ಯುದ್ಧಕಾಂಡ
ಸುರೇಂದ್ರ ಪೈ, ಭಟ್ಕಳ
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಕೊನೆ ಇಲ್ಲದಂತಾ ಗಿದೆ. ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ಅರಣ್ಯ ಭಾಗದ ಜಿಲ್ಲೆಗಳಲ್ಲಿ ಕಾಡಾನೆ, ಹುಲಿ, ಚಿರತೆ, ತೋಳ, ಕಾಡುಹಂದಿ, ಕರಡಿ, ಕಾಡುಕೋಣ ದಂಥ ವನ್ಯಜೀವಿಗಳ ಸಮಸ್ಯೆ ವಿಪರೀತಕ್ಕೆ ಹೋಗಿದೆ. ಇದರಿಂದ ರೈತರು, ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಹಾಗೂ ಕೃಷಿ ಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸು ವಂತಾಗಿದೆ.
ವಿಶೇಷವಾಗಿ ಮಲೆನಾಡಿನ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದಲೂ ಕಾಡಾನೆ ದಾಳಿಗಳು ನಿರಂತರವಾಗಿ ನಡೆಯುತ್ತ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ.
ಮೊನ್ನೆ ಭಾನುವಾರ ಚಿಕ್ಕಮಗಳೂರು ಜಿಯ ಹುಣಸೇಹಳ್ಳಿ ಸಮೀಪದ ಹೇರಂಬಿಪುರ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟರು. ಮೂಡಿಗೆರೆ, ಕಳಸ ತಾಲೂಕುಗಳಲ್ಲಿಯೂ ಇಂಥದೇ ಪ್ರಕರಣಗಳು ನಡೆದಿರುವುದು ಹಾಗೂ ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿರುವುದು ವರದಿ ಯಾಗಿವೆ.
ಈ ಪಟ್ಟಿ ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬುದು ಕಹಿ ವಾಸ್ತವ. ಕಳೆದ ಐದು ವರ್ಷಗಳಲ್ಲಿ ಕಾಡುಪ್ರಾಣಿಗಳ ದಾಳಿಗೆ ರಾಜ್ಯದಲ್ಲಿ ಒಟ್ಟು 289 ಮಂದಿ ಜೀವ ತೆತ್ತಿದ್ದಾರೆ. ಇಷ್ಟೆಲ್ಲಾ ದುರ್ಘಟನೆಗಳು ಸಂಭವಿಸಿದರೂ ಸಂಬಂಧಪಟ್ಟವರು ಸೂಕ್ತ ಬಂದೋಬಸ್ತ್‌ಗೆ ಮುಂದಾಗ ದಿರುವುದು ವಿಷಾದನೀಯ.
ಇದನ್ನೂ ಓದಿ: Surendra Pai Column: ಸಂಘಪ್ಪ v/s ನುಂಗಪ್ಪರ ಜಗಳದಲ್ಲಿ ಗಾಂಧಿ ಚಿಂತನೆ ಎಲ್ಲಿ ?!
ಮಾನವನ ನಿರಂತರ ಹಸ್ತಕ್ಷೇಪ ಹಾಗೂ ಸರಕಾರಗಳ ನಿರ್ಲಕ್ಷ್ಯದಿಂದಾಗಿ ಜನರು ಮಾತ್ರವೇ ತೊಂದರೆಯನ್ನು ಎದುರಿಸುತ್ತಿಲ್ಲ, ಜತೆಗೆ ಕಾಡಾನೆ, ಹುಲಿ, ಚಿರತೆಯಂಥ ಅಪರೂಪದ ವನ್ಯಜೀವಿಗಳೂ ಕಣ್ಮರೆಯಾಗುತ್ತಿವೆ. ಕಳೆದ ವರ್ಷದ ಡಿಸೆಂಬರ್ 20ರಂದು ಅಸ್ಸಾಂನ ಹೋಜಾಯಿ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಿಂಡೊಂದು ಹಳಿಯನ್ನು ದಾಟು ತ್ತಿರುವಾಗ ಧಾವಿಸಿ ಬಂದ ಎಕ್ಸ್‌ಪ್ರೆಸ್ ರೈಲು ಹಿಂಡಿಗೆ ಡಿಕ್ಕಿ ಹೊಡೆದು 7 ಆನೆಗಳು ಮೃತ ಪಟ್ಟವು.
ಮತ್ತೊಂದೆಡೆ, ಕಾಡಾನೆಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ರೈತರು ತೋಟಕ್ಕೆ ಅಳವಡಿಸಿ ಕೊಳ್ಳುವ ವಿದ್ಯುತ್ ಬೇಲಿಯೂ ಅವಕ್ಕೆ ಮಾರಕವಾಗಿ ಪರಿಣಮಿಸುವುದಿದೆ. ಅರಣ್ಯನಾಶ, ವನ್ಯಜೀವಿಗಳ ಆವಾಸಸ್ಥಾನದ ಅಸಮರ್ಪಕ ನಿರ್ವಹಣೆ, ಅಧಿಕಾರಿಗಳ ನಿರ್ಲಕ್ಷ್ಯ, ಆನೆ ಕಾರಿಡಾರ್ ಇಲ್ಲದಿರುವಿಕೆ, ಆನೆದಂತ ಬೇಟೆ ಇತ್ಯಾದಿ ಕಾರಣಗಳಿಂದಾಗಿ ಕಾಡಾನೆಗಳು ಸಾವಿಗೀಡಾಗುತ್ತಿವೆ.
1992ರ ಫೆಬ್ರವರಿಯಲ್ಲಿ ‘ಪ್ರಾಜೆಕ್ಟ್ ಎಲಿಫೆಂಟ್’ ಅನ್ನು ಪ್ರಾರಂಭಿಸುವುದರೊಂದಿಗೆ ಭಾರತದಲ್ಲಿ ಆನೆ ಕಾರಿಡಾರ್ʼಗಳನ್ನು ಔಪಚಾರಿಕವಾಗಿ ಗುರುತಿಸಲಾಯಿತು. ಅಳಿವಿನ ಅಂಚಿನಲ್ಲಿರುವ ಏಷ್ಯನ್ ಆನೆಗಳನ್ನು ರಕ್ಷಿಸಲು, ಕುಗ್ಗುತ್ತಿರುವ ಅವುಗಳ ಆವಾಸಸ್ಥಾನ ವನ್ನು ನಿರ್ವಹಿಸಲು ಮತ್ತು ಮಾನವ-ಆನೆ ಸಂಘರ್ಷಗಳನ್ನು ಕಡಿಮೆ ಮಾಡಲು ಈ ಉಪಕ್ರಮವನ್ನು ಕೈಗೊಂಡರೂ, ನಿರ್ವಹಣೆಯ ಕೊರತೆಯಿಂದಾಗಿ ಆನೆ ಮತ್ತು ಮಾನವ ಸಂಘರ್ಷಗಳು ನಡೆಯುತ್ತಲೇ ಇವೆ.
ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು; ವಿಪರ್ಯಾಸ ವೆಂದರೆ, ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಆನೆಗಳಿಗೆ ಒಂದೆಡೆ ಯಿಂದ ಇನ್ನೊಂದೆಡೆಗೆ ಓಡಾಡಲು ಮಾರ್ಗವೇ ಇಲ್ಲದಂತಾಗಿದೆ. 2008ರಲ್ಲಿ ಕೊಡಗಿನ ಕಾಫಿ ಬೆಳೆಗಾರರೊಬ್ಬರು, ‘ಮಾನವ-ಆನೆ ಸಂಘರ್ಷದಿಂದ ರಕ್ಷಿಸಬೇಕು’ ಎಂದು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಅರ್ಜಿ ಪರಿಶೀಲಿಸಿದ ನ್ಯಾಯಾಲಯ, ಆನೆ ಹಾವಳಿಯಿರುವ ಪ್ರದೇಶದಲ್ಲಿ ‘ಆನೆ ಕಾರಿಡಾರ್’ ನಿರ್ಮಿಸುವಂತೆ ಆದೇಶಿಸಿತ್ತು. ಹಾಗಂತ ನಮ್ಮ ರಾಜ್ಯದಲ್ಲಿ ಆನೆ ಕಾರಿಡಾರ್ ಇಲ್ಲವೆಂದಲ್ಲ, 9 ಕಾರಿಡಾರ್‌ಗಳಿವೆ; ಆದರೂ ದುರ್ಘಟನೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2023ರಿಂದ 2025ರ ಜುಲೈವರೆಗೆ ರಾಜ್ಯದಲ್ಲಿ 240 ಆನೆಗಳು ಮೃತಪಟ್ಟಿದ್ದು, ಇವುಗಳಲ್ಲಿ 65 ಅಸಹಜ ಸಾವುಗಳಾಗಿವೆ. ಈ ಅಸಹಜ ಸಾವಿಗೆ ಅನೇಕ ಕಾರಣಗಳಿವೆ.
‘ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಕಾಫಿ-ಚಹಾ ತೋಟಗಳು ವಿಸ್ತರಣೆಯಾಗುತ್ತಿರುವುದು, ಮಾನವನ ಹಸ್ತಕ್ಷೇಪ, ಒತ್ತುವರಿ ಯೋಜನೆಗಳು, ಅಭಿವೃದ್ಧಿ ಯೋಜನೆಗಳು ಆನೆಗಳಿಗೆ ಮಾರಕವಾಗುತ್ತಿದೆ’ ಎನ್ನುತ್ತದೆ 2025ರಲ್ಲಿ ಬಿಡುಗಡೆಯಾದ ‘ಆನೆಗಳ ಸ್ಥಿತಿಗತಿ ವರದಿ’.
ಎಲ್ಲದಕ್ಕೂ ‘ಆನೆ ಕಾರಿಡಾರ್’ ಪರಿಹಾರವಲ್ಲ; ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಯಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ವಹಣೆ, ಆನೆತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ, ಕಾಡಾನೆ ಹಾವಳಿಯ ತಡೆಗೆ ಜಿಲ್ಲೆಗೊಂದರಂತೆ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ಆನೆ ಕಾರ್ಯಪಡೆಯ ನಿಯೋಜನೆ, ವನ್ಯಪ್ರಾಣಿ ಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ಕೆರೆಗಳ ನಿರ್ಮಾಣ ಮುಂತಾದ ಕ್ರಮಗಳ ಕುರಿತೂ ಗಮನಹರಿಸಬೇಕು.
ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲು ಸಂರಕ್ಷಣೆ ಅತ್ಯಗತ್ಯವಾಗಿದೆ; ಏಕೆಂದರೆ, ಹೆಚ್ಚಿನ ಅರಣ್ಯ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆದ ಲಂಟಾನಾ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಹುಲ್ಲಿನ ಬೆಳವಣಿಗೆಗೆ ತೀವ್ರ ಅಡಚಣೆಯಾಗಿ, ಅದರ ಲಭ್ಯತೆ ಗಣನೀಯ ವಾಗಿ ಕಡಿಮೆಯಾಗಿದೆ.
ಇಂಥ ಎಲ್ಲ ಕ್ರಮಗಳನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರುವತ್ತ ಸರಕಾರ ಮತ್ತು ಅರಣ್ಯ ಇಲಾಖೆ ಕಟಿಬದ್ಧವಾಗಬೇಕು. ಇಷ್ಟು ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಒತ್ತಾಸೆಯನ್ನೂ ಪಡೆದುಕೊಳ್ಳಬೇಕಿದೆ. ಆನೆಗಳ ಚಲನವಲನವನ್ನು ಮೊದಲೇ ತಿಳಿದು ಕೊಂಡು, ಅವುಗಳ ಹಿಂಡನ್ನು ದೂರ ಓಡಿಸಲು ಸಾಧ್ಯ ಎಂಬುದನ್ನು ದಕ್ಷಿಣ ಆಫ್ರಿಕಾದ ಭೂವಿಜ್ಞಾನಿ ಅಲಿವರ್ ಲ್ಯಾಂಬ್ 2021ರಲ್ಲಿ ತಮ್ಮ ಯಶಸ್ವಿ ಪ್ರಯೋಗದ ಮೂಲಕ ಕಂಡುಕೊಂಡರು.
ಉತ್ತರ ಕೆರೊಲಿನಾದ ಕಾಲೇಜೊಂದರಲ್ಲಿ ಭೂ ವಿಜ್ಞಾನ ವಿಭಾಗದಲ್ಲಿ ದುಡಿಯುತ್ತಿದ್ದ ಲ್ಯಾಂಬ್, ‘ಸಕ್ರಿಯ ಜ್ವಾಲಾಮುಖಿಗಳಂಥ ನೈಸರ್ಗಿಕ ವಿದ್ಯಮಾನಗಳನ್ನು ಅಧ್ಯಯನ ಮಾಡಲು ಭೂಕಂಪಶಾಸ್ತ್ರ ಮತ್ತು ಇನ್- ಸೌಂಡ್ ಅನ್ನು ಬಳಸಬಹುದು’ ಎಂಬುದನ್ನು ತೋರಿಸಿಕೊಟ್ಟರು.
ಕಳ್ಳ ಬೇಟೆಗಾರರ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದ ಈಶಾನ್ಯ ಭಾಗದ ಅಭಯಾರಣ್ಯ ದಲ್ಲಿ ಬಿಳಿ ಆನೆಗಳ ಸಂತತಿ ನಶಿಸುವ ಹಂತದಲ್ಲಿತ್ತು. ಈ ಆನೆಗಳ ಸಂರಕ್ಷಣೆಗಾಗಿ ಅವರು, ನಿರ್ದಿಷ್ಟ ಸಾಧನಗಳನ್ನು ಅಲ್ಲಲ್ಲಿ ಅಳವಡಿಸುವ ಮೂಲಕ ಆನೆಗಳ ನಡೆ ಬಗ್ಗೆ ಮುನ್ಸೂ ಚನೆ ಪಡೆಯಬಹುದೇ ಎಂದು ಪ್ರಯೋಗ ನಡೆಸಿದರು. ಅಂದರೆ, ಸುಮಾರು 300 ಮೀಟರ್ ವರೆಗೆ ಧ್ವನಿಕಂಪನವನ್ನು ಒಯ್ಯಬಲ್ಲ ಮೈಕ್ರೋಫೋನ್ ಉಪಕರಣವನ್ನು ಲ್ಯಾಂಬ್ ಅಲ್ಲಲ್ಲಿ ಅಳವಡಿಸಿದರು.
ಆನೆಗಳು ನಡೆದಾಡುವಾಗ ನೆಲದಲ್ಲಿ 110 ಡೆಸಿಬೆಲ್ ಪ್ರಮಾಣದ ಕಂಪನ ಉಂಟಾಗುತ್ತದೆ ಮತ್ತು ಅದು ದೊಡ್ಡದಾಗಿಯೇ ಕೇಳಿಸುತ್ತದೆ. ಹೀಗಾಗಿ ಆನೆಗಳಿಗೆ ‘ರೇಡಿಯೋ ಕಾಲರ್’ ಅಳವಡಿಸುವ ಅಗತ್ಯವೇ ಇಲ್ಲದೆ, ಅವು ಎಷ್ಟಿವೆ, ಎಲ್ಲಿವೆ ಎಂಬುದನ್ನು ಕುಳಿತಲ್ಲಿಂದಲೇ ತಿಳಿಯುವುದು ಸಾಧ್ಯವಾಯಿತು. ಆನೆಗಳು ಎಲ್ಲಿವೆ ಎಂಬುದು ಗೊತ್ತಾದ ಮೇಲೆ ಅವುಗಳ ರಕ್ಷಣೆಗೂ ಧಾವಿಸಬಹುದು, ಹಿಂಡಿನಿಂದ ಬೇರ್ಪಟ್ಟ ಪುಂಡಾನೆ ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಹಿಂಡಿಗೆ ಮರಳಿ ಸೇರಿಸಬಹುದು ಎಂಬುದನ್ನು ಲ್ಯಾಂಬ್ ತೋರಿಸಿಕೊಟ್ಟರು.
ಆನೆಗಳ ಹಿಂಡು 165 ಅಡಿ ದೂರವನ್ನು ತಲುಪಿದಾಗ ಅದು ಎಚ್ಚರಿಕೆಯ ಗಂಟೆಯನ್ನು ಬಡಿಯುವ ಮೂಲಕ ಜಾಗೃತಗೊಳಿಸುತ್ತದೆ; ಇದರಿಂದ ಅವುಗಳ ವೇಗವನ್ನು ಸುಲಭವಾಗಿ ಅರಿತು ದೂರಕ್ಕೆ ಓಡಿಸುವುದಾಗಲೀ, ಬೆಳೆ ಸಂರಕ್ಷಣೆ ಮಾಡುವುದಾಗಲೀ ಸಾಧ್ಯವಿದೆ ಎಂಬುದನ್ನು ಲ್ಯಾಂಬ್ ನಿದರ್ಶಿಸಿದರು.
ಇಂಥ ಉಪಕರಣಗಳನ್ನು ಸಿದ್ಧಪಡಿಸುವ ಮೊದಲು, ನಿರ್ದಿಷ್ಟ ಪ್ರದೇಶದ ಭೂರಚನಾ ಶಾಸ್ತ್ರ, ಮಣ್ಣಿನ ಸ್ಥಿತಿಗತಿಯ ಅಧ್ಯಯನ ಮುಖ್ಯವಾಗುತ್ತದೆ. ಶಕ್ತಿಶಾಲಿ ಮೈಕ್ರೋ ಫೋನ್ ಗಳನ್ನು ಬಳಸುವುದರಿಂದ ಕಿಲೋಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಆನೆಗಳು ಬರುತ್ತಿರುವು ದನ್ನು ಅರಿಯಲು ಸಾಧ್ಯವಾಗುತ್ತದೆ.
ಇಂಥ ಉಪಕ್ರಮಗಳಿಂದ ಆನೆಗಳ ಉಪಟಳ ನಿಲ್ಲುತ್ತದೆ ಎಂದೇನಲ್ಲ. ನಾವಿಂದು ವೀಕೆಂಡ್ ವಿರಾಮಕ್ಕಾಗಿ ಕಾಡಿನ ಮಧ್ಯದಲ್ಲಿ ರೆಸಾರ್ಟ್/ಹೋಮ್‌ಸ್ಟೇಗಳನ್ನು ನಿರ್ಮಿಸುತ್ತಿದ್ದೇವೆ. ಅರಣ್ಯ ಮೀಸಲು ಪ್ರದೇಶ, ಸಂರಕ್ಷಿತ ವಲಯಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ‘ಆನೆ ನಡೆದದ್ದೇ ದಾರಿ’ ಎಂಬ ಮಾತೊಂದು ಇರುವಾಗ, ಆನೆಗಳಿಗೆ ಮಾನವ ನಿರ್ಮಿತ ‘ಕಾರಿಡಾರ್’ನ ಅಗತ್ಯವಿಲ್ಲ.
ಅವಕ್ಕೆ ಬೇಕಿರುವುದು ಅವುಗಳದ್ದೇ ಆದ ಕಾಡು. ಇದನ್ನು ಪ್ರಜ್ಞಾವಂತ ನಾಗರಿಕರಾದ ನಾವು, ನಮ್ಮ ಆಳುಗರು ಅರಿತುಕೊಂಡರೆ ಸಾಕು...
(ಲೇಖಕರು ಶಿಕ್ಷಕರು)