ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ದೇಶ-ಕಾಲಗಳೊಂದಿಗೆ ಬದಲಾಗುವ ನಿಲುವುಗಳು ಮತ್ತು ಮೌಲ್ಯಗಳು

ದಾಳಿಕೋರ ಮೊಹಮ್ಮದ್ ಘೋರಿಯು 1191ರಲ್ಲಿ ಪೃಥ್ವೀರಾಜ ಚೌಹಾಣನ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ. ಈ ಯುದ್ಧದಲ್ಲಿ ಮೊಹಮ್ಮದ್ ಘೋರಿಯನ್ನು ಸೋಲಿಸಿದ ಚೌಹಾಣ, ತರುವಾಯದಲ್ಲಿ ಆತನ ಸೆರೆಹಿಡಿದನಾದರೂ ಕೊನೆಗೆ ಕ್ಷಮೆ ನೀಡಿ ಬಿಡುಗಡೆ ಮಾಡಿದ. ಆದರೆ ಈ ಪ್ರಾಣಭಿಕ್ಷೆಯನ್ನು ಮರೆತ ಮೊಹಮ್ಮದ್ ಘೋರಿಯು ಮರು ವರ್ಷವೇ, ಅಂದರೆ 1192ರಲ್ಲೇ ಪೃಥ್ವೀರಾಜನ ಮೇಲೆ ಮತ್ತೊಮ್ಮೆ ದಾಳಿ ಮಾಡಿದ.

ದೇಶ-ಕಾಲಗಳೊಂದಿಗೆ ಬದಲಾಗುವ ನಿಲುವುಗಳು ಮತ್ತು ಮೌಲ್ಯಗಳು

-

Ashok Nayak
Ashok Nayak Dec 27, 2025 9:20 AM

ವಿಶ್ಲೇಷಣೆ

ಗಣೇಶ್‌ ಭಟ್‌, ವಾರಣಾಸಿ

ಒಂದು ಕಾಲಕ್ಕೆ ಅಮೆರಿಕವೇ ಪ್ರತಿಪಾದಿಸಿದ್ದ ‘ಜಾಗತೀಕರಣ’ದ ಪರಿಕಲ್ಪನೆಯನ್ನು ಟ್ರಂಪ್ ಇಂದು ಮೂಲೆಗೊತ್ತಿ, ಕಠಿಣ ಆರ್ಥಿಕ ರಕ್ಷಣಾ ವಾದವನ್ನು ಅನುಸರಿಸು ತ್ತಿದ್ದಾರೆ. ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ ಒಪ್ಪಂದವನ್ನು ತಿರಸ್ಕರಿಸಿ ದ್ದಾರೆ. ಸ್ವಕೇಂದ್ರಿತ ನಿಲುವು ಗಳಿಗೇ ಅಂಟಿಕೊಂಡಿರುವ ಟ್ರಂಪ್ ಅವರಿಗೆ ನರೇಂದ್ರ ಮೋದಿಯವರ ಜತೆಗಿನ ಗೆಳೆತನ ನಗಣ್ಯವಾಗಿದೆ. ಆದರೆ ಅಮೆರಿಕದ ತೆರಿಗೆ ಏರಿಕೆ ಯ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠವಾಗಿಯೇ ಮುಂದುವರಿದಿದೆ ಎನ್ನುವುದು ಒಂದು ಸಮಾಧಾನಕರ ಸಂಗತಿ.

ಈ ಕಥೆ ನಿಮಗೂ ಗೊತ್ತಿರಬಹುದು. ನದಿನೀರಿನಲ್ಲಿ ಮುಳುಗಿದ್ದ ಚೇಳನ್ನು ಸಾಧು ವೊಬ್ಬನು ರಕ್ಷಿಸಿದ ಕಥೆಯದು. ಅದು ಹೀಗಿದೆ: ಸೊಂಟದ ಮಟ್ಟದವರೆಗೆ ನೀರು ಇದ್ದ ನದಿಯನ್ನು ಸಾಧುವು ಶಿಷ್ಯರ ಜತೆಯಲ್ಲಿ ದಾಟುತ್ತಿರುವಾಗ, ನೀರಿನಲ್ಲಿ ಸಿಲುಕಿದ್ದ ಚೇಳನ್ನು ನೋಡುತ್ತಾನೆ.

ಕರುಣಾಮಯಿಯಾದ ಆತ ಚೇಳನ್ನು ನೀರಿನಿಂದ ಮೇಲೆತ್ತಿ ಕೈಯಲ್ಲಿ ಇರಿಸಿಕೊಂಡು ಕೆಲವು ಹೆಜ್ಜೆಗಳನ್ನು ದಾಟುವ ಸಂದರ್ಭದಲ್ಲಿ ಚೇಳು ಆ ಸಾಧುವಿನ ಕೈಯನ್ನು ಕುಟು ಕಿತು. ನೋವನ್ನು ತಡೆಯಲಾಗದೆ ಸಾಧುವು ಕೈಯನ್ನು ಕೊಡವಿದಾಗ, ಚೇಳು ನೀರಿಗೆ ಬಿದ್ದಿತು. ಆ ಸಾಧುವು ಪುನಃ ಚೇಳನ್ನು ರಕ್ಷಿಸಿ ನಾಲ್ಕು ಹೆಜ್ಜೆ ನಡೆದಾಗ, ಚೇಳು ಪುನಃ ಕುಟುಕಿತು.

ಸಾಧುವು ಮತ್ತೆ ಅದನ್ನು ಕೊಡವಿದ. ಈ ಚಟುವಟಿಕೆ ನಾಲ್ಕಾರು ಬಾರಿ ಪುನರಾವರ್ತನೆ ಗೊಂಡರೂ, ಆ ಚೇಳನ್ನು ದಡಕ್ಕೆ ತಲುಪಿಸುವಲ್ಲಿ ಸಾಧು ಯಶಸ್ವಿಯಾದ. ಜತೆಯಲ್ಲಿದ್ದ ಶಿಷ್ಯರು, “ಅಷ್ಟು ಬಾರಿ ಕಚ್ಚಿದರೂ ಚೇಳನ್ನೇಕೆ ನೀವು ರಕ್ಷಿಸಿದಿರಿ?" ಎಂದು ಪ್ರಶ್ನಿಸಿದಾಗ, “ಕಡಿಯುವುದು ಚೇಳಿನ ಧರ್ಮವಾಗಿದ್ದರೆ, ಸಾಯುತ್ತಿರುವ ಜೀವಿಯನ್ನು ರಕ್ಷಿಸುವುದು ನಮ್ಮ ಧರ್ಮವಾಗಿದೆ" ಎಂದು ಸಾಧು ಉತ್ತರಿಸಿದ.

ಈ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಓದಿದ ಬಹುತೇಕ ಭಾರತೀಯರು, ಸಾಧುವಿನ ಕರುಣಾಮಯಿ ನಡವಳಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಮಧ್ಯಪ್ರಾಚ್ಯದ ಯಾವುದೋ ದೇಶವೊಂದರ ಮಹಿಳೆಯು ಪ್ರತಿಕ್ರಿಯಿಸಿ, “ಪದೇ ಪದೆ ಕಚ್ಚುತ್ತಿದ್ದ ದುಷ್ಟ ಚೇಳನ್ನು ಸಾಯಲು ಬಿಡದೆ, ಕಚ್ಚಿಸಿಕೊಳ್ಳುತ್ತಾ ರಕ್ಷಿಸಿದ್ದು ಶುದ್ಧ ಮೂರ್ಖತನವಲ್ಲದೇ ಬೇರೇನಲ್ಲ" ಎಂದು ಕಮೆಂಟ್ ಹಾಕಿದ್ದಳು.

ಇದನ್ನೂ ಓದಿ: Ganesh Bhat Column: ಪರಾನುಭೂತಿ ಎನ್ನುವ ಶ್ರೇಷ್ಠ ಭಾವಸಂಗಮ

ಆ ಕಮೆಂಟಿಗೆ ಹಲವು ವಿದೇಶಿಯರು ಸಹಮತವನ್ನು ವ್ಯಕ್ತಪಡಿಸಿದ್ದರು. ಸಹನೆ, ಕರುಣೆ, ಶಾಂತಿಯಂಥ ಮಾನವೀಯ ಮನೋಧರ್ಮಗಳನ್ನು ಬೆಳೆಸಿಕೊಂಡಿರುವ ಭಾರತೀಯರು, ಇಂಥ ಆದರ್ಶಗಳ ಬಗ್ಗೆ ಗೌರವವನ್ನು ಹೊಂದಿರುತ್ತಾರೆ. ಆದರೆ ಬೇರೆಯದೇ ರೀತಿಯ ವಾತಾವರಣದಲ್ಲಿ ಬೆಳೆದಿರುವ ಮಧ್ಯಪ್ರಾಚ್ಯದ ಆ ಮಹಿಳೆಯು, ಈ ಘಟನೆಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರಲ್ಲಿ ವಿಶೇಷವೇನೂ ಇಲ್ಲ.

ದಾಳಿಕೋರ ಮೊಹಮ್ಮದ್ ಘೋರಿಯು 1191ರಲ್ಲಿ ಪೃಥ್ವೀರಾಜ ಚೌಹಾಣನ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ. ಈ ಯುದ್ಧದಲ್ಲಿ ಮೊಹಮ್ಮದ್ ಘೋರಿಯನ್ನು ಸೋಲಿಸಿದ ಚೌಹಾಣ, ತರುವಾಯದಲ್ಲಿ ಆತನ ಸೆರೆಹಿಡಿದನಾದರೂ ಕೊನೆಗೆ ಕ್ಷಮೆ ನೀಡಿ ಬಿಡುಗಡೆ ಮಾಡಿದ. ಆದರೆ ಈ ಪ್ರಾಣಭಿಕ್ಷೆಯನ್ನು ಮರೆತ ಮೊಹಮ್ಮದ್ ಘೋರಿಯು ಮರು ವರ್ಷ ವೇ, ಅಂದರೆ 1192ರಲ್ಲೇ ಪೃಥ್ವೀರಾಜನ ಮೇಲೆ ಮತ್ತೊಮ್ಮೆ ದಾಳಿ ಮಾಡಿದ.

ಜೈಚಂದ್‌ನ ವಿಶ್ವಾಸದ್ರೋಹದಿಂದಾಗಿ ಪೃಥ್ವೀರಾಜನಿಗೆ ಸೋಲಾಯಿತು. ಆಗ ಆತನನ್ನು ಸೆರೆಹಿಡಿದ ಮೊಹಮ್ಮದ್ ಘೋರಿ, ಯಾವುದೇ ಕರುಣೆ ತೋರದೆ ಅವನ ಕಣ್ಣುಗಳನ್ನು ಕೀಳಿಸಿ ಅತಿಕ್ರೂರವಾಗಿ ಸಾಯಿಸಿದ. ಅಂದರೆ, ಹಿಂದಿನ ಯುದ್ಧದಲ್ಲಿ ತಾನು ಸೆರೆ ಸಿಕ್ಕಿದ್ದಾಗ ಪೃಥ್ವೀರಾಜನು ನಡೆದುಕೊಂಡಿದ್ದಕ್ಕೆ ವಿರುದ್ಧವಾಗಿ ಘೋರಿ ನಡೆದುಕೊಂಡ, ತನ್ನ ಚಾಳಿ ಯನ್ನು ತೋರಿಸಿ ಬಿಟ್ಟ!

ಚದುರಂಗವು ಸಭ್ಯತೆಯ ಚೌಕಟ್ಟಿನೊಳಗೇ ಆಡಲ್ಪಡುವ ಒಂದು ಒಳಾಂಗಣ ಕ್ರೀಡೆ ಎಂಬುದು ಬಹುತೇಕರಿಗೆ ಗೊತ್ತಿರುವಂಥದ್ದೇ. ವಿಶ್ವನಾಥನ್ ಆನಂದ್, ಗ್ಯಾರಿ ಕ್ಯಾಸ್ಪರೋ ವಿಚ್, ಅನತೋಲಿ ಕಾರ್ಪೋವ್, ವ್ಲಾದಿಮಿರ್ ಕ್ರಾಮ್ನಿಕ್ ಮೊದಲಾದವರು ಚದುರಂಗ ಲೋಕದ ಜೆಂಟಲ್'ಮನ್‌ಗಳು, ದಂತಕಥೆಗಳು ಎಂದೇ ಜನಜನಿತರಾಗಿದ್ದಾರೆ.

ಇವರೆಲ್ಲರೂ ಸೋಲು ಮತ್ತು ಗೆಲುವು ಎರಡನ್ನೂ ಬಹಳ ಸಮಚಿತ್ತದಿಂದಲೇ ಸ್ವೀಕರಿಸಿ ದವರು. ಈ ಪೈಕಿ ವಿಶ್ವನಾಥನ್ ಆನಂದ್ ಅವರಂತೂ ತಮ್ಮ ಸದ್ವರ್ತನೆಯಿಂದಾಗಿ ಇತರರಿಗೆ ಮಾದರಿಯಾದವರು. ಭಾರತದ ಯುವ ಆಟಗಾರರಾದ ಡಿ.ಗುಕೇಶ್, ಪ್ರಜ್ಞಾನಂದ ಮುಂತಾದವರು ಕೂಡ ಬಹಳ ಸಮತೋಲಿತವಾಗಿ ವರ್ತಿಸುತ್ತಾರೆ.

ಆದರೆ, ಕೆಲ ತಿಂಗಳ ಹಿಂದೆ ನಡೆದ ನಾರ್ವೆ ಚೆಸ್ ಟೂರ್ನಮೆಂಟ್‌ನಲ್ಲಿ, ಪ್ರಸಿದ್ಧ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್‌ಗೆ ವಿಶ್ವ ಚಾಂಪಿಯನ್ ಡಿ.ಗುಕೇಶ್ ಎದುರು ಸೋಲಾಯಿತು. ಸೋಲಿನ ಹತಾಶೆಯನ್ನು ಅದುಮಿಡಲಾಗದ ಕಾರ್ಲ್ಸನ್ ತಮ್ಮೆದುರಿನ ಮೇಜನ್ನು ಬಲ ವಾಗಿ ಗುದ್ದಿದರು, ಪರಿಣಾಮವಾಗಿ ಚದುರಂಗದ ಕಾಯಿಗಳು ಚೆಲ್ಲಾಪಿಲ್ಲಿಯಾದವು.

ಮ್ಯಾಗ್ನಸ್ ಕಾರ್ಲ್ಸ್‌ನ್ ಅವರ ಈ ವರ್ತನೆ ಇಡೀ ಚೆಸ್ ಲೋಕವನ್ನು ದಿಗ್ಭ್ರಮೆಗೊಳಿಸಿತು. ಆದರೆ, ಸದಾ ಶಾಂತಚಿತ್ತರಾಗಿರುವ ಗುಕೇಶ್, ಬೋರ್ಡ್‌ನ ಎಲ್ಲ ಕಾಯಿಗಳನ್ನು ಪುನಃ ಸರಿಯಾಗಿ ಜೋಡಿಸಿ ಕ್ರೀಡಾಸ್ಪೂರ್ತಿಯನ್ನು ಮೆರೆದರು. ಅಕ್ಟೋಬರ್ ತಿಂಗಳಲ್ಲಿ ‘ಚೆಕ್‌ ಮೇಟ್: ಯುಎಸ್‌ಎ ವರ್ಸಸ್ ಇಂಡಿಯಾ’ ಚೆಸ್ ಪಂದ್ಯವು ಅಮೆರಿಕದಲ್ಲಿ ನಡೆದಿತ್ತು.

ಪಂದ್ಯದಲ್ಲಿ ಗುಕೇಶ್ ವಿರುದ್ಧ ಗೆದ್ದ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಹಿಕಾರು ನಕಾಮುರಾ ಅವರು, ಗುಕೇಶ್‌ನ ರಾಜನನ್ನು ಎತ್ತಿ ಪ್ರೇಕ್ಷಕರೆಡೆಗೆ ಎಸೆದರು. ‘ನಕಾಮುರಾ ಅವರ ಈ ವರ್ತನೆಯು ಚೆಸ್ ಆಟಕ್ಕೆ ಹಾಗೂ ವಿಶ್ವ ಚೆಸ್ ಚಾಂಪಿಯನ್ ಆಗಿರುವ ಗುಕೇಶ್‌ಗೆ ತೋರಿದ ಅಗೌರವ’ ಎಂದು ಮಾಜಿ ವಿಶ್ವ ಚಾಂಪಿಯನ್ ವ್ಲಾದಿಮಿರ್ ಕ್ರಾಮ್ನಿಕ್ ಹೇಳಿಕೆ ನೀಡಿದರು. ಈ ಪಂದ್ಯದಲ್ಲೂ ಅಪ್ರತಿಮ ಸಂಯಮವನ್ನು ಮೆರೆದ ಗುಕೇಶ್ ಅವರು, ತಮ್ಮ ಹಾಗೂ ಎದುರಾಳಿಯ ಕಾಯಿಗಳನ್ನು ಕೂಡ ಬೋರ್ಡ್‌ನಲ್ಲಿ ಸರಿಯಾಗಿ ಜೋಡಿಸಿಯೇ ಅಲ್ಲಿಂದ ನಿರ್ಗಮಿಸಿದರು.

ಕ್ರಿಕೆಟ್ ಆಟದಲ್ಲಿ ಎದುರಾಳಿ ಆಟಗಾರರನ್ನು ಮಾತಿನ ಮೂಲಕ ಕೆಣಕಿ, ಇಲ್ಲವೇ ನಿಂದಿಸಿ, ಅವರ ಆತ್ಮಸ್ಥೈರ್ಯವು ಕುಸಿಯುವಂತೆ ಮಾಡುವುದು ಅಥವಾ ಅವರ ಏಕಾಗ್ರತೆಗೆ ಭಂಗ ತರುವುದನ್ನು ‘ಸ್ಲೆಡ್ಜಿಂಗ್’ ಎಂದು ಕರೆಯಲಾಗುತ್ತದೆ. ಈ ಸ್ಲೆಡ್ಜಿಂಗ್‌ಗೆ ಆಸ್ಟ್ರೇಲಿಯಾದ ಆಟಗಾರರು ಕುಖ್ಯಾತರು. ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ ಮುಂತಾದವರ ಮೇಲೆಯೂ ಆಸ್ಟ್ರೇಲಿಯಾ ತಂಡದವರು ತಮ್ಮ ಸ್ಲೆಡ್ಜಿಂಗ್ ತಂತ್ರವನ್ನು ಪ್ರಯೋಗಿಸಿದ್ದರು.

ಆದರೆ, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿಯವರಂಥ ‘ಪ್ರತ್ಯಾಕ್ರಮಣಕಾರಿ’ ಆಟಗಾರರು ಭಾರತೀಯ ತಂಡಕ್ಕೆ ಬಂದ ನಂತರ, ಆಸ್ಟ್ರೇಲಿಯಾದ ಕ್ರಿಕೆಟಿಗರ ‘ಸ್ಲೆಡ್ಜಿಂಗ್ ಕಿತಾಪತಿ’ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಪಾಕಿಸ್ತಾನ ದೇಶದೊಂದಿಗಿನ ಸಂಬಂಧಗಳನ್ನು ಸುಧಾರಿ ಸುವ ಉದ್ದೇಶಗಳೊಂದಿಗೆ 1999ರ ವರ್ಷದಲ್ಲಿ ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ‘ಲಾಹೋರ್ ಬಸ್ ಯಾತ್ರಾ’ ಹೆಸರಿನ ರಾಜತಾಂತ್ರಿಕ ಉಪಕ್ರಮದ ಅಡಿಯಲ್ಲಿ ಬಸ್ ಮೂಲಕ ಲಾಹೋರಿಗೆ ತೆರಳಿದರು, ಅಲ್ಲಿ ಒಂದಷ್ಟು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದರು.

ಆದರೆ ತರುವಾಯದ ಪರಿಣಾಮ ಏನಾಯಿತು? ಪಾಕಿಸ್ತಾನವು ಹಿಂಬದಿಯಿಂದ ನಮ್ಮ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು. ಇದಕ್ಕೆ ಪ್ರತಿಯಾಗಿ ಭಾರತವು ‘ಆಪರೇಷನ್ ವಿಜಯ್’ ಕಾರ್ಯಾಚರಣೆಯನ್ನು ನಡೆಸಿ, ಕಾರ್ಗಿಲ್ ಅನ್ನು ಮರುವಶ ಮಾಡಿಕೊಳ್ಳಬೇಕಾಯಿತು.

ಭಾರತ-ಪಾಕಿಸ್ತಾನ ನಡುವಿನ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ, 2014ರಲ್ಲಿ ನರೇಂದ್ರ ಮೋದಿಯವರ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾ ನದ ಅಂದಿನ ಪ್ರಧಾನಿ ನವಾಜ್ ಷರೀಫರನ್ನು ಆಹ್ವಾನಿಸಲಾಗಿತ್ತು. ಅದೇ ರೀತಿ, 2015ರಲ್ಲಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಮೋದಿಯವರು ಪಾಕಿಸ್ತಾ ನಕ್ಕೆ ಅಚ್ಚರಿಯ ಭೇಟಿಯನ್ನು ನೀಡಿದ್ದರು.

ಆದರೆ, ವಿಶ್ವಾಸದ್ರೋಹಕ್ಕೆ ಸದಾ ಹೆಸರಾಗಿರುವ ಪಾಕಿಸ್ತಾನವು, ತಾನು ಸಲಹುತ್ತಿರುವ ಜೈಶ್-ಎ-ಮೊಹಮ್ಮದ್’ ಉಗ್ರ ಸಂಘಟನೆಯ ಮೂಲಕ 2016ರಲ್ಲಿ, ಕಾಶ್ಮೀರದ ‘ಉರಿ’ ಪ್ರಾಂತ್ಯದಲ್ಲಿ ಸಾಗುತ್ತಿದ್ದ ಭಾರತೀಯ ಯೋಧರ ವಾಹನಗಳ ಮೇಲೆ ದಾಳಿ ನಡೆಸಿ, ಯೋಧರ ಸಾವಿಗೆ ಕಾರಣವಾಯಿತು. ನಂತರ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ ದಾಳಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ಆಕ್ರಮಣ ಹೀಗೆ ಪಾಕಿಸ್ತಾನವು ತನ್ನ ವಿಶ್ವಾಸದ್ರೋಹಿ ಸ್ವಭಾವವನ್ನು ಪ್ರದರ್ಶಿ ಸುತ್ತಲೇ ಇದೆ.

ಪಾ‌ಕಿಸ್ತಾನದ ಇಂಥ ದುಸ್ಸಾಹಸಗಳಿಗೆ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್‌ಸ್ಟ್ರೈಕ್, ಆಪರೇಷನ್ ಸಿಂದೂರ್ ಮುಂತಾದ ಕಾರ್ಯಾಚರಣೆಗಳ ಮೂಲಕ ಭಾರತವೂ ತಕ್ಕ ಪ್ರತ್ಯುತ್ತರಗಳನ್ನೇ ನೀಡಿದೆ. ಆದರೆ ಪಾಕಿಸ್ತಾನವು ಮಾತ್ರ ತಾನು ವಿಶ್ವಾಸಕ್ಕೆ ಯೋಗ್ಯನಲ್ಲ ಎಂಬುದನ್ನು ಪದೇಪದೆ ಸಾಬೀತುಪಡಿಸುತ್ತಲೇ ಬಂದಿದೆ.

ಡೊನಾಲ್ಡ್ ಟ್ರಂಪ್ ಅವರ ಮೊದಲ ಆಡಳಿತದ ಅವಧಿಯಲ್ಲಿ, ಭಾರತ ಮತ್ತು ಅಮೆರಿಕ ಗಳ ನಡುವಿನ ಸಂಬಂಧವು ಉತ್ತುಂಗಕ್ಕೆ ಏರಿತ್ತು. ಅಮೆರಿಕದಲ್ಲಿನ ಭಾರತೀಯ ಸಮುದಾ ಯವು 2019ರಲ್ಲಿ ಆಯೋಜಿಸಿದ್ದ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಟ್ರಂಪ್ ಪಾಲ್ಗೊಂಡಿದ್ದರು.

2020ರಲ್ಲಿ ಭಾರತಕ್ಕೆ ಟ್ರಂಪ್ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ‘ನಮಸ್ತೆ ಟ್ರಂಪ್’ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು; ಈ ಅವಧಿಯಲ್ಲಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರ ನಡುವಿನ ಸ್ನೇಹ ಸಂಬಂಧ ಗಟ್ಟಿಯಾಗಿತ್ತು.

2025ರಲ್ಲಿ ಟ್ರಂಪ್ ಪುನಃ ಅಧಿಕಾರಕ್ಕೆ ಬಂದಾಗ, ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವು ಗರಿಷ್ಠ ಮಟ್ಟವನ್ನು ಮುಟ್ಟಲಿದೆ ಎಂದೇ ಭಾವಿಸಲಾಗಿತ್ತು; ಟ್ರಂಪ್ ಅವರ ಪುನರಾಗಮನಕ್ಕಾಗಿಯೇ ಬಹುತೇಕ ಭಾರತೀಯರು ಹಾರೈಸಿದ್ದರು. ಆದರೆ, ಎರಡನೇ ಬಾರಿಗೆ ಗದ್ದುಗೆಯೇರಿದ ನಂತರ ಟ್ರಂಪ್ ಮಹಾಶಯರ ವರಸೆಯೇ ಬದಲಾಗಿತ್ತು.

ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಶೇ.25ರ ಪ್ರಮಾಣದ ಸುಂಕ ವನ್ನು ಹೇರಿದ ಟ್ರಂಪ್ ಸರಕಾರವು, ‘ಭಾರತವು ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸು ತ್ತಿದೆ’ ಎಂಬ ಕುಂಟುನೆಪವನ್ನು ಮುಂದುಮಾಡಿ, ಕೆಂಗಣ್ಣು ಬೀರಿ, ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕವನ್ನು ಹೇರಿತು.

ಇದು ಸಾಲದೆಂಬಂತೆ, ಭಾರತದ ವಿರುದ್ಧ ತಮ್ಮ ನಾಲಗೆಯನ್ನು ಹರಿಬಿಟ್ಟ ಟ್ರಂಪ್, ‘ಭಾರತದ್ದು ಸತ್ತ ಆರ್ಥಿಕತೆ’ ಎಂದು ಮೂದಲಿಸಿದರು. ಭಾರತದ ಮೇಲೆ ತೆರಿಗೆ ಹೇರುವ ಭಯವನ್ನು ಹುಟ್ಟಿಸಿ, ಪಾಕಿಸ್ತಾನದ ವಿರುದ್ಧ ಅದು ಹಮ್ಮಿಕೊಂಡಿದ್ದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ತಾವು ನಿಲ್ಲಿಸಿದ್ದಾಗಿ ಕೂಡ ಟ್ರಂಪ್ ಬಡಾಯಿ ಕೊಚ್ಚಿ ಕೊಂಡರು. ಅದು ಈಗಲೂ ಮುಂದುವರಿದಿದೆ ಎನ್ನಿ!

ಪಾಕಿಸ್ತಾನದ ಜತೆಗಿನ ಗೆಳೆತನವನ್ನು ಬೆಳೆಸಿಕೊಳ್ಳುತ್ತಿದೆ ಅಮೆರಿಕ. ಇದೀಗ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧವು ತುಂಬಾ ಹಾಳಾಗಿದೆ. ಇದಕ್ಕೆ ಕಾರಣ ಟ್ರಂಪ್ ಅವರ ಕೀಳು ಅಭಿರುಚಿಯ ಹೇಳಿಕೆಗಳು, ಮೇಲರಿಮೆ ಹಾಗೂ ಅಧಿಕಾರವನ್ನು ಹೇರುವ ಪ್ರವೃತ್ತಿ.

ಒಂದು ಕಾಲಕ್ಕೆ ಅಮೆರಿಕವೇ ಪ್ರತಿಪಾದಿಸಿದ್ದ ‘ಜಾಗತೀಕರಣ’ದ ಪರಿಕಲ್ಪನೆಯನ್ನು ಟ್ರಂಪ್ ಇಂದು ಮೂಲೆಗೊತ್ತಿ, ಕಠಿಣ ಆರ್ಥಿಕ ರಕ್ಷಣಾ ವಾದವನ್ನು ಅನುಸರಿಸುತ್ತಿದ್ದಾರೆ. ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಸ್ವಕೇಂದ್ರಿತ ನಿಲುವು ಗಳಿಗೇ ಅಂಟಿಕೊಂಡಿರುವ ಟ್ರಂಪ್ ಅವರಿಗೆ ನರೇಂದ್ರ ಮೋದಿಯವರ ಜತೆಗಿನ ಗೆಳೆತನ ನಗಣ್ಯವಾಗಿದೆ. ಆದರೆ ಅಮೆರಿಕದ ತೆರಿಗೆ ಏರಿಕೆಯ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠವಾಗಿಯೇ ಮುಂದುವರಿದಿದೆ ಎನ್ನುವುದು ಒಂದು ಸಮಾಧಾನಕರ ಸಂಗತಿ.

ಕಾಡಿನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಬಾಯಾರಿಕೆಯಾಯಿತು. ನೀರಿಗಾಗಿ ಆತ ಮನೆ ಯೊಂದರ ಬಾಗಿಲನ್ನು ತಟ್ಟಿದಾಗ, ಮನೆಯಲ್ಲಿ ತೂಗು ಹಾಕಿದ್ದ ಪಂಜರದಲ್ಲಿನ ಗಿಳಿ ಯೊಂದು ‘ಹಿಡಿ, ಬಡಿ, ಕಡಿ’ ಎಂದು ಕೂಗಿ ಹೇಳುತ್ತದೆ. ಗಾಬರಿಕೊಂಡ ಆ ವ್ಯಕ್ತಿ ಅಲ್ಲಿಂದ ಓಡಿ, ಋಷಿಯೊಬ್ಬನ ಆಶ್ರಮಕ್ಕೆ ಬಂದಾಗ, ಅಲ್ಲಿ ವಿಹರಿಸಿಕೊಂಡಿದ್ದ ಗಿಳಿಯೊಂದು, ‘ಬನ್ನಿ ಸ್ವಾಮಿ, ಕುಳಿತುಕೊಳ್ಳಿ. ನೀರು ಕುಡಿಯಿರಿ’ ಎನ್ನುತ್ತದೆ.

ಇದನ್ನು ಕಂಡು ಬೆರಗಾದ ಆ ವ್ಯಕ್ತಿಯು, ‘ಏನಿದು ವಿಚಿತ್ರ?’ ಎಂದು ಕೇಳಿದಾಗ ಆ ಋಷಿ ಯು, ‘ಈ ಎರಡೂ ಮನೆಗಳ ಗಿಳಿಗಳೂ ಒಂದೇ ತಾಯಿಯ ಮಕ್ಕಳು; ಆದರೆ ಒಂದು ಗಿಳಿ ದರೋಡೆಕೋರನ ಮನೆಯನ್ನು ಸೇರಿಕೊಂಡರೆ, ಇನ್ನೊಂದು ಗಿಳಿ ಆಶ್ರಮವನ್ನು ಸೇರಿತು. ದರೋಡೆಕೋರನ ಮನೆಯ ಹಿಂಸಾತ್ಮಕ ವಾತಾವರಣವನ್ನು ಕಂಡೇ ಬೆಳೆದ ಗಿಳಿಯು, ಅಲ್ಲಿ ನಿತ್ಯ ಆಡಲಾಗುತ್ತಿದ್ದ ‘ಹಿಡಿ, ಬಡಿ, ಕಡಿ’ ಎನ್ನುವ ಮಾತುಗಳನ್ನು ಕಲಿತರೆ, ನಮ್ಮ ಆಶ್ರಮದಲ್ಲಿ ಬೆಳೆದ ಗಿಳಿಯು ಇಲ್ಲಿನ ಸಾತ್ವಿಕ ವಾತಾವರಣದ ಪ್ರಭಾವದಿಂದಾಗಿ ಸಂಸ್ಕಾರ ಭರಿತ ಮಾತುಗಳನ್ನು ಕಲಿಯಿತು’ ಎಂದರು.

ಈ ಕಥೆಯನ್ನು, ದೇಶ-ಕಾಲಗಳಲ್ಲಿ, ವಿವಿಧ ಸನ್ನಿವೇಶಗಳಲ್ಲಿ ಬದಲಾಗುವ ಮೌಲ್ಯಗಳು ಹಾಗೂ ನಿಲುವುಗಳಿಗೂ ಅನ್ವಯಿಸಬಹುದು, ಅಲ್ಲವೇ?

(ಲೇಖಕರು ಹವ್ಯಾಸಿ ಬರಹಗಾರರು)