ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಪರೋಪಕಾರವೇ ಪರಮ ಧರ್ಮ: ವಿಕ್ರಮಾದಿತ್ಯನ ತ್ಯಾಗ

ಒಮ್ಮೆ ಉಜ್ಜಯಿನಿಯ ಮಹಾರಾಜ ವಿಕ್ರಮಾದಿತ್ಯನು ಎಂದಿನಂತೆ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ರಾತ್ರಿಯ ವೇಳೆ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟಿದ್ದನು. ನಗರದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಸಾಗುತ್ತಿದ್ದಾಗ, ದೂರದಂದು ಕಡೆಯಿಂದ ಕರುಣಾಜನಕ ವಾದ ಆಕ್ರಂದನ ಮತ್ತು ಅಳುವಿನ ಧ್ವನಿ ಅವನ ಕಿವಿಗೆ ಬಿತ್ತು.

ಪರೋಪಕಾರವೇ ಪರಮ ಧರ್ಮ: ವಿಕ್ರಮಾದಿತ್ಯನ ತ್ಯಾಗ

-

ಒಂದೊಳ್ಳೆ ಮಾತು

ಸಿಂಹಾಸನ ‘ದ್ವಾತ್ರಿಂಶಿಕಾ’ (ವಿಕ್ರಮ ಚರಿತ) ಕಥಾಕೋಶದಲ್ಲಿ ಮೊದಲ ಸಾಲಭಂಜಿಕೆ ರತ್ನಮಂಜರಿ ಯ ಕಥೆಯನ್ನು ಕೇಳಿದ ಭೋಜರಾಜನು, ಮರುದಿನ ಮತ್ತೆ ಶುಭ ಮುಹೂರ್ತದಲ್ಲಿ ವಿಕ್ರಮಾದಿತ್ಯ ನ ಸಿಂಹಾಸನ ವನ್ನೇರಲು ಎರಡನೇ ಮೆಟ್ಟಿಲಿನ ಮೇಲೆ ಕಾಲಿಡುತ್ತಾನೆ. ಆಗ ಎರಡನೇ ಸಾಲಭಂಜಿಕೆಯಾದ ‘ಚಿತ್ರಲೇಖಾ’ ಜೀವ ತಳೆದು, ರಾಜನ್, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಇತರರ ಸಂಕಷ್ಟವನ್ನು ನೀಗಿಸುವ ನಿಸ್ವಾರ್ಥ ತ್ಯಾಗಬುದ್ಧಿ ನಿನ್ನಲ್ಲಿದ್ದರೆ ಮಾತ್ರ ಮುಂದೆ ಹೆಜ್ಜೆ ಇಡು ಎಂದು ಹೇಳಿ ವಿಕ್ರಮಾದಿತ್ಯನ ಈ ರೋಚಕ ಕಥೆಯನ್ನು ವಿವರಿಸುತ್ತಾಳೆ.

ಒಮ್ಮೆ ಉಜ್ಜಯಿನಿಯ ಮಹಾರಾಜ ವಿಕ್ರಮಾದಿತ್ಯನು ಎಂದಿನಂತೆ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ರಾತ್ರಿಯ ವೇಳೆ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟಿದ್ದನು. ನಗರದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಸಾಗುತ್ತಿದ್ದಾಗ, ದೂರದಂದು ಕಡೆಯಿಂದ ಕರುಣಾಜನಕ ವಾದ ಆಕ್ರಂದನ ಮತ್ತು ಅಳುವಿನ ಧ್ವನಿ ಅವನ ಕಿವಿಗೆ ಬಿತ್ತು.

ಧ್ವನಿ ಬಂದ ದಿಕ್ಕಿನಲ್ಲಿ ವಿಕ್ರಮಾದಿತ್ಯನು ವೇಗ ವಾಗಿ ನಡೆದು ನೋಡಿದಾಗ, ಅಲ್ಲಿ ಒಬ್ಬ ಬ್ರಾಹ್ಮಣನು ತನ್ನ ಪತ್ನಿ ಮತ್ತು ಪುಟ್ಟ ಮಗುವಿ ನೊಂದಿಗೆ ಕುಳಿತು ಎದೆಬಡಿದುಕೊಂಡು ರೋಧಿಸುತ್ತಿರುವುದು ಕಂಡುಬಂತು. ಮಾರುವೇಷದಲ್ಲಿದ್ದ ರಾಜನು ಅವರ ಬಳಿಗೆ ಹೋಗಿ, ಸ್ವಾಮಿ, ಈ ನಡುರಾತ್ರಿಯಲ್ಲಿ ನೀವು ಹೀಗೆ ದುಃಖಿಸಲು ಕಾರಣವೇನು? ನನ್ನಿಂದ ಏನಾದರೂ ಸಹಾಯ ವಾಗುವುದಿದ್ದರೆ ತಿಳಿಸಿ ಎಂದು ಕೇಳಿದನು.

ಇದನ್ನೂ ಓದಿ: Roopa Gururaj Column: ಪ್ರತಿಫಲಾಪೇಕ್ಷೆಯಿಲ್ಲದ ದಾನವೇ ಶ್ರೇಷ್ಠ

ಆ ಬ್ರಾಹ್ಮಣನು ಕಣ್ಣೀರು ಒರೆಸಿಕೊಳ್ಳುತ್ತಾ ತನ್ನ ದುಃಖದ ಕಥೆಯನ್ನು ಹೇಳತೊಡಗಿದನು: ಅಯ್ಯಾ, ಈ ನಗರದ ಹೊರವಲಯದ ಬೆಟ್ಟದ ಗುಹೆಯಲ್ಲಿ ಭಯಂಕರವಾದ ಬ್ರಹ್ಮರಾಕ್ಷಸ ನೊಬ್ಬನು ವಾಸವಾಗಿzನೆ. ಅವನು ಪ್ರತಿದಿನ ನಗರಕ್ಕೆ ಬಂದು ಜನರನ್ನು ತಿಂದು ಪೀಡಿಸುತ್ತಿ ದ್ದನು. ಅವನ ಕ್ರೌರ್ಯವನ್ನು ತಡೆಯಲಾರದೆ ನಗರದ ಜನರೆಲ್ಲರೂ ಸೇರಿ, ದಿನಕ್ಕೊಬ್ಬರಂತೆ ಮನೆಗೊಬ್ಬರು ಅವನಿಗೆ ಆಹಾರವಾಗಿ ಹೋಗುವುದೆಂದು ಒಪ್ಪಂದ ಮಾಡಿಕೊಂಡಿದ್ದೇವೆ. ಇಂದು ನಮ್ಮ ಮನೆಯ ಸರದಿ ಬಂದಿದೆ.

ನನಗೆ ವಯಸ್ಸಾಗಿದೆ, ನನ್ನ ಹೆಂಡತಿ ಮತ್ತು ಪುಟ್ಟ ಮಗುವಿಗೆ ನಾನಿಲ್ಲದಿದ್ದರೆ ದಿಕ್ಕಿಲ್ಲ. ನಾನೇ ರಾಕ್ಷಸನಿಗೆ ಆಹಾರವಾಗಲು ಹೊರಟಿದ್ದೇನೆ, ಅದಕ್ಕಾಗಿಯೇ ನನ್ನ ಕುಟುಂಬ ರೋದಿಸುತ್ತಿದೆ ಎಂದನು. ಇದನ್ನು ಕೇಳಿದ ವಿಕ್ರಮಾದಿತ್ಯನ ಹೃದಯ ಕರಗಿತು. ತನ್ನ ರಾಜ್ಯದಲ್ಲಿ ಪ್ರಜೆಗಳಿಗೆ ಇಂತಹ ಭಯಾನಕ ಆಪತ್ತು ಎದುರಾಗಿರುವುದು ತನ್ನದೇ ಕರ್ತವ್ಯಲೋಪವೆಂದು ಅವನು ಭಾವಿಸಿದನು. ಅವನು ಬ್ರಾಹ್ಮಣನಿಗೆ ಧೈರ್ಯ ತುಂಬಿ, ಸ್ವಾಮಿ, ನೀವು ಚಿಂತಿಸಬೇಡಿ.

ನಿಮ್ಮ ಕುಟುಂಬಕ್ಕೆ ನಿಮ್ಮ ಅಗತ್ಯವಿದೆ. ಇಂದು ರಾಕ್ಷಸನಿಗೆ ಆಹಾರವಾಗಿ ನಿಮ್ಮ ಬದಲಿಗೆ ನಾನು ಹೋಗುತ್ತೇನೆ. ನೀವು ನಿರಾಳವಾಗಿ ಮನೆಗೆ ಮರಳಿ ಎಂದು ಹೇಳಿದನು. ಬ್ರಾಹ್ಮಣನು ಎಷ್ಟೇ ನಿರಾಕರಿಸಿದರೂ ವಿಕ್ರಮಾದಿತ್ಯನು ಒಪ್ಪದೆ, ಆ ಬ್ರಾಹ್ಮಣನ ಹೆಸರಿನಲ್ಲಿ ತಾನೇ ಆ ಬೆಟ್ಟದ ಗುಹೆ ಯತ್ತ ನಡೆದನು. ಗುಹೆಯ ಬಾಗಿಲಲ್ಲಿ ಹಸಿದು ಕುಳಿತಿದ್ದ ಭಯಂಕರ ಬ್ರಹ್ಮರಾಕ್ಷಸನು, ತನ್ನತ್ತ ನಿರ್ಭಯ ವಾಗಿ ನಡೆದು ಬರುತ್ತಿದ್ದ ವಿಕ್ರಮಾದಿತ್ಯನನ್ನು ಕಂಡು ಆಶ್ಚರ್ಯಚಕಿತನಾದನು.

ಸಾಮಾನ್ಯವಾಗಿ ಜನರು ಅಳುತ್ತಾ, ನಡುಗುತ್ತಾ ಬರುತ್ತಿದ್ದರು; ಆದರೆ ಈ ವ್ಯಕ್ತಿ ಮುಖದಲ್ಲಿ ಮಂದಹಾಸ ದೊಂದಿಗೆ, ಕಿಂಚಿತ್ತೂ ಭಯವಿಲ್ಲದೆ ನಡೆದು ಬರುತ್ತಿರುವುದನ್ನು ಕಂಡು ರಾಕ್ಷಸನು, ನೀನು ಯಾರು? ಸಾವಿನ ದವಡೆಗೆ ಬರುತ್ತಿದ್ದರೂ ನಿನಗೆ ಭಯವೇ ಇಲ್ಲವೇ? ಎಂದು ಗರ್ಜಿಸಿದನು. ಆಗ ವಿಕ್ರಮಾದಿತ್ಯನು ಶಾಂತವಾಗಿ, ರಾಕ್ಷಸನೇ, ಬಡ ಬ್ರಾಹ್ಮಣನೊಬ್ಬನ ಕುಟುಂಬವನ್ನು ಉಳಿಸಲು ಅವನ ಬದಲಿಗೆ ನಾನು ನಿನ್ನ ಆಹಾರವಾಗಲು ಬಂದಿದ್ದೇನೆ.

ನನ್ನ ದೇಹವನ್ನು ತಿಂದು ನಿನ್ನ ಹಸಿವನ್ನು ನೀಗಿಸಿಕೋ ಎಂದನು. ವಿಕ್ರಮಾದಿತ್ಯನ ಈ ಅಸಾಧಾರಣ ಧೈರ್ಯ ಮತ್ತು ಪರೋಪಕಾರ ಬುದ್ಧಿಯನ್ನು ಕಂಡು ಬ್ರಹ್ಮರಾಕ್ಷಸನ ಕಠಿಣ ಹೃದಯವೂ ಕರಗಿತು! ಅವನು ವಿಕ್ರಮಾದಿತ್ಯನಿಗೆ ತಲೆಬಾಗಿ, ಮಹಾತ್ಮಾ, ಇಂತಹ ತ್ಯಾಗಮೂರ್ತಿ ಯನ್ನು ನನ್ನ ಜನ್ಮದ ಕಂಡಿಲ್ಲ. ನಾನು ನಿನ್ನನ್ನು ತಿನ್ನುವುದಿಲ್ಲ; ಬದಲಾಗಿ ನಿನಗೆ ಏನು ವರ ಬೇಕೋ ಕೇಳು ಎಂದನು. ವಿಕ್ರಮಾದಿತ್ಯನು ತನಗಾಗಿ ಏನನ್ನೂ ಕೇಳದೆ, ನೀನು ಇನ್ನು ಮುಂದೆ ಈ ನಗರದ ಯಾವೊಬ್ಬ ಪ್ರಜೆಯನ್ನೂ ಹಿಂಸಿಸಬಾರದು, ಇದೇ ನನಗೆ ನೀನು ನೀಡುವ ದೊಡ್ಡ ವರ ಎಂದು ವಚನ ಪಡೆದನು.

ರಾಕ್ಷಸನು ಅದಕ್ಕೆ ಒಪ್ಪಿ ಅರಣ್ಯಕ್ಕೆ ತೆರಳಿದನು. ವಿಕ್ರಮಾದಿತ್ಯನು ಯಾರಿಗೂ ವಿಷಯ ತಿಳಿಸದೆ ಮೌನವಾಗಿ ಅರಮನೆಗೆ ಮರಳಿದ. ಸಂಸ್ಕೃತದ ಸುಭಾಷಿತ ಹೇಳುವಂತೆ ‘ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪ ಕಾರಾಯ ದುಹಂತಿ ಗಾವಃ ಪರೋಪಕಾರಾರ್ಥ ಮಿದಂ ಶರೀರಮ’ ಮರಗಳು ಹಣ್ಣು ಬಿಡು ವುದು, ನದಿಗಳು ಹರಿಯುವುದು, ಹಸುಗಳು ಹಾಲು ನೀಡುವುದು ಪರೋಪಕಾರಕ್ಕಾಗಿಯೇ; ಅಂತೆಯೇ ನಮ್ಮ ಈ ಶರೀರವೂ ಇತರರ ಒಳಿತಿಗಾಗಿ ಸವೆದಾಗಲೇ ಜೀವನ ಸಾರ್ಥಕವಾಗುತ್ತದೆ. ಮನುಷ್ಯರಾಗಿ ಹುಟ್ಟಿದ ಮೇಲೆ ಮತ್ತೊಬ್ಬ ರಿಗೆ ನೆರವಾಗುವುದು ಮಾನವೀಯ ಧರ್ಮ ಇದು ನಮಗೆ ತಿಳಿದಿರಲಿ.