ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Basavaraj Shivappa Giraganvi Column: ಗೊತ್ತಿರಲಿ, ಭಾರತದ ಕಷ್ಟಕಾಲದ ಗೆಳೆಯ ರಷ್ಯಾ

ಭಾರತದಲ್ಲಿ ಬಡತನವು ತಾಂಡವವಾಡುತ್ತಿದ್ದಾಗಿನಿಂದಲೂ ರಷ್ಯಾ ದೇಶವು ಭಾರತದ ಪರ ಮಾಪ್ತ ಸ್ನೇಹಿತನಂತೆ ನಡೆದುಕೊಂಡಿದೆ. ಹಲವು ವಿಷಯಗಳ ಕುರಿತಾಗಿ ವಿಶ್ವದ ಕೆಲ ರಾಷ್ಟ್ರ ಗಳು ಭಾರತದ ಮೇಲೆ ನಿರ್ಬಂಧ ಹೇರಿದಾಗ/ದಿಗ್ಬಂಧನ ವಿಧಿಸಿದಾಗ ಶಾಂತಿದೂತನ ಪಾತ್ರ ನಿರ್ವಹಿಸಿ ಭಾರತದ ನೆರವಿಗೆ ಧಾವಿಸಿದ ಕೀರ್ತಿ ರಷ್ಯಾಕ್ಕೆ ಸಲ್ಲುತ್ತದೆ

ಗೊತ್ತಿರಲಿ, ಭಾರತದ ಕಷ್ಟಕಾಲದ ಗೆಳೆಯ ರಷ್ಯಾ

Profile Ashok Nayak Feb 21, 2025 11:09 AM

ರಾಜಬಾಂಧವ್ಯ

ಬಸವರಾಜ ಶಿವಪ್ಪ ಗಿರಗಾಂವಿ

ಭಾರತದ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಸದ್ಯ ಮೋದಿ-ಟ್ರಂಪ್ ಹವಾ ಜೋರಾಗಿಯೇ ಇದೆ. ‘ಯು ಆರ್ ಮೈ ಬೆಸ್ಟ್ ಫ್ರೆಂಡ್, ಯು ಆರ್ ಎ ಗ್ರೇಟ್ ಲೀಡರ್’ ಎಂಬುದಾಗಿ ಟ್ರಂಪ್ ಅವರು ಮೋದಿಪರ ನೀಡಿದ ಹೇಳಿಕೆಗಳು ಭಾರತದ ಬಹುತೇಕ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾ ಜಿಸುತ್ತಿವೆ. ಇದು ಒಂದು ದಶಕಕ್ಕೂ ಹಿಂದಿನ ಮಾತು. ಭಾರತದ ಸಂವಿಧಾನ ವ್ಯವಸ್ಥೆ ಯಲ್ಲಿ ಕಲ್ಪಿಸಲಾಗಿರುವ ‘ಮುಖ್ಯಮಂತ್ರಿ’ ಎಂಬ ದೊಡ್ಡ ಅಧಿಕಾರದ ಹುದ್ದೆಯಲ್ಲಿದ್ದರೂ, ಇದೇ ನರೇಂದ್ರ ಮೋದಿಯವರಿಗೆ ಅಮೆರಿಕ ಭೇಟಿಗೆ ವೀಸಾ ನೀಡುವುದಕ್ಕೂ ಅಲ್ಲಿನ ಆಳುಗ ವ್ಯವಸ್ಥೆ ನಿರಾಕರಿಸಿತ್ತು. ಅಂದು ಮೋದಿಯವರೇನೂ ವೈಯಕ್ತಿಕ ಹಿತಾಸಕ್ತಿಗಾಗಿ ಅಮೆರಿ ಕಕ್ಕೆ ಹೋಗಲು ನಿರ್ಧರಿ ಸಿರಲಿಲ್ಲ, ಅದರ ಹಿಂದೆ ಆಡಳಿತಾತ್ಮಕ ಮತ್ತು ಜನಕಲ್ಯಾಣದ ಉದ್ದೇಶಗಳಿದ್ದವು. ಅಂದಿಗೂ ಇಂದಿಗೂ ಇರುವ ವ್ಯತ್ಯಾಸವೇನೆಂದರೆ, ಅಂದು ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಇಂದು ಒಂದಿಡೀ ದೇಶದ ಪ್ರಧಾನ ಮಂತ್ರಿ ಯಾಗಿದ್ದಾರೆ.

ಜತೆಗೆ, ಅಂದು ಮಾಧ್ಯಮಗಳು ಮೋದಿಯವರನ್ನು ಇಂದಿನಂತೆ ‘ವರ್ಣರಂಜಿತ’ ಗೊಳಿಸಿರ ಲಿಲ್ಲ ಮತ್ತು ಗೋಧ್ರಾ ಹತ್ಯಾಕಾಂಡದ ಆರೋಪವು ಮೋದಿಯವರನ್ನು ಸುತ್ತಿಕೊಂಡಿತ್ತು. ಅದೇನೇ ಇರಲಿ, ಹಿಂದಿನವುಗಳ ಚರ್ಚೆ ಈಗ ಅಪ್ರಸ್ತುತ. ಒಟ್ಟಾರೆಯಾಗಿ, ಭಾರತದ ಪ್ರಧಾ ನಿಗೆ ಅಮೆರಿಕವು ಪ್ರಸ್ತುತ ನೀಡುತ್ತಿರುವ ಗೌರವವನ್ನು ನೋಡಿದರೆ, ಭಾರತೀಯರಾದ ನಾವೆಲ್ಲರೂ ಹೆಮ್ಮೆಪಟ್ಟುಕೊಳ್ಳಬೇಕು.

ಆದರೆ ಇಲ್ಲಿ ಮತ್ತೊಂದು ಸೂಕ್ಷ್ಮವನ್ನು ಮರೆಯುವಂತಿಲ್ಲ. ಭಾರತದಲ್ಲಿ ಬಡತನವು ತಾಂಡವವಾಡುತ್ತಿದ್ದಾಗಿನಿಂದಲೂ ರಷ್ಯಾ ದೇಶವು ಭಾರತದ ಪರಮಾಪ್ತ ಸ್ನೇಹಿತನಂತೆ ನಡೆದುಕೊಂಡಿದೆ. ಹಲವು ವಿಷಯಗಳ ಕುರಿತಾಗಿ ವಿಶ್ವದ ಕೆಲ ರಾಷ್ಟ್ರಗಳು ಭಾರತದ ಮೇಲೆ ನಿರ್ಬಂಧ ಹೇರಿದಾಗ/ದಿಗ್ಬಂಧನ ವಿಧಿಸಿದಾಗ ಶಾಂತಿದೂತನ ಪಾತ್ರ ನಿರ್ವಹಿಸಿ ಭಾರತದ ನೆರವಿಗೆ ಧಾವಿಸಿದ ಕೀರ್ತಿ ರಷ್ಯಾಕ್ಕೆ ಸಲ್ಲುತ್ತದೆ.

ಬ್ರಿಟಿಷರ ಬಿಗಿಮುಷ್ಟಿಯಿಂದ ಬಿಡಿಸಿಕೊಂಡು ಸ್ವತಂತ್ರಗೊಂಡ ನಂತರ ಭಾರತದ ಆರ್ಥಿಕ ಪರಿಸ್ಥಿತಿಯು ಅಷ್ಟೊಂದು ಸಮರ್ಪಕವಾಗಿರಲಿಲ್ಲ, ದೇಶದಲ್ಲಿ ಬಡತನ ತಾಂಡವವಾಡು ತ್ತಿತ್ತು. ಆ ಸಂದರ್ಭದಲ್ಲಿ ನಮ್ಮ ನೆರವಿಗೆ ಧಾವಿಸಿದ ರಷ್ಯಾ, ತನ್ನಲ್ಲಿದ್ದ ಪಂಚ ವಾರ್ಷಿಕ ಯೋಜನೆಗಳಂಥ ಹಲವು ಅಭಿವೃದ್ಧಿ ಮಾದರಿಗಳನ್ನು ಭಾರತಕ್ಕೆ ಧಾರೆ ಯೆರೆಯಿತು. ಭಾರತವು ತನ್ನ ನೆಲದಲ್ಲಿ ಹೇರಳವಾಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕ ವಾಗಿ ಬಳಸಿಕೊಂಡು ಮುನ್ನಡೆಯುವುದಕ್ಕೆ ತಳಪಾಯ ಹಾಕಿದ್ದೇ ರಷ್ಯಾ ದೇಶ.

ರಷ್ಯಾದ ಅಂದಿನ ಸಹಕಾರವೇ, ಭಾರತವಿಂದು ಸತತವಾಗಿ ದಾಖಲಿಸುತ್ತ ಬಂದಿರುವ ಬದಲಾವಣೆಗೆ/ಬೆಳವಣಿಗೆಗೆ ಕಾರಣವಾಗಿದೆ. ರಷ್ಯಾ ಮೂಲದ ಪಂಚವಾರ್ಷಿಕ ಯೋಜನೆ ಗಳಿಂದಾಗಿ ಭಾರತದಲ್ಲಿ ಕೃಷಿ, ಕೈಗಾರಿಕೆ, ನೀರಾವರಿ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಯಾದವು, ಹಸಿರು-ನೀಲಿ-ಶ್ವೇತಕ್ರಾಂತಿಗಳು ನಮ್ಮ ನೆಲದಲ್ಲಿ ಜರುಗಿದವು. ಹೀಗೆ ಸಂಕಷ್ಟದ ಸಮಯದಲ್ಲಿ ರಕ್ಷಣೆ, ಆರ್ಥಿಕ ಮತ್ತು ಆಹಾರ ವಲಯಗಳಲ್ಲಿ ಕೈಹಿಡಿದು ನೆರವಿಗೆ ಬಂದ ರಷ್ಯಾವನ್ನು ಇಂದಿನ ಭಾರತವು ಮರೆಯಬಾರದು.

ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಅಮೆರಿಕದಂಥ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಗೆಳೆತನ ಬೆಳೆಸಲು ಹಂಬಲಿಸುವುದು ಸ್ವಾಭಾವಿಕ. ಆದರೆ, ಅಭಿವೃದ್ಧಿ ಪಥದಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಮುನ್ನಡೆಯುತ್ತಿರುವ ಭಾರತವು ತನ್ನತನವನ್ನು ಬಿಟ್ಟು, ಮುಂದುವರಿದ ದೇಶಗಳಿಗೆ ಅತಿಯಾಗಿ ಶರಣಾಗುವುದು ಬೇಡ ಎನಿಸುತ್ತದೆ. ಭಾರತದ ಸಂಸ್ಕಾರ-ಸಂಸ್ಕೃತಿ- ಸಾರ್ವಭೌಮತ್ವದ ವಿಷಯ ಬಂದಾಗ, ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿಯವರಂಥ ಭಾರತದ ಹಿಂದಿನ ಪ್ರಧಾನಿಗಳು ದೇಶದ ಘನತೆ-ಗೌರವಗಳನ್ನು ತಮ್ಮ ಅಧಿಕಾರದುದ್ದಕ್ಕೂ ಎತ್ತಿ ಹಿಡಿದಿದ್ದಾರೆ ಎಂಬುದು ಗೊತ್ತಿರುವ ಸಂಗತಿಯೇ.

ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ, ರಾಜಸ್ಥಾನದ ಪೋಖ್ರಾನ್‌ನಲ್ಲಿ ಪರ ಮಾಣು ಪರೀಕ್ಷೆ ನಡೆಸಲಾಯಿತು ಮತ್ತು ತನ್ಮೂಲಕ ವಿಶ್ವದಲ್ಲಿ ಅಣುಬಾಂಬ್ ಹೊಂದಿದ ಬೆರಳೆಣಿಕೆಯ ದೇಶಗಳಲ್ಲಿ ಭಾರತ ಒಂದೆನಿಸಿಕೊಂಡಿತು. ಅಂದು ವಿಶ್ವದಲ್ಲಿ, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ರಷ್ಯಾ ದೇಶಗಳು ಮಾತ್ರವೇ ಬಲಾಢ್ಯ ವಾಗಿದ್ದವು. ಪೋಖ್ರಾನ್ ನಲ್ಲಿನ ಅಣುಬಾಂಬ್ ಪರೀಕ್ಷೆಯ ನಂತರ ಭಾರತವು ತಾನು ಬಲವನ್ನು ವಧಿಸಿಕೊಂಡಿರುವ ಸಂದೇಶವನ್ನು ವಿಶ್ವ ಸಮುದಾಯಕ್ಕೆ ರವಾನಿಸಿತ್ತು.

ಇದಕ್ಕೂ ಮುನ್ನ ಭಾರತವು ಬಾಂಗ್ಲಾದೇಶವನ್ನು ಪಾಕಿಸ್ತಾನದ ಬಿಗಿಮುಷ್ಟಿಯಿಂದ ವಿಮೋಚನೆಗೊಳಿಸಿತ್ತು. 1971ರಲ್ಲಿ ಬಾಂಗ್ಲಾದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮತ್ತು 1974ರಲ್ಲಿ ಪೋಖ್ರಾನ್‌ನಲ್ಲಿ ನಡೆದ ಪರಮಾಣು ಪರೀಕ್ಷೆಯಂಥ ಬೆಳವಣಿಗೆಗಳು ಅಮೆರಿಕಕ್ಕೆ ಇಷ್ಟ ವಿರಲಿಲ್ಲ. ಕಾರಣ, ಪಾಕಿಸ್ತಾನವು ಅಮೆರಿಕೆಯ ಸಹವಾಸದಲ್ಲಿತ್ತು. ಭಾರತದ ಮಗ್ಗುಲು ಮುಳ್ಳಾಗಿರುವ ಪಾಕಿಸ್ತಾನದ ಸಲಹೆಯಂತೆ ಅಮೆರಿಕವು ರಕ್ಷಣಾ ವಲಯದಲ್ಲಿ ಭಾರತಕ್ಕೆ ನೀಡುತ್ತಿದ್ದ ಸಹಕಾರವನ್ನು ಸಂಪೂರ್ಣವಾಗಿ ನಿಲ್ಲಿಸಿತು.

ರಕ್ಷಣಾ ಕ್ಷೇತ್ರವು ಬಲಾಢ್ಯವಾಗಿದ್ದಾಗ ಮಾತ್ರವೇ ಶತ್ರುರಾಷ್ಟ್ರಗಳು ಬಾಲ ಮುದುರಿ ಕೊಂಡು ಕೂರುತ್ತವೆ. ರಕ್ಷಣಾ ಸಹಕಾರವನ್ನು ಸ್ಥಗಿತಗೊಳಿಸುವ ಅಮೆರಿಕದ ಕ್ರಮವು, ಪಾಕಿಸ್ತಾನ ಸೇರಿದಂತೆ ತನ್ನ ಮಿಕ್ಕ ಶತ್ರುರಾಷ್ಟ್ರಗಳಿಗೆ ವರದಾನವಾಗುತ್ತದೆ ಎಂಬ ಸೂಚನೆಯು ಭಾರತಕ್ಕೆ ಗೋಚರಿಸಿತು. ಆ ಸಂದರ್ಭದಲ್ಲಿ ವಿಶ್ವದ ಶಾಂತಿದೂತ ದೇಶ ವೆನಿಸಿದ್ದ ರಷ್ಯಾ ಕೂಡ, ಭಾರತದ ಪರಮಾಣು ಪರೀಕ್ಷೆಗೆ ‘ವಿಷಯಾಧಾರಿತ ವಿರೋಧ’ ವನ್ನು ವ್ಯಕ್ತಪಡಿಸಿತಾದರೂ, ಮೂಲಭೂತ ವ್ಯವಸ್ಥೆಗಳಿಗೆ ಅಡ್ಡಿಯುಂಟುಮಾಡಲಿಲ್ಲ.

ಭಾರತದಲ್ಲಿ ಬಡತನ ಮತ್ತು ಹಸಿವು ತೀವ್ರವಾಗಿದ್ದಂಥ ಸಂಕಷ್ಟಮಯ ದಿನಗಳಲ್ಲಿ, ನಮ್ಮೊಂದಿಗೆ ಹಲವು ಶಾಂತಿ ಒಪ್ಪಂದಗಳನ್ನು ಕೈಗೊಂಡಿದ್ದು ಹಾಗೂ ವಿಶ್ವದ ಕೆಲ ರಾಷ್ಟ್ರಗಳು ಭಾರತದ ವಿರುದ್ಧವಾಗಿದ್ದಾಗ ರಕ್ಷಣಾ ವಲಯ ಸೇರಿದಂತೆ ಅನೇಕ ಕ್ಷೇತ್ರಗಳ ಸಹಾಯಕ್ಕೆ ಧಾವಿಸಿ ಬಂದಿದ್ದು ರಷ್ಯಾ ಮಾತ್ರವೇ ಎಂಬುದನ್ನು ಭಾರತೀಯರು ಮರೆಯಬಾರದು.

ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಇಂದಿರಾ ಗಾಂಧಿಯವರು ಅತ್ಯಂತ ನಿಷ್ಠುರ ವಾಗಿದ್ದರು. ಅಮೆರಿಕದ ಅಧ್ಯಕ್ಷರ ಔತಣಕೂಟವು ವಿಶ್ವದ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಸಿದ್ಧವಾಗಿದೆ. ಅಮೆರಿಕವು ಈ ಔತಣಕೂಟದ ಸಂಪ್ರದಾಯವನ್ನು ಇಂದಿಗೂ ವಿಶ್ವದ ಪ್ರಮುಖ ದೇಶಗಳೊಂದಿಗೆ ಮಾತ್ರವೇ ಕೈಗೊಳ್ಳುತ್ತದೆ. 70ರ ದಶಕದಲ್ಲಿ ಶ್ರೀಮಂತಿಕೆಯ ದರ್ಪದಿಂದ ಮೆರೆಯುತ್ತಿದ್ದ ಅಮೆರಿಕವು, ಭಾರತ ಸೇರಿದಂತೆ ಬಡತನದ ಕಪಿಮುಷ್ಟಿಗೆ ಸಿಲುಕಿದ್ದ ವಿಶ್ವದ ಕೆಲ ದೇಶಗಳನ್ನು ತನ್ನ ಗುಲಾಮರನ್ನಾಗಿಸಿಕೊಳ್ಳಲು ಒಂದಷ್ಟು ವಿಲಕ್ಷಣ ಕ್ರಮಗಳಿಗೆ ಮುಂದಾಯಿತು.

ಇದರಿಂದ ರೊಚ್ಚಿಗೆದ್ದ ಇಂದಿರಾ ಗಾಂಧಿಯವರು, ವಿಶ್ವವೇ ಬೆರಗಾಗುವಂತೆ ಅಮೆರಿಕ ಅಧ್ಯಕ್ಷರ ಔತಣಕೂಟವನ್ನೇ ತಿರಸ್ಕರಿಸಿ ಧೈರ್ಯವಂತೆ ಎನಿಸಿಕೊಂಡರು. ಇನ್ನು ವಾಜ ಪೇಯಿಯವರು ದೇಶದ ಪ್ರಧಾನಿಯಾಗಿದ್ದಾಗ, ಇರಾನ್ ಮತ್ತು ಇರಾಕ್‌ನಲ್ಲಿ ಬಲವಂತ ವಾಗಿ ಶಾಂತಿಯನ್ನು ಸ್ಥಾಪಿಸಲು ಅಮೆರಿಕವು ಭಾರತದ ನೆರವನ್ನು ಕೋರಿತ್ತು. ಬಲವಂತದ ಶಾಂತಿಸ್ಥಾಪನೆಯ ಹೆಸರಲ್ಲಿ ‘ಬಲಪ್ರಯೋಗ’ ಮಾಡುವ ಅಮೆರಿಕದ ಹುನ್ನಾ ರಕ್ಕೆ ವಿರೋಧ ವ್ಯಕ್ತಪಡಿಸಿದ ವಾಜಪೇಯಿಯವರು, ಅಮೆರಿಕದ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು.

ಪ್ರಸ್ತುತ, ವಿಶ್ವದ ವಿವಿಧ ದೇಶಗಳಿಗೆ ವಿವಿಧ ಆಯಾಮಗಳಲ್ಲಿ ಸಹಕಾರ ನೀಡುತ್ತಿರುವ ಅಮೆರಿಕವು, ಈ ಎಲ್ಲ ದೇಶಗಳು ಸೇರಿದಂತೆ ಒಂದಿಡೀ ವಿಶ್ವವೇ ತಾನು ಹೇಳಿದಂತೆ ಕೇಳ ಬೇಕು ಎಂಬ ಸರ್ವಾಽಕಾರಿ ನಿಲುವನ್ನು ಅಂತರಾಳದಲ್ಲಿ ಹೊಂದಿದೆ. ಇದು ರಾಜನೀತಿ ಜ್ಞರು ಬಹಿರಂಗಪಡಿಸಲಾಗದ ಸತ್ಯವಾಗಿದೆ. ತನ್ನಿಷ್ಟದಂತೆ ವಿಶ್ವವನ್ನೇ ಆಳಲು ಹವಣಿ ಸುವ ಅಮೆರಿಕವು, ಮತ್ತೊಂದು ದೇಶವನ್ನು ಅವಶ್ಯವೆನಿಸಿದಾಗ ಆದರಿಸುವ ಮತ್ತು ತನ್ನ ಕೆಲಸ ಮುಗಿದ ಮೇಲೆ ತಿರಸ್ಕರಿಸುವ ಚಾಳಿಯನ್ನು ಹೊಂದಿದೆ. ಸದ್ಯ ಅಮೆರಿಕವು ಭಾರ ತೀಯ ವಲಸಿಗರನ್ನು ಹೊರದಬ್ಬುತ್ತಿರುವ ರೀತಿಯನ್ನು ನೋಡಿದರೆ ಎಂಥವರ ಕರುಳೂ ‘ಚುರುಕ್’ ಎನ್ನದಿರಲಾರದು. ಅವರು ಅಕ್ರಮ ವಲಸಿಗರೇ ಇರಬಹುದು, ಆದರೆ ಮಾನ ವೀಯತೆಯು ಎಲ್ಲಕ್ಕಿಂತ ದೊಡ್ಡದು ಎಂಬುದು ವಿಶ್ವದ ದೊಡ್ಡಣ್ಣನಿಗೆ ತಿಳಿಯದಿರುವುದು ವಿಷಾಧನೀಯ.

(ಲೇಖಕರು ಕೃಷಿತಜ್ಞರು ಹಾಗೂ ಸಹಾಯಕ ಮಹಾಪ್ರಬಂಧಕರು)