Srivathsa Joshi Column: ಏಳನೇ ತರಗತಿ ಬೀಳ್ಕೊಡುಗೆಯ ಗ್ರೂಪ್ ಫೋಟೊ ತಂದ ಹಿಗ್ಗು
ಗುರುಕುಲ ಎಂಬ ಇದರ ಹೆಸರೇ ವಿಶಿಷ್ಟ, ಅನನ್ಯ. ಏಕೆಂದರೆ ಪುರಾಣಗಳಲ್ಲಿ ಮತ್ತು ಚಂದ ಮಾಮ ಕಥೆಗಳಲ್ಲಷ್ಟೇ ಗುರುಕುಲಗಳು ಇರುತ್ತಿದ್ದದ್ದು. ಈಗಿನ ಕಾಲದ ಶಿಕ್ಷಣ ಪದ್ಧತಿಯನ್ನ ನುಸರಿಸುವ, ಕನ್ನಡಮಾಧ್ಯಮದ ಸಾಮಾನ್ಯ ಅನುದಾನಿತ ಶಾಲೆಯೊಂದರ ಹೆಸರೇ ಗುರುಕುಲ ಎಂದು ಇರುವುದು- ನನಗೆ ತಿಳಿದ ಮಟ್ಟಿಗಂತೂ- ಅಪರೂಪ. ಅಂಥದೊಂದು ಅಗ್ಗಳಿಕೆ ನಮ್ಮ ಶಾಲೆಯದು.


ತಿಳಿರುತೋರಣ
ಅಮೃತ ಮಹೋತ್ಸವದ ಅರ್ಥಪೂರ್ಣ ಸಂಭ್ರಮದಲ್ಲಿದೆ ನನ್ನ ಹುಟ್ಟೂರಿನ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ. 75 ಸಾರ್ಥಕ ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಪ್ರಪಂಚವನ್ನೆದುರಿಸಲಿಕ್ಕೆ ಬೇಕಾದ ಅರಿವು-ಆತ್ಮವಿಶ್ವಾಸಗಳ ಭದ್ರ ಅಡಿಪಾಯ ಹಾಕಿ ಕೊಟ್ಟು ತಿದ್ದಿ-ತೀಡಿ ತಯಾರುಗೊಳಿಸಿದ ಒಂದು ಆದರ್ಶ ಶಿಕ್ಷಣ ಸಂಸ್ಥೆಯಿದು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಹಳ್ಳಿಯಲ್ಲಿ, ಪಶ್ಚಿಮ ಘಟ್ಟಗಳ ತಪ್ಪಲಿನ ಸುಂದರ ಪರಿಸರದಲ್ಲಿ ಕಂಗೊಳಿಸುತ್ತಿರುವ ಜ್ಞಾನದೇಗುಲ. ಗುರುಕುಲ ಎಂಬ ಇದರ ಹೆಸರೇ ವಿಶಿಷ್ಟ, ಅನನ್ಯ. ಏಕೆಂದರೆ ಪುರಾಣಗಳಲ್ಲಿ ಮತ್ತು ಚಂದಮಾಮ ಕಥೆಗಳಲ್ಲಷ್ಟೇ ಗುರುಕುಲಗಳು ಇರುತ್ತಿದ್ದದ್ದು. ಈಗಿನ ಕಾಲದ ಶಿಕ್ಷಣ ಪದ್ಧತಿಯನ್ನನುಸರಿಸುವ, ಕನ್ನಡ ಮಾಧ್ಯಮದ ಸಾಮಾನ್ಯ ಅನುದಾನಿತ ಶಾಲೆಯೊಂದರ ಹೆಸರೇ ಗುರುಕುಲ ಎಂದು ಇರು ವುದು- ನನಗೆ ತಿಳಿದ ಮಟ್ಟಿಗಂತೂ- ಅಪರೂಪ. ಅಂಥದೊಂದು ಅಗ್ಗಳಿಕೆ ನಮ್ಮ ಶಾಲೆ ಯದು.
ಅದಕ್ಕೆ ತಕ್ಕುದಾಗಿ ಒಬ್ಬರಲ್ಲ ಇಬ್ಬರು ಶಿಕ್ಷಕ/ಶಿಕ್ಷಕಿಯರಿಗೆ ರಾಷ್ಟ್ರಪ್ರಶಸ್ತಿಯ ಅತ್ಯುನ್ನತ ಗೌರವ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿದು ಸದಾ ಅಗ್ರೇಸರ. ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ಸಾಲುಸಾಲು ಪಾರಿತೋಷಕಗಳು. ನಾನು ಪ್ರಾಥಮಿಕ ವಿದ್ಯಾಭ್ಯಾಸದ 6ನೆಯ ಮತ್ತು 7ನೆಯ ತರಗತಿಗಳನ್ನು ಮಾತ್ರ ಈ ಶಾಲೆಯಲ್ಲಿ ಕಲಿತದ್ದು.
ಇದನ್ನೂ ಓದಿ: Srivathsa Joshi Column: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...
ಕಾರಣ ಒಂದನೆಯಿಂದ ಐದನೆಯವರೆಗೆ ನಮಗೆ ಮನೆಯ ಹತ್ತಿರದಲ್ಲೇ ಸ.ಕಿ.ಪ್ರಾ ಶಾಲೆ ಇತ್ತು. ಅದು ಏಕೋಪಾಧ್ಯಾಯ ಏಕಕೊಠಡಿಯ ಶಾಲೆ. ಒಂದೊಂದು ತರಗತಿಯಲ್ಲೂ ಒಂದು ಕೈಯ ಬೆರಳುಗಳಿಗಿಂತಲೂ ಕಡಿಮೆ ಸಂಖ್ಯೆಯ ಮಕ್ಕಳು. ಈಗಂತೂ ಆ ಶಾಲೆ ಶಾಶ್ವತವಾಗಿ ಮುಚ್ಚಿಹೋಗಿದೆ, ಕಟ್ಟಡ ಪಾಳುಬಿದ್ದಿದೆ. ಹಾಗಾಗಿ, ನಮ್ಮ ಪ್ರಾಥಮಿಕ ಶಾಲೆ ಎಂಬ ಪ್ರೀತ್ಯಭಿಮಾನಕ್ಕೆ ಈಗ ಭಾಜನವಾಗುವುದು ಏನಿದ್ದರೂ ಈ ಗುರುಕುಲ ಶಾಲೆಯೇ.
ಅಮೃತ ಮಹೋತ್ಸವದ ಮುಖ್ಯ ಸಮಾರಂಭವಿರುವುದು ಈ ವರ್ಷದ ಡಿಸೆಂಬರ್ 26, 27, 28ರಂದು. ಕ್ರಿಸ್ಮಸ್ ಮತ್ತು ಕ್ಯಾಲೆಂಡರ್ ವರ್ಷಾಂತ್ಯದ ರಜಾದಿನಗಳಾದ್ದರಿಂದ ದೂರ ದೇಶಗಳಲ್ಲಿರುವ ಹಳೆವಿದ್ಯಾರ್ಥಿಗಳಿಗೂ ಬರಲಿಕ್ಕೆ ಅನುಕೂಲವಾಗುತ್ತದೆಂದು ಈ ಏರ್ಪಾಡು. ಏಳು ದಶಕಗಳ ಕಾಲಾವಧಿಯಲ್ಲಿ, ಈ ಶಾಲೆಯಿಂದ ಶಿಕ್ಷಣ ಪಡೆದವರು, ಈಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಜಗದಗಲ ಹರಡಿದ್ದಾರೆ.

ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ಮಹಾಪ್ರಬಂಧಕರು, ಉದ್ಯಮಿಗಳು, ಕಲಾವಿದರು, ಶಿಕ್ಷಕರು, ವಿದ್ವಾಂಸರು, ಪುರೋಹಿತರು, ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂದು ಸಾಧಿಸಿದವರು, ಸಮಾಜಸೇವೆಯಲ್ಲಿ ಸಂತೃಪ್ತಿ ಕಂಡವರು, ಪ್ರಶಸ್ತಿಗಳಿಂದ ಪುರಸ್ಕೃತರಾದವರು... ಹೀಗೆ ವೃತ್ತಿವೈವಿಧ್ಯವಿದ್ದರೂ “ನಾನು ಗುರುಕುಲ ಶಾಲೆಯಲ್ಲಿ ಕಲಿತವನು/ಳು" ಎಂದು ಎದೆಯುಬ್ಬಿಸಿ ಹೇಳುವವರಿದ್ದಾರೆ.
ಇವರೆಲ್ಲರೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು, ಶಾಲಾದಿನಗಳನ್ನು ನೆನೆದು ಪುಳಕಿತ ರಾಗಬೇಕು, ಉತ್ಸವಕ್ಕೆ ಕಳೆಯೇರಬೇಕು ಎಂಬ ಆಶಯ. ತಯಾರಿಗಳು ದೊಡ್ಡ ಮಟ್ಟದಲ್ಲೇ ಆರಂಭವಾಗಿವೆ. ವಿವಿಧ ಸಮಿತಿಗಳ ರಚನೆಯಾಗಿದೆ. ಈಹಿಂದೆ ಗುರುಕುಲದ ಮುಖ್ಯೋ ಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ, ಈಗ ನಮ್ಮನ್ನಗಲಿರುವ ಮೂವರು ಗುರುವರೇಣ್ಯರ ಸ್ಮರಣಾರ್ಥ ಸುಸಜ್ಜಿತ ಸಭಾಭವನವೊಂದರ ನಿರ್ಮಾಣಕ್ಕೆ ಚಾಲನೆ ದೊರೆತಿದೆ; ಉತ್ಸವದ ವೇಳೆಗೆ ಅದು ಸಜ್ಜಾಗಲಿದೆ.
ಬೇಸಗೆ ರಜೆಯ ‘ಅಮೃತಶಿಬಿರ’ದಲ್ಲಿ ಮಕ್ಕಳಿಗೆ ವಿವಿಧ ಕರಕುಶಲ ಕಲೆ, ಪ್ರಾಣಾಯಾಮ, ಯೋಗಾಭ್ಯಾಸ, ಭಗವದ್ಗೀತೆ, ವೇದಗಣಿತ ಇತ್ಯಾದಿ ವಿವಿಧ ಕಲಿಕೆ ಚಟುವಟಿಕೆಗಳು ನಡೆ ದಿವೆ. ವರ್ಷದುದ್ದಕ್ಕೂ ಅಂತರಶಾಲಾ ಸ್ಪರ್ಧೆಗಳು, ಪ್ರತಿಭಾಪ್ರದರ್ಶನಗಳು ಆಯೋಜನೆ ಯಾಗಿವೆ. ಒಟ್ಟಿನಲ್ಲಿ ವಿಶೇಷವಾದೊಂದು ಹಬ್ಬದ ವಾತಾವರಣ ಹಬ್ಬ ತೊಡಗಿದೆ.

ಶಿಕ್ಷಣ ಸಂಸ್ಥೆಯೊಂದರ ಸುದೀರ್ಘ ಪಯಣದಲ್ಲಿ ಇಂಥದೊಂದು ಪ್ರಮುಖ ಮೈಲಿಗಲ್ಲೆಂದ ಮೇಲೆ ಒಂದು ಸ್ಮರಣ ಸಂಚಿಕೆಯೂ ಇರಲೇಬೇಕಲ್ಲವೇ! ಹೌದು, ಅದಕ್ಕೂ ಓನಾಮ ಬರೆದಾಗಿದೆ. ಗುರುಕುಲ ಶಾಲೆಯ ಬಗೆಗಿನ ಸವಿಸವಿ ನೆನಪು ಸಾವಿರ ನೆನಪುಗಳನ್ನು ಅಕ್ಷರ ರೂಪಕ್ಕಿಳಿಸಿ ಕಳುಹಿಸುವಂತೆ ಪ್ರಕಟಣೆ ಹೊರಟಿದೆ.
ಜತೆಯಲ್ಲೇ ಸಂಪಾದಕೀಯ ಮಂಡಲಿಯಲ್ಲಿರುವವರಿಗೆ ಒಂದು ಭಲೇ ಐಡಿಯಾ ಹೊಳೆ ದಿದೆ. ಏನೆಂದರೆ, ಗುರುಕುಲ ಶಾಲೆಯಿಂದ ಏಳನೇ ತರಗತಿ ಉತ್ತೀರ್ಣರಾಗಿ ವಿದ್ಯಾರ್ಥಿಗಳು ಹೊರಬರಲಾರಂಭಿಸಿದ ವರ್ಷದಿಂದ ಆರಂಭಿಸಿ ಪ್ರತಿವರ್ಷದ ವಿದ್ಯಾರ್ಥಿಗಳ ಗ್ರೂಪ್ ಫೋಟೊ ಸಂಗ್ರಹಿಸಿ ಸ್ಮರಣಸಂಚಿಕೆಯಲ್ಲಿ ಪ್ರಕಟಿಸುವುದು.
ಅಷ್ಟೇಅಲ್ಲ, ಅವರೆಲ್ಲರ ಹೆಸರು, ಈಗ ಎಲ್ಲಿದ್ದಾರೆ ಏನು ಮಾಡಿಕೊಂಡು ಇದ್ದಾರೆ ಎಂಬಿ ತ್ಯಾದಿ ಲಭ್ಯವಾದಷ್ಟು ವಿವರಗಳನ್ನೂ ಸೇರಿಸುವುದು. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಆರಂಭದ ವರ್ಷಗಳಲ್ಲಿ ಹಾಗೊಂದು ಗ್ರೂಪ್ ಫೋಟೊ ಕ್ರಮವೇ ಇರಲಿಲ್ಲ ವೇನೊ. ಫೋಟೊ ಕ್ಲಿಕ್ಕಿಸುವುದೆಂದರೆ ಈಗಿನಂತೆ ಸಸಾರವಿರಲಿಲ್ಲವಲ್ಲ!
ಕಾರ್ಕಳ ಪೇಟೆಯಲ್ಲಿದ್ದ ಸ್ಟುಡಿಯೋದವರನ್ನು ಕರೆಸಬೇಕು, ಅವರ ಮರ್ಜಿಯ ಮೇರೆಗೆ ಅವರು ಬರಬೇಕು, ಫೋಟೊ ಪ್ರತಿಗಳನ್ನು ಸಂಗ್ರಹಿಸಲಿಕ್ಕೆ ಅವರ ಹಿಂದೆ ಬೀಳಬೇಕು, ಮುಖ್ಯೋಪಾಧ್ಯಾಯರೇ ಆ ಕೆಲಸ ಮಾಡಬೇಕು. ‘ಫೋಟೊ ಬೇಕಾಗಿಲ್ಲ, ಅದೊಂದು ಲಕ್ಷುರಿ ಯಾವುದಕ್ಕೆ?’ ಎಂದು ನಿರಾಕರಿಸುತ್ತಿದ್ದ ಕೆಳಮಧ್ಯಮವರ್ಗದ ಪೋಷಕರು; ಉಚಿತವಾಗಿ ಕೊಡುತ್ತೇವೆಂದರೂ ಬೇಡವೆನ್ನುವವರು.
ಫೋಟೊ ಬಗ್ಗೆ ಅನಾದರಕ್ಕೆ ಕಾರಣವೂ ಇಲ್ಲದಿಲ್ಲ. ನಮ್ಮೂರಿನ ಹವಾಗುಣ, ಮುಖ್ಯವಾಗಿ ಮಳೆಗಾಲದಲ್ಲಿನ ತೀವ್ರ ಥಂಡಿ. ಎಂಥ ಫ್ರೇಮ್ ಹಾಕಿಟ್ಟರೂ ಫೋಟೊ ಒಂದೆರಡು ವರ್ಷ ದೊಳಗೆ ಹಾಳಾಗಿ ಅದರಲ್ಲಿರುವವರು ಯಾರೆಂದು ಗೊತ್ತಾಗದಷ್ಟು ವಿರೂಪ. ಅಂಥ ಫೋಟೊ ಸಿಕ್ಕಿದರೂ ಪ್ರಯೋಜನವಿಲ್ಲ. ಆದರೂ ಸಂಪಾದಕೀಯ ಮಂಡಲಿಯ ಕೋರಿಕೆ ಗೆ ಒಳ್ಳೆಯ ಸ್ಪಂದನ ಸಿಕ್ಕಿತು.
ಒಂದೊಂದು ವರ್ಷದ ಫೋಟೊ ಮತ್ತು ವಿದ್ಯಾರ್ಥಿಗಳ ಇಂದಿನ ವಿವರಗಳನ್ನು ಸಂಗ್ರಹಿ ಸುವ ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಂಡರು. ಅದಕ್ಕೆಂದೇ ಪ್ರತ್ಯೇಕ ವಾಟ್ಸ್ಯಾಪ್ ಗ್ರೂಪ್ ಮಾಡಿಕೊಂಡರು. ಪಾತಾಳಗರಡಿ ಬಳಸಿ ಉತ್ಖನನ ಶುರುವಾಯಿತು. ಇದಿಷ್ಟು ಹಿನ್ನೆಲೆ. ಈಗಿನ್ನು ನಮ್ಮ ಏಳನೆಯ ತರಗತಿ ಬ್ಯಾಚನ್ನಷ್ಟೇ ಕೇಂದ್ರೀಕರಿಸಿ ಮುಂದುವರಿಸುತ್ತೇನೆ.
ಪ್ರಾತಿನಿಧಿಕವಾಗಿ ಎಂಬ ಕಾರಣಕ್ಕಷ್ಟೇ. ಏಕೆಂದರೆ ಬೇರೆ ಬ್ಯಾಚ್ ಗಳದೂ ಹೆಚ್ಚೂ ಕಡಿಮೆ ಇದೇ ಥರದ ರೋಮಾಂಚನ. ಅಷ್ಟೇಕೆ, ಒಂದುವೇಳೆ ನಿಮ್ಮ ಬಾಲ್ಯಕಾಲದ, ಪ್ರಾಥಮಿಕ ಶಾಲೆಯ ಸಹಪಾಠಿಗಳು ಮತ್ತು ಶಿಕ್ಷಕವೃಂದ ಇರುವ ಗ್ರೂಪ್ ಫೋಟೊ(ಅದೂ ಕಪ್ಪು ಬಿಳುಪಿನದು) ಈಗೊಮ್ಮೆ ಹಠಾತ್ತನೆ ನೋಡಲಿಕ್ಕೆ ಸಿಕ್ಕಿದರೆ ನಿಮ್ಮ ರೋಮಾಂಚನ ಸಂಭ್ರಮಗಳೂ, “ಓಹ್! ನಾನು ಹೀಗೆ ಕಾಣಿಸ್ತಿದ್ನಾ!", “ಇವಳು ನೋಡು ಹೇಗಿದ್ಳು ಆಗ!", “ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ!" ರೀತಿಯ ದ್ಗಾರಗಳೂ, “ಛೇ! ಅವಳು ಈಗ ಇಲ್ಲವಂತೆ ಎಳೆಪ್ರಾಯದಲ್ಲೇ ತೀರಿಹೋದ್ಳಂತೆ..." ರೀತಿಯ ವಿಷಾದಗಳೂ, “ಅಂದು ಈ ಮೇಷ್ಟ್ರ ಏಟು ತಿಂದಿದ್ದರಿಂದಲೇ ಇಂದು ನಾನು ಇಷ್ಟೊಳ್ಳೆಯ ಪ್ರಜೆ ಯಾಗಿದ್ದೇನೆ" ರೀತಿಯ ಕೃತಜ್ಞತೆಗಳೂ ಇದೇ ತೆರನಾಗಿ ಇರುತ್ತವೆ.
ಅಂಕಣಬರಹಕ್ಕೆ ಟಾಪಿಕ್ ಆಗಿ ನಾನಿದನ್ನು ಆಯ್ದುಕೊಂಡಿದ್ದಾದರೂ ಆ ಕಾರಣಕ್ಕೇ. ಅಂದಹಾಗೆ ಇಲ್ಲಿ ನನ್ನ ಸಹಪಾಠಿಗಳನ್ನು ಸಹಪಾಠಿಗಳೆಂಬ ಸಲುಗೆ ಮತ್ತು ಆತ್ಮೀಯತೆಯ ದೃಷ್ಟಿಯಿಂದ ಏಕವಚನದಲ್ಲಿ ಉಲ್ಲೇಖಿಸುವವನಿದ್ದೇನೆ (ಸಾಮಾನ್ಯವಾಗಿ ಬಹುವಚನ ಸಂಬೋಧನೆಯೇ ನನ್ನ ಪ್ರಾಶಸ್ತ್ಯವಾದರೂ). 1980-81ರ ಶೈಕ್ಷಣಿಕ ವರ್ಷದ ಬ್ಯಾಚ್ ನಮ್ಮದು. ವಿವರಸಂಗ್ರಹದ ಜವಾಬ್ದಾರಿ ಹೊತ್ತವನು ವಿಶ್ವನಾಥ ಗೋಖಲೆ. ಈತ ಮೂಲತಃ ನಮ್ಮೂರಿನವನಲ್ಲ, ಅಜ್ಜನಮನೆಯಲ್ಲಿದ್ದು 1 ರಿಂದ 7ನೆಯವರೆಗೆ ಗುರುಕುಲ ಶಾಲೆಯಲ್ಲಿ ಓದಿದವನು. 7ನೇ ಆದಮೇಲೆ ನಾನೂ ಅವನೂ ಬೇರೆಬೇರೆ ಹೈಸ್ಕೂಲ್‌ಗಳಿಗೆ ಹೋದೆ ವಾದರೂ ಪಿಯುಸಿಯಲ್ಲಿ ಉಜಿರೆಯ ಧ.ಮಂ. ಕಾಲೇಜಿನಲ್ಲಿ ಮತ್ತೊಮ್ಮೆ ಸಹಪಾಠಿ ಗಳಾಗಿದ್ದೆವು. ಅದಾದಮೇಲೆ ನಾನು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದಿದರೆ ವಿಶ್ವನಾಥ ಮೈಸೂರಿನಲ್ಲಿ ಮೆಡಿಕಲ್ ಓದಿ ಡಾ. ವಿಶ್ವನಾಥ ಗೋಖಲೆ ಆದನು. ಹುಬ್ಬಳ್ಳಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ನೇತ್ರತಜ್ಞನಾದನು.
ಸ್ವಲ್ಪಕಾಲ ಬೆಳ್ತಂಗಡಿಯಲ್ಲಿ ತನ್ನದೇ ಕ್ಲಿನಿಕ್ ನಡೆಸಿ ಮತ್ತೆ ಸ್ವಲ್ಪ ಕಾಲ ಮುಂಬಯಿಯ ನೇತ್ರವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಿ 2008ರಿಂದ ಕೆನ್ಯಾ ದೇಶದ ಮೊಂಬಾಸಾದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರತಜ್ಞನಾಗಿ ಸೇವೆಸಲ್ಲಿಸುತ್ತಿದ್ದಾನೆ. ಪತ್ನಿಯೂ ನೇತ್ರ ತಜ್ಞೆ, ಅದೇ ಆಸ್ಪತ್ರೆಯಲ್ಲಿ ಸೇವಾನಿರತೆ. ಕಗ್ಗತ್ತಲೆಯ ಖಂಡದ ಸಾವಿರಾರು ಬಡ ರೋಗಿ ಗಳಿಗೆ ಉಚಿತ ನೇತ್ರಚಿಕಿತ್ಸೆ ನಡೆಸಿ ಬೆಳಕುತೋರಿದ್ದಾರೆ ಈ ದಂಪತಿ. ಐದಾರು ವರ್ಷಗಳ ಹಿಂದೊಮ್ಮೆ ಒಬ್ಬ ಸಂಪೂರ್ಣ ಅಂಧ ಆಫ್ರಿಕನ್ ಹುಡುಗನಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ದೃಷ್ಟಿ ಬಂದಾಗಿನ ಆತನ ರೋಮಾಂಚನ, ಡಾ.ವಿಶ್ವನಾಥ್ ಆ ಹುಡುಗನ ಗಲ್ಲವನ್ನು ಮಿದುವಾಗಿ ತಟ್ಟಿ ಅಭಿನಂದಿಸಿದ ಅದ್ಭುತ ಕ್ಷಣದ ವಿಡಿಯೊವನ್ನು ನನ್ನೊಡನೆ ಹಂಚಿ ಕೊಂಡಿದ್ದ.
ಅಂಥ ವಿಶ್ವನಾಥ ನಮ್ಮ ಗ್ರೂಪ್ ಲೀಡರ್ ಆದದ್ದು ಖುಶಿಯಾಯ್ತು. ತರಗತಿಯಲ್ಲಿದ್ದವರ ಹೆಸರುಗಳು ನನಗೆ ನೆನಪಾದವಷ್ಟನ್ನು ಬರೆದು ಗ್ರೂಪಲ್ಲಿ ಹಾಕಿದೆ. ಒಂದೆರಡು ಹೆಸರು ಗಳನ್ನು ವಿಶ್ವನಾಥನೇ ನೆನಪಿಸಿದ್ದರಿಂದ ಒಟ್ಟು 21 ವಿದ್ಯಾರ್ಥಿಗಳಿದ್ದೆವೆಂಬ ನೆನಪು ತಾಜಾ ಆಯ್ತು. ಆದರೆ ಗ್ರೂಪ್ ಫೋಟೊ ನನ್ನಲ್ಲೂ ಇಲ್ಲ, ಅವನ ಬಳಿಯೂ ಇಲ್ಲ, ಯಾರಲ್ಲಿ ಸಿಗಬಹುದೆಂದು ಗೊತ್ತಿಲ್ಲ.
ಹೀಗಿರಲು ವಾಟ್ಸ್ಯಾಪ್ ಗ್ರೂಪಲ್ಲಿ ಒಂದುದಿನ ನಮ್ಮ ಬ್ಯಾಚ್ ನ ಗ್ರೂಪ್ ಫೋಟೊ ಧುತ್ತೆಂದು ಪ್ರತ್ಯಕ್ಷವಾಯಿತು! ಪೋಸ್ಟ್ ಮಾಡಿದವಳು ಲತಾ ಮರಾಠೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಮಂತ್ರಿಮಂಡಲದಲ್ಲಿ ಮುಖ್ಯಮಂತ್ರಿ ಆಗಿದ್ದವಳು. 1 ನೆಯಿಂದ 10ನೆಯ ವರೆಗೂ ಅದದೇ ಶಾಲೆಗಳಲ್ಲಿ ಓದಿದ್ದರಿಂದ ನನ್ನ ದೀರ್ಘಕಾಲದ ಸಹಪಾಠಿ. ಆದರೆ ಹೈಸ್ಕೂಲ್ ಮುಗಿದ ಮೇಲೆ ಕಡಿದುಹೋಗಿದ್ದ ಸಂಪರ್ಕ ಮರುಸ್ಥಾಪನೆಯಾದದ್ದು ನಾಲ್ಕು ವರ್ಷಗಳ ಹಿಂದೆ ಗೀತಾಪರಿವಾರದಲ್ಲಿ ಆನ್‌ಲೈನ್‌ನಲ್ಲಿ ಭಗವದ್ಗೀತೆ ಕಲಿಕೆಯ ದೆಸೆ ಯಿಂದ.
ಮದುವೆಯಾಗಿ ಸೋಂದಾ ವಾದಿರಾಜ ಮಠಕ್ಕೆ ಸಮೀಪದ ಪರಾಂಜಪೆ ಕುಟುಂಬವನ್ನು ಸೇರಿದ ಲತಾ ಮುಗ್ಧಮನಸ್ಸಿನ ಓರ್ವ ಸದ್ಗೃಹಿಣಿ; ಬೆಂಗಳೂರಲ್ಲಿರುವ ಮಗ-ಸೊಸೆ ಮುದ್ದಾದ ಮಗುವಿಗೆ ಜನ್ಮವಿತ್ತಿರುವುದರಿಂದ ಈಗ ಅಜ್ಜಿ! (ಸಹಪಾಠಿಗಳು ಹಾಗೆ ತಮಾಷೆ ಮಾಡಬಹುದು ಎಂದುಕೊಂಡಿದ್ದೇನೆ). ಗ್ರೂಪ್ ಫೋಟೊ ಹೇಗೆ ಸಿಕ್ಕಿತೆಂಬ ವಿವರವನ್ನು ಲತಾ ನನಗೊಂದು ವಾಯ್ಸ್‌ಮೆಸೇಜಿನಲ್ಲಿ ತಿಳಿಸಿದಳು: “ಇದನ್ನು ಜತನದಿಂದ ಕಾಯ್ದ ಶ್ರೇಯ ನನ್ನ ದಿವಂಗತ ತಂದೆಗೆ ಸಲ್ಲಬೇಕು. ಪ್ರತಿವರ್ಷ ಮಳೆಗಾಲಕ್ಕೆ ಮುನ್ನ ಫೋಟೊ ಗಳನ್ನೆಲ್ಲ ಗೋಡೆಯಿಂದ ತೆಗೆದು ಒರೆಸಿ ಬಟ್ಟೆ ಸುತ್ತಿ ಪೆಟ್ಟಿಗೆಯೊಳಗೆ ಇಡುತ್ತಿದ್ದರು.
ಮಳೆಗಾಲ ಮುಗಿದ ಮೇಲೆ ಹೊರ ತೆಗೆದು ಗೋಡೆಗೇರಿಸುತ್ತಿದ್ದರು. ಸಾಯುವತನಕ ಇದನ್ನವರು ನಿಷ್ಠೆಯಿಂದ ಮಾಡಿದ್ದಾರೆ. ಈಗ ಊರಲ್ಲಿ ನಮ್ಮ ಮನೆಯಲ್ಲಿ ಅಪ್ಪನೂ ಇಲ್ಲ, ಅಮ್ಮ ಅವರಿಗಿಂತಲೂ ಮೊದಲೇ ನಿಧನರಾಗಿದ್ದಾರೆ. ಮನೆಗೆ ಬೀಗ. ಬೆಂಗಳೂರ ಲ್ಲಿರುವ ತಮ್ಮ ಆಗೊಮ್ಮೆ ಈಗೊಮ್ಮೆ ಆ ಮನೆಗೆ ಹೋಗಿ ಬರುತ್ತಾನೆ.
ಬೀಗದಕೈ ಪಕ್ಕದ್ಮನೆಯವರತ್ರ ಇದೆ. ನಿನ್ನೆ ಆ ಮನೆಯ ಹುಡುಗನಿಗೆ ಫೋನ್ ಮಾಡಿ ಬೀಗ ತೆಗೆದು ಒಳಗೆ ಹೋಗಿ ಫೋಟೊ ಇಂಥ ಜಾಗದಲ್ಲಿ ಇರಬಹುದು, ಅದರಲ್ಲಿ 44 ವರ್ಷ ಹಿಂದಿನ ನನ್ನನ್ನು ನೀನು ಗುರುತಿಸಲೂಬಹುದು, ಸಿಕ್ಕಿದರೆ ಮೊಬೈಲ್‌ನಲ್ಲಿ ಅದರ ದೊಂದು ಫೋಟೊ ಕ್ಲಿಕ್ಕಿಸಿ ನನಗೆ ವಾಟ್ಸ್ಯಾಪ್ ಮಾಡು ಎಂದು ಹೇಳಿದೆ. ಶ್ರದ್ಧೆಯಿಂದ ಮಾಡಿಕೊಟ್ಟಿದ್ದಾನೆ" ಎನ್ನುವಾಗ ಲತಾಳ ಧ್ವನಿ ಗದ್ಗದಿತವಾಗಿತ್ತು.
ಸರಿ, ಗ್ರೂಪ್ ಫೋಟೊ ಕಾಣಿಸಿಕೊಂಡಾಗ ವಾಟ್ಸ್ಯಾಪ್ ಗ್ರೂಪಲ್ಲೂ ಸ್ವಲ್ಪ ಸಂಚಲನ ವಾಯ್ತು. ಒಬ್ಬರನ್ನೊಬ್ಬರು ಗುರುತಿಸುವುದು ನೆನಪಿಸಿಕೊಳ್ಳುವುದು ನಡೆಯಿತು. “7ನೇ ಮುಗಿದ ಮೇಲೆ ಈಗಿನವರೆಗಿನ ನಿಮ್ಮ ಜೀವನದ ಪ್ರಮುಖಘಟ್ಟಗಳನ್ನು ಸಂಕ್ಷಿಪ್ತವಾಗಿ ತಿಳಿಸುವಿರಾ?" ಎಂಬ ನನ್ನ ಕೋರಿಕೆಗೆ ಕೆಲವರು ಸ್ಪಂದಿಸಿದರು. “7ನೇ ಆದ ಮೇಲೆ ಶಿಕ್ಷಣ ಮುಂದುವರಿಸಲಿಲ್ಲ. ಹೋಟೆಲುಗಳಲ್ಲಿ ದುಡಿದೆ. ಆಫ್ರಿಕಾದ ಟ್ಯುನಿಸಿಯಾದಲ್ಲೂ 5 ವರ್ಷ ಕೆಲಸ ಮಾಡಿದೆ.
ಈಗ ಮುಂಬೈಗೆ ಹತ್ತಿರದ ಒಂದು ಸ್ಥಳದಲ್ಲಿದ್ದೇನೆ. ಒಬ್ಬ ಮಗ ಎನಿಮೇಷನ್ ಫೀಲ್ಡಲ್ಲಿ ಕೆಲಸ ಮಾಡ್ತಿದ್ದಾನೆ, ಇನ್ನೊಬ್ಬನದು ಸ್ವಂತ ಕಾಫಿಶಾಪ್ ಇದೆ" ಎಂದು ಶೇಖರ ಶೆಟ್ಟಿ ಬರೆದರೆ “ಹೈಸ್ಕೂಲ್, ಪಿಯುಸಿ ಓದಿನ ಬಳಿಕ ಟೀಚರ್ಸ್ ಟ್ರೈನಿಂಗ್ ಮತ್ತು ಕೌನ್ಸೆಲಿಂಗ್‌ನ ಪದವಿಶಿಕ್ಷಣ ಪಡೆದೆ. ಮದುವೆಯಾಗದಿರಲು ನಿರ್ಧರಿಸಿ ಮನುಕುಲದ ಸೇವೆಯ ಮೂಲಕ ದೇವನ ಸೇವೆಗೆ ನನ್ನ ಬದುಕನ್ನು ಮುಡಿಪಾಗಿಟ್ಟಿದ್ದೇನೆ.
ಕೇರಳ, ಆಂಧ್ರಪ್ರದೇಶ, ಪಶ್ಚಿಮ ಆಫ್ರಿಕಾದ ಮೌರಿಟೆನಿಯಾದಲ್ಲಿ ಸೇವೆ ಸಲ್ಲಿಸಿ ಈಗ ನಾನು ಪ್ಯಾರಿಸ್‌ನಲ್ಲಿ ನನ್ ಆಗಿದ್ದೇನೆ" ಎಂದು ಡೈಸಿ ಮೇರಿಯಾ ಬರೆದಳು. ಹಾಗೆಯೇ, “ಕಾರ್ಕಳ ದಲ್ಲಿ ಪಿಯುಸಿ ಮತ್ತು ಪದವಿಶಿಕ್ಷಣ ಮುಗಿಸಿ, ಕರ್ನಾಟಕ ವಿವಿಯಿಂದ ವಾಣಿಜ್ಯಶಾಸ್ತ್ರ ಮತ್ತು ಮನಃಶಾಸ್ತ್ರದಲ್ಲಿ, ಮೈಸೂರು ವಿವಿಯಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪತಿಯ ಪ್ರೋತ್ಸಾಹದಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೀಚಡಿ ಎಂಬ ಹಳ್ಳಿಯಲ್ಲಿ ಶ್ರೀವಾಗ್ದೇವಿ ಸಂಗೀತಶಾಲೆ ನಡೆಸುತ್ತಿದ್ದೇನೆ" ಎಂಬ ಅಪ್ಡೇಟ್ ಬರೆದಳು ಮಂಗಲಾ ಡೋಂಗ್ರೆ. ಇನ್ನು, ವಿಶ್ವಾಸ್ ಜೋಶಿ ಕೋಲಾರದಲ್ಲಿ ದೊಡ್ಡದೊಡ್ಡ ಲಾಡ್ಜ್ ಗಳ ಮಾಲೀಕನಾಗಿದ್ದಾನೆ, ಅಟೊಮೊಬೈಲ್ಸ್ ಡಿಪ್ಲೊಮಾ ಓದಿದ್ದ ಶ್ರೀನಿವಾಸ ಜೋಶಿ ಮಾರುತಿ ಉದ್ಯೋಗ್ ಲಿಮಿಟೆಡ್ ನಲ್ಲೂ ತರಬೇತಿ ಪಡೆದು ಮಾರುತಿ ಕಾರುಗಳ ಯಾವುದೇ ಮಾಡೆಲ್ ಆದರೂ ಒಳ-ಹೊರ ಅರಿತಿರುವ ನುರಿತ ತಂತ್ರಜ್ಞನಾಗಿದ್ದಾನೆ, ರಘುಪತಿ ಊರಲ್ಲೇ ಇದ್ದು ಕೃಷಿ ಕಸುಬಿನ ಜತೆಗೇ ನೂರಾರು ಮನೆಗಳಿಗೆ ಅಸ್ತ್ರ-ಒಲೆ ಸ್ಥಾಪನೆ ಮತ್ತು ನಿರ್ವಹಣೆಯ ಸೇವೆ ಒದಗಿಸಿ ಇಂಧನ ಉಳಿತಾಯದ ದಾರಿತೋರಿಸಿದ್ದಾನೆ,
ಪ್ರಭಾಕರ ಗೌಡ ಸಹ ಒಬ್ಬ ಅನುಭವಸ್ಥ ಕೃಷಿಕನಾಗಿದ್ದಾನೆ... ಎಂದು ಕೆಲವು ಸಹಪಾಠಿಗಳ ಬಗೆಗೆ ಅವರಿವರಿಂದ ಕೇಳಿ ಗೊತ್ತು. ಹೀಗೆ ಬದುಕಿನಲ್ಲಿ ಯಥಾಯೋಗ್ಯವಾಗಿ ಮುಂದೆ ಬಂದವವರನ್ನು ಏಳನೇ ತರಗತಿಯ ಗ್ರೂಪ್ ಫೋಟೊದಲ್ಲಿ ರೆಟ್ರೊಸ್ಪೆಕ್ಟಿವ್ ನೋಟದಲ್ಲಿ ನೋಡುವಾಗ, ವಿಶೇಷವಾಗಿ ಆಗಿನ ನಮ್ಮ ಚೇಷ್ಟೆಗಳನ್ನು ಮಕ್ಕಳಾಟಗಳನ್ನು ವಿವಿಧ ರಂಗುಗಳ ಪೋಕರಿ ತುಂಟತನಗಳನ್ನು ನೆನಪಿಸಿಕೊಂಡಾಗ ಆಗುವ ಅನುಭವ ವರ್ಣನಾ ತೀತ.
ಅದಕ್ಕಿಂತಲೂ ಬೆರಗುಂಟಾಗುವುದು ಕಲ್ಲುಬಂಡೆಗಳಿಂದ ಸುಂದರ ಶಿಲ್ಪಗಳನ್ನು, ಆವೆಮಣ್ಣಿ ನಿಂದ ಚಂದದ ಮಡಕೆಗಳನ್ನು ನಿರ್ಮಿಸಿ ವರ್ಷವರ್ಷವೂ ಪ್ರಪಂಚಕ್ಕೆ ಪೂರೈಸುವ ಗುರುವರೇಣ್ಯರನ್ನು ಇಂಥ ಹಳೆಯ ಫೋಟೊಗಳಲ್ಲಿ ನೋಡಿದಾಗ. ನಮಗಾಗಿ ಅವರ ಅವಿರತ ಶ್ರಮವನ್ನು ಈಗ ಅರ್ಥಮಾಡಿಕೊಂಡಾಗ. ನಮ್ಮ ಬ್ಯಾಚ್‌ನ ಫೋಟೊ ದಲ್ಲಿ ಅಂಥವರು ಏಳು ಮಂದಿ. ವಸಂತಿ ಟೀಚರ್ ನಮಗೆ ಆರನೆಯಲ್ಲಿ ಕನ್ನಡಕ್ಕಿದ್ದವರು.
“ಶ್ರೀವಾಗ್ದೇವಿಗೆ ಶಬ್ದದಿ ನಾವಾವಿಂದ್ರಿಯದ ವಿಷಯಮಂ..." ಕೇಶಿರಾಜನ ಉಕ್ತಿಯಿಂದಲೇ ಪ್ರತಿದಿನದ ಕನ್ನಡ ತರಗತಿ ಆರಂಭಿಸುತ್ತಿದ್ದವರು. ಕನ್ನಡದ ಕಂಪನ್ನು ಕಿವಿಗಳಲ್ಲಿ ತುಂಬು ತ್ತಿದ್ದವರು. ಮುಂದೆ ರಾಷ್ಟ್ರಪ್ರಶಸ್ತಿಯಿಂದ ಪುರಸ್ಕೃತರಾದವರು, ಅಕಾಲ ನಿಧನದಿಂದ ನಮ್ಮನ್ನಗಲಿದವರು. ನನ್ನ ಕನ್ನಡ ಬರವಣಿಗೆಯಲ್ಲಿ ಇಂದು ಅಷ್ಟಿಷ್ಟು ಸತ್ತ್ವವೇನಾದರೂ ಇದೆಯಾದರೆ ಅದರ ಎರಕ ವಸಂತಿ ಟೀಚರ್‌ರದು.
ರೋಸಿ ಟೀಚರ್ ನಮಗೆ ಪಾಠಕ್ಕಿರಲಿಲ್ಲ ಆದರೆ ಶಾಲೆಯಲ್ಲಿ ಚಿಕ್ಕ ತರಗತಿಗಳನ್ನು ದಕ್ಷತೆ ಯಿಂದ ನಿರ್ವಹಿಸುವವರೆಂಬ ಖ್ಯಾತಿ ಅವರದು. ವಾಮನ ಸರ್ ನಮಗೆ ಏಳನೆಯಲ್ಲಿ ಕನ್ನಡ ಮತ್ತು ಗಣಿತ ಕಲಿಸಿದವರು. ಮಾಸ್ತರರೆಂದರೆ ಏನೂ ಹೆದರಿಕೆ ಬೇಡ ಎಂಬ ಭಾವನೆಯಿದ್ದದ್ದು ಅವರ ಬಗ್ಗೆ ಮಾತ್ರ. ತದ್ವಿರುದ್ಧವಾಗಿ ಡಬಲ್ ಹೆದರಿಕೆ ಅಗತ್ಯವಿದ್ದದ್ದು ಶಿಸ್ತಿನ ಮತ್ತು ಸಿಟ್ಟಿನ ಮೂರ್ತರೂಪವಾಗಿದ್ದ ಮೂರ್ತಿಮೇಷ್ಟ್ರ ಬಗ್ಗೆ. ಅವರು ಗುರುಕುಲ ದ ಮುಖ್ಯೋಪಾಧ್ಯಾಯರು, ಏಳನೆಯಲ್ಲಿ ನಮಗೆ ಸಮಾಜ ಪಾಠ ಮಾಡಿದ್ದರು. ನಾರಾ ಯಣ ಸರ್ ಆರನೆಯಲ್ಲೂ ಏಳನೆಯಲ್ಲೂ ಇಂಗ್ಲಿಷ್ ಕಲಿಸಿದವರು.
ಅದಕ್ಕಿಂತ ಹೆಚ್ಚಾಗಿ ಜೀವನಮೌಲ್ಯಗಳನ್ನೂ ವ್ಯವಹಾರಜ್ಞಾನವನ್ನೂ ಬೋಧಿಸಿದವರು, ಈಗ ದಿವಂಗತರು. ಕೃಷ್ಣ ಸರ್ ಆರನೆಯಲ್ಲಿ ಗಣಿತ ಕಲಿಸಿದವರು. ನಾಗಭೂಷಣ ಸರ್ ವಿಜ್ಞಾನ ಮತ್ತು ಹಿಂದಿ ಕಲಿಸಿದವರು. ರಾಷ್ಟ್ರಪ್ರಶಸ್ತಿಯ ಕೀರ್ತಿಯನ್ನು ನಮ್ಮ ಶಾಲೆಗೆ ತಂದ ಮೊದಲಿಗರು. ಈಗ ಅಮೃತೋತ್ಸವದ ಬೃಹತ್ ಪರ್ವಕ್ಕೆ ಸರ್ವ ಅರ್ಹತೆಯಿಂದ ಗೌರವಾಧ್ಯಕ್ಷ ಆಗಿರುವವರು.
75 ವರ್ಷಗಳ ಹಿಂದೆ ನಮ್ಮೂರ ಹಿರಿಯರು ಆಧುನಿಕ ಶಿಕ್ಷಣ ಪದ್ಧತಿಯ ಶಾಲೆಯೊಂದರ ಅಗತ್ಯವನ್ನು ಕಂಡು, ಅಂಥದೊಂದು ಶಾಲೆಯನ್ನು ಸ್ಥಾಪಿಸಿ ಅದಕ್ಕೆ ಗುರುಕುಲ ಎಂದು ಹೆಸರಿಟ್ಟಾಗ ನಿಜವಾಗಿಯೂ ಇಂಥ ಗುರುರತ್ನಗಳು ಆ ಹೆಸರನ್ನು ಅನ್ವರ್ಥಗೊಳಿಸುತ್ತಾ ರೆಂಬ ಕಲ್ಪನೆ ಅವರಿಗಿತ್ತೋ ಇಲ್ಲವೋ. ಆದರೆ ಗುರುಕುಲದಲ್ಲಿ ಕಲಿತ ಪ್ರತಿಯೊಬ್ಬರ ಮನದಾಳದ ಮಾತು ಒಂದೇ: “ನಮ್ಮ ಗುರುಕುಲ, ನಮ್ಮ ಗುರುಗಳು... ಇವು ಸಮುದ್ರ ಮಥನದಲ್ಲಿ ಸಿಕ್ಕವುಗಳಿಗಿಂತಲೂ ಮಿಗಿಲಾದ ರತ್ನಗಳು!"