Janamejaya Umarji Column: ಶರಣರ ಬಯಕೆ ಲಿಂಗಾಂಗ ಸಾಮರಸ್ಯವೋ ? ಸಮಸಮಾಜವೋ ?
ಉದಾತ್ತ ಲಿಂಗಾಯತವನ್ನು ಒಡೆಯ ಹೊರಟಿರುವವರೇ ವಿಶ್ವಗುರು ಜಗಜ್ಯೋತಿ ಭಕ್ತ ಭಂಡಾರಿ ಬಸವಣ್ಣನವರಿಗೆ ತಾವೇ ಒಂದು ಬಿರುದುಕೊಟ್ಟು ಅದನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಮಾಡಲು ಹೊರಟಿದ್ದಾರೆ. ಈಗ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಜಗದ್ಗುರುಗಳನ್ನು, ಕೇವಲ ‘ಪೂಜ್ಯ’, ‘ಡಾ.’ ಶಬ್ದಗಳಿಗೆ ಇದೇ ಮಾರ್ಕ್ಸ್‌ವಾದಿಗಳೇ ಸೀಮಿತಗೊಳಿಸಿದ್ದಾರೆ.
-
ಯಕ್ಷಪ್ರಶ್ನೆ
ಜನಮೇಜಯ ಉಮರ್ಜಿ
ಬಸವಾದಿ ಶರಣರನ್ನು ‘ಸಮಸಮಾಜ’ದ ಪ್ರವರ್ತಕರು ಎಂದೇಕೆ ಆರೋಪಿಸಲಾಗುತ್ತಿದೆ? ಅವರನ್ನು ಏನೆಲ್ಲ ಆಗಿ ಚಿತ್ರಿಸಲಾಗುತ್ತಿದೆ. ಅವರು ಅಲ್ಲದ್ದನ್ನು ಅವರಿಗ್ಯಾಕೆ ಹಚ್ಚಲಾಗು ತ್ತಿದೆ? ‘ಚಳವಳಿ’, ‘ಸಮಸಮಾಜ’ ಎಂಬುದು ರಾಜಕೀಯ ವ್ಯಾಖ್ಯಾನಗಳಲ್ಲಿ ರೂಪುಗೊಂಡ ಸಂಜ್ಞೆಯೇ ಹೊರತು, ಅದು ವಚನ ಸಾಹಿತ್ಯದಲ್ಲಿನ ಮೂಲ ಪದವಲ್ಲ.
‘ಅನುಮಾನವೇಕೆ ಬಸವಣ್ಣನವರು ಸನಾತನ ಹಿಂದೂ’, ‘ಉದಾತ್ತ ಲಿಂಗಾಯತವನ್ನು ಮರಳು ಗಾಡಿನ ಮತಗಳೊಂದಿಗೆ ಸಮೀಕರಿಸುವುದು ಸರಿಯೇ?’ ಲೇಖನ ಸರಣಿಯು ‘ವಿಶ್ವವಾಣಿ’ಯಲ್ಲಿ ಬಂದ ನಂತರ ಹಲವರು ವಿಷಯಗಳನ್ನು ಕೊಟ್ಟು ಬರೆಯಲು ಪ್ರೇರೇಪಿಸುತ್ತಿದ್ದಾರೆ. ಬರವಣಿಗೆ ಒಂದು ತಪಸ್ಸು, ಅದಕ್ಕೆ ಸಿದ್ಧತೆ ಬೇಕು, ಸಮಯ ಬೇಕು. ಇದೆಲ್ಲ ಇದ್ದೂ ಒಳಗೆ ಪ್ರೇರಕನೆಂಬ ಕರ್ತ ಇರದಿದ್ದರೆ ಏನೂ ಸಾಧ್ಯವಿಲ್ಲ.
ಹೀಗಾಗಿ ಮನಸೊಂದಿಗೆ ಪ್ರೇರಣೆಯೆಂಬ ಜೇನುಹುಳದ ಪರಾಗಸ್ಪರ್ಶ ಆಗದ ಹೊರತು ವಿಚಾರ ವೆಂಬ ಹೂವು ಅರಳುವುದಿಲ್ಲ. ಎರಡು ವಾರಗಳ ಹಿಂದೆ ಧಾರವಾಡದಲ್ಲಿ ಹಿಂದೂ ಸಮ್ಮೇಳನ ವಿತ್ತು, ಅಲ್ಲಿ ಭಾಷಣ ಮಾಡಲು ಹೋಗಿದ್ದೆ. ವೇದಿಕೆಯ ಮುಂಭಾಗದಲ್ಲಿ ಉಭಯ ಕುಶಲೋಪರಿ ಮಾತನಾಡುತ್ತ ಕುಳಿತಾಗ ಹಿರಿಯರೊಬ್ಬರು ಮಾತಿಗೆಳೆದರು.
“ಜಾತ್ಯತೀತ, ಮತಾತೀತ ಮತ್ತು ಸಮಸಮಾಜವೇ ಹಿಂದುತ್ವದ ಗುರಿ ಅಲ್ಲವೇ?" ಅಲ್ಲಿಯೇ ಕುಳಿತ ಇನ್ನೊಬ್ಬ ಹಿರಿಯರು “ಈ ಮೂರು ಶಬ್ದಗಳು ಭಾರತದ್ದಲ್ಲ" ಎಂದರು. ಮೂರನೆಯವರು “ಖಮೇನಿ ಹತ್ಯೆಗೆ ಕರ್ನಾಟಕದಲ್ಲಿ ಪ್ಲೆಕಾರ್ಡ್ ಹಿಡಿದ ಕೆಲವರು, ಇದೇನು ವಿಪರ್ಯಾಸ?" ಎಂದರು. ಹೀಗೆ ನಡೆದಿತ್ತು ಮಾತುಕತೆ. ಈ ಚರ್ಚೆಯನ್ನು ನೋಡಿದಾಗ ಈ ‘ಸಮಸಮಾಜ’ ಶಬ್ದ ಎಲ್ಲಿಯದು? ನಮ್ಮದಲ್ಲದ ಈ ಪದವನ್ನು ಏಕೆ ಪದೇ ಪದೆ ಹೇಳಲಾಗುತ್ತಿದೆ ಎಂಬ ವಿಚಾರ ತಲೆಯಲ್ಲಿ ಹೊಕ್ಕಿತು.
ಅದರಲ್ಲೂ ಬಸವಾದಿ ಶರಣರನ್ನು ‘ಸಮಸಮಾಜ’ದ ಪ್ರವರ್ತಕರು ಎಂದೇಕೆ ಆರೋಪಿಸ ಲಾಗುತ್ತಿದೆ? ಬಸವಾದಿ ಶರಣರನ್ನು ಏನೆಲ್ಲ ಆಗಿ ಚಿತ್ರಿಸಲಾಗುತ್ತಿದೆ. ಅವರು ಅಲ್ಲದ್ದನ್ನು ಅವರಿಗ್ಯಾಕೆ ಹಚ್ಚಲಾಗುತ್ತಿದೆ? ‘ಚಳವಳಿ’, ‘ಸಮಸಮಾಜ’ ಎಂಬುದು ರಾಜಕೀಯ ವ್ಯಾಖ್ಯಾನಗಳಲ್ಲಿ ರೂಪುಗೊಂಡ ಸಂeಯೇ ಹೊರತು, ಅದು ವಚನ ಸಾಹಿತ್ಯದಲ್ಲಿನ ಮೂಲ ಪದವಲ್ಲ. ಹನ್ನೆರಡನೇ ಶತಮಾನದ ಶಿವಶರಣರ ವಚನಗಳಲ್ಲಿ ‘ಲಿಂಗಾಂಗ ಸಾಮರಸ್ಯ’, ‘ಅನುಭಾವ’, ‘ಕಾಯಕ’, ದಾಸೋಹ’, ‘ಭಕ್ತಿ’ ಇತ್ಯಾದಿ ಪದಗಳು ಸ್ಪಷ್ಟವಾಗಿ ಕಾಣುತ್ತವೆ; ಆದರೆ ‘ಬಂಡಾಯ’, ‘ಚಳವಳಿ’, ‘ಕ್ರಾಂತಿ’, ‘ಜಾತ್ಯತೀತ’, ‘ಸಮಸಮಾಜ’ ಇಂಥ ಪದಗಳು ಇರದೇ ಇದ್ದರೂ ವಚನಕಾರರಿಗೆ ಇವೆಲ್ಲ ಉಪಾಧಿಗಳನ್ನು ಏಕೆ ಕೊಡಲಾಗುತ್ತಿದೆ? ಇದರ ಹಿಂದೆ ಉದಾತ್ತ ಲಿಂಗಾಯತವನ್ನು ಗುರುತಿನ ರಾಜಕೀಯಕ್ಕೆ ಬಳಸಿ ಶಿಥಿಲಗೊಳಿಸುವ ಹುನ್ನಾರವಿದೆ ಎಂಬುದು ಸ್ವಲ್ಪ ವಿಚಾರ ಮಾಡಿದಾಗ ಅರ್ಥವಾಗುತ್ತದೆ.
ಇದನ್ನೂ ಓದಿ: Janamejaya Umarji Column: ವಿವಾಹವೆಂಬುದು ಸಂಸ್ಕಾರವೋ, ʼನಿಜಾಚರಣೆʼ ಹೆಸರಿನ ವೈಚಾರಿಕತೆಯೋ ?
ಹೋದಲ್ಲಿ ಬಂದ ‘ನಾನು ಸಂಶೋಧಕ, ನಾನು ಸಾಮಾಜಿಕ ನ್ಯಾಯದ ಪರ’ ಎಂದು ಹೇಳಿಕೊಳ್ಳು ವವರ ಪ್ರಾಮಾಣಿಕತೆಯನ್ನು ಮೊದಲು ಒರೆಗೆ ಹಚ್ಚಬೇಕು. ಅವರದು ಸತ್ಯ ಶೋಧನೆಯೋ? ಸುಳ್ಳಿನ ಬೆಳೆಯೋ? ಸಾಮಾಜಿಕ ನ್ಯಾಯವೋ? ಅದರ ಹೆಸರಿನ ರಾಜಕೀಯವೋ? ಜಗತ್ತಿನ ಎಲ್ಲ ಸಂಸ್ಕೃತಿಯನ್ನು ಆಪೋಷಣ ತೆಗೆಕೊಳ್ಳುತ್ತ ಬಂದಿರುವ ಮಾರ್ಕ್ಸ್‌ವಾದಿಗಳು ಸಾಂಸ್ಕೃತಿಕರು ಆಗಲು ಹೇಗೆ ಸಾಧ್ಯ.
ಉದಾತ್ತ ಲಿಂಗಾಯತವನ್ನು ಒಡೆಯ ಹೊರಟಿರುವವರೇ ವಿಶ್ವಗುರು ಜಗಜ್ಯೋತಿ ಭಕ್ತ ಭಂಡಾರಿ ಬಸವಣ್ಣನವರಿಗೆ ತಾವೇ ಒಂದು ಬಿರುದುಕೊಟ್ಟು ಅದನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಮಾಡಲು ಹೊರಟಿದ್ದಾರೆ. ಈಗ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಜಗದ್ಗುರುಗಳನ್ನು, ಕೇವಲ ‘ಪೂಜ್ಯ’, ‘ಡಾ.’ ಶಬ್ದಗಳಿಗೆ ಇದೇ ಮಾರ್ಕ್ಸ್‌ವಾದಿಗಳೇ ಸೀಮಿತಗೊಳಿಸಿದ್ದಾರೆ.
ವಿಷಯಕ್ಕೆ ಬರುವುದಾದರೆ, ಶರಣರು ಹಾತೊರೆದಿದ್ದು ಶುದ್ಧ ಜೀವನಕ್ರಮಕ್ಕೆ, ಲಿಂಗಾಂಗ ಸಾಮರಸ್ಯಕ್ಕೆ. ‘ಅಂಗ’ ಮತ್ತು ‘ಲಿಂಗ’ ಎಂಬ ಪದಗಳು ಕೇವಲ ಪೂಜಾ ಚಿಹ್ನೆಗಳಲ್ಲ. ಅವು ಜೀವ ಮತ್ತು ಶಿವನ ಅಭೇದದ ಅನುಭಾವವನ್ನು ಸೂಚಿಸುವ ತತ್ತ್ವಪದಗಳು.
ಲಿಂಗಾಂಗ ಸಾಮರಸ್ಯ ಎಂದರೆ ಭಕ್ತನ ಆತ್ಮವು ಪರಮಾತ್ಮನೊಂದಿಗೆ ಏಕೀಭವ ಹೊಂದುವುದು. ಶಿವನೆದುರಿಗೆ ಎಲ್ಲರೂ ಒಂದು ಎಂದಾಗ ಉಂಟಾಗುವ ಭಾವವೇ ಸಮತೆ. ಇದು ಉಪ ಉತ್ಪನ್ನವೇ ಹೊರತು ಮೂಲ ಉದ್ದೇಶವಲ್ಲ. ಹಾಗಾದರೆ ಶಿವಶರಣರು ಸಾಮಾಜಿಕ ಸುಧಾರಣೆಗೆ ಶ್ರಮಿಸಿಯೇ ಇಲ್ಲವೇ ಎಂಬುದಲ್ಲ.
ಶಿವಪಥಕ್ಕೆ ಅಡ್ಡ ಬರುವ ಎಲ್ಲ ಅಡೆತಡೆಗಳನ್ನು ತಡವಿಕೊಂಡು ನಿವಾರಿಸಲು ಯತ್ನಿಸಿದ್ದಾರೆ. ಶಿವಶರಣರನ್ನು ಕೇವಲ ಸಾಮಾಜಿಕ ಹೋರಾಟಗಾರರಾಗಿ ಚಿತ್ರಿಸುವ ಪ್ರವೃತ್ತಿ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳ ವ್ಯಾಖ್ಯಾನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ‘ಸಮಸಮಾಜ’ ಎಂಬ ಪದದ ಮೂಲ ಯುರೋಪಿನಲ್ಲಿದೆ. egalitarian society ಅಥವಾ equal society ಎಂಬ ಇಂಗ್ಲಿಷ್ ಪದಗಳಿಗೆ ಅನುವಾದವಾಗಿ ಅದು ಕನ್ನಡದಲ್ಲಿ ಬಳಕೆಗೆ ಬಂದದೆ. Egalitarianism ಎಂಬ ಕಲ್ಪನೆ ಫ್ರೆಂಚ್ ಕ್ರಾಂತಿಯ ನಂತರ ಯುರೋಪಿಯನ್ ರಾಜಕೀಯ ಚಿಂತನೆಗಳಲ್ಲಿ ಬಲವಾಗಿ ಬೆಳೆಯಿತು; ನಂತರ ಸಮಾಜವಾದಿ ಮತ್ತು ಮಾರ್ಕ್ಸ್‌ವಾದಿ ವಲಯಗಳಲ್ಲಿ ಅದು ವಿಭಿನ್ನ ರೂಪಗಳಲ್ಲಿ ವ್ಯಕ್ತವಾಯಿತು.
’Egalitarianism’ನಲ್ಲಿ ಎರಡು ಮೂಲ ಉದ್ದೇಶಗಳಿವೆ. ಒಂದು ವಿತರಣಾ ಸಮಾನತೆ. ಅಂದರೆ ಆದಾಯ, ಸಂಪತ್ತು ಮತ್ತು ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾಗಬೇಕು, ಇನ್ನೊಂದು ಸಾಪೇಕ್ಷತಾ ಸಮಾನತೆ. ಅಂದರೆ ಶ್ರೇಣಿಕೃತವಲ್ಲದ, ತಾರತಮ್ಯವಿಲ್ಲದ ಹೊಸ ಸಮಾಜವನ್ನು ನಿರ್ಮಾಣ ಮಾಡಬೇಕು. ಇವೆರಡನ್ನೂ ಸಾಽಸುವ ಮಾರ್ಗ ಅಧಿಕಾರ ಕ್ರಾಂತಿಯೇ ಎಂಬುದು ಅದರ ಪರೀಕ್ಷಿತ ನಂಬಿಕೆಯಾಗಿದೆ.-ಂಚ್ ಕ್ರಾಂತಿಯ ಕಲ್ಪನೆಯಾದ ಇದೇ ‘ಸಮಸಮಾಜ’ವನ್ನು ಬಸವಣ್ಣನವರು ಕಟ್ಟಬಯಸಿದ್ದರು ಎಂದು ಹೇಳಿಕೊಂಡು ತಿರುಗಲಾಗುತ್ತಿದೆ.
ವಚನಗಳನ್ನು ಮೂಲದಲ್ಲಿ ಓದಿದಾಗ ಶರಣರು ಆಧ್ಯಾತ್ಮಿಕ ಸಾಧಕರು ಎಂಬ ಸತ್ಯ ಪುನಃ ಸ್ಪಷ್ಟ ವಾಗುತ್ತದೆ. ವಚನಗಳಲ್ಲಿ ಕೇಂದ್ರಭಾವವು ಶಿವಾನುಭವ ಮತ್ತು ಆತ್ಮಸಾಕ್ಷಾತ್ಕಾರ, ಲಿಂಗಾಂಗ ಸಾಮರಸ್ಯವೇ ಆಗಿದ್ದು, ರಾಜಕೀಯ ಅಧಿಕಾರದ ಹೋರಾಟ ಅಥವಾ ಸಂಘಟಿತ ಸಾಮಾಜಿಕ ಬಂಡಾಯದ ಭಾಷೆ ವಚನಗಳಲ್ಲಿ ಇಲ್ಲ. ಹುಟ್ಟಿನ ಆಧಾರದಲ್ಲಿ ಜಾತಿ, ಜಾತಿಯ ಆಧಾರದಲ್ಲಿ ತಾರತಮ್ಯ, ಇವುಗಳ ವಿರೋಧವು ಅವರ ಆಧ್ಯಾತ್ಮಿಕ ಅನುಭವದಿಂದ ಸಹಜವಾಗಿ ಉಂಟಾದ ಪ್ರತಿಕ್ರಿಯೆಯೇ ಹೊರತು ಅದು ಸ್ವತಂತ್ರ ರಾಜಕೀಯ ಚಳವಳಿಯೂ ಅಲ್ಲ ಪ್ರತ್ಯೇಕ ಧರ್ಮದ ಚಳವಳಿಯೂ ಅಲ್ಲ.
ಶಿವಶರಣರನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರನ್ನು ಮೊದಲು ಅಧ್ಯಾತ್ಮ ಸಾಧಕರಾಗಿ ಗುರುತಿಸಬೇಕು; ಸಾಮಾಜಿಕ ಪ್ರಭಾವ ಅಥವಾ ಪರಿವರ್ತನೆಯು ಆ ಸಾಧನೆಯ ಪರಿಣಾಮವಾಗಿ ರೂಪುಗೊಂಡದ್ದು ಎಂಬುದು ವಚನಗಳೊಳಗಿಂದಲೇ ತಿಳಿದುಬರುತ್ತದೆ.
ಭಾರತೀಯ ಭಾಷೆಗಳಲ್ಲಿ, ವಿಶೇಷವಾಗಿ 20ನೇ ಶತಮಾನದಲ್ಲಿ ಸಮಾಜ ಸುಧಾರಣೆ ಮತ್ತು ರಾಜಕೀಯ ಚಳವಳಿಗಳ ಸಂದರ್ಭದಲ್ಲಿ, ‘ಸಮಸಮಾಜ’, ‘ಸಮಾನತೆ’, ‘ಸಾಮಾಜಿಕ ನ್ಯಾಯ’ ಎಂಬ ಪದಗಳು ವ್ಯಾಪಕವಾಗಿ ಬಳಕೆಗೆ ಬಂದವು. ಅದೇ ರೀತಿ ‘ಸೆಕ್ಯುಲರಿಸಂ’ (Secularism) ಎಂಬ ಪದ ಕೂಡ. ಇದರ ಮೂಲ ಲ್ಯಾಟಿನ್ ಭಾಷೆಯ saeculum ಎಂಬುದು.
ಸರಕಾರವು ಚರ್ಚುಗಳ ಅಧಿಪತ್ಯದಿಂದ ಸಂಪೂರ್ಣವಾಗಿ ಹೊರಗಿರಬೇಕು ಎಂಬ ದೃಷ್ಟಿಯಿಂದ ಮಧ್ಯಯುಗೀನ ಯುರೋಪಿನಲ್ಲಿ ಚರ್ಚ್‌ನೊಂದಿಗೆ ರಾಜಕೀಯ ಸಂಘರ್ಷಕ್ಕಾಗಿ secular ಎಂಬ ಪದವು ರೂಪುಗೊಂಡಿತು. ಅಮೆರಿಕದಲ್ಲಿ ’separation of church and state’ ಎಂಬ ಸಂವಿಧಾನಾ ತ್ಮಕ ತತ್ವ ರೂಪುಗೊಂಡಿತು. ಈ ಹಿನ್ನೆಲೆಯಲ್ಲಿ secular ಎಂಬ ಪದವು ‘ಚರ್ಚ್‌ನ ಪ್ರಭಾವದಿಂದ ಮುಕ್ತ ಆಡಳಿತ’ ಎಂಬ ಅರ್ಥವನ್ನು ಕೊಡುತ್ತದೆ. ಆದರೆ ಭಾರತದಲ್ಲಿ ಅದಕ್ಕೆ ‘ಜಾತ್ಯತೀತ’ ಎಂದು ಇದೇ ಸಮಾಜವಾದಿಗಳು ಪದ ಸೃಷ್ಟಿಸಿದರು.
ಡಾ.ಬಾಬಾಸಾಹೇಬರು ಯಾವುದೇ ಒತ್ತಾಯಕ್ಕೆ ಮಣಿಯದೇ ಸೇರಿಸದೇ ಬಿಟ್ಟ Secular ಮತ್ತು Social ಎಂಬ ಎರಡು ಶಬ್ದಗಳನ್ನು ತುರ್ತು ಪರಿಸ್ಥಿತಿ ಹೇರಿ, ಸಂವಿಧಾನವನ್ನು ಕತ್ತಲಲ್ಲಿ ಇಟ್ಟು. ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಯಿತು. ಹೀಗಾಗಿ ಎಲ್ಲದರಲ್ಲಿ ಯುರೋಪಿನ ಈ ಎರಡು ಶಬ್ದಗಳನ್ನು ಮತ್ತು ಅವುಗಳ ಅರ್ಥಗಳನ್ನು ಹುಡುಕುವ ಪರಿಣಾಮವಾಗಿ ವಚನಗಳಲ್ಲಿ ‘ಸಮ ಸಮಾಜ’ದ ಹೇರಿಕೆಯಾಯಿತು.
ತತ್ತ್ವಭೇದಗಳನ್ನು ಸಮಗ್ರವಾಗಿ ನೋಡಿದಾಗ, ಪಾಶ್ಚಾತ್ಯ ರಾಜಕೀಯ ಚಿಂತನೆ ಮತ್ತು ವಚನ ದರ್ಶನದ ನಡುವೆ ಮೂಲದ ವ್ಯತ್ಯಾಸಗಳು ಗೋಚರಿಸುತ್ತವೆ. ಮಾರ್ಕ್ಸ್‌ವಾದವು ಎಲ್ಲವನ್ನೂ ವರ್ಗಸಂಘರ್ಷದ ಕೆಂಪು ಕಣ್ಣ ನೋಡುತ್ತದೆ. ಆರ್ಥಿಕ ರಚನೆಯೇ ಸಮಾಜದ ಮೂಲ ಅಸ್ತಿಭಾರ, ಧರ್ಮ ಮತ್ತು ಸಂಸ್ಕೃತಿ ಮೇಲುಸಂರಚನೆಗಳೆಂದು ಅವುಗಳನ್ನು ವಿಶ್ಲೇಷಿಸಲಾಗುತ್ತದೆ. ಇವರ ದೃಷ್ಟಿಕೋನದಲ್ಲಿ ಸಾಮಾಜಿಕ ಬದಲಾವಣೆಯು ಆರ್ಥಿಕ ವ್ಯವಸ್ಥೆಯ ಪರಿವರ್ತನೆಯ ಮೂಲಕ ಸಾಧ್ಯವಾಗುತ್ತದೆ. ಆದರೆ ವಚನ ದರ್ಶನದಲ್ಲಿ ಕ್ರಮವೇ ಬೇರೆಯಾಗಿದೆ.
ಇಲ್ಲಿ ಅನುಭಾವವೇ ಮೂಲ, ಲಿಂಗಾಂಗ ಸಾಮರಸ್ಯ ಸಾಧನೆಯೇ ಪರಮ ಗುರಿ, ಸಮಾಜವು ಆಧ್ಯಾತ್ಮಿಕ ಸಾಧನೆಯ ಕ್ಷೇತ್ರ. ಒಂದರಲ್ಲಿ ದೈವತತ್ತ್ವವನ್ನು ಮಾನವ ಇತಿಹಾಸದ ಉತ್ಪನ್ನವೆಂದು ಕಾಣುವ ಪ್ರವೃತ್ತಿ ಕಂಡುಬಂದರೆ, ಇನ್ನೊಂದರಲ್ಲಿ ದೈವಾನುಭವವೇ ಮಾನವ ಜೀವನದ ಕೇಂದ್ರ ವಾಗಿದೆ.
ಇತಿಹಾಸದ ಕೆಲವು ಮಹತ್ವದ ಘಟನೆಗಳು ಉದಾಹರಣೆಗೆ Russian Revolution ಹಾಗೂ Chinese Cultural Revolution ರಾಜಕೀಯ ಮತ್ತು ಆರ್ಥಿಕ ಸಮಾನತೆಯ ಪ್ರಶ್ನೆಗಳನ್ನು ಎತ್ತಿಕೊಂಡಿದ್ದರೂ, ಅವು ಅಧಿಕಾರ ಮತ್ತು ಐಡಿಯಾಲಜಿ ಬದಲಾವಣೆಯ ಮೂಲಕ ನಡೆದವು. ಅಲ್ಲಿ ಬದಲಾವಣೆಗಳು ರಕ್ತಪಾತದ ಮೂಲಕ ಬಂದವು. ಇದರ ವ್ಯತಿರಿಕ್ತವಾಗಿ ಶಿವಶರಣರಲ್ಲಿ ಸಂಘಟಿತ ರಾಜಕೀಯ ಬಂಡಾಯವಾಗಲಿ, ಆಡಳಿತವನ್ನು ಬದಲಿಸುವ ವಿಚಾರವಾಗಿ ಇರಲೇ ಇಲ್ಲ.
ಅನುಭವ ಮಂಟಪದಲ್ಲಿ ಅಧ್ಯಾತ್ಮಿಕ ಸಂವಾದ, ವೈಯಕ್ತಿಕ ಸಾಧನೆ, ಭಕ್ತಿ, ಕಾಯಕ ಮತ್ತು ದಾಸೋಹಗಳ ಮೂಲಕ ಆಂತರ್ಯದಿಂದ ಬಹಿರ್ಮುಖವಾಗಿ ಹರಡುವ ಪರಿವರ್ತನೆಯೇ ಅದರ ಮಾರ್ಗವಾಗಿತ್ತು. ಶಿವಭಕ್ತರಾದವರು ಎಲ್ಲ ಭೇದಗಳಿಂದ ಹೊರ ಬರುತ್ತಾರೆ. ‘ಶಿವಭಕ್ತರಾದಲ್ಲಿ ಕುಲವನರಸದಿರಿಂ ಭೋ’, ‘ಶಿವ ಭಕ್ತನೇ ಕುಲಜನು’ ಎಂದೆಲ್ಲ ಹೇಳಿದಾಗ ಇಲ್ಲಿ ಸಾಮರಸ್ಯ ಸಾಧ್ಯ ವಿದೆ.
ಇಲ್ಲಿ ಶುದ್ಧ ಸಮಾಜಕೇಂದ್ರಿತವಾಗಿ ವಿಚಾರ ಮಾಡುವುದಾದರೆ ಶರಣರ ಆಶಯ ಸಾಮರಸ್ಯಯುತ ಸಮಾಜವಾಗಿತ್ತೆ ವಿನಾ ಸಮ ಸಮಾಜವಾಗಿರಲಿಲ್ಲ. ಸಮಸಮಾಜವು ಜಗತ್ತಿನ ಯಾವ ಮೂಲೆ ಯಲ್ಲಿ ಯಾವ ಕ್ರಾಂತಿಯಿಂದಲೂ ಸಾಧ್ಯವಾಗಿಲ್ಲ. ಇದ್ದವರಿಂದ ಕಸಿದು ಇಲ್ಲದವರಿಗೆ ಹಂಚುವ ಸಮಸಮಾಜ ಪ್ರಾಕ್ಟಿಕಲ್ ಅಲ್ಲ. ಇದು welfare state ನ ಭಾಗ. ಆದರೆ ಶರಣರ ದಾಸೋಹ ಇದಕ್ಕಿನ್ನ ತುಂಬಾ ವಿಭಿನ್ನ. ದಾಸೋಹವು ಆಂತರಿಕ ಧಾರ್ಮಿಕ-ನೈತಿಕ ಪ್ರೇರಣೆಯಾ? ಅಥವಾ ಸರಕಾರ ನಿಯಂತ್ರಿತ ಮರುಹಂಚಿಕೆಯ ವ್ಯವಸ್ಥೆಯಾ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡಾಗ ಉತ್ತರ ಸ್ಪಷ್ಟವಾಗುತ್ತದೆ.
ಹೀಗಾಗಿ ಬಸವಾದಿ ಶರಣರ ವಚನ ದರ್ಶನವನ್ನು ಅರ್ಥಮಾಡಿಕೊಳ್ಳುವಾಗ ಅದರ ಮೂಲ ಅಧ್ಯಾತ್ಮಿಕ ಸ್ವಭಾವವನ್ನು ಮರೆತರೆ ಗೊಂದಲ ಉಂಟಾಗುತ್ತದೆ. ಶರಣರ ತತ್ತ್ವದಲ್ಲಿ ಕೇಂದ್ರ ವಾಗಿರುವುದು ಲಿಂಗಾಂಗ ಸಾಮರಸ್ಯ, ಅನುಭಾವ, ಕಾಯಕ ಮತ್ತು ದಾಸೋಹ. ‘ಸಮಸಮಾಜ’, ‘ಸಾಂಸ್ಕೃತಿಕ ನಾಯಕ’ ಇವು ನಮ್ಮ ಮೇಲೆ ಹೇರಿದ ಯುರೋಪು ಮೂಲದ ಪದಗಳು.
ವಾಸ್ತವದಲ್ಲಿ ಶರಣರ ದರ್ಶನವು ಯುರೋಪಿನ ಅಧಿಕಾರದ ಬದಲಾವಣೆ ಅಥವಾ ವರ್ಗ ಸಂಘರ್ಷದ ಮಾರ್ಗವಲ್ಲ; ಅದು ಆತ್ಮಸಾಧನೆ ಮೂಲಕ ಸಮಾಜದಲ್ಲಿ ಸ್ವಾಭಾವಿಕ ಸಮರಸ್ಯ ಮೂಡುವ ದಾರಿಯಾಗಿದೆ. ಹೀಗಾಗಿ ಬಸವ ತತ್ತ್ವವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಅದನ್ನು ಪಾಶ್ಚಾತ್ಯ ರಾಜಕೀಯ ಚೌಕಟ್ಟಿನಲ್ಲಿ ಅಳೆಯುವುದಕ್ಕಿಂತ ಅದರ ಮೂಲ ಅಧ್ಯಾತ್ಮಿಕ ಪರಂಪರೆಯ ಓದಬೇಕು ಎಂಬುದು ಈ ವಿಚಾರವಿಮರ್ಶೆಯ ಮೂಲ ಆಶಯ.
(ಲೇಖಕರು ಸಂಸ್ಕೃತಿ ಚಿಂತಕರು)