Yagati Raghu Naadig Column: ಅಬಲೆಗೆ ಆತ್ಮಬಂಧುವಾದರಾ ಅವಧೂತರು..?
“ಅದೇನು ತಿಂಡಿ ಬೇಕು ಅಂತ ಹೇಳಿದ್ರೆ ನಾವೇ ಮಾಡಿಕೊಡೋಲ್ವೇ? ಗಂಡಸಿಗ್ಯಾಕೆ ಗೌರಿ ದುಃಖ? ನೀನ್ಯಾಕಪ್ಪಾ ಹೀಗೆ ಮೈ-ಕೈ ಮಸಿ ಮಾಡಿಕೊಳ್ಳೋಕೆ ಹೋದೆ..?" ಎಂಬ ವಾತ್ಸಲ್ಯಭರಿತ ದನಿಯುಕ್ಕಿಸಿದ ಗುರುಮಾತೆಯು, ಅವಧೂತರ ಮೈ-ಕೈಗಳಿಗೆ ಮೆತ್ತಿಕೊಂಡಿದ್ದ ಸೌದೆ ಒಲೆಯ ಮಸಿಯನ್ನು ತಮ್ಮ ಸೀರೆ ಸೆರಗಿನ ಅಂಚಿನಿಂದ ಒರೆಸಲು ಮುಂದಾದರು. “ಅಯ್ಯೋ ಬಿಡಮ್ಮಾ, ಪರವಾಗಿಲ್ಲಾ..." ಎಂದು ಅವಧೂತರು ಅಮ್ಮನಿಂದ ಬಿಡಿಸಿಕೊಳ್ಳುವ ವಿಫಲ ಯತ್ನದಲ್ಲಿದ್ದರು. ಆದರೆ ಅಮ್ಮ ಬಿಡಬೇಕಲ್ಲ?! ಮಗನು ಅಧ್ಯಾತ್ಮ ಸಿಂಹಾಸನದ ಸಾಮ್ರಾಟನೇ ಆಗಿದ್ದಿರಬಹುದು, ಆದರೆ ಅಮ್ಮನ ಕಣ್ಣಿನಲ್ಲಿ ಆತನಿನ್ನೂ ತುಂಟಪೋರನೇ, ಬಾಲಕೃಷ್ಣನೇ! ಅಷ್ಟೂ ಮಸಿಯನ್ನು ಒರೆಸಿದ ನಂತರ, ಅವಧೂತರನ್ನು ಒಂದೆಡೆ ನಿಲ್ಲಿಸಿ ಮಕ್ಕಳಿಗೆ ತೆಗೆಯುವಂತೆ ದೃಷ್ಟಿ ತೆಗೆದು ಕೈಬೆರಳುಗಳನ್ನು ಒಮ್ಮೆ ತಲೆಯ ಎರಡೂ ಬದಿಯಲ್ಲಿ ಮಡಿಸಿ ಪಟಗುಟ್ಟಿಸಿದರು ಗುರುಮಾತೆ. ವಾತ್ಸಲ್ಯದ ಖನಿಯೇ ಆಗಿದ್ದ ಅಮ್ಮನ ಕಾಲಿಗೆರಗಿದರು ಅವಧೂತರು.


ರಸದೌತಣ
naadigru@gmail.com
(ಭಾಗ-9)
ಅವಧೂತರ ಸೂಚನೆಯಂತೆ ಮಧ್ಯರಾತ್ರಿಯಲ್ಲಿ ನಿದ್ರೆಗೆ ಜಾರಿದ ಶಿಷ್ಯರ ಮನದಲ್ಲಿ ‘ಎಷ್ಟು ಬೇಗ ಬೆಳಗಾಗುವುದೋ?’ ಎಂಬ ನಿರೀಕ್ಷೆಯೇ ಕೆನೆಗಟ್ಟಿತ್ತು. ಕಾರಣ, ತಾವೆಲ್ಲರೂ ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದು ಧ್ಯಾನ, ಸಾಧನೆ ಮಾಡಿದ ನಂತರ ಶಾರದೆಯ ಕಥೆ ಮುಂದುವರಿಯುತ್ತಲ್ಲಾ ಎಂಬ ಪುಳಕ. ಬಹುತೇಕ, ಅವರು ಅಂದುಕೊಂಡಂತೆಯೇ ನಡೆಯಿತು, ಒಂದು ಅಂಶವನ್ನು ಬಿಟ್ಟು. ಅದೆಂದರೆ, ಬೆಳಗ್ಗೆ 7 ಗಂಟೆಯಾದರೂ ಅವಧೂತರು ಶಿಷ್ಯರ ಕೋಣೆಯೆಡೆಗೆ ಸುಳಿಯಲಿಲ್ಲ, ಅಥವಾ ತಾವಿದ್ದ ಕಡೆಗೆ ಅವರನ್ನು ಕರೆಯಲಿಲ್ಲ. ಹೀಗಾಗಿ ಶಾರದೆಯ ಕಥೆ ಮುಂದುವರಿಯುವ ಲಕ್ಷಣ ಶಿಷ್ಯರಿಗೆ ಕಾಣಲಿಲ್ಲ.
ಅವಧೂತರು ಕೊಟ್ಟ ಮಾತಿಗೆ ತಪ್ಪುವವರಲ್ಲ, ಆದರೂ ಹೀಗೇಕೆ ತಮ್ಮನ್ನು ಆಟವಾಡಿಸುತ್ತಿದ್ದಾರೆ ಎಂದು ಶಿಷ್ಯರು ಗೊಂದಲದಲ್ಲಿ ಮುಳುಗಿದರು. ಮುಂಜಾನೆಯ ಪೂಜೆ- ಪುನಸ್ಕಾರಗಳ ನಂತರ ಅವಧೂತರು ಹಜಾರದ ಉಯ್ಯಾಲೆಯಲ್ಲಿ ಕೂರುವುದು ವಾಡಿಕೆಯಾಗಿತ್ತು. ಆದರೆ ಅಂದು ಅದೂ ಖಾಲಿ ಖಾಲಿ. ಇದೇನಾಗುತ್ತಿದೆ ಎಂದು ಶಿಷ್ಯರೆಲ್ಲರೂ ಅಂದುಕೊಳ್ಳುತ್ತಿರುವಾಗಲೇ ಅಡುಗೆಮನೆ ಯಲ್ಲಿ ಪಾತ್ರೆಗಳ ಸಪ್ಪಳವಾಯಿತು. ಮನೆಯ ಹೆಂಗಸರು ಬೆಳಗ್ಗೆ ಕಾಫಿ-ತಿಂಡಿಯ ತಯಾರಿಯಲ್ಲಿರು ವಾಗ ಹೀಗೆ ಆಗೀಗ ಲೋಟ-ತಟ್ಟೆ-ಪಾತ್ರೆಗಳ ಸದ್ದಾಗುವುದು ಸಹಜವೇ; ಆದರೆ ಅಂದು ಕೇಳಿಬಂದ ಸದ್ದು ವಿಲಕ್ಷಣವಾಗಿತ್ತು. ಕೆಲ ಕ್ಷಣದ ನಂತರ, “ಅಯ್ಯೋ ಮಹಾರಾಯಾ, ಇಲ್ಲಿಗೂ ನುಗ್ಗಿಬಿಟ್ಯಾ? ಏನಪ್ಪಾ ಮಾಡ್ತಾ ಇದ್ದೀಯಾ ನೀನೂ?" ಎಂಬ, ಮಹಿಳೆಯೊಬ್ಬರ ಹುಸಿಮುನಿಸು ಬೆರೆತ ದನಿ ಕೇಳಿತು. “ಹೆದರಬೇಡಮ್ಮಾ, ತಿಂಡಿ ಮಾಡ್ತಾ ಇದ್ದೀನಿ" ಎಂಬ ಸಮಜಾಯಿಷಿಯ ದನಿ ಒಂದು ಗಂಡಿನ ಕಂಠದಿಂದ ಹೊಮ್ಮಿತು. ಮೊದಲ ದನಿ ‘ಗುರುಮಾತೆ’ಯದ್ದಾದರೆ, ಎರಡನೆಯದು ಸಾಕ್ಷಾತ್ ಅವಧೂತರದ್ದಾಗಿತ್ತು!
“ಅದೇನು ತಿಂಡಿ ಬೇಕು ಅಂತ ಹೇಳಿದ್ರೆ ನಾವೇ ಮಾಡಿಕೊಡೋಲ್ವೇ? ಗಂಡಸಿಗ್ಯಾಕೆ ಗೌರಿ ದುಃಖ? ನೀನ್ಯಾಕಪ್ಪಾ ಹೀಗೆ ಮೈ-ಕೈ ಮಸಿ ಮಾಡಿಕೊಳ್ಳೋಕೆ ಹೋದೆ..?" ಎಂಬ ವಾತ್ಸಲ್ಯಭರಿತ ದನಿಯುಕ್ಕಿಸಿದ ಗುರುಮಾತೆಯು, ಅವಧೂತರ ಮೈ-ಕೈಗಳಿಗೆ ಮೆತ್ತಿಕೊಂಡಿದ್ದ ಸೌದೆ ಒಲೆಯ ಮಸಿಯನ್ನು ತಮ್ಮ ಸೀರೆ ಸೆರಗಿನ ಅಂಚಿನಿಂದ ಒರೆಸಲು ಮುಂದಾದರು. “ಅಯ್ಯೋ ಬಿಡಮ್ಮಾ, ಪರವಾಗಿಲ್ಲಾ..." ಎಂದು ಅವಧೂತರು ಅಮ್ಮನಿಂದ ಬಿಡಿಸಿಕೊಳ್ಳುವ ವಿಫಲ ಯತ್ನದಲ್ಲಿದ್ದರು. ಆದರೆ ಅಮ್ಮ ಬಿಡಬೇಕಲ್ಲ?! ಮಗನು ಅಧ್ಯಾತ್ಮ ಸಿಂಹಾಸನದ ಸಾಮ್ರಾಟನೇ ಆಗಿದ್ದಿರಬಹುದು, ಆದರೆ ಅಮ್ಮನ ಕಣ್ಣಿನಲ್ಲಿ ಆತನಿನ್ನೂ ತುಂಟಪೋರನೇ, ಬಾಲಕೃಷ್ಣನೇ! ಅಷ್ಟೂ ಮಸಿಯನ್ನು ಒರೆಸಿದ ನಂತರ, ಅವಧೂತರನ್ನು ಒಂದೆಡೆ ನಿಲ್ಲಿಸಿ ಮಕ್ಕಳಿಗೆ ತೆಗೆಯುವಂತೆ ದೃಷ್ಟಿ ತೆಗೆದು ಕೈಬೆರಳುಗಳನ್ನು ಒಮ್ಮೆ ತಲೆಯ ಎರಡೂ ಬದಿಯಲ್ಲಿ ಮಡಿಸಿ ಪಟಗುಟ್ಟಿಸಿದರು ಗುರುಮಾತೆ. ವಾತ್ಸಲ್ಯದ ಖನಿಯೇ ಆಗಿದ್ದ ಅಮ್ಮನ ಕಾಲಿಗೆರಗಿದರು ಅವಧೂತರು.
ಇದನ್ನೂ ಓದಿ: Yagati Raghu Naadig Column: ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ
ನಂತರ ಶಿಷ್ಯರಿದ್ದ ಕೋಣೆಗೆ ಬಂದ ಅವಧೂತರು, “ಎಲ್ಲರೂ ರಾತ್ರಿ ಸರಿಯಾಗಿ ನಿದ್ರೆ ಮಾಡಿದಿರಾ? ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸಾಧನೆ ಮಾಡಿದಿರಾ?" ಎಂದು ಕೇಳಿದರು, ಆ ಕುರಿತು ತಮಗೇನೂ ಗೊತ್ತಿಲ್ಲವೇನೋ ಎಂಬಂತೆ! ನಂತರ ಶಿಷ್ಯರಿಬ್ಬರನ್ನು ಅಡುಗೆಮನೆಗೆ ಕರೆತಂದು, ಒಬ್ಬನ ಕೈಗೆ ಮುತ್ತುಗದ ಎಲೆಗಳ ಕಟ್ಟನ್ನು ಕೊಟ್ಟು, ಇನ್ನೊಬ್ಬ ದಢೂತಿ ಆಸಾಮಿಗೆ ದೊಡ್ಡ ಹಿತ್ತಾಳೆ ಕೊಳದಪ್ಪಲೆ ನೀಡಿ, ತಾವು ಒಂದು ಕ್ಯಾರಿಯರ್ ಹಿಡಿದು, ಅಮ್ಮನೆಡೆಗೆ ಒಮ್ಮೆ ತಿರುಗಿ ನೋಡಿ, “ಎಲ್ಲರೂ ಊಟದ ಹೊತ್ತಿಗೆ ಬರ‍್ತೀವಿ. ಅನ್ನದ ಜತೆಗೆ ಎಳೆಯ ಹಲಸಿನಕಾಯಿಯ ಹುಳಿ, ಸುಟ್ಟಿರುವ ಹುರುಳಿ ಹಪ್ಪಳ, ಕಳಲೆಯ ಉಪ್ಪಿನಕಾಯಿ ಸಿದ್ಧವಾಗಿರಲಿ" ಎಂದು ತುಂಟದನಿಯಲ್ಲಿ ಹೇಳಿ ಹಬ್ಬು ಕುಣಿಸಿದರು. ಗುರುಮಾತೆ ಹಣೆ ಚಚ್ಚಿಕೊಂಡು ನಸುನಕ್ಕರು...
ಇಷ್ಟೂ ಚರ್ಯೆಗೆ ಸಾಕ್ಷಿಯಾಗಿದ್ದ ಶಿಷ್ಯರಿಬ್ಬರಿಗೆ ಎಲ್ಲವೂ ಅಯೋಮಯ. ಮಿಕ್ಕ ಶಿಷ್ಯರನ್ನೂ ಕರೆದ ಅವಧೂತರು, “ನಡೀರಯ್ಯಾ, ಹೊಳೆ ದಂಡೆಯಲ್ಲಿ ಕೂತು ಕಥೆಯನ್ನು ಮುಂದು ವರಿಸೋಣ" ಎಂದರು. ಭಾರವಿದ್ದ ಹಿತ್ತಾಳೆ ಕೊಳದಪ್ಪಲೆಯನ್ನು ಹೊರಲಾರದೆ ಹೊತ್ತಿದ್ದ ಶಿಷ್ಯರು ಕುತೂಹಲವನ್ನು ತಡೆಯಲಾಗದೆ ಅದರ ಮುಚ್ಚಳವನ್ನು ಹಾಗೇ ಸುಮ್ಮನೆ ಸರಿಸಿ ನೋಡಿದರೆ- ಘಮಗುಡುತ್ತಿರುವ ಬಿಸಿಬಿಸಿ ತರಕಾರಿ ಉಪ್ಪಿಟ್ಟು! ಶಿಷ್ಯರೆಲ್ಲರೂ ಧ್ಯಾನ ಮುಗಿಸುವ ಹೊತ್ತಿಗೆ ಅವಧೂತರು, ಮನೆಯ ಹೆಂಗಸರಿಗೂ ಸುಳಿವು ನೀಡದೆ ಸ್ವತಃ ಅಡುಗೆಮನೆ ಸೇರಿ ಶಿಷ್ಯರಿ ಗೆಂದು ಉಪ್ಪಿಟ್ಟನ್ನು ತಯಾರಿಸಿದ್ದರು. ತಯಾರಿಯ ವೇಳೆ, ಹುರಿಯುವ ಜಾಲರಿ ಕೈಗೆ ಸಿಗದ ಕಾರಣಕ್ಕೆ ತೆಳ್ಳಗಿನ ಪುಟ್ಟ ತಟ್ಟೆಯನ್ನೇ ಎತ್ತಿಕೊಂಡು ರವೆಯನ್ನು ಹುರಿದಿದ್ದರು. ಒಗ್ಗರಣೆಗೆ ಖಾದ್ಯತೈಲ-ಕಡಲೇ ಬೇಳೆ-ಉದ್ದಿನಬೇಳೆಯ ಬದಲಿಗೆ ಸೌಟುಗಟ್ಟಲೆ ತುಪ್ಪ ಸುರಿದು, ಮೂರ‍್ನಾಲ್ಕು ಮುಷ್ಟಿ ದ್ರಾಕ್ಷಿ-ಗೋಡಂಬಿಗಳನ್ನು ಅದರಲ್ಲಿ ಹೊರಳಾಡಿಸಿ ಹುರಿದಿದ್ದರು. ಇದು ಅವರಲ್ಲಿ ಕೆನೆಗಟ್ಟಿದ್ದ ಮಾತೃವಾತ್ಸಲ್ಯಕ್ಕೊಂದು ಪುರಾವೆ. ಅಡುಗೆಮನೆಯಿಂದ ಕೇಳಿಬಂದ ಪಾತ್ರೆ-ಪರಿಕರಗಳ ಸದ್ದು ವಿಲಕ್ಷಣವಾಗಿದ್ದುದು ಈ ಕಾರಣಕ್ಕೇ! ಮಗನ ಇಷ್ಟೂ ಸಾಹಸಗಳನ್ನು ಗುರು ಮಾತೆ ಬಿಡಿಸಿ ಬಿಡಿಸಿ ಹೇಳಿದಾಗ, ಶಿಷ್ಯರ ಕಂಗಳು ನೀರಾಡಿದ್ದವು. ‘ಸಾಧನೆಯಿಂದ ವಿಮುಖರಾದಾಗ ತಮ್ಮನ್ನು ದಂಡಿಸುವ ಇದೇ ಅವಧೂತರು, ಸತ್ಕರಿಸುವಾಗ ಅನ್ನಪೂರ್ಣೆಯೇ ಆಗಿ ಅಮೃತವನ್ನು ಧಾರೆಯೆರೆಯುತ್ತಾರಲ್ಲಾ’ ಎಂಬ ಧನ್ಯತಾಭಾವವೇ ಅದಕ್ಕೆ ಕಾರಣ...
ಆದರೆ, ಅವಧೂತರು ಹಿಡಿದಿದ್ದ ಕ್ಯಾರಿಯರ್‌ನಲ್ಲಿರೋದೇನು? ಎಂಬ ಸಂಶಯ ಶಿಷ್ಯರೊಬ್ಬರನ್ನು ಕಾಡಿತು. ಅದನ್ನು ಲಪಕ್ಕನೆ ಗ್ರಹಿಸಿದ ಅವಧೂತರು, “ತರಕಾರಿ ಉಪ್ಪಿಟ್ಟಿನ ‘ಆಸ್ವಾದನಾ ಕಛೇರಿ’ಯನ್ನು ಹಾಗೇ ನಡೆಸೋಕ್ಕಾಗುತ್ತಾ ರಾಯರೇ? ಜತೆಗೆ ತೆಂಗಿನಕಾಯಿ ಚಟ್ನಿಯ ‘ಪಕ್ಕವಾದ್ಯ’ ಇದ್ರೆ ಸೊಗಸಲ್ಲವೇ? ಚಟ್ನಿ ಇದರಲ್ಲಿದೆ" ಎಂದು ವರದಿ ಒಪ್ಪಿಸಿದರು. ಪಾರಮಾರ್ಥಿಕ ಸಾಧನೆಯು ಅಂತಿಮ ಗುರಿಯಾಗಿದ್ದರೂ, ಲೌಕಿಕ ಬದುಕಿನ ಯಾವ ಆರೋಗ್ಯಕರ ಸಂಭ್ರಮವನ್ನೂ ಶಿಷ್ಯರು ತಪ್ಪಿಸಿಕೊಳ್ಳುವಂತಾಗಬಾರದು ಎಂಬುದು ಅವಧೂತರ ಆಶಯವಾಗಿತ್ತು. ಅದರ ಪ್ರತಿಫಲವೇ ದ್ರಾಕ್ಷಿ-ಗೋಡಂಬಿ-ತುಪ್ಪಭರಿತ ತರಕಾರಿ ಉಪ್ಪಿಟ್ಟು , ತೆಂಗಿನಕಾಯಿ ಚಟ್ನಿ!
ಎಲ್ಲರ ಸವಾರಿ ಹೊಳೆದಂಡೆಯತ್ತ ಹೊರಟಿತು. ದಾರಿಯಲ್ಲಿ ಸಾಗುವಾಗ, ಶ್ರೀ ಆದಿಶಂಕರಾಚಾರ್ಯರು ರಚಿಸಿದ ‘ಶ್ರೀ ಅನ್ನಪೂರ್ಣಾ ಸ್ತೋತ್ರಂ’ನ ‘ನಿತ್ಯಾನಂದಕರೀವರಾಭಯಕರೀ ಸೌಂದರ್ಯ ರತ್ನಾಕರೀ, ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ| ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧಿಶ್ವರೀ, ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ’ ಎಂಬ ಸಾಲುಗಳನ್ನು ಅವಧೂತರು ಗುನುಗುನಿಸುತ್ತಿದ್ದರು, ಅದಕ್ಕೆ ಶಿಷ್ಯರೂ ದನಿಗೂಡಿಸುತ್ತಿದ್ದರು. ಹೊಳೆದಂಡೆಯನ್ನು ತಲುಪು ತ್ತಿದ್ದಂತೆ ಬಂಡೆಯ ಮೇಲೆ ಕೊಳದಪ್ಪಲೆಯನ್ನು ಇರಿಸುವಂತೆ ಅವಧೂತರು ಶಿಷ್ಯರಿಗೆ ಸೂಚಿಸಿದರು. ಅಷ್ಟು ಹೊತ್ತಿಗೆ ‘ಶ್ರೀ ಅನ್ನಪೂರ್ಣಾ ಸ್ತೋತ್ರಂ’ ಮುಗಿದಿತ್ತು, ಎಲ್ಲರಿಗೂ ಹೊಟ್ಟೆ ತಾಳ ಹಾಕುತ್ತಿತ್ತು. ಮುತ್ತುಗದ ಎಲೆಗೆ ಉಪ್ಪಿಟ್ಟು ಹಾಕಿ ಶಿಷ್ಯರಿಗೆ ನೀಡಿದ ಅವಧೂತರು, ತಾವೂ ಒಂದು ಎಲೆಯನ್ನು ಕೈಗೆತ್ತಿಕೊಂಡರು.
ಆದರೆ ಶಿಷ್ಯರು ತಿಂಡಿ ತಿನ್ನದೆ ತಮ್ಮನ್ನೇ ದಿಟ್ಟಿಸುತ್ತಿದ್ದುದನ್ನು ಕಂಡ ಅವಧೂತರು ಅಮಾಯಕ ರಂತೆ, “ಯಾಕ್ರಯ್ಯಾ, ತಿಂಡಿ ತಿನ್ನೋಲ್ವೇ...?" ಎಂದು ಹುಬ್ಬು ಕುಣಿಸಿದರು. ಶಿಷ್ಯರೊಬ್ಬರು ಧೈರ್ಯ ಮಾಡಿ, “ಕಥೆ ಮುಂದುವರಿಸಿ ಗುರುಗಳೇ.." ಎಂದು ಗೋಗರೆದಿದ್ದಕ್ಕೆ, “ಕಥೆ? ಯಾವ ಕಥೆ?" ಎಂದು ನಗುತ್ತಲೇ ನಾಟಕವಾಡಿದರು. ನಂತರ ಗಂಟಲು ಸರಿಮಾಡಿಕೊಂಡು ಶಾರದೆಯ ಕಥೆಯನ್ನು ಮುಂದುವರಿಸತೊಡಗಿದರು...
“ಇದುವರೆಗೆ ನಾನು ಹೇಳಿಕೊಂಡು ಬಂದ ಹಾಗೂ ನೀವೇ ಸಾಕ್ಷಿಯಾದ ಒಂದಷ್ಟು ಪ್ರಸಂಗ ಗಳಿಂದಾಗಿ ಶಾರದೆಯ ಕಥನವು ನಿಮಗೆ ಚದುರಿದ ಚಿತ್ರಗಳಂತೆ ಗೋಚರಿಸಿದೆ. ಇನ್ನು ಮುಂದೆ ಆ ಎಲ್ಲ ಚಿತ್ರಗಳನ್ನೂ ಒಂದು ನೇಯ್ಗೆಯಲ್ಲಿ ಹೆಣೆದು ನಿಮ್ಮ ಮುಂದಿಡುವೆ. ಗಮನವಿಟ್ಟು ಕೇಳಿಸಿಕೊಳ್ಳಿ. ಇದು ಬರೀ ಕಥೆಯಷ್ಟೇ ಅಲ್ಲ. ಇದು ನಮ್ಮ ಸಮಾಜ, ಅದರ ಸಹಭಾಗಿಗಳು ಲೋಕಾ ರೂಢಿಯಂತೆ ಸಾಗದೆ ತಪ್ಪುಹೆಜ್ಜೆಯನ್ನಿಟ್ಟರೆ ಪರಿಣಾಮ ಏನಾಗುತ್ತದೆ ಎಂಬುದರ ಸಂಗ್ರಹ ರೂಪವೂ ಹೌದು. ಅಷ್ಟೇಕೆ, ನನ್ನ ಶಿಷ್ಯರಾದ ನೀವು ಇಂಥ ತಪ್ಪುಹಾದಿಯಲ್ಲಿ ಕನಸಿನಲ್ಲೂ ಹೆಜ್ಜೆ ಹಾಕಬಾರದು ಅನ್ನೋದಕ್ಕೆ ಇದೊಂದು ಎಚ್ಚರಿಕೆಯ ಗಂಟೆಯೂ ಹೌದು. ‘ವಿದ್ಯೆಯ ಹಸಿವು’ ನೀಗಬೇಕಿದ್ದ ತಾಣದಲ್ಲಿ ಹೆಣ್ಣಿನ ಹಸಿಮಾಂಸದ ಮೇಲೆ ಕಣ್ಣುಹಾಕಿ ‘ಕಾಮದ ಹಸಿವು’ ನೀಗಿಸಿ ಕೊಳ್ಳುವ ರಣಹದ್ದು ಕೂಡ ಇರುವುದನ್ನು ಕಂಡ ಅಮಾಯಕಿ ಶಾರದೆ ಅಕ್ಷರಶಃ ಕುಸಿದಳು.
ಆದರೆ ತಾನಿದ್ದ ಸಾಮಾಜಿಕ-ಆರ್ಥಿಕ ದುಸ್ಥಿತಿಯಿಂದಾಗಿ, ಹೆತ್ತವರ ಅಸಹಾಯಕತೆಯಿಂದಾಗಿ ಅದನ್ನು ಆಕೆ ಹೊರಗೆಲ್ಲೂ ಹೇಳಿಕೊಳ್ಳುವಂತಿರಲಿಲ್ಲ. ಹಾಗಂತ, ಉಚಿತವಾಗಿ ಅನ್ನ-ಅಕ್ಷರ-ಆಶ್ರಯ ಪಡೆಯುತ್ತಿರುವ ಕಾರಣಕ್ಕೆ ತನ್ನ ದೇಹವನ್ನು ಮೈಲಿಗೆ ಮಾಡಿಕೊಳ್ಳಲೂ ಆಕೆ ಸಿದ್ಧಳಿರಲಿಲ್ಲ. ಏಕೆಂದರೆ ಅವಳೊಂದು ಉದಾತ್ತ ಚೇತನ, ಅನುಪಮ ಆತ್ಮ. ಹೀಗಾಗಿ, ವಾರ್ಷಿಕ ಪರೀಕ್ಷೆ ಮುಗಿದು, ಬೇಸಗೆ ರಜೆಯಲ್ಲಿ ಹುಟ್ಟೂರಿಗೆ ಹೋಗಿ ಬರುವ ಅವಕಾಶ ಸಿಕ್ಕಿದಾಗ, ಸಂಸ್ಥೆಯ ಆವರಣದಲ್ಲಿನ ಈ ‘ಅಸಹಜ’ ಪ್ರವೃತ್ತಿಯ ಕುರಿತು ಹೆತ್ತವರಲ್ಲಿ ಹೇಳಿಕೊಂಡು, ಶಿಕ್ಷಣವನ್ನುಅಲ್ಲಿಗೇ ಮೊಟಕುಗೊಳಿಸಲೂ ಶಾರದೆ ನಿರ್ಧರಿಸಿದ್ದುಂಟು. ಮನೆಯನ್ನು ತಲುಪಿದ ಮಾರನೆಯ ದಿನ ಅಪ್ಪ-ಅಮ್ಮನ ಬಳಿ, ‘ನಿಮ್ಮ ಹತ್ತಿರ ಸ್ವಲ್ಪ ಮಾತಾಡುವು ದಿದೆ’ ಎಂದು ಪೀಠಿಕೆ ಹಾಕಿದ್ದೂ ಉಂಟು...
“ಆದರೆ, ಅವಳು ಮಾತು ಮುಂದುವರಿಸುವುದಕ್ಕೂ ಮೊದಲೇ ಅಪ್ಪ-ಅಮ್ಮ, ‘ಏನೇ ತೊಂದರೆ ಎದುರಾದರೂ ನೀನು ಆ ಸಂಸ್ಥೆಯ ಆಶ್ರಯದಲ್ಲಿದ್ದು ಚೆನ್ನಾಗಿ ಓದಿ, ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿ ನಮ್ಮಿಬ್ಬರನ್ನೂ ಸಲಹಬೇಕು ಕಣವ್ವಾ’ ಎಂದು ಸಹಜದನಿಯಲ್ಲಿ ಹೇಳಿಬಿಟ್ಟರು. ಹೆತ್ತವರು ತನ್ನಲ್ಲಿ ಇಂಥದೊಂದು ನಿರೀಕ್ಷೆಯಿಟ್ಟುಕೊಂಡಿರುವುದು ಅರಿವಾಗುತ್ತಿದ್ದಂತೆ, ‘ಅತ್ತ ದರಿ, ಇತ್ತ ಪುಲಿ’ ಎಂಬ ಗೊಂದಲದಲ್ಲಿ ಸಿಲುಕಿದ ಶಾರದೆ, ಎದೆಯಾಳದ ಅಳಲನ್ನು ಹಾಗೇ ಅದುಮಿಟ್ಟು ಕೊಂಡು, ‘ನನ್ನ ಬಗ್ಗೆ ನೀವೇನೂ ಚಿಂತಿಸದೆ ನೆಮ್ಮದಿಯಾಗಿರಿ. ನಾನು ಚೆನ್ನಾಗಿ ಓದುತ್ತಿದ್ದೇನೆ. ಸಂಸ್ಥೆಯಲ್ಲಿ ನನಗಾವ ತೊಂದರೆಯೂ ಇಲ್ಲ, ಸ್ವಂತ ಮಗಳಂತೆ ನೋಡಿ ಕೊಳ್ಳುತ್ತಿದ್ದಾರೆ’ ಎಂದು ನಾಲಗೆ ಹೊರಳಿಸಿಬಿಟ್ಟಳು! ಹೆತ್ತವರು ಹಿಗ್ಗಿದರು....
“ರಜೆ ಮುಗಿದು ವಿದ್ಯಾರ್ಥಿ ನಿಲಯಕ್ಕೆ ಮರಳುವ ದಿನ ಬಂದಾಗ, ಹೇಳ ಬೇಕಾದ್ದನ್ನು ಹೇಳಲಾಗದ ದುಃಖದಲ್ಲಿ ಶಾರದೆಯ ಅಮ್ಮನನ್ನು ಬಿಗಿಯಾಗಿ ತಬ್ಬಿ ರೋದಿಸ ತೊಡಗಿದಳು. ಆದರೆ ಅಮ್ಮ ಅಂದುಕೊಂಡಿದ್ದೇ ಬೇರೆ! ಹೆತ್ತವರನ್ನು ಬಿಟ್ಟಿರಲಾಗದ ನೋವಿಗೆ ಅಳುತ್ತಿದ್ದಾಳೆ ಎಂದು ಭಾವಿಸಿದ ಅಮ್ಮ, ‘ಓದು ಮುಗಿದ ಮೇಲೆ ಮನೆಗೇ ಮರಳುತ್ತೀಯಲ್ಲ ಮಗಾ, ಇನ್ನೊಂದೇ ವರ್ಷ ತಾನೇ?’ ಎಂದು ಸಮಾಧಾನಿಸಲು ಯತ್ನಿಸಿದಳು. ಆದರೆ ಮಗಳ ಅಳು ತೀವ್ರವಾದಾಗ, ತನ್ನ ಹಸುಬೆ ಚೀಲದಟ್ಟುಕೊಂಡಿದ್ದ ಅಂಗೈಯಗಲದ ಚಿತ್ರಪಟವನ್ನು ಶಾರದೆಗೆ ನೀಡಿದ ಅಮ್ಮ, ‘ನಿನಗೆ ತುಂಬಾ ನೋವಾದಾಗಲೆಲ್ಲಾ, ಈ ಪಟದಲ್ಲಿರು ವವರನ್ನು ಪ್ರಾರ್ಥಿಸು, ಅವರು ಪರಿಹಾರ ಕೊಡ್ತಾರೆ’ ಎಂದಳು..." ಎಂದು ಹೇಳಿ ಕಥೆಯನ್ನು ಅರೆಕ್ಷಣ ನಿಲ್ಲಿಸಿದರು ಅವಧೂತರು.
ಆಗ ಶಿಷ್ಯರೊಬ್ಬರು, “ಅದು ಯಾರ ಚಿತ್ರಪಟ ಗುರುಗಳೇ?" ಎಂದು ಪ್ರಶ್ನಿಸಿದಾಗ, “ನಿಮ್ಮ ಬಾಯಿಗೆ ತರಕಾರಿ ಉಪ್ಪಿಟ್ಟನ್ನೂ, ಕಿವಿಗೆ ಕಥಾಹೂರಣವನ್ನೂ ಉಣಬಡಿಸುತ್ತಿರುವವರದು" ಎನ್ನುತ್ತಾ ನಕ್ಕರು ಅವಧೂತರು.
“ಅಂದರೆ... ನಿಮ್ಮ ಚಿತ್ರಪಟವಾ?!" ಎಂದು ಉದ್ಗರಿಸುತ್ತಾ ಅಪ್ರತಿಭರಾದ ಆ ಶಿಷ್ಯರು, “ಕಥೆಯಲ್ಲಿ ಈಗ ನಿಮ್ಮ ಪ್ರವೇಶವೂ ಆಯಿತಲ್ಲಾ ಗುರುಗಳೇ?" ಎಂದರು. ಅವಧೂತರು ನಿಗೂಢವಾಗಿ ನಕ್ಕರು...
(ಮುಂದುವರಿಯುವುದು)