ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

ಕೆಲ ಕ್ಷಣದ ನಂತರ ‘ಬುದ್ಧೀ.... ನನ್ನಪ್ಪಾ...’ ಅಂತ ದೂರದಿಂದ ಅದ್ಯಾರೋ ಕರೆದಂತಾಯಿತು. ಅದು ‘ಅಪರಿಚಿತವಾಗಿದ್ದರೂ ಪರಿಚಿತ’ ಎನಿಸುವ ಬಾಲೆಯೊಬ್ಬಳ ದಿವ್ಯದನಿ. ಅದು ಶಾರದೆಯದ್ದು! ಗುರುಪೂರ್ಣಿಮೆಯ ದಿನದಂದು ‘ಗುರುಸೂತ್ರ’ದ ಪ್ರಭಾವವು ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ತೀವ್ರವಾಗಿರುತ್ತದೆ ಎಂಬ ಅನುಪಮ ಮಾಹಿತಿಯನ್ನು ಅದೆಲ್ಲಿಂದಲೋ ದಕ್ಕಿಸಿಕೊಂಡಿದ್ದ ಜಾಣೆ ಶಾರದೆ, ದೂರದಲ್ಲಿದ್ದು ಕೊಂಡೇ ನನ್ನೊಡನೆ ಸಂವಹಿಸಲು ಗುರುಪೂರ್ಣಿಮೆಯ ದಿನವನ್ನೇ ಆಯ್ದುಕೊಂಡಿದ್ದಳು!

Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

ರಸದೌತಣ

naadigru@gmail.com

(ಭಾಗ-10)

ಹೊಳೆದಂಡೆಯಲ್ಲಿ ಕುಳಿತಿದ್ದ ಶಿಷ್ಯರು ಮೇಲ್ನೋಟಕ್ಕೆ ಉಪ್ಪಿಟ್ಟನ್ನು ಸವಿಯುತ್ತಿದ್ದರೂ, ಅವರೆಲ್ಲರ ಮನದ ನೌಕೆಗಳು ಬೇರಾವುದೋ ಭಾವಸಾಗರದಲ್ಲಿ ವಿಹರಿಸುತ್ತಿದ್ದವು. ವಿದ್ಯಾರ್ಥಿ ನಿಲಯಕ್ಕೆ ಅನಿವಾರ್ಯವಾಗಿ ಮರಳಲೇಬೇಕಿದ್ದ ಶಾರದೆಯನ್ನು ಬೀಳ್ಕೊಡುವಾಗ ಅವಳ ತಾಯಿ ನಡೆದುಕೊಂಡ ರೀತಿ ಈ ಭಾವವಿಹಾರಕ್ಕೆ ಕಾರಣವಾಗಿತ್ತು. ನಿಜಸಂಗತಿ ಅರಿಯದ ಆ ತಾಯಿ, ‘ಹೆತ್ತವರನ್ನು ಬಿಟ್ಟಿರಲಾಗದ್ದಕ್ಕೆ ಶಾರದೆ ಹೀಗೆ ರೋದಿಸುತ್ತಿದ್ದಾಳೆ’ ಎಂದುಕೊಂಡು ಅವಧೂತರ ಚಿತ್ರಪಟವನ್ನು ಮಗಳಿಗೆ ನೀಡಿದ್ದು ಶಿಷ್ಯರಿಗೆ ಸಾಮಾನ್ಯ ನಡೆಯಂತೆ ಕಂಡಿರಲಿಲ್ಲ. ‘ಅಮೂಲ್ಯ ರತ್ನ’ದಂತೆ ಆ ಚಿತ್ರಪಟವನ್ನು ತನ್ನ ಹಸುಬೆ ಚೀಲದಲ್ಲಿ ಕಾಪಿಟ್ಟುಕೊಂಡಿದ್ದ ಆಕೆ, ಶಾರದೆ ಎಂಬ ಮನೆಯ ‘ಅಮೂಲ್ಯರತ್ನ’ಕ್ಕೆ ಸಂಕಟ-ಸಂಕಷ್ಟ ಒದಗಿದಾಗ ಉಪಶಾಮಕವಾಗಿ ಒದಗಲೆಂದು ಅದನ್ನು ಹೀಗೆ ಹಸ್ತಾಂತರಿಸಿದಳೆಂದರೆ, ಆ ಮಮತಾಮಯಿ ತಾಯಿಯು ಅವಧೂತರ ಶಕ್ತಿಯಲ್ಲಿ ಅದಿನ್ನೆಷ್ಟರ ಮಟ್ಟಿಗೆ ವಿಶ್ವಾಸವಿಟ್ಟಿರಬೇಕು, ಆಕೆಯ ಹೃದಯದಲ್ಲಿ ಅವಧೂತರ ಬಗೆಗಿನ ಭಕ್ತಿ-ಭಾವ ಅದೆಷ್ಟು ಗಾಢವಾಗಿ ಕೆನೆಗಟ್ಟಿರಬೇಕು ಎಂಬೆಲ್ಲಾ ಸಂಗತಿಗಳ ಸಮುದ್ರ ವನ್ನು ಶಿಷ್ಯರು ಮಥಿಸುತ್ತಿದ್ದರು.

ಅಷ್ಟೇ ಅಲ್ಲ, ಹಿಂದೊಮ್ಮೆ ಅವಧೂತರಲ್ಲಿಗೆ ಬಂದಿದ್ದ ಮ್ಯಾನೇಜರ್, ಸಂಸ್ಥೆಯ ಆವರಣದಲ್ಲಿ ಮಡುಗಟ್ಟಿದ್ದ ನಕಾರಾತ್ಮಕ ಶಕ್ತಿಯನ್ನು ನಿವಾರಿಸುವಂತೆ ಕೋರಿದಾಗ, “ಒಳಸೇರಿರುವ ಕಳ್ಳಬೆಕ್ಕನ್ನು ತೊಲಗಿಸಿದರೆ ಒಳಿತು" ಎಂಬ ಒಗಟಿನ ರೂಪದ ಪರಿಹಾರೋಪಾಯವನ್ನು ಮೊದಲಿಗೆ ತಿಳಿಸಿದ್ದ ಅವಧೂತರು, ಆ ಒಗಟನ್ನು ಅರ್ಥೈಸಿಕೊಳ್ಳುವಲ್ಲಿ ಮ್ಯಾನೇಜರ್ ವಿಫಲ ರಾಗಿದ್ದುದು ಅರಿವಾಗುತ್ತಿದ್ದಂತೆ ತಾವೇ ಅಖಾಡಕ್ಕಿಳಿದು ಶಾರದೆಯ ಆತ್ಮಬಂಧುವಾಗಲು ಸಂಕಲ್ಪಿಸಿರುವುದೇಕೆ ಎಂಬುದು ಕೂಡ ಶಿಷ್ಯರಿಗೆ ನಿಚ್ಚಳವಾಗುತ್ತಾ ಹೋಯಿತು. ‘ನಿಮ್ನ ವರ್ಗದವರು’ ಎಂಬ ಪರಿಗಣನೆಯಲ್ಲಿ ಸಮಾಜದಲ್ಲಿ ಮೂಲೆಗುಂಪಾಗಿದ್ದ ಕುಟುಂಬ ವೊಂದಕ್ಕೆ ಹೀಗೆ ನಿರಂತರ ಅಭಯ ನೀಡುತ್ತಾ, ಅವರ ಮನೆಯ ಮೇಲೆ ‘ಅಶ್ವತ್ಥವೃಕ್ಷದ ನೆರಳು’ ಬೀರುತ್ತಿರುವ ಅವಧೂತರು, ‘ದೇವರ ದೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ’ ಎಂಬುದನ್ನು ಮನಗಾಣಿಸಲೆಂದೇ, ಶಿವರಾತ್ರಿಯ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಮರಳುವ ಮಾರ್ಗ ಮಧ್ಯದಲ್ಲಿದ್ದ ಶಾರದೆಯ ಮನೆಗೆ ತಮ್ಮನ್ನೂ ಕರೆದೊಯ್ದು, ಜೇನುಹಲಸಿನ ಆತಿಥ್ಯ ಸ್ವೀಕಾರದಲ್ಲಿ ಭಾಗಿಯಾಗಿಸುವ ಮೂಲಕ ‘ಮೇಲು-ಕೀಳು’ ಕಲ್ಪನೆಯನ್ನು ತೊಡೆದು ‘ಸರ್ವಸಮಾನತೆ’ಯ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ತಮಗೆ ಅರೆದು ಕುಡಿಸಿದರೇ? ತರುವಾಯ ಕಾರಿಗೆ ಇಂಧನ ತುಂಬಿಸುವಾಗ ಅಲ್ಲಿಗೆ ಧಾವಿಸಿ ಬಂದ ಗ್ರಂಧಿಗೆ ಅಂಗಡಿಯ ವಯೋವೃದ್ಧರೊಬ್ಬರು ನೀಡಿದ ಗೋಕರ್ಣದ ಜನಿವಾರದ ಕಟ್ಟು ಮತ್ತು ಪಳನಿಯ ಸುಗಂಧಭರಿತ ವಿಭೂತಿಯ ಪೊಟ್ಟಣಗಳಿದ್ದ ಚೀಲವನ್ನು ಗೌರವಪೂರ್ಣವಾಗಿ ಸ್ವೀಕರಿಸುವ ಮೂಲಕ, ತ್ರೇತಾಯುಗದಲ್ಲಿ ಲಂಕೆಗೆ ಸಮುದ್ರ ಸೇತು ಕಟ್ಟುವಾಗ ಪುಟ್ಟ ಅಳಿಲಿನಿಂದಲೂ ಸೇವೆ ಸ್ವೀಕರಿಸಿದ ಶ್ರೀರಾಮಚಂದ್ರನ ಆದರ್ಶವನ್ನು ಅವಧೂತರು ಹೀಗೆ ಪ್ರಾತ್ಯಕ್ಷಿಕೆಯಾಗಿ ತಮಗೆ ತೋರಿಸಿದರೇ? ತಮ್ಮನ್ನು ಹೃದಯಪೂರ್ವಕವಾಗಿ ನಂಬಿದವರನ್ನು ದಿವ್ಯಾತ್ಮಗಳು ಯಾವತ್ತೂ ಕೈಬಿಡುವುದಿಲ್ಲ ಎಂಬುದನ್ನು ಪ್ರತ್ಯಕ್ಷ ತೋರಿಸಲೆಂದೇ ಅವಧೂತರು ಶಿವರಾತ್ರಿ ಜಾಗರಣೆಗೆ, ತರುವಾಯದ ಸಂಚಾರಕ್ಕೆ ತಾವೊಬ್ಬರೇ ತೆರಳದೆ ಶಿಷ್ಯರಾದ ತಮ್ಮನ್ನೂ ಕರೆತಂದರೇ? ಎಂದೆಲ್ಲಾ ಶಿಷ್ಯರು ತಮ್ಮತಮ್ಮಲ್ಲೇ ವಿಶ್ಲೇಷಿಸುತ್ತಿದ್ದರು.

ಇದನ್ನೂ ಓದಿ: Yagati Raghu Naadig Column: ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

“ಶಾರದೆಯ ಕಥೆ ಮುಗಿಯುವ ಮುಂಚೆಯೇ ಅದನ್ನು ನೀವೆಲ್ಲಾ ವಿಮರ್ಶಿಸುತ್ತಿರು ವಂತಿದೆಯಲ್ಲಾ?!" ಎಂಬ ಅವಧೂತರ ದನಿ ಕೇಳಿದಾಗಲೇ ಶಿಷ್ಯರೆಲ್ಲರೂ ಭಾವನೌಕೆಯಿಂದ ಕೆಳಗಿಳಿದಿದ್ದು! ‘ಈ ಜಗತ್ತಿನಲ್ಲಿ ಬೋಧನೆ ಮಾಡುವವರು ಲಕ್ಷಗಟ್ಟಲೆ ಸಿಕ್ಕಾರು, ಆದರೆ ‘ಬೋಧನೆ-ಆಚರಣೆ’ ಎರಡಕ್ಕೂ ಒಡ್ಡಿಕೊಂಡಿರುವ ಅನನ್ಯ ಚೇತನಗಳಲ್ಲಿ ನಮ್ಮ ಅವಧೂತರೂ ಒಬ್ಬರು, ಅವರ ಸಾಂಗತ್ಯ ದಲ್ಲಿರುವ ನಾವೇ ಪುಣ್ಯವಂತರು’ ಎಂಬ ಧನ್ಯತಾಭಾವ ಶಿಷ್ಯರೆಲ್ಲರ ಮುಖದಲ್ಲಿ ನಂದಾದೀಪದಂತೆ ಬೆಳಗುತ್ತಿತ್ತು.

ಅವಧೂತರ ಪ್ರಶ್ನೆಗೆ ಉತ್ತರವೆಂಬಂತೆ ಶಿಷ್ಯರೊಬ್ಬರು, “ಗುರುಗಳೇ, ಆ ತಾಯಿ ಕೊಟ್ಟ ನಿಮ್ಮ ಚಿತ್ರಪಟ ಶಾರದೆಗೆ ಒಂದು ‘ಅಮೂಲ್ಯ ನಿಧಿ’ಯಾಗಿ, ನಿಮ್ಮೊಂದಿಗೆ ಅಹವಾಲು ತೋಡಿಕೊಳ್ಳುವ ‘ಸಂವಹನ ಸಾಧನ’ವೇ ಆಗಿಬಿಟ್ಟಿತೇನೋ, ಅಲ್ಲವೇ?" ಎಂದು ಕುತೂಹಲಭರಿತ ಗೌರವದೊಂದಿಗೆ ಕೇಳಿದರು.

ಗಹಗಹಿಸಿ ನಕ್ಕ ಅವಧೂತರು, “ಪರವಾಗಿಲ್ಲ ಕಣಯ್ಯಾ, ತುಪ್ಪದಲ್ಲಿ ಹುರಿದ ದ್ರಾಕ್ಷಿ-ಗೋಡಂಬಿ ಬೆರೆಸಿದ ತರಕಾರಿ ಉಪ್ಪಿಟ್ಟನ್ನು ನಿಮಗೆ ತಿನ್ನಿಸಿದ್ದಕ್ಕೂ ಸಾರ್ಥಕವಾಯಿತು! ‘ವಿಶ್ಲೇಷಣೆ’ ಮತ್ತು ‘ವಿಚಕ್ಷಣೆ’ಯಂಥ ಸಾಮರ್ಥ್ಯಗಳು ನಿಮ್ಮ ಮಿದುಳಿನಲ್ಲಿ ಎಷ್ಟು ಬೇಗ ಉದ್ದೀಪನಗೊಂಡಿತಲ್ಲಾ? ಭಲೇ ಭಲೇ!" ಎಂದು ತಮಾಷೆ ಮಾಡಿ, “ಹಾಗೇ ಇರಬೇಕು ಕಣ್ರಯ್ಯಾ... ಗುರುವೊಬ್ಬನ ಮಾತನ್ನು ಶಿಷ್ಯರು ಚಾಚೂತಪ್ಪದೆ ಪರಿಪಾಲಿಸಬೇಕು ಎಂಬುದು ಎಷ್ಟು ನಿಜವೋ, ಜಿಜ್ಞಾಸೆಯ ಪ್ರವೃತ್ತಿ, ಕಾಲಾನುಕಾಲಕ್ಕೆ ಪ್ರಶ್ನಿಸುವ ಸ್ವಭಾವ, ತರ್ಕಶಕ್ತಿಗಳನ್ನೂ ರೂಢಿಸಿಕೊಳ್ಳಬೇಕು. ಆಗ ಮಾತ್ರವೇ ಸಾಗುವ ದಾರಿಯೂ ನಿಚ್ಚಳವಾಗುತ್ತದೆ, ಸೇರಬೇಕಾದ ಗಮ್ಯವೂ ಸುಲಭಕ್ಕೆ ದಕ್ಕುತ್ತದೆ. ‘ಅರಿವೇ ಗುರು’ ಎಂಬ ಮಾತು ಜೊಳ್ಳಲ್ಲ, ಅದು ಗಟ್ಟಿಮುಟ್ಟಾದ ಶಕ್ತಿಬೀಜ" ಎಂದು ಹೇಳಿ, “ಎಲ್ಲರೂ ಹೊಳೆನೀರಲ್ಲಿ ಕೈತೊಳೆದುಕೊಂಡು ಬನ್ನಿ, ಕಥೆಯನ್ನು ಮುಂದುವರಿಸುವೆ" ಎಂದರು. ಅಂತೆಯೇ ಮಾಡಿದ ಶಿಷ್ಯರು ಲಗುಬಗೆಯಿಂದ ಮರಳಿದರು, ಅವಧೂತರು ಕಥೆಯನ್ನು ಮುಂದುವರಿಸಿದರು....

“ಅಯ್ಯಾ, ನಿಮ್ಮ ಗ್ರಹಿಕೆ ಸರಿಯಾಗಿದೆ... ತಾಯಿ ಕೊಟ್ಟ ಚಿತ್ರಪಟ ಶಾರದೆಗೆ ಒಂದು ‘ಅಮೂಲ್ಯ ನಿಧಿ’ಯಾಗಿ, ನನ್ನೊಂದಿಗೆ ಅಹವಾಲು ತೋಡಿಕೊಳ್ಳಲಿಕ್ಕಾಗಿನ ಒಂದು ‘ಸಂವಹನ ಸಾಧನ’ ಆಗಿದ್ದು ನಿಜ. ಅಂದು ‘ಗುರುಪೂರ್ಣಿಮೆ’ಯ ಮಧ್ಯರಾತ್ರಿ. ನಾನು ವಾಡಿಕೆಯ ಕೆಲಸಗಳನ್ನೆಲ್ಲ ಮುಗಿಸಿ ಊರಾಚೆಯ ಅಶ್ವತ್ಥ ವೃಕ್ಷದೆಡೆಗೆ ತೆರಳಿ ಕೊಂಚ ವಿರಮಿಸಿ, ಭಗವಂತನ ಜತೆಗಿನ ‘ಮೌನ-ಅನುಸಂಧಾನ’ದಲ್ಲಿ ತೊಡಗಿದ್ದೆ. ಕೆಲ ಕ್ಷಣದ ನಂತರ ‘ಬುದ್ಧೀ.... ನನ್ನಪ್ಪಾ...’ ಅಂತ ದೂರದಿಂದ ಅದ್ಯಾರೋ ಕರೆದಂತಾಯಿತು. ಅದು ‘ಅಪರಿಚಿತವಾಗಿದ್ದರೂ ಪರಿಚಿತ’ ಎನಿಸುವ ಬಾಲೆಯೊಬ್ಬಳ ದಿವ್ಯದನಿ. ಅದು ಶಾರದೆಯದ್ದು! ಗುರುಪೂರ್ಣಿಮೆಯ ದಿನದಂದು ‘ಗುರುಸೂತ್ರ’ದ ಪ್ರಭಾವವು ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ತೀವ್ರವಾಗಿರುತ್ತದೆ ಎಂಬ ಅನುಪಮ ಮಾಹಿತಿಯನ್ನು ಅದೆಲ್ಲಿಂದಲೋ ದಕ್ಕಿಸಿಕೊಂಡಿದ್ದ ಜಾಣೆ ಶಾರದೆ, ದೂರದಲ್ಲಿದ್ದು ಕೊಂಡೇ ನನ್ನೊಡನೆ ಸಂವಹಿಸಲು ಗುರುಪೂರ್ಣಿಮೆಯ ದಿನವನ್ನೇ ಆಯ್ದುಕೊಂಡಿದ್ದಳು! ಇಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ವಿರಮಿಸಿದ್ದ ನಾನು, ಅಷ್ಟು ದೂರದಲ್ಲಿ ಅವಳಿದ್ದ ಜಾಗವನ್ನೊಮ್ಮೆ ಕಣ್ಣ ಮುಂದೆ ಚಿತ್ರಿಸಿಕೊಂಡೆ. ತನಗೆ ಆಶ್ರಯ ನೀಡಿದ್ದ ಸಂಸ್ಥೆಯ ಆವರಣದಲ್ಲಿದ್ದ ಅಶ್ವತ್ಥ ವೃಕ್ಷದ ಬುಡದಲ್ಲಿ ನನ್ನ ಚಿತ್ರಪಟ ವನ್ನು ಎದುರಿಗಿಟ್ಟುಕೊಂಡು ಶಾರದೆ ಕೂತಿದ್ದಳು. ಆಕೆಯ ದೇಹದ ಕಣಕಣದಿಂದಲೂ ಗುರು ಮಂತ್ರ ಜಪದ ನಿನಾದ ಅನುರಣಿಸುತ್ತಿತ್ತು.....

“ನಾನು ಇಲ್ಲಿದ್ದುಕೊಂಡೇ ಶಾರದೆಯನ್ನುದ್ದೇಶಿಸಿ ‘ಅದೇನು ಹೇಳು ತಾಯೀ...’ ಎಂದೆ. ‘ಕೊಲ್ಲುವುದು ರಾಕ್ಷಸರ ಕರ್ಮ, ಕಾಯುವುದು ದೇವರ ಧರ್ಮ’ ಎಂಬ ಮಾತಿನಲ್ಲಿ ಗಟ್ಟಿನಂಬಿಕೆಯಿಟ್ಟಿದ್ದ ಶಾರದೆಗೆ ನನ್ನ ಭರವಸೆಯ ದನಿ ಕೇಳಿಸಿತು ಎನಿಸುತ್ತೆ. ಆ ಮಗು ಬಿಕ್ಕಿಬಿಕ್ಕಿ ಅಳಲು ಶುರು ಮಾಡಿತು. ಆದರೆ ಅದು ದುಃಖದ ಅಳುವಲ್ಲ, ಬಹುತೇಕ ಅರಣ್ಯರೋದನವೇ ಆಗಿಬಿಟ್ಟಿದ್ದ ತನ್ನ ಧ್ವನಿಗೆ ಒಂದು ‘ಉಪಶಾಮಕ ಪ್ರತಿಧ್ವನಿ’ ಮೊಳಗಿತಲ್ಲಾ ಎಂಬ ಸಂತಸದಿಂದಾಗಿ ಚಿಮ್ಮಿದ ಚಿಲುಮೆ ಅದು! ನಂಬಿದವರನ್ನು ದೇವರು-ಗುರು-ಅವಧೂತರು ಕೈಬಿಡುವುದಿಲ್ಲ ಎಂಬ ‘ಸ್ಥಾಪಿತ ಗ್ರಹಿಕೆ’ಗೆ ಆಕೆಗೆ ತಾನು ಕುಳಿತಿದ್ದ ಸ್ಥಳದಲ್ಲೇ ದಿವ್ಯಪುರಾವೆ ಸಿಕ್ಕಿತ್ತು. ಮರದ ಬುಡದಲ್ಲಿಟ್ಟಿದ್ದ ನನ್ನ ಚಿತ್ರ ಪಟವನ್ನು ಕೈಗೆತ್ತಿಕೊಂಡ ಶಾರದೆ ಅದನ್ನೊಮ್ಮೆ ಕಣ್ಣಿಗೊತ್ತಿಗೊಂಡು, ‘ಕಡೆಗೂ ಸಿಕ್ಕಿಬಿಟ್ಯಾ ನನ್ನಪ್ಪಾ.... ನಿನ್ನ ಕಾರುಣ್ಯಕ್ಕೆ ನಾನು ನಿನಗೆ ಏನು ಕಾಣಿಕೆ ನೀಡಲೋ ತಂದೇ..?’ ಎಂದು ಮುಗ್ಧದನಿಯಲ್ಲಿ ಅಕ್ಕರೆಗರೆದಳು ಶಾರದೆ. ‘ಸಮಯ ಬಂದಾಗ ಅದನ್ನು ಪಡೆಯುವೆ. ಈಗ ನಿನ್ನ ಸಮಸ್ಯೆಯೇನು ಹೇಳವ್ವಾ ಕಂದಾ...’ ಎಂದು ನಾನು ಸಂತೈಸಿದೆ. ಸಂಸ್ಥೆಯ ಮಹಾನುಭಾವರೊಬ್ಬರು ತನ್ನನ್ನು ‘ಅನೈತಿಕ’ ಕೆಲಸಕ್ಕೆ ಆಹ್ವಾನಿಸುತ್ತಿರುವುದರ ಕುರಿತು ಎಳೆಎಳೆಯಾಗಿ ಬಿಡಿಸಿ ಹರವಿಟ್ಟ ಶಾರದೆ, ‘ನಾನು ಅಂಥವಳಲ್ಲ ಬುದ್ಧೀ. ವಿದ್ಯೆಯ ಹಸಿವನ್ನು ನೀಗಿಸಿಕೊಳ್ಳಲು ಬಂದವಳು ನಾನು. ಇಲ್ಲಿಯೂ ‘ಇಂಥ’ ಹಸಿವೇ? ಇದಕ್ಕೊಂದು ಪರಿಹಾರ ಕೊಡಿ ಬುದ್ಧೀ’ ಎನ್ನುತ್ತಾ ನನ್ನ ಚಿತ್ರಪಟವನ್ನು ಮತ್ತೊಮ್ಮೆ ಕಣ್ಣಿಗೊತ್ತಿಕೊಂಡಳು. ನಾನು ಸುಮ್ಮನೆ ಅವಳನ್ನು ಪರೀಕ್ಷಿಸಲೆಂದು, ‘ಇದಕ್ಕೆ ಇಷ್ಟೊಂದು ತಲ್ಲಣವೇಕೆ ಮಗೂ? ಪೊಲೀಸರಿಗೆ ದೂರು ನೀಡಿದರೆ ಸಾಕು, ಈ ಸಮಸ್ಯೆ ಪರಿಹಾರವಾಗುತ್ತೆ’ ಎಂದೆ.." ಎಂದು ಹೇಳಿ ಅವಧೂತರು ಕಥನವನ್ನು ಕೊಂಚ ನಿಲ್ಲಿಸಿದರು.

ಆಗ ಶಿಷ್ಯರೊಬ್ಬರು, “ನಿಮ್ಮ ಮಾತಿನಂತೆಯೇ ಶಾರದೆ ಪೊಲೀಸರಿಗೆ ದೂರು ನೀಡಿದಳು ಎನಿಸುತ್ತೆ. ಆದರೆ ಸದರಿ ಸಮಾಜಸೇವಾ ಸಂಸ್ಥೆಗಿರುವ ಪ್ರಭಾವದಿಂದಾಗಿ ಅದರಿಂದೇನೂ ಪ್ರಯೋಜನವಾಗಲಿಲ್ಲ, ಹೀಗಾಗಿ ಶಾರದೆ ಹತಾಶಳಾದಳು. ಅಲ್ವೇ ಗುರುಗಳೇ?" ಎಂದು ಪ್ರಶ್ನಿಸಿದರು.

ಈ ಮಾತಿಗೆ ನಸುನಕ್ಕ ಅವಧೂತರು, “ಇಲ್ಲಿಯೇ ನಿಮ್ಮ ಲೆಕ್ಕಾಚಾರ ತಪ್ಪಿದ್ದು. ಮಾಮೂಲಿ ಹುಡುಗಿಯಾಗಿದ್ದರೆ ಹಾಗೆ ಮಾಡುತ್ತಿದ್ದಳೋ ಏನೋ? ಆದರೆ ನಾನು ಮೊದಲೇ ಹೇಳಿದಂತೆ ಶಾರದೆಯೊಬ್ಬಳು ಬರಿಯ ಚೇತನವಲ್ಲ, ಉದಾತ್ತ ಚೇತನ. ಅವಳೊಂದು ದಿವ್ಯಾತ್ಮ. ಪೊಲೀಸರಿಗೆ ದೂರು ನೀಡು ಎಂಬ ನನ್ನ ಮಾತಿಗೆ ಶಾರದೆ, ‘ಬೇಡ ಬುದ್ಧೀ, ಇದು ಸಾಕಷ್ಟು ವರ್ಷಗಳಿಂದ ಸಾವಿರಾರು ಬಡ ಮತ್ತು ಅಸಹಾಯಕ ಮಕ್ಕಳಿಗೆ ‘ಅನ್ನ-ಅರಿವು-ಆಶ್ರಯ’ ನೀಡುತ್ತಾ ಬಂದಿರುವ ಸಂಸ್ಥೆ. ಇಂಥ ಒತ್ತಾಸೆಯಿಂದಾಗಿಯೇ ಅದೆಷ್ಟೋ ಮನೆಗಳು ಬೆಳಕು ಕಂಡಿವೆ, ಅವುಗಳಲ್ಲಿ ನೆಮ್ಮದಿಯ ಹೂವು ಅರಳಿದೆ. ಯಾರೋ ಕೆಲವರು ಮಾಡಲು ಹೊರಟ ತಪ್ಪು ಕೆಲಸಕ್ಕೆ ಒಂದಿಡೀ ಸಂಸ್ಥೆಯ ಹೆಸರು ಮತ್ತು ಪ್ರತಿಷ್ಠೆ ಮಣ್ಣುಪಾಲಾಗಬಾರದು. ಅದರಿಂದಾಗಿ, ಇಂಥ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸುವುದಕ್ಕೆ ಸಮಾಜದ ಅಸಹಾಯಕರು ಹಿಂದು-ಮುಂದು ನೋಡುವಂತಾಗಬಾರದು. ಆದರೆ ಮೈಯಲ್ಲಿ ಇಂಥದೊಂದು ‘ಹೀನವಾಂಛೆ’ ತುಂಬಿಕೊಂಡಿರು ವವರು ತಕ್ಕ ಪಾಠ ಕಲಿಯುವಂತೆ ಮತ್ತು ಅದು ಹೊರಜಗತ್ತಿಗೆ ಗೊತ್ತಾಗದಂತೆ ಏನಾದರೂ ಪರಿಹಾರ ಕಟ್ಟಿಕೊಡಿ ಬುದ್ಧೀ..’ ಎಂದು ಅಲವತ್ತುಕೊಂಡಳು. ನಾನು ಒಡ್ಡಿದ್ದ ಪರೀಕ್ಷೆಯಲ್ಲಿ ಶಾರದೆ ಗೆದ್ದಿದ್ದಳು. ಹೀಗಾಗಿ ಈ ಕಥೆಯ ಅಖಾಡದಲ್ಲಿ ನನ್ನ ಪ್ರವೇಶ ಅನಿವಾರ್ಯವಾಯಿತು..." ಎಂದರು.

ಕುತೂಹಲ ತಡೆಯಲಾಗದ ಶಿಷ್ಯರೊಬ್ಬರು, “ಗುರುಗಳೇ, ಹಾಗೆ ಹೀನವಾಂಛೆ ತೋರಿದ್ದು ಯಾರು?" ಎಂದಾಗ, “ಈಗಾಗಲೇ ಮಧ್ಯಾಹ್ನವಾಯಿತು ಕಣಯ್ಯಾ. ಅನ್ನದ ಜತೆಗೆಂದು ಎಳೆಯ ಹಲಸಿನಕಾಯಿ ಹುಳಿ, ಸುಟ್ಟಿರುವ ಹುರುಳಿ ಹಪ್ಪಳ, ಕಳಲೆ ಉಪ್ಪಿನಕಾಯಿ ಇತ್ಯಾದಿಯನ್ನು ಒಪ್ಪ ಮಾಡ್ಕೊಂಡು ನಮ್ಮಮ್ಮ ಕಾಯ್ತಾ ಇರ‍್ತಾರೆ! ನಡೀರಿ, ಮನೆಗೆ ತೆರಳಿ ಮೊದಲು ಊಟ ಮುಗಿಸಿ, ನಂತರ ಕಥೆ ಮುಂದುವರಿಸೋಣ" ಎಂದರು.

“ನೀವು ಮತ್ತೆ ‘ಪತ್ತೇದಾರ ಪುರುಷೋತ್ತಮ’ ಆಗಿಬಿಟ್ಟಿರಿ ಗುರುಗಳೇ" ಎಂದು ಆ ಶಿಷ್ಯರು ಹುಸಿಮುನಿಸಿನಲ್ಲೇ ಲೊಚಗುಟ್ಟಿದರು, ಅವರ ತಲೆಗೆ ಅವಧೂತರು ಪ್ರೀತಿಯಿಂದ ಮೊಟಕಿದರು..!

(ಮುಂದುವರಿಯುವುದು)