ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಮಹಾಭಾರತ ಕಥೆ ಹೆಣೆಯಲಿಕ್ಕೆ ಹಾವುಗಳೇ ಹಗ್ಗವಾದುವೇ ?

ಮಹಾ ಭಾರತವನ್ನು ವೇದವ್ಯಾಸರು ರಚಿಸಿದ್ದು ಮತ್ತು ಗಣೇಶನು ಅವರಿಂದ ನಿರಂತರವಾಗಿ ಉಕ್ತಲೇಖನದಂತೆ ಬರೆದದ್ದು ಹೌದಾದರೂ, ಮಹಾಭಾರತ ಮಹಾಕಾವ್ಯದ ಮೊತ್ತಮೊದಲ ಸಾರ್ವಜನಿಕ ನಿರೂಪಣೆ ಆದದ್ದು, ಅಂದರೆ ಒಂದು ಕಥೆಯಂತೆ ಅದನ್ನು ಜನರೆದುರಿಗೆ ಹೇಳಿದ್ದು ವ್ಯಾಸಶಿಷ್ಯ ವೈಶಂಪಾಯನ ಮಹರ್ಷಿ.

ಮಹಾಭಾರತ ಕಥೆ ಹೆಣೆಯಲಿಕ್ಕೆ ಹಾವುಗಳೇ ಹಗ್ಗವಾದುವೇ ?

ತಿಳಿರುತೋರಣ

srivathsajoshi@yahoo.com

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖ ಪಾಲ, ಧೃತರಾಷ್ಟ್ರ, ತಕ್ಷಕ, ಕಾಲಿಯ- ಇವರೇ ‘ನವನಾಗ’ ಎಂದು ಗುರುತಿಸಲ್ಪಡುವವರು; ಮೊನ್ನೆ ನಾಗರಪಂಚಮಿಯಂದು ಪೂಜೆಗೊಂಡವರು. ಪುರಾಣಗಳ ಪ್ರಕಾರ ಇವರೆಲ್ಲರೂ ಕಶ್ಯಪ-ಕದ್ರೂ ದಂಪತಿಯ ಮಕ್ಕಳು. ಈ ಪಟ್ಟಿಯಲ್ಲಿ ಮೊದಲ ಮೂವರು ಲೋಕಕಂಟಕರಾಗಿ ಅಲ್ಲ ಲೋಕೋದ್ಧಾರಕರಾಗಿಯೇ ಕಾಣಿಸಿಕೊಂಡವರು.

ಅನಂತನು ಶ್ರೀಮನ್ನಾರಾಯಣನ ಹಾಸಿಗೆಯಾಗಿ, ವಾಸುಕಿಯು ಸಮುದ್ರಮಥನದ ವೇಳೆ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ಮತ್ತು ಶೇಷನು ಭೂಮಿಯನ್ನು ಸದಾಕಾಲ ತನ್ನ ತಲೆಯ ಮೇಲೆ ಹೊತ್ತವನಾಗಿ. ಅನಂತ ಮತ್ತು ಆದಿಶೇಷ ಇಬ್ಬರು ಬೇರೆಬೇರೆನಾ ಅಥವಾ ಒಬ್ಬರೇನಾ ಎಂಬ ಜಿಜ್ಞಾಸೆಯಿದೆ. ಅವರಿಬ್ಬರ ವಿವರಗಳು ಒಂದೇ ರೀತಿ ಇರುವುದರಿಂದ.

ಹಾಗೆಯೇ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಸರ್ಪಗಳ ಪೈಕಿ ನಾನು ವಾಸುಕಿಯು’ ಎಂದು ಒಂದು ಶ್ಲೋಕದಲ್ಲಿ ಮತ್ತು ತತ್‌ಕ್ಷಣವೇ ಮುಂದಿನ ಶ್ಲೋಕದಲ್ಲಿ ‘ನಾಗಗಳ ಪೈಕಿ ನಾನು ಅನಂತನು’ ಎಂದು ಹೇಳಿರುವುದರಿಂದ ನಾಗ ಬೇರೆ ಮತ್ತು ಸರ್ಪ ಬೇರೆನಾ ಎಂಬೊಂದು ಜಿಜ್ಞಾಸೆಯೂ ಮನದಲ್ಲಿ ಮೂಡುತ್ತದೆ. ಪ್ರಾಜ್ಞರು ಅದಕ್ಕೆ ಬೇರೆಬೇರೆ ವ್ಯಾಖ್ಯಾನಗಳನ್ನೂ ಕೊಡುತ್ತಾರೆ. ಆದರೆ ನಾವೀಗ ಅದನ್ನೆಲ್ಲ ಒಮ್ಮೆ ಬದಿಗಿಟ್ಟು, ನವನಾಗಗಳ ಪಟ್ಟಿಯಲ್ಲಿ ಅನಂತನೂ ವಾಸುಕಿಯೂ ಇರುವುದರಿಂದ ಸದ್ಯಕ್ಕೆ ಸ್ಥೂಲವಾಗಿ ಎಲ್ಲ ಒಂದೇ ಎಂದುಕೊಳ್ಳೋಣ.

ಇದನ್ನೂ ಓದಿ: Srivathsa Joshi Column: ಸುವರ್ಚಲೆಯ ಒಗಟಿಗೆ ಉತ್ತರವಾಗಿ ಬಂದು ವರಿಸಿದ ಶ್ವೇತಕೇತು

ಅಲ್ಲದೇ ಇವರೆಲ್ಲ ಭೌತಿಕವಾಗಿ ನಾವೀಗ ನೋಡುವ ಹಾವುಗಳಂತೆಯೇ ಕಾಣುತ್ತಿದ್ದರು ಎಂದೇನಿಲ್ಲ. ನಾಗಶಕ್ತಿಯುಳ್ಳ ದೇವತೆಗಳಂತೆ ಕಂಡುಬರುತ್ತಿದ್ದರು ಎಂದು ಊಹಿಸಲಿಕ್ಕೆ ಅಡ್ಡಿಯಿಲ್ಲ. ಅಂದ ಹಾಗೆ ಈ ಪಟ್ಟಿಯಲ್ಲಿರುವ ಪದ್ಮನಾಭ, ಕಂಬಲ, ಮತ್ತು ಶಂಖಪಾಲರ ಬಗ್ಗೆ ಹೆಚ್ಚೇನೂ ಕಥೆಗಳಿದ್ದಂತಿಲ್ಲ. ಹಾಗೆಯೇ ಈ ಪಟ್ಟಿಯಲ್ಲಿರುವ ಧೃತರಾಷ್ಟ್ರನೆಂದರೆ ದುರ್ಯೋ ಧನನ ತಂದೆ ಹಸ್ತಿನಾಪುರದ ಅಂಧದೊರೆ ಅಲ್ಲವೆಂದು ಗಮನಿಸಬೇಕು.

ಸರ್ಪರಾಜನಾದ ಧೃತರಾಷ್ಟ್ರನ ಬಳಿ ಸಂಜೀವಕರತ್ನ ಕೊಡುವಂತೆ ಚಿತ್ರಾಂಗದೆ ಕೇಳಿದ್ದಳು, ಆತ ನಿರಾಕರಿಸಲಾಗಿ ಬಭ್ರುವಾಹನನೇ ಆತನೊಡನೆ ಕಾದಾಡಿ ಸಂಜೀವಕವನ್ನು ಪಡೆದನು, ತನ್ಮೂಲಕ ಅರ್ಜುನನನ್ನು ಬದುಕಿಸಿದನು- ಎಂಬ ಪ್ರಸಂಗದಲ್ಲಷ್ಟೇ ಧೃತರಾಷ್ಟ್ರನೆಂಬ ಸರ್ಪದ ಉಲ್ಲೇಖ ಬರುತ್ತದೆ. ಕಾಲಿಯನ ಕಥೆ- ಗರುಡನ ನಿತ್ಯಸರ್ಪಭಕ್ಷಣಕ್ಕೆ ವಿರೋಧ ಒಡ್ಡಿದ್ದು, ಗರುಡನು ಕಾಲಿಯನನ್ನು ಅಟ್ಟಿಸಿಕೊಂಡು ಬಂದಾಗ ಯಮುನಾ ನದಿಯ ಕಾಳಿಂದಿ ಮಡುವಿನಲ್ಲಿ ಅಡಗಿದ್ದು, ಅಲ್ಲಿ ವಿಷಜ್ವಾಲೆಯಿಂದಾಗಿ ಮಡುವಿನ ನೀರೆಲ್ಲ ವಿಷಮಯವಾದದ್ದು, ನೀರನ್ನು ಕುಡಿದ ಪ್ರಾಣಿಗಳು ಸಾಯತೊಡಗಿದ್ದು, ಆಮೇಲೆ ಬಲರಾಮನೊಡನೆ ಬಾಲಕೃಷ್ಣನು ಅಲ್ಲಿಗೆ ಬಂದು ಕಾಲಿಯನ ಹೆಡೆಗಳ ಮೇಲೆ ನಾಟ್ಯವಾಡಿದ್ದು, ನಾಗಕನ್ಯೆಯರು ಪತಿಭಿಕ್ಷೆ ಬೇಡಿದ್ದು, ಕೃಷ್ಣನು ಕಾಲಿಯನಿಗೆ ಅಭಯವಿತ್ತು ಪಾತಾಳಕ್ಕೆ ಅಟ್ಟಿದ್ದು- ಹೆಚ್ಚು ಪ್ರಸಿದ್ಧವಾದ ಕಥೆಯೇ.

ತಕ್ಷಕ ಮಾತ್ರ ಇವರೆಲ್ಲರಿಗಿಂತ ತುಸು ಭಿನ್ನ ಮತ್ತು ವಿಶೇಷವಾದವನು. ಮಹಾಭಾರತದುದ್ದಕ್ಕೂ ತಕ್ಷಕನ ಉಲ್ಲೇಖ ಬೇರೆ ಬೇರೆ ಪ್ರಸಂಗಗಳಲ್ಲಿ ಬರುತ್ತದೆ. ಹಾಗೆ ನೋಡಿದರೆ, ಒಂದು ಕಥೆಯಾಗಿ ಮಹಾಭಾರತ ಆರಂಭ ಆಗುವುದಕ್ಕೂ ತಕ್ಷಕನೇ ಕಾರಣ; ಘಟನಾವಳಿ ಪ್ರಕಾರ ಮಹಾಭಾರತದ ಅಂತ್ಯವಾದದ್ದೂ ತಕ್ಷಕನಿಂದಲೇ ಎಂದು ಕೂಡ ಹೇಳಬಹುದು.

ಹೇಗೆ ಗೊತ್ತೇ? ಮಹಾ ಭಾರತವನ್ನು ವೇದವ್ಯಾಸರು ರಚಿಸಿದ್ದು ಮತ್ತು ಗಣೇಶನು ಅವರಿಂದ ನಿರಂತರವಾಗಿ ಉಕ್ತಲೇಖನದಂತೆ ಬರೆದದ್ದು ಹೌದಾದರೂ, ಮಹಾಭಾರತ ಮಹಾಕಾವ್ಯದ ಮೊತ್ತಮೊದಲ ಸಾರ್ವಜನಿಕ ನಿರೂಪಣೆ ಆದದ್ದು, ಅಂದರೆ ಒಂದು ಕಥೆಯಂತೆ ಅದನ್ನು ಜನರೆದುರಿಗೆ ಹೇಳಿದ್ದು ವ್ಯಾಸಶಿಷ್ಯ ವೈಶಂಪಾಯನ ಮಹರ್ಷಿ.

ಜನಮೇಜಯನು ಆಯೋಜಿಸಿದ್ದ ಸರ್ಪಯಜ್ಞದ ಸಂದರ್ಭದಲ್ಲಿ. ಆ ಯಜ್ಞ ನಡೆದದ್ದೇ ತಕ್ಷಕನನ್ನು ಕೊಲ್ಲುವು ದಕ್ಕಾಗಿ! ತಕ್ಷಕ ಅದರಲ್ಲಿ ಸಾಯಲಿಲ್ಲವೆನ್ನುವುದು ಬೇರೆ ಮಾತು. ಹಾಗೆಯೇ, ಘಟನಾವಳಿ ಪ್ರಕಾರ ಮಹಾಭಾರತ ಅಂತ್ಯವಾದದ್ದೂ ಕುರುಕ್ಷೇತ್ರ ಯುದ್ಧಸಮಯದಲ್ಲಿ ಇದ್ದವರ ಪೈಕಿ ಕಟ್ಟಕಡೆಯವನಾದ, ಅಭಿಮನ್ಯು-ಉತ್ತರೆಯರ ಸುಪುತ್ರನಾದ ಪರೀಕ್ಷಿತನನ್ನು ತಕ್ಷಕನು ಕೊಲ್ಲುವುದರ ಮೂಲಕ!

ಅಂದರೆ ಮಹಾಭಾರತವನ್ನು ಚಕ್ರಪಥವಾಗಿ ಸುತ್ತಿಕೊಂಡವನು ತಕ್ಷಕ. ಆತನೊಬ್ಬನೇ ಅಲ್ಲ, ಮಹಾಭಾರತದ ಬೇರೆಬೇರೆ ಪ್ರಸಂಗಗಳನ್ನು ಹೆಣೆಯುವುದಕ್ಕೆ, ಶಾಪ-ಸೇಡು-ಪ್ರತೀಕಾರ ಮತ್ತು ಮೋಕ್ಷಗಳ ಹಂತಗಳನ್ನು ಕೌಶಲದಿಂದ ಜೋಡಿಸುವುದಕ್ಕೆ, ಸರ್ಪಗಳನ್ನು ಹೇಗೆ ಬಳಸಿಕೊಳ್ಳ ಲಾಗಿದೆ ಎಂದು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಜನಮೇಜಯನ ಸರ್ಪಯಜ್ಞವು ತಕ್ಷಕ ಮತ್ತು ಅವನ ಸರ್ಪಕುಲದ ಸಂಬಂಧಿಕರೆಲ್ಲರನ್ನೂ ನಾಶ ಮಾಡಲಿಕ್ಕೆಂದೇ ಆಯೋಜನೆಯಾದದ್ದು. ಆ ಯಜ್ಞದಲ್ಲಿ ಚಂಡಭಾರ್ಗವ, ಪಿಂಗಳ, ಜೈಮಿನಿ, ಅಂಗಿರಸ, ಅಸಿತ, ದೇವಲ, ಉದ್ದಾಲಕ, ಶ್ವೇತಕೇತು, ಕಹೋಳ, ನಾರದ ಮುಂತಾದ ಘಟಾನುಘಟಿ ಋಷಿಮುನಿಗಳು ಹೋತೃ, ಅಧ್ವರ್ಯು, ಉದ್ಗಾತೃ, ಋತ್ವಿಜ, ಸದಸ್ಯ ಮುಂತಾದ ಬೇರೆ ಬೇರೆ ಜವಾಬ್ದಾರಿಗಳಿಂದ ಭಾಗಿಯಾಗಿದ್ದರು.

ಹೋಮ ಮಾಡುವಾಗ ಸರ್ಪಗಳು ಒಂದರಹಿಂದೆ ಒಂದು ಬಂದು ಅಗ್ನಿಕುಂಡದಲ್ಲಿ ಬಿದ್ದು ಬೂದಿ ಯಾಗಿದ್ದವು. ಅಷ್ಟರಲ್ಲಿ ತಕ್ಷಕನೂ ಸೇರಿದಂತೆ ಉಳಿದ ಸರ್ಪಗಳೆಲ್ಲ ತಮ್ಮ ಸಹೋದರಿ ಜರತ್ಕಾರು ವಿನ ನೆರವು ಕೇಳಲಾಗಿ ಆಕೆ ತನ್ನ ಮಗನಾದ ಆಸ್ತೀಕನನ್ನು ಜನಮೇಜಯನಲ್ಲಿಗೆ ಕಳುಹಿಸಿ ಸರ್ಪಯಜ್ಞ ನಿಲ್ಲಿಸುವ ಹಾಗೆ ಹೇಳಿದಳು. ಆಸ್ತೀಕನು ಜನಮೇಜಯನ ಯಾಗಶಾಲೆಯನ್ನು ಹೊಕ್ಕು, ಪ್ರಾಣಿಹಿಂಸೆ ತಕ್ಕುದಲ್ಲವೆಂದು ಬೋಧಿಸಿ ತನ್ನ ವಿದ್ಯಾಬಲದಿಂದ ಜನಮೇಜಯನ ಮನಗೆದ್ದು ಸರ್ಪಯಜ್ಞವನ್ನು ನಿಲ್ಲಿಸಿದನು.

ಅಷ್ಟಾಗಿ, ಜನಮೇಜಯ ತಕ್ಷಕನನ್ನು ನಾಶಪಡಿಸಲು ಬಯಸಿದ್ದೇಕೆ? ಏಕೆಂದರೆ, ಜನಮೇಜಯನ ತಂದೆ ಪರೀಕ್ಷಿತನನ್ನು ತಕ್ಷಕನೇ ಹಣ್ಣಿನೊಳಗಿನ ಹುಳದ ರೂಪದಲ್ಲಿ ಬಂದು ಆಮೇಲೆ ಹಠಾತ್ತನೆ ನಿಜರೂಪದಲ್ಲಿ ಕಾಣಿಸಿಕೊಂಡು ಕತ್ತನ್ನು ಸುತ್ತುವರಿದು ಉಸಿರುಗಟ್ಟಿಸಿ ಸಾಯಿಸಿದ್ದನು. ಅದಕ್ಕೆ ಕಾರಣವೇನು? ಋಷಿ ಶೃಂಗಿಯ ಶಾಪ. ಶೃಂಗಿ ಯಾರು? ಅವನೇಕೆ ಪರೀಕ್ಷಿತನನ್ನು ಒಂದು ವಾರ ದೊಳಗೆ ಸರ್ಪ ಕಚ್ಚಿ ಸಾಯುವಂತೆ ಶಪಿಸಿದನು? ಅದಕ್ಕೂ ಒಂದು ಸರ್ಪವೇ ಕಾರಣ!

ನಿರ್ದಿಷ್ಟವಾಗಿ ಹೇಳಬೇಕೆಂದರೆ ಒಂದು ಸತ್ತ ಹಾವು. ಪರೀಕ್ಷಿತ ಒಮ್ಮೆ ಬೇಟೆಗೆ ಹೋಗಿದ್ದಾಗ ಶಮೀಕ ಮುನಿಯ ಆಶ್ರಮವನ್ನು ಹೊಕ್ಕನು. ಸಮಾಧಿಸ್ಥನಾಗಿದ್ದ ಮುನಿಯು ಈತನನ್ನು ಗೌರವಿಸ ಲಿಲ್ಲ. ಬೇರಾರೂ ಅಲ್ಲಿರಲಿಲ್ಲ. ಅದು ಉದ್ದೇಶಪೂರ್ವಕ ಅವಮಾನವೆಂದು ತಿಳಿದ ಪರೀಕ್ಷಿತನು ಸಮೀಪದಲ್ಲಿ ಸತ್ತುಬಿದ್ದಿದ್ದ ಒಂದು ಹಾವನ್ನು ಬಾಣದಿಂದೆತ್ತಿ ಶಮೀಕನ ಕೊರಳಿಗೆ ಮಾಲೆಹಾಕಿ ಹೋದನು.

ಸ್ವಲ್ಪ ಹೊತ್ತಿನಲ್ಲೇ ಶಮೀಕಪುತ್ರ ಶೃಂಗಿಯು ಅಲ್ಲಿಗೆ ಬಂದು ಆ ದೃಶ್ಯವನ್ನು ನೋಡಿ ಸಿಟ್ಟು ಗೊಂಡು “ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಬ್ರಾಹ್ಮಣಸಂತತಿಗೇ ಅವಮಾನ ಮಾಡಿದವ ಇಂದಿನಿಂದ ಏಳು ದಿನಗಳೊಳಗಾಗಿ ಸರ್ಪ ಕಚ್ಚಿ ಸಾಯಲಿ!" ಎಂದು ಶಪಿಸಿದನು. ಬಳಿಕ ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಶಮೀಕನು ತನ್ನ ಮಗನ ಅಚಾತುರ್ಯಕ್ಕೆ ಚಿಂತಿಸಿ, ತನ್ನ ಶಿಷ್ಯ ರನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ, ಶೃಂಗಿಯ ಶಾಪವನ್ನು ಆತನಿಗೆ ತಿಳಿಸಿ, ಅದಕ್ಕೆ ತಕ್ಕ ಪ್ರತೀಕಾರವನ್ನು ಮಾಡಿಕೊಳ್ಳುವಂತೆ ಹೇಳಿಕಳುಹಿಸಿದನು.

ಪರೀಕ್ಷಿತ ಒಡನೆಯೇ ತನ್ನ ದುಷ್ಕಾರ್ಯಕ್ಕೆ ಮರುಗಿ, ಪುತ್ರ ಜನಮೇಜಯನನ್ನು ರಾಜ್ಯದಲ್ಲಿ ನಿಲ್ಲಿಸಿ, ಸರ್ಪಗಳಿಗೆ ಅಗಮ್ಯವಾದ ರೀತಿಯಲ್ಲಿ ಸಮುದ್ರದ ನಡುವೆ ಒಂದು ಎತ್ತರವಾದ ಸೌಧವನ್ನು ಕಲ್ಪಿಸಿ ಪ್ರಾಯೋಪವಿಷ್ಟನಾದನು. ವ್ಯಾಸಪುತ್ರನಾದ ಶುಕಮುನಿಯಿಂದ ಭಾಗವತ ಕಥಾಶ್ರವಣ ಮಾಡಿದನು. ಕಡೆಗೆ ಏಳನೆಯ ದಿನ ಪರೀಕ್ಷಿತನ ಸಂದರ್ಶನಾರ್ಥ ಬಂದ ಬ್ರಾಹ್ಮಣರು ತಂದು ಕೊಟ್ಟ ಹಣ್ಣಿನಲ್ಲಿ ತಕ್ಷಕ ಒಂದು ಹುಳುವಾಗಿ ಸೇರಿಕೊಂಡನು. ಪರೀಕ್ಷಿತನು ಆ ಹಣ್ಣನ್ನು ಮೂಸಿನೋಡಿದಾಗ ತಕ್ಷಕ ಹೊರಬಂದು ಪರೀಕ್ಷಿತನನ್ನು ಸಾಯಿಸಿದನು.

ಶೃಂಗಿಯೇನೂ ಪರೀಕ್ಷಿತನ ಸಾವು ತಕ್ಷಕನಿಂದಲೇ ಆಗಲಿ ಎಂದಿರಲಿಲ್ಲ, ಆದರೆ ತಕ್ಷಕನೇ ಆ ಕಾರ್ಯಕ್ಕೆ ಮುಂದಾದನೇಕೆ? ಕಾರಣವಿದೆ! ಅವನು ಸರ್ಪಗಳ ರಾಜನಾಗಿದ್ದ ಎಂಬುದೊಂದೇ ಅಲ್ಲ. ಹಿಂದೆ ಅಗ್ನಿಯ ಕೋರಿಕೆಯಂತೆ ಕೃಷ್ಣನ ಸಹಾಯದಿಂದ ಅರ್ಜುನನು ಖಾಂಡವ ವನವನ್ನು ಸುಟ್ಟಿದ್ದನಷ್ಟೆ? ಖಾಂಡವವನ್ನು ನುಂಗುವ ಆ ಉರಿಯುತ್ತಿರುವ ಬೆಂಕಿಯಿಂದ ತಕ್ಷಕನೇನೋ ತಪ್ಪಿಸಿಕೊಂಡಿದ್ದನು. ಆದರೆ ಅವನ ಹೆಂಡತಿ ತಪ್ಪಿಸಿಕೊಂಡು ಹೋಗುವ ಉದ್ದೇಶದಿಂದ ಹಾರಿ ಹೋಗುತ್ತಿರುವಾಗ ಅರ್ಜುನನು ಅವಳ ತಲೆಯನ್ನು ಕತ್ತರಿಸಿದ್ದನು.

ಅದರಿಂದಾಗಿ ತಕ್ಷಕನಲ್ಲಿ ಸೇಡಿನ ಬೆಂಕಿ ಉರಿಯುತ್ತಿತ್ತು. ಅರ್ಜುನನನ್ನು ಹೇಗೂ ಕೊಲ್ಲಲಾಗಲಿಲ್ಲ, ಈಗವನ ಮೊಮ್ಮಗನನ್ನಾದರೂ ಕೊಲ್ಲುತ್ತೇನೆಂದು ತಕ್ಷಕ ನಿರ್ಧರಿಸಿದನು. ಖಾಂಡವ ವನದ ಕಥೆ ಅಲ್ಲಿಗೇ ಮುಗಿಯುವುದಿಲ್ಲ. ತಕ್ಷಕನ ಮಗ ಅಶ್ವಸೇನನೂ ಬೆಂಕಿಯಿಂದ ತಪ್ಪಿಸಿಕೊಂಡಿದ್ದನು. ಅವನು ಒಂದು ದಶಕಕ್ಕೂ ಹೆಚ್ಚು ಕಾಲ ತನ್ನ ಸಮಯಕ್ಕಾಗಿ ಕಾದಿದ್ದನು.

ಅಂತಿಮವಾಗಿ ಕರ್ಣನ ಬತ್ತಳಿಕೆಯಲ್ಲಿ ಬಾಣವೊಂದರ ತಲೆಯಲ್ಲಡಗಿ, ನಾಗಾಸವಾಗಿ ಹೊಂಚು ಹಾಕಿದ್ದನು. ಕುರುಕ್ಷೇತ್ರ ಸಮರದ ಹದಿನೇಳನೆಯ ದಿನದಂದು ಕರ್ಣನು ಅರ್ಜುನನ ಮೇಲೆ ಆ ಅಸಪ್ರಯೋಗ ಮಾಡಿದನು. ಅದು ಗುರಿ ತಪ್ಪಲಿಕ್ಕೆ ಸಾಧ್ಯವೇ ಇಲ್ಲ. ಆದರೆ ಕೃಷ್ಣನು ಅದ್ಭುತ ಚಾಕಚಕ್ಯತೆಯಿಂದ ಭೂಮಿಯನ್ನು ಕಾಲಿನಿಂದ ಒತ್ತಿದನು. ಅರ್ಜುನನ ರಥ ಕೆಲವು ಇಂಚು ಗಳಷ್ಟು ತಗ್ಗಿತು.

ಎದೆಗೆ ಬಂದುಬೀಳಬೇಕಿದ್ದ ಬಾಣ ಅರ್ಜುನನ ಕಿರೀಟವನ್ನಷ್ಟೇ ಹಾರಿಸಿಕೊಂಡು ಹೋಯಿತು. ಇನ್ನೊಂದು ಸ್ವಾರಸ್ಯವೆಂದರೆ ಜನಮೇಜಯನಿಗೆ ತಂದೆ ಪರೀಕ್ಷಿತನ ಸಾವಿನ ವಿವರ ತಿಳಿಸಿದ್ದು, ಸರ್ಪಕುಲವನ್ನು ನಾಶಪಡಿಸುವಂತೆ ಕಿವಿಯೂದಿದ್ದು, ಆತನ ಮಂತ್ರಿಮಂಡಲದವರಾಗಲೀ ರಾಜಪುರೋಹಿತರಾಗಲೀ ಅಲ್ಲ. ಮತ್ತ್ಯಾರು? ಉತ್ತಂಕನೆಂಬೊಬ್ಬ ಋಷಿ. ಅವನೇಕೆ ಹಾಗೆ ಮಾಡಿದನು? ಅದಕ್ಕೂ ತಕ್ಷಕನೇ ಕಾರಣ! ಉತ್ತಂಕನಿಗೆ ತಕ್ಷಕನ ಮೇಲೆ ಸೇಡು ಇತ್ತು.

ಅವನು ಜನಮೇಜಯನ ಆಸ್ಥಾನಕ್ಕೆ ಹೋದನು. ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳುವ ಬದಲು ಕ್ಷುಲ್ಲಕ ಅನ್ವೇಷಣೆಗಳಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದುದಕ್ಕಾಗಿ ಜನಮೇಜಯನನ್ನು ಗದರಿಸಿದನು. ಈ ಉತ್ತಂಕ ಒಬ್ಬ ಋಷಿ. ಬೈದ ಎಂಬ ಮಹರ್ಷಿಯ ಶಿಷ್ಯರಲ್ಲೊಬ್ಬನು. ಅಂದರೆ ಪಾಂಡವರ ಪುರೋಹಿತನಾಗಿದ್ದ ಧೌಮ್ಯ ಋಷಿಯ ಶಿಷ್ಯನ ಶಿಷ್ಯ. ಪೌಷ್ಯರಾಜನ ರಾಣಿ ಧರಿಸಿದ್ದ ಕುಂಡಲಗಳನ್ನು ಗುರುದಕ್ಷಿಣಾ ರೂಪವಾಗಿ ತಂದುಕೊಡಬೇಕೆಂದು ಉತ್ತಂಕನಿಗೆ ಗುರುಪತ್ನಿ ಯಿಂದ ಆದೇಶ ಆಗಿತ್ತು.

ಪೌಷ್ಯನಲ್ಲಿಗೆ ಹೋಗಿ ಅವನಲ್ಲಿ ಬೇಡಿಕೊಂಡು ಕುಂಡಲಗಳನ್ನು ಪಡೆಯುವುದಕ್ಕೆ ಉತ್ತಂಕ ಯಶಸ್ವಿಯಾಗಿದ್ದನು ಕೂಡ. ಆದರೆ ಮಾರ್ಗಮಧ್ಯದಲ್ಲಿ ಉತ್ತಂಕನ ಕೈಯಿಂದ ತಕ್ಷಕನು ಅವು ಗಳನ್ನು ಅಪಹರಿಸಿದ್ದನು. ಏಕೆಂದರೆ ತಕ್ಷಕನಿಗೂ ಅವೇ ಕುಂಡಲಗಳ ಮೇಲೆ ಆಸೆ ಇತ್ತು. ಉತ್ತಂಕನು ಪಾತಾಳ ಲೋಕವನ್ನು ಹೊಕ್ಕು ಸರ್ಪಗಳನ್ನು ಹೊಗಳಿ, ಮತ್ತೆ ಆ ಕುಂಡಲಗಳನ್ನು ಪಡೆದು ಗುರುಪತ್ನಿಗೆ ಒಪ್ಪಿಸಿದ್ದನು. ಆದರೂ ತಕ್ಷಕನ ಮೇಲೆ ಅವನಲ್ಲಿದ್ದ ಸೇಡು ಹಾಗೆಯೇ ಇತ್ತು. ಇದೀಗ ಜನಮೇಜಯನ ಆಸ್ಥಾನಕ್ಕೆ ಹೋಗಿ ಸರ್ಪಯಜ್ಞ ಮಾಡುವಂತೆ ಪ್ರಚೋದಿಸಲು ಅದು ಹೇತುವಾಯಿತು.

ಜನಮೇಜಯನ ರಾಜಪುರೋಹಿತನ ಹೆಸರು ಸೋಮಶ್ರವ. ಈತನ ತಂದೆ ಶ್ರುತಶ್ರವಸ. ತಾಯಿ ಒಬ್ಬ ಸರ್ಪಿಣಿ. ಶ್ರುತಶ್ರವಸನ ರೇತಸ್ಸನ್ನು ಒಂದು ಹೆಣ್ಣು ಹಾವು ಕುಡಿದಿದ್ದರಿಂದ ಗರ್ಭ ನಿಂತು ಸೋಮಶ್ರವನ ಜನನ ಆಗಿತ್ತು. ಇದರಲ್ಲಿ ಸೇಡು, ಶಾಪ, ಪ್ರತೀಕಾರದ ಅಂಶಗಳೇನೂ ಇಲ್ಲವಾದರೂ ವೇದವ್ಯಾಸರು ಇಲ್ಲಿಯೂ ಸರ್ಪದ ಎಳೆಯಿಂದಲೇ ಕಥೆಯನ್ನು ಹೆಣೆದಿದ್ದಂತೂ ಹೌದು. ತಕ್ಷಕನದೇ ಮುಖ್ಯ ಭೂಮಿಕೆ. ಅವನು ಮತ್ತು ಮಿಕ್ಕುಳಿದ ಸರ್ಪಗಳು ಜನಮೇಜಯನ ಸರ್ಪಯಾಗದಲ್ಲಿ ವಿನಾಶದ ಅಪಾಯವನ್ನು ಅನುಭವಿಸುವಂತಾಗುವುದಕ್ಕೆ ಇನ್ನೂ ಒಂದು ಕಾರಣವಿದೆ.

ಅದಕ್ಕೆ ನಾವು ತಕ್ಷಕನ ಮೂಲವನ್ನೇ ತಡಕಾಡ ಬೇಕಾಗುತ್ತದೆ. ತಕ್ಷಕನು ಕಶ್ಯಪ ಋಷಿಯ ಇಬ್ಬರು ಪತ್ನಿಯರಲ್ಲಿ ಒಬ್ಬಳಾದ ಕದ್ರೂವಿನ ನಾಲ್ಕನೆಯ ಮಗ. ಕಶ್ಯಪನ ಇನ್ನೊಬ್ಬ ಪತ್ನಿ ವಿನತೆ. ಅವಳ ಮೊದಲ ಮಗ ಹೆಳವನಾಗಿ ಹುಟ್ಟಿ ಸೂರ್ಯನ ರಥಚಾಲಕನಾದ ಅರುಣ; ಎರಡನೆಯವನು ಗರುಡ. ಕದ್ರೂವಿನ ಗಂಡುಮಕ್ಕಳು ಸರ್ಪಗಳು.

ಒಬ್ಬ ಹೆಣ್ಣುಮಗಳೂ ಇದ್ದಳು, ಜರತ್ಕಾರು ಎಂದು ಅವಳ ಹೆಸರು. ಇಂದ್ರನ ಕುದುರೆ ಉಚ್ಬೈಃ ಶ್ರವಸ್ಸು ಪೂರ್ಣ ಬೆಳ್ಳಗಿದೆಯೆಂದು ವಿನತೆಯೂ, ಇಲ್ಲ ಅದರ ಬಾಲ ಕಪ್ಪಗಿದೆ ಎಂದು ಕದ್ರೂವೂ ಒಮ್ಮೆ ಪಂಥ ಕಟ್ಟಿದ್ದರು. ತಾನು ಹೇಳಿದ್ದು ನಿಜವಾಗಿ ಪಂಥದಲ್ಲಿ ಗೆಲ್ಲಬೇಕೆಂಬ ಕಾರಣಕ್ಕೆ ಕದ್ರು ರಾತೋರಾತ್ರಿ ತನ್ನ ಮಕ್ಕಳನ್ನು ಕರೆದು ಅವರಲ್ಲಿ ಯಾರಾದರೊಬ್ಬರು ಕುದುರೆಯ ಬಾಲಕ್ಕೆ ಸುತ್ತಿಕೊಂಡರೆ, ಮಾರನೆದಿನ ತಾನು ಮತ್ತು ವಿನತೆ ದೂರದಿಂದ ನೋಡಿದಾಗ ಅದು ಕಪ್ಪುಬಾಲ ವೆಂದೇ ಕಾಣುತ್ತದೆ, ತಾನು ಗೆಲ್ಲಬಹುದಾಗುತ್ತದೆ ಎಂದಿದ್ದಳು.

ಕರ್ಕೋಟಕನೊಬ್ಬನನ್ನು ಬಿಟ್ಟು ಬೇರಾರೂ ಆ ಅಧರ್ಮಪ್ರವೃತ್ತಿಗೆ ಒಪ್ಪಿರಲಿಲ್ಲ. ಕದ್ರೂ ಅವರನ್ನೆಲ್ಲ ನಾಶವಾಗುವಂತೆ ಶಪಿಸಿದ್ದಳು. ಅದು ಕೂಡ ಜನಮೇಜಯನ ಸರ್ಪಯಜ್ಞಕ್ಕೊಂದು ನಿಮಿತ್ತವೇ. ಶಾಪದ ಪರಿಣಾಮವನ್ನು ತಪ್ಪಿಸುವ ಅಥವಾ ತಗ್ಗಿಸುವ ಸಂಭಾವ್ಯ ಮಾರ್ಗಗಳ ಕುರಿತು ಸರ್ಪಗಳು ಚರ್ಚಿಸಿದ್ದವು. ಕೊನೆಗೆ ತಮ್ಮ ಸಹೋದರಿ ಜರತ್ಕಾರುವನ್ನು ಜರತ್ಕಾರು ಎಂದೇ ಹೆಸರಿರುವ ಬ್ರಾಹ್ಮಣನಿಗೆ ಮದುವೆ ಮಾಡಲು ನಿರ್ಧರಿಸಿದರು. ಆ ಜರತ್ಕಾರು ದಂಪತಿಗೆ ಹುಟ್ಟಿದವನೇ ಆಸ್ತೀಕ. ಜನಮೇಜಯನ ಸರ್ಪಯಜ್ಞವನ್ನು ಅಕಾಲಿಕವಾಗಿ ಕೊನೆಗೊಳಿಸಿ, ಆ ಮೂಲಕ ಸರ್ಪಗಳನ್ನು ವಿನಾಶದಿಂದ ರಕ್ಷಿಸಿದವನು.

ಆಸ್ತೀಕನೇ ಆಪದ್ಬಾಂಧವನಾಗಿ ಬಂದದ್ದೆಂಬುದನ್ನೂ ವೇದವ್ಯಾಸರು ನೇರವಾಗಿ ಹೇಳುವುದಿಲ್ಲ. ರುರು ಎಂಬುವವನು ತನ್ನ ತಂದೆ ಪ್ರಮತಿಯಿಂದ ಕೇಳಿದ ಕಥೆಯ ಮೂಲಕ ಹೇಳುತ್ತಾರೆ. ರುರು ಏಕೆ ಕಥೆ ಹೇಳುವಂತೆ ತಂದೆಯನ್ನು ಕೇಳುತ್ತಾನೆ? ಅದ್ಯಾವ ಕಥೆ? ಗಮನಿಸಿದರೆ ಅಲ್ಲಿಯೂ ಹಾವುಗಳೇ! ಖಗಮನೆಂಬೊಬ್ಬ ಬ್ರಾಹ್ಮಣ. ಆತನ ಸಹಪಾಠಿ ಸಹಸ್ರಪಾದ ಒಮ್ಮೆ ಹುಲ್ಲಿನಿಂದ ಹಾವಿನಾಕಾರ ಮಾಡಿ ಖಗಮನ ಮೇಲೆ ಎಸೆದಿದ್ದನು. ಹೆದರಿದ ಖಗಮನು ಸಹಸ್ರಪಾದನಿಗೆ “ನೀನು ವಿಷವಿಲ್ಲದ ನೀರುಹಾವಾಗಿ ಜನಿಸು!" ಎಂದು ಶಾಪವಿತ್ತಿದ್ದನು.

ಖಿನ್ನನಾದ ಸಹಸ್ರಪಾದನು ಶಾಪವಿಮೋಚನೆ ಕೇಳಲಾಗಿ “ರುರುವೆಂಬ ಋಷಿಯ ಮೂಲಕ ಪೆಟ್ಟು ತಿಂದು ಮರಳಿ ಮನುಷ್ಯಜನ್ಮ ಪಡೆಯುವೆ" ಎಂದಿದ್ದನು. ನೀರುಹಾವಾಗಿ ಹುಟ್ಟಿದವನೇ ಡುಂಡುಭ. ಮುಂದೆ ರುರು ಆ ನೀರುಹಾವನ್ನು ಹೊಡೆಯಲಿಕ್ಕೆಂದು ಕೋಲೆತ್ತಿದಾಗ ಡುಂಡುಭ ಮನುಷ್ಯರೂಪವನ್ನು ತಾಳಿ “ನನ್ನನ್ನೇಕೆ ಹೊಡೆಯಲಿಕ್ಕೆ ಯತ್ನಿಸಿದೆ?" ಎಂದು ರುರುವನ್ನು ಕೇಳಿದನು.

ಆಗ ರುರು “ನನ್ನ ಹೆಂಡತಿ ಸರ್ಪ ದಂಶದಿಂದ ಮೃತಳಾದಳು. ಹಾಗಾಗಿ ನಾನು ಕಂಡ ಹಾವು ಗಳನ್ನೆಲ್ಲ ಕೊಲ್ಲುತ್ತಿದ್ದೇನೆ" ಎಂದನು. ರುರು ಯಾರೆಂದರೆ ಚ್ಯವನ ಮಹರ್ಷಿ ಮತ್ತು ಸುಕನ್ಯೆಯರ ಮೊಮ್ಮಗ. ಪ್ರಮತಿ ಮತ್ತು ಘೃತಾಚಿಯರ ಮಗ. ವಿಶ್ವಾವಸುವೆಂಬ ಗಂಧರ್ವನಿಂದ ಮೇನಕೆಯಲ್ಲಿ ಹುಟ್ಟಿದ ಪ್ರಮದ್ವರೆಯೊಡನೆ ರುರುವಿನ ವಿವಾಹವಾಗುವುದಿತ್ತು. ಪ್ರಮದ್ವರೆಯ ಸಾಕುತಂದೆ ಸ್ಥೂಲಕೇಶನೆಂಬ ಮುನಿ. ಒಮ್ಮೆ ಪ್ರಮದ್ವರೆಯು ಸಖಿಯರೊಡನೆ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ಹಾವು ಕಚ್ಚಿ ಸತ್ತಳು.

ಸುತ್ತಮುತ್ತಲಿನ ಮುನಿಗಳು ಅವಳ ಶವವನ್ನು ಸ್ಥೂಲಕೇಶನಲ್ಲಿಗೆ ತಂದರು. ಅಲ್ಲಿಗೆ ಬಂದ ರುರು, ಯಮನ ಒಪ್ಪಿಗೆಯಂತೆ ತನ್ನ ಆಯುಷ್ಯದಲ್ಲಿ ಅರ್ಧಭಾಗವನ್ನು ಪ್ರಮದ್ವರೆಗೆ ಕೊಟ್ಟು ಅವಳನ್ನು ಬದುಕಿಸಿ ಮದುವೆಯಾದನು. ಹಾಗಾಗಿ ರುರುವಿಗೂ ಹಾವುಗಳ ಮೇಲೆ ದ್ವೇಷ ಇತ್ತು.

ಒಟ್ಟಿನಲ್ಲಿ ಮಹಾಭಾರತವನ್ನು ನಾವು ಕೇವಲ ಯುದ್ಧ, ರಾಜಕೀಯ, ಪಗಡೆಯಾಟ, ಭಗವದ್ಗೀತೆ ಯೆಂಬ ತತ್ತ್ವಶಾಸ್ತ್ರದ ಕಾವ್ಯವೆಂದು ನೋಡುವುದು ಅಪೂರ್ಣವಾಗುತ್ತದೆ. ನಿಜವಾಗಿ ಅದೊಂದು ಒಡನಾಟ, ಶಾಪ, ಪ್ರತೀಕಾರ, ಪರಿಪಕ್ವತೆ ಮತ್ತು ಧರ್ಮಪಾಲನೆಯ ಕಥೆಯಾಗಿದೆ. ಕಥೆಯ ಆದಿಗೂ ಅಂತ್ಯಕ್ಕೂ ಸರ್ಪಗಳನ್ನೇ ಕಾರಣವಾಗಿಸಿ ಸರ್ಪಗಳ ನಿರಂತರ ಉಲ್ಲೇಖ ಮತ್ತು ಪಾತ್ರವು, ಕಾವ್ಯದ ದೀರ್ಘಗತಿಯನ್ನು ಗಾಢವಾಗಿ ಕಟ್ಟಿ ಬೆಳೆಸುತ್ತದೆ.

ಸರ್ಪಗಳು ಇಲ್ಲಿ ಕೇವಲ ಜೀವಿಗಳಷ್ಟೇ ಅಲ್ಲ, ಅವುಗಳ ಮೂಲಕ ಶಾಶ್ವತ ಶಕ್ತಿಯನ್ನೂ ಪ್ರತಿಬಿಂಬಿ ಸಲಾಗಿದೆ. ಪೌರಾಣಿಕ ಚಕ್ರಪಥದ ಅನನ್ಯತೆ ಮತ್ತು ಭಾರತೀಯ ಕಾವ್ಯಪದ್ಧತಿಯ ಶ್ರೇಷ್ಠತೆ ಮೆರೆದಿವೆ.

ಇಂತು, ಶ್ರಾವಣ ಮಾಸದ ಎರಡನೆಯ ಭಾನುವಾರದಲ್ಲೊಂದು ಪುರಾಣಕಥನ/ವಾಚನ/ಶ್ರವಣ ಸಮಾಪ್ತವಾದುದು.