Roopa Gururaj Column: ಏಕಲವ್ಯನ ಶ್ರದ್ಧೆಗೆ ಒಲಿದ ಬಿಲ್ವಿದ್ಯೆ
ನಿರಾಶನಾಗದ ಏಕಲವ್ಯನು, ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವ ರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಮನನ ಮಾಡಿಕೊಂಡು, ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ತನ್ನ ಮಾನಸ ಗುರುವೆಂದು ನಂಬಿ ಬಿಲ್ವಿದ್ಯೆಯನ್ನು ಸಾಧಿಸಿ ಕೊಳ್ಳುತ್ತಾನೆ


ಒಂದೊಳ್ಳೆ ಮಾತು
rgururaj628@gmail.com
ಮಹಾಭಾರತದಲ್ಲಿ ಏಕಲವ್ಯನನ್ನು ನಿಷಾದ ರಾಜಕುಮಾರ ಅಂತ ಹೆಸರಿಸಿದ್ದಾರೆ. ಒಮ್ಮೆ ಏಕಲವ್ಯ ನು ಬಿಲ್ವಿದ್ಯೆಯನ್ನು ಕಲಿಯುವ ಹಂಬಲದಿಂದ ದ್ರೋಣಾಚಾರ್ಯರ ಬಳಿಗೆ ಬರುತ್ತಾನೆ. ಆದರೆ ತಮ್ಮ ಮೆಚ್ಚಿನ ಶಿಷ್ಯ ಅರ್ಜುನನನ್ನು ಜಗತ್ತಿನ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುವ ಪಣ ತೊಟ್ಟಿದ್ದ ದ್ರೋಣರು, ಕ್ಷತ್ರಿಯರಲ್ಲದವರಿಗೆ ಬಿಲ್ವಿದ್ಯೆ ಹೇಳಿಕೊಡಲು ಇಚ್ಛಿಸದೆ, ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ನಿರಾಶನಾಗದ ಏಕಲವ್ಯನು, ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಮನನ ಮಾಡಿಕೊಂಡು, ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ತನ್ನ ಮಾನಸ ಗುರುವೆಂದು ನಂಬಿ ಬಿಲ್ವಿದ್ಯೆಯನ್ನು ಸಾಧಿಸಿಕೊಳ್ಳುತ್ತಾನೆ.
ನಂತರ ತನ್ನ ಇಚ್ಛಾಶಕ್ತಿಯ ಬಲದಿಂದಲೇ ಏಕಲವ್ಯನು ಅರ್ಜುನನ ಸಮಾನವಾಗಿ ಕೌಶಲ್ಯವನ್ನು ಹೊಂದುತ್ತಾನೆ. ಒಮ್ಮೆ ದ್ರೋಣಾಚಾರ್ಯರು ತಮ್ಮ ಪ್ರಿಯ ಶಿಷ್ಯ ಅರ್ಜುನನೊಂದಿಗೆ ಕಾಡಿನ ವೀಕ್ಷಣೆಗೆ ಬಂದಿರುತ್ತಾರೆ. ಅದೇ ವೇಳೆ ದೂರದಲ್ಲಿ ನಾಯಿಯೊಂದು ಬೊಗಳುತ್ತ ಬರುತ್ತದೆ. ಶಬ್ದ ವೇದಿ ವಿದ್ಯೆಯಲ್ಲಿ ಪಾರಂಗತನಾಗಿದ್ದ ಅರ್ಜುನ ತಾನು ಬಾಣ ಪ್ರಯೋಗ ಮಾಡಿ ನಾಯಿಯ ಬೊಗಳುವಿಕೆಯನ್ನು ನಿಲ್ಲಿಸಲು ಯೋಚಿಸುತ್ತಾನೆ.
ಇದನ್ನೂ ಓದಿ: Roopa Gururaj Column: ನಳ ದಮಯಂತಿಯನ್ನು ಸೇರಿಸಿದ ಅಕ್ಷ ಹೃದಯ ವಿದ್ಯೆ
ಆದರೆ ಅಷ್ಟರಲ್ಲಿ ಆ ನಾಯಿಯ ಬೊಗಳುವಿಕೆ ನಿಂತು ಹೋಗುತ್ತದೆ. ಮುಂದೆ ಸಾಗಿ ಪರೀಕ್ಷಿಸಿದಾಗ ಯಾರೋ ಶಬ್ದವೇದಿ ವಿದ್ಯೆಯಲ್ಲಿ ನಿಪುಣರಾದವರು ಮೊದಲೇ ಅದರ ಬಾಯಿಗೆ ಬಾಣಗಳನ್ನು ತುಂಬಿ ಬೊಗಳುವಿಕೆಯನ್ನು ನಿಲ್ಲಿಸಿರುತ್ತಾರೆ. ಇದರಿಂದ ಚಕಿತರಾದ ದ್ರೋಣಾಚಾರ್ಯರು ಮತ್ತು ಅರ್ಜುನ ಬಾಣ ಹೂಡಿದ ವ್ಯಕ್ತಿಯನ್ನು ಹುಡುಕಿಕೊಂಡು ಸಾಗಿದಾಗ ಏಕಲವ್ಯನನ್ನು ಸಂಧಿಸು ತ್ತಾರೆ.
ಏಕಲವ್ಯ ಅಭ್ಯಾಸದಲ್ಲಿ ನಿರತನಾಗಿದ್ದಾಗ ನಾಯಿ ಬೊಗಳುತ್ತಾ ತನ್ನ ಏಕಾಗ್ರತೆಗೆ ಭಂಗ ತಂದಾಗ ಅದರ ಕಡೆ ನೋಡದೆ ಬಾಣಗಳನ್ನು ಬಿಟ್ಟು ಅದನ್ನು ಸುಮ್ಮನಾಗಿಸಿರುತ್ತಾನೆ. ಅರ್ಜುನ ದ್ರೋಣರು ಅವನನ್ನು ಹುಡುಕಿಕೊಂಡು ಬಂದಾಗ ದ್ರೋಣರನ್ನು ನೋಡಿ, ಅವರೇ ಅವನ ಮಾನಸ ಗುರುಗಳು ಎಂದು ಭಕ್ತಿಯಿಂದ ನಮಸ್ಕರಿಸುತ್ತಾನೆ. ಇದರಿಂದ ದ್ರೋಣರಿಗೆ ಕಸಿಬಿಸಿಯಾಗುತ್ತದೆ. ಅಜ್ಜಿ ನನಗೆ ಕೊಟ್ಟ ಮಾತು ಉಳಿಸಿಕೊಳ್ಳದಂತಾಗುತ್ತದೆ ಎಂದು ಅವರಿಗೆ ಚಿಂತೆಯಾಗುತ್ತದೆ. ಇತ್ತ ಅರ್ಜುನನಿಗೆ ದ್ರೋಣರ ಮೇಲೆ ಅಸಹನೆ, ಕೋಪ ಉಕ್ಕುತ್ತದೆ. ಇದನ್ನು ಗಮನಿಸಿದ ದ್ರೋಣರು ಏಕಲವ್ಯನಿಗೆ ನಾನು ನಿನ್ನ ಮಾನಸ ಗುರು ಎಂದ ಮೇಲೆ ನೀನು ನನಗೆ ಗುರು ದಕ್ಷಿಣೆಯನ್ನು ನೀಡಬೇಕು ಎನ್ನುತ್ತಾರೆ.
ಸಂತೋಷದಿಂದ ಏಕಲವ್ಯ ಒಪ್ಪಿಕೊಂಡಾಗ, ಅರ್ಜುನನನ್ನು ಸಂತೈಸಲು ಏಕಲವ್ಯನ ಹೆಬ್ಬಟ್ಟನ್ನೇ ಗುರುದಕ್ಷಿಣೆಯಾಗಿ ಕೇಳುತ್ತಾರೆ. ಒಂದು ಕ್ಷಣವು ಯೋಚಿಸದ ಈಗಲವ್ಯ ಅದನ್ನು ಕತ್ತರಿಸಿ ಅವರ ಮುಂದೆ ಗುರುದಕ್ಷಿಣೆಯಾಗಿ ಇಟ್ಟುಬಿಡುತ್ತಾನೆ.
ನಂತರದ ದಿನಗಳಲ್ಲಿ ಏಕಲವ್ಯ ಮತ್ತೆ ಬಾಣ ಪ್ರಯೋಗಿಸುವುದನ್ನು ಕಲಿತು ಸವ್ಯಸಾಚಿ ಎನಿಸಿ ಕೊಳ್ಳುತ್ತಾನೆ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಆತ ಕೌರವರ ಪಕ್ಷ ಸೇರಿ ಪಾಂಡವರೊಂದಿಗೆ ಹೋರಾಟ ಮಾಡುತ್ತಾ ಹತನಾಗುತ್ತಾನೆ. ಅದೇನೇ ಇರಲಿ ಗುರುಭಕ್ತಿಗೆ ಮಾತ್ರ ಅವನನ್ನು ಇಂದಿಗೂ ನೆನೆಯಲಾಗುತ್ತದೆ. ಅರ್ಜುನನಷ್ಟೇ ಬಿಲ್ವಿದ್ಯೆಯಲ್ಲಿ ಅವನೂ ಸಮರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಂತಹ ಗುರು ಶಿಷ್ಯ ಪರಂಪರೆಯ ಅನೇಕ ಕಥೆಗಳು ನಮ್ಮ ಪುರಾಣದಲ್ಲಿ ನಮಗೆ ನೋಡಲು ಸಿಗುತ್ತವೆ. ಕಲಿಯುವ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಎಂತಹವರು ಕೂಡ ವಿದ್ಯೆಯನ್ನು ಕಲಿಯ ಬಹುದು ಅದರಲ್ಲಿ ಪರಿಣತಿ ಹೊಂದ ಬಹುದು ಎನ್ನುವುದಕ್ಕೆ ಏಕಲವ್ಯನ ಕಥೆ ಒಂದು ದೊಡ್ಡ ನಿದರ್ಶನ. ನಮ್ಮ ಮಕ್ಕಳಿಗೂ ಕೂಡ ಇಂತಹ ಕಥೆಗಳನ್ನು ಹೇಳುತ್ತಾ ಶಾಲೆಯಲ್ಲಿ ಅವರು ವಿದ್ಯಾ ಭ್ಯಾಸದ ಕಡೆ ಗಮನ ನೀಡುವಂತೆ, ಗುರುಗಳ ಬಗ್ಗೆ ಹಗುರವಾಗಿ ಮಾತನಾಡದಂತೆ ಬೆಳೆಸಬೇಕು.
ತಂದೆ ತಾಯಿಗಳಾಗಿ ನಾವು ಈ ಪರಿಪಾಠವನ್ನು ಇರಿಸಿಕೊಂಡಾಗ ಮಕ್ಕಳು ಕೂಡ ನಮ್ಮನ್ನು ನೋಡಿ ಕಲಿಯುತ್ತಾರೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.