊಂಡರೆಂಬ ಕಥಾನಕವನ್ನು ಕೊಳಗಗಟ್ಟಲೆ ತುಪ್ಪ ಹೀರುವ ಹೊಟ್ಟೆಬಾಕರ ಪರಾಕ್ರಮವನ್ನು ಬಣ್ಣಿಸಲಿಕ್ಕೆ ಹೋಲಿಕೆಯಾಗಿ ಬಳಸುವ ಚಾಟೂಕ್ತಿ ಯೊಂದಿದೆ. ‘ಅಗಸ್ತಿತುಲ್ಯಾಶ್ಚ ಘೃತಾಬ್ಧಿಶೋಷಣೇ ದಂಭೋಲಿತುಲ್ಯಾ ವಟಕಾದ್ರಿ ಭೇದನೇ| ಶಾಕಾವಲೀಕಾನನವಹ್ನಿರೂಪಾಸ್ತ ಏವ ಭಟ್ಟಾ ಇತರೇ ಭಟಾಶ್ಚ||’ ಭಟರು (ದೇಶವನ್ನು ಕಾಯುವ ಯೋಧರು) ಯಾರು ಮತ್ತು ಭಟ್ಟರು (ಊಟಕ್ಕೆ ಬಾರೋ ಮಲ್ಲ ತಯಾರಿದ್ದೇನಲ್ಲ ಎನ್ನುವವರು) ಯಾರು ಎಂಬ ತಮಾಷೆ ಇದರಲ್ಲಿರುವುದು.

ತುಪ್ಪದ ಸಮುದ್ರವನ್ನು ಒಣಗುವಂತೆ ಮಾಡುವುದರಲ್ಲಿ ಅಗಸ್ತ್ಯರಂತಿರುವವರು, ವಡೆಗಳ ರಾಶಿಯೆಂಬ ಪರ್ವತವನ್ನು ಕ್ಷಣಕಾಲದಲ್ಲಿ ಮುಗಿಸಿಬಿಡುವುದರಲ್ಲಿ ಇಂದ್ರನ ವಜ್ರಾಯುಧದಂತಿ ರುವವರು, ತರಕಾರಿಗಳೆಂಬ ಕಾನನವನ್ನು ದಹಿಸುತ್ತ ಅಗ್ನಿಯಂತಿರುವವರು... ಇಂಥವರೇ ನಿಜವಾದ ಭಟ್ಟರು ಮತ್ತು ಉಳಿದವರೆಲ್ಲ ಬರೀ ಭಟರು ಎಂದು ವ್ಯಂಗ್ಯವಾಡುತ್ತದೆ ಈ ಚಾಟೂಕ್ತಿ. ಕವಿಕಲ್ಪನೆಯದೊಂದು ವಿನೋದ.

ಇದರಲ್ಲಿ ಅಗಸ್ತ್ಯ ಮಹರ್ಷಿಯನ್ನು ಅಗಸ್ತಿ ಎನ್ನಲಾಗಿದೆಯಷ್ಟೆ? ಅಗಸ್ತ್ಯರಿಗೆ ಆ ಹೆಸರೂ ಇತ್ತು. ರಾತ್ರಿ ಮಲಗುವಾಗ ನಿದ್ರೆಯಲ್ಲಿ ಹೆದರಿಕೊಳ್ಳಬಾರದೆಂಬ ಆಶಯದಿಂದ ಹೇಳುವ ‘ರಾಮಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ...’ ಶ್ಲೋಕದಂತೆಯೇ ಇನ್ನೊಂದಿದೆ, ವಿಷಸರ್ಪಗಳಿಂದ ಹೆದರಿಕೆ ಉಂಟಾಗಬಾರದು ಎಂದು ಪ್ರಾರ್ಥಿಸುತ್ತ ಹೇಳುವುದು: ‘ಅಗಸ್ತಿರ್ಮಾಧವಶ್ಬೈವ ಮುಚುಕುಂದೋ ಮಹಾಮುನಿಃ|

ಕಪಿಲೋ ಮುನಿರಾಸ್ತೀಕಃ ಪಂಚೈತೇ ಸುಖಶಾಯಿನಃ||’ ಇದರ ಅರ್ಥ: ಅಗಸ್ತಿ, ಮಾಧವ, ಮುಚುಕುಂದ, ಕಪಿಲ ಮತ್ತು ಆಸ್ತೀಕ ಎಂಬ ಐವರು ಮಹಾಮುನಿಗಳನ್ನು ಸ್ಮರಿಸಿದರೆ ಸರ್ಪಭಯರಹಿತರಾಗಿ ರಾತ್ರಿಯಲ್ಲಿ ಸುಖವಾಗಿ ನಿದ್ರಿಸಬಹುದು ಎಂದು. ‘ಅಗಸ್ತ್ಯೋದಯೇ ವಿಷಶುದ್ಧಿಃ’ ಎಂಬೊಂದು ಸೂಕ್ತಿಯೂ ಇದೆ. ಇಲ್ಲಿ ಅಗಸ್ತ ಎಂದರೆ ಅಗಸ್ತ ಮಹರ್ಷಿಯ ಹೆಸರಿನ ನಕ್ಷತ್ರ. ಸಂಸ್ಕೃತದಲ್ಲಿ ವಿಷ ಎಂದರೆ ನೀರು ಎಂಬ ಅರ್ಥವೂ ಇದೆ.

ಅಗಸ್ತ್ಯ ನಕ್ಷತ್ರವೆಂದರೆ ಈಗಿನ ಬಾಹ್ಯಾಕಾಶ ವಿಜ್ಞಾನದ ಪ್ರಕಾರ Canopus ನಕ್ಷತ್ರ. ದಕ್ಷಿಣಾಕಾಶ ದಲ್ಲಿರುವ Carina ನಕ್ಷತ್ರಪುಂಜದಲ್ಲಿ ಅತ್ಯಂತ ಪ್ರಕಾಶಮಾನವಾದುದು ಮತ್ತು ಒಟ್ಟಾರೆ ಯಾಗಿಯೂ ಇಡೀ ಆಕಾಶದಲ್ಲಿ ಎರಡನೆಯ ಅತಿಹೆಚ್ಚು ಪ್ರಕಾಶಮಯ ನಕ್ಷತ್ರ. ಶರದೃತುವಿನ ಆರಂಭಕ್ಕೆ ಸ್ವಲ್ಪ ಮೊದಲೇ, ಅಂದರೆ ಭಾದ್ರಪದ ಮಾಸದ ಕೃಷ್ಣಪಕ್ಷದ ಸಪ್ತಮಿ ಯಂದು ಅಗಸ್ತ್ಯ ನಕ್ಷತ್ರ ಉದಯಿಸುವಾಗ ನದಿಗಳ ನೀರೆಲ್ಲ ಪರಿಶುದ್ಧವಾಗುತ್ತದೆಂದು ನಂಬಿಕೆಯಿದೆ.

ಕಾಳಿದಾಸನ ರಘುವಂಶ ಕಾವ್ಯದಲ್ಲಿ ‘ಪ್ರಸಸಾದೋದಯಾದಂಭಃ ಕುಂಭಯೋನೇರ್ಮಹೌಜಸಃ’ ಎಂದು ಬರುತ್ತದೆ. ಅಂದರೆ, ಹೆಚ್ಚು ತೇಜಸ್ಸುಳ್ಳ ಅಗಸ್ತ್ಯ ನಕ್ಷತ್ರದ ಉದಯದಿಂದ ನೀರು ತಿಳಿಗೊಂಡಿತು ಎಂದು. ಅದೇಕಾಲಕ್ಕೆ ರಘುವಿನ ಏಳಿಗೆಯಿಂದ ತಮ್ಮ ಸೋಲನ್ನು ಊಹಿಸಿ ಶತ್ರುಗಳ ಮನಸ್ಸು ಕ್ಷೋಭೆಗೊಂಡಿತಂತೆ. ಕಾಳಿದಾಸನಿಗೆ ಖಗೋಲಶಾಸ್ತ್ರದ ಅರಿವೂ ಇತ್ತೆನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಇಲ್ಲಿ ಕುಂಭಯೋನಿಃ ಎಂದರೆ ಅಗಸ್ತ ಎಂಬುದನ್ನೂ ನಾವು ಗಮನಿಸಬೇಕು.

ಅಗಸ್ತ್ಯ ನಕ್ಷತ್ರದ ಉದಯದಿಂದ ನೀರು ಶುದ್ಧವಾಗುತ್ತದೆನ್ನುವ ನಂಬಿಕೆ ಪ್ರಾಚೀನ ಕಾಲದಲ್ಲಿ ವ್ಯಾಪಕವಾಗಿಯೇ ಇತ್ತೆಂದು ಕಾಣುತ್ತದೆ. ಚರಕಸಂಹಿತೆಯ ಶ್ಲೋಕಗಳಲ್ಲೂ ಅದು ಬರುತ್ತದೆ. ಹಗಲಲ್ಲಿ ಸೂರ್ಯನ ಕಿರಣಗಳಿಂದ ತಾಪಗೊಂಡು, ರಾತ್ರಿಯಲ್ಲಿ ಚಂದ್ರನ ಕಿರಣಗಳಿಂದ ಶೀತಗೊಂಡು, ವರ್ಷಾಕಾಲ ಮುಗಿದು ಶರತ್ಕಾಲ ಬಂದಾಗ ಪಕ್ವಗೊಂಡು ಕಾಲುಷ್ಯಾದಿ ದೋಷ ಗಳು ದೂರವಾಗಿ, ಅಗಸ್ತ್ಯ ನಕ್ಷತ್ರದ ಉದಯದಿಂದ ತಿಳಿಗೊಂಡ ಪರಿಶುದ್ಧವೂ ಶುಚಿಪೂರ್ಣವೂ ಆದ ನೀರು ‘ಹಂಸೋದಕ’ ಎನಿಸುತ್ತದೆ. ಇದು ಸ್ನಾನ-ಪಾನ-ಈಜುವಿಕೆ ಇತ್ಯಾದಿಗಳಿಗೆ ಅಮೃತ ದಂತೆಯೇ ಹಿತಕಾರಿ. ಇನ್ನೊಂದು ಸ್ವಾರಸ್ಯವೆಂದರೆ ಅಗಸ್ತ್ಯ ಮಹರ್ಷಿಯ ಹೆಸರಿನ ನಕ್ಷತ್ರ ಇದೆಯಾದರೂ ಅವರು ಸಪ್ತರ್ಷಿಗಳ ಪೈಕಿ ಒಬ್ಬರಲ್ಲ!

ಆದರೆ ಸಪ್ತರ್ಷಿಗಳೊಡನೆ ಎಂಟನೆಯವರಾಗಿ ಅಗಸ್ತ್ಯರು ಸೇರಿಕೊಳ್ಳಬೇಕಾಗಿ ಬಂದ ಒಂದು ಪ್ರಸಂಗವಿದೆ, ಅದೇ ನಹುಷ ಚಕ್ರವರ್ತಿಯ ಕಥೆ: ವೃತ್ರನ ವಧೆಯಿಂದುಂಟಾದ ಬ್ರಹ್ಮಹತ್ಯೆಯ ಭಯದಿಂದ ಇಂದ್ರ ಅದೃಶ್ಯನಾದನು. ದೇವತೆಗಳೆಲ್ಲರೂ ಬ್ರಹ್ಮನಲ್ಲಿಗೆ ಹೋಗಿ ಸ್ವರ್ಗರಾಜ್ಯಕ್ಕೆ ಅಧಿಪತಿಯಿಲ್ಲವೆಂದು ಹೇಳಿದರು. ಭೂಲೋಕದಲ್ಲಿರುವ ನಹುಷ ಚಕ್ರವರ್ತಿಯನ್ನು ಕರೆತಂದು ಇಂದ್ರಪದವಿಯಲ್ಲಿ ಇಟ್ಟುಕೊಳ್ಳಬೇಕಾಗಿ ಬ್ರಹ್ಮ ತಿಳಿಸಿದನು.

ದೇವತೆಗಳು ನಹುಷನಲ್ಲಿಗೆ ಹೋಗಿ ಬೇಡಿದರು. ನಹುಷ ಮೊದಲಿಗೆ ಒಪ್ಪಲಿಲ್ಲ. ದೇವತೆಗಳು ಒತ್ತಾಯ ಮಾಡಿದ ಮೇಲೆ ಸಮ್ಮತಿಸಿ ದೇವಲೋಕಾಧಿಪತ್ಯವನ್ನು ಪಡೆದನು. ಅಷ್ಟರಲ್ಲಿ, ಕಾಣೆ ಯಾಗಿದ್ದ ಇಂದ್ರನು ವಿಷ್ಣುವಿನ ಸೂಚನೆಯಂತೆ ಅಶ್ವಮೇಧ ಯಜ್ಞ ಮಾಡಿ ಬ್ರಹ್ಮಹತ್ಯಾ ದೋಷ ಹೋಗಲಾಡಿಸಿಕೊಂಡು ದೇವರಾಜ ಪಟ್ಟಕ್ಕೆ ಯೋಗ್ಯನಾದನು. ಅದೇಕಾಲಕ್ಕೆ ನಹುಷನಿಗೆ ಚಿತ್ತಚಾಂಚಲ್ಯದಿಂದಾಗಿ ಇಂದ್ರಪತ್ನಿ ಶಚಿದೇವಿಯನ್ನು ಕೂಡುವ ಮನಸ್ಸಾಯಿತು.

ಅಂತೆಯೇ ಶಚಿಯಲ್ಲಿಗೆ ದೂತರನ್ನು ಕಳುಹಿಸಿದನು. ಶಚಿ ಸ್ವಲ್ಪ ಯೋಚಿಸಿ ‘ನೀನು ಅಪೂರ್ವ ವಾದ ವಾಹನದಲ್ಲಿ ಕುಳಿತುಕೊಂಡು ಬಂದಲ್ಲಿ ನಾನು ನಿನ್ನ ವಶವರ್ತಿನಿಯಾಗುವೆನು’ ಎಂದು ಹೇಳಿಕಳುಹಿದಳು. ನಹುಷ ಅದಕ್ಕೊಪ್ಪಿ ಒಂದು ಪಲ್ಲಕ್ಕಿಯನ್ನು ಸಪ್ತರ್ಷಿಗಳು ಹೊರುವಂತೆ ವ್ಯವಸ್ಥೆ ಮಾಡಿ ಅದೇ ಅಪೂರ್ವವಾದ ವಾಹನ ಎಂದು ಸಾರಿದನು.

ಪಲ್ಲಕ್ಕಿ ಹೊರಲಿಕ್ಕೆ ಸಮಸಂಖ್ಯೆಯ ಜನರು ಬೇಕಾದ್ದರಿಂದ ಅಗಸ್ತ್ಯ ಮಹರ್ಷಿಯನ್ನೂ ಸೇರಿಸಿಕೊಂಡನು. ಸರಿ, ನಹುಷ ಆರೂಢನಾಗಿದ್ದ ಪಲ್ಲಕ್ಕಿ ಶಚಿದೇವಿಯ ಅಂತಃಪುರದತ್ತ ಹೊರಟಿತು. ಸಪ್ತರ್ಷಿಗಳಿಗೆ ಹೋಲಿಸಿದರೆ ಅಗಸ್ತ್ಯ ಮಹರ್ಷಿಯದು ತುಸು ಗಿಡ್ಡ ಕಾಯವಾದ್ದರಿಂದ ಅವರಿಂದಾಗಿ ಪಲ್ಲಕ್ಕಿಯ ವೇಗ ತಗ್ಗುತ್ತಿದೆಯೆಂದು ನಹುಷನಿಗೆ ಅನಿಸಿತು.

ಶಚಿಯನ್ನು ಸೇರುವ ತವಕವೂ ಇದ್ದುದರಿಂದ ‘ಸರ್ಪ ಸರ್ಪ!’ (ಬೇಗ ಬೇಗ ಹೆಜ್ಜೆಹಾಕು ಎಂದು ಅರ್ಥ) ಎನ್ನುತ್ತ ಅಗಸ್ತ್ಯರ ತಲೆಯ ಮೇಲೆ ಕಾಲಿನಿಂದ ಒದ್ದನು. ಇದರಿಂದ ಕ್ರುದ್ಧರಾದ ಅಗಸ್ತ್ಯರು ‘ಸರ್ಪೋ ಭವ! (ನೀನೇ ಸರ್ಪರೂಪವನ್ನು ಧರಿಸು) ಎಂದು ನಹುಷನಿಗೆ ಶಾಪವಿತ್ತರು. ಆಗ ನಹುಷನ ತಲೆಪಿತ್ತವೆಲ್ಲ ಇಳಿದು ಅಗಸ್ತ್ಯರ ಕಾಲನ್ನು ಹಿಡಿದುಕೊಂಡು, ದಯವಿಟ್ಟು ಅನುಗ್ರಹಿಸಬೇಕು ಎಂದು ಅಂಗಲಾಚಿದನು.

ಅಗಸ್ತ್ಯರು ‘ಮುಂದೆ ನಿನ್ನ ವಂಶದಲ್ಲಿ ಹುಟ್ಟಿದ ಯುಧಿಷ್ಠಿರನೊಡನೆ ಸಂಭಾಷಣೆ ಮಾಡಿದಾಗ ನಿನ್ನ ಶಾಪ ವಿಮೋಚನೆಯಾಗುವುದು’ ಎಂದು ಹೇಳಿ ಹೊರಟುಹೋದರು. ಪಾಂಡವರ ವನವಾಸ ದಲ್ಲಿ ಒಂದು ದಿನ ಭೀಮನು ಬೇಟೆಗೆ ಹೋಗಿದ್ದಾಗ ಹೆಬ್ಬಾವಿನ ರೂಪದಿಂದಿದ್ದ ನಹುಷನು ಭೀಮನನ್ನು ತೆಕ್ಕೆಹಾಕಿ ಕೆಲವು ಪ್ರಶ್ನೆಗಳನ್ನು ಕೇಳಿದನು. ಭೀಮನಿಂದ ಸಮರ್ಪಕ ಉತ್ತರ ದೊರಕ ಲಿಲ್ಲ. ತೆಕ್ಕೆಯಿಂದ ಬಿಡಿಸಿಕೊಳ್ಳುವ ಭೀಮನ ಯತ್ನವೂ ವಿಫಲವಾಯಿತು.

ಪಾಂಡವರ ಆಶ್ರಮದಲ್ಲಿ ಅಪಶಕುನಗಳು ಕಾಣಿಸಿಕೊಂಡವು. ಯುಧಿಷ್ಠಿರ ಚಿಂತಿತನಾಗಿ ಭೀಮನನ್ನು ಹುಡುಕಿಕೊಂಡು ಹೋದಾಗ ಒಂದು ಹೆಬ್ಬಾವು ಎದುರಾಯಿತು. ಯುಧಿಷ್ಠಿರನಿಗೂ ಅದೇ ಪ್ರಶ್ನೆಗಳನ್ನು ಕೇಳಿತು. ಯುಽಷ್ಠಿರ ಅವೆಲ್ಲದಕ್ಕೆ ಸಮರ್ಪಕ ಉತ್ತರ ಕೊಡಲಾಗಿ ಹೆಬ್ಬಾವು ಭೀಮನನ್ನು ಬಿಟ್ಟು, ತಾನೂ ಸರ್ಪ ರೂಪವನ್ನು ತೊರೆದು ನಹುಷದೇಹವನ್ನು ಧರಿಸಿತು. ನಹುಷನ ಶಾಪವಿಮೋಚನೆಯಾಗಿ ಆತನಿಗೆ ಸ್ವರ್ಗಪ್ರಾಪ್ತಿ ಆಯಿತು. ವಿಂಧ್ಯಪರ್ವತದ ಗರ್ವಭಂಗ ಮಾಡಿದ್ದೂ ಅಗಸ್ತ್ಯರದೇ ಹೆಗ್ಗಳಿಕೆ. ಆ ಕಥೆ ಹೀಗಿದೆ: ವಿಂಧ್ಯನು ಒಮ್ಮೆ ಸೂರ್ಯನೊಡನೆ ‘ಮೇರುವನ್ನು ಸುತ್ತುವ ನೀನು ನನಗೇಕೆ ಪ್ರದಕ್ಷಿಣೆ ಬರುವುದಿಲ್ಲ?’ ಎನ್ನಲು ಸೂರ್ಯನು ‘ಅದು ದೇವಪರ್ವತ. ಅದನ್ನಷ್ಟೇ ಸುತ್ತಲು ನನಗೆ ಭಗವಂತನ ಕಟ್ಟಳೆ’ ಎಂದು ಉತ್ತರಿಸಿನು.

ಗರ್ವಿಷ್ಠನಾದ ವಿಂಧ್ಯನಿಗೆ ಸಿಟ್ಟು ಬಂತು. ಸೂರ್ಯಚಂದ್ರರ ಗತಿಯನ್ನು ತಡೆಯುವಷ್ಟು ಎತ್ತರಕ್ಕೆ ಬೆಳೆದನು. ಹಾಗೆ ಮಾಡಬಾರದೆಂದು ದೇವತೆಗಳು ವಿಂಧ್ಯನೊಡನೆ ಕೇಳಿಕೊಂಡರೂ ಕಿವಿಗೊಡ ಲಿಲ್ಲ. ಆಗ ದೇವತೆಗಳೆಲ್ಲರೂ ವಿಂಧ್ಯನ ಗುರುವಾಗಿದ್ದ ಅಗಸ್ತ್ಯರ ಬಳಿ ದೂರಿತ್ತರು. ಅಗಸ್ತ್ಯರು ಲೋಕಕ್ಕೆ ಶ್ರೇಯಸ್ಸುಂಟಾಗಬೇಕೆಂದು ತನ್ನ ಸಂಸಾರದೊಡನೆ, ಮಹೋನ್ನತವಾಗಿ ಬೆಳೆದಿದ್ದ ವಿಂಧ್ಯನ ಬಳಿಗೆ ಬಂದು ತನಗೆ ದಕ್ಷಿಣಭಾರತಕ್ಕೆ ಹೋಗಲು ದಾರಿಬಿಡಬೇಕೆಂದು ಕೇಳಿದರು.

ವಿಂಧ್ಯನು ತನ್ನ ದೇಹವನ್ನು ಕುಗ್ಗಿಸಿಕೊಂಡು ಗುರುವಿಗೆ ಮಾರ್ಗ ಬಿಟ್ಟನು. ದಕ್ಷಿಣಕ್ಕೆ ಬಂದ ಅಗಸ್ತ್ಯರು ಅಲ್ಲೇ ನೆಲೆಸಿದರು. ಮುಂದೆ ತಲಕಾವೇರಿಯಲ್ಲಿ ಅವರ ಕಮಂಡಲು ಉರುಳಿಬಿದ್ದು ಚೆಲ್ಲಿದ ನೀರು ಕಾವೇರಿ ನದಿಯಾಗಿ ಹರಿಯತೊಡಗಿತು. ವಿಶ್ವೇಶ್ವರಯ್ಯನವರ ಪರಿಶ್ರಮದಿಂದ ಕಾವೇರಿಗೆ ಅಡ್ಡವಾಗಿ ಕನ್ನಂಬಾಡಿ ಕಟ್ಟೆ ಆಯಿತು.

ಕಾವೇರಿಯು ಕನ್ನಡನಾಡಿನ ಜೀವನದಿ ಆಯಿತು. ಕರ್ನಾಟಕವು ಬಂಗಾರ ಬೆಳೆಯುವ ನಾಡಾಯಿತು! ಈಗ, ಈ ಅಂಕಣಬರಹದ ಮೊದಲ ಪ್ಯಾರಗ್ರಾಫ್‌ ನಲ್ಲಿ ಮುಜುಗರದ ಕಥಾನಕಕ್ಕೆ ಪೀಠಿಕೆ ಬರೆದಿದ್ದರಲ್ಲಿ ‘ಪುರಾಣದ ಪ್ರತಿಯೊಂದು ಘಟನೆಯೂ ನಿರ್ದಿಷ್ಟವಾದೊಂದು ಉದ್ದೇಶದಿಂದಲೇ ಸಂಭವಿಸಿರುತ್ತದೆ ಎಂದು ಅರ್ಥಮಾಡಿಕೊಂಡರೆ ಒಳ್ಳೆಯದು’ ಎಂಬುದನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳಿ.