ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಬಾಡಿಗೆಯ ಗ್ಯಾರೇಜಿನಲ್ಲಿ ಆರಂಭವಾದ ಏಶಿಯನ್ ಪೇಂಟ್ಸ್ ಸಂಸ್ಥೆ ಹತ್ತು ವರ್ಷದ ಅವಧಿಯಲ್ಲಿ ವಾರ್ಷಿಕ 23 ಕೋಟಿ ರುಪಾಯಿಯ ವಹಿವಾಟು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಅಷ್ಟೇ ಅಲ್ಲ, ಆರಂಭಗೊಂಡ 25 ವರ್ಷದ ಅವಧಿಯಲ್ಲಿ ದೇಶದ ಪೇಂಟ್ ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನಕ್ಕೇರಿತು.

ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ವಿದೇಶವಾಸಿ

dhyapaa@gmail.com

ಎಲ್ಲಿಂದ ಆರಂಭಿಸೋಣ? ನಿಜವಾಗಿ ಕತೆ ಆರಂಭವಾಗುವುದು, ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಐದು ವರ್ಷಕ್ಕೂ ಮೊದಲು. ಆದರೂ, ಪೀಠಿಕೆಯಾಗಿ ನಾಲ್ಕು ದಶಕ ಹಿಂದಕ್ಕೆ ಹೋಗಿ, ಅಲ್ಲಿಂದ ಆರಂಭಿಸೋಣ. ಸ್ವಾತಂತ್ರ್ಯಕ್ಕೂ ಮೊದಲು ಭಾರತದಲ್ಲಿ ಗೋಡೆಗೆ ಬಳಿಯುವ ಬಣ್ಣ ತಯಾರಿಸುವ ಕಂಪನಿಗಳೇ ಇರಲಿಲ್ಲ. ಬಣ್ಣಗಳು ಅಮೆರಿಕ, ಬ್ರಿಟನ್ ಮತ್ತು ಈಜಿಪ್ಟ್‌ನಿಂದ ಆಮದಾಗುತ್ತಿದ್ದವು.

1902ರಲ್ಲಿ ಪಶ್ಚಿಮ ಬಂಗಾಳದ ಹೌರಾದಲ್ಲಿ ಬಣ್ಣ ತಯಾರಿಸುವ ಮೊದಲ ಸಂಸ್ಥೆ ಆರಂಭ ವಾಯಿತು. ಶಾಲಿಮಾರ್ ಪೇಂಟ್ಸ್ ಹೆಸರಿನ ಕಂಪನಿ ಆರಂಭಿಸಿದ್ದು ಮಾತ್ರ ಬ್ರಿಟಿಷ್ ಪ್ರಜೆಗಳಾದ ಎ.ಎನ್. ರೈಟ್ ಮತ್ತು ಎ.ಎನ್. ಟರ್ನರ್. ಕಲ್ಕತ್ತಾದ ಪ್ರತಿಷ್ಠಿತ ಹೌರಾ ಬ್ರಿಜ್ ನ ಲೋಹದಿಂದ ಹಿಡಿದು ದೆಹಲಿಯ ಸಂಸತ್ ಭವನದ ಗೋಡೆಯವರೆಗೆ ಶಾಲಿಮಾರ್ ಪೇಂಟ್ ಬಳಸಲಾಗುತ್ತಿತ್ತು. ಕತೆ ತಿರುವು ಪಡೆದದ್ದು (ಬಣ್ಣ ಬದಲಾದದ್ದು!) 1942ರಲ್ಲಿ.

ಆಗ ಎರಡನೆಯ ವಿಶ್ವ ಮಹಾಯುದ್ಧ ನಡೆಯುತ್ತಿದುದರಿಂದ ಬಹುತೇಕ ವಸ್ತುಗಳು ವಿದೇಶದಿಂದ ಭಾರತಕ್ಕೆ ಬರುವುದು ನಿಂತಿತ್ತು. ಜತೆಗೆ, ಗಾಂಧೀಜಿ ಆರಂಭಿಸಿದ ಕ್ವಿಟ್ ಇಂಡಿಯಾ ಚಳವಳಿಯೂ ತೀವ್ರವಾದದ್ದರಿಂದ, ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ವ್ಯಾಪಾರ ದುಸ್ತರವಾಯಿತು, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜನರನ್ನು ಪ್ರೇರೇಪಿಸಲಾಯಿತು ಎನ್ನುವುದೆಲ್ಲ ಎಲ್ಲರಿಗೂ ತಿಳಿದಿರುವ ಕತೆಯೇ.

ಇದನ್ನೂ ಓದಿ: Kiran Upadhyay Column: ಅವಳ ಕುರಿತು ಆತ ಆಡಿದ ಓಪನ್‌ ಮಾತುಗಳು...

ಆ ಸಂದರ್ಭವನ್ನು ಹಲವರು ಸರಿಯಾಗಿ ಬಳಸಿಕೊಂಡರು. ಬಿಸ್ಕತ್ತು ತಯಾರಿಸುವ ಪಾರ್ಲೆ ಕಂಪನಿಯ ವಿಷಯವನ್ನು ಹಿಂದೆ ಇದೇ ಅಂಕಣದಲ್ಲಿ ತಿಳಿಸಿದ್ದೆ. ಆ ಸಂದರ್ಭದ ಪ್ರಯೋಜನ ಪಡೆದವರಲ್ಲಿ ಚೋಕ್ಸಿ ಕೂಡ ಒಬ್ಬರು.

ಚೋಕ್ಸಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ತಲೆಮರೆಸಿಕೊಳ್ಳುವುದಕ್ಕಾಗಿ ದೇಶ ಬಿಟ್ಟು ಓಡಿ ಹೋದ ಮೇಹುಲ್ ಚೋಕ್ಸಿ. ಆದರೆ ಇವರು ಆ ಚೋಕ್ಸಿ ಅಲ್ಲ. ಇವರು ಇಂದು ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ‘ಏಶಿಯನ್ ಪೇಂಟ್ಸ್’ ಸಂಸ್ಥೆಯ ಉಗಮಕ್ಕೆ ಕಾರಣರಾದ ಚಂಪಕ್‌ಲಾಲ್ ಚೋಕ್ಸಿ. ಏಶಿಯನ್ ಪೇಂಟ್ಸ್‌ನ ಹುಟ್ಟು, ಬೆಳವಣಿಗೆ ಎಲ್ಲವನ್ನೂ ನೋಡಿದರೆ ಅದು ಯಾವ ಸಾಹಸಗಾಥೆಗೂ ಕಮ್ಮಿ ಎಂದೆನಿಸದು.

ಏಶಿಯನ್ ಪೇಂಟ್ಸ್ ಎಂಬ ಬಣ್ಣದ ಕಂಪನಿ ಆರಂಭಿಸುವಾಗ ಚಂಪಕ್‌ಲಾಲ್ ಚೋಕ್ಸಿ ಅವರಿಗೆ ಇಪ್ಪತ್ತಾರು ವರ್ಷ. ಚಂಪಕ್‌ಲಾಲ್ ತಮ್ಮ ಇತರ ಮೂವರು ಸ್ನೇಹಿತರಾದ ಚಮನ್‌ಲಾಲ್ ಚೋಕ್ಸಿ, ಸೂರ್ಯಕಾಂತ್ ದಾನಿ ಮತ್ತು ಅರವಿಂದ್ ವಕೀಲ್ ಅವರೊಂದಿಗೆ ಸೇರಿ ಪೇಂಟ್ ತಯಾರಿಸುವ ಕಂಪನಿ ಪ್ರಾರಂಭಿಸಲು ನಿರ್ಧರಿಸಿದರು.

Asian Paints R

ಮೂವರು ಸ್ನೇಹಿತರಲ್ಲಿ ಒಬ್ಬರು ಮನೆಗೆ, ಇನ್ನೊಬ್ಬರು ವಾಹನಗಳಿಗೆ, ಮತ್ತೊಬ್ಬರು ಸೈಕಲ್‌ಗಳಿಗೆ ಬಣ್ಣ ಹಚ್ಚುವುದರಲ್ಲಿ ನಿಷ್ಣಾತರಾಗಿದ್ದರು. ಜೈನ ಸಮುದಾಯದ ನಾಲ್ವರೂ ಸೇರಿ ಸಂಸ್ಥೆಯನ್ನು ಮೊದಲು ಪ್ರಾರಂ ಭಿಸಿದ್ದು ಒಂದು ಪುಟ್ಟ ಗ್ಯಾರೇಜಿನಲ್ಲಿ. ಅದೇನು ಪವಾಡವೋ? ಕಾಕತಾಳೀಯ ವೋ ಗೊತ್ತಿಲ್ಲ, ಗ್ಯಾರೇಜ್‌ನಲ್ಲಿ ಆರಂಭಗೊಂಡ ಬಹುತೇಕ ಸಂಸ್ಥೆಗಳು ಹೆಸರು ಮಾಡುತ್ತವೆ.

ಅಮೆಝಾನ್, ಗೂಗಲ್, ಮೈಕ್ರೊಸಾಫ್ಟ್, ಡಿಸ್ನಿ ಲ್ಯಾಂಡ್‌ನ ವಾಲ್ಟ್ ಡಿಸ್ನಿ ಮೊದಲಾದ ಕಂಪನಿ ಗಳಿಗೆಲ್ಲ ಗ್ಯಾರೇಜ್‌ ಉಗಮ ಸ್ಥಾನ. ಇರಲಿ, ಏಶಿಯನ್ ಪೇಂಟ್ಸ್ ಆರಂಭವಾದದ್ದು ಮುಂಬೈನ ಗಿರ್ಗಾವ್ ಪ್ರದೇಶದ ಗಾಯವಾಡಿಯಲ್ಲಿರುವ ಒಂದು ಪುಟ್ಟ ಗ್ಯಾರೇಜಿನಲ್ಲಿ. ಆಗ ಅದಕ್ಕೆ ತಿಂಗಳಿಗೆ 75 ರುಪಾಯಿ ಬಾಡಿಗೆ. ಕಂಪನಿಗೆ ಹೆಸರಿಡುವುದು ಏನೆಂದು ಹೊಳೆಯದಿದ್ದಾಗ ನಾಲ್ವರೂ ಸೇರಿ, ಕಣ್ಣು ಮುಚ್ಚಿ ಟೆಲಿಫೋನ್ ಡಿರೆಕ್ಟರಿಯ ಒಂದು ಪುಟ ತೆರೆಯುವುದು, ಆ ಪುಟದಲ್ಲಿರುವ ಮೊದಲ ಹೆಸರನ್ನೇ ತಮ್ಮ ಕಂಪನಿಗೂ ಇಡುವುದೆಂದು ನಿರ್ಧರಿಸಿದರು.

ಹಾಗೆ ತೆರೆದಾಗ ಮೊದಲು ಕಂಡದ್ದು ‘ಏಶಿಯನ್’ ಆದದ್ದರಿಂದ, ಸಂಸ್ಥೆಗೆ ಏಶಿಯನ್ ಪೇಂಟ್ಸ್ ಎಂದು ನಾಮಕರಣ ಮಾಡಿದರು. ಆರಂಭದಲ್ಲಿ ವ್ಯಾಪಾರ ಸುಲಭವಾಗಿರಲಿಲ್ಲ. ಶಾಲಿಮಾರ್ ಮತ್ತು ಇತರ ಕಂಪನಿಗಳು ತಮ್ಮ ವಿತರಕರಿಗೆ ಹೆಚ್ಚಿನ ಲಾಭಾಂಶ ನೀಡುತ್ತಿದ್ದುದರ ಜತೆಗೆ, ಹೊಸ ಕಂಪನಿಯ ಮೇಲೆ ಭರವಸೆಯೂ ಮೂಡುತ್ತಿರಲಿಲ್ಲವಾದ್ದರಿಂದ ಸ್ವಾಭಾವಿಕವಾಗಿಯೇ ವಿತರಕರು ಹಳೆಯ ಸರಕನ್ನೇ ಹೆಚ್ಚು ಪ್ರೋತ್ಸಾಹಿಸುತ್ತಿದ್ದರು.

ಅದನ್ನು ಅರಿತ ಚಂಪಕ್‌ಲಾಲ್ ಹಳ್ಳಿಗಳಿಗೆ ಹೋಗಿ, ದೊಡ್ಡ ಕಂಪನಿಯ ಸಣ್ಣ ವಿತರಕರನ್ನು ಸಂಪರ್ಕಿಸಿದರು. ಕೆಲವು ಕಡೆ ಹೊಸ ವಿತರಕರನ್ನು ನಿಯೋಜಿಸಿದರು. ಮಧ್ಯವರ್ತಿಗಳಿಲ್ಲದೆ, ಕಂಪನಿಯೊಂದಿಗೆ ನೇರ ಸಂಪರ್ಕ ಏರ್ಪಟ್ಟಿದ್ದು ಅವರಿಗೂ ಖುಷಿಯ ವಿಚಾರವಾಗಿತ್ತು. ಅದರೊಂದಿಗೆ ಚಂಪಕ್‌ಲಾಲ್ ಇನ್ನೂ ಒಂದು ಉಡುಗೊರೆ ಕೊಟ್ಟಿದ್ದರು.

ಹಳ್ಳಿಗಳಲ್ಲಿ ತಮ್ಮ ಬಣ್ಣ ಮಾರಲು ನಿರ್ಣಯಿಸಿ ಚಂಪಕ್‌ಲಾಲ್ ಮೊದಲು ಹೋದದ್ದು ಸತಾರಾ ಪ್ರದೇಶದ ಸಾಂಗ್ಲಿಗೆ. ಭಾರತೀಯರ ಭಾವನೆಗೆ ಬಿರುಸಾದ ಬಾಂಧವ್ಯ ಬೆಸೆಯುವ ವಿಷಯಗಳಲ್ಲಿ ಹಬ್ಬ ಹರಿದಿನಗಳೂ ಒಂದು. ಆ ದಿನಗಳಲ್ಲಿ, ಸಾಂಗ್ಲಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿ ಯಾಗಿ ಆಚರಿಸಲಾಗುತ್ತಿತ್ತು. ಅದರ ಪ್ರಯುಕ್ತ ರೈತರು ಗೋವುಗಳ, ವಿಶೇಷವಾಗಿ ಎತ್ತುಗಳ ಕೋಡಿಗೆ ಬಣ್ಣ ಹಚ್ಚುತ್ತಿದ್ದರು (ಆ ಪ್ರದೇಶದಲ್ಲಿ ಅದು ಇಂದಿಗೂ ಚಾಲ್ತಿಯಲ್ಲಿದೆ). ಅದನ್ನು ನೋಡಿದ ಚಂಪಕ್ ಲಾಲ್ ಕೋಡಿಗೆ ಹಚ್ಚಲು ಬೇಕಾಗುವಷ್ಟು ಬಣ್ಣವನ್ನು ಉಚಿತವಾಗಿ ನೀಡಿದರು.

ಇದನ್ನು ದೇಶದ ಇತರ ಕಡೆಗಳಿಗೂ ವಿಸ್ತರಿಸಿದರು. ಅಂತೆಯೇ, ದಕ್ಷಿಣ ಭಾರತದಲ್ಲಿ ಜನರು ತಮ್ಮ ಮನೆಯ ಹೊಸ್ತಿಲು, ಪ್ರಧಾನ ಬಾಗಿಲಿನ ಚೌಕಟ್ಟುಗಳಿಗೂ ಬಣ್ಣಗಳಿಂದ ಶೃಂಗರಿಸುತ್ತಿದ್ದುದನ್ನು ಕಂಡು, ಅವರಿಗೂ ಉಚಿತವಾಗಿ ಬಣ್ಣ ಹಂಚಿದರು. ಇದರಿಂದ ಏಶಿಯನ್ ಪೇಂಟ್ಸ್ ಜನರಿಗೆ ಬೇಗ ಆಪ್ತವಾಯಿತು. ಜನರಿಂದಲೇ ಬೇಡಿಕೆ ಬರಲು ಆರಂಭವಾದ್ದರಿಂದ ಮೊದಲು ಏಶಿಯನ್ ಪೇಂಟ್ಸ್ ಅನ್ನು ತಿರಸ್ಕರಿಸಿದ್ದ ವಿತರಕರು ಅವರಾಗಿಯೇ ಕೇಳಿಕೊಂಡು ಬರುವಂತಾಯಿತು. ಇಂದು ದೇಶ ದಾದ್ಯಂತ ಏಶಿಯನ್ ಪೇಂಟ್ಸ್‌ನ ಸುಮಾರು ಎಪ್ಪತ್ತು ಸಾವಿರ ವಿತರಕರಿದ್ದಾರೆ!

ಚಂಪಕ್‌ಲಾಲ್ ಮಹಾ ಮೇಧಾವಿ. ಮಾರುಕಟ್ಟೆ ಯನ್ನು ಚೆನ್ನಾಗಿ ಅಭ್ಯಾಸ ಮಾಡುವ ಬುದ್ಧಿವಂತ. ಆ ಕಾಲದಲ್ಲಿ ಎರಡು ಬಗೆಯ ಬಣ್ಣ ತಯಾರಾಗುತ್ತಿತ್ತು. ಒಂದು, ಕಾರ್ಖಾನೆಗಳಿಗೆ ಬಳಸುವ ಕಮ್ಮಿ ದರದ ಬಣ್ಣ. ಇನ್ನೊಂದು ಮನೆಗಳು, ವಾಣಿಜ್ಯ ಮಳಿಗೆಗಳಿಗೆ ಬಳಸುವ ಉತ್ತಮ ಗುಣಮಟ್ಟದ ಬಣ್ಣ. ಚಂಪಕ್‌ಲಾಲ್‌ಗೆ ಮೊದಲನೆಯದರ ಕಡೆ ಆಸಕ್ತಿ ಇರಲಿಲ್ಲ.

ಮೊದಲಿಂದಲೂ ಗ್ರಾಹಕರ ಬೇಡಿಕೆಯ ಉತ್ಪನ್ನದ ಕಡೆಗೇ ಲಕ್ಷ್ಯ ಹರಿಸಿದರು. ಹೆಚ್ಚು ಬಳಕೆಯಾಗು ತ್ತಿದ್ದುದು, ಖರ್ಚಾಗುತ್ತಿದ್ದುದು ಅದೇ ಆದ್ದರಿಂದ, ಅದರಲ್ಲಿಯೇ ಹಣ ಹೆಚ್ಚು ಎಂದು ಅವರು ಅರಿತಿದ್ದರು. ಆದರೆ, ಆಗ ಎರಡು ಬಗೆಯ ಪೇಂಟ್ ತಯಾರಾಗುತ್ತಿತ್ತು.

ಒಂದು ಡ್ರೈ ಡಿಸ್ಟೆಂಪರ್, ಇನ್ನೊಂದು ಪ್ಲಾಸ್ಟಿಕ್ ಎಮಲ್ಶನ್. ಡಿಸ್ಟೆಂಪರ್‌ನ ಬೆಲೆ ಕಡಿಮೆ. ಆದರೆ ಬಣ್ಣ ಕಿತ್ತು ಬರುವುದು, ಬಟ್ಟೆಗೆ ಅಂಟಿಕೊಳ್ಳುವುದು, ವಾಸನೆ ಬರುವುದು, ಇತ್ಯಾದಿ ಕೆಲವು ಅನನುಕೂಲತೆಗಳಿದ್ದವು. ಪ್ಲಾಸ್ಟಿಕ್ ಎಮಲ್ಶನ್‌ನಲ್ಲಿ ಇದ್ಯಾವುದೂ ಇರಲಿಲ್ಲ. ಆದರೆ ಬೆಲೆ ಐದು ಪಟ್ಟು ಹೆಚ್ಚಾಗಿತ್ತು. ಚಂಪಕ್‌ಲಾಲ್ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಣಯಿಸಿದರು. ಆಗ ಹುಟ್ಟಿಕೊಂಡದ್ದೇ, ಭಾರತದ ಬಣ್ಣದ ಜಗತ್ತಿನಲ್ಲಿ ಕ್ರಾಂತಿ ಹುಟ್ಟಿಸಿದ, ಎಮಲ್ಶನ್‌ನ ಎಲ್ಲಾ ಗುಣಗಳನ್ನೂ ಹೊಂದಿರುವ, ಬೆಲೆಯೂ ಕಮ್ಮಿ ಇರುವ ವಾಶೆಬಲ್ ಡಿಸ್ಟೆಂಪರ್. ಇದನ್ನು ಜನರು ಅಪ್ಪಿಕೊಂಡರು.

ಇದರಿಂದಾಗಿ ತಿಂಗಳಿಗೆ 75 ರುಪಾಯಿ ಬಾಡಿಗೆಯ ಗ್ಯಾರೇಜಿನಲ್ಲಿ ಆರಂಭವಾದ ಸಂಸ್ಥೆ ಹತ್ತು ವರ್ಷದ ಅವಧಿಯಲ್ಲಿ ವಾರ್ಷಿಕ 23 ಕೋಟಿ ರುಪಾಯಿಯ ವಹಿವಾಟು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಅಷ್ಟೇ ಅಲ್ಲ, ಆರಂಭಗೊಂಡ 25 ವರ್ಷದ ಅವಧಿಯಲ್ಲಿ ದೇಶದ ಪೇಂಟ್ ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನಕ್ಕೇರಿತು.

ಅಂದಿನಿಂದ ಇಂದಿನವರೆಗೂ, ಏಶಿಯನ್ ಪೇಂಟ್ಸ್ ಈ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಸಂಸ್ಥೆ ಇಂದು ಏಷ್ಯಾದ ಪೇಂಟ್ ತಯಾರಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ, ವಿಶ್ವದ ಉತ್ಪಾದಕರ ಪಟ್ಟಿಯಲ್ಲಿ ಮೊದಲ ಐದರ ಸ್ಥಾನದಲ್ಲಿದೆ. ಭಾರತದಲ್ಲಿ ಹತ್ತು, ಶ್ರೀಲಂಕಾ ಮತ್ತು ನೇಪಾಳದಲ್ಲಿ ತಲಾ ಎರಡು, ಇಥಿಯೋಪಿಯಾದಲ್ಲಿ ಮೂರು, ಯುಎಇ, ಬಹ್ರೈನ್, ಒಮಾನ್, ಬಾಂಗ್ಲಾದೇಶ, ಫಿಜಿ ಮುಂತಾದ ದೇಶಗಳಲ್ಲಿ ತಲಾ ಒಂದರಂತೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ 25ಕ್ಕೂ ಹೆಚ್ಚು ಉತ್ಪಾದನಾ ಘಟಕ ಹೊಂದಿದೆ. ಸಂಸ್ಥೆಯ ಆಮದನಿಯ ಶೇಕಡಾ 45ಕ್ಕೂ ಹೆಚ್ಚು ವಿದೇಶಗಳಿಂದ ಬರುತ್ತಿದೆ.

ಏಶಿಯನ್ ಪೇಂಟ್ಸ್‌ನ ಸಾಹಸ ಅಲ್ಲಿಗೇ ನಿಲ್ಲಲಿಲ್ಲ. 1970ರಲ್ಲಿ, ಅಂದರೆ ಮುಂಬೈನ ಐಐಟಿ ಮತ್ತು ಇಸ್ರೋ ಸಂಸ್ಥೆಗಿಂತಲೂ ಹತ್ತು ವರ್ಷ ಮೊದಲೇ ಸಂಸ್ಥೆ ಎಂಟು ಕೋಟಿ ರುಪಾಯಿ ಬೆಲೆ ಬಾಳುವ ಸೂಪರ್ ಕಂಪ್ಯೂಟರ್ ಅನ್ನು ಖರೀದಿಸಿತ್ತು. 1999ರಲ್ಲಿ ಸರಕು ಪೂರೈಕೆ ಮತ್ತು ನಿರ್ವಹಣೆಯಲ್ಲಿ ಬಳಸುವ ಅಮೆರಿಕದ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ್ದೂ ಇದೇ ಸಂಸ್ಥೆ.

ಸಂಸ್ಥೆ 2010ರಿಂದ 2015ರ ವೇಳೆಗೆ ತನ್ನ ಸರಕು ಸಾಗಿಸುವ ಎಲ್ಲಾ ವಾಹನಗಳಲ್ಲೂ ಜಿಪಿಎಸ್ ಅಳವಡಿಸಿತು. ಐಐಎಮ, ಐಐಟಿಯಲ್ಲಿ ಓದಿದವರನ್ನು ಕೆಲಸಕ್ಕೆ ಸೇರಿಸಿಕೊಂಡು ತಂತ್ರಜ್ಞಾನಕ್ಕೆ ಒತ್ತುಕೊಟ್ಟಿತು. ಇದರಿಂದಾಗಿ ಮನುಷ್ಯರಿಗಿಂತ ಯಂತ್ರಗಳನ್ನು ಹೆಚ್ಚು ಬಳಸಿ ಪೇಂಟ್ ತಯಾರಿಸಲು ಅನುಕೂಲವಾಯಿತು. 1980ರಲ್ಲಿ ಮುಂಬೈನ ಭಾಂಡುಪ್‌ನಲ್ಲಿ ಆರಂಭಿಸಿದ ಕಾರ್ಖಾನೆಯಲ್ಲಿ ಒಂದೂವರೆ ಸಾವಿರ ಜನರು ಕೆಲಸಮಾಡುತ್ತಿದ್ದರು.

ಇಂದು ಅದೇ ಪ್ರಮಾಣದ, ಹೊಸ ಕಾರ್ಖಾನೆಗಳನ್ನು ಸಂಸ್ಥೆ ನೂರು ಜನರಿಂದ ಆರಂಭಿಸುವ ಮಟ್ಟಕ್ಕೆ ಬಂದು ನಿಂತಿದೆ. ಆದಾಗ್ಯೂ ಸಂಸ್ಥೆ ಏಳೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ಒದಗಿಸಿಕೊಟ್ಟಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಸಂಶೋಧನೆಯಲ್ಲಿ ತೊಡಗಿಸಿದೆ

ಇದೆಲ್ಲದರ ಜತೆಗೆ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ಅದುವರೆಗೆ ವಿತರಕರು ಎಲ್ಲಾ ಬಣ್ಣದ ಪೇಂಟ್‌ಗಳನ್ನು ತಮ್ಮ ಬಳಿ ದಾಸ್ತಾನು ಇಟ್ಟುಕೊಳ್ಳಬೇಕಾಗಿತ್ತು. ಅದಕ್ಕೆ ವರವಾಗಿ ಬಂದದ್ದು ಪೇಂಟ್ ಟಿಂಟಿಂಗ್ ಮಷಿನ್. ಅದು ಎರಡು ಬಗೆಯ ಬಣ್ಣವನ್ನು ಸೇರಿಸಿ ಇನ್ನೊಂದು ಬಣ್ಣವನ್ನಾಗಿ ಮಾರ್ಪಡಿಸುವ ವಿಧಾನ ಅಥವಾ ಸಾಧನ.

ಉದಾಹರಣೆಗೆ, ಕೆಂಪು ಮತ್ತು ಹಳದಿ ಸೇರಿಸಿ ಕೇಸರಿ ಬಣ್ಣ ತಯಾರಿಸಿದಂತೆ. ಇದರಿಂದ ವಿತರಕರು ಕೆಲವೇ ಬಣ್ಣ ಇಟ್ಟುಕೊಂಡು, ಗ್ರಾಹಕರಿಗೆ ನೂರಾರು ಬಣ್ಣ ತಯಾರಿಸಿಕೊಡಲು ದಾರಿ ಮಾಡಿ ಕೊಟ್ಟಿತು. ಆ ಒಂದು ಸಾಧನವನ್ನು ಇಟ್ಟುಕೊಂಡು ಗ್ರಾಹಕರ ಕಣ್ಣೆದುರಿಗೇ ಅವರಿಗೆ ಬೇಕಾದ ಬಣ್ಣ ತಯಾರಿಸುವಂತಾಯಿತು.

ಇಂದು ಏಶಿಯನ್ ಪೇಂಟ್ಸ್‌ನ ಐವತ್ತು ಸಾವಿರಕ್ಕೂ ಹೆಚ್ಚು ಇಂಥ ಸಾಧನಗಳು ವಿತರಕರ ಬಳಿ ಇವೆ. ದೇಶದ ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿರುವ ಬರ್ಜರ್ ಮತ್ತು ನೆರೊಲ್ಯಾಕ್ ಪೇಂಟ್ ಎರಡನ್ನು ಸೇರಿಸಿದರೂ 45 ಸಾವಿರದ ಗಡಿ ದಾಟುವುದಿಲ್ಲ. ವ್ಯಾಪಾರದಲ್ಲಿಯೂ ಅಷ್ಟೇ, ಏಶಿಯನ್ ಪೇಂಟ್ಸ್ ಇಂದು 25 ಸಾವಿರ ಕೋಟಿ ರುಪಾಯಿಗಳ ವಹಿವಾಟು ನಡೆಸಿದರೆ, ಬರ್ಜರ್ ಮತ್ತು ನೆರೊಲ್ಯಾಕ್ ಎರಡರ ವಹಿವಾಟು ಸೇರಿಸಿದರೂ 13 ಸಾವಿರ ಕೋಟಿಯ ಒಳಗೇ ನಿಲ್ಲುತ್ತದೆ.

ನೀವು ಕುಳಿತ ಕೋಣೆಯ ಗೋಡೆಯನ್ನೊಮ್ಮೆ ನೋಡಿ. ಅದೂ ಏಶಿಯನ್ ಪೇಂಟ್ಸ್ ತಯಾರಿಸಿದ ಬಣ್ಣ ಹೊತ್ತಿರುವ ಸಾಧ್ಯತೆ ಇದೆ. ಏಕೆಂದರೆ ಇಂದು ಭಾರತದ ಶೇಕಡಾ 50ರಷ್ಟು ಕಟ್ಟಡಗಳಿಗೆ ಏಶಿಯನ್ ಪೇಂಟ್ಸ್ ಪ್ರಮುಖ ಶೃಂಗಾರ ಸಾಧನ. ಉಳಿದ ಎಲ್ಲ ಸಂಸ್ಥೆಗಳು ಸೇರಿ ತಯಾರಿಸುವುದು ಉಳಿದ ಐವತ್ತು ಭಾಗವನ್ನು. ಬದ್ಧತೆ, ಮುಂದಾಲೋಚನೆ, ಕೌಶಲ ಅಳವಡಿಸಿಕೊಂಡರೆ ಮಾರುಕಟ್ಟೆಯಲ್ಲಿ ಹೇಗೆ ಸಾರ್ವಭೌಮತ್ವ ಸಾಧಿಸಬಹುದು ಎನ್ನುವುದಕ್ಕೆ ಏಶಿಯನ್ ಪೇಂಟ್ಸ್ ಉತ್ತಮ ಉದಾಹರಣೆ.