ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Surendra Pai Column: ಸಂಘಪ್ಪ v/s ನುಂಗಪ್ಪರ ಜಗಳದಲ್ಲಿ ಗಾಂಧಿ ಚಿಂತನೆ ಎಲ್ಲಿ ?!

ಇಲ್ಲಿ ’ಸಂಘಪ್ಪ’ ಎಂಬ ವ್ಯಕ್ತಿಯನ್ನು ಪರೋಕ್ಷವಾಗಿ ‘ಆರ್ʼಎಸ್‌ಎಸ್-ಸಂಘ ಪರಿವಾರ’ ಎಂದರ್ಥದಲ್ಲಿ ನಿರೂಪಿಸಲಾಗಿದೆ. ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಜಾಹೀರಾತನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟಿಸಿದೆ. ಈ ಜಾಹೀರಾತಿಗೆ ಪ್ರತ್ಯುತ್ತರವಾಗಿ ‘ಏಟಿಗೆ ಎದುರೇಟು’ ಎಂಬಂತೆ ಫೆ.6ರಂದು ರಾಜ್ಯ ಬಿಜೆಪಿ ಪಕ್ಷವು ಕನ್ನಡ ಹಾಗೂ ಆಂಗ್ಲ ಪತ್ರಿಕೆಯಲ್ಲಿ ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು!

ಸಂಘಪ್ಪ v/s ನುಂಗಪ್ಪರ ಜಗಳದಲ್ಲಿ ಗಾಂಧಿ ಚಿಂತನೆ ಎಲ್ಲಿ ?!

-

Ashok Nayak
Ashok Nayak Feb 18, 2026 7:57 AM

ಪ್ರಸ್ತುತ

ಸುರೇಂದ್ರ ಪೈ, ಭಟ್ಕಳ

ಸ್ವಾತಂತ್ರ್ಯ ಬಂದು 75 ವರ್ಷಕ್ಕೂ ಹೆಚ್ಚು ಸಮಯವಾದರೂ ಸಹ ಇನ್ನೂ ತನಕವೂ ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ಬಿಟ್ಟು ಗಾಂಧೀಜಿ, ಅಂಬೇಡ್ಕರ್‌ರಂತಹ ಧೀಮಂತ ವ್ಯಕ್ತಿತ್ವವನ್ನು ತಮ್ಮ ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು, ಚುನಾವಣೆಯಲ್ಲಿ ಜಾತಿ ರಾಜಕರಾಣ ಮಾಡುತ್ತಾ ಮತ ಗಳಿಸಲು ‘ಬ್ರ್ಯಾಂಡ್ ಅಂಬಾಸಿಡರ್’ರಂತೆ ಬಳಸಿಕೊಳ್ಳುತ್ತಿದ್ದಾರೆ.

ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು! ಎಂಬ ಮುಖ್ಯ ಶೀರ್ಷಿಕೆಯಲ್ಲಿ ರಾಜ್ಯದ ಪ್ರಮುಖ ಕನ್ನಡ ಹಾಗೂ ಆಂಗ್ಲ ಪತ್ರಿಕೆಯಲ್ಲಿ ಪ್ರಕಟಗೊಂಡ ಜಾಹೀರಾತು ಬಹಳಷ್ಟು ಸುದ್ದಿಯಲ್ಲಿದೆ. ಹಲವು ದಿನಗಳಿಂದ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವೆ ಜಾಹೀರಾತು ವಾರ್ ನಡೆಯುತ್ತಿದೆ. ಇಂತಹದೊಂದು ಜಾಹೀರಾತು ವಾರ್ ನಡೆಯಲು ಕಾರಣ ಕೇಂದ್ರ ಸರ್ಕಾರ ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರಿಗೆ ಕೊಕ್ ನೀಡಿ ‘ಮನರೇಗಾ’ ಎಂಬ ಹೆಸರಿಗೆ ಬದಲಿ ಅದನ್ನು ‘ವಿಬಿ-ಜಿ ರಾ ಮ್‌ಜಿ ಯೋಜನೆ’ ಎಂದು ಪುನರ್ ನಾಮಕರಣ ಮಾಡಿರುವುದು.

ಇದರ ವಿರುದ್ಧ ಅಸಮಾಧಾನಗೊಂಡ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಪತ್ರಿಕಾ ಜಾಹೀರಾತು ರೂಪದಲ್ಲಿ ವಿರೋಧ ವ್ಯಕ್ತಪಡಿಸಲು ಗಾಂಧಿ ಹಾಗೂ ಸಂಘಪ್ಪರ ನಡುವೆ ಯೋಜನೆಯ ಬದಲಾವಣೆಯ ಕುರಿತು ನಡೆಯುವ ಸಂಭಾಷಣೆಯ ಎರಡು ಜಾಹೀರಾತನ್ನು ನೀಡಿದೆ.

ಇಲ್ಲಿ ’ಸಂಘಪ್ಪ’ ಎಂಬ ವ್ಯಕ್ತಿಯನ್ನು ಪರೋಕ್ಷವಾಗಿ ‘ಆರ್ʼಎಸ್‌ಎಸ್-ಸಂಘ ಪರಿವಾರ’ ಎಂದರ್ಥದಲ್ಲಿ ನಿರೂಪಿಸಲಾಗಿದೆ. ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಜಾಹೀರಾತ ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟಿಸಿದೆ. ಈ ಜಾಹೀರಾತಿಗೆ ಪ್ರತ್ಯುತ್ತರವಾಗಿ ‘ಏಟಿಗೆ ಎದುರೇಟು’ ಎಂಬಂತೆ ಫೆ.6ರಂದು ರಾಜ್ಯ ಬಿಜೆಪಿ ಪಕ್ಷವು ಕನ್ನಡ ಹಾಗೂ ಆಂಗ್ಲ ಪತ್ರಿಕೆಯಲ್ಲಿ ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು! ಎಂಬ ಜಾಹೀರಾತನ್ನು ನೀಡಿದೆ. ಆದರೆ ಈ ಜಾಹೀರಾತಿ ನಲ್ಲಿ ಬಿಜೆಪಿ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರದ ಜಾಹೀರಾತಿಗೆ ತಿರುಗೇಟು ನೀಡುವ ಭರದಲ್ಲಿ ಗಾಂಧಿಯವರು ತಮ್ಮ ಊರುಗೋಲನ್ನು ಲಾಠಿಯನ್ನಾಗಿಕೊಂಡು ಕಾಂಗ್ರೆಸ್ ನಾಯಕ ರನ್ನು ಹೊಡೆಯುತ್ತಿರುವ ಹಾಗೇ ನಿರೂಪಿಸಿದ್ದಾರೆ.

ಇದನ್ನೂ ಓದಿ: Surendra Pai Column: ʼಜೆನ್-ಝಿʼ ಪೀಳಿಗೆಗೆ ಪ್ರೇರಣೆಯಾದ ಪದ್ಮ ಪ್ರಶಸ್ತಿಗಳು

ಯಾವ ಮಹಾತ್ಮ ಗಾಂಧಿ ತನ್ನ ಜೀವನವನ್ನೆ ಸತ್ಯ ಹಾಗೂ ಅಹಿಂಸಾ ತತ್ವ, ಸಿದ್ಧಾಂತಕ್ಕಾಗಿ ಬಾಳಿ ಬದುಕಿ ವಿಶ್ವಕ್ಕೆ ಆದರ್ಶಪ್ರಾಯರಾದರೋ ಅದೇ ಮಹಾತ್ಮರ ಕೈಗೆ ಲಾಠಿ ನೀಡಿ ಹಿಂಸೆ ಮಾಡಿಸುತ್ತಾ ‘ಲಾಠಿಯನ್ನೇ ಬಂಡವಾಳ’ವನ್ನಾಗಿಸಿದ ರಾಜ್ಯ ಬಿಜೆಪಿ ಪಕ್ಷದ ಧೋರಣೆ ಬಹಳಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಗಾಂಧಿವಾದಿಗಳು ಸೇರಿದಂತೆ ರಾಷ್ಟ್ರೀಯ ಚಿಂತಕರಿಗೆ ಈ ದೃಶ್ಯ ಘಾಸಿಯುಂಟು ಮಾಡಿದೆ.

ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆಯನ್ನು ನಾವೆ ಕೇಳಿದ್ದೇವೆ. ಆದರೆ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಎರಡು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ ಒಳ ಜಗಳದಲ್ಲಿ ಗಾಂಧೀಜಿಯವರ ಸತ್ಯ, ಅಹಿಂಸಾ ತತ್ವಗಳಿಗೆ ಧಕ್ಕೆಯಾಗುತ್ತಿದೆ.

ಗಾಂಧಿ ಕೈಯಲ್ಲಿ ಲಾಠಿ ಹಿಡಿಸಿದ್ದಕ್ಕೆ ಆಯಾಯ ಪಕ್ಷದ ಹಿಂಬಾಲಕರು, ಕಾರ್ಯಕರ್ತರು ಮಾತ್ರ ತಮ್ಮ ಪಕ್ಷದ ನೆಲೆಗಟ್ಟಿನಲ್ಲಿ ನಿಂತು ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆಯೇ ಹೊರತು ಅವರಾರೂ ಪಕ್ಷಾತೀತವಾಗಿ ಗಾಂಽಯ ಚಿಂತನೆಗಳ, ಮೌಲ್ಯಗಳ ಮೇಲೆ ಜಾಗತಿಕ ವಾಗಿ ಹಾಗೂ ಇಂದಿನ ಯುವಪೀಳಿಗೆಯ ಮೇಲೆ ಯಾವ ಪ್ರಭಾವ ಬೀರುತ್ತಿದೆ ಎಂಬ ಚಿಂತನೆ ನಡೆಸುತ್ತಿಲ್ಲ.

ಸ್ವಾತಂತ್ರ್ಯ ಬಂದು 75 ವರ್ಷಕ್ಕೂ ಹೆಚ್ಚು ಸಮಯವಾದರೂ ಸಹ ಇನ್ನೂ ತನಕವೂ ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ಬಿಟ್ಟು ಗಾಂಧೀಜಿ, ಅಂಬೇಡ್ಕರ್‌ರಂತಹ ಧೀಮಂತ ವ್ಯಕ್ತಿತ್ವವನ್ನು ತಮ್ಮ ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು, ಚುನಾವಣೆಯಲ್ಲಿ ಜಾತಿ ರಾಜಕಾರಣ ಮಾಡುತ್ತಾ ಮತ ಗಳಿಸಲು ‘ಬ್ರ್ಯಾಂಡ್ ಅಂಬಾಸಿಡರ್’ರಂತೆ ಬಳಸಿ ಕೊಳ್ಳುತ್ತಿದ್ದಾರೆ ಎಂಬುದು ಬಹಳ ಬೇಸರದ ಸಂಗತಿ.

ರಾಷ್ಟ್ರಪಿತ ಮಹಾತ್ಮ ಗಾಂಧಿ

ಒಂದೊಮ್ಮೆ ಗಾಂಧಿ ಇಂದಿಗೆ ಬದುಕಿದ್ದರೆ ಇವೆಲ್ಲವನ್ನೂ ನೋಡಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತಿದ್ದರೆ ವಿನಃ ಕೈಯಲ್ಲಿ ದೊಣ್ಣೆ ಹಿಡಿದು ತಿದ್ದುವುದಕ್ಕೆ ಹೋಗುತ್ತಿರಲಿಲ್ಲ. ವಾಸ್ತವದಲ್ಲಿ ನಾವು ಗಾಂಧೀಜಿ, ಅಂಬೇಡ್ಕರ್‌ರವರ ಹೆಸರಿನ ಯೋಜನೆಯ ಹಿಂದೆ ಬೀಳುವುದಕ್ಕಿಂತಲೂ ಅವರ ಚಿಂತನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಬೇಕಿತ್ತು. ಆದರೆ ಅದೊಂದನ್ನು ಬಿಟ್ಟು ಬೇರೆ ಆಗುತ್ತಿದೆ. ಇದಕ್ಕೆ ಚೆಂದದ ನಿದರ್ಶನ ‘ಸ್ವಚ್ಛಭಾರತ ಅಭಿಯಾನ’.

ಪ್ರಧಾನಿಗಳು ಗಾಂಧಿಯ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅಭಿಯಾನ ಪ್ರಾರಂಭಿಸಿ ದಶಕಗಳೇ ಸಂದಿದವು. ಕೇಂದ್ರ ಸರ್ಕಾರ ಯೋಜನೆಯ ಯಶಸ್ವಿ ಯಾಗಿ ಎಲ್ಲಾ ಪ್ರಯತ್ನ ಮಾಡಿತ್ತಾದರೂ ನಮ್ಮ ಜನರಿಗೆ ಸ್ವಚ್ಛತೆಯ ಮಹತ್ವ ಇನ್ನೂ ಅರಿವಿಗೆ ಬಂದಿಲ್ಲ.

ಇಂದು ಗಾಂಧಿ ಹೆಸರನ್ನು ಬದಲಾಯಿಸಿದ್ದಕ್ಕೆ ಬೊಬ್ಬಿಡುವ ರಾಜಕೀಯ ಪಕ್ಷಗಳು ಅದೇ ಗಾಂಧಿಯ ಸ್ವಚ್ಛತೆಯ ಪಾಠವನ್ನು ಏಕೆ ಜನರಿಗೆ ತಲುಪಿಸಿಲ್ಲ, ತಮ್ಮ ಕಾರ್ಯಕರ್ತರ ಮೂಲಕ ಅವರವರ ವಾರ್ಡ್‌ನಲ್ಲಿ ಯಶಸ್ವಿಯಾಗಿ ಜಾರಿಗೆ ಬರುವಂತೆ ಮಾಡಬಹು ದಿತ್ತಲ್ಲ. ನಮ್ಮ ಕಸವನ್ನು ನಾವು ಸ್ವಚ್ಛಗೊಳಿಸಲು ಅಭಿಯಾನಕ್ಕಾಗಿ ಸಾವಿರಾರು ಕೋಟಿ ಪೋಲಾಗುವಂತೆ ಮಾಡಿಸಿದ್ದು ದೇಶದ ಆರ್ಥಿಕತೆಗೆ ನಷ್ಟವಲ್ಲವೇ? ಅಲ್ಲಿ ಬಳಕೆಯಾದದ್ದು ಸಹ ನಮ್ಮ ತೆರಿಗೆ ಹಣ ಎಂಬ ಜ್ಞಾನವೇಕಿಲ್ಲ? ಇಂತಹ ಹತ್ತಾರು ಯೋಜನೆಗಳು ಇಂದು ಹಳ್ಳ ಹಿಡಿದಿವೆ.

ಯೋಜನೆಗೊಂದು ಸ್ವಾತಂತ್ರ್ಯ ಹೋರಾಟಗಾರರ ಹೆಸರಿಟ್ಟು ಒಂದೆರಡು ಭಾವನಾತ್ಮಕ ಮಾತನಾಡಿ ಒಳಗಿಂದೊಳಗೆ ಯೋಜನೆಯ ಹಣ ಲಪಟಾಯಿಸುವುದಕ್ಕೆ ಗಾಂಧಿ, ಅಂಬೇಡ್ಕರ್‌ರಂತಹ ಸ್ವಾತಂತ್ರ್ಯ ಹೋರಾಟಗಾರ ಹೆಸರನ್ನೇಕೆ ಬಳಸಿಕೊಳ್ಳಬೇಕು? ಇಂದಿಗೂ ಸಹ ಸಾಮಾಜಿಕ ಜಾಲತಾಣದಲ್ಲಿ ಗಾಂಧಿ ಜೀವನ, ಪ್ರಸುತ್ತತೆ ಬಗ್ಗೆ ರಾಜಕೀಯ ನೆಲೆಗಟ್ಟಿನಲ್ಲಿ ಮಾತ್ರ ಚರ್ಚೆ ನಡೆಯುತ್ತಿರುತ್ತವೆ. ಅಂದು ಗಾಂಧೀಜಿಯವರು ಹುತಾತ್ಮ ರಾದಾಗ, ವಿಶ್ವಸಂಸ್ಥೆಯ ಎಲ್ಲ ದೇಶಗಳ ಧ್ವಜಗಳನ್ನೂ ಅರ್ಧಮಟ್ಟಕ್ಕೆ ಹಾರಿಸಲಾಯಿತು.

ಯಾವುದೇ ದೇಶದ ನಾಯಕ ನಿಧನರಾದಾಗ ಆ ದೇಶದ ಧ್ವಜವನ್ನು ಮಾತ್ರ ವಿಶ್ವಸಂಸ್ಥೆ ಯಲ್ಲಿ ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದ ಗಾಂಧೀಜಿಯವರು ನಿಧನರಾದಾಗ ಏಕೆ ಎಲ್ಲ ದೇಶಗಳ ಧ್ವಜಗಳನ್ನೂ ಅರ್ಧಮಟ್ಟಕ್ಕೆ ಹಾರಿಸಲಾಯಿತು ಎಂದು ಕೇಳಿದಾಗ ವಿಶ್ವಸಂಸ್ಥೆಯ ಅಂದಿನ ಕಾರ್ಯದರ್ಶಿಗಳು ನೀಡಿದ ಉತ್ತರ ಇಂದು ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಾಗಿಲ್ಲ, ಬದಲಿಗೆ ಮಾನವಿಯತೆಯ ಹತ್ಯೆ ಯಾಗಿದೆ ಎಂದು ಹೇಳಿದ್ದು ಗಾಂಧೀಜಿ ಮಾನವೀಯ ಮೌಲ್ಯಗಳನ್ನು ಯಾವ ಪ್ರಮಾಣ ದಲ್ಲಿ ಪ್ರತಿನಿಧಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಗಾಂಧೀಜಿ ಅಂದು ಬ್ರಿಟಿಷರ ವಿರುದ್ಧ ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹ, ವಿದೇಶಿ ವಸ್ತ್ರಗಳ ಬಹಿಷ್ಕಾರ, ಚರಕ ಹಾಗೂ ನೂಲಿನ ಬಳಕೆ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಹೀಗೆ ಹತ್ತು ಹಲವು ಹೋರಾಟವನ್ನು ನಡೆಸುವಾಗಲೂ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೈಯಲ್ಲಿದ್ದ ಕೋಲನ್ನು ಎತ್ತಿರಲಿಲ್ಲ.

ಹಿಂಸಾ ಮಾರ್ಗ ಅನುಸರಿಸಲಿಲ್ಲ. ಅವರು ಸಹ ರಾಮನ ಆದರ್ಶಗಳನ್ನು ಪಾಲಿಸಿದ್ದರು, ಗೌರವಿಸಿದ್ದರು. ಹಿಂಸೆಯ ಬದಲಾಗಿ ಉಪವಾಸ ಸತ್ಯಾಗ್ರಹ, ಅಹಿಂಸೆ, ಪ್ರೀತಿ ಪ್ರೇಮಗಳೆಂಬ ಮಾನವೀಯ ಮೌಲ್ಯಗಳ ಪ್ರತಿಪಾದನೆಯ ಮೂಲಕವೇ ಗಾಂಧೀಜಿ, ನುಡಿದಂತೆ ನಡೆದರು.

ಆ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತಾ ನಿವಾರಣೆ, ಸ್ತ್ರೀಸ್ವಾತಂತ್ರ್ಯ, ಜಾತಿ ಪದ್ಧತಿ ನಿರ್ಮೂಲನೆಗಾಗಿ ಹೋರಾಡಿದರು. ಇವುಗಳನ್ನು ಸಾಧಿಸುವಾಗ ಅದೆಷ್ಟೋ ಅಡೆ ತಡೆ ಬಂದರೂ ಸಹ ಮಹಾತ್ಮರು ದೊಣ್ಣೆಯನ್ನು ಹಿಡಿದು ಹೋರಾಡಿ ಎಂಬ ಸಂದೇಶ ನೀಡಿರಲಿಲ್ಲ.

ಹಿಂಸೆಗೆ ಪ್ರತ್ಯುತ್ತರ ಅಹಿಂಸೆ, ದ್ವೇಷಿಸಿದವರನ್ನು ಪ್ರೀತಿಸಬೇಕು, ದ್ವೇಷ ದುರ್ಬಲತೆಯ ಸಂಕೇತ ಎನ್ನುವ ಗಾಂಧೀಜಿಯವರ ನಿಲುವುಗಳಿಗೆ ಬ್ರಿಟಿಷರು ಸೇರಿದಂತೆ ಅಂದಿನ ವಿಶ್ವದ ಅದೆಷ್ಟೋ ಸಮಕಾಲೀನ ಹಾಗೂ ಪ್ರಸ್ತುತ ರಾಷ್ಟ್ರ ನಾಯಕರು ಮಾರು ಹೋಗಿದ್ದಾರೆ.

ಹೀಗಿರುವಾಗ ರಾಜಕೀಯದ ಕೆಸರಾಟಕ್ಕಾಗಿ, ತಮ್ಮ ಮೇಲಿನ ಪಕ್ಷದ ಧುರೀಣರ ಮುಂದೆ ಸೈ ಏನಿಸಿಕೊಳ್ಳಲು ಕಾಂಗ್ರೆಸ್ ಜಾಹೀರಾತಿಗೆ ತಿರುಗೇಟು ನೀಡುವ ಅವರಸದಲ್ಲಿ ಬೌದ್ಧಿಕ ದಿವಾಳಿತನ, ಹತಾಶೆ ಹೊಂದಿ ಗಾಂಧಿ ಕೈಯಲ್ಲಿ ಲಾಠಿ ಹಿಡಿಸಿದ್ದು ಅಕ್ಷಮ್ಯವಲ್ಲವೇ? ಗಾಂಧಿ ಯಂತಹ ಅಹಿಂಸಾವಾದಿಗಳ ಕೈಯಲ್ಲಿ ಲಾಠಿ ಹಿಡಿಸಿ ಹೊಡೆಸುವ ಚಿಂತನೆ ನಡೆಸುವ ರಾಜಕಾರಣಿಗಳು ಇನ್ನೂ ರಾಜ್ಯದ ಹಿತವನ್ನು, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಲಾಠಿ ಹಿಡಿಯಿರಿ ಎನ್ನುತ್ತಾ ಹಿಂಸಾ ಮಾರ್ಗ ಅನುಸರಿಸುವುದಿಲ್ಲ ಎಂಬುದಕ್ಕೆ ಏನಿದೆ ಸಾಕ್ಷಿ? ರಾಜಕೀಯ ಅಂದ ಮೇಲೆ ಮಾತಿನ ಏಟು-ತಿರುಗೇಟು ಇರುವುದು ಸಹಜ.

ಹಾಗಂತ ಜನರಿಗೆ ಆದರ್ಶಪ್ರಾಯವಾದ ಚಿಂತನೆ ನೀಡಬೇಕಾದ ಜನನಾಯಕರೇ ಹಿಂಸಾ ವಾದಕ್ಕೆ ಪ್ರೇರಣೆ ನೀಡುವುದು ನ್ಯಾಯಯೋಚಿತವಲ್ಲ. ಅಂದು ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದಾಗ ‘ಕಾಂಗ್ರೆಸ್ ಪಕ್ಷ ವಿಸರ್ಜಿಸಿ’ ಎಂದಿದ್ದರಂತೆ. ಅದು ನಿಜವಾದರೆ ಅದೇ ಹೆಸರನ್ನೇ ಬಳಸಿಕೊಂಡು ರಾಜಕೀಯ ಮಾಡುತ್ತಿರುವುದು ಸಹ ಅಕ್ಷರಶಃ ತಪ್ಪಲ್ಲವೇ? ಅದು ಗಾಂಧಿಯ ಆಶಯಕ್ಕೆ ವಿರುದ್ಧ ಎಂದು ಕಾಂಗ್ರೆಸ್ ಪಕ್ಷದ ನೇತಾರರಿಗೆ ಗೊತ್ತಾಗಬೇಡವೇ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ, 1947ರ ಅಗಸ್ಟ್ 14ರಂದು ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಬಂಗಾಳದಲ್ಲಿ ದಂಗೆ ನಿಯಂತ್ರಣಕ್ಕಾಗಿ ಉಪವಾಸ ಕುಳಿತದ್ದನ್ನು ನಾವು ಮರೆತಿದ್ದೇವೆ. ಇದು ಗಾಂಧಿಯ ಹಿರಿಮೆ, ಅಹಿಂಸಾ ತತ್ವಕ್ಕೆ ಇರುವ ಶಕ್ತಿ.

ಬಹುಶಃ ಗಾಂಧಿಯ ವಿಚಾರಧಾರೆಯನ್ನು ನಾವು ಆರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಕಾರಣ ನಮಗೆ ಬೇಕಿರುವುದು ಮತ. ಹಾಗೇ ನೋಡಿದರೆ ಎಲ್ಲಾ ರಾಜಕೀಯ ಪಕ್ಷದಲ್ಲೂ ಸಹ ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ‘ನುಂಗಪ್ಪಗಳು ಕಾಣ ಸಿಗುತ್ತಾರೆ. ಚುನಾವಣೆ ಸಮಯದಲ್ಲಿ ಮತದಾರಿಗೆ ನೀಡುವ ಸುಳ್ಳು ಭರವಸೆ ನೀಡುತ್ತಾ ಐದು ವರ್ಷಕ್ಕೊಮ್ಮೆ ಪ್ರತ್ಯಕ್ಷರಾಗುವವರು, ಕೃಷಿ, ಶಿಕ್ಷಣ, ಆರೋಗ್ಯದಂತಹ ಮೂಲಭೂತ ಅವಶ್ಯಕತೆಯನ್ನು ಒದಗಿಸಲು ಸೋತವರು, ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಸಂಪತ್ತು ಲೂಟಿ ಮಾಡುವವರು, ಕಾಮಗಾರಿಯಲ್ಲಿ ಕಮಿಷನ್ ಪಡೆಯುವವರು ಹೀಗೆ ಜನರ ಭರವಸೆ ಕಳೆದುಕೊಂಡು ತಮ್ಮ ಕರ್ತವ್ಯ ಮರೆತ ಎಲ್ಲರೂ ಸಹ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನುಂಗಪ್ಪಗಳೇ ಅಲ್ಲವೇ!

ಜನರ ಭಾವನೆ, ಜಾತಿ ವ್ಯವಸ್ಥೆ, ಗಾಂಧಿ, ಅಂಬೇಡ್ಕರ್, ರಾಮ, ಕೃಷ್ಣರ ಹೆಸರನ್ನೇ ಆಧಾರ ವಾಗಿಟ್ಟುಕೊಂಡು ಚುನಾವಣೆ ಗೆಲ್ಲುವ ಮನಸ್ಥಿತಿ ಇರುವಾಗ ಗಾಂಧಿಯ ಅಹಿಂಸಾ ತತ್ವಗಳನ್ನು ಅರಿಯಲು ಹೇಗೆ ಸಾಧ್ಯವಾದೀತು? ಎಲ್ಲಕ್ಕಿಂತಲೂ ತಮಾಷೆಯ ಸಂಗತಿ ಯೆಂದರೆ ಈ ಜಾಹೀರಾತು ವಾರ್‌ನಲ್ಲಿ ವಿಲನ್ ಆಗಿದ್ದು ಮಾತ್ರ ಪತ್ರಿಕೆಗಳು. ಕಾಂಗ್ರೆಸ್ ಪಕ್ಷದ 2 ಜಾಹೀರಾತು ಪ್ರಕಟಿಸಿದ ಅದೇ ಪತ್ರಿಕೆಗಳು ಬಿಜೆಪಿಯ ಜಾಹೀರಾತು ಪ್ರಕಟಿಸಿದಾಗ ಅದೊಂದು ಅಪರಾಧ ಎಂಬಂತೆ ಟೀಕಿಸಿದರು.

ವಾಸ್ತವದಲ್ಲಿ ಗಾಂಧಿಯ ಅಹಿಂಸಾ ತತ್ವಕ್ಕೆ ವಿರುದ್ಧವಾಗಿ ಜಾಹೀರಾತನ್ನು ನೀಡಿದವರನ್ನು ಪ್ರಶ್ನಿಸಬೇಕಿತ್ತು. ಆದರೆ ಜನರು ಅದನ್ನು ಪ್ರಕಟಿಸಿದ ಪತ್ರಿಕೆ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ಮೂಲ ವಿಷಯವನ್ನೇ ಮರೆತರು.

ವಾಸ್ತವದಲ್ಲಿ ಪತ್ರಿಕೆಗಳು ಆ ಜಾಹೀರಾತನ್ನು ಪ್ರಕಟಿಸುವ ಮೂಲಕ ಜಾಹೀರಾತು ನೀಡಿ ದವರ ವಾಸ್ತವದ ಮನಸ್ಥಿತಿಯ ಅನಾವರಣ ಮಾಡಿದ್ದಾರೆ ಎಂಬ ಸತ್ಯವನ್ನು ಅರಿಯ ಬೇಕಿದೆ. ಒಂದೊಮ್ಮೆ ಆ ಜಾಹೀರಾತನ್ನು ಪತ್ರಿಕೆ ಪ್ರಕಟಿಸದಿದ್ದರೆ ಎಲ್ಲಾ ಪತ್ರಿಕೆಗಳು ಕಾಂಗ್ರೆಸ್ ಪರ ಎಂದು ಬಿಂಬಿತವಾಗುತ್ತಿದ್ದವು.

ಹಾಗಾಗಿ ಸುಖಾಸುಮ್ಮನೆ ನಮ್ಮ ಮೂಗಿನ ನೇರಕ್ಕೆ ಮಾಡುತ್ತಾ ಪತ್ರಿಕೆಯನ್ನು ಹಳಿಯುವ ಬದಲು ಪತ್ರಿಕೆಯ ನಿಷ್ಪಕ್ಷಪಾತ ಧೋರಣೆಯನ್ನು ನಾವು ಶ್ಲಾಘಿಸಬೇಕಿದೆ. ಅದೇನೇ ಇರಲಿ, ಮಹಾತ್ಮರನ್ನು ಯಾರೇ ಆಗಲಿ ರಾಜಕೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಹಿಂಸಾತ್ಮಕವಾಗಿ ನಿರೂಪಿಸುವುದು ಅಕ್ಷಮ್ಯ.

ಸಂಘಪ್ಪನಿರಲಿ, ನುಂಗಪ್ಪನಿರಲಿ ಗಾಂಧಿಯ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿ ಕೊಳ್ಳಬೇಕು. ಗಾಂಧಿಯ ಊರುಗೋಲನ್ನು ಲಾಠಿಯನ್ನಾಗಿಸದೇ ತಾಳ್ಮೆ ಕಳೆದುಕೊಳ್ಳದೇ, ವಿಚಾರ ವಿಮರ್ಶೆ, ಪ್ರೀತಿ, ಪ್ರೇಮದಿಂದ ಮಹಾತ್ಮರ ತತ್ವಗಳ ಪಾಲಿಸುತ್ತಾ ಅಹಿಂಸಾ ಮಾರ್ಗಗಳ ಮೂಲಕ ಮಾದರಿ ನಡೆ ಅನುಸರಿಸಬೇಕು.