ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Dr Prabhu Basarakoda Column: ಆಟಿಸಂ: ಸವಾಲುಗಳು ಮತ್ತು ಹೊಸ ಸಾಧ್ಯತೆಗಳು

ಭಾರತದಲ್ಲಿ, ಆಟಿಸಂ ಮಕ್ಕಳಿಗಾಗಿನ ಸರಕಾರಿ ಶಾಲೆಗಳು ಪ್ರಾರಂಭಿಕ ಹಂತದಲ್ಲಿವೆ. ಈ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಆತ್ಮವಿಶ್ವಾಸವನ್ನು ಬೆಳೆಸಲು ಇನ್ನಷ್ಟು ಅವಕಾಶ ಗಳನ್ನು ಸೃಜಿಸುವ ಅಗತ್ಯ ವಿದೆ. ಭಾರತದಲ್ಲಿ 3000ಕ್ಕೂ ಹೆಚ್ಚು ವಿಶೇಷ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಇವುಗಳಲ್ಲಿ ಕೆಲವನ್ನಷ್ಟೇ ಆಟಿಸಂ ಮಕ್ಕಳಿಗಾಗಿ ವಿನ್ಯಾಸ ಗೊಳಿಸಲಾಗಿದೆ.

ಆಟಿಸಂ: ಸವಾಲುಗಳು ಮತ್ತು ಹೊಸ ಸಾಧ್ಯತೆಗಳು

Profile Ashok Nayak Feb 15, 2025 9:15 AM

ಆರೋಗ್ಯ ಭಾಗ್ಯ

ಡಾ.ಪ್ರಭು ಬಸರಕೋಡ

ಭಾರತದಲ್ಲಿ, ಆಟಿಸಂ ಮಕ್ಕಳಿಗಾಗಿನ ಸರಕಾರಿ ಶಾಲೆಗಳು ಪ್ರಾರಂಭಿಕ ಹಂತದಲ್ಲಿವೆ. ಈ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಆತ್ಮವಿಶ್ವಾಸವನ್ನು ಬೆಳೆಸಲು ಇನ್ನಷ್ಟು ಅವಕಾಶ ಗಳನ್ನು ಸೃಜಿಸುವ ಅಗತ್ಯವಿದೆ. ಭಾರತದಲ್ಲಿ 3000ಕ್ಕೂ ಹೆಚ್ಚು ವಿಶೇಷ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಇವುಗಳಲ್ಲಿ ಕೆಲವನ್ನಷ್ಟೇ ಆಟಿಸಂ ಮಕ್ಕಳಿಗಾಗಿ ವಿನ್ಯಾಸ ಗೊಳಿಸ ಲಾಗಿದೆ. ಅನಿತಾ 35 ವರ್ಷದ ಮಹಿಳೆ. Autism Spectrum Disorder ಸಮಸ್ಯೆಯಿಂದ ಬಳಲು ತ್ತಿದ್ದ ತನ್ನ ಐದು ವರ್ಷದ ಮಗ ಆಶುವಿನೊಂದಿಗೆ ಆಕೆ ಸಂಕಟದ ಬದುಕನ್ನು ಕಳೆಯುತ್ತಿದ್ದಳು. ಆಶು ತನ್ನ ಸುತ್ತಣ ಪರಿಸರದೊಂದಿಗೆ ಸಹಜವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೆ ತೀರಾ ಅಸಹಾಯಕತೆಯ ಸ್ಥಿತಿಯಲ್ಲಿದ್ದ. ಇದು ಅನಿತಾಳನ್ನು ಬಹುದೊಡ್ಡ ಚಿಂತೆಗೀಡು ಮಾಡಿದ ಸಂಗತಿಯಾಗಿತ್ತು.

ಆಶು ಕೆಲವೊಮ್ಮೆ ಸುಖಾಸುಮ್ಮನೆ ಕೋಪಗೊಳ್ಳುತ್ತಿದ್ದ, ಕಾರಣವಿಲ್ಲದ ಹಠ ಮಾಡುತ್ತಿದ್ದ. ಇತರ ಮಕ್ಕಳೊಂದಿಗೆ ಜಗಳವಾಡುತ್ತಿದ್ದ. ಕೆಲವೊಮ್ಮೆಯಂತೂ ತೀರಾ ಅನುಚಿತವಾಗಿ ವರ್ತಿಸುತ್ತಿದ್ದ. ಒಟ್ಟಾರೆ ಹೇಳುವುದಾದರೆ, ಇತರರೊಡನೆ ಸಹಜವಾಗಿ ಸಂವಹನ ಮಾಡಲಾಗದ ಅಸಹನೀಯ ಸ್ಥಿತಿ ಅವನದಾಗಿತ್ತು. ಅನಿತಾ ತಾಯಿಯಾಗಿದ್ದರೂ ಅವನ ವರ್ತನೆಗಳನ್ನು ಗ್ರಹಿಸುವುದು, ಅವನ ಕಾಳಜಿ ಮಾಡುವುದು ಸವಾಲಿನ ಸಂಗತಿಯೇ ಆಗಿತ್ತು.

ಇದನ್ನೂ ಓದಿ: Vishweshwar Bhat Column: ಕಳ್ಳತನವೇ ಮಂಗಮಾಯ !

ಅವಳಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇತ್ತಾದರೂ ಅದು ಕಷ್ಟಸಾಧ್ಯವಾಗಿತ್ತು. ಲಭ್ಯ ವಿದ್ದ ಬೆರಳೆಣಿಕೆಯಷ್ಟು ಆಟಿಸಂ ಚಿಕಿತ್ಸಾ ಕೇಂದ್ರಗಳು ದುಬಾರಿಯಾಗಿದ್ದರಿಂದ, ಅವುಗಳಿಂದ ಪ್ರಯೋಜನ ಪಡೆಯುವ ಅವಕಾಶ ಆಕೆಗಿರಲಿಲ್ಲ. ಹೀಗಾಗಿ ಮಗನನ್ನು ಈ ಪ್ರಪಂಚಕ್ಕೆ ಹೊಂದಿ ಕೊಳ್ಳುವಂತೆ ಮಾಡುವುದು ಹೇಗೆ? ಎಂಬ ಪ್ರಶ್ನೆಯನ್ನು ಅನಿತಾ ನಿತ್ಯವೂ ತನ್ನನ್ನೇ ಕೇಳಿ ಕೊಳ್ಳು ತ್ತಿದ್ದಳು.

ಹೀಗೆ ಕೇಳಿಕೊಂಡ ಪ್ರತಿಸಲವೂ ಅವಳಿಗೆ ದಾರಿ ಕಾಣದೆ ನಿರಾಶೆಯಾಗುತ್ತಿತ್ತು. ಒಟ್ಟಿನಲ್ಲಿ ಅವಳ ಬದುಕು ನರಕಸದೃಶವಾಗಿತ್ತು. ಇದು ಅನಿತಾ ಎಂಬ ಒಬ್ಬಾಕೆಯ ಕಥೆಯಲ್ಲ, ಸಾವಿರಾರು ತಾಯಂ ದಿರ ಸಂಕಷ್ಟದ ಸ್ಥಿತಿ. ಸಾಮಾನ್ಯವಾಗಿ ‘ಆಟಿಸಂ’ ಎಂದಷ್ಟೇ ಕರೆಯಲ್ಪಡುವ ‘ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್’ ಸಮಸ್ಯೆಯು ನರಗಳ ಅಸಹಜ ಬೆಳವಣಿಗೆಯ ಒಂದು ಸ್ಥಿತಿಯಾಗಿದ್ದು, ಈ ಅಸ್ವಸ್ಥತೆ ಯನ್ನು ಹೊಂದಿದ ಮಗು ಅಥವಾ ವ್ಯಕ್ತಿಯು ತನ್ನ ಸುತ್ತಮುತ್ತಲಿನವರೊಂದಿಗೆ ಸಂವಹನ ಸಾಧಿಸುವ, ಬೆರೆಯುವ ಮತ್ತು ತೊಡಗಿಸಿಕೊಳ್ಳುವ ರೀತಿಯ ಮೇಲೆ ಅದು ಅಸಹಜ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಆಟಿಸಂ ಎಂಬುದು ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳ, ಸಂವಹನ ಕೌಶಲಗಳ ಕೊರತೆ ಮತ್ತು ಮರುಕಳಿಸುವ ವರ್ತನೆಗಳ ಲಕ್ಷಣವಾಗಿರುವ ಮಾನಸಿಕ ಸ್ಥಿತಿಯಾಗಿದೆ. ಪ್ರಪಂಚದಾದ್ಯಂತ ಇದೊಂದು ಗಂಭೀರ ಸಮಸ್ಯೆಯಾಗಿದೆ. ನಮ್ಮ ದೇಶದ ಸ್ಥಿತಿ ಕೂಡ ಭಿನ್ನವಾಗಿಲ್ಲ. ಭಾರತದಲ್ಲಿ ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು ಕ್ರಮೇಣ ಹೆಚ್ಚುತ್ತಿರುವುದನ್ನು ವಿವಿಧ ಸಂಶೋಧನೆಗಳ ಅಂಕಿ-ಅಂಶಗಳು ದೃಢೀಕರಿಸಿವೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಯ ( NIEPID) ಪ್ರಕಾರ, ಆಟಿಸಂ ಮಕ್ಕಳ ಸಂಖ್ಯೆಯು ದೇಶಾದ್ಯಂತ ಹೆಚ್ಚಾಗುತ್ತಿದೆ. ಭಾರತೀಯ ಮಾನಸಿಕ ಚಿಕಿತ್ಸಾ ಸಂಘದ ( IPS) ಪ್ರಕಾರ, ಭಾರತದಲ್ಲಿ ಪ್ರತಿ 68೮ ಮಕ್ಕಳ ಪೈಕಿ ಒಂದು ಮಗುವಿಗೆ ಆಟಿಸಂ ಸಮಸ್ಯೆ ಇರುವ ಸಾಧ್ಯತೆ ಯಿದೆ.

ಒಟ್ಟು 1.5 ಮಿಲಿಯನ್‌ಗೂ ಹೆಚ್ಚು ಮಕ್ಕಳಿಗೆ ಆಟಿಸಂ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆಯ ಬಗೆಗಿನ ಜಾಗೃತಿ ಕಡಿಮೆಯಿರುವುದರಿಂದ ನಿಖರವಾದ ಅಂಕಿ-ಅಂಶಗಳು ಲಭ್ಯವಿಲ್ಲ. ಭಾರತದಲ್ಲಿ, ಆಟಿಸಂ ಮಕ್ಕಳಿಗಾಗಿನ ಸರಕಾರಿ ಶಾಲೆಗಳು ಮತ್ತಿತರ ಪೂರಕ ವ್ಯವಸ್ಥೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿವೆ. ಈ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ಮತ್ತು ಅವರ ಆತ್ಮವಿಶ್ವಾಸವನ್ನು ಬೆಳೆಸಲು ಇನ್ನಷ್ಟು ಅವಕಾಶಗಳನ್ನು ಸೃಜಿಸುವ ಅಗತ್ಯವಿದೆ.

ಭಾರತದಲ್ಲಿ 3000ಕ್ಕೂ ಹೆಚ್ಚು ವಿಶೇಷ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ, ಆದರೆ ಇವುಗಳಲ್ಲಿ ಕೆಲವನ್ನು ಮಾತ್ರವೇ ಆಟಿಸಂ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಮಗ್ರ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆಗಳು ದೇಶಾದ್ಯಂತದ ಆಟಿಸಂ ಮಕ್ಕಳಿಗೆ ಯಾವುದೇ ರೀತಿಯ ಸಹಾಯವನ್ನು ನೀಡುವ ಉದ್ದೇಶವನ್ನು ಹೊಂದಿವೆ.

ಆದರೆ, ಇವುಗಳಲ್ಲಿ ಆಟಿಸಂ ಮಕ್ಕಳಿಗಾಗಿ ವಿಶೇಷವಾಗಿ ರೂಪುಗೊಂಡ ಶಾಲೆಗಳು ಇನ್ನೂ ಕಡಿಮೆ ಯಿವೆ. ಕರ್ನಾಟಕದಲ್ಲಿ ಇಂಥ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಕೊಡುವಲ್ಲಿನ ಕಾರ್ಯ ಒಂದಷ್ಟು ತೃಪ್ತಿಕರವಾಗಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ಆಟಿಸಂ ಮಕ್ಕಳಿದ್ದು, ಆಟಿಸಂಗೆ ಸಂಬಂಧಿಸಿದ ಸೇವೆಗಳು ಬೆಂಗಳೂರು ನಗರದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿವೆ. ಅನೇಕ ಸಂಸ್ಥೆಗಳು ಈ ಮಕ್ಕಳಿಗೆ ಚಿಕಿತ್ಸೆಯನ್ನು ನೀಡುತ್ತಿರುವುದರಿಂದ ಈ ನಗರವು ಹೆಚ್ಚು ಗುರುತಿಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಸುಮಾರು 50ಕ್ಕೂ ಹೆಚ್ಚು ವಿಶೇಷ ಶಾಲೆಗಳು ಆಟಿಸಂ ಮಕ್ಕಳಿಗೆ ಸೇವೆಗಳನ್ನು ಒದಗಿಸುತ್ತಿವೆ. ಇವುಗಳಲ್ಲಿ ಪ್ರಮುಖವಾಗಿ ಬೆಂಗಳೂರು ನಗರದಲ್ಲಿರುವ ನಿಮ್ಹಾನ್ಸ್ ( NIMHANS ) ಆಟಿಸಂ ಮಕ್ಕಳಿಗಾಗಿ ವಿಶೇಷವಾಗಿ ಸಹಾಯಕವಾಗಿದೆ. ಇಲ್ಲಿ ಆಟಿಸಂ ಮಕ್ಕಳಿಗೆ ವಿಶೇಷ ಚಿಕಿತ್ಸೆ, ಶಿಕ್ಷಣವನ್ನು ನೀಡಲಾಗುತ್ತದೆ. ಇದುವರೆಗೆ ಲಭ್ಯವಿರುವ ಚಿಕಿತ್ಸಾ ಕೇಂದ್ರಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಮಾರ್ಗದರ್ಶನ ತೃಪ್ತಿಕರವಾಗಿಲ್ಲ. ಈ ಡಿಸಾರ್ಡರ್ ಹೊಂದಿರುವ ಮಕ್ಕಳನ್ನು ಮುನ್ನಡೆಸಲು ಮತ್ತು ಸರಿಯಾದ ಶಿಕ್ಷಣ ನೀಡಲು ಹೊಸ ತಂತ್ರeನಗಳನ್ನು ಬಳಸುವುದು ಹಾಗೂ ವಿಶೇಷ ಶಾಲೆಗಳನ್ನು ಹೆಚ್ಚಿಸುವುದು ಅನಿವಾರ್ಯ ಮಾತ್ರ ವಲ್ಲದೆ ಇಂದಿನ ಬಹುದೊಡ್ಡ ತುರ್ತಾಗಿದೆ ಎಂಬ ಸಂಗತಿಯನ್ನು ಅಲ್ಲಗಳೆಯಲಾಗುವುದಿಲ್ಲ.

ಈ ನಿಟ್ಟಿನಲ್ಲಿ ಭಾರತವು ರೋಬೋಟಿಕ್ ಆಧರಿತ ಶಿಕ್ಷಣ ಸೇವೆಗಳನ್ನು ಮುಂಚಿತವಾಗಿ ಪ್ರಾರಂಭ ಮಾಡಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಭಾರತದಲ್ಲಿ ರೋಬೋಟ್‌ಗಳನ್ನು, ವಿಶೇಷವಾಗಿ ಮಕ್ಕಳಿಗೆ ಭಾಷಾ ಕೌಶಲಗಳನ್ನು ಮತ್ತು ಸಾಮಾಜಿಕ ಸಂವಹನವನ್ನು ಕಲಿಸಲು ಬಳಸಲಾಗುತ್ತಿದೆ. ಇದರ ಹಾಗೆ, ಬೇರೆ ಬೇರೆ ದೇಶಗಳಲ್ಲಿ ವಿನ್ಯಾಸಗೊಂಡ ರೋಬೋಟ್‌ಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಲಾಗುತ್ತಿದೆ. ‌

ಅಮೆರಿಕದಲ್ಲಿ ಮಕ್ಕಳಿಗೆ ಭಾವನೆಗಳು ಹಾಗೂ ಭಾಷಾ ಕೌಶಲಗಳು, ಸಂವಹನ ಪರಿಣತಿಗಳನ್ನು ಕಲಿಸಲು, ತರಬೇತಿ ನೀಡಲು ಹಾಗೂ ನೆರೆಹೊರೆಯವರೊಂದಿಗೆ ಸಾಮಾಜಿಕ ಪರಿಸ್ಥಿತಿಗಳನ್ನು ನಿಭಾಯಿಸುವುದನ್ನು ತಿಳಿಹೇಳಲು ಅವು ಸಹಾಯ ಮಾಡುತ್ತಿವೆ. ಜಪಾನ್ ನಲ್ಲಿ, ರೋಬೋಟ್ ಅನ್ನು ಆಟಿಸಂ ಮಕ್ಕಳಿಗೆ ಆವರಣದ ಮೇಲೆ ಹೊತ್ತೊಯ್ಯಲು ವಿನ್ಯಾಸಗೊಳಿಸಲಾಗಿದೆ.

ಇತ್ತೀಚೆಗೆ ಇಂಥ ರೋಬೋಟ್‌ಗಳನ್ನು ಅಲ್ಲಿನ ಕೆಲ ಆಟಿಸಂ ಆಸ್ಪತ್ರೆಗಳಲ್ಲಿ ಉಪಯೋಗಿಸ ಲಾಗುತ್ತಿದೆ. ಜಪಾನಿನ ಪ್ಯಾನಾಸೋನಿಕ್ ಸಂಸ್ಥೆಯು ಆಟಿಸಂ ಮಕ್ಕಳಿಗೆ ಕೌಶಲಗಳನ್ನು ಕಲಿಸಲು ಪೆಪ್ಪರ್ (Pepper) ಎಂಬ ರೋಬೋಟನ್ನು ವಿನ್ಯಾಸಗೊಳಿಸಿದೆ. ಇದು ಮಕ್ಕಳಲ್ಲಿ ಭಾವನಾ ತ್ಮಕ ಸಂಬಂಧಗಳನ್ನು ಸೃಷ್ಟಿಸಲು ಕೂಡಾ ಸಹಾಯ ಮಾಡುತ್ತಿದೆ. ಆಸ್ಟ್ರೇಲಿಯಾ ಮತ್ತು ಬ್ರಿಟನ್‌ ನಲ್ಲಿ, ಆಟಿಸಂ ಮಕ್ಕಳಲ್ಲಿ ವಿಶೇಷವಾಗಿ ಭಾವನೆಗಳನ್ನು ಗುರುತಿಸಲು ಮತ್ತು ಅವರ ಸಮರ್ಥನೆಯನ್ನು ಬೆಂಬಲಿಸಲು ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಹೀಗೆ ಹಾರ್ಡ್‌ ವೇರ್ ಹಾಗೂ ಸಾಫ್ಟ್‌ ವೇರ್ ಸಮನ್ವಯದಲ್ಲಿ ಮಕ್ಕಳನ್ನು ವಾಸ್ತವಿಕ ಸಾಮಾಜಿಕ ಪರಿಸ್ಥಿತಿಗಳಲ್ಲಿ ಅಭ್ಯಾಸ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.

ಹೀಗೆ ವಿನ್ಯಾಸಗೊಳಿಸಲಾದ ಅನೇಕ ರೋಬೋಟ್‌ಗಳು ತಾಯಿ ಹಾಗೂ ಮಕ್ಕಳ ಆಶಾಕಿರಣವಾಗಿ ಅವರ ಮುಖದ ಮೇಲೆ ನಗುವನ್ನು ಹೊಮ್ಮಿಸುತ್ತಿವೆ. ‘ಎಐ ಡ್ರಿವನ್ ರೋಬೋಟಿಕ್ಸ್ ಫಾರ್ ಆಟಿಸಂ ಥೆರಪಿ’ ಎಂಬ ಯೋಜನೆಯಲ್ಲಿ, ಮಕ್ಕಳಿಗೆ ಮತ್ತೆ ಮತ್ತೆ ತರಬೇತಿಯನ್ನು ನೀಡಲು ರೋಬೋಟ್ ಗಳು ಹೆಚ್ಚು ಸಹಾಯ ಮಾಡುತ್ತಿವೆ. ಇದರಂತೆ, ಭಾರತೀಯ ಆಂಗ್ಲ ಶಾಲೆಗಳಲ್ಲಿ ಬೃಹತ್ ಪ್ರಯೋಗ ಗಳನ್ನು ನಡೆಸಲು ಈ ರೋಬೋಟಿಕ್‌ ಆಧರಿತ ಸಾಧನಗಳನ್ನು ಬಳಸಲಾಗುತ್ತಿದೆ. ಈ ರೋಬೋಟ್‌ ಗಳು ಮಕ್ಕಳೊಂದಿಗೆ ಸಂವಹನ ಮಾಡುವುದಕ್ಕೆ ಸಂಬಂಧಿಸಿದಂತಿರುವ ಕೆಲವು ಭದ್ರತಾ ತೊಂದರೆ ಗಳು ಮತ್ತು ನೈತಿಕ ವಿಚಾರಗಳನ್ನು ಅಲ್ಲಗಳೆಯಲಾಗದು.

ಮೂಲಭೂತವಾಗಿ, ಈ ರೋಬೋಟ್‌ಗಳು ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಂಗ್ರಹಿಸಿದ ಡೇಟಾವನ್ನು, ಸುರಕ್ಷಿತವಾಗಿ ಕಾಪಿಡಲು ಸೂಕ್ತ ನಿಯಮಗಳು ಮತ್ತು ನಿಯಂತ್ರಣಗಳು ಅವಶ್ಯಕ ವಾಗಿವೆ. ಭಾರತದಲ್ಲಿ, ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳು ವ್ಯಾಪಕ ವಾಗಿ ಲಭ್ಯವಿಲ್ಲ, ಮತ್ತು ಈ ಕ್ಷೇತ್ರದಲ್ಲಿ ಮಾಹಿತಿ ತಲುಪಿಸುವುದರ ಮೂಲಕ ಹೆಚ್ಚಿನ ಪ್ರಚಾರ ಹಾಗೂ ಜಾಗೃತಿಯ ಅಗತ್ಯವಿದೆ.

ಆಟಿಸಂ ಇರುವ ಮಕ್ಕಳ ಅಭಿವ್ಯಕ್ತಿಗಳನ್ನೂ ಅವುಗಳ ಅಗತ್ಯಗಳನ್ನೂ ಗುರುತಿಸಲು ಕೃತಕ ಬುದ್ಧಿ ಮತ್ತೆಯನ್ನು (ಎಐ) ಬಳಸುವುದು ಅನೇಕ ರೀತಿಯಲ್ಲಿ ಸಹಾಯಕವಾಗುತ್ತದೆ. ಉದಾಹರಣೆಗೆ ದೇಹಭಾಷೆ, ಮುಖಭಾವನೆ, ಶಬ್ದ ತಾಣ ಮತ್ತು ಸ್ವಭಾವ ಚಲನೆಗಳ ಮಾದರಿಗಳನ್ನು ಗುರುತಿಸುವ ಮೂಲಕ ಎಐ ಸಂವೇದನೆಗಳನ್ನು ನಿರ್ವಹಿಸಲು ಅಗತ್ಯವಿರುವ ಧ್ಯಾನಗಳ ಪರಿಕಲ್ಪನೆಗಳನ್ನು ಸೂಚಿಸಬಹುದು.

ಪೂರಕವೆನ್ನುವಂತೆ ಒಂದು ಹೆಜ್ಜೆ ಮುಂದೆ ಹೋಗಿ ಎಲಾನ್ ಮ ಅವರು ನ್ಯೂರಾಲಿಂಕ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಮಿದುಳು-ಕಂಪ್ಯೂಟರ್ ಇಂಟರ್ ಫೇಸ್ ( (BCI) ಅಥವಾ ಮಿದುಳು-ಯಂತ ಇಂಟರ್ ಫೇಸ್ (BMI)ಪರಿಹಾರೋಪಾಯವನ್ನು ಅಭಿವೃದ್ಧಿಪಡಿಸಲು ಗಮನ ಹರಿಸುತ್ತದೆ.

ಇದರಲ್ಲಿ ಮಿದುಳಿಗೆ ಚಿಪ್‌ಗಳನ್ನು ನಕ್ಷೆ ಹಾಕಿ ಗಣಕಯಂತ್ರಗಳೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲಾಗುತ್ತದೆ. ಇದರ ಮೂಲ ಉದ್ದೇಶವು ಮಿದುಳಿನ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸು ವುದು, ನ್ಯೂರೋಲಾಜಿಕಲ್ ವ್ಯಾಧಿಗಳನ್ನು ಚಿಕಿತ್ಸೆ ಮಾಡುವುದು ಮತ್ತು ಸಾಮರ್ಥ್ಯಗಳನ್ನು ವೃದ್ಧಿಸುವುದು. ಇಂಥ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಆಟಿಸಂ ವ್ಯಕ್ತಿಗಳಿಗೆ ವರದಾನ ವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತ ಮತ್ತು ಕರ್ನಾಟಕದಲ್ಲಿ, ಆಟಿಸಂ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂಬುದು ಒಪ್ಪಿ ಕೊಳ್ಳಬೇಕಾದ ಸಂಗತಿಯಾಗಿದೆ.

ಆಟಿಸಂ ಬಗ್ಗೆ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಕಡಿಮೆ ಇರುವುದರಿಂದ, ಹೆಚ್ಚಿನ ಮಕ್ಕಳು ತಕ್ಷಣ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ತರಬೇತಿ ಪಡೆದ ಶಿಕ್ಷಕರ ಕೊರತೆ ಕೂಡ ಕಾಡುತ್ತಿದೆ. ಹಲವು ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ಕೂಡ ಲಭ್ಯವಿಲ್ಲದಿರುವುದು ಕಳವಳಕಾರಿಯಾದ ಸಂಗತಿಯಾಗಿದೆ.

ಭಾರತದಲ್ಲಿ ಆಟಿಸಂ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಈ ಮಕ್ಕಳಿಗೆ ಸೂಕ್ತವಾದ ಶಿಕ್ಷಣ ಮತ್ತು ಅಭ್ಯಾಸವನ್ನು ನೀಡಲು ಉತ್ತಮ ವ್ಯವಸ್ಥೆಗಳು, ಮಾರ್ಗದರ್ಶನ ಕೇಂದ್ರಗಳು ತೀರಾ ಅವಶ್ಯ ಕವಾಗಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಶೇಷ ಶಾಲೆಗಳು, ಸಶಕ್ತ ಮೂಲಸೌಕರ್ಯಗಳನ್ನು ಕಲ್ಪಿಸುವಿಕೆ ಹಾಗೂ ಸಹಾಯಕ ರೋಬೋಟ್‌ಗಳ ಆವಿಷ್ಕಾರಗಳಿಂದ, ಇಂಥ ತಾಯಂದಿರ ಮತ್ತು ಮಕ್ಕಳ ಸಂಕಟವನ್ನು ನಿವಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಶಾಲೆಗಳು ಮತ್ತು ಖಾಸಗಿ ಸಂಸ್ಥೆಗಳ ಸಹಯೋಗವು ಬಹುಮುಖ್ಯವಾಗಿದೆ.

(ಲೇಖಕರು ಪ್ರಾಧ್ಯಾಪಕರು)