G N Bhat Column: ಬನ್ನಂಜೆ: ಶ್ರವಣ, ಮನನ ಮತ್ತು ಧ್ಯಾನದ ಮೂರ್ತರೂಪ
ಮಹೇಶ್ವರತೀರ್ಥ, ತನಿಶ್ಲೋಕಿ, ಶ್ರೀಧರ, ವೀರರಾಘವ ಮೊದಲಾದವರೂ ಇದ್ದಾರೆ. ಇವರ ವ್ಯಾಖ್ಯಾನದ ವಿಷಯ ಒಂದು ಕಡೆ ಇರಲಿ. ಇವರ ಹೆಸರೇ ಅನೇಕರಿಗೆ ಗೊತ್ತಿಲ್ಲ. ಇಂಥ ಹಿನ್ನೆಲೆಯಲ್ಲಿ ವಿದ್ಯಾವಾಚ ಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮತ್ತು ಪ್ರೊ. ಕೆ.ಎಸ್.ನಾರಾಯಣಾ ಚಾರ್ಯರು ಡಿವಿಜಿ ಯವರು ಹೇಳಿದ ಮಾತಿನ ಕೊರತೆಯನ್ನು ನೀಗಿಸುವಲ್ಲಿ ಎಣೆಯಿಲ್ಲದ ಪಾತ್ರವನ್ನು ವಹಿಸಿದ್ದಾರೆ.
-
ತನ್ನಿಮಿತ್ತ
ಗ.ನಾ.ಭಟ್ಟ
ನಾಡಿನ ಬಹುಶ್ರುತ ವಿದ್ವಾಂಸ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಮ್ಮನ್ನಗಲಿ ಮಾರ್ಚ್ 13ಕ್ಕೆ ಆರು ವರ್ಷಗಳು ಸಂದಿವೆ. ಅವರ ಸ್ಮರಣೆಯಲ್ಲಿ ‘ಪರಂಪರೆ, ಮೈಸೂರು’ ಮತ್ತು ‘ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು’ ಸಂಯುಕ್ತ ಆಶ್ರಯದಲ್ಲಿ ಮೊನ್ನೆ ಭಾನುವಾರ (ಮಾ.15) ಮೈಸೂರಿನಲ್ಲಿ ‘ಬನ್ನಂಜೆ 90’ ವಿಶ್ವನಮನ ಕಾರ್ಯಕ್ರಮ ಜರುಗಿತು. ಖ್ಯಾತ ಸಂಸ್ಕೃತ ವಿದ್ವಾಂಸ ಡಾ. ಎಚ್.ವಿ. ನಾಗರಾಜರಾವ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಚಿತ್ರ ಕಲಾವಿದ ಗಂಜೀ- ರಘುಪತಿ ಭಟ್ ಮತ್ತು ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಜಯಶ್ರೀ ಶಾನಭಾಗ್ ಅವರು ಬನ್ನಂಜೆಯವರ ಒಡನಾಟದ ಸವಿಯನ್ನು ಹಂಚಿಕೊಂಡರು. ‘ಪರಂಪರೆ’ ಸಂಸ್ಥೆಯ ಅಧ್ಯಕ್ಷ ಕೃಷ್ಣಕುಮಾರ್ ಮತ್ತು ಬನ್ನಂಜೆಯವರ ಪುತ್ರಿ, ಖ್ಯಾತ ಪ್ರವಚನಕಾರ್ತಿ ವೀಣಾ ಬನ್ನಂಜೆ ಅವರು ಈ ವೇಳೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬನ್ನಂಜೆಯವರ ಸಾಹಿತ್ಯಕೃಷಿಯ ಪ್ರಸ್ತುತತೆಯ ಬಗ್ಗೆ ಮಾತನಾಡಿದ ಸಂಸ್ಕೃತ ವಿದ್ವಾಂಸ ಗ.ನಾ.ಭಟ್ಟ ಅವರು ಬನ್ನಂಜೆಯವರ ಕುರಿತಾದ ಮನದಾಳದ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪ್ರಪಂಚದ ಅಶ್ವತ್ಥವೃಕ್ಷವೆಂದೇ ಖ್ಯಾತರಾದ ಡಿ.ವಿ.ಗುಂಡಪ್ಪನವರು ಜೀವನ ಸೌಂದರ್ಯ ಮತ್ತು ಸಾಹಿತ್ಯವೆಂಬ ವೈಚಾರಿಕ ಪ್ರಬಂಧದಲ್ಲಿ-“ಲೋಕೋಪಕಾರದ ವಿಸ್ತೀರ್ಣ ವನ್ನು ಅಳೆದು ನೋಡಿದರೆ, ಬಸವಣ್ಣ ಅಲ್ಲಮರುಗಳಿಂದಲೂ, ಪುರಂದರ ಕನಕರುಗಳಿಂದಲೂ ಆಗಿರುವಷ್ಟು ವೇದಾಂತ ತತ್ತ್ವಪ್ರಚಾರವು ಅನೇಕ ಉಪನಿಷದ್ವಾಖ್ಯಾತರುಗಳಿಂದ ಆಗಿಲ್ಲವೆಂದು ಹೇಳಬಹುದು.
ಕುಮಾರವ್ಯಾಸ, ಕುಮಾರವಾಲ್ಮೀಕಿಗಳಿಂದ ಆಗಿರುವಷ್ಟು ಭಾರತ-ರಾಮಾಯಣ ಕಥಾಪ್ರಸಾರವು ಸಂಸ್ಕೃತದಲ್ಲಿ ನೀಲಕಂಠ ಗೋವಿಂದರಾಜರುಗಳಿಂದಾಗಿಲ್ಲವೆಂದು ಹೇಳಬಹುದು" ಎಂದು ಹೇಳು ತ್ತಾರೆ. ಇದು ಅಕ್ಷರಶಃ ಸತ್ಯ. ರಾಮಾಯಣ, ಭಾರತಕ್ಕೆ ವ್ಯಾಖ್ಯಾನ ಬರೆದವರು ಕೇವಲ ನೀಲಕಂಠ, ಗೋವಿಂದರಾಜರಷ್ಟೇ ಅಲ್ಲ.
ಮಹೇಶ್ವರತೀರ್ಥ, ತನಿಶ್ಲೋಕಿ, ಶ್ರೀಧರ, ವೀರರಾಘವ ಮೊದಲಾದವರೂ ಇದ್ದಾರೆ. ಇವರ ವ್ಯಾಖ್ಯಾನದ ವಿಷಯ ಒಂದು ಕಡೆ ಇರಲಿ. ಇವರ ಹೆಸರೇ ಅನೇಕರಿಗೆ ಗೊತ್ತಿಲ್ಲ. ಇಂಥ ಹಿನ್ನೆಲೆ ಯಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮತ್ತು ಪ್ರೊ. ಕೆ.ಎಸ್.ನಾರಾಯಣಾ ಚಾರ್ಯರು ಡಿವಿಜಿಯವರು ಹೇಳಿದ ಮಾತಿನ ಕೊರತೆಯನ್ನು ನೀಗಿಸುವಲ್ಲಿ ಎಣೆಯಿಲ್ಲದ ಪಾತ್ರ ವನ್ನು ವಹಿಸಿದ್ದಾರೆ.
ಆರ್ಷಸಾಹಿತ್ಯಕ್ಕೆ ಹೊಸ ಬೆಳಕನ್ನು ನೀಡುವಲ್ಲಿ ಇವರಿಬ್ಬರ ಪಾತ್ರ ಅನನ್ಯವಾದುದು. ಇವರಿಬ್ಬರೂ ನಮ್ಮ ಪ್ರಾಚೀನ ಸಾಹಿತ್ಯದ ಎರಡು ಕಣ್ಣುಗಳು. ಇವರಿಬ್ಬರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ.
ಇಬ್ಬರದೂ ಒಂದೊಂದು ಹಾದಿ. ಆದರೆ ಇವರಿಬ್ಬರಿಂದಲೂ ನಮ್ಮ ಪ್ರಾಚೀನ ಸಾಹಿತ್ಯಕ್ಕೆ ಆದ ಲಾಭ, ಪ್ರಯೋಜನ, ಕೊಡುಗೆ ಅಸದೃಶವಾದುದು.ಬನ್ನಂಜೆಯವರ ಸಾಹಿತ್ಯ ಕೊಡುಗೆಯನ್ನು ಏನಂತ ಬಣ್ಣಿಸುವುದು? 150ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: G N Bhat Column: ತಾಳಮದ್ದಳೆ ಅರ್ಥಧಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ
ಸಾವಿರಾರು ವೇದಿಕೆಯಲ್ಲಿ ರಾಮಾಯಣ, ಭಾರತ, ಗೀತೆ, ಉಪನಿಷತ್ತು ಮುಂತಾಗಿ ಆರ್ಷ ಸಾಹಿತ್ಯ ವನ್ನು ಕುರಿತು ಪ್ರವಚನ ಮಾಡಿದ್ದಾರೆ. ಕ್ಯಾಸೆಟ್, ಸಿ.ಡಿ.ಗಳ ಮೂಲಕ ಅವನ್ನು ದಾಖಲಿಸಿಯೂ ಇದ್ದಾರೆ. ನಮ್ಮ ಪ್ರಾಚೀನ ಸಾಹಿತ್ಯವನ್ನು ಕುರಿತು ಬನ್ನಂಜೆಯವರ ನಿಲುವೆಂದರೆ- ಅದು ತಪಸ್ಸು ಮತ್ತು ಸ್ವಾಧ್ಯಾಯರೂಪದ್ದು. ಅವರೇ ಹೇಳುವಂತೆ “ತಪಸ್ಸು ಎಂದರೆ- ನಿರಂತರವಾದ ಚಿಂತನೆ. ಸ್ವಾಧ್ಯಾಯ ಎಂದರೆ ಅದರ ಹಿನ್ನೆಲೆಯಲ್ಲಿರುವ ನಿರಂತರ ಅಧ್ಯಯನ.
ಚಿಂತನೆಯಿಲ್ಲದ ಅಧ್ಯಯನ ಕಟ್ಟಡವಿಲ್ಲದ ಪಂಚಾಂಗ. ಅಧ್ಯಯನವಿಲ್ಲದ ಚಿಂತನೆ ಪಂಚಾಂಗ ವಿಲ್ಲದ ಕಟ್ಟಡ" ಎಂದು ಸುಂದರವಾಗಿ, ಮನೋಜ್ಞವಾಗಿ ಮಂಡಿಸುತ್ತಾರೆ. ಚಿಂತನೆ ಮತ್ತು ಅಧ್ಯಯನ, ತಪಸ್ಸು ಮತ್ತು ಸ್ವಾಧ್ಯಾಯ ಎರಡೂ ಅವರಲ್ಲಿ ಪೂರ್ಣಪ್ರಮಾಣದಲ್ಲಿ ಬೆಸೆದು ಕೊಂಡಿದ್ದವು.
ಬನ್ನಂಜೆಯವರು ಗುರುಗಳ ಮೂಲಕ ಹೆಚ್ಚು ಕಲಿತದ್ದಕ್ಕಿಂತ ಸ್ವಾಧ್ಯಾಯದ ಮೂಲಕ ಕಲಿತದ್ದೇ ಹೆಚ್ಚು. “ತಪಸಾ ಬ್ರಹ್ಮ ವಿಜಿಜ್ಞಾಸಸ್ವ" ಎಂಬ ಉಪನಿಷದ್ವಾಣಿ ಮತ್ತು “ಗುರೋರಭಾವೇ ಯೋಗ್ಯಸ್ಯ ಸ್ವಯಮೇವಾಭ್ಯಸೇತ್ ಶ್ರುತೀಃ"- “ಯೋಗ್ಯ ಗುರು ಸಿಗದಿದ್ದಾಗ ಸ್ವಂತವಾಗಿಯೇ ಓದಿಕೋ" ಎಂಬ ಮಧ್ಯಾಚಾರ್ಯರ ಮಾತು ಅವರ ತೆರಪಿಲ್ಲದ ಓದು ಮತ್ತು ಚಿಂತನೆಗೆ ಗ್ರಾಸವನ್ನು ಒದಗಿಸಿದವು. ಅವುಗಳ ಫಲವೇ ನೂರೈವತ್ತು ಕೃತಿಗಳ ರಚನೆಗೆ ಮತ್ತು ಸಾವಿರಾರು ಪ್ರವಚನ ಸರಣಿಗಳಿಗೆ ಕಾರಣವಾದವು.
ಬನ್ನಂಜೆಯವರು ಪ್ರಖರ ಚಿಂತಕರು ಮತ್ತು ಪ್ರಚಂಡ ವಿಮರ್ಶಕರು. ಅವರ ಚಿಂತನೆಯ ಸೊಗಸನ್ನು ನೋಡಬೇಕೆಂದಿದ್ದರೆ ನಾವು ಯಾಜ್ಞವಲ್ಕ್ಯರು ಹೇಳಿದ “ಆತ್ಮಾ ವಾ ಅರೆ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋ ನಿಧಿಧ್ವಾಸಿತವ್ಯಃ" ಎಂಬ ಮಾತಿಗೆ ಬನ್ನಂಜೆಯವರು ನೀಡಿದ ಸರಳ, ಸುಂದರ ವ್ಯಾಖ್ಯಾನವನ್ನು ನೋಡಬೇಕು.
ನಾವು ವಿದ್ಯೆಯನ್ನು ಗಳಿಸುವಾಗ ಅನುಸರಿಸಬೇಕಾದ ಮೂರು ಮಜಲುಗಳು ಯಾವುವು ಎಂದು ವಿವರಿಸುವಾಗ ಬಂದ ಮಾತಿದು. ಮೊದಲನೆಯದು ಶ್ರವಣ, ಎರಡನೆಯದು ಮನನ, ಮೂರನೆ ಯದು ಧ್ಯಾನ (ಅದನ್ನೇ ನಿಧಿಧ್ಯಾಸನ ಅಂತ ಕರೆಯುವುದು). “ಗುರುಗಳಿಂದ ಮೊದಲು ಪಾಠವನ್ನು ಕೇಳಬೇಕು. ಅದೇ ಶ್ರವಣ. ಅನಂತರ ಮನನ. ಅಂದರೆ ಹೊರಗಿವಿಯಿಂದ ಕೇಳಿದ್ದನ್ನು ಒಳಗಿವಿ ಯಿಂದ ಕೇಳಬೇಕು. ಇದು ತುಂಬಾ ಮಾರ್ಮಿಕವಾದ ಮಾತು.
ಅನೇಕರಿಗೆ ಇದು ಅರ್ಥವಾಗುವುದಿಲ್ಲ. ಇದೇ ಮನನ. ಅಧ್ಯಾಪಕರು ಹಾಲಿಗೆ ಹೆಪ್ಪು ಹಾಕುವುದನ್ನು ಕಲಿಸಿದರು. ಕೆನೆಮೊಸರು ಸಿದ್ಧವಾಯಿತು. ಇನ್ನು ಒಳಬಗೆಯ ಕಡೆಗೋಲಿನಿಂದ ಅದನ್ನು ಕಡೆದು ಬೆಣ್ಣೆಯನ್ನು ತೆಗೆಯಬೇಕು. ಇದೇ ಮನನ" ಅನ್ನುತ್ತಾರೆ.
“ಇದೊಂದು ಬಗೆಯ ಸಮುದ್ರಮಥನವೂ ಹೌದು. ಅಪಾರ ಶಾಸ್ತ್ರಗಳ ಕಡಲನ್ನು ಮನವೆಂಬ ಕಡೆಗೋಲಿನಿಂದ ನಿರಂತರ ಕಡೆಯಬೇಕು. ಈ ಮಥನವೇ ಮನನ. ಕಡೆದಾಗ ಮೊದಲು ವಿಷ ಬಂದೀತು! ಆದರೂ ನಿರಾಶರಾಗಬಾರದು. ವಿಷಕಂಠರಾಗಿ ಮತ್ತೂ ಕಡೆಯಬೇಕು. ಆಗ ಅಮೃತ ಬಂದೀತು!
ಅದೇ ಜ್ಞಾನಾಮೃತ. ಅದೇ ಅರಿವಿನ ಮೂರನೆಯ ಕಣ್ಣು. ಆಗಲೇ ನಾವು ಮುಕ್ಕಣ್ಣರಾಗಬಲ್ಲೆವು" ಎಂದು ಹೇಳುತ್ತಾರೆ. “ಹಾಲಿನಲ್ಲಿ ಬೆಣ್ಣೆ ಅಡಗಿರುವಂತೆ ಪ್ರತಿಯೊಬ್ಬನಲ್ಲೂ ಅರಿವು ಅಡಗಿದೆ. ಅದು ವ್ಯಕ್ತವಾಗಬೇಕಾದರೆ ಈ ಮಥನಕ್ರಿಯೆ ನಡೆಯುತ್ತಲೇ ಇರಬೇಕು. ಅದಕ್ಕೆ ಇರುವುದು ಇದೊಂದೇ ದಾರಿ. ಮೂರನೆಯದೇ ನಿಽಧ್ಯಾಸನ ಅಥವಾ ಧ್ಯಾನ. ಇದು ಅಂತಮುರ್ಖಖತೆಯ ಮಜಲು. ಕಡೆದುಬಂದ ಬೆಣ್ಣೆಯನ್ನು ಕುದಿಸಿ ಕುದಿಸಿ ತುಪ್ಪ ತಯಾರಿಸುವ ಪ್ರಕ್ರಿಯೆ ಇದು. ನಿರಂತರವಾದ ಏಕಾಂತ ಚಿಂತನ ಇದು. ಇದೇ ನಿಜವಾದ ಮೌನ. ಇಂಥ ಮೌನದಿಂದ ಮಾತು ಹುಟ್ಟಬೇಕು. ಮೌನದಿಂದ ಹುಟ್ಟಿದ ಮಾತು ರಸಾಯನ ಆಗುತ್ತದೆ" ಅನ್ನುತ್ತಾರೆ.
ಇಲ್ಲಿ ಬನ್ನಂಜೆಯವರು ಶ್ರವಣ, ಮನನ ಮತ್ತು ಧ್ಯಾನಕ್ಕೆ ಕೊಟ್ಟ ಉದಾಹರಣೆ- ಕ್ರಮವಾಗಿ ಹಾಲಿಗೆ ಹೆಪ್ಪು ಹಾಕುವುದು, ಅದರಿಂದ ನವನೀತ (ಬೆಣ್ಣೆ) ತೆಗೆಯುವುದು, ಅದರಿಂದ ತುಪ್ಪ ಮಾಡುವುದು. ಇದನ್ನು ಎಷ್ಟು ಸರಳವಾಗಿ, ಸುಂದರವಾಗಿ ತಿಳಿಸಿಕೊಟ್ಟಿದ್ದಾರೆ ಎಂದರೆ- ಇದು ಮತ್ತೆ ಮತ್ತೆ ಮೆಲುಕುಹಾಕುವಂಥ ಮನೋಜ್ಞ ಉದಾಹರಣೆಯಾಗಿ, ನಮ್ಮ ಮನದಲ್ಲಿ ಶಾಶ್ವತವಾಗಿ ನಿಲ್ಲುತ್ತದೆ. ಇದು ಅವರ ತಪಃಸ್ವಾಧ್ಯಾಯದ -ಲವಾಗಿ ಉದಿಸಿದ್ದು ಅನ್ನುವುದರಲ್ಲಿ ಎರಡು ಮಾತಿಲ್ಲ. ಇಂಥ ಸಾವಿರಾರು ಉದಾಹರಣೆಗಳಿಂದ ನಮ್ಮ ಕಠಿಣತಮವಾದ ಪ್ರಾಚೀನ ಸಾಹಿತ್ಯವನ್ನು ಸುಲಭ ಗೊಳಿಸಿದ್ದಾರೆ.
ಗೋವಿಂದಾಚಾರ್ಯರು ಎಂಥ ಚಿಂತಕರೋ ಹಾಗೆಯೇ ಒಳ್ಳೆಯ ವಿಮರ್ಶಕರೂ ಹೌದು. ಅವರ ವಿಮರ್ಶೆಯನ್ನು ನೋಡುವುದಾದರೆ ನಾವು ಅವರು ಬರೆದಿರುವ ಭಗವದ್ಗೀತೆಯ ವ್ಯಾಖ್ಯಾನವನ್ನು ನೋಡಬೇಕು. ಹಿಂದೆ ಯಾರೂ ಮಾಡದಿದ್ದ ಒಂದು ಅದ್ಭುತ ಕೆಲಸವನ್ನು ಆಚಾರ್ಯರು ಮಾಡಿದ್ದಾರೆ.
ಶಂಕರ, ರಾಮಾನುಜ, ಮಧ್ವರು ಭಗವದ್ಗೀತೆಗೆ ಬರೆದ ಭಾಷ್ಯವನ್ನು ಒಂದೇ ಕಡೆಗೆ ಸಂಗ್ರಹಿಸಿ, ಅದರ ಮೇಲೆ ತಮ್ಮ ಸ್ವಂತ ವಿಮರ್ಶೆಯನ್ನೂ, ಚಿಂತನೆಯನ್ನೂ ದಾಖಲಿಸಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಒಂದು ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ.
ಭಗವದ್ಗೀತೆಯ ಮೊದಲನೆಯ ಅಧ್ಯಾಯದಲ್ಲಿ ಬರುವ ಧೃತರಾಷ್ಟ್ರ, ದುರ್ಯೋಧನ ಮತ್ತು ಅರ್ಜುನ- ಈ ಮೂರು ಪಾತ್ರಗಳು ಹೇಗೆ ಮನೋರೋಗಕ್ಕೆ ಗುರಿಯಾಗಿ, ಅರ್ಜುನ ಮಾತ್ರ ಉಳಿದು ಕೊಂಡ ಮತ್ತು ಧೃತರಾಷ್ಟ್ರ, ದುರ್ಯೋಧನರು ಹೇಗೆ ನಾಶವಾದರು ಎಂಬುದನ್ನು ಆಚಾರ್ಯರು ಬಹು ರೋಚಕವಾಗಿ ಮಂಡಿಸಿದ್ದಾರೆ. ಅವರು ಹೇಳುತ್ತಾರೆ- “ಗೀತೆ ಬರಿಯ ಅಧ್ಯಾತ್ಮಗ್ರಂಥವಲ್ಲ; ಜಗತ್ತಿನ ಮೊಟ್ಟಮೊದಲ ಮನಃ ಶಾಸ್ತ್ರೀಯ ಗ್ರಂಥವೂ ಹೌದು. ಪಾಂಡವ ಪಕ್ಷದಲ್ಲಿರುವ ಪ್ರತಿ ಯೊಬ್ಬ ಯೋಧನು ಕೂಡಾ “ಭೀಮಾರ್ಜುನಸಮಾಯುಧಿ"- “ಭೀಮಾರ್ಜುನರಂತೆ ಪರಾಕ್ರಮ ಶಾಲಿಗಳಾಗಿ ಕಾಣುತ್ತಿದ್ದಾರೆ" ಎಂದು ಹೇಳುವ ದುರ್ಯೋಧನನ ಶೋಚನೀಯ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾ, ಆಚಾರ್ಯರು “ನಿಜವಾಗಿಯೂ ದುರ್ಯೋಧನನ್ನು ಮನೋವಿಜ್ಞಾನಿಯ ಬಳಿ ಚಿಕಿತ್ಸೆಗೆ ಕಳುಹಿಸಬೇಕು.
ಅವನಿಗೆ ತುರ್ತಾಗಿ ಸೈಕೋಥೆರಪಿಯ ಅಗತ್ಯವಿದೆ. ಆದರೆ ಏನು ಮಾಡೋಣ? ಮನೋವೈದ್ಯನಾದ ಶ್ರೀಕೃಷ್ಣ ಜಗತ್ತಿನ ಮೊದಲ ಸೈಕಿಯಾಟ್ರಿಸ್ಟ್ ಪಾಂಡವರ ಬಳಿ ಇದ್ದಾನೆ. ದುರ್ಯೋಧನನ ಮನೋ ರೋಗಕ್ಕೆ ಮದ್ದೇ ಇಲ್ಲ" ಎಂದು ಹೇಳುತ್ತಾರೆ.
ಇಲ್ಲಿ ಆಚಾರ್ಯರು ಗೀತೆಯ ಪದಪದವನ್ನೂ ಹಿಂಜಿ, ಸಣ್ಣ ಸಣ್ಣ ವಾಕ್ಯಗಳ ಒಡಲಲ್ಲಿ ಅಪೂರ್ವ ವಾದ ಚಿಂತನೆಯನ್ನೇ ಹರಿಬಿಟ್ಟಿದ್ದಾರೆ ಮತ್ತು ವಿಮರ್ಶೆಯ ಮಾನದಂಡದಲ್ಲಿ ಹೊಸಹೊಸ ವಿಚಾರಗಳನ್ನು ತಿಳಿಸುತ್ತಾ ಓದುಗನ ಬುದ್ಧಿಯನ್ನು ಹರಿತಗೊಳಿಸಿದ್ದಾರೆ ಮತ್ತು ಚುರುಕುಗೊಳಿಸಿ ದ್ದಾರೆ.
ಇನ್ನು ಅವರ ಅನುವಾದದ ಬಗ್ಗೆ- ಸಂಸ್ಕೃತ ವಿದ್ವಾಂಸನೊಬ್ಬ ಕನ್ನಡ ಭಾಷೆಯ ಚೆಲುವು, ಅದರ ಬನಿ, ಸಾರ, ಸತ್ತ್ವ, ಅದರ ಜಾಯಮಾನ, ಮರ್ಯಾದೆ, ಶೈಲಿ, ಸಹಜತೆ, ಸರಳತೆ, ಲ್ಯೂಸಿಡ್ ಮುಂತಾ ದುವನ್ನು ಅವರಷ್ಟು ಆಳವಾಗಿ ಸೊಗಸಾಗಿ ತಿಳಿದವರು ಮತ್ತೊಬ್ಬರಿಲ್ಲ ಎಂದರೆ ಅದು ಅತಿ ಶಯೋಕ್ತಿ ಯಾಗಲಾರದು. ನಮ್ಮಲ್ಲಿ ಬಹುಪಾಲು ಸಂಸ್ಕೃತ ವಿದ್ವಾಂಸರಿಗೆ ಕನ್ನಡವೇ ಬರುವು ದಿಲ್ಲ.
ಇದಕ್ಕೆ ಬನ್ನಂಜೆ ಅಪವಾದ. ಅವರು ಸಂಸ್ಕೃತವನ್ನು ಸಂಸ್ಕೃತದ ಮರ್ಯಾದೆಯಲ್ಲೂ, ಕನ್ನಡ ವನ್ನು ಕನ್ನಡದ ಮರ್ಯಾದೆಯಲ್ಲೂ (ಮರ್ಯಾದೆಯೆಂದರೆ- ಸ್ವಭಾವ, ಮರ್ಜಿ ಅಂತ ಅರ್ಥ) ಕಾಣಬಹುದಾದ ಅಪರೂಪದ ವಿದ್ವಾಂಸರು.
ಆಕಾಶವಾಣಿ ನಾಟಕವನ್ನು ‘ಮುಗಿಲ ಮಾತು’ ಅಂತಲೂ, ಭಟ್ಟ ನಾರಾಯಣನ ವೇಣೀ ಸಂಹಾರ ವನ್ನು ‘ಜಡೆ ಹೆಣೆದಳು ಪಂಚಾಲಿ’ ಅಂತಲೂ, ಭಾಸನ ಮಧ್ಯಮ ವ್ಯಾಯೋಗವನ್ನು ‘ನಡುವಿನವನ ಬಿಡುಗಡೆ’ ಅಂತಲೂ, ಕಾಳಿದಾಸನ ಮಾಲವಿಕಾಗ್ನಿಮಿತ್ರವನ್ನು ‘ಅಗ್ನಿಮಿತ್ರನಿಗೊಲಿದ ಮಾಲವಿಕೆ’ ಅಂತಲೂ, ಅಭಿಜ್ಞಾನ ಶಾಕುಂತಲವನ್ನು ‘ನೆನಪಾದಳು ಶಕುಂತಲೆ’ ಅಂತಲೂ, ಶೂದ್ರಕನ ಮೃಚ್ಛಕಟಿಕವನ್ನು ‘ಆವೆಯ ಮಣ್ಣಿನ ಆಟದ ಬಂಡಿ’ಯೆಂತಲೂ, ಉತ್ತರ ರಾಮಚರಿತವನ್ನು ‘ಮತ್ತೆ ರಾಮನ ಚರಿತೆ’ ಎಂತಲೂ ಭಾಷಾಂತರಿಸಿದ್ದಾರೆ.
ಇವು ಕೇವಲ ತಲೆಬರಹ ಮಾತ್ರ. ತಲೆಬರಹದಲ್ಲೇ ಕನ್ನಡದ ಸೊಗಸು, ಅಚ್ಚ ಕನ್ನಡತನ ಢಾಳಾಗಿ ಕಾಣಿಸಿಕೊಳ್ಳುವಾಗ ಅವುಗಳ ಒಳಪುಟಗಳಲ್ಲಿ ಕನ್ನಡತನ ಹೇಗಿರಬಹುದೆಂದು ಸಾಮಾನ್ಯನೂ ಊಹಿಸಬಹುದು. ಇವರ ಅನುವಾದದ ಬಗ್ಗೆ ಬೇಂದ್ರೆ ಹೇಳಿದ ಒಂದು ಮಾತನ್ನು ಉಲ್ಲೇಖಿಸಿದರೆ ದರ ಮಹತ್ವ ಅರಿವಿಗೆ ಬಂದೀತು! “ನಿಮ್ಮ ಅನುವಾದದಲ್ಲಿ ಒಂದೇ ಒಂದು ದೋಷ ಆಚಾರ್ಯರೇ, ಅದು ನಿಮ್ಮ ಸ್ವಂತ ಕೃತಿ ಅನ್ನುತ್ತಾರೆ.
ಅದೇ ದೋಷ. ನಿಜವಾಗಿ ಅದು ಸ್ವಂತ ಕೃತಿಯಷ್ಟು ಕ್ರಿಯೇಟಿವಿಟಿ ಇದೆ. ಆದರೂ ಜನ ಅದನ್ನು ಅನುವಾದ ಅನ್ನುತ್ತಾರೆ. ಅದೇ ಒಂದು ದೋಷ" ಎಂದು ದ.ರಾ.ಬೇಂದ್ರೆಯವರು ಬನ್ನಂಜೆಯವರ ಬಾಣಭಟ್ಟನ ಕಾದಂಬರಿ ಅನುವಾದದ ಕುರಿತು ಹೇಳುವಾಗ ಈ ಮಾತನ್ನು ಹೇಳಿದ್ದಾರೆ (ಬನ್ನಂಜೆ ಆತ್ಮನಿವೇದನೆ-124). ಹೀಗೆ ಬನ್ನಂಜೆ ಗೋವಿಂದಚಾರ್ಯರ ಬಗ್ಗೆ ಹೇಳಹೊರಟರೆ ಮುಗಿಯದೇ ಇರುವಷ್ಟು ವಿಚಾರಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ.
ಬನ್ನಂಜೆ ನಮ್ಮ ನಾಡಿನ ಸೌಭಾಗ್ಯ. ಅವರೊಬ್ಬ ವಿಶೇಷ ಚೇತನ. ಅಧ್ಯಾತ್ಮವಿದ, ವೇದಾಂತಿ, ರಸಿಕ, ವಿಕ್ಷಿಪ್ತ, ಅಸಾಧಾರಣ ಮೇಧಾವಿ, ಸಂಶೋಧಕ, ಅನ್ವೇಷಕ, ದಾರ್ಶನಿಕ, ಕಥನಕಾರ, ಅನುವಾದಕ, ಪ್ರವಚನಪಟು, ಗ್ರಂಥಸಂಪಾದಕ, ಮಹಾಲೇಖಕ, ಪ್ರಾಚೀನ ಸಾಹಿತ್ಯಗಳ ಅಧಿಕೃತ ವಕ್ತಾರ- ಹೀಗೆ ಅವರ ಹಲವು ಮುಖಗಳು ನಮ್ಮ ಮನೋಭಿತ್ತಿಯಲ್ಲಿ ಮೂಡಿಬರುತ್ತವೆ.
(ಲೇಖಕರು ಸಂಸ್ಕೃತ ವಿದ್ವಾಂಸರು)