Keshava Prasad B Column: ಮಧ್ಯಮ ವರ್ಗದ ಜನ ಉಳಿತಾಯ ಮಾಡುತ್ತಿಲ್ಲವೇ ?
ಟ್ರಾವೆಲ್, ಬ್ರ್ಯಾಂಡ್ ಎಕ್ಸ್ ಪೀರಿಯನ್ಸ್, ಟೆಕ್ನಾಲಜಿ, ಈಸೀ ಕ್ರೆಡಿಟ್, ಡಿಜಿಟಲ್ ಪೇಮೆಂಟ್ಸ್, ಆನ್ಲೈನ್ ಶಾಪಿಂಗ್, ಕ್ರೆಡಿಟ್ ಕಾರ್ಡ್ ಲೋನ್ಸ್, ಎಲ್ಲವೂ ಸರ್ವೇ ಸಾಮಾನ್ಯ. ಹಲವಾರು ದಶಕಗಳ ಕಾಲ ಭಾರತೀಯ ಕುಟುಂಬಗಳು ಉಳಿತಾಯಕ್ಕೆ ಹೆಸರುವಾಸಿಯಾಗಿದ್ದವು. ಅವರ ಆದಾಯದಲ್ಲಿ ದೊಡ್ಡ ಪಾಲು ಉಳಿತಾಯಕ್ಕೆ ಸಂದಾಯವಾಗುತ್ತಿತ್ತು. ಆದರೆ ಉಳಿತಾಯದ ಅಭ್ಯಾಸ ಕಡಿಮೆ ಯಾಗುತ್ತಿದೆ ಎಂಬ ಮಾತಿದೆ.
-
ಮನಿ ಮೈಂಡೆಡ್
ಭಾರತದಲ್ಲಿ ತೊಂಭತ್ತರ ದಶಕದಲ್ಲಿ ಮಧ್ಯಮ ವರ್ಗದ ಜನರ ಜೀವನ ಹೇಗೆ ಇತ್ತು? ಆಗ ಜನರ ಆದಾಯ ಕಡಿಮೆ ಇದ್ದರೂ, ಖರ್ಚು ಕೂಡ ಕಡಿಮೆ ಇತ್ತು. ಒಂದು ಸ್ವಂತ ಮನೆ, ಮಕ್ಕಳ ಶಿಕ್ಷಣಕ್ಕೆ ಉಳಿತಾಯ, ಸಾಲ ಮುಕ್ತ ನಿವೃತ್ತಿ ಜೀವನ, ಮಕ್ಕಳ ಮದುವೆ, ಒಂದಷ್ಟು ಚಿನ್ನ, ಫಿಕ್ಸೆಡ್ ಡೆಪಾಸಿಟ್, ಸಾಧ್ಯವಾದರೆ ಒಂದು ಸಣ್ಣ ಜಾಗ ಖರೀದಿ ಇಷ್ಟೇ ಪರಿಪೂರ್ಣ, ಸಂತೃಪ್ತ ಬದುಕಿನ ರಹದಾರಿ ಯಾಗಿತ್ತು.
ಮನೆಗೊಂದು ಟಿವಿ, ವರ್ಷಕ್ಕೊಮ್ಮೆ ಪ್ರವಾಸ, ಯಾವುದಾದರೂ ಒಂದು ಆದಾಯದ ಮೂಲ ಇರುತ್ತಿತ್ತು. ಅಷ್ಟಕ್ಕೇ ಮಧ್ಯಮ ವರ್ಗದ ಜನ ಖುಷಿಯಿಂದ ಕಾಲಕಳೆಯುತ್ತಿದ್ದರು. ಆಗಲೂ ಸಂಪತ್ತಿನ ಅಸಮಾನ ಹಂಚಿಕೆ ಇತ್ತು. ಬಹುಪಾಲು ಮಂದಿ ಇರುವುದರಲ್ಲಿಯೇ ತೃಪ್ತಿಪಡುತ್ತಿದ್ದರು.
ಆದರೆ ಈಗ ಹಾಗಲ್ಲ. 2020ರ ವೇಳೆಗೆ ಚಿತ್ರಣ ಸಂಪೂರ್ಣ ಬದಲಾಗಿದೆ. ಮನೆಗೆ ಹಲವಾರು ಸೌಕರ್ಯಗಳು, ಯಂತ್ರೋಪಕರಣಗಳು ಬೇಕೇಬೇಕು. ಬಂಗಾರದ ಹಲವಾರು ಸರಗಳು, ಕೈಯಲ್ಲಿ ದುಬಾರಿ ಸ್ಮಾರ್ಟ್ʼಫೋನ್ ಅತಿ ಅವಶ್ಯಕ ಎನ್ನಿಸಿವೆ. ದೊಡ್ಡ ಕಾರು ಮನೆ ಮುಂದಿರಬೇಕು.
ಟ್ರಾವೆಲ್, ಬ್ರ್ಯಾಂಡ್ ಎಕ್ಸ್ ಪೀರಿಯನ್ಸ್, ಟೆಕ್ನಾಲಜಿ, ಈಸೀ ಕ್ರೆಡಿಟ್, ಡಿಜಿಟಲ್ ಪೇಮೆಂಟ್ಸ್, ಆನ್ಲೈನ್ ಶಾಪಿಂಗ್, ಕ್ರೆಡಿಟ್ ಕಾರ್ಡ್ ಲೋನ್ಸ್, ಎಲ್ಲವೂ ಸರ್ವೇ ಸಾಮಾನ್ಯ. ಹಲವಾರು ದಶಕಗಳ ಕಾಲ ಭಾರತೀಯ ಕುಟುಂಬಗಳು ಉಳಿತಾಯಕ್ಕೆ ಹೆಸರುವಾಸಿಯಾಗಿದ್ದವು. ಅವರ ಆದಾಯದಲ್ಲಿ ದೊಡ್ಡ ಪಾಲು ಉಳಿತಾಯಕ್ಕೆ ಸಂದಾಯವಾಗುತ್ತಿತ್ತು. ಆದರೆ ಉಳಿತಾಯದ ಅಭ್ಯಾಸ ಕಡಿಮೆ ಯಾಗುತ್ತಿದೆ ಎಂಬ ಮಾತಿದೆ.
ಇದನ್ನೂ ಓದಿ: Keshava Prasad B Column: ಇರಾನ್ ಯುದ್ಧದ ಪರಿಣಾಮಗಳನ್ನು ಭಾರತ ಹೇಗೆ ಎದುರಿಸುತ್ತಿದೆ ?
ದೇಶೀಯ ಉಳಿತಾಯದ ದರ ಕಡಿಮೆಯಾಗಿರುವುದನ್ನು ಅಂಕಿ ಅಂಶಗಳು ಬಿಂಬಿಸಿರುವುದೂ ಇದಕ್ಕೆ ಕಾರಣ. ಕಳೆದ 47 ವರ್ಷಗಳಲ್ಲಿಯೇ 2023-24ರಲ್ಲಿ ಉಳಿತಾಯದ ದರ ಕಡಿಮೆಯಾಗಿತ್ತು ಎಂಬ ವರದಿಗಳಿವೆ. ಇದೇ ಸಂದರ್ಭ ಜನರು ಹೆಚ್ಚೆಚ್ಚು ಸಾಲವನ್ನು ಪಡೆಯುತ್ತಿದ್ದಾರೆ. ಲೈಫ್ ಸ್ಟೈಲ್ ಮೇಲ್ದರ್ಜೆಗೇರಿದೆ. ಸಾಲದ ಮೇಲಿನ ಅವಲಂಬನೆಯೂ ಹೆಚ್ಚುತ್ತಿದೆ.
ಹಳೆಯ ಪೀಳಿಗೆಯವರು ಅಂಚೆ ಉಳಿತಾಯ ಯೋಜನೆಗಳು, ಬ್ಯಾಂಕ್‌ನ ನಿಶ್ಚಿತ ಠೇವಣಿಗಳು, ರಿಕರಿಂಗ್ ಡೆಪಾಸಿಟ್, ಚಿನ್ನ ಮತ್ತು ಭೂಮಿಯಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಈಗಿನ ಯುವ ಜನತೆ ಮ್ಯೂಚುವಲ್ ಫಂಡ್, ಮ್ಯೂಚುವಲ್ ಪಂಡ್ ಸಿಪ್, ಇಟಿಎಫ್, ಸ್ಟಾಕ್ಸ್, ಬಾಂಡ್, ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಗ್ರೊ, ಜೆರೊಧಾ ಮೊದಲಾದ ಅಪ್ಲಿಕೇಷ ಮೂಲಕ ಸುಲಭವಾಗಿ ಹೂಡಿಕೆ ಮಾಡಬಹುದು. ಡಿಜಿಟಲ್ ಟೂಲ್ಸ್‌ಗಳ ಬಗ್ಗೆ ಜನ ಒಲವನ್ನು ಹೊಂದಿ ದ್ದಾರೆ. ಅದು ಅನುಕೂಲಕರವೂ ಆಗಿದೆ.
ಹಾಗಾದರೆ ದೇಶೀಯ ಉಳಿತಾಯದ ಪ್ರಮಾಣ 47 ವರ್ಷದಲ್ಲಿಯೇ ಕೆಳಮಟ್ಟಕ್ಕೆ ಇಳಿದಿದ್ದೇಕೆ? ತಜ್ಞರ ಪ್ರಕಾರ ಖರ್ಚು ವೆಚ್ಚಗಳು ಜಾಸ್ತಿಯಾಗಿರುವುದು, ಸಾಲ ಸೋಲ ಮಾಡುವುದು ಇದಕ್ಕೆ ಕಾರಣ. ಕಡಿಮೆ ಉಳಿಸಿ, ಹೆಚ್ಚು ಸಾಲ ತೆಗೆದುಕೊಳ್ಳಿ ಎನ್ನುವುದು ಈಗಿನ ನೀತಿಯಾಗಿದೆ.
ಇದರಿಂದ ವೈಯಕ್ತಿಕ ಹಣಕಾಸು ಮೇಲೆ ತೀವ್ರ ಒತ್ತಡ ಸೃಷ್ಟಿಯಾಗುತ್ತಿದೆ. ಮಾರುಕಟ್ಟೆ ಸಂಶೋ ಧನಾ ವರದಿಗಳ ಪ್ರಕಾರ 44 ಪರ್ಸೆಂಟ್ ಭಾರತೀಯ ಕುಟುಂಬಗಳು ಈಗಲೂ ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ಸುರಕ್ಷತೆ ಮತ್ತು ಖಾತರಿಯ ಆದಾಯ ನೀಡುತ್ತದೆಯಾದರೂ, ಇಲ್ಲಿ ಬೆಳವಣಿಗೆ ಕಡಿಮೆ.
ಹಣದುಬ್ಬರದ ಎದುರು ಸಂಪತ್ತಿನ ಮೌಲ್ಯ ರಕ್ಷಣೆಗೆ ಕಷ್ಟಕರವಾಗುತ್ತದೆ. ಎಷ್ಟೋ ಸಲ ಹಣದುಬ್ಬರ ಕಳೆದಾಗ ಸಿಗುವ ಮೊತ್ತ ಅತ್ಯಲ್ಪ. ಹೀಗಾಗಿ ಖರೀದಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಹೀಗಾಗಿಯೇ ಮಧ್ಯಮ ವರ್ಗದ ಜನರು ಇತ್ತೀಚಿನ ವರ್ಷಗಳಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ.
2022-23ರಲ್ಲಿ ದೇಶೀಯ ಉಳಿತಾಯದ ಪ್ರಮಾಣವು ಜಿಡಿಪಿಯ 5.1 ಪರ್ಸೆಂಟ್‌ಗೆ ಇಳಿದಿತ್ತು. ಕುಟುಂಬಗಳು ಬ್ಯಾಂಕ್ ಠೇವಣಿಗಿಂತ ರಿಯಲ್ ಎಸ್ಟೇಟ್, ಚಿನ್ನ, ಮ್ಯೂಚುವಲ್ ಫಂಡ್, ಸ್ಟಾಕ್ಸ್ ಗಳಲ್ಲಿ ಹೂಡಿಕೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. 2022-25ರ ಅವಧಿಯಲ್ಲಿ ಒಟ್ಟು ದೇಶೀಯ ಹಣಕಾಸು ಉಳಿತಾಯವು 25 ಲಕ್ಷ ಕೋಟಿ ರುಪಾಯಿಗಳಿಂದ 35 ಲಕ್ಷ ಕೋಟಿ ರುಪಾಯಿ ಗಳಿಗೆ ಏರಿಕೆಯಾಗಿತ್ತು.
ಸ್ವಾರಸ್ಯವೇನೆಂದರೆ, ಭಾರತದ ಒಟ್ಟಾರೆ ದೇಶೀಯ ಉಳಿತಾಯದ ಪ್ರಮಾಣ 29.2 ಪರ್ಸೆಂಟ್ ಅಮೆರಿಕ (18.1ಪರ್ಸೆಂಟ್), ಜರ್ಮನಿಗಿಂತ (27 ಪರ್ಸೆಂಟ್) ಹೆಚ್ಚು. ಜನ ಯಾವ ಕಾರಣಕ್ಕಾಗಿ ಉಳಿತಾಯ ಮಾಡುತ್ತಾರೆ? ತುರ್ತುಪರಿಸ್ಥಿತಿಗಳನ್ನು ನಿಭಾಯಿಸಲು, ಮಕ್ಕಳ ಭವಿಷ್ಯ, ಶಿಕ್ಷಣ, ಮದುವೆ, ಆದಾಯ ಸೃಷ್ಟಿ, ಟ್ರಾವೆಲ್, ಲೈಫ್ ಸ್ಟೈಲ್, ನಿವೃತ್ತಿಯ ಪ್ಲಾನಿಂಗ್ ಸಲುವಾಗಿ ಉಳಿತಾಯ ಮಾಡುತ್ತಾರೆ.
ಹೀಗಿದ್ದರೂ, ಭಾರತೀಯರಲ್ಲಿ 70 ಪರ್ಸೆಂಟ್ ಮಂದಿ ಸರಿಯಾದ ಆರೋಗ್ಯ ವಿಮೆ, ಜೀವ ವಿಮೆ ಯನ್ನು ಹೊಂದಿಲ್ಲ. ಇದರಿಂದಾಗಿ ಅವರ ಆಸ್ಪತ್ರೆ, ವೈದ್ಯಕೀಯ ಖರ್ಚು ವೆಚ್ಚಗಳು ಹೆಚ್ಚುತ್ತಿವೆ. ಈಗಿನ ಜಮಾನದ ಭಾರತೀಯರು ಹಳೆಯ ಮತ್ತು ಹೊಸ ತಂತ್ರಜ್ಞಾನ ಆಧಾರಿತ ಉಳಿತಾಯದ ಮಿಶ್ರಣವನ್ನು ಅನುಸರಿಸುತ್ತಿದ್ದಾರೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಎಂಬ ವಿಧಾನ ಇದೆ. ಪ್ರತಿ ತಿಂಗಳೂ 500-1000 ರುಪಾಯಿಗಳಿಂದಲೂ ಇಲ್ಲಿ ಹೂಡಿಕೆ ಶುರು ಮಾಡಬಹುದು. ಇದು ಕಾಲಾಂತರದಲ್ಲಿ ಕಂಪೌಂಡಿಂಗ್ ಇಂಟರೆ (ಚಕ್ರಬಡ್ಡಿ) ಸೇರಿಕೊಂಡು ದೊಡ್ಡ ಮೊತ್ತವಾಗುತ್ತದೆ.
ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಿಂದ ಜನರಲ್ಲಿ ಪರಸ್ಪರ ಹೋಲಿಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಲೈಫ್ ಸ್ಟೈಲ್ ಹಣದುಬ್ಬರ ಹೆಚ್ಚಲು ಕಾರಣವಾಗಿದೆ. ಬರ್ತ್‌ಡೇಯನ್ನು ಅದ್ದೂರಿಯಾಗಿ ಆಚರಿಸುವುದು, ಬ್ರ್ಯಾಂಡೆಡ್ ಬಟ್ಟೆಬರೆಗಳನ್ನು ಧರಿಸುವುದು, ಮಕ್ಕಳನ್ನು ಅದ್ಭುತವಾಗಿ ಬೆಳೆಸುತ್ತಿದ್ದೇವೆ ಎಂಬುದನ್ನು ಜಾಲತಾಣಗಳಲ್ಲಿ ವೈಭವೀಕರಿಸಿ ತೋರಿಸುವುದನ್ನು ಕಾಣಬಹುದು.
ಇದರಿಂದ ಪರಸ್ಪರ ಹೋಲಿಕೆ ಮಾಡುವ ಚಾಳಿ ಉಂಟಾಗುತ್ತದೆ. ಇದು ಉಳಿತಾಯವನ್ನು ಮತ್ತಷ್ಟು ಕರಗಿಸುತ್ತದೆ. ಲಕ್ಷಗಟ್ಟಲೆ ಸಾಲ ಮಾಡುವುದರಿಂದ ಅದೇ ಚಿಂತೆಯಾಗಿ ಬಿಡುತ್ತದೆ. ಜೀವನದಲ್ಲಿ ಏನೂ ಮಾಡಿಲ್ಲ ಎಂಬ ಕೀಳರಿಮೆ ಕಾಡುತ್ತದೆ. ರಾತ್ರಿ ನಿದ್ದೆ ಬರುವುದಿಲ್ಲ. ಖಿನ್ನತೆ ಮನೆ ಮಾಡುತ್ತದೆ.
ಬೈ ನೌ, ಪೇ ಲೇಟರ್, ಝೀರೊ ಇಂಟರೆ ಇಎಂಐ ಮಾದರಿಯ ಸ್ಕೀಮ್;ಗಳು ಜನರನ್ನು ಹೆಚ್ಚೆಚ್ಚು ಸಾಲಗಾರರನ್ನಾಗಿಸುತ್ತವೆ. ಆದಾಯ ಮತ್ತು ಖರ್ಚುಗಳ ನಡುವೆ ಅಂತರ ಹೆಚ್ಚುವುದರಿಂದಲೂ ಸಾಲ ಖರೀದಿಸುವವರ ಸಂಖ್ಯೆ ಬೆಳೆಯುತ್ತದೆ.
ಹಲವಾರು ಮಂದಿ ಗೃಹ ಸಾಲ ಪಡೆಯುತ್ತಾರೆ. ಆದರೆ ಅವರ ಲೈಫ್ ಸ್ಟೈಲ್ ಖರ್ಚು ಗಗನಕ್ಕೇರಿ ರುವುದರಿಂದ ಪ್ರತಿ ವರ್ಷ ಒಂದು ಹೆಚ್ಚುವರಿ ಇಎಂಐ ಕಟ್ಟಲೂ ಆವರಿಂದ ಸಾಧ್ಯ ವಾಗುವುದಿಲ್ಲ. ಇದರ ಪರಿಣಾಮ ನಿರಂತರವಾಗಿ ಸಾಲದ ಕೂಪದಲ್ಲಿ ಬಿದ್ದು ನರಳುತ್ತಾರೆ. ದೀರ್ಘಾವಧಿಯ ಸಾಲದಿಂದ ಬ್ಯಾಂಕಿನ ಉದ್ಧಾರವಾದೀತೇ ಹೊರತು, ಸಾಲಗಾರನದ್ದಲ್ಲ ಎಂಬುದು ವಾಸ್ತವ.
ಆದರಿಂದ ದೀರ್ಘಾವಧಿಯ ಸಾಲವನ್ನು ಅವಧಿಗೆ ಮುನ್ನ ತೀರಿಸಿ ಸಾಲ ಮುಕ್ತರಾಗಲು ಮರೆಯ ಬಾರದು. ಉದಾಹರಣೆಗೆ 20 ಲಕ್ಷ ರುಪಾಯಿಗಳ ಸಾಲವನ್ನು 8.5 ಪರ್ಸೆಂಟ್ ಬಡ್ಡಿ ದರದಲ್ಲಿ 15 ವರ್ಷಗಳ ಅವಧಿಗೆ ಪಡೆದಿದ್ದೀರಿ ಎಂದು ಇಟ್ಟುಕೊಳ್ಳಿ. ಈ ಅವಧಿಯಲ್ಲಿ ನೀವು ಬಡ್ಡಿಯಾಗಿ 15.45 ಲಕ್ಷ ರುಪಾಯಿ ಕಟ್ಟಿರುತ್ತೀರಿ. ಅಸಲು ಸೇರಿ ಒಟ್ಟು ಮೊತ್ತ 35.45 ಲಕ್ಷ ರುಪಾಯಿಗಳಾಗುತ್ತದೆ.
ಒಂದು ವೇಳೆ ಇದನ್ನು 25 ವರ್ಷಗಳಲ್ಲಿ ಕಟ್ಟಿದರೆ, ಬಡ್ಡಿಯಾಗಿ 23.31 ಲಕ್ಷ ರುಪಾಯಿಗಳನ್ನು ಬ್ಯಾಂಕಿಗೆ ಪಾವತಿಸಿರುತ್ತೀರಿ. ಜತೆಗೆ ಅಸಲು ಸೇರಿದಾಗ ಒಟ್ಟು 48.31 ಲಕ್ಷ ರುಪಾಯಿ ಆಗುತ್ತದೆ. ಇಂಥ ವಿಚಾರಗಳಿಗೆ ಸಂಬಂಧಿಸಿ ತಿಳುವಳಿಕೆ ಗಳಿಸುವುದು ಅವಶ್ಯಕ. ಇಲ್ಲದಿದ್ದರೆ ಹಣಕಾಸು ಸಲಹೆಗಾರರ ನೆರವು ಪಡೆಯಲು ಹಿಂಜರಿಯಬಾರದು.
ಹಾಗಾದರೆ ಖರ್ಚು ವೆಚ್ಚಗಳು ಮತ್ತು ಉಳಿತಾಯದ ನಡುವೆ ಸಮತೋಲನ ಕಂಡುಕೊಳ್ಳುವುದು ಹೇಗೆ? ಮೊದಲು ನಮ್ಮ ಆದಾಯ ಎಷ್ಟು ಮತ್ತು ಅದರೊಳಗೆಯೇ ಮಿತವ್ಯಯ, ಹೂಡಿಕೆಯನ್ನು ಮಾಡಬೇಕು ಎಂಬ ವಿವೇಕವನ್ನು ಕುಟುಂಬದ ಎಲ್ಲ ಸದಸ್ಯರೂ ಮಾಡಿಕೊಳ್ಳಬೇಕು. ದೇಶ-ರಾಜ್ಯಗಳಿಗೆ ಹೇಗೆ ಬಜೆಟ್ ಅಗತ್ಯವೋ, ಕುಟುಂಬಕ್ಕೂ ಆಯ-ವ್ಯಯದ ಲೆಕ್ಕಾಚಾರ ಇರಲೇಬೇಕು.
ಬಜೆಟ್‌ಗೆ ಒಂದು ಉದ್ದೇಶವಿರುತ್ತದೆ. ನಿಮ್ಮ ಅಗತ್ಯಗಳು, ಬಯಕೆಗಳು, ಉಳಿತಾಯ ಮತ್ತು ಹೂಡಿಕೆಗಳನ್ನು ವರ್ಗೀಕರಿಸಿ. ಉಳಿತಾಯ ಮತ್ತು ಇನ್ವೆಸ್ಟ್ಮೆಂಟ್ ಬಳಿಕ ಮಿಕ್ಕಿದ್ದನ್ನು ಮಾತ್ರ ಖರ್ಚು ಮಾಡಿ. ಆಟೊಮ್ಯಾಟಿಕ್ ಸೇವಿಂಗ್ಸ್ ಯಾವತ್ತಿಗೂ ಪರಿಣಾಮಕಾರಿ. ಎಸ್‌ಐಪಿ, ಪಿಎಫ್, ಎಮರ್ಜೆನ್ಸಿ ಫಂಡ್‌ಗಳನ್ನು ಯಾವ ಕಾರಣಕ್ಕೂ ಕೈಬಿಡದಿರಿ.
ಉಳಿತಾಯದ ಅಭ್ಯಾಸವು ತನ್ನಿಂತಾನೆ ಆದಾಗ ಶಿಸ್ತು ಉಂಟಾಗುತ್ತದೆ. ನಿಮ್ಮ ಫೈನಾನ್ಸ್ ನಿಮ್ಮ ವೈಯಕ್ತಿಕ. ಸೋಶಿಯಲ್ ಮೀಡಿಯಾಗಳು ಲೈಫ್ ಸ್ಟೈಲ್ ಗಳನ್ನು ತೋರಿಸುತ್ತವೆ. ಆದರೆ ಅದು ವಾಸ್ತವವಲ್ಲ. ನಿಮ್ಮ ಬೆಳವಣಿಗೆ ಬಗ್ಗೆ ಫೊಕಸ್ ಕೊಡಿ. ಬೇರೆಯವರ ತೋರಿಕೆಯ ಆಡಂಬರಕ್ಕಲ್ಲ. ಹೂಡಿಕೆಯೇ ಇಲ್ಲದ ಉಳಿತಾಯ ಗುರಿ ಇಲ್ಲದ ಓಟದಂತೆ. ಜ್ಞಾನ ಮತ್ತು ಸಮಯವನ್ನು ಕೊಡುವು ದರಿಂದ ಹಣವು ಬೆಳೆಯುತ್ತದೆ. ನಿಮ್ಮ ಸಾಲವು ಉತ್ಪಾದಕ ಚಟುವಟಿಕೆಗೆ ಬಳಕೆಯಾಗುತ್ತಿದ್ದರೆ ಮಾತ್ರ ಸಂಪತ್ತಿಗೆ ಸಮಾನ. ಇಲ್ಲದಿದ್ದರೆ ಭವಿಷ್ಯದ ನಿಮ್ಮ ಆದಾಯವನ್ನು ಅದು ಕಸಿದುಕೊಳ್ಳು ತ್ತದೆ ಎಂಬುದನ್ನು ಮರೆಯುವಂತಿಲ್ಲ.
ನಾವೀಗ ಬಾಳುತ್ತಿರುವ ಕಾಲದ ವಾಸ್ತವ ಏನೆಂದರೆ, ಇದೊಂದು ಸ್ಪೆಂಡಿಂಗ್ ಇಕಾನಮಿ. ಕೊಳ್ಳು ಬಾಕ ಸಂಸ್ಕೃತಿಯನ್ನು ವ್ಯಾಪಕವಾಗಿ ಉತ್ತೇಜಿಸಲಾಗುತ್ತದೆ. ಬ್ರ್ಯಾಂಡ್ಗಳು ವಾಸ್ತವವಾಗಿ ದುಬಾರಿ ಯಾಗಬಲ್ಲ ಕನಸುಗಳನ್ನುಭರ್ಜರಿಯಾಗಿ ಮಾರಾಟ ಮಾಡುತ್ತವೆ. ಕ್ರೆಡಿಟ್ ಕಾರ್ಡ್ʼಗಳು ಇಂಥ ಕನಸುಗಳನ್ನು ಆಕರ್ಷಕಗೊಳಿಸುತ್ತವೆ.
ಖರೀದಿಯ ಲಯದಲ್ಲಿ ಕಳೆದುಹೋಗುವುದು ಸುಲಭ. ಆದರೆ-ಸಾಲವನು ಕೊಂಬಾಗ ಹಾಲೋ ಗರವನು ಉಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಎಂಬ ಸರ್ವಜ್ಞನ ವಚನವನ್ನು ಮರೆಯುವವರೇ ಹೆಚ್ಚು. ಮಿಡ್ಲ್ ಕ್ಲಾಸ್ ಜನರ ಮನಸ್ಥಿತಿ ಕೂಡ ಪ್ರಭಾವ ಬೀರುತ್ತದೆ.
ಉದಾಹರಣೆಗೆ ಮಾಸಿಕ ವೇತನ ಪಡೆಯುವವರ ಚಿಂತನೆ ಗಮನಿಸಿ. ಸ್ಯಾಲರಿ ಬರುತ್ತದೆ. ಅವರಿಗೆ ರಿಲೀ- ಸಿಗುತ್ತದೆ. ಇಎಂಐ ಮತ್ತು ಲೈಫ್ ಸ್ಟೈಲ್ ಖರ್ಚುಗಳು ಬೆನ್ನ ಇರುತ್ತವೆ. ಏನಾದರು ಉಳಿದರೆ ಮಾತ್ರ ಉಳಿತಾಯ. ಇಲ್ಲದಿದ್ದರೆ ಇಲ್ಲ. ಸೇವಿಂಗ್ಸ್ ನಿರ್ಧಾರವನ್ನು ಮುಂದೂಡಿಕೆ ಮಾಡುತ್ತಾ ಹೋಗುತ್ತಾರೆ. ಮತ್ತೆ ಸಂಬಳ ಬಂದಾಗ ನಿರಾಳರಾಗುತ್ತಾರೆ.
ಇಲ್ಲಿಗೆ ಒಂದು ಸರ್ಕಲ್ ಮುಗಿದಿರುತ್ತದೆ. ಅದೇ ಪುನರಾವರ್ತನೆಯಾಗುತ್ತದೆ. ತಿಂಗಳುಗಳು-ವರ್ಷಗಳು ಹೀಗೆ ಕಳೆದುಹೋಗುತ್ತದೆ. ಈ ಸುಳಿಯಿಂದ ಹೊರಬರಬೇಕಿದ್ದರೆ ಏನು ಮಾಡಬೇಕು?ಉಳಿತಾಯವನ್ನು ಮೊದಲು ಮಾಡಬೇಕು. ಬಳಿಕ ಉಳಿದದ್ದನ್ನು ಮಾತ್ರ ಖರ್ಚು ಮಾಡಬೇಕು. ಉಳಿಸಿದ್ದನ್ನು ಹೂಡಿಕೆ ಮಾಡಬೇಕು. ಹಣದ ಬಗ್ಗೆ ಭಯ ಬೇಡ, ಆದರೆ ಕಲಿಯಲು ಮರೆಯದಿರಿ. ಹಣಕಾಸು ಸ್ವಾತಂತ್ರ್ಯ ಗಳಿಸಲು ಹೆಜ್ಜೆಗಳನ್ನಿಡಿ. ಅನ್ಯ ಮಾರ್ಗ ಇಲ್ಲಿಲ್ಲ.